ಕಾರ್ಗಿಲ್ ವಿಜಯ್ ದಿವಸ್‌

kargil4

ಹಿಮಾಲಯದ ಬೆಟ್ಟಗುಡ್ಡಗಳಿಂದ ಆವೃತವಾದ ಲಢಾಕ್ಕಿನ ಭೂಭಾಗವಾದ ಕಾರ್ಗಿಲ್‌ ಕಾಶ್ಮೀರದ ರಾಜಧಾನಿ ಶ್ರೀನಗರದಿಂದ ಸುಮಾರು 205 ಕಿ.ಮೀ. ದೂರದಲ್ಲಿದೆ. ಲೇಹ್‌ ಮತ್ತು ಶ್ರೀನಗರವನ್ನು ಸಂಪರ್ಕಿಸುವ ಏಕೈಕ ರಾಷ್ಟ್ರೀಯ ಹೆದ್ದಾರಿ 1 ಕಾರ್ಗಿಲ್‌ ಮೂಲಕವೇ ಹಾದುಹೋಗುವುದಲ್ಲದೇ, ವಿಶ್ವದ ಅತ್ಯಂತ ಎತ್ತರದ ಯುದ್ಧ ಭೂಮಿ ಸಿಯಾಚಿನ್‌ಗೂ ಇದೇ ಹೆದ್ದಾರಿಯ ಮೂಲಕವೇ ಹೋಗಬೇಕಾಗಿದೆ. ಇಂತಹ ಕಾರ್ಗಿಲ್‌ ಪ್ರದೇಶದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿರೇಖೆ ಲೈನ್‌ ಆಫ್‌ ಕಂಟ್ರೋಲ್‌ (ಎಲ್‌ಒಸಿ) ಇದ್ದು ಚಳಿಗಾಲದಲ್ಲಿ ಉಷ್ಣಾಂಶ ಮೈನಸ್‌ 48 ಡಿಗ್ರಿ ಸೆಲ್ಸಿಯಸ್‌ವರೆಗೂ ಇಳಿಯುವ ಕಾರಣ ಎರಡೂ ದೇಶದ ಸೈನಿಕರಿಗೆ ಗಡಿ ಕಾಯುವುದು ಅತ್ಯಂತ ಕಠಿಣವಾದ ಸವಾಲಾಗಿರುವ ಕಾರಣ ಎರಡೂ ದೇಶಗಳ ಸೈನಿಕರು ಚಳಿಗಾಲದಲ್ಲಿ ಬೂಟ್ ಕ್ಯಾಂಪ್ ಕಡೆಗೆ ಮರಳಿ, ಚಳಿಗಾಲ ಮುಗಿದ ನಂತರ ಮತ್ತೆ ಕಾವಲು ಕಾಯಲು ಹೋಗುವುದು 1999ರ ವರೆಗೂ ಒಂದು ರೀತಿಯ ಅಲಿಖಿತ ನಿಯಮದಂತೆ,ಅನೂಚಾನವಾಗಿ ನಡೆದುಕೊಂಡು ಬಂದಿತ್ತು.

kargil3

1999ರ ಮೇ 3ರಂದು ಕಾಶ್ಮೀರದ ದನ ಕಾಯುವ ಹುಡುಗನೊಬ್ಬ ತನ್ನ ಕಳೆದು ಹೋದ ಸಾಕು ಪ್ರಾಣಿ ಯಾಕ್ ) ಹುಡುಕಿಕೊಂಡು ತೋಲೊಲಿಂಗ್ ಶಿಖರದ ಹತ್ತಿರ ಹೋದಾಗ ಅಂತಹ ಚಳಿಗಾಲದಲ್ಲಿಯೂ ಆ ಶಿಖರದ ಬಳಿ ಸೈನಿಕರು ಅಡ್ಡಾಡುತ್ತಿರುವುದನ್ನು ಕಂಡು ಗಾಬರಿಯಾಗಿ ಸ್ವಲ್ಪ ಎಚ್ಚರಿಕೆಯಿಂದ ಗಮನಿಸಿದಾಗ ಆಸೈನಿಕರೆಲ್ಲರೂ ಭಾರತೀಯರಾಗಿರದೇ ಪಾಕೀಸ್ಥಾನದ ಸೈನಿಕರಾಗಿದ್ದದ್ದನು ಕಂಡು ಕೂಡಲೇ, ಭಾರತೀಯ ಸೇನಾಪಡೆಯ ಚೆಕ್ ಪೋಸ್ಟ್ ಬಳಿ ಬಂದು ತಾನು ಕಂಡ ಘನ ಘೋರ ಸತ್ಯವನ್ನು ಅಲ್ಲಿನ ಅಧಿಕಾರಿಗಳಿಗೆ ತಿಳಿಸಿದ.

sourabh_kalia

ಮೇ 5ರಂದು ಭಾರತೀಯ ಸೇನೆಯ ಪೆಟ್ರೋಲಿಂಗ್‌ ತಂಡವು ಕಾರ್ಗಿಲ್‌ ಪ್ರದೇಶದ ಸ್ಥಿತಿಗತಿಯನ್ನು ಅವಲೋಕಿಸಲು 4 ಜಾಟ್ ರಜಪೂತ ರಜನಿಮೆಂಟ್ ಕ್ಯಾಪ್ಟನ್ ಸೌರವ್ ಕಾಲಿಯ ನೇತೃತ್ವದಲ್ಲಿ ತೆರಳಿದಾಗ ಸ್ಪಷ್ಟವಾಗಿ ತಿಳಿದ ಬಂದ ಸಂಗತಿಯೇನಂದರೆ, ಚಳಿಗಾಲದ ಅಲಿಖಿತ ನಿಯಮವನ್ನು ಮೀರದ್ದ ಪಾಕಿಸ್ಥಾನದ ಸೈನ್ಯ ಭಾರತದ ಗಡಿಯೊಳಗೆ ಅನಧಿಕೃತವಾಗಿ ನುಸುಳಿದ್ದಲ್ಲದೇ ನಮ್ಮ ದೇಶದ ಸೈನಿಕರ ಅಡಗುದಾಣದೊಳಗಿ ನುಗ್ಗಿ ನಮ್ಮ ಸೈನಿಕರ ಬರುವಿಕೆಗಾಗಿ ಹೊಂಚಿಹಾಕಿ ಕುಳಿತಿತ್ತು. ಕ್ಯಾಪ್ಟನ್ ಸೌರಭ್ ಕಾಲಿಯ ಮತ್ತವರ ತಂಡದವರನ್ನು ಕಂಡ ಕೂಡಲೇ ಅವರನ್ನು ಸುತ್ತುವರೆದ ಪಾಕೀಸ್ಥಾನದ ಸೈನ್ಯೆ, ಯುದ್ದದಲ್ಲಿ ಸಿಕ್ಕ ಶತ್ರು ಸೈನಿಕರನ್ನು ಹಿಂಸಿಸಬಾರದು ಎಂಬ ಯುದ್ಧದ ಎಲ್ಲಾ ನಿಯಮಗಳನ್ನು ಮೀರಿ ಅವರಿಗೆ ಚಿತ್ರಹಿಂಸೆ ನೀಡಲಾರಂಭಿಸಿತು. ಅದರಲ್ಲಿಯೂ ತಂಡದ ನಾಯಕ ಸೌರಭ ಕಾಲಿಯ ಅವರಿಗಂತೂ ಚಿತ್ರ ವಿಚಿತ್ರ ಹಿಂಸೆ ನೀಡಿದ್ದು ಜಗತ್ತಿನ ಯಾವ ಯೋಧನಿಗೂ ಬಾರದಿರಲಿ ಎಂದೇ ಪ್ರಾರ್ಥಿಸಬೇಕು. ಸೌರಭ ಕಾಲಿಯ ಅವರ ಕೈ ಕಾಲು ಬೆರಳುಗಳನ್ನು ಕತ್ತರಿಸಿದ್ದಲ್ಲದೇ, ಇಡೀ ಅವರ ದೇಹವನ್ನು ಸಿಗರೇಟಿನಿಂದ ಸುಟ್ಟಿದ್ದರು. ಕಾಯಿಸಿದ ಕಬ್ಬಣದ ಸಲಾಕೆಯನ್ನು ಕಿವಿಯೊಳಗೆ ಹಾಕಿದ್ದಲ್ಲದೇ, ಅವರ ಕಣ್ಣುಗಳನ್ನು ಕಿತ್ತು, ಜೀವಂತವಾಗಿ ಇರುವಾಗಲೇ ಅವರ ಮರ್ಮಾಂಗವನ್ನು ಕತ್ತರಿಸಿ ಹಾಕಿದ್ದರು. ಸುಮಾರು 22 ದಿನಗಳ ಕಾಲ ಚಿತ್ರಹಿಂಸೆಗೆ ತುತ್ತಾಗಿ ಸೌರಭ್ ಕಾಲಿಯ ವೀರ ಮರಣವನ್ನು ಹೊಂದಿದರು.

vajapeye

ಅಂದಿನ ಪ್ರಧಾನಿಗಳಾಗಿದ್ದ ಶ್ರೀ ಅಟಲ್‌ ಬಿಹಾರಿ ವಾಜಪೇಯಿ ಅವರು 1999ರ ಫೆಬ್ರವರಿಯಲ್ಲಿ ಪಾಕಿಸ್ತಾನಕ್ಕೆ ಹೋಗಿ ಉಭಯ ದೇಶಗಳ ನಡುವೆ ಶಾಂತಿ ಇಂದೆ ಇರಬೇಕು ಎಂಬ ಸ್ನೇಹ ಹಸ್ತವನ್ನು ಚಾಚಿದ್ದಲ್ಲದೇ, ಕಾಶ್ಮೀರದ ಸಮಸ್ಯೆಗೆ ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ದೆಹಲಿ-ಲಾಹೋರ್‌ ನಡುವೆ ಬಸ್‌ ಸಂಚಾರಕ್ಕೆ ಚಾಲನೆ ನೀಡಿದ್ದಲ್ಲದೇ ಸಂಜೋತಾ ಎಕ್ಸ್ ಪ್ರೆಸ್ ರೈಲಿನ ಸಂಚಾರಕ್ಕೂ ಅನುವು ಮಾಡಿಕೊಟ್ಟಿದ್ದರೆ, ಪಾಪಿಸ್ಥಾನ ಅದೆಲ್ಲವನ್ನು ಮರೆತು ಕಾಲು ಕೆರೆದುಕೊಂಡು ಯುದ್ದಕ್ಕೆ ಸನ್ನದ್ಥವಾಗಿತ್ತು.

ನಿಜ ಹೇಳಬೇಕೆಂದರೆ ಬೆಟ್ಟದ ಮೇಲೆ ಅಯಕಟ್ಟಿನ ಜಾಗದಲ್ಲಿ ಅಡಗಿ ಕುಳಿತಿದ್ದ ಪಾಪಿಗಳಿಗೆ, ಯುದ್ಧ ಮಾಡಲು ಹೆಚ್ಚಿನ ಅನುಕೂಲಗಳಿದ್ದವು. ಬೆಟ್ಟಗಳ ಕೆಳಗಿನಿಂದ ಮೇಲಕ್ಕೆ ಏರುವವರನ್ನು ಸುಲಭವಾಗಿ ನೋಡಿಕೊಂಡು ಅವರನ್ನು ಮೇಲಿನಿಂದಲೇ ಹತ್ತಿಕ್ಕುವಂತಹ ಸುವರ್ಣವಕಾಶವಿತ್ತು. ಆದರೆ ಇಂತಹ ಸಂದಿಗ್ಧ ಕಠಿಣ ಪರಿಸ್ಥಿತಿಯಲ್ಲಿಯೂ ಭಾರತೀಯ ಸೈನಿಕರು ಎದೆಗುಂದದೆ, ಬೆನ್ನಿಗೆ ಮದ್ದುಗುಂಡುಗಳನ್ನು ಕಟ್ಟಿಕೊಂಡು ಊಟ ತಿಂಡಿ ಲೆಕ್ಕಿಸಿದೇ ಒಣ ಹಣ್ಣುಗಳನ್ನು ತಿಂದುಕೊಂಡು ರಾತ್ರಿಯ ಹೊತ್ತು ಕತ್ತಲಿನಲ್ಲಿ ಗುಡ್ಡವನ್ನು ಏರಿ, ಏಕಾಏಕಿ ಶತ್ರುಗಳ ಮೇಲೆ ಧಾಳಿನಡೆಸುವ ಯೋಜನೆಯನ್ನು ಹಾಕಿಕೊಂಡರು.

vb4

ತಮ್ಮ ಯೋಜನೆಯಂತೆ ಮೊದಲಿಗೆ ತೋಲೊಲಿಂಗ್ ಶಿಖರವನ್ನು ಕ್ಯಾಪ್ಟನ್ ವಿಕ್ರಮ್ ಭಾತ್ರಾ ಅವರ ನೇತೃತ್ವದಲ್ಲಿ ಜಯಗಳಿಸಿದ್ದನ್ನು ಕಳೆದ ಬಾರಿಯ ಲೇಖನದಲ್ಲಿ ತಿಳಿದುಕೊಂಡಿದ್ದೇವೆ. ಪಾಯಿಂಟ್‌ 5353ಯನ್ನು ಮರುವಶ ಪಡಿಸಿಕೊಂಡ ನಂತರ ಅಲ್ಲಿಂದ ಬಟಾಲಿಕ್‌ ಪ್ರದೇಶವನ್ನು ತನ್ನದಾಗಿಸಿಕೊಂಡ ಮೇಲಂತೂ ಭಾರತದ ಸೈನಿಕರ ರಣೋತ್ಸಾಹ ಅತ್ಯಂತ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಏ ದಿಲ್ ಮಾಂಗ್ ಮೋರ್ ಎಂಬ ಯುದ್ದೋತ್ಸಾಹ ಘೋಷಣೆ ಮಾಡಿ ಮತ್ತೊಮ್ಮೆ ಶತ್ರುಗಳನ್ನು ಬಗ್ಗು ಬಡಿಯುವ ಸಲುವಾಗಿ ಟೈಗರ್ ಹಿಲ್ ಶಿಖರಕ್ಕೆ ತನ್ನ ತಂಡದೊಂದಿಗೆ ತೆರಳಿ ತನ್ನ ಪ್ರಾಣರ್ಪಣೆ ಗೈದ ವಿಕ್ರಮ್ ಭಾತ್ರಾ ಆವರ ತ್ಯಾಗವನ್ನು ಭಾರತೀಯರೆಂದಿಗೂ ಮರೆಯಲಾಗದು. ಟೈಗರ್‌ ಹಿಲ್‌ ಪ್ರದೇಶವನ್ನು ವಶಕ್ಕೆ ಪಡೆದದ್ದು ಭಾರತೀಯ ಸೇನೆಗೆ ಸಿಕ್ಕ ಅತಿ ದೊಡ್ಡ ಜಯವಾಗಿದ್ದಲ್ಲದೇ, ಅಲ್ಲಿಂದ ಒಂದಾದ ಬಳಿಕ ಮತ್ತೊಂದು ಪ್ರದೇಶವನ್ನು ಒಂದೊಂದಾಗಿ ತನ್ನದಾಗಿಸಿಕೊಂಡ ಭಾರತೀಯ ಸೇನೆಯು 1971ರ ಜಯದ ನಂತರವೂ ತನ್ನ ತಾಕತ್ತು ಕಿಂಚಿತ್ತೂ ಕಡಿಮೆಯಾಗಿಲ್ಲ ಎಂದು ಎಂಬುದನ್ನು ಕೇವಲ ಪಾಕಿಸ್ತಾನಕ್ಕಷ್ಟೇ ಅಲ್ಲದೇ, ಇಡೀ ಪ್ರಪಂಚಕ್ಕೆ ತೋರಿಸಿಕೊಟ್ಟಿತು. ತಾನಾಗಿ ಯಾರ ಮೇಲೂ ಆಕ್ರಮಣ ಮಾಡುವುದಿಲ್ಲ. ತನ್ನ ಮೇಲೆ ವಿನಾಕಾರಣ ಆಕ್ರಮಣ ಮಾಡಿದರೆ ಖಂಡಿತವಾಗಿಯೂ ಶತ್ರುಗಳನ್ನು ನಾಶಮಾಡದೇ ಬಿಡುವುದಿಲ್ಲ ಎಂಬುದನ್ನು ಮತ್ತೊಮ್ಮೆ ಸಾರಿ ಹೇಳಿತು.

ಈ ಯುದ್ಧದಲ್ಲಿ ನಮ್ಮ ಸೈನ್ಯವನ್ನು ಮುನ್ನಡೆಸಿ ಜಯ ತಂದುಕೊಡುವ ಹಂತದಲ್ಲಿ ವೀರಮರಣ ಹೊಂದಿದವರನ್ನು ಈ ಕ್ಷಣದಲ್ಲಿ ನನೆಯದೇ ಹೋದಲ್ಲಿ ತಪ್ಪಾದೀತು. ಹಾಗಾಗಿ ಕೆಲವು ಪ್ರಮುಖ ಸೇನಾನಿಗಳ ತ್ಯಾಗ ಮತ್ತು ಬಲಿದಾನಗಳನ್ನು ತಿಳಿಯೋಣ ಬನ್ನಿ.

ತನ್ನ 11 ಜನ ತಂಡದೊಂದಿಗೆ, ಹಮ್ ಗ್ಯಾರಾ ತೋಮರ್ ಜಾಹೆಂಗೆ ಔರ್ ಜಿತ್ ಕರ್ ಗ್ಯಾರಾ ವಾಪಸ್ ಆಯೆಂಗೆ ಎಂದು ತಂಡವನ್ನು ಹುರಿದುಂಬಿಸಿ ಯುದ್ಧಕ್ಕೆ ಹೊರಟ ಯಶವಂತ ಸಿಂಗ್ ತೊಮರ್ ಮನೆಗೆ ಶವವಾಗಿ ಬಂದಾಗ, ನಮ್ಮ ಮನೆತನದಲ್ಲಿ ಒಂದೂ ಯುದ್ದವನ್ನು ಗೆಲ್ಲಬೇಕು ಇಲ್ಲವೇ ಯುದ್ಧದಲ್ಲಿ ವೀರಮರಣವನ್ನು ಹೊಂದಬೇಕು. ನನ್ನ ಮಗ ಗೆದ್ದು ಸತ್ತಿದ್ದಾನೆ ಎಂದು ಅತ್ಯಂತ ಹೆಮ್ಮೆಯಿಂದ ಯಶವಂತ ಸಿಂಗ್ ತೋಮರ್ ತಂದೆ ಹೇಳಿದ್ದನ್ನು ಕೇಳಿ ಕಣ್ಣೀರು ಸುರಿಸದ ಭಾರತೀಯರಿಲ್ಲ.

rakesh_singh

ಮೇಜರ್ ರಾಜೇಶ್ ಸಿಂಗ್ ಎಂಬ ಅಧಿಕಾರಿಗೆ ಮದುವೆಯಾಗಿ ಕೇವಲ ಹತ್ತು ತಿಂಗಳಾಗಿತ್ತು. ಅವರ ಧರ್ಮಪತ್ನಿ ತುಂಬು ಗರ್ಭಿಣಿಯಗಿದ್ದ ಕಾರಣ ಅಕೆಯ ತವರೂರಿನಲ್ಲಿ ಆಕೆಯನ್ನು ಬಿಟ್ಟು ಕಾರ್ಗಿಲ್ಲಿನಲ್ಲಿ ಯುದ್ದ ಮಾಡಲು ಸಿದ್ಧವಾಗುವ ಮುಂಚೆ, ನಾನೇನಾದರೂ ಯುದ್ಧದಲ್ಲಿ ಮರಣ ಹೊಂದಿದರೆ, ನಮಗೆ ಹುಟ್ಟುವ ಮಗನನ್ನು ಒಮ್ಮೆಯಾದರೂ ಕರೆದುಕೊಂಡು ಬಂದು, ನಿನ್ನಪ್ಪ ದೇಶಕೋಸ್ಕರ ಪ್ರಾಣ ನೀಡಿದ ಜಾಗ ಈ ಕಾರ್ಗಿಲ್ ಅಂಥ ಹೇಳಿ ತೋರಿಸುತ್ತೀಯಾ? ಅಂತ ತನ್ನ ಪತ್ನಿಗೆ ಪತ್ರ ಬರೆದು ತೋಲೋಲಿಂಗ್ ಶಿಖವವನ್ನು ವಶಪಡಿಸಿಕೊಳ್ಳಲು ಹೋಗಿದ್ದರು. ಶತ್ರುಗಳ ಒಂದೊಂದೇ ಬಂಕರ್ಗಳನ್ನು ನಾಶಮಾಡುತ್ತಾ ಮುನ್ನಡೆಯುತ್ತಿದ್ದಾಗ, ಎದುರಾಳಿಗಳ ದಾಳಿ ಹೆಚ್ಚಾಗಿ ಅ ಕಡೆಯಿಂದ ಹಾರಿ ಬಂದ ಗುಂಡೊಂದು ಮೇಜರ್ ರಾಜೇಶ್ ಅಧಿಕಾರಿಯ ಎದೆಯನ್ನು ಸೀಳಿತು. ಎದೆಯಲ್ಲಿ ಗುಂಡು ಹೊಕ್ಕರೂ ಧೃತಿಗೆಡದ ರಾಜೇಶ್ ಅಧಿಕಾರಿ ತಮ್ಮ ಬಳಿಯಿದ್ದ ಗ್ರೈನೇಡ್ ಒಂದ್ದನ್ನು ಶತ್ರುಗಳ ಬಂಕರ್ ಮೇಲೆ ಎಸೆದ ಪರಿಣಾಮ ಶತ್ರುಗಳು ನಾಶವಾಗಿ ಆ ಬೆಟ್ಟ ನಮ್ಮ ಕೈವಶವಾದದ್ದನ್ನೂ ನೋಡುತ್ತಲೇ ಸಂತೋಷದಿಂದ ಪ್ರಾಣಾರ್ಪಣೆ ಮಾಡಿದ್ದರು.

amol

ಸಾಧಾರಣವಾಗಿ ಮನೆಯಲ್ಲೊ ಒಬ್ಬ ಮಗನನ್ನು ಸೈನ್ಯಕ್ಕೆ ಸೇರಿಸಲೇ ಹಿಂದೇಟು ಹಾಕುವವರೇ ಹೆಚ್ಚಾಗಿರುವಾಗ ಕಾರ್ಗಿಲ್ ಕದನದಲ್ಲಿಒಂದೇ ಕುಟುಂಬದ ಅಣ್ಣತಮ್ಮಂದಿರಾದ ಕ್ಯಾಪ್ಟನ್ ಅಮನ್ ಕಾಲಿಯಿ ಮತ್ತು ಅಮೋಲ್ ಕಾಲಿಯಾ ಅವರ ತ್ಯಾಗ ನಿಜಕ್ಕೂ ಅಮರ. ಆ ಯುದ್ಧದಲ್ಲಿ ಅಮೋಲ್ ಹತರಾದಾಗ ಅವರ ಪಾರ್ಥೀವ ಶರೀರವನ್ನು ಅವರ ಮನೆಗೆ ತಂದಾಗ ಅವರ ತಂದೆ ಅಮೋಲ್ ಕಾಲಿಯಾರ ಹ್ಯಾಟ್ ತೆಗೆದುಕೊಂಡು ತಮ್ಮ ತೆಲೆಗೆ ಹಾಕಿಕೊಂಡು ಅವರ ಮಗನ ಶವಕ್ಕೊಂದು ಸೆಲ್ಯೂಟ್ ಮಾಡಿ, ನಿನ್ನನ್ನು ನನ್ನ ಕಿರಿ ಮಗ ಅಂತ ಎಲ್ಲರಿಗೂ ಪರಿಚಯಿಸುತ್ತಿದ್ದೆ. ಆದರೆ ಇಂದಿನಿಂದ ನೀನು ಇಡೀ ದೇಶಕ್ಕೇ ಹಿರಿಯ ಮಗನಾಗಿ ಬಿಟ್ಟೆ. ನಿನ್ನಂತಹ ವೀರ ಯೋಧನನ್ನು ಮಗನಾಗಿ ಪಡೆದ ನಾವುಗಳು ಧನ್ಯರು ಎನ್ನುವುದನ್ನು ಮರೆಯಲು ಸಾಧ್ಯವೇ?

ಕಾರ್ಗಿಲ್ ಕದನದಲ್ಲಿ ಹುತಾತ್ಮರಾದ ಕರ್ನಲ್ ವಿಶ್ವನಾಥನ್ ಅವರ ಪಾರ್ಥಿವ ಶರೀರ ಮನೆಗೆ ತಂದಿದ್ದಾಗ, ತಮ್ಮ ಒಬ್ಬನೇ ಮಗ ಎಂತಹ ಹೋರಾಟ ಮಾಡಿದ್ದ ಎಂದು ಪತ್ರಕರ್ತರಿಗೆ ತೋರಿಸುವ ಸಲುವಾಗಿ, ಆ ಯೋಧ ವಿಶ್ವನಾಥನ್ ಕೊನೆ ಗಳಿಗೆಯಲ್ಲಿ ಹಾಕಿಕೊಂಡ ಶರ್ಟನ್ನು ತೋರಿಸಿ ನೋಡಿ ಇದರಲ್ಲಿ ಎಷ್ಟು ಬುಲೆಟ್ ಗಳ ತೂತು ಬಿದ್ದೆದೆಯೋ ಅಷ್ಟು ಹೋರಾಟವನ್ನು ನನ್ನ ಮಗ ಮಾಡಿದ್ದಾನೆ ಎಂದು ಹೆಮ್ಮೆಯಿಂದ ಹೊರಗೆ ಹೇಳಿಕೊಂಡರೂ ಆ ತಂದೆಯವರ ಮನದೊಳಗೆ ಎಷ್ಟು ಸಂಕಟ ಪಟ್ಟಿರಬಹುದು ಎಂಬುದು ಎಲ್ಲಾ ತಂದೆತಾಯಿಯರಿಗೂ ತಿಳಿಯುವಂತಾಗಿತ್ತು.

ಉಪ್ಪಿಟ್ಟು ಮತ್ತು ಕೇಸರಿ ಭಾತ್ ದಕ್ಷಿಣ ಭಾರತದ ಪ್ರಸಿದ್ಧ ತಿಂಡಿ. ಅದರಲ್ಲೂ ಕೇಸರೀಬಾತ್ ಎಲ್ಲಾ ಶುಭಸಂದರ್ಭಗಳಲ್ಲಿಯೂ ಎಲ್ಲರ ಮನೆಗಳಲ್ಲಿಯೂ ಮಾಡಿಯೇ ತೀರುತ್ತಾರೆ. ರಜೆಯ ಮೇಲೆ ಊರಿಗೆ ಬಂದಿದ್ದ ಕ್ಯಾಪ್ಟನ್ ಮುಯಿಲನ್ ಅಂತಹ ಕೇಸರೀ ಬಾತನ್ನು ತನ್ನ ತಾಯಿಯ ಕೈಯ್ಯಲ್ಲಿ ಮಾಡಿಸಿಕೊಂಡು ಇನ್ನೇನು ತಿನ್ನಬೇಕು ಎನ್ನುವಷ್ಟರಲ್ಲಿ ಯುದ್ಧಕ್ಕಾಗಿ ಕರೆ ಬರುತ್ತದೆ. ಯುದ್ದ ಗೆದ್ದು ಕೇಸರಿ ಬಿಳಿ ಹಸಿರು ಧ್ವಜವನ್ನುಹಾರಿಸಿ ನಂತರ ಕೇಸರೀ ಬಾತ್ ತಿನ್ನುತ್ತೇನೆ ಎಂದು ಯುದ್ದಕ್ಕೆ ಹೋದ ಕ್ಯಾಪ್ಟನ್ ಮುಯಿಲನ್ ಮರಳಿ ಮನೆಗೆ ಬಂದಿದ್ದು ಶವವಾಗಿಯೇ. ಅದಾದ ನಂತರ ಅದೆಷ್ಟೋ ಮನೆಗಳಲ್ಲಿ ಪ್ರತೀ ಬಾರಿಯೂ ಕೇಸರಿಬಾತ್ ತಿನ್ನುವಾಗಲೆಲ್ಲಾ ಕ್ಯಾಪ್ಟನ್ ಮುಯಿಲನ್ ಕಣ್ಣುಮುಂದೆ ಬಂದು ಹೋಗುವುದಂತೂ ಸುಳ್ಳಲ್ಲ.

ಇಷ್ಟೆಲ್ಲಾ ವೀರಯೋಧರನ್ನು ಕಳೆದುಕೊಂಡರು ಧೃತಿಗೆಡೆದ ಭಾರತೀಯ ಸೇನೆ ದಿನದಿಂದ ದಿನಕ್ಕೆ ತನ್ನ ಧಾಳಿಯನ್ನು ಹೆಚ್ಚಿಸಿದ್ದಲ್ಲದೇ, ಆಪರೇಷನ್‌ ಸಫೇದ್‌ ಸಾಗರ್‌ ಹೆಸರಲ್ಲಿ ಮೇ 26ರಂದು ದಾಳಿ ಆರಂಭಿಸಿ ಎಂಐಜಿ 21, 27 ಎರಡು ಯುದ್ಧ ವಿಮಾನಗಳನ್ನು ಭಾರತ ಕಳೆದುಕೊಂಡಿದ್ದಲ್ಲದೇ, ಅದರಲ್ಲಿದ್ದ ಲೆಫ್ಟಿನೆಂಟ್‌ ಕಂಬಂಪತಿ ನಚಿಕೇತ ಶತ್ರುಗಳ ಕೈವಶವಾಗಿದ್ದರು. ಆಪರೇಷನ್‌ ತಳವಾರ್‌ ಹೆಸರಿನಲ್ಲಿ ಪಾಕಿಸ್ತಾನದ ವಾಣಿಜ್ಯ ನಗರವಾದ ಕರಾಚಿಯ ಮೇಲೆಯೂ ಕಣ್ಣಿಟ್ಟಿದ್ದಲ್ಲದೇ, ತನ್ನ ನೌಕಾ ಪಡೆಯ ಮೂಲಕ ಅರಬ್ಬೀ ಸಮುದ್ರದಿಂದ ಪಾಕಿಸ್ತಾನಕ್ಕೆ ಪೆಟ್ರೋಲಿಯಂ ಉತ್ಪನ್ನಗಳು ಹೋಗದಂತೆ ತಡೆಹಿಡಿಯುವುದ್ರಲ್ಲಿ ಯಶಸ್ವಿಯಗಿತು. ಹೀಗೆಯೇ ಯುದ್ದವನ್ನು ಇನ್ನೂ 10 ದಿನಗಳ ಕಾಲ ಮುಂದುವರೆಸಿದ್ದರೆ ತಮ್ಮ ಬಳಿ ಇರುವ ಪೆಟ್ರೋಲಿಯಂ ಉತ್ಪನ್ನಗಳೆಲ್ಲವೂ ಖಾಲಿಯಾಗಿ ಯುದ್ಧದಲ್ಲಿ ಅಧೋಗತಿಗೆ ಇಳಿದು, ಯುದ್ದವನ್ನು ಹೀನಾಮಾನವಾಗಿ ಸೋಲುವುದು ಖಚಿತ ಎಂದು ತಿಳಿದ ಪಾಕಿಸ್ತಾನದ ಅಂದಿನ ಪಾಕ್‌ ಪ್ರಧಾನಿ ನವಾಜ್‌ ಶರೀಫ್‌ ಭಾರತಕ್ಕೆ ಯುದ್ಧವನ್ನು ನಿಲ್ಲಿಸಲು ಹೇಳಬೇಕೆಂದು ಅಮೇರಿಕಾ ದೇಶವನ್ನು ಕೇಳಿಕೊಂಡರು.

kargil

ಹೇಳೀ ಕೇಳೀ ಭಾರತೀಯರು ಸಹೃದಯಿಗಳು. ಅದರಲ್ಲೂ ಅಂದಿನ ಪ್ರಧಾನ ಮಂತ್ರಿಗಳಾಗಿದ್ದ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರದ್ದು ಇನ್ನೂ ಒಂದು ಕೈ ಮೇಲೆಯೇ. ಹಾಗಾಗಿ ಜುಲೈ 14ರಂದು ಪ್ರಧಾನಿ ವಾಜಪೇಯಿಯವರು ಭಾರತ ಯುದ್ಧದಲ್ಲಿ ಗೆದ್ದಿದೆ ಎಂದು ಘೋಷಿಸಿದರೇ, ಜುಲೈ 24ರಂದು ಭಾರತೀಯ ಸೇನೆಯು ಕಾರ್ಗಿಲ್‌ ಯುದ್ಧ ಮುಗಿದ ಬಗ್ಗೆ ಅಧಿಕೃತ ಘೋಷಣೆ ಮಾಡಿತು. ಅಂದಿನಿಂದ ಪ್ರತೀ ವರ್ಷವೂ ಜುಲೈ 26ರಂದು ಕಾರ್ಗಿಲ್ ವಿಜಯ್ ದಿವಸ್‌ ಆಚರಣೆಯ ಪ್ರಾರಂಭವಾಯಿತು.

1999 ರ ಮೇ 19 ರಿಂದ 1999 ಜುಲೈ 26 ರ ವರೆಗೆ ನೆಡದ ಆ ಕಾರ್ಗಿಲ್ ಕದನದಲ್ಲಿ ತನ್ನ 600 ಕ್ಕೂ ಅಧಿಕ ಸೈನಿಕರನ್ನು ಕಳೆದುಕೊಂಡರೂ ಭಾರತ ತನ್ನ ಸಂಯಮನ್ನೆಂದೂ ಕಳೆದುಕೊಂಡಿರಲಿಲ್ಲ. ತನ್ನ ಪ್ರದೇಶವನ್ನು ಮಾತ್ರ ವಶಕ್ಕೆ ಹಿಂಪಡೆಯಿತೇ ವಿನಃ ಭಾರತವೆಂದೂ ಕೂಡ ಗಡಿ ದಾಟಿ ಪಾಕಿಸ್ತಾನದ ಮೇಲೆ ಮುಗಿಬೀಳದೇ ಹೋದದ್ದನ್ನು ಇಡೀ ವಿಶ್ವವೇ ಮೆಚ್ಚಿ ಕೊಂಡಾಡಿತ್ತು.

ತಾಯಿ ಭಾರತಾಂಬೆಯ ರಕ್ಷಣೆಗಾಗಿ ತಮ್ಮನ್ನೇ ಅರ್ಪಿಸಿಕೊಂಡ ಪ್ರತಿಯೊಬ್ಬ ಸೈನಿಕರೂ ನಿಜವಾದ ಹೀರೊಗಳು ಮತ್ತು ಪ್ರಾಥಃಸ್ಮರಣೀಯರು. ಅಂತಹ ಸೈನಿಕರಿಗೆ ಹೃದಯತುಂಬಿ ಒಂದು ಬಾರಿ ಸೆಲ್ಯೂಟ್ ಮಾಡುವುದಲ್ಲದೇ, ಇಂತಹ ವೀರರ ಯಶೋಗಾಥೆಯನ್ನು ನಮ್ಮ ಇಂದಿನ ಯುವಕರುಗಳಿಗೆ ತಿಳಿಸುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವೇ ಆಗಿದೆ ಅಲ್ಲವೇ?

ಬೋಲೋ…………..ಭಾರತ್ ಮಾತಾಕೀ………….. ಜೈ…………….

ಏನಂತೀರೀ?

ನಿಮ್ಮವನೇ ಉಮಾಸುತ

One thought on “ಕಾರ್ಗಿಲ್ ವಿಜಯ್ ದಿವಸ್‌

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s