ಸುಧರ್ಮ, ವಿಶ್ವದ ಏಕೈಕ ಸಂಸ್ಕೃತ ದಿನಪತ್ರಿಕೆ

ಸಂಸ್ಕೃತ ಪ್ರಪಂಚದ ಅತ್ಯಂತ ಪುರಾತನ ಭಾಷೆ ಎಂಬುದರಲ್ಲಿ ಎರಡು ಮಾತಿಲ್ಲ. ಜಗತ್ತಿನ ಬಹುತೇಕ ಭಾಷೆಗಳಿಗೆ ಮೂಲಭಾಷೆಯೇ ಸಂಸ್ಕೃತ ಎಂಬ ಅಗ್ಗಳಿಕೆಯೂ ಇದೆ. ಎಲ್ಲದ್ದಕ್ಕಿಂತಲೂ  ಸಂಸ್ಕೃತದ ಭಾಷೆಯ ಮೂಲ ನಮ್ಮ ಭಾರತ ಮತ್ತು ನಮ್ಮ ಸನಾತನ ಧರ್ಮದ ಅಷ್ಟೂ ವೇದಶಾಸ್ತ್ರಗಳು ಮತ್ತು ಪುರಾಣಗಳ ಮೂಲ ಕೃತಿಗಳು ಸಂಸ್ಕೃತದಲ್ಲಿಯೇ ಇದೆ ಎನ್ನುವುದು ಗಮನಾರ್ಹ.  ಹೀಗೆ ಪುರಾಣ ಗ್ರಂಥಗಳು ಸಂಸ್ಕೃತದಲ್ಲಿ ಇದೆ ಎಂದಾದಲ್ಲಿ ಅಂದಿನ ಕಾಲದಲ್ಲಿ ಎಲ್ಲಡೆಯೂ ಸಂಸ್ಕೃತ  ಆಡು ಭಾಷೆಯಾಗಿತ್ತು ಮತ್ತು ದೇವರು ಮತ್ತು ಮಾನವರ ನಡುವಿನ ವ್ಯಾವಹಾರಿಕ  ಸಂಭಾಷಣೆಯ ಕೊಂಡಿಯಾಗಿ ದೇವಭಾಷೆಯಾಗಿತ್ತು ಎಂದರೂ ಅತಿಶಯೋಕ್ತಿಯೇನಲ್ಲ.  ಅದೇಕೋ ಏನೋ ಕಾಲ ಕ್ರಮೇಣ ಪ್ರಾದೇಶಿಕ ಭಾಷೆಗಳೇ ಪ್ರಾವರ್ಧಮಾನಕ್ಕೆ ಬಂದು ಸಂಸ್ಕೃತ ಆಡು ಭಾಷೆಯಿಂದ ಗ್ರಾಂಥಿಕ ಭಾಷೆಯಾದರೂ ಸಹಾ ಇಂದಿಗೂ ಸಂಸ್ಕೃತ ಭಾಷೆಯ ಪ್ರಾಮುಖ್ಯತೆ ಮತ್ತು ಪ್ರಾಧಾನ್ಯತೆಗೆ  ಕಿಂಚಿತ್ತೂ ಕಡಿಮೆಯಾಗದಿರುವುದು ಶ್ಲಾಘನಿಯವೇ ಸರಿ.

ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಮತ್ತೂರು ಎಂಬ ಗ್ರಾಮದಲ್ಲಿರುವ ಬಹುತೇಕರು ಸಂಸ್ಕೃತವನ್ನು ಸುಲಲಿತವಾಗಿ ದಿನನಿತ್ಯದ ಆಡುಭಾಷೆಯಾಗಿ  ಮಾತನಾಡುವ ಮೂಲಕ  ಇಡೀ ಗ್ರಾಮವೇ ಸಂಸ್ಕೃತ ಗ್ರಾಮ  ಎಂಬ ಕೀರ್ತಿಗೆ ಪಾತ್ರವಾಗುವ ಮೂಲಕ ಸಂಸ್ಕೃತ ಭಾಷೆ ಕಬ್ಬಿಣದ ಕಡಲೆಯಲ್ಲಾ ಅದು ಸರ್ವೇ ಸಾಮಾನ್ಯರೂ ಸುಲಭವಾಗಿ ಬಳಸ ಬಹುದಾದ ಭಾಷೆ ಎಂಬುದನ್ನು ತೋರಿಸಿಕೊಟ್ಟಿದೆ. ಅದೇ ರೀತಿ ಸಂಘ ಪರಿವಾರದ ಹಿಂದೂ ಸೇವಾ ಪ್ರತಿಷ್ಠಾನ ಸಹಾ 80ರ ದಶಕದಿಂದಲೂ ದೇಶಾದ್ಯಂತ 10 ದಿನಗಳ ಕಾಲ ಸಂಸ್ಕೃತ ಸಂಭಾಷಣಾ ಶಿಬಿರಗಳನ್ನು ನಡೆಸುವ ಮೂಲಕ ಕೋಟ್ಯಾಂತರ ಜನರಿಗೆ ಸಂಸ್ಕೃತವನ್ನು ಕಲಿಸುತ್ತಾ ಬಂದಿರುವುದು ಅನನ್ಯ ಮತ್ತು ಅಭಿನಂದನಾರ್ಹವಾಗಿದೆ.

1921 ರಲ್ಲಿ ವೈದಿಕ ಕುಟುಂಬವೊಂದರಲ್ಲಿ ಜನಿಸಿದ ಶ್ರೀ ವರದರಾಜ ಅಯ್ಯಂಗಾರ್ ಆವರು ತಮ್ಮ ಮನೆಯಿಂದಲೇ ಸಂಸ್ಕೃತವನ್ನು ಕಲಿತು ನಂತರದ ದಿನಗಳಲ್ಲಿ  ಸಾಂಪ್ರದಾಯಿಕವಾಗಿ ಸಂಸ್ಕೃತ ಪಾಠಶಾಲಾ ವ್ಯವಸ್ಥೆಯಲ್ಲಿ  ಸಂಸ್ಕೃತದಲ್ಲೇ ತಮ್ಮ  ಶಾಲಾ ಶಿಕ್ಷಣವನ್ನು  ಪಡೆದು ಅಲ್ಲಿನ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿ ಸಂಸ್ಕೃತ  ಪಂಡಿತರು ಎಂಬ ಬಿರುದನ್ನು ಪಡೆಕೊಂಡರು.

1945ರಲ್ಲಿ  ಶ್ರೀ ವರದರಾಜ ಅಯ್ಯಂಗಾರ್ ಅವರು ಸುಧರ್ಮ ಎಂಬ ಮುದ್ರಣಾಲಯವನ್ನು ಪ್ರಾರಂಭಿಸಿ  ಅಲ್ಲಿ ವಿವಿಧ  ಪುಸ್ತಕಗಳು, ಸರ್ಕಾರಿ ಗೆಜೆಟ್ ಗಳು, ಸಂಸ್ಕೃತ ಮತ್ತು ಕನ್ನಡದ ಪ್ರಶ್ನೆ ಪತ್ರಿಕೆಗಳನ್ನು ಮುದ್ರಿಸಲು ಆರಂಭಿಸಿ ತಮ್ಮ ಕಲಸ ಕಾರ್ಯಗಳಿಂದಾಗಿ ಬಹಳ ಬೇಗನೇ ಸುಪ್ರಸಿದ್ಧರಾದರು. 1963 ರಲ್ಲಿ ಅವರು ಮೈಸೂರು ನಗರದಲ್ಲಿ ಬಾಲಕಿಯರಿಗೆಂದೇ ಶ್ರೀಕಾಂತ ಶಿಕ್ಷಣ ಸಮಾಜ ಎಂಬ ಶಾಲೆಯೊಂದನ್ನು ಆರಂಭಿಸಿ ಅಲ್ಲಿ ಸಂಸ್ಕೃತದ ವಿವಿಧ ಕಾರ್ಯಾಗಾರಗಳನ್ನು ಆಯೋಜಿಸುತ್ತಿದ್ದದ್ದಲ್ಲದೇ ಅದರ ಜೊತೆಗೆ ಅನೇಕ ಸಾಮಾಜಿಕ ಸೇವಾ ಸಂಸ್ಥೆಗಳೊಂದಿಗೆ  ಭಾಗಿಗಳಾಗಿ ಅನೇಕ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ಅವರ ಧೈರ್ಯವನ್ನು ಮೆಚ್ಚಿ ಹಲವಾರು ಬುದ್ಧಿಜೀವಿಗಳು ಅವರನ್ನು  ಶ್ಲಾಘಿಸಿದ್ದಲ್ಲದೇ, ಅವರಿಗೆ ಗಿರ್ವಾನ ವಾನಿ ಭೂಷನಂ ಮತ್ತು ವಿದ್ಯಾನಿಧಿ ಎಂಬ ಬಿರುದುಗಳನ್ನು ನೀಡಿ ಗೌರವಿಸಿದ್ದರು.

sud6ಸಮಾಜದಿಂದ ಅವರಿಗೆ ದೊರತ ಪ್ರೋತ್ಸಾಹದಿಂದ ಪ್ರೇರಿತರಾಗಿ 1970 ರ ಜುಲೈ 15 ರಂದು ಮೈಸೂರಿನ ಮಹಾರಾಜ ಸಂಸ್ಕೃತ ಪಾಠಶಾಲಾದ ಗಣಪತಿ ಸನ್ನಿಧಿಯಲ್ಲಿ ಸುಧರ್ಮ ಎಂಬ ಹೆಸರಿನಿಂದಲೇ ವಿಶ್ವದ ಏಕೈಕ ಸಂಸ್ಕೃತ ದಿನಪತ್ರಿಕೆಯನ್ನು ಅರಂಭಿಸಿದರು. ಪಂಡಿತ್ ವರದರಾಜ ಅಯ್ಯಂಗಾರ್ ಅವರು ಪ್ರಕಾಶಕರು ಮತ್ತು ಸ್ಥಾಪಕ ಸಂಪಾದಕರಾಗಿದ್ದರೆ ಅವರ ಈ ಸಾಹಸಕ್ಕೆ ವಿದ್ವಾನ್ ಹೆಚ್. ಜಿ. ಶಿತಿಕಾಂತ ಶರ್ಮಾ, ಟಿ.ಶಂಕರ ಶಾಸ್ತ್ರಿ, ಬಾಲಗಣಪತಿ ಭಟ್, ಶಿಂಗಪ್ಪ, ರೂಪಾ ನಾರಾಯ ಪಾಂಡೆ ಅವರಲ್ಲದೇ ಅನೇಕ  ಹಿರಿಯ ವಿದ್ವಾಂಸರುಗಳು ಸುಧರ್ಮ ಪತ್ರಿಕೆಯ ಸುಗಮ ಪ್ರಕಟಣೆಗಾಗಿ ಸಹಕರಿಸಿದ್ದರು.

ಸುಮಾರು ಇಪ್ಪತ್ತು ವರ್ಷಗಳ ಕಾಲ, ಪಂಡಿತ್ ವರದರಾಜ ಅಯ್ಯಂಗಾರ್ ಅವರು ದಣಿವರಿಯಿಲ್ಲದೆ ಮತ್ತು ನಿಸ್ವಾರ್ಥವಾಗಿ ಕೆಲಸ ಮಾಡುವ ಮೂಲಕ, ಸುಧರ್ಮ ಪತ್ರಿಕೆ ನಿಯಮಿತವಾಗಿ ಚಂದಾದಾರರ ಮನೆಯ ಬಾಗಿಲಿಗೆ ತಲುಪಿಸುವ ಮೂಲಕ  ಎಲ್ಲಾ ಸಂಸ್ಕೃತ ಪ್ರೇಮಿಗಳ ನಿರೀಕ್ಷೆಗಳನ್ನು ಈಡೇರಿಸಿದ್ದರು ಎಂದರೂ ತಪ್ಪಾಗಲಾರದು. ಅವರ ಈ ಸಾಹಸ ಕಾರ್ಯಕ್ಕೆ ನಿತಂತರವಾಗಿ  ಈ ಪತ್ರಿಕೆಯ ವಿತರಣೆಗೆ ಅಂಚೆ ಇಲಾಖೆಯೂ ಸಹಾ ತನ್ನಸಹಾಯ ಮಾಡಿದ್ದದ್ದು ನಿಜಕ್ಕೂ ಅಭಿನಂದನಾರ್ಹವಾಗಿತ್ತು. ಅಚ್ಚರಿಯ ವಿಷಯವೇನೆಂದರೆ, ಸುಧರ್ಮ ಪತ್ರಿಕೆ  ಪ್ರಾರಂಭವಾದಾಗ ಅದರ ಮೆಲೆ ಕೇವಲ 5 ಪೈಸೆ ಇತ್ತೆಂದರೆ  ವರದರಾಜರಿಗೆ ಸಂಸ್ಕೃತ  ಮತ್ತು ಅದರ ಪ್ರಸಾರದ ಮೇಲಿದ್ದ ನಿಸ್ವಾರ್ಥ ಪೇಮದ ಅರಿವಾಗುತ್ತದೆ.

sud3ಸುಧರ್ಮ ಪತ್ರಿಕೆಯ  ಬೆಳವಣಿಗೆ ಮತ್ತು ಅದರ ದೊಡ್ಡ ಧ್ಯೇಯವನ್ನು ಪೂರೈಸಲು ದಣಿವರಿಯಿಲ್ಲದೆ ಶ್ರಮಿಸುತ್ತಿದ್ದ ವರದರಾಜ ಐಯ್ಯಂಗಾರರು ಆಗಸ್ಟ್ 5, 1990 ರಂದು  ಪರಮಾತ್ಮದೊಂದಿಗೆ ವಿಲೀನಗೊಂಡಾಗ ಪತ್ರಿಯನ್ನು ಮುನ್ನೆಡೆಸುವವರು ಯಾರು? ಎಂಬ ಪ್ರಶ್ನೆ ಬಂದಾಗ ಪತ್ರಿಕೆಯ ವರದಿಗಾರ, ಪ್ರೂಫ್-ರೀಡರ್, ಸಂಪಾದಕ ಮತ್ತು ಪ್ರಕಾಶಕರಾಗಿಯೂ ತಂದೆಯವರೊಂದಿಗೆ ಕೆಲಸ ಮಾಡುತ್ತಿದ್ದ ಅವರ ಎರಡನೆಯ  ಮಗ  ಶ್ರೀ ಕೆ.ವಿ.ಸಂಪತ್ ಕುಮಾರ್ ಅವರು ಸ್ವಯಂಪ್ರೇರಿತವಾಗಿ ತಂದೆಯವರ ಜವಾಬ್ಧಾರಿಯನ್ನು ಹೊರಲು ಸಿದ್ದರಾದಾಗ ಅವರ ಧರ್ಮಪತ್ನಿಯವರಾದ ವಿದುಷಿ ಶ್ರೀಮತಿ ಜಯಲಕ್ಷ್ಮೀ ಅವರು ಸಹಾ ತಮ್ಮ ಪತಿಯವರಿಗೆ ಸಹಾಯ ಹಸ್ತವನ್ನು ಚಾಚಿ ಪತ್ರಿಕೆಯನ್ನು ಬಹಳ ಅಚ್ಚುಕಟ್ಟಾಗಿ ನಡೆಸಿಕೊಂಡು ಬರಲು ಕಟಿ ಬದ್ಧರಾಗಿ ನಿಂತರು.  ಸಂಸ್ಕೃತ ಮತ್ತು ಸುಧರ್ಮ ಪತ್ರಿಕೆಯ  ಮೇಲಿನ ಪ್ರೇಮದಿಂದಾಗಿ  ಈ ದಂಪತಿಗಳಿಗೆ  ಸಹಕಾರವಾಗಿ ವಿದ್ವಾನ್ ಹೆಚ್. ವಿ. ನಾಗರಾಜರಾವ್, ವಿದ್ವಾನ್ ಡಾ. ಟಿ.ವಿ.ಸತ್ಯನಾರಾಯಣ, ವಿದ್ವಾನ್ ಗಂಗಾಧರ ಭಟ್, ಶ್ರೀ ಕೆ.ಆರ್. ಶ್ರೀನಿವಾಸ ಅಯ್ಯಂಗಾರ್  ಅವರೂ ಸಮರ್ಪಣೆಯೊಂದಿಗೆ ಕೆಲಸ ಮಾಡತೊಡಗಿದರು.

sud5ಇಂತಹ ಐತಿಹಾಸಿಕ ಹಿನ್ನಲೆಯುಳ್ಳ ಸಂಸ್ಕೃತ ಭಾಷೆಯ ಪತ್ರಿಕೆಯ ಸಂಪಾದಕರಾಗಿ ಜವಾಬ್ಧಾರಿಯನ್ನು  ಶ್ರೀಯುತ ಸಂಪತ್ ಕುಮಾರ್ ಅವರು ಹೊತ್ತಿಕೊಳ್ಳುವ ಹೊತ್ತಿಗೆ ಮುದ್ರಣ ತಂತ್ರಜ್ಞಾನದಲ್ಲಿಯೂ ಆಧುನೀಕರಣಗೊಂಡು  ಅಚ್ಚು ಮೊಳೆ ಜಾಗದಲ್ಲಿ ಗಣಕೀಕೃತ ಆಫ್ಸೆಟ್ ಮುದ್ರಣದ ತಂತ್ರಜ್ಞಾನ ಬಂದಾಗ, ತಕ್ಷಣವೇ ಕಾಲಾಯ ತಸ್ಮೈ ನಮಃ ಎಂದು ಬದಲ್ಯಾಯಿಸಿಕೊಂಡು ಆಫ್ ಸೆಟ್ ಮುದ್ರಣದಲ್ಲಿ ಪತ್ರಿಕೆಯನ್ನು ಹೊರತಂದರು. ಈ ಸಂಸ್ಕೃತ ಪತ್ರಿಕೆಯನ್ನು ಪ್ರಪಂಚದಾದ್ಯಂತದ ಸಂಸ್ಕೃತ ವಿದ್ವಾಂಸರು ಮತ್ತು ಸಂಸ್ಕೃತ ಪ್ರೇಮಿಗಳನ್ನು ತಲುಪಿಸಿವುದರಲ್ಲಿ  ಯಶಸ್ವಿಯಾದರು. ಮುದ್ರಿತ ಸಂಚಿಕೆಯ ಜೊತೆ ಜೊತೆಯಲ್ಲಿಯೇ.  ಮೊತ್ತ ಮೊದಲ ಬಾರಿಗೆ ಸಂಸ್ಕೃತ ದಿನದರ್ಶಿಯನ್ನೂ (ಕ್ಯಾಲೆಂಡರ್) ಹೊರ ತಂದಿದ್ದಲ್ಲದೇ, ಸುಧರ್ಮ ಪತ್ರಿಕೆಯನ್ನು ಎ3 ಗಾತ್ರದ ಎರಡು ಪುಟಗಳ, ಐದು ಕಾಲಂ ಪತ್ರಿಕೆಯಾಗಿಸಿದ್ದರು. ಸದಾ ಕಾಲವೂ ಹೊಸಾ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರಲ್ಲಿ ಮುಂದಿದ್ದ ಪ್ರಯತ್ನವಾಗಿ ಡಿಜಿಟಲ್ ರೂಪದಲ್ಲಿ 2009 ರಲ್ಲಿ ಸುಧರ್ಮ ಇ-ಪೇಪರ್  ಪ್ರಾರಂಭಿಸುವ ಮೂಲಕ, 90 ಕ್ಕೂ ಹೆಚ್ಚು ದೇಶಗಳಲ್ಲಿ ಒಂದು ಲಕ್ಷಕ್ಕಿಂತಲೂ ಅಧಿಕ ಜನರಿಗೆ ಸುಧರ್ಮ  ಪತ್ರಿಕೆ ಪ್ರತಿ ದಿನವೂ ತಲುಪಿಸುವ ಮೂಲಕ ಜಗತ್ತಿನಾದ್ಯಂತ ಒಂದು ಲಕ್ಷಕ್ಕೂ ಅಧಿಕ ಜನರು ಸಂಸ್ಕೃತ ಪತ್ರಿಕೆಯನ್ನು ಓದುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು.

ಆಷ್ಟೆಲ್ಲ ಆರ್ಥಿಕ ಸಂಕಟಗಳ ನಡುವೆಯೂ ನಾವು ಕಾಶ್ಮೀರದಿಂದ ಕನ್ಯಾಕುಮಾರಿಯನ್ನೂ ದಾಟಿ ವಿದೇಶಗಲಲ್ಲಿಯೂ ಚಂದಾದಾರರನ್ನು ಹೊಂದಿದ್ದು ಅಂಚೆ ಮೂಲಕ ಪತ್ರಿಕೆ ಕಳುಹಿಸುವುದಲ್ಲದೇ ಮೀಮಿಂಚೆಯ ವ್ಯವಸ್ಥೆಯನ್ನೂ ಮಾಡಿದ್ದೇವೆ. ಎಂದು ಸಂಪತ್ ಕುಮಾರ್ ಹಿಂದೊಮ್ಮೆ ಕಾರ್ಯಕ್ರಮದಲ್ಲಿ  ಅತ್ಯಂತ ಹೆಮ್ಮೆಯಿಂದ ಹೇಳಿಕೊಂಡಿದ್ದರು.

ಸಂಸ್ಕೃತ ಭಾಷೆಯಲ್ಲಿ 50 ವರ್ಷಗಳಿಂದ ಮೈಸೂರಿನಿಂದ ಸುಧರ್ಮ ದಿನಪತ್ರಿಕೆ ನಿರಂತರವಾಗಿ ಪ್ರಕಟವಾಗುತ್ತಿರುವುದನ್ನು ಗಮನಿಸಿದ ಪ್ರಸ್ತುತ ಕೇಂದ್ರ ಸರ್ಕಾರ  2 ವರ್ಷಗಳ ಕೆ.ವಿ.ಸಂಪತ್ ಕುಮಾರ್ ಮತ್ತು ಕೆ.ಎಸ್.ಜಯಲಕ್ಷ್ಮೀ ದಂಪತಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಪ್ರಕಟಿಸಿತ್ತು. ಇದರ ಜತೆಗೆ, ಸಿದ್ಧಾರೂಢ ಪ್ರಶಸ್ತಿ, ಶಿವರಾತ್ರಿ ದೇಶಿಕೇಂದ್ರ ಮಾಧ್ಯಮ ಪ್ರಶಸ್ತಿ, ಅಬ್ದುಲ್ ಕಲಾಂ ಪ್ರಶಸ್ತಿಗಳೂ ಇವರಿಗೆ ಲಭಿಸಿತ್ತು.

sud2ವಿಶ್ವದ ಏಕೈಕ ಸಂಸ್ಕೃತ ದಿನಪತ್ರಿಕೆ ಎಂದೇ ಪರಿಗಣಿಸಲ್ಪಟ್ಟಿದ್ದ ಸುಧರ್ಮ ಪತ್ರಿಕೆಯ ಸಂಪಾದಕರು ಮತ್ತು ಪ್ರಕಾಶಕರು ಆಗಿದ್ದ 64 ವರ್ಷದ ಶ್ರೀ ಕೆ.ವಿ. ಸಂಪತ್ ಕುಮಾರ್ ಅವರು ಬುಧವಾರ ಜೂನ್ 30, 2021ರ ಮಧ್ಯಾಹ್ನ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವಾಗಲೇ, ತೀವ್ರವಾದ ಹೃದಯ ಸ್ತಂಭನದಿಂದಾಗಿ ನಿಧನ ಹೊಂದುವ ಮೂಲಕ ಸಾರಸ್ವತ ಲೋಕದ ನಿಸ್ವಾರ್ಥ ಹಿರಿಯ ಜೀವಿಯೊಬ್ಬರನ್ನು ಕಳೆದುಕೊಂಡಿದೆ. ಕೋವಿಡ್ ನಿಂದಾಗಿ ಪದ್ಮಶ್ರೀ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಗಳು ನಡೆದಿಲ್ಲವಾದ್ದರಿಂದ, ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನುಸ್ವೀಕರಿಸುವ ಮುನ್ನವೇ ಸಂಪತ್ ಕುಮಾರ್  ಆವರು ವಿಧಿವಶರಾಗಿರುವುದು ಹೆಚ್ಚಿನ ಬೇಸರದ ಸಂಗತಿಯಾಗಿದೆ. ಮೃತರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರೀ ಮರ್ಯಾದೆಯೊಂದಿಗೆ ಚಾಮುಂಡಿಬೆಟ್ಟದ ತಪ್ಪಲಿನ ಸ್ಮಶಾನದಲ್ಲಿ ನೆರವೇರಿಸುವ ಮೂಲಕ ಸಂಪತ್ ಕುಮಾರ್ ಅವರ ಪಾರ್ಥೀವ ಶರೀರ  ಪಂಚಭೂತಗಳಲ್ಲಿ ವಿಲೀನವಾಗಿದೆ.

ಸುಧರ್ಮ ಪತ್ರಿಕೆಯ ಸಂಪಾದಕ ಕೆ.ವಿ.ಸಂಪತ್ ಕುಮಾರ್ ಅಯ್ಯಂಗಾರ್ ನಿಧನಕ್ಕೆ ಪ್ರಪಂಚಾದ್ಯಂತ ಸಂಸ್ಕೃತ ಪ್ರೇಮಿಗಳು ದುಖಃದ ಕಂಬನಿಯನ್ನು ಹರಿಸಿದ್ದಾರೆ.  ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು, ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀಯುತ  ಯಡೆಯೂರಪ್ಪ. ರಾಜ್ಯದ ಆರೋಗ್ಯ ಸಚಿವ ಕೆ ಸುಧಾಕರ್ ಅವರುಗಳಲ್ಲದೇ ಇನ್ನೂ ಅನೇಕ ದಿಗ್ಗಜರು ಟ್ವಿಟರ್ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಮೈಸೂರಿನಿಂದ ಪ್ರಕಟವಾಗುತ್ತಿದ್ದ ದೇಶದ ಏಕೈಕ ಸಂಸ್ಕೃತ ದೈನಿಕ ಸುಧರ್ಮ ಪತ್ರಿಕೆಯ ಸಂಪಾದಕರಾಗಿದ್ದ ಪದ್ಮಶ್ರೀ ಶ್ರೀ ಕೆ.ವಿ.ಸಂಪತ್ ಕುಮಾರ್ ಅವರ ನಿಧನದಿಂದಾಗಿ ಪ್ರಾಚೀನ ಜ್ಞಾನ ಸಂಪತ್ತಿನ ಖನಿಯಾಗಿರುವ ಸಂಸ್ಕೃತ ಭಾಷೆಯನ್ನು ಪ್ರಚುರ ಪಡಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟ ನಿಸ್ವಾರ್ಥರೊಬ್ಬರನ್ನು ಕಳೆದುಕೊಂಡ ನಂತರ ಪತ್ರಿಕೆಯನ್ನು  ಮುನ್ನಡೆಸುವವರು ಯಾರು? ಎಂಬ ಯಕ್ಷ ಪತ್ರಿಕೆ ಎಲ್ಲಾ ಸಂಸ್ಕೃತ ಪ್ರೇಮಿಗಳನ್ನೂ ಕಾಡಿದೆಯಾದರೂ ಬದಲಾವಣೆ ಎಂಬುದು ಜಗದ ನಿಯಮ ಎನ್ನುವಂತೆ ತಂದೆಯವರು ನಿಧನರಾದಾಗ ಸಂಪತ್ ಕುಮಾರ್ ಜವಾಬ್ಧಾರಿಯನ್ನು ಹೊತ್ತಂತೆ ಮತ್ತೊಬ್ಬರು ಈ ಜವಾಬ್ಧಾರಿಯನ್ನು ಆದಷ್ಟು ಶೀಘ್ರವಾಗಿಯೇ ಹೊರುತ್ತಾರೆ  ಎನ್ನುವ ಆಶಾಭಾವನೆ ಎಲ್ಲರದ್ದೂ ಆಗಿದೆ. ಹೊಸಾ ಸಂಪದಕತ್ವದಲ್ಲಿ ಸುಧರ್ಮ ಪತ್ರಿಕೆ ಮತ್ತಷ್ಟು ಜನರಿಗೆ ತಲುಪುವ ಮೂಲಕ ವಿಶ್ವದ ಏಕೈಕ ಸಂಸ್ಕೃತ ದಿನಪತ್ರಿಕೆ ಮತ್ತಷ್ಟು ಮಗದಷ್ಟು ಪ್ರಖ್ಯಾತಿ ಪಡೆಯಲಿ.

ಏನಂತೀರಿ?

ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s