ಸನಾತನ ಧರ್ಮದಲ್ಲಿ ದೇಶಾದ್ಯಂತ ಇರುವ ತೀರ್ಥಕ್ಷೇತ್ರಗಳಿಗೆ ಹೋಗುವ ಮುಖಾಂತರ ಹಿಂದೂಗಳ ಭಾವೈಕ್ಯತೆ ಸೌಹಾರ್ದತೆಯೊಂದಿಗೆ, ನಾವೆಲ್ಲರೂ ಒಂದು ಎಂದು ಸಾರುವ ಸತ್ ಸಂಪ್ರದಾಯವನ್ನು ಸಾವಿರಾರು ವರ್ಷಗಳ ಹಿಂದಿನಿಂದಲೂ ಅನೂಚಾನವಾಗಿ ನಡೆಸಿಕೊಂಡು ಬಂದಿದ್ದಾರೆ. ಹಾಗಾಗಿಯೇ ಪ್ರತಿಯೊಬ್ಬ ಹಿಂದೂವೂ ಸಹಾ ತನ್ನ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಈ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡಿಯೇ ತೀರುತ್ತಾರೆ. ಅಂತಹ ತೀರ್ಥಕ್ಷೇತ್ರಗಳಲ್ಲಿ ವಾರಣಾಸಿ ಅಥವಾ ಕಾಶಿ ಪ್ರಮುಖವಾಗಿದೆ.
ಕಾಶೀಯಲ್ಲಿ ಹರಿಯುವ ಗಂಗಾ ನದಿಯ 64 ಘಾಟ್ ಗಳಲ್ಲಿ ಪುಣ್ಯ ಸ್ನಾನ ಮಾಡಿ ಶ್ರೀ ಕಾಶೀ ವಿಶ್ವನಾಥ ಮತ್ತು ಶ್ರೀ ವಿಶಾಲಾಕ್ಷಿ ಅಮ್ಮನವರ ದರ್ಶನವನ್ನು ಮಾಡಿ ಭಗವಂತನ ಅನುಗ್ರಹಕ್ಕೆ ಪಾತ್ರರಾಗುವುದರ ಮುಖಾಂತರ ಜೀವನಕ್ಕೆ ಮುಕ್ತಿ ಹೊಂದುವುದು ಪ್ರತಿಯೊಬ್ಬ ಹಿಂದೂಗಳ ಅಂತಿಮ ಗುರಿಯಾಗಿರುತ್ತದೆ. ಇದರ ಜೊತೆ ಸಾಮಾನ್ಯವಾಗಿ ಕಾಶಿಗೆ ಹೋದವರು ದೇವರ ದರ್ಶನ ಮಾಡುವು ಜೊತೆಗೆ ತಮಗಿಷ್ಟ ಇರುವ ಒಂದು ವಸ್ತುವನ್ನು ಬಿಟ್ಟು ಬರಬೇಕು ಎಂಬ ಪದ್ದತಿ ರೂಢಿಯಲ್ಲಿದೆ. ಈ ರೀತಿಯ ಒಂದು ವಸ್ತುವನ್ನು ಏಕೆ ಬಿಟ್ಟು ಬರಬೇಕು? ಇದರ ಹಿಂದಿರುವ ನಿಜವಾದ ಕಾರಣಗಳೇನು? ಹಾಗೆ ಬಿಟ್ಟುಬಂದ ಮೇಲೆ ಆಗುವ ಪರಿಪಾಟಗಳೇನು ಎಂಬುದೇ ಇಂದಿನ ಲೇಖನದ ಕಥಾ ವಸ್ತು.
ಹಿಂದಿನ ಕಾಲದಲ್ಲಿ ವಯಸ್ಸಾದವರು ತಮ್ಮೆಲ್ಲಾ ಜವಬ್ಧಾರಿಗಳನ್ನು ಮುಗಿಸಿದ ನಂತರ ಕಾಲ್ನಡಿಗೆಯಲ್ಲಿ ಕಾಶೀಗೆ ಹೋಗಿ ವಿಶ್ವನಾಥನ ದರ್ಶನ ಮಾಡಿಕೊಂಡು ಬರುವ ಸಂಕಲ್ಪವನ್ನು ಮಾಡಿಕೊಂಡು ಮನೆಯಿಂದ ದೇಶಾಂತರ ಹೋಗಿಬಿಡುತ್ತಿದ್ದರು.ಎಲ್ಲೋ ಅಪರೂಪಕ್ಕೊಬ್ಬರು ಕಾಶಿಯಿಂದ ಹಿಂದಿರುಗಿ ಬರುತ್ತಿದ್ದರೆ, ಬಹುತೇಕರು ಮಾರ್ಗದ ಮಧ್ಯೆಯೇ ಭಗವಂತನ ಪಾದದಲ್ಲಿ ಐಕ್ಯವಾದರೆ, ಇನ್ನೂ ಹಲವರು ಅಲ್ಲೇ ಕಾಶಿಯಲ್ಲೇ ಉಳಿದು ಬಿಡುತ್ತಿದ್ದರು.
ಹಾಗೆ ಭಗವಂತನದರ್ಶನ ಮಾಡಲು ಹೊರಡುವವರು, ತಮ್ಮ ಆಸ್ತಿ ಪಾಸ್ತಿ ಮನೆ ಮಠ ಸಂಸಾರದ ಬಂಧನಗಳ ಮೇಲಿನ ಆಸೆಗಳನ್ನು ಬಿಟ್ಟು ಕೇವಲ ಭಗವಂತನ ಮೇಲೆಯೇ ಕೇಂದ್ರೀಕರಿಸಿ ಬಂದದ್ದೆಲ್ಲವೂ ಬರಲೀ ಗೋವಿಂದನ ದಯೆ ಒಂದಿರಲಿ ಎಂಬ ಭಾವದಿಂದ ಕಾಶೀ ಕ್ಷೇತ್ರಕ್ಕೆ ಹೋಗಿ ಅಲ್ಲಿ ಗಂಗಾ ಸ್ನಾನ ಮಾಡುವ ಮುಖಾಂತರ ತನ್ನೆಲ್ಲಾ ಆಯಾಸ ಪರಿಹರಿಸಿಕೊಳ್ಳುವುದರ ಜೊತೆಗೆ ಅದುವರೆವಿಗೂ ಮಾಡಿರಬಹುದಾದ ಪಾಪ ಕರ್ಮಗಳನ್ನೆಲ್ಲವನ್ನೂ ಕಳೆದುಕೊಂಡು ನಿರ್ಮಲ ಮನಸ್ಸಿನಿಂದ ಭಕ್ತಿಯಿಂದ ಕಾಶೀ ವಿಶ್ವನಾಥ ಮತ್ತು ವಿಶಾಲಾಕ್ಷಿಯ ದರ್ಶನ ಮಾಡಬೇಕು ಎಂಬ ನಿಯಮವಿತ್ತು. ಈ ರೀತಿಯಾಗಿ ತಪಸ್ಸನ್ನು ಆಚರಿಸಿದಂತೆ ನಿಷ್ಠೆ ನಿಯಮಗಳನ್ನು ಪಾಲಿಸಿ ಭಗವಂತನ ದರ್ಶನ ಮಾಡಿದಲ್ಲಿ ಮುಕ್ತಿ ದೊರೆಯುವುದು ಎನ್ನುವುದೇ ನಮ್ಮ ಪೂರ್ವಜರ ಆಶಯವಾಗಿತ್ತು.
ಆದರೆ ಉಪ್ಪು ಹುಳಿ ಖಾರ ತಿಂದುಂಡ ದೇಹಕ್ಕೆ ಅರಿಷಡ್ವರ್ಗಗಳಾದ, ಕಾಮ, ಕೋಧ, ಲೋಭ, ಮೋಹ, ಮಧ ಮತ್ತು ಮಾತ್ಸರ್ಯಗಳಿಂದ ಹೊರಬಂದು ನಿರ್ಮಲ ಮನಸ್ಸಿನಿಂದ ಭಗವಂತನಲ್ಲಿ ಏಕೋಭಾವವನ್ನು ಹೊಂದಲಾಗದೇ ಚಡಪಡಿಸತೊಡಗಿದರು, ಏನಾದರೂ ಬಿಡಬೇಕು ಎಂದರೆ ಏನು ಬಿಡಬೇಕು? ಎಂಬುದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಕಂಡು ಕೊಳ್ಳಲು ಪ್ರಯತ್ನಿಸಿದಾಗಲೇ ಅವರಿಗೆ ಹೊಳೆದದ್ದು ಕಾಶಿಗೆ ಹೋದಾಗ, ಮೋಹ ಮಾತ್ಸರ್ಯಗಳ ಪ್ರತೀಕವಾಗಿ ತಮಗೆ ಇಷ್ಟವಾದ ಒಂದು ತರಕಾರಿ ಒಂದು ಹಣ್ಣು ಮತ್ತು ಒಂದು ತಿಂಡಿಯನ್ನು ಬಿಟ್ಟು ಬಂದಲ್ಲಿ ಇಳೀ ವಯಸ್ಸಿನಲ್ಲಿ ಮುಕ್ತಿ ದೊರೆಯುತ್ತದೆ ಎಂಬ ಆಲೋಚನೆಯನ್ನು ಮುಂದಿಟ್ಟರು. ಈ ಪರ್ಯಾಯ ವ್ಯವಸ್ಥೆ ಬಹಳ ಸುಲಭ ಎನಿಸಿದ ಕಾರಣ ಬಹುತೇಕರು ಇದನ್ನೇ ಪುರಸ್ಕರಿಸಿದ್ದರಿಂದ ಅದೇ ಸಂಪ್ರದಾಯವಾಗಿ ಬಿಟ್ಟಿತು.
ಹಾಗೆ ಕಾಶಿಗೆ ಹೋಗುವ ಮಂದಿಯೂ ಸಹಾ ಅದರಲ್ಲೂ ಒಳ ಮಾರ್ಗಗಳನ್ನು ಕಂಡು ಹಿಡಿದುಕೊಂಡಿದ್ದಲ್ಲದೇ ತಮಗೆ ಇಷ್ಟ ಬಂದ ತರಕಾರಿ, ಹಣ್ಣು, ತಿಂಡಿಗಳ ಬದಲಾಗಿ ತಮಗಿಷ್ಟವಿಲ್ಲದ್ದನ್ನು ತ್ಯಜಿಸಿ ಬರಲು ಆರಂಭಿಸಿದರೆ, ಇನ್ನೂ ಕೆಲವರು ತಮಗೆ ಇಷ್ಟ ಬಂದ ತರಕಾರಿ ಹಣ್ಣುಗಳು ಮತ್ತು ತಿಂಡಿಗಳನ್ನು ಹೋಗುವ ಒಂದೆರಡು ತಿಂಗಳ ಮುಂಚೆ ಸಿಕ್ಕಾ ಪಟ್ಟೆ ಅದನ್ನೇ ತಿಂದು ಕಡೆಗೆ ಮತ್ತೆಂದೂ ತಿನ್ನಲೇ ಬಾರದೆಂಬ ಅಸಹ್ಯ ಪಟ್ಟುಕೊಳ್ಳುವಂತೆ ಮಾಡಿಕೊಳ್ಳುತ್ತಿದರು.
ಈ ರೀತಿಯಾಗಿ ತಮಗೆ ಇಷ್ಟವಾದದ್ದನ್ನು ಬಿಟ್ಟು ಬಿಡಬೇಕು ಎಂಬುದರ ಕುರಿತಾಗಿಯೂ ಒಂದೆರದು ಮೋಜಿನ ಪ್ರಸಂಗಗಳು ಇದೋ ನಿಮಗಾಗಿ
ನಮ್ಮ ಅಜ್ಜ ರಾಜಾರಾವ್ ಮೂಲತಃ ಬೆಳ್ಳೂರಿನವರಾದರೂ ಚಿಕ್ಕವಯಸ್ಸಿನಲ್ಲಿಯೇ ತಮ್ಮ ತಂದೆ ತಾಯಿಯರು ಮರಣ ಹೊಂದಿದ ಕಾರಣ ಅದು ಹೇಗೋ ಕಾಶಿಗೆ ಹೋಗಿ ತಮ್ಮ ವಿದ್ಯಾಭ್ಯಾಸ ಮುಗಿಸಿ ಕಡೆಗೆ ಅಪಿ ಸ್ವರ್ಣಮಯೀ ಲಂಕಾ ನಮೇ ಲಕ್ಷ್ಮಣ ರೋಚತೇ, ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪೀ ಗರೀಯಸೀ ಎಂಬ ಶ್ಲೋಕದಂತೆ ಮತ್ತೆ ಕರ್ನಾಟಕಕ್ಕೆ ಕೆಲಸ ಹುಡುಕಿಕೊಂಡು ತಮ್ಮ ವಿದ್ಯಾರ್ಹತೆಗೆ ಕೆಜಿಎಫ್ ಚಿನ್ನದ ಗಣಿಯಲ್ಲಿ Administration officer ಆಗಿ ಕೆಲಸ ಗಿಟ್ಟಿಸಿಕೊಂಡರು. ಎಲ್ಲಿಯ ಬೆಳ್ಳೂರು, ಎಲ್ಲಿಯ ಕಾಶೀ ಮತ್ತು ಎಲ್ಲಿಯ ಕೆಜಿಎಫ್ ಎಲ್ಲವೂ ಭಗವಂತನ ಲೀಲೆ. ಅನುರೂಪದ ಮಡದಿ ವಿಶಾಲಾಕ್ಷಿ ಎಂಟು ಗಂಡು ಮಕ್ಕಳಲ್ಲಿ ಉಳಿದ ಒಬ್ಬನೇ ಮಗನ ನಂತರ ಪಂಚಕನ್ಯೆಯರನ್ನು ಮಕ್ಕಳಾಗಿ ಪಡೆದು ವಯಸ್ಸು 50 ದಾಟುತ್ತಿದ್ದಂತೆಯೇ ಆರೋಗ್ಯದಲ್ಲಿ ಏರುಪೇರಾದಾಗ, ತಮ್ಮ ಕಡೆಯ ಆಸೆಯಾಗಿ ಕಾಶೀ ವಿಶ್ವನಾಥನ ದರ್ಶನ ಮಾಡಲಿಚ್ಚಿಸಿದರು.
ಕಾಶಿಯಲ್ಲೇ ಬೆಳೆದು, ಕಾಶಿಯ ಇಂಚು ಇಂಚಿನ ಪ್ರದೇಶದ ಪರಿಚಯವಿದ್ದರೂ ತೀರ್ಧಯಾತ್ರೆ ಎಂದು ಸಂಕಲ್ಪ ಮಾಡಿಕೊಂಡಾಗ ತಮಗೆ ಬಲು ಇಷ್ಟವಾದ ತರಕಾರಿಯಾದ ಪಡವಲಕಾಯಿಯನ್ನು ಬಿಟ್ಟು ಬರಲು ನಿರ್ಧರಿಸಿದರು. ಸರಿ ಹೇಗೂ ಪಡವಲಕಾಯಿಯನ್ನು ಬಿಟ್ಟು ಬರುವ ಮೊದಲು ಅದನ್ನು ಚೆನ್ನಾಗಿ ತಿಂದು ಬಿಡಲು ನಿರ್ಧರಿಸಿ, ತಮ್ಮ ಮನೆಯ ಕೈತೋಟದಲ್ಲೇ ನಾಲ್ಕು ಕಂಬಗಳನ್ನು ನಿಲ್ಲಿಸಿ ಅದಕ್ಕೆ ತಂತಿಯ ಚಪ್ಪರ ಹಾಕಿಸಿ ಅಲ್ಲೇ ಕಂಬದ ಬದಿಯಲ್ಲಿ ಪಡವಲಕಾಯಿ ಬೀಜ ಹಾಕಿ ಬಹಳ ಜನತನದಿಂದ ನೀರು, ಗೊಬ್ಬರವನ್ನು ಹಾಕಿ ಪೋಷಿಸಿದ ಕಾರಣ ನೋಡ ನೋಡುತ್ತಿದ್ದಂತೆಯೇ ದೊಡ್ಡ ದೊಡ್ಡದಾಗಿ ಪಡವಲಕಾಯಿ ಬಿಡತೊಡಗಿತು. ಪ್ರತಿದಿನವೂ ಮನೆಯಲ್ಲಿ ಪಡವಲಕಾಯಿಯ ಒಂದೊಂದು ಅಡುಗೆ ಮಾಡತೊಡಗಿದರು. ಪಡವಲಕಾಯಿ ಕೂಟು, ಪಡವಲಕಾಯಿ ಹುಳಿ, ಪಲ್ಯ, ಕೋಸಂಬರಿ, ಮಜ್ಜಿಗೆ ಹುಳಿ ಒಟ್ಟಿನಲ್ಲಿ ಮನೆಯವರೆಲ್ಲರಿಗೂ ಒಂದು ವಾರ ಕಳೆಯುವುದರೊಳಗೆ ಅವರೊಬ್ಬರನ್ನು ಹೊರತು ಪಡಿಸಿ ಮನೆಯ ಉಳಿದವರೆಲ್ಲರಿಗೂ ಪಡವಲಕಾಯಿ ಎಂದರೆ ವಾಕರಿಕೆ ಬರುವಂತಾಯಿತು. ಆದರೆ ಅಪ್ಪನ ಮೇಲಿನ ಗೌರವವೋ ಅಥವಾ ಭಯದಿಂದಲೋ ಹೇಳಿಕೊಳ್ಳಲಾಗದೇ ಸುಮ್ಮನಿದ್ದರು. ಅಪ್ಪಾ ರೈಲಿನಲ್ಲಿ ಕಾಶಿ ಕಡೆಗೆ ಪ್ರಯಾಣಿಸುತ್ತಿದ್ದಂತೆಯೇ, ಮಗ ಪಡವಲ ಕಾಯಿ ಬಳ್ಳಿಯನ್ನು ಕಿತ್ತೊಗೆದು ಆ ಜಾಗದಲ್ಲಿ ಮಲ್ಲಿಗೆ ಅಂಟನ್ನು ಹಾಕಿದ. ಅಪ್ಪಾ ಮೂರ್ನಲ್ಕು ವಾರ ಕಳೆದ ನಂತರ ಊರಿಗೆ ಹಿಂದಿರುಗಿ ಬರುವಷ್ಟರಲ್ಲಿ ಪಡವಲಕಾಯಿ ಬಳ್ಳಿಯ ಜಾಗದಲ್ಲಿ ಮಲ್ಲಿಗೆ ಅಂಟು ಬೆಳೆಯುತ್ತಿತ್ತು. ಹೇಗೂ ಪಡವಲಕಾಯಿ ಬಿಟ್ಟು ಬಂದಿದ್ದ ಕಾರಣ ದೂರ್ವಾಸ ಮುನಿಗಳ ಅಪರಾವತರಾಗಿದ್ದ ನಮ್ಮಜ್ಜ ತಮ್ಮ ಕೋಪವನ್ನು ತಡೆದುಕೊಂಡು ಸುಮ್ಮನಾಗಿದ್ದರಂತೆ. ಸುಮಾರು ದಶಕಗಳ ಕಾಲ ಯಥೇಚ್ಚವಾಗಿ ಮಲ್ಲಿಗೆ ಬಿಡುತ್ತಿದ್ದರೆ ಮದುವೆಯಾಗಿ ಗಂಡನೆ ಮನೆಗೆ ಬಂದು ಸುಮಾರು ವರ್ಷಗಳ ಕಾಲ ನಮ್ಮಮ್ಮ ಪಡವಲಕಾಯಿಯನ್ನೇ ನಮ್ಮ ಮನೆಯಲ್ಲಿ ಬಳಸುತ್ತಿರಲಿಲ್ಲ.
ಇದೇ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಓದಿದ ಜೋಕ್ ಹೀಗಿದೆ
ಬಹಳ ವರ್ಷಗಳ ಹಿಂದೆ ಅಜ್ಜಿಯ ಮುದ್ದಿನಿಂದ ಸಾಕಿ ಸಲಹಿ ದುಂಡು ದುಂಡಗಾಗಿದ್ದ ಗುಂಡಾ. ಹೀಗೆ ತಿಂದೂ ತಿಂದು ಹೆಸರಿಗೆ ಅನ್ವರ್ಥವಾಗಿ ಗುಂಡಾಗಿದ್ದ ತಮ್ಮ ಮೊಮ್ಮಗನನ್ನು ಕರೆದ ಅಜ್ಜಿ, ನೋಡಪ್ಪಾ ಕಾಶಿಗೆ ಹೋದ್ರೆ ಇಷ್ಟವಾದ ಬೋಂಡಾ ಬಿಟ್ಟು ಬಾ ಒಳ್ಳೆಯದಾಗುತ್ತದೆ ಅಂತ ಹೇಳುತ್ತಾರೆ. ಮನೆಯಿಂದ ತಿಂಗಳಾನು ಗಟ್ಟಲೆ ಹೊರಗಿದ್ದರೆ ಸರಿಯಾಗಿ ತಿನ್ನಲು ಸಿಗದೇ ಸಣ್ಣಗಾಗಬಹುದು ಎಂಬುದು ಅಜ್ಜಿಯ ಆಸೆಯಾಗಿತ್ತು.
ಮೊಮ್ಮಗನಿಗೆ ಬೋಂಡಾ ಬಜ್ಜಿ ಅಂದರೆ ಸಿಕಾಪಟ್ಟೆ ಇಷ್ಟ. ಹೇಗೂ ಕಾಶಿಗೆ ಹೋಗ್ತೀನಲ್ಲಾ ಅಂತ ಅದನ್ನೇ ಮತ್ತೆ ಮತ್ತೆ ತಿಂದು ತಿಂದು ದಪ್ಪ ಆಗಿ ಓಳ್ಳೇ ರೋಗಿಷ್ಟನ ತರಹಾ ಆಗಿಹೋದ. ಕಡೆಗೂ. ಅಜ್ಜಿಯ ಒತ್ತಾಯಕ್ಕೆ ಮಣಿದು ಕಾಶಿಗೆ ಹೋದ ಗುಂಡ ಎಷ್ಟು ದಿನಗಳಾದರು ಹಿಂದಿರುಗುವುದಿರಲಿ, ಉಭಾ ಶುಭಾ ಅಂತ ಒಂದು ಪತ್ರವನ್ನೂ ಹಾಕದೇ ಹೋದಾಗ ಅಜ್ಜಿಗೆ ಭಯವಾಗ ತೊಡಗಿತು.
ಅಷ್ಟರಲ್ಲೇ ಗುಂಡನ ಪತ್ರವೊಂದು ಬಂದಿತಲ್ಲದೇ, ಆ ಪತ್ರದಲ್ಲಿ ಹೀಗೆ ಬರೆದಿತ್ತು.
ಪ್ರೀತಿಯ ಅಜ್ಜಿಗೆ ಗುಂಡನ ಸಾಷ್ಟಾಂಗ ನಮಸ್ಕಾರಗಳು.
ನಾನಿಲ್ಲಿ ಕ್ಷೇಮ..ನಿಮ್ಮ ಮಾತಿಗೆ ಕಟ್ಬು ಬಿದ್ದು ನನಗೆ ಬಹಳ ಇಷ್ಟ ವಾದ ಬಜ್ಜಿಯನ್ನು ಬಿಡಬೇಕೆಂದು ಕಾಶಿಗೆ ಬಂದು ತಲುಪಿದೆ. ಆದರೇನು ಮಾಡುವುದು ಇಲ್ಲಿ ಸಿಕ್ಕಾಪಟ್ಟೆ ಛಳೀ.
ಸ್ಥಳ ಮತ್ತು ಸ್ಥಳೀಯರ ಪರಿಚಯ ಮಾಡಿಕೊಂಡು, ಎಲ್ಲರ ಚಳೀ ಹೋಗಿಸುವಂತಹ, ನನ್ನದೇ ಆದ ಅಂಗಡಿ ಒಂದನ್ನು ತೆರೆದಿದ್ದಲ್ಲದೇ, ನಿಮಗೆ ಕೊಟ್ಟ ಮಾತಿನಂತೆ ನಾನು ಪ್ರತಿ ದಿನವೂ ಕಾಶಿಯಲ್ಲಿ ಬಜ್ಜಿ ಬಿಡುತ್ತಿದ್ದೇನೆ. ನಿಮ್ಮ ಆಶೀರ್ವಾದದಿಂದ ಒಳ್ಳೆಯ ವ್ಯಾಪಾರವೂ ಆಗುತ್ತಿದೆ.
ಇಂತಿ ನಿಮ್ಮ ಪ್ರೀತಿಯ ಗುಂಡಾ..
ಮೊಮ್ಮಗನ ಪತ್ರವನ್ನು ಓದಿ ಮೂರ್ಛೆ ಹೋದ ಅಜ್ಜಿ ಇಂದಿಗೂ ಕೋಮಾ ಸ್ಥಿತಿಯಲ್ಲೇ ಇದ್ದಾರಂತೆ 😓
ಇನ್ನೂ ಕೆಲವರು ಕಾಶಿಗಿ ಹೋಗಿ ಕೆಲವು ಪದಾರ್ಥಗಳನ್ನು ಬಿಟ್ಟು ಬಂದಿರುತ್ತಾರಾದರು ಬಾಯಿ ಚಪಲ ತಾಳಿಕೊಳ್ಳದೇ ಚಡಪಡಾಯಿಸ್ತಿರ್ತಾರೆ. ಯಾವುದೇ ಸಭೆ ಸಮಾರಂಭಗಳಿಗೋ ದೇವಸ್ಥಾನ ಇಲ್ಲವೇ ಮಠದ ಊಟದಲ್ಲಿ ಅವರು ಬಿಟ್ಟು ಬಂದ ತರಕಾರಿ ಅಥವಾ ಸಿಹಿ ತಿಂಡಿಗಳ ಆಡುಗೆ ಮಾಡಿದ್ದರೇ,, ಅಯ್ಯೋ ಇದು ದೇವರ ಪ್ರಸಾದ ಹಾಗೆಲ್ಲಾ ತಿನ್ನದೇ ಬಿಸಾಡಿದರೆ ಕಡೆಗಾಲದಲ್ಲಿ ತಿನ್ನಲು ಎರಡು ಪಿಡಿಚೆ ಅನ್ನವೂ ಸಿಗುವುದಿಲ್ಲ ಅಲ್ವೇ? ಎಂದು ಅಕ್ಕ ಪಕ್ಕದವರಿಗೆ ಹೇಳಿ ತಮಗೆ ತಾವೇ ಸಮಾಧಾನ ಮಾಡಿಕೊಂಡು ತಮ್ಮ ಜಿಹ್ವಾಫಲವನ್ನು ತೀರಿಸಿಕೊಳ್ಳುವ ಮಂದಿಗೇನೂ ಕಡಿಮೆ ಇಲ್ಲ.
ಆದ್ದರಿಂದ ನಮ್ಮ ಶಾಸ್ತ್ರ ಸಂಪ್ರದಾಯಗಳ ರೂಪದಲ್ಲಿರುವ ರೂಢಿಯ ಹಿಂದಿನ ನಿಜವಾದ ಅರ್ಥವನ್ನು ಗ್ರಹಿಸಿ, ಅದಕ್ಕೆ ತಕ್ಕಂತೆ ಪಾಲಿಸಿದಲ್ಲಿ ನಿಜವಾಗಿಯೂ ಕಾಶೀ ವಿಶ್ವನಾಥನ ಅನುಗ್ರಹಕ್ಕೆ ಪಾತ್ರರಾಗಿ ಮುಕ್ತಿಯನ್ನು ಪಡೆಯಬಹುದಾಗಿದೆ.
ಏನಂತೀರೀ?
ನಿಮ್ಮವನೇ ಉಮಾಸುತ
ಪಿ್ರಯ, ಶೀ್ರ. ಶೀ್ರಕಂಠ ಬಾಳಕಂಚಿ ರವರೆ ನಿಮ್ಮ ಲೇಖನ
ಕಾಶಿಗೆ ಹೋದಾಗ ಇಷ್ಚ ವಾದದನ್ನು ಏಕೆ ಬಿಟ್ಟು
ಬರಬೇಕು ? ಈ ಲೇಖನ ವನ್ನು ಓದಿ ಹೊಟ್ಟೆ ನೋವಾಗುವಷ್ಚಟು ನಕ್ಕುಬಿಟ್ಟಿದ್ದೀನಿ ಕಾರಣ ಇಷ್ಟ ವಾದದ್ದನು ಬಿಟ್ಟು ಬಂದು ದೇವಸ್ಥಾನ ದಲ್ಲಿ ಪುನಃ ತಿಂದರು ಇದು ದೇವರ ಬಯಕ್ಕೆ ಅಲ್ಲ ನಯಅಕ್ಕ ಪಕ್ಕ ದವರು ಬಿಟ್ಟು ಬಂದ ಆಸೆ ಇರುವುದನ್ನು ಮನಸ್ಪೂರ್ವಕವಾಗಿ ಬಿಟ್ಟಿರುವುದಿಲ್ಲ ತಿನ್ನುವುದಕ್ಕೆ ಆಸೆ ನೋಡಿದವರು ಏನಂದು ಕೊಳ್ಳುತ್ತಾರೋ ಎಂಬ ಬಯ ಹಾಗಾಗಿ ದೇವರ ಪ್ರಸಾದ ಎಂದು ಸ್ವೀಕರಿಸಿದರೆ ತಪ್ಪಲ್ಲ ಎಂದು ತಿನ್ನುವ ಏಷ್ಟೋ ಜನಗಳು ಇದ್ದಾರೆ
ಇದು ಅಕ್ಕನ ಮೇಲೆ ಪಿ್ರತಿ ಅಕ್ಕಿಮೇಲೆ ಪೀ್ರತಿ ಅನ್ನವ ಗಾದೆ ಹಾಗೆ, ಬಿಡುವುದಕ್ಕೆ ಇಷ್ಟ ವಿಲ್ಲ ಆದರೆ ಬಿಡಬೇಕು ಪುನಃ ದೇವಸ್ಥಾನದಲ್ಲಿ ಅದೆ ತರಕಾರಿ ಹಾಕಿ ಮಾಡಿದ್ದರೆ ದೇವರ ಪ್ರಸಾದ ಎಂದು ಸ್ವೀಕರಿಸುವ ಏಷ್ಟೋ ಜನಗಳು ಇದ್ದಾರೆ ಹಾಗಿದೆ ನಿಮ್ಮ ಲೇಖನ ಬಹಳ ಸ್ವಾರಸ್ಯಕರ ವಾಗಿದೆ ಈ ನಿಮ್ಮ ಲೇಖನ
ಕಾಶಿಗೆ ಹೋದಾಗ ಇಷ್ಟ ವಾದದ್ದನು ಏಕೆ ಬಿಟ್ಟು ಬರಬೇಕು ?
LikeLiked by 1 person
Idu hosadalla catholic janaroo idannu anusarisuttare. Satyanna
LikeLiked by 1 person