ಬೇಂದ್ರ್ ತೀರ್ಥ ಬಿಸಿ ನೀರಿನ ಬುಗ್ಗೆ

ಸಾಧಾರಣವಾಗಿ ನಮಗೆ ಬಿಸಿ ನೀರಿನ ಬುಗ್ಗೆ ಎಂದಾಕ್ಷಣ ಥಟ್ ಅಂತಾ ನೆನಪಾಗೋದೇ ಉತ್ತರ ಭಾರತದ ಹಿಮಾಚಲ ಪ್ರದೇಶದಲ್ಲಿ ಇರುವ ಕುಲುವಿನ ವಶಿಷ್ಠ ಬಿಸಿನೀರಿನ ಬುಗ್ಗೆ, ಮಣಿಕರಣ್ ನ ಬಿಸಿ ನೀರಿನ ಬುಗ್ಗೆ, ಮಂಡಿ ಜಿಲ್ಲೆಯ ತಟ್ಟಪಾಣಿ, ಖಿರ್ಗಂಗಾ ಮತ್ತು ಕಸೋಲ್ ಬಿಸಿನೀರಿನ ಬುಗ್ಗೆಗಳು ಆದರೆ ಕರ್ನಾಟಕದ ದಕ್ಷಿಣ ಕನ್ನಡದ ಪುತ್ತೂರಿನ ಬಳಿಯೂ ಅದೇ ರೀತಿಯ ಬಿಸಿ ನೀರಿನ ಬುಗ್ಗೆಯಿದೆ ಎಂದರೆ ಆಶ್ಚರ್ಯವಾಗುತ್ತದೆ ಅಲ್ಲವೇ? ಹೌದು. ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 60 ಕಿ.ಮೀ, ಪುತ್ತೂರಿಗೆ 15 ಕಿ. ಮಿ ದೂರದಲ್ಲಿರುವ ಇರ್ದೆ ಎಂಬ ಗ್ರಾಮದಲ್ಲಿರುವ ಬೆಂದ್ರ್ ತೀರ್ಥ ಎಂಬ ನೈಸರ್ಗಿಕ ಬಿಸಿನೀರಿನ ಬುಗ್ಗೆಯಿದೆ.

bend2

ಸ್ಥಳೀಯ ಭಾಷೆ ತುಳುವಿನಲ್ಲಿ ಬೆಂದ್ರ್ ಅಥವಾ ಬೆಂದರ್ ಎಂದರೆ ಬಿಸಿ ಎಂದರ್ಥ. ಈ ಕೊಳದ ನೀರು ಸದಾಕಾಲವೂ ಬಿಸಿಯಾಗಿಯೇ ಇರುತ್ತಿದ್ದ ಕಾರಣ ಅನ್ವರ್ಥನಾಮವಾಗಿ ಇದನ್ನು ಬೆಂದ್ರ್ ತೀರ್ಥ ಎಂದು ಕರೆಯಲಾಗುತ್ತದೆ. ಉತ್ತರ ಭಾರತದ ಹಿಮಾಲಯ ಪರ್ವತಗಳಿಗೆ ಸನ್ನಿಹಿತವಾದ ಪ್ರದೇಶಗಳಲ್ಲಿ ಅಧಿಕ ಗಂಧಕಾಂಶ ಇರುವ ಕಾರಣ ಅಲ್ಲಿ ಕೊತ ಕೊತನೆ ಕುದಿಯುವ ಅನೇಕ ಬಿಸಿ ನೀರಿನ ಚಿಲುಮೆಗಳನ್ನು ಅಥವಾ ಬುಗ್ಗೆಗಳನ್ನು ಕಾಣಬಹುದು. ಮಣಿಕರ್ಣಿಕಾ ಗುರುದ್ವಾರದಲ್ಲಂತೂ ಅದೇ ನೀರಿನಲ್ಲಿಯೇ ಲಂಗರ್ ಗೆ ಬೇಕಾದ ಆಹಾರವನ್ನೂ ತಯಾರಿಸುವಷ್ಟು ಬಿಸಿಯಾಗಿರುತ್ತದೆ. ಆದರೆ ದಕ್ಷಿಣ ಭಾರತದಲ್ಲಿಿಿ ಇಂತಹ ಸಂಗತಿ ಬಲು ವಿರಳ ಮತ್ತು ಅಪರೂಪವೇ ಹೌದು. ಭಾರತೀಯ ಪುರಾತತ್ವ ಸಂಸ್ಥೆಯು ಪ್ರಕಾರ, ಇದು ದಕ್ಷಿಣ ಭಾರತದಲ್ಲಿರುವ ಏಕೈಕ ನೈಸರ್ಗಿಕ ಬಿಸಿ ನೀರಿನ ಚಿಲುಮೆ ಎನ್ನುವುದು ಗಮನಾರ್ಹವಾಗಿದೆ.

ದಟ್ಟವಾದ ಹಾಗೂ ನಯನ ಮನೋಹರ ಪ್ರಕೃತಿಯ ಕಾನನದ ಮಧ್ಯೆ ಇರುವ ಬೇಂದ್ರ್ ತೀರ್ಥ ಬಿಸಿ ನೀರಿನ ಕೊಳ ದಕ್ಷಿಣ ಮುಖವಾಗಿ ಹರಿದು ಅರಬ್ಬೀ ಸಮುದ್ರ ಸೇರುವ ಸೀರೆ ಹೊಳೆಯ ದಡದಲ್ಲಿದೆ. ಈ ಕೊಳದ ಕೂಗಳತೆಯ ದೂರದಲ್ಲಿಯೇ, ಚೆಲ್ಯಡ್ಕ, ಬೈಲಾಡಿ ಹಾಗೂ ಬೆಟ್ಟಂಪಾಡಿ ಎಂಬ ಮೂರು ಹೊಳೆಗಳ ಸಂಗಮ ಕ್ಷೇತ್ರವಾಗಿರುವುದರಿಂದ ಇದು ಕೇವಲ ಪ್ರವಾಸೀ ತಾಣವಾಗಿರದೇ, ಧಾರ್ಮಿಕ ತೀರ್ಥಕ್ಷೇತ್ರವಾಗಿಯೂ ಪ್ರಸಿದ್ಧಿಯನ್ನು ಪಡೆದಿದೆ.

ಸ್ಥಳೀಯರು ಹೇಳುವ ದಂತಕಥೆಯ ಪ್ರಕಾರ ಈ ಹಿಂದೆ ಕಣ್ವ ಮುನಿಗಳ ಶಿಷ್ಯರು ಇಲ್ಲಿನ ದಟ್ಟ ಅರಣ್ಯ ಪ್ರದೇಶ, ವಿಶಾಲವಾದ ಕಾಡುಗಳು ಸುಂದರವಾಗಿ ಹರಿಯುವ ಹಲವು ತೊರೆಗಳಿದ್ದ ಈ ಪ್ರದೇಶದಲ್ಲಿ ಸಂಚರಿಸುತ್ತಿರುವಾಗ ಸಿಂಹ, ಹುಲಿ, ಚಿರತೆಯಂತಹ ಭಯಂಕರವಾದ ಕ್ರೂರ ಮೃಗಗಳು ಒಂದೆಡೆ ಇದ್ದರೆ, ಮತ್ತೊಂಡೆಡೆಯಲ್ಲಿದ್ದ ನೂರಾರು ಆಕಳುಗಳು ಸಹಾ ನಿರ್ಭಯವಾಗಿ ಇದೇ ಪ್ರದೇಶದಲ್ಲಿ ವಾಸಿಸುತ್ತಿದ್ದವಂತೆ. ಹೀಗೆ ಕ್ರೂರಮೃಗಗಳು ಇತರೇ ಸಾಧು ಪ್ರಾಣಿಗಳೊಂದಿಗೆ ಅತ್ಯಂತ ಸಾಮರಸ್ಯದಿಂದ ಬದುಕುತ್ತಿದ್ದದ್ದಲ್ಲದೇ ಎರಡೂ ಪ್ರಾಣಿಗಳು ಒಟ್ಟೊಟ್ಟಿಗೆ ಒಂದೇ ತೊರೆಗಳಲ್ಲಿ ನೀರನ್ನು ಕುಡಿಯುತ್ತಿರುವುದನ್ನು ನೋಡಿ ಅವರಿಗೆ ಅಚ್ಚರಿಯಾಗಿ ಈ ಕ್ಷೇತ್ರವನ್ನು ಗೋಪಾಲಕ್ಷೇತ್ರ ಎಂದು ಕರೆದದ್ದಲ್ಲದೇ ಅಲ್ಲಿಯೇ ಸುಂದರವಾದ ಶ್ರೀ ಗೋಪಾಲಕೃಷ್ಣನ ದೇವಸ್ಥಾನವನ್ನೂ ಕಟ್ಟಿದರಂತೆ. ಪ್ರತೀವರ್ಷವೂ ಈ ದೇವಸ್ಥಾನದ ವಾರ್ಷಿಕೋತ್ಸವದಂದು ಇದೇ ಕೊಳದಲ್ಲಿಯೇ ಪೂಜೆ ಸಲ್ಲಿಸಲಾಗುತ್ತದೆ.

bend1

ಉತ್ತರದ ಭಾರತದ ಬಿಸಿ ನೀರಿನ ಬುಗ್ಗೆಗಳಿಗೆ ಹೋಲಿಸಿದಲ್ಲಿ ಇಲ್ಲಿ ಕಡಿಮೆ ಪ್ರಮಾಣದ ಗಂಧಕದ ಪ್ರಭಾವವಿದ್ದು, ಈ ಬುಗ್ಗೆಯಲ್ಲಿ ಗಂಟೆಗೆ 1350 ರಿಂದ 4600 ಲೀಟರ್ ಗಳಷ್ಟು ನೀರು ಚಿಮ್ಮುವುದಲ್ಲದೇ, ಇಲ್ಲಿನ ನೀರಿನ ಉಷ್ಣಾಂಶ 90 ರಿಂದ 106 ಫಾರನ್ ಹೀಟ್ ನಷ್ಟು ಬಿಸಿ ಇರುವ ಕಾರಣ, ಪ್ರವಾಸಿಗರು ಹಿತಕರವಾದ ಅನುಭವವನ್ನು ಪಡೆಯಬಹುದಾಗಿದೆ. ಇದು ಪ್ರಕೃತಿ ಸಹಜವಾದ ಬಿಸಿ ನೀರಿನ ಚಿಲುಮೆಯಾಗಿರುವುದರಿಂದ ಇಲ್ಲಿನ ಬಿಸಿ ನೀರಿನಲ್ಲಿ ಸಾಮಾನ್ಯ ನೀರಿಗಿಂತಲೂ ಅಧಿಕ ಮಟ್ಟದ ಖನಿಜಾಂಶಗಳನ್ನು ಹೊಂದಿರುವ ಕಾರಣ ಹಲವು ರೀತಿಯ ಚರ್ಮ ಸಂಬಂಧಿತ ರೋಗಗಳು ಎಸ್ಜಿಮಾ, ಮತ್ತು ಅನೇಕ ಅಲರ್ಜಿ ಗಳಿಗೆ ರಾಮಬಾಣವೆಂದು ಸ್ಥಳಿಯರು ನಂಬುತ್ತಾರೆ. ಇದೇ ಕಾರಣದಿಂದಾಗಿಯೇ ಪ್ರತೀ ವರ್ಷ ಸೆಪ್ಟಂಬರ್ ಮಾಸದಲ್ಲಿ ಬರುವ ತೀರ್ಥ ಅಮಾವಾಸ್ಯೆಯ ದಿನದಂದು ಬಹಳಷ್ಟು ಪ್ರವಾಸಿಗರು ಇಲ್ಲಿಗೆ ಪುಣ್ಯಸ್ನಾನ ಮಾಡಲು ಬರುವ ಕಾರಣ ಇದು ಧಾರ್ಮಿಕವಾಗಿಯೂ ಅತ್ಯಂತ ಮಹತ್ವಪೂರ್ಣವೆನಿಸಿದೆ. ಹೊಸದಾಗಿ ಮದುವೆಯಾದ ನವದಂಪತಿಗಳೂ ಸಹಾ ತೀರ್ಥ ಅಮಾವಾಸ್ಯೆಯ ಪವಿತ್ರ ಸ್ನಾನಕ್ಕಾಗಿ ಈ ಸ್ಥಳಕ್ಕೆ ಭೇಟಿ ನೀಡುವ ಸಂಪ್ರದಾಯ ಸ್ಥಳೀಯರಲ್ಲಿ ರೂಢಿಯಲ್ಲಿದೆ.

ಜನರಿಂದ ಜನರಿಗೆ ಈ ಬಿಸಿ ನೀರಿನ ಬುಗ್ಗೆಯ ಬಗ್ಗೆ ತಿಳಿದು ಇಲ್ಲಿನ ಪುಣ್ಯಸ್ನಾನಕ್ಕೆ ಬರುವ ಜನರು ಹೆಚ್ಚಾದಾಗ ಸ್ಥಳೀಯರೇ ಸೇರಿಕೊಂಡು ಬೆಂದ್ರ್ ತೀರ್ಥ ಅಭಿವೃದ್ಧಿ ಸಂಘವನ್ನು ಕಟ್ಟಿಕೊಂಡು ಸ್ನಾನಕ್ಕೆ ಬರುವವರ ಅನುಕೂಲಕ್ಕಾಗಿ ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ವಸತಿ ಗೃಹದೊಂದಿಗೆ ಶೌಚಾಲಯ, ಸ್ನಾನ ಗೃಹ, ಅಡುಗೆ ಕೋಣೆ, ಕಚೇರಿ ಸಹಿತ ಎಲ್ಲ ವ್ಯವಸ್ಥೆಗಳಿರುವ ಪ್ರವಾಸಿ ಮಂದಿರವನ್ನು ನಿರ್ಮಿಸಿತ್ತು. ದುರಾದೃಷ್ಟವಷಾತ್ ಇವೆಲ್ಲವೂ ಇಂದು ಸೂಕ್ತವಾದ ನಿರ್ವಹಣಾ ಸಿಬ್ಬಂಧಿಗಳ ಕೊರತೆಯಿಂದಾಗಿ ಸದ್ಯಕ್ಕೆ ಪಾಳು ಬಿದ್ದಿದ್ದು ಪುಂಡು ಪೋಕರಿಗಳ ಅನೈತಿಕ ಚಟುವಟಿಕೆಗಳ ಕೇಂದ್ರವಾಗಿ ಮಾರ್ಪಾಟಾಗಿರುವುದು ನಿಜಕ್ಕೂ ದುಃಖಕರವೆನಿಸಿದೆ. ಇಲ್ಲಿನ ಕೊಠಡಿಗಳ ಗೋಡೆಗಳ ಮೇಲಿನ ಕಿಡಿಗೇಡಿಗಳ ಬರಹಗಳು ಅವರ ಆವ್ಯಹಾರಗಳಿಗೆ ಮೂಕ ಸಾಕ್ಷಿ ಎನಿಸಿದೆ.

bend3

ಒಂದು ಕಾಲದಲ್ಲಿ ಸಾವಿರಾರು ಜನರನ್ನು ಆಕರ್ಷಿಸುತ್ತಿದ್ದ ಈ ಬಿಸಿ ನೀರಿನ ಚಿಲುಮೆಯಲ್ಲಿ ಇಂದು ನೀರು ಏಕಾಏಕಿ ಕಡಿಮೆಯಾಗಿರುವುದಲ್ಲದೇ, ನೀರಿನ ಉಷ್ಣಾಂಶವೂ ಬಹಳಷ್ಟು ಇಳಿಕೆಯಾಗಿದ್ದು ಎಲ್ಲರಿಗೂ ಅಚ್ಚರಿಯನ್ನು ತಂದಿತ್ತು, ಈ ರೀತಿಯ ದಿಢೀರ್ ವೈಪರೀತ್ಯಕ್ಕೆ ಕಾರಣವೇನೆಂದು ಹುಡುಕಲು ಹೊರಟಾಗ ಸಿಕ್ಕ ಉತ್ತರ ನಿಜಕ್ಕೂ ಅಚ್ಚರಿಯನ್ನು ಮೂಡಿಸಿದೆ. ಈ ಕೊಳದ ಸುತ್ತಮುತ್ತಲಿನಲ್ಲಿನ ಕಾಡುಗಳನ್ನು ಒತ್ತರಿಸಿಕೊಂಡ ಕೆಲ ಖಾಸಗಿ ವ್ಯಕ್ತಿಗಳು ತೋಟಗಳನ್ನು ಮಾಡಿಕೊಂಡು ಅದರ ಕೃಷಿಗಾಗಿ ಕೊಳದ ಕೂಗಳತೆಯ ದೂರದಲ್ಲಿಯೇ ಹತ್ತಿಪ್ಪತ್ತು ಕೊಳವೆ ಬಾವಿಗಳನ್ನು ಕೊರೆದು ಎಗ್ಗಿಲ್ಲದೇ ಅಂತರ್ಜಲವನ್ನು ಹೀರಿ ಹಿಪ್ಪೇ ಕಾಯಿ ಮಾಡಿದ ಪರಿಣಾಮದಿಂದಾಗಿಯೇ ಈ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ.

bend4

ಇದರಿಂದಾಗಿ ಬೇಸಿಗೆ ಕಾಲದಲ್ಲಂತೂ ಈ ಕೊಳ ಸಂಪೂರ್ಣವಾಗಿ ಬತ್ತಿಹೋದ ಉದಾಹರಣೆಯೂ ಇದೆ. ಹೀಗಾಗಿ ಇಂದು ಇಲ್ಲಿಗೆ ಬರುವ ಬರುವ ಪ್ರವಾಸಿಗರ ಸಂಖ್ಯೆಯೂ ದಿನೇ ದಿನೇ ಕಡಿಮೆಯಾಗಿದೆ. ತೀರ್ಥ ಅಮಾವಾಸ್ಯೆ ಹಾಗೂ ಇತರ ವಿಶೇಷ ದಿನಗಳಲ್ಲಿ ಇನ್ನೂ ಅನೇಕ ಶ್ರದ್ಧಾವಂತ ಆಸ್ತಿಕರು ಇಲ್ಲಿಗೆ ಬಂದು ತೀರ್ಥ ಸ್ನಾನ ಮಾಡುವ ಪದ್ದತಿಯನ್ನು ಉಳಿಸಿಕೊಂಡು ಹೋಗುತ್ತಿದ್ದಾರೆ.

ಕೆಲವೇ ಕೆಲವು ವರ್ಷಗಳ ಹಿಂದೆ ವರ್ಷದ 365 ದಿನಗಳೂ ಈ ಕೊಳದಲ್ಲಿರುವ ನೀನರು ಬಿಸಿಯಾಗಿರುತ್ತಿತ್ತು. ಬೇಸಿಗೆ ಕಾಲದಲ್ಲೂ ಧಾರಾಳವಾಗಿ ನೀರು ಇರುತ್ತಿದ್ದದ್ದಲ್ಲದೇ, ಮಳೆಗಾಲದಲ್ಲಿ ಕೊಳ ತುಂಬಿ ತುಳುಕುತ್ತಿದ್ದರೂ, ಇಲ್ಲಿನ ನೀರು ಬಿಸಿಯಾಗಿಯೇ ಇರುತ್ತಿತ್ತು. ಆದರೆ ಇಂದು ಮನುಷ್ಯರ ದುರಾಸೆಯಿಂದಾಗಿ ಸುತ್ತಮುತ್ತಲಿನ ಅರಣ್ಯವನ್ನು ನಾಶಪಡಿಸಿ ಅಂತರ್ಜಲವನ್ನು ಬರಿದು ಮಾಡಿದ ಪರಿಣಾಮವಾಗಿ ಈ ಕೊಳಕ್ಕೆ ನೀರಿನ ಅಭಾವ ಉಂಟಾಗಿ ನೀರಿಲ್ಲದೆಯೇ ಬೆಂದ್ರ್ ತೀರ್ಥ ಅವಸಾನವಾಗಿ ಹೋಗುತ್ತಿರುವುದು ನಿಜಕ್ಕೂ ಬೇಸರವಾಗುತ್ತಿದೆ.

ಏನಂತೀರೀ?

ನಿಮ್ಮವನೇ ಉಮಾಸುತ

One thought on “ಬೇಂದ್ರ್ ತೀರ್ಥ ಬಿಸಿ ನೀರಿನ ಬುಗ್ಗೆ

  1. ಬಿಸಿ ನೀರಿನ ಬುಗ್ಗೆ ಕರ್ನಾಟಕದಲ್ಲಿ ಇರುವುದು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್.

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s