ಕಳೆದ ಒಂದುವರೆ ವರ್ಷದಿಂದ ಕೊರೋನಾ ಸಾಂಕ್ರಾಮಿಕ ಮಹಾಮಾರಿಯಿಂದ ಮನೆಯಲ್ಲಿ ಜಡ್ಡು ಹಿಡಿದು ಹೋಗಿರುವ ಮೈ ಮತ್ತು ಮನಗಳಿಗೆ ಮುದ ನೀಡುವ, ವೆಂಗಳೂರಿನ ಅತ್ಯಂತ ಸಮೀಪದಲ್ಲೇ ಇರುವ ಸುಂದರ ರಮಣೀಯ ಪ್ರಕೃತಿತಾಣವೊಂದರ ಕುರಿತಾಗಿ ತಿಳಿಯೋಣ ಬನ್ನಿ
ಬೆಂಗಳೂರು ಮೈಸೂರಿನ ಹೆದ್ದಾರಿಯಲ್ಲಿ ಸಾಗಿ ಕೆಂದೇರಿ ದಾಟಿ ಸ್ವಲ್ಪ ದೂರ ಹೊಗುತ್ತಿದ್ದಂತೆಯೇ ಎಡಗಡೆಯಲ್ಲಿ ನಮಗೆ ರಾಜರಾಜೇಶ್ವರಿ ಮೆಡಿಕಲ್ ಕಾಲೇಜ್ ಸಿಗುತ್ತದೆ. ಅಲ್ಲಿಂದ ಸ್ವಲ್ಪ ಮುಂದೆ ಹೋಗುತ್ತಿದ್ದಂತೆಯೇ ಬಲಗಡೆಯಲ್ಲಿ ಅದೇ ರಾಜರಾಜೇಶ್ವರಿ ಡೆಂಟಲ್ ಕಾಲೇಜು ಕಾಣಬಹುದಾಗಿದೆ. ಆ ಕಾಲೇಜಿನ ಪಕ್ಕದಲ್ಲಿಯೇ ಇರುವ ರಾಮಗೊಂಡನಹಳ್ಳಿ ಕಮಾನಿನ ಕೆಳಗೇ ಹಾದು, ರೈಲ್ವೇ ಹಳಿಗಳನ್ನು ದಾಟಿ ಸುಮಾರು 8 ಕಿಮೀ ದೂರವನ್ನು ಪ್ರಯಾಣಿಸಿದರೆ, ಎಡಭಾಗದಲ್ಲಿಯೇ ಸುಂದರವಾದ ವಿಶಾಲವಾದ ದೊಡ್ಡಆಲದ ಮರದ ಉದ್ಯಾನವನ ನಮಗೆ ಕಾಣಸಿಗುತ್ತದೆ. ಅದರ ಮುಂದೆಯೇ ನಮ್ಮ ವಾಹನವನ್ನು ನಿಲ್ಲಿಸಿ, ತೋಟಗಾರಿಕೆ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ದೊಡ್ಡಾಲದ ಮರ ಉದ್ಯಾನವನದ ಒಳಗೆ ಹೊಗಬಹುದಾಗಿದೆ.
ಬೆಂಗಳೂರು ನಗರದಿಂದ ಸುಮಾರು 28 ಕಿ.ಮೀ ದೂರದಲ್ಲಿ ಬೆಂಗಳೂರು ದಕ್ಷಿಣ ತಾಲ್ಲೂಕಿನ ರಾಮೋಹಳ್ಳಿ ದಾಟಿ ಕೇತೋಹಳ್ಳಿಯ ವ್ಯಾಪ್ತಿಯಲ್ಲಿರುವ ಸುಮಾರು 4 ಎಕರೆಯಷ್ಟು ಜಾಗದಲ್ಲಿ ವಿಶಾಲವಾಗಿ ಹರಡಿ ಕೊಂಡಿರುವ ಸುಮಾರು 400 ವರ್ಷಗಳಷ್ಟು ಹಳೆಯದಾದ, ಭಾರತದ ಪುರಾತನ ಆಲದ ಮರಗಳಲ್ಲಿ ಆಂಧ್ರಪ್ರದೇಶದ ಮೆಹಬೂಬ್ ನಗರ, ಪಶ್ಚಿಮ ಬಂಗಾಳದ ಕೊಲ್ಕತ್ತ ಹಾಗೂ ತಮಿಳುನಾಡಿನ ಚೆನ್ನೈನಲ್ಲ್ಲಿ ಅಡೆಯಾರ್ ಹೊರತು ಪಡಿಸಿದರೆ, ನಾಲ್ಕನೆಯ ಸ್ಥಾನ ಪಡೆದಿರುವ ಪುರಾತನವಾದ ಆಲದಮರವಾಗಿದೆ.
ಈ ಉದ್ಯಾನವನವನ್ನು ಪ್ರವೇಶಿಸುತ್ತಿದ್ದಂತೆಯೇ ಅರೇ ಈ ಪ್ರದೇಶವನ್ನು ಈ ಮುಂಚೆ ಎಲ್ಲಿಯೋ ನೋಡಿದ್ದೇವಲ್ಲಾ ಎಂಬ ನೆನಪು ಮೂಡುತ್ತದೆ. ಹೌದು ನಿಜ. ಕನ್ನಡ, ತಮಿಳು, ತೆಲುಗು, ಹಿಂದಿ ಹೀಗೆ ಬಹುತೇಕ ಭಾರತೀಯ ನೂರಾರು ಚಲನಚಿತ್ರಗಳು ಮತ್ತು ಧಾರಾವಾಹಿಗಳು ಈ ಪ್ರದೇಶದಲ್ಲಿ ಚಿತ್ರೀಕರಣಗೊಂಡಿವೆ. ವರನಟ ಡಾ.ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್ ಅವರಿಂದ ಹಿಡಿದು ಹಿಂದಿಯ ಹೆಸರಾಂತ ನಟರಾದ ಅಮಿತಾಬ್ ಬಚ್ಚನ್, ಧರ್ಮೇಂದ್ರ, ಸಂಜೀವ್ ಕುಮಾರ್, ಅಮ್ಜದ್ ಖಾನ್ ರಂತಹ ಖ್ಯಾತ ನಟರಗಳು ನೂರಾರು ಚಿತ್ರಗಳ ನಾಯಕ ನಾಯಕಿಯರು ಮರ ಸುತ್ತಾಡುವ ದೃಶ್ಯ, ನಾಯಕ ಮತ್ತು ಖಳನಾಯಕರುಗಳ ಹೊಡೆದಾಟದ ದೃಶ್ಯಗಳು ಇಲ್ಲಿ ಚಿತ್ರೀಕರಣಗೊಂಡಿವೆ.
ಫಿಕಸ್ ಬೆಂಗಲೆನ್ಸಿಸ್ ಎಂದು ವೈಜ್ಞಾನಿಕವಾಗಿ ಕರೆಯಲ್ಪಡುವ ಆಲದಮರ ಉಳಿದ ಸಸ್ಯಗಳಂತೆ ತನ್ನ ಸಂತಾನೋತ್ಪತ್ತಿಯನ್ನು ಕೇವಲ ಜೀಜದ ಆಶ್ರಯ ಪಡೆಯದೇ, ಜೋಲಾಡುವಂತಹ ತನ್ನ ಬಿಳಿಲುಗಳ ಮೂಲಕವೇ ವೃದ್ಧಿಸಿಕೊಂಡು ಹೋಗುತ್ತವೆ. ಆಲದ ಮರ ಬೆಳೆದು ದೊಡ್ಡದಾಗುತ್ತಿದ್ದಂತೆಯೇ, ತನ್ನ ಬಿಳಿಲುಗಳನ್ನು ಬೆಳೆಸಿಕೊಂಡು ಒಮ್ಮೆ ನೆಲಕ್ಕೆ ತಾಗಿದ ನಂತರ ಅದುವೇ ಬೇರಾಗಿ ನೆಲದಲ್ಲಿ ಭದ್ರವಾಗಿ ನೆಲೆಯೂರಿ ಮುಂದೆ ಆ ಬಿಳಿಲುಗಳೇ ದೊಡ್ಡ ದೊಡ್ಡ ಕಾಂಡಗಳಾಗಿ ಬೆಳೆಯಲ್ಪಟ್ಟು ವಿಶಾಲವಾದ ಹೆಮ್ಮರವಾಗುತ್ತದೆ.
ಇಲ್ಲಿನ ಆಲದ ಮರದ ಕಥೆಯೂ ಇದಕ್ಕಿಂತಲೂ ಭಿನ್ನವಾಗಿಯೇನೂ ಇಲ್ಲ. ಇಲ್ಲಿನ ಸ್ಥಳೀಯರು ಹೇಳುವ ಪ್ರಕಾರ ಸುಮಾರು 400 ವರ್ಷಗಳ ಹಿಂದೆ, ಇಲ್ಲಿನ ಸ್ಥಳಿಯ ರೈತರುಗಳು ತಾವು ಬೆಳೆದ ತಮ್ಮ ಧಾನವನ್ನು ಬಡಿಯುವ ಸಲುವಾಗಿ ಬಟ್ಟ ಬಯಲಾಗಿದ್ದ ಈ ಜಾಗದಲ್ಲಿ ಧಾನ್ಯದ ಕಣವನ್ನು ಮಾಡಿಕೊಂಡು ತಮ್ಮ ಧಾನ್ಯಗಳನ್ನು ಬಡಿದು, ಕೇರೀ, ತೂರಿ ಶುಚಿಗೊಳಿಸುತ್ತಿದ್ದರೆಂತೆ, ಹಾಗೆ ಧಾನ್ಯಗಳನ್ನು ಬಡಿಯುವ ಸಲುವಾಗಿ ಎತ್ತುಗಳ ಮೂಲಕ ಗುಂಡುಗಳನ್ನು ಚಲಾಯಿಸುವ ಸಲುವಾಗಿ ಕಣದ ಮಧ್ಯದಲ್ಲಿ ಮೇಟಿಯಾಗಿ ಒಂದು ಆಲದ ಕಡ್ಡಿಯನ್ನು ನೆಟ್ಟಿದ್ದರಂತೆ. ಆ ಮೇಟಿಯಕಡ್ಡಿಯು ಒಂದೇ ರಾತ್ರಿಯಲ್ಲಿ ಆಶ್ಚರ್ಯಕರವಾಗಿ ಚಿಗುರಿ ಮರವಾಗಿ ಬೆಳೆದದ್ದನ್ನು ಗಮನಿಸಿದ ಆ ಜಮೀನಿನ ಮಾಲೀಕರು ಈ ಅಚ್ಚರಿಯ ಹಿಂದಿರುವ ಕಾರಣವೇನು ಎಂದು ಪುರೋಹಿತರಲ್ಲಿ ವಿಚಾರಿಸಿದಾಗ ಇದು ಖಂಡಿತವಾಗಿಯೂ ದೇವರ ಮಹಿಮೆ ಎಂದು ತಿಳಿಸಿದರಂತೆ. ಅದೇ ಗುಂಗಿನಲ್ಲಿದ್ದ ಆ ಹೊಲದ ಮಾಲೀಕನಿಗೆ ಕನಸಿನಲ್ಲಿ ಶ್ರೀ ಮುನೇಶ್ವರ ಸ್ವಾಮಿಯು ಪ್ರತ್ಯಕ್ಷವಾಗಿ ಈ ಆಲದ ಮರದಡಿಯಲ್ಲಿ ತಾನು ನೆಲೆಸಿರುವುದಾಗಿ ತಿಳಿಸಿದರಂತೆ. ಮಾರನೇಯ ದಿನ ಆ ದೇವರ ಆಜ್ಞೆಯಂತೆ ಆ ಆಲದ ಮರದಡಿಯಲ್ಲೇ ಕಲ್ಲಿನ ಮುನೇಶ್ವರ ದೇವರನ್ನು ಸ್ಥಾಪಿಸಿ ಅದಕ್ಕೆ ಪೂಜೆ ಮಾಡುವುದಲ್ಲದೇ ಆ ಆಲದ ಮರವನ್ನು ಯಾರೂ ಸಹಾ ಕಡಿಯದೆಂತೆ ಸಂರಕ್ಷಿಸಿದರಂತೆ. ಹಾಗೆ ಸಂರಕ್ಷಿಸಲ್ಪಟ್ಟ ಮರ ನೂರಾರು ವರ್ಷಗಳಲ್ಲಿ ಬೃಹದಾಕಾರವಾಗಿ ಬೆಳೆದು ಅನೇಕ ದೊಡ್ಡ ದೊಡ್ಡ ಟಿಸಿಲುಗಳಾಗಿ ಸುಮಾರು ನಾಲ್ಕು ಕಡೆಗಳಲ್ಲಿ ಬೇರೂರಿ ದೊಡ್ಡ ಆಲದಮರವಾಗಿ ವಿಶ್ವವಿಖ್ಯಾತವಾಗಿದೆ.
ಸುಮಾರು 3 ಎಕರೆಯಷ್ಟು ಜಾಗದಲ್ಲಿ ವಿಶಾಲವಾಗಿ ಹರಡಿಕೊಂಡಿದ್ದ ಮೂಲ ಮರದ ಎತ್ತರ ಸುಮಾರು 95 ಅಡಿಗಳಷ್ಟು ಗಗನದೆತ್ತರಕ್ಕೆ ಏರಿದೆ. 2000ದ ಇಸವಿಯಲ್ಲಿ ವಯೋ ಸಹಜ ರೋಗಕ್ಕೆ ತುತ್ತಾದ ಮೂಲ ಮರ ನಳಿಸಿಹೋದ ನಂತರ ಈಗ ಆಲದ ಮರ ನಾಲ್ಕು ಭಾಗಗಳಾಗಿ ವಿಭಜಿಸಲ್ಪಟ್ಟು ತನ್ನ ದೈತ್ಯಾಕಾರದ ವಿವಿಧ ಭಂಗಿಯ ಕೊಂಬೆಗಳು ಮತ್ತು ಜೋಲಾಡುವ ಸಾವಿರಾರು ಬಿಳಿಲುಗಳು ಅರ್ಥಾತ್ ಬೇರುಗಳಿಂದಾಗಿ ವಿಶಿಷ್ಟ ಆಕರ್ಷಣೆಯನ್ನು ಹೊಂದಿದೆ. ಆ ಬಿಳಿಲುಗಳಿಗೆ ಜೋತಾಡುತ್ತಾ ನಲಿದಾಡುವ ಮಂಗಗಳೂ ಸಹಾ ಅಲ್ಲಿಯ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ. ಈ ಕೋತಿಗಳ ಕಾಟ ಜೋರಾಗಿ ಇರುವ ಕಾರನ ಪ್ರವಾಸಿಗರು ತಮ್ಮ ತಮ್ಮ ಕೈಚೀಲಗಳು ಮತ್ತು ತಿನಿಸಿಗಳನ್ನು ಸ್ವಲ್ಪ ಎಚ್ಚಕೆಯಿಂದ ನೋಡಿಕೊಳ್ಲಬೇಕಿದೆ.
ಸದ್ಯಕ್ಕೆ ಮೂಲ ಮರವಿದ್ದ ಜಾಗದಲ್ಲಿ ತುಳಸೀ ಕಟ್ಟೆಯನ್ನು ಕಟ್ಟಿರುವುದಲ್ಲದೇ ಅಲ್ಲಿದ್ದ ಮುನೇಶ್ವರ ಸ್ವಾಮಿಗೆ ಭಕ್ತಾದಿಗಳ ನೆರವಿನಿಂದ ಒಂದು ಸುಂದರವಾದ ದೇವಸ್ಥಾನವನ್ನು ಕಟ್ಟಿ ಪ್ರತೀ ದಿನವೂ ಪೂಜೆ ಮಾಡಲಾಗುತ್ತಿದೆ. ಗುರುವಾರ ಮತ್ತು ಭಾನುವಾರ ನಡೆಯುವ ವಿಶೇಷ ಪೂಜೆಗೆ ಸುಮಾರು ಜನರು ಬರುತ್ತಾರೆ ಎಂದು ಆ ದೇವಸ್ಥಾನದ ನಾಲ್ಕನೆಯ ತಲೆಮಾರಿನ ಅರ್ಚಕರಾದ ಶ್ರೀ ಮುನಿಯಪ್ಪನವರು ತಿಳಿಸಿದರು. ಮುನೇಶ್ವರ ಸ್ವಾಮಿಯು ಮನದಲ್ಲಿ ನೆನೆದದ್ದನ್ನು ಕರುಣಿಸಿದ ನಂತರ ದೇವರಿಗೆ ಕುರಿ ಮತ್ತು ಕೋಳಿಯನ್ನು ಬಲಿಕೊಡುವ ಮೂಲಕ ತಮ್ಮ ಹರಕೆಯನ್ನು ತೀರಿಸಿಕೊಳ್ಳುತ್ತಾರೆ. ಪ್ರತೀ ವರ್ಷ ಮೇ ತಿಂಗಳಿನಲ್ಲಿ ಈ ಸ್ವಾಮಿಯ ವಾರ್ಷಿಕೋತ್ಸವ ಸುತ್ತ ಮುತ್ತಲಿನ ಹತ್ತಾರು ಹಳ್ಳಿಳು ಮತ್ತು ಈ ದೇವಸ್ಥಾನದ ಭಕ್ತಾದಿಗಳ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ಮೆರವಣಿಗೆಯೊಂದಿಗೆ ನಡೆಯುತ್ತದೆ.
ಈ ಆಲದ ಮರವನ್ನು ವೀಕ್ಷಿಸಲು ಸಾಧಾರಣ ದಿನಗಳಲ್ಲಿ ಹೆಚ್ಚಿನ ಜನಸಂದಣಿ ಇಲ್ಲದಿದ್ದರೂ ವಾರಾಂತ್ಯದಲ್ಲಿ ಇಂದಿಗೂ ಸಾವಿರಾರು ಜನರು ಬರುತ್ತಾರೆ. ಇಡೀ ಉದ್ಯನವನವನ್ನು ಸುತ್ತಾಡಿ ಆಯಾಸವಾದಲ್ಲಿ ದಣಿವಾರಿಸಿಕೊಳ್ಳಲು ಕಲ್ಲಿನ ಬೆಂಚುಗಳು ಮತ್ತು ಮರದ ಆಸನಗಳನ್ನು ತೋಟಗಾರಿಕಾ ಇಲಾಖೆ ಅಳವಡಿಸಿರುವುದನ್ನು ಬಿಟ್ಟರೆ ಇನ್ನಾವುದೇ ರೀತಿಯ ವ್ಯವಸ್ಥೆಗಳನ್ನು ಇಲ್ಲವಾಗಿದೆ. ಕರ್ನಾಟಕ ರಾಜ್ಯ ಸರ್ಕಾರದ ತೋಟಗಾರಿಕೆ ಇಲಾಖೆಯು ಈ ಆಲದ ಮರದ ಸಂರಕ್ಷಣೆಯ ಹೊಣೆ ವಹಿಸಿಕೊಂಡಿದ್ದು ಸುಮಾರು ನಾಲ್ಕು ಎಕರೆಯಷ್ಟು ವಿಸ್ಥಾರವಾಗಿರುವ ಈ ಉದ್ಯಾನವನದ ಸುತ್ತ ಕಬ್ಬಿಣದ ಗ್ರಿಲ್ ಹಾಕಿಸಿದ್ದಾರ. ಪ್ರವಾಸೋದ್ಯಮ ಇಲಾಖೆಯು ಈ ದೊಡ್ಡ ಆಲದ ಮರವನ್ನು ಪಾರಂಪರಿಕ ವೃಕ್ಷವೆಂದು ಘೋಷಿಸಿ ತಾಣವನ್ನು ಪ್ರವಾಸಿ ಕೇಂದ್ರವೆಂದು ಸಾರಿದೆಯಲ್ಲದೇ ಪ್ರವಾಸಿಗರ ಅನಕೂಲಕ್ಕೆಂದು ಅಲ್ಲೊಂದು ಶೌಚಾಲಯವನ್ನು ಕಟ್ಟಿಸಿದ್ದಾರೆ, ಕುಡಿಯುವ ನೀರಿನ ಸಲುವಾಗಿ ಸದ್ಯಕ್ಕೆ ಕೊಳವೇ ಭಾವಿಯೊಂದನ್ನು ತೋಡಿಸಿ ಅದಕ್ಕೆ ಸೂಕ್ತವಾದ ಸಾಧನಗಳನು ಸಿದ್ಧ ಪಡಿಸುವ ಕಾರ್ಯ ಭರದಿಂದ ಸಾಗಿದೆ.
ವಾರಾಂತ್ಯದಲ್ಲಿ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶದಿಂದ ಸಾವಿರಾರು ಪ್ರವಾಸಿಗಳು ತಮ್ಮ ತಮ್ಮ ಮನೆಗಳಿಂದ ಊಟ ಮತ್ತು ತಿಂಡಿಗಳನ್ನು ಮಾಡಿಕೊಂಡು ಕುಟುಂಬ ಸಮೇತರಾಗಿ ಇಲ್ಲಿಗೆ ಬಂದು ಇಲ್ಲಿನ ಸುಂದರ ಪರಿಸರದಲ್ಲಿ ಮಕ್ಕಳೊಂದಿಗೆ ಕೆಲ ಕಾಲ ಕಳೆದು ನಂತರ ತಂದ ಬುತ್ತಿಯನ್ನು ತಿಂದು ಪ್ಲಾಸ್ಟಿಕ್ ತಟ್ಟೇ ಲೋಟ ಮತ್ತು ಬಾಟೆಲ್ ಗಳನ್ನು ಎಲ್ಲೆಂದರಲ್ಲಿ ಬಿಸಾಡುವುದು ಬೇಸರದ ಸಂಗತಿಯಾಗಿದೆ,
ಮರವನ್ನು ಮುಟ್ಟಬಾರದು, ಬಿಳಿಲುಗಳಲ್ಲಿ ಜೋತಾಡಬಾರದು ಎಂಬ ಎಚ್ಚರಿಕೆ ಫಲಕಗಳನ್ನು ಹಾಕಿದ್ದರೂ, ಅದನ್ನು ಲೆಕ್ಖಿಸದೇ ಜೋತಾಡುವ ಮತ್ತು ತಮ್ಮ ತಮ್ಮ ಹೆಸರಗಳನ್ನು ಮರದ ಮೇಲೆ ಕೆತ್ತುವ ಮೂಲಕ ಅಲ್ಲಿನ ಸೌಂದರ್ಯವನ್ನು ಹಾಳು ಮಾಡುತ್ತಿರುವುದು ನಿಜಕ್ಕೂ ವಿಪರ್ಯಾಸ. ಇದರ ಜೊತೆ ಅಲ್ಲಿಗೆ ಬರುವೆ ಯುವ ಪ್ರೇಮಿಗಳು ಮಕ್ಕಳು ಮತ್ತು ಸಂಸಾರಸ್ಥರು ಇದ್ದಾರೆ ಎಂಬುದರ ಪರಿವೇ ಇಲ್ಲದೇ ಸ್ವಚ್ಚಂದವಾಗಿ ತಮ್ಮ ವಾಂಛೆಗಳನ್ನು ತೀರಿಸಿಕೊಳ್ಳುವುದು ಸ್ವಲ್ಪ ಮುಜುಗರವನ್ನುಂಟು ಮಾಡುವ ಕಾರಣ, ತೋಟಗಾರಿಕಾ ಇಲಾಖೆ ಇದರ ಬಗ್ಗೆ ಎಚ್ಚರ ವಹಿಸಬೇಕಾಗಿದೆ.
ಪ್ರವಾಸಿಗರ ಅನುಕೂಲಕ್ಕೆಂದೇ ದೊಡ್ಡಆಲದ ಮರದ ಸುತ್ತಮುತ್ತಲೂ ಅನೇಕ ಉಪಹಾರ ಗೃಹಗಳಿದ್ದು ಶುಚಿ ಮತ್ತು ರುಚಿಯಾದ ಊಟೋಪಚಾರದ ವ್ಯವಸ್ಥೆಯೂ ಇದೆ. ಇನ್ನು ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಕೃಷ್ಣರಾಜ ಮಾರುಕಟ್ಟೆಯಿಂದ ಈ ಪ್ರೇಕ್ಷಣೀಯ ಸ್ಥಳಕ್ಕೆ ಬರುವ ಸಲುವಾಗಿ ಬಿಎಂಟಿಸಿ ಬಸ್ಸುಗಳಿವೆ.
ಮಳೆಗಾಲದ ನಂತರ ಬಂದಲ್ಲಿ ಇಲ್ಲಿಂದ ಸ್ವಲ್ಪದೇ ದೂರದಲ್ಲಿರುವ ಅರ್ಕಾವತಿ ನದಿಯ ಅಡ್ಡಲಾಗಿ ಕಟ್ಟಿರುವ ಮಂಚಿನಬೆಲೆ ಜಲಾಶಯವನ್ನೂ ಸಹಾ ನೋಡಿಕೊಂಡು ಬರಬಹುದಾಗಿದೆ. ಅದೇ ರೀತಿ ಆಸ್ತಿಕರಾಗಿದ್ದಲ್ಲಿ, ಮನೆಗೆ ಹಿಂದಿರುಗುವ ದಾರಿಯಲ್ಲಿಯೇ ಮುಕ್ತಿನಾಗ ಮತ್ತು ರಾಮೋಹಳ್ಳಿಯ ಶ್ರೀ ಶ್ರೀನಿವಾಸ ಸಾಲಿಗ್ರಾಮ ದೇವಸ್ಥಾನಕ್ಕೂ ಭೇಟಿ ನೀಡಿ ಭಗವಂತನ ಕೃಪಾಶೀರ್ವಾದಕ್ಕೆ ಪಾತ್ರರಾಗಬಹುದಾಗಿದೆ
ಇನ್ನೇಕೆ ತಡಾ, ಈ ವಾರಂತ್ಯದಲ್ಲಿ ಕುಟುಂಬ ಸಮೇತರಾಗಿ ದೊಡ್ಡಾಲದ ಮರಕ್ಕೆ ಭೇಟಿ ನೀಡಿ ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ತಾನೇ?
ದೊಡ್ಡಾಲದ ಮರವನ್ನು ಇಲ್ಲಿಂದಲೇ ಕಣ್ತುಂಬಿಸಿಕೊಳ್ಳೋಣ.
ಏನಂತೀರಿ?
ನಿಮ್ಮವನೇ ಉಮಾಸುತ