ಸಾಮಾನ್ಯವಾಗಿ ಮನುಷ್ಯರು ಸಂತೋಷ ಮತ್ತು ದುಃಖವನ್ನು ವ್ಯಕ್ತ ಪಡಿಸುವ ಸಲುವಾಗಿ ಕಣ್ಣೀರು ಸುರಿಸುವುದು ಸಹಜ.ಪ್ರಕ್ರಿಯೆಯಾಗಿದೆ. ಬೆಂಗಳೂರಿನ ದೇವಸ್ಥಾನವೊಂದರ ಆಂಜನೇಯಸ್ವಾಮಿ ವರ್ಷಕ್ಕೊಮ್ಮೆ ಕಣ್ಣೀರು ಸುರಿಸುವ ಆಶ್ಚರ್ಯಕರವಾದ ಸಂಗತಿಯ ಬಗ್ಗೆ ತಿಳಿದು ಕೊಳ್ಳೋಣ.
ಬಾಣಸವಾಡಿ ಬೆಂಗಳೂರಿನ ಈಶಾನ್ಯಕ್ಕೆ ನಗರದ ಕೇಂದ್ರದಿಂದ ಸುಮಾರು 6-8 ಕಿ.ಮೀ ದೂರದಲ್ಲಿದ್ದು ಈ ಹಿಂದೆ ಚಿಕ್ಕ ಬಾಣಸವಾಡಿ ಮತ್ತು ದೊಡ್ಡ ಬಾಣಸವಾಡಿ ಎಂಬ ಎರಡು ಗ್ರಾಮಗಳು ಇದ್ದವು. ಹೆಚ್ಚಾಗುತ್ತಿರುವ ನಗರೀಕರಣದಿಂದ ಈ ಎರಡೂ ಹಳ್ಳಿಗಳೂ ಕಣ್ಮರೆಯಾಗಿ ಕೇವಲ ದೊಡ್ಡ ಬಾಣಸವಾಡಿ ಎಂಬ ಸುಸಜ್ಜಿತವಾದ ಬಡಾವಣೆಯು ಇಂದು ಆ ಪ್ರದೇಶದಲ್ಲಿ ತಲೆ ಎತ್ತಿದೆ. ಹಳ್ಳಿಗಳು ಪಟ್ಟಣವಾಗಿ ಜನರೆಲ್ಲಾ ಸ್ಥಿತಿವಂತರಾದರೂ ಅವರಲ್ಲಿ ಅಳಿದುಳಿದಿರುವ ಆಸ್ತಿಕತನ ಮತ್ತು ದೈವೀ ಭಕ್ತಿಯಿಂದಾಗಿ ನಮ್ಮ ಪೂರ್ವಜರು ಕಟ್ಟಿರುವ ದೇವಸ್ಥಾನಗಳನ್ನು ಇನ್ನೂ ಜತನದಿಂದ ಉಳಿಸಿಕೊಂಡು ಹೋಗುತ್ತಿದ್ದಾರೆ. .
ಸುಮಾರು 200 ವರ್ಷಗಳಷ್ಟು ಹಳೆಯದು ಎಂದು ಹೇಳಲಾಗುವ ದೊಡ್ಡ ಬಾಣಸವಾಡಿಯ ಪ್ರಖ್ಯಾತವಾದ ಆಂಜನೇಯ ಸ್ವಾಮಿ ದೇವಸ್ಥಾನ ಇದಕ್ಕೊಂದು ಉದಾಹರಣೆಯಾಗಿದೆ. ಬೆಂಗಳೂರಿನ ನಿರ್ಮಾತರಾದ ಶ್ರೀ ಕೆಂಪೇಗೌಡರ ಕಾಲದಲ್ಲಿ, ಶ್ರೀ ವ್ಯಾಸರಾಜರಿಂದ ಪ್ರತಿಷ್ಠಾಪನೆ ಮಾಡಲ್ಪಟ್ಟಿರುವ, ಅತ್ಯಂತ ಶಾಸ್ತ್ರೀಯವಾದ ದ್ರಾವಿಡ ಶೈಲಿಯಲ್ಲಿ ನಿರ್ಮಿಸಲ್ಪಟ್ಟಿರುವ ಈ ದೇವಾಲಯದಲ್ಲಿ ಶ್ರೀ ಆಂಜನೇಯ ಸ್ವಾಮಿ ಪ್ರಮುಖ ದೇವರಾದರೇ, ಅದರ ಜೊತೆಯಲ್ಲಿಯೇ ಶ್ರೀ ಗಣಪತಿ, ಶ್ರೀ ವೆಂಕಟೇಶ್ವರ ಸ್ವಾಮಿ, ಶ್ರೀರಾಮ, ಶ್ರೀ ಬಸವೇಶ್ವರ ಮತ್ತು ಸಾಕ್ಷಾತ್ ಶಿವನ ಮಂದಿರಗಳಿರುವ ಒಂದು ದೇವಸ್ಥಾನದ ಸಮುಚ್ಚಯವನ್ನು ಇನ್ನೂ ಅಚ್ಚುಕಟ್ಟಾಗಿ ಬೆಳಸಿಕೊಂಡು ಹೋಗುತ್ತಿರುವುದು ಶ್ಲಾಘನೀಯವಾಗಿದೆ.
ಈ ದೇವಾಲಯದಲ್ಲಿರುವ ಶ್ರೀ ಆಂಜನೇಯ ಸ್ವಾಮಿಯ ಪ್ರತಿಮೆಯನ್ನು ಕುಂದಾಪುರ ಮತ್ತು ಉಡುಪಿ ನಡುವೆ ಇರುವ ಸಾಲಿಗ್ರಾಮ ಎಂಬ ಊರಿನಲ್ಲಿ ಕೆತ್ತಲಾಗಿದ್ದು, ಇಲ್ಲಿನ ಮೂಲ ವಿಗ್ರಹವು ಸುಮಾರು 5 ಅಡಿ ಎತ್ತರವಿದ್ದು, ಎಡ ಹಸ್ತದಲ್ಲಿ ಮಾವಿನಕಾಯಿ ಗೊಂಚಲನ್ನು ಹಿಡಿದಿದ್ದು, ಸಾಲಿಗ್ರಾಮ ಕೃಷ್ಣ ಶಿಲೆಯಿಂದ ವೀರಾಂಜನೇಯ ಭಂಗಿಯಲ್ಲಿದೆ. ಪ್ರತಿ ದಿನವೂ ನೂರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ಶಾಸ್ತ್ರೋಕ್ತವಾಗಿ ಪೂಜಾ ಕೈಂಕರ್ಯಗಳು ನಡೆದು ವಾರಾಂತ್ಯ ಮತ್ತು ವಿಶೇಷ ಹಬ್ಬಹರಿ ದಿನಗಳಲ್ಲಿ ಸಾವಿರಾರು ಭಕ್ತರು ಇಲ್ಲಿಗೆ ಅಗಮಿಸುತ್ತಾರೆ. ಸರ್ಕಾರದ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಈ ದೇವಸ್ಥಾನದಲ್ಲಿ, ವಾರಾಂತ್ಯ ಮತ್ತು ವಿಶೇಷ ದಿನಗಳಲ್ಲಿ ದಾಸೋಹದ ವ್ಯವಸ್ಥೆಯನ್ನೂ ಮಾಡುವುದು ಅತ್ಯಂತ ವಿಶೇಷವಾಗಿದೆ.
ದಸರಾದ ಹತ್ತು ದಿನಗಳಲ್ಲಂತೂ ಈ ದೇವಸ್ಥಾನಕ್ಕೆ ಬರುವ ಅಸಂಖ್ಯಾತ ಭಕ್ತರು ಆಗಮಿಸುತ್ತಾರೆ. ಪ್ರತೀ ವರ್ಷ ಡಿಸೆಂಬರ್ ತಿಂಗಳಲ್ಲಿ ನಡೆಯುವ ಹನುಮಾನ್ ಜಯಂತಿ ಸಂದರ್ಭದಲ್ಲಂತೂ ದೇವಾಲಯದ ಎಲ್ಲಾ ದೇವತೆಗಳಿಗೂ ವಿವಿಧ ಹೂವುಗಳು ಮತ್ತು ಆಭರಣಗಳಿಂದ ವಿಶೇಷ ಅಲಂಕಾರ ಮಾಡುವುದನ್ನು ನಿಜಕ್ಕೂ ವರ್ಣಿಸಲದಳವಾಗಿದೆ. ಅದಕ್ಕಿಂತಲೂ ಪ್ರಮುಖವಾದ ಅಂಶವೆಂದರೆ ಈ ಹನುಮಾನ್ ಜಯಂತಿಯಂದು ಅಲ್ಲಿನ ಆಂಜನೇಯನ ವಿಗ್ರಹದಿಂದ ಕಣ್ಣೀರು ಸುರಿಯುವುದು ಇಲ್ಲಿನ ವಿಶೇಷವಾಗಿದೆ. ಕೇವಲ ಅದೊಂದು ದಿನ ಮಾತ್ರವೇ ವಿಗ್ರಹದ ಕಣ್ಣಿನಿಂದ ಕಣ್ಣೀರು ಹರಿಯವ ಈ ವಿಚಿತ್ರ ವಿದ್ಯಮಾನಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಲು ಸಾವಿರಾರು ಭಕ್ತಾದಿಗಳು ದಿನವಿಡೀ ದೇವಸ್ಥಾನದಲ್ಲೇ ಕಾದಿದ್ದು, ಆ ದಿನದಂದು ಅನಿರ್ಥಿಷ್ಟಾವಧಿ ಕಾಲದಲ್ಲಿ ಅನಿರ್ಧಿಷ್ಟಾವಧಿಯ ವರೆಗೂ ಕಣ್ಣೀರು ಹರಿಸುವುದನ್ನು ಕಣ್ತುಂಬಿಸಿಕೊಂಡು ಕೃತಾರ್ಥರಾಗುತ್ತಾರೆ. ಇಂದಿನ ವೈಜ್ಞಾನಿಕ ಯುಗದಲ್ಲೂ ಕೇವಲ ವರ್ಷಕೊಮ್ಮೆ ನಿಗಧಿತ ದಿನದಂದು ಮಾತ್ರವೇ ಕಲ್ಲಿನ ಮೂರ್ತಿಯಿಂದ ಕಣ್ಣೀರು ಸುರಿಯುವ ಪ್ರಕ್ರಿಯೆಯ ಹಿಂದಿರುವ ವೈಜ್ಞಾನಿಕ ಕಾರಣಗಳೇನು ಎಂಬುದರ ಅರಿವಿಲ್ಲದಿರುವ ಕಾರಣ, ಭಕ್ತಾದಿಗಳು ಇದನ್ನು ಪವಾಡ ಎಂದೇ ನಂಬುವುದಲ್ಲದೇ, ಈ ಬ್ರಹ್ಮರಥೋತ್ಸವದಲ್ಲಿ ಅತ್ಯಂತ ಸಡಗರ ಸಂಭ್ರಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸ್ವಾಮಿಯ ಕೃಪಾಶೀರ್ವಾದಕ್ಕೆ ಭಾಗಿಗಳಾಗುವುದು ಇಲ್ಲಿನ ವಿಶೇಷವಾಗಿದೆ.
ದೇವಸ್ಥಾನದ ಪೂಜಾ ಸಮಯ :
ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 7.30 – 12.30, ಸಂಜೆ 5.00 ರಿಂದ ರಾತ್ರಿ 8.00
ಶನಿವಾರ/ಭಾನುವಾರ ಬೆಳಿಗ್ಗೆ 9.00 ರಿಂದ ಮಧ್ಯಾಹ್ನ 2.00, ಸಂಜೆ 4.00 ರಿಂದ ರಾತ್ರಿ 8.30 ರವರೆಗೆ ಭಕ್ತಾದಿಗಳಿಗೆ ತೆರೆದಿರುತ್ತದೆ.
ದೇವಸ್ಥಾನದ ಸವಿರವನ್ನು ತಿಳಿದ ನಂತರ ಇನ್ನೇಕೆ ತಡ? ಸಮಯ ಮಾಡಿಕೊಂಡು ದೇವಸ್ಥಾನಕ್ಕೆ ಭೇಟಿ ಮಾಡಿ ಭಗವಂತನ ಕೃಪಾಶೀರ್ವಾದಕ್ಕೆ ಪಾತ್ರರಾಗ್ತೀರೀ ತಾನೇ?
ಏನಂತೀರೀ?
ನಿಮ್ಮವನೇ ಉಮಾಸುತ