ಪತ್ನಿ ಮತ್ತೆ ಮತ್ತೆ ತಾಯಿಯ ಮೇಲೆ ಆರೋಪ ಮಾಡುತ್ತಿದ್ದಳು. ಆದರೆ ಪತಿ ಅವಳಿಗೆ ತನ್ನ ಮಾತಿನ ಮಿತಿ ಮೀರಬೇಡವೆಂದು ಮನವಿ ಮಾಡುತ್ತಿದ್ದ. ಆದರೂ ಪತ್ನಿ ಮೌನವಾಗದೆ ಜೋರು ಜೋರಾಗಿ ಟೇಬಲ್ ಮೇಲೆ ಕೈಸನ್ನೆ ಮಾಡುತ್ತಾ ಕೂಗಿ ಹೇಳುತ್ತಿದ್ದಳು ನಾನು ಚಿನ್ನದ ಹಾರವನ್ನು ಇಲ್ಲೇ ಟೇಬಲ್ ಮೇಲೆ ಇಟ್ಟಿದ್ದೆ, ನಮ್ಮಿಬ್ಬರನ್ನು ಬಿಟ್ಟರೆ ಬೇರೆ ಯಾರು ಕೋಣೆಯೊಳಗೆ ಬಂದಿಲ್ಲ, ಮನೆಯಲ್ಲಿ ಮೂರನೆಯವರು ನಿಮ್ಮ ತಾಯಿಯೇ. ಹಾಗಾಗಿ ಅವರೇ ಅದನ್ನು ತೆಗೆದುಕೊಂಡಿದ್ದಾರೆ.
ಅಲ್ಲಿಯವರೆಗೂ ಸುಮ್ಮನಿದ್ದ ಪತಿ, ತನ್ನ ತಾಯಿಯ ಮೇಲೆ ಕಳ್ಳತನದ ಆರೋಪ ಬಂದ ಕೂಡಲೇ, ಅವನ ಸಂಯಮವನ್ನೇ ಮೀರಿಸಿತು. ಅವನು ತನ್ನ ಪತ್ನಿಯ ಕಪಾಳಕ್ಕೊಂದು ಜೋರಾಗಿ ಬಾರಿಸಿದ. ಇನ್ನೂ ಮದುವೆಯಾಗಿ ಮೂರು ತಿಂಗಳು ಕಳೆದಿರಲಿಲ್ಲ.
ಹೊಡೆತ ಹೆಂಡತಿಗೆ ಸಹನೆಯಾಗಲಿಲ್ಲ ಮನೆ ಬಿಟ್ಟು ಹೊರಟು ಬಿಟ್ಟಳು.. ಹಾಗೆ ಹೋಗುವಾಗ, ನಿಮಗೆ ತಾಯಿಯ ಮೇಲೆ ಯಾಕೆ ಇಷ್ಟು ಭರವಸೆ ? ಎಂದು ಕೇಳಿಯೇ ಬಿಟ್ಟಳು
ಪತಿ ನೀಡಿದ ಪ್ರತ್ಯುತ್ತರದಿಂದ ಬಾಗಿಲ ಹಿಂದೆ ಬಗ್ಗಿ ಹೋದ ಬಡಕಲು ಶರೀರದ ಹೆತ್ತವ್ವನ ಮನಸ್ಸಿನ ದುಃಖ ಕಣ್ಣಿನ ಮೂಲಕ ಧುಮ್ಮಿಕಿತು.
ಪತಿ ಪತ್ನಿಗೆ ತನ್ನ ಪೂರ್ವ ಇತಿಹಾಸವನ್ನು ಈ ರೀತಿ ಪರಿಚಯಿಸುತ್ತಾನೆ
ನಾನು ಚಿಕ್ಕವನಾಗಿರುವಾಗಲೇ ತಂದೆಯನ್ನು ಕಳೆದು ಕೊಂಡೆ, ನನ್ನ ಪಾಲನೆ ಪೋಷಣೆಗಾಗಿ ಹೆತ್ತ ಅವ್ವ ಬೇರೆಯವರ ಮನೆಯಲ್ಲಿ ಪಾತ್ರೆ ಮುಸುರೆ ತಿಕ್ಕಿ ಏನು ಸಂಪಾದಿಸಲು ಸಾಧ್ಯವಿತ್ತೋ ಅದರಿಂದ ಒಂದು ಹೊತ್ತಿನ ಊಟ ತರುತ್ತಿದ್ದಳು.
ತಾಯಿ ತಟ್ಟೆಯೊಂದರಲ್ಲಿ ನನಗೆ ಊಟ ಬಡಿಸಿ ಖಾಲಿ ಡಬ್ಬವನ್ನು ಮುಚ್ಚಿ ಇಡುತ್ತಿದ್ದಳು. ನನ್ನ ಊಟ ಇದರಲ್ಲಿದೆ ನೀನು ಊಟ ಮಾಡು ಅನ್ನುತ್ತಿದ್ದಳು. ನಾನು ಸಹ ಪ್ರತಿದಿನವೂ ಅರ್ಧ ಊಟ ಮಾಡಿ ಹೊಟ್ಟೆ ತುಂಬಿ ಹೋಯಿತು ಎಂದು ಎದ್ದು ಓಡುತ್ತಿದ್ದೆ. ಅಮ್ಮ ನನ್ನ ಎಂಜಿಲು ಊಟ ಮಾಡಿ ನನ್ನನ್ನು ಬೆಳೆಸಿ ದೊಡ್ಡವನಾಗಿ ಮಾಡಿ ನಾನು ಇಂದು ಮೂರು ಹೊತ್ತು ಊಟ ಸಂಪಾದಿಸುವ ಮಟ್ಟಕ್ಕೆ ತಂದಿದ್ದಾಳೆ ನನಗಾಗಿ ಅವಳು ತನ್ನ ಎಲ್ಲಾ ಇಚ್ಚೆಯನ್ನೇ ಕೊಂದಿದ್ದಾಳೆ.ಆ ತಾಯಿಗೆ ಈ ವಯಸ್ಸಿನಲ್ಲಿ ನಿನ್ನ ಚಿನ್ನದ ಹಾರದ ಹಸಿವು ಇರಲಿಕ್ಕಿಲ್ಲ.
ನನಗೆ ಮೂರು ತಿಂಗಳಿನಿಂದ ನಿನ್ನ ಪರಿಚಯ ಅಷ್ಟೇ, ನನ್ನ ಅವ್ವನ ತಪಸ್ಸನ್ನು ನಾನು ಇಪ್ಪತ್ತೈದು ವರುಷದಿಂದ ನೋಡುತ್ತಿದ್ದೇನೆ.
ಮಗನ ಮಾತನ್ನು ಕೇಳಿದ ಆ ಮುಗ್ಧ ಮಾತೆಗೆ ಕಂಬನಿ ನಯನಗಳಿಂದ ನಿಲ್ಲದೆ ಹರಿಯಿತು ಹೆತ್ತವ್ವನಿಗೆ ಅರ್ಥವೇ ಆಗಲಿಲ್ಲ ತಾನು ಮಗನಿಗೆ ಬಡಿಸಿದ ಅರ್ಧ ಊಟದ ಋುಣ ಅವನು ತೀರಿಸುತ್ತಿದ್ದಾನಾ? ಇಲ್ಲವೇ ಅವನು ಉಳಿಸಿದ ಅರ್ಧ ಊಟದ ಋುಣ ನಾನು ತೀರಿಸುತ್ತಿದ್ದೇನಾ?
#ಕಥೆಯಲ್ಲಾ ಇದು ವ್ಯಕ್ತಿಯ ವ್ಯಥೆ#
ಅಮ್ಮ ದೇವರಲ್ಲ, ಅವಳ ಮುಂದೆ ದೇವರು ಏನೇನೂ ಇಲ್ಲಾ.
ಈ ಕಥೆಯನ್ನು ನನ್ನ ತಂಗಿ ನಮಗೆ ವಾಟ್ಸಾಪ್ ಮುಖಾಂತರ ಕಳುಹಿಸಿದಾಗ ಈ ಕಥೆ ಏಕೋ ಸಂಪೂರ್ಣವಾಗಿರದೇ ಕೇವಲ ಒಂದೇ ದೃಷ್ಟಿಕೋನದಲ್ಲಿದೆ ಎಂದೆನಿಸಿ ನನ್ನ ಕಲ್ಪನೆಯಲ್ಲಿ ಕಥೆಯನ್ನು ಮುಂದುವರಿಸಿದ್ದೇನೆ.
ಹೊಸದಾಗಿ ಮದುವೆಯಾದ ಗಂಡನಿಂದ ಅಚಾನಕ್ಕಾಗಿ ಈ ರೀತಿಯ ಆಘಾತದಿಂದ ಮನನೊಂದ ಹೆಂಡತಿ, ಕೋಪ ಮಾಡಿಕೊಂಡು ದಡದಡನೆ ಕೈಗೆ ಸಿಕ್ಕ ನಾಲ್ಕಾರು. ಬಟ್ಟೆಗಳನ್ನು ಚೀಲಕ್ಕೆ ತುಂಬಿಕೊಂಡು ಮನೆಯಿಂದ ಆಚೇ ಹೋಗ್ತಾಳೆ
ಸೊಸೆ ಕೋಪ ಮಾಡೊಂಡು ಮನೆ ಬಿಟ್ಟು ಹೋಗೋದನ್ನು ತಾಳಲಾಗದ ಅತ್ತೇ, ಮಗೂ ಗಂಡ ಹೆಂಡ್ತಿ ಮಧ್ಯೆ ಸಣ್ಣ ಪುಟ್ಟ ಜಗಳ ಬಂದು ಹೋಗಾ ಇರುತ್ತೆ ಅದಕ್ಕೆ ಹೆಂಡ್ತಿ ಮೇಲೆ ಕೈಮಾಡುವುದು ಸಭ್ಯ ಗಂಡನ ಲಕ್ಷಣವಲ್ಲ. ಹೋಗಿ ನಿನ್ನ ಹೆಂಡ್ತಿನಾ ಕರ್ಕೊಂಡು ಬಾ ಎನ್ನುತ್ತಾರೆ.
ಹೆಂಡತಿ ಮೇಲೆ ಕೈ ಮಾಡಿದ್ದಕ್ಕೆ ಪಶ್ಚಾತ್ತಾಪವಾದರೂ, ತಾನೇ ಹೋಗಿ ಸಮಾಧಾನ ಪಡಿಸಿದರೆ, ಎಲ್ಲಿ ತನ್ನ ಗೌರವ ಕಡಿಮೆ ಆಗುತ್ತದೋ ಎಂಬ ಪುರುಷಪ್ರಧಾನ ಅಹಂ ನಿಂದಾಗಿ. ಸುಮ್ಮನಿರಮ್ಮಾ, ಸಂಜೆ ಹೊತ್ತಿಗೆ ಎಲ್ಲವು ತಣ್ಣಗಾಗಿ ಅವ್ಳೇ ಬರ್ತಾಳೆ ಎಂದು ಅಮ್ಮನ ಮೇಲೆ ತನ್ನ ಉತ್ತರನ ಪೌರುಷ ತೋರಿಸುತ್ತಾನೆ.
ಆಟೋ ಹಿಡಿದು ತವರು ಮನೆಗೆ ಬಂದು ಆಟೋದವನ ಲೆಕ್ಕ ಚುಕ್ತಾ ಮಾಡಿ, ಇನ್ನೇನು ಅಮ್ಮನ ಮನೆಯ ಹೊಸಿಲೊಳಗೆ ಕಾಲು ಇಡಬೇಕು ಎನ್ನುವಷ್ಟರಲ್ಲಿ ಅದಾವುದೋ ಸಮಾರಂಭಕ್ಕೆ ಹೋಗಲು ಸಿದ್ಧರಾಗಿದ್ದ ತನ್ನ ತಂದೆ ತಾಯಿ ಮನೆಯಿಂದ ಹೊರಗೆ ಬರುತ್ತಿದ್ದದ್ದನ್ನು ನೋಡುತ್ತಾಳೆ.
ಅದೇ ಸಮಯಕ್ಕೆ ಮಗಳ ಕಣ್ಣು ತನ್ನ ತಾಯಿಯ ಕುತ್ತಿಗೆಯಲ್ಲಿ ಹಾಕಿಕೊಂಡಿದ್ದ ಆಭರಣಗಳತ್ತ ಹರಿಯುತ್ತದೆ. ತಾನು ಯಾವ ಚಿನ್ನದ ಹಾರ ಕಳುವಾಗಿದೆ ಎಂದು ಕೊಂಡಿದ್ದಳೋ ಅದೇ ಚಿನ್ನದ ಹಾರ ಆಕೆಯ ತಾಯಿಯ ಕೊರಳಲ್ಲಿದ್ದದ್ದು ಕಂಡು ಆಕೆಗೆ ಅಚ್ಚರಿಯ ಜೊತೆಗೆ ಎಂತಹ ಅಚಾತುರ್ಯವಾಗಿ ಹೋಯಿತು ಎಂಬ ಅರಿವಾಗುತ್ತದೆ. ಕೂಡಲೇ ಸಾವರಿಸಿಕೊಂಡು ಏನಮ್ಮಾ ಯಾವ ಕಡೆ ಪ್ರಯಾಣ? ಎನ್ನುತ್ತಾಳೆ.
ಅಯ್ಯೋ ಮಗಳೇ, ಏನು ಬಂದದ್ದು ಏನು ಸಮಾಚಾರ? ಎಲ್ಲಾ ಆರಾಮಾ? ನಾವೇ ಇನ್ನು ಸ್ವಲ್ಪ ಹೊತ್ತಿನಲ್ಲಿ ನಿಮ್ಮ ಮನೆಗೆ ಬರ್ತಾ ಇದ್ವೀ. ನಿಮ್ಮ ಮನೆಯ ಹತ್ತಿರದಲ್ಲೇ, ನಿಮ್ಮಪ್ಪನ ಸ್ನೇಹಿತರ ಮಗಳ ಮದುವೆ ಇದೆ. ಅಲ್ಲಿಗೆ ಬಂದು ಹಾಗೇ ನಿಮ್ಮ ಮನೆಗೆ ಬಂದು ಈ ಚಿನ್ನದ ಹಾರವನ್ನು ಕೊಟ್ಟು ಹೋಗೋಣಾ ಅಂತಿದ್ವಿ ಎನ್ನುತ್ತಾರೆ ಅವರ ತಾಯಿ.
ಮೊನ್ನೆ ನೀನು ಅದ್ಯಾವುದೋ ಪಾರ್ಟಿ ಮುಗಿಸಿ ನಮ್ಮ ಮನೆಗೆ ಬಂದಿದ್ದಾಗ ಬಟ್ಟೆ ಬದಲಾಯಿಸುವಾಗ ಈ ಚಿನ್ನದ ಹಾರವನ್ನೂ ನಿನ್ನ ಡ್ರಸಿಂಗ್ ಟೇಬಲ್ ಮೇಲೆ ಬಿಚ್ಚಿಟ್ಟು ಮರೆತು ಹೋಗಿದ್ದೀ. ನೀನು ಹೋದ್ಮೇಲೆ ನಾವೂ ಗಮನಿಸಿದ್ವೀ. ಹೇಗೂ ಇವತ್ತು ನಿಮ್ಮ ಮನೆ ಹತ್ರಾನೇ ಬರ್ತೀವಲ್ಲಾ, ಆಗ್ಲೇ ಕೊಡೋಣ ಎಂದು ಸುಮ್ಮನಾದ್ವೀ. ಸುಮ್ಮನೆ ವ್ಯಾನಿಟಿ ಬ್ಲಾಗಿನಲ್ಲಿ ಇಟ್ಟುಕೊಳ್ಳುವ ಬದಲು ಕುತ್ತಿಗೆಗೆ ಹಾಕಿಕೊಂಡಿದ್ದೇನೆ. ಬೇಜಾರು ಮಾಡ್ಕೋ ಬೇಡ್ವೇ. ಎಂದು ಬಡ ಬಡನೇ ಹೆಂಡತಿ ಮಾತನಾಡುತ್ತಿದ್ದದ್ದನ್ನು ಕಂಡ ಆಕೆಯ ಯಜಮಾನರು,
ಇದೇನೇ? ಮನೆಗೆ ಬಂದ ಮಗಳನ್ನು ಬಾಗಿಲಲ್ಲೇ ನಿಲ್ಲಿಸಿ ಮಾತ್ನಾಡಿಸ್ತಾ ಇದ್ಯಾ? ಒಳಗೆ ಕರ್ದು ಬಂದ ಸಮಾಚಾರ ವಿಚಾರಿಸು. ಮದುವೆ ಮಹೂರ್ತಕ್ಕೆ ಇನ್ನೂ ಸಮಯವಿದೆ ಎಂದು ಹೇಳುತ್ತಲೇ, ಏನಮ್ಮಾ ಮಗಳೇ, ಒಬ್ಳೇ ಬಂದಿದ್ದೀಯಾ? ಅಳಿಯಂದಿರು ಎಲ್ಲಿ? ನಿಮ್ಮತ್ತೆ ಚೆನ್ನಾಗಿದ್ದಾರಾ? ಅವರು ಬಿಡು ಚೆನ್ನಾಗಿಯೇ ಇರ್ತಾರೆ. ಎಷ್ಠೇ ಆಗಲಿ ನೀನು ನಮ್ಮ ಮಗಳಲ್ಲವೇ,ಅವರನ್ನು ಚೆನ್ನಾಗಿಯೇ ನೋಡ್ಕೋತಿರ್ತೀಯಾ ಎನ್ನುತ್ತಾರೆ.
ಅಪ್ಪನ ಆ ಮಾತುಗಳು ಮಗಳ ಮನಸ್ಸಿಗೆ ಚಾಕು ಚುಚ್ಚಿದಂತೆ ನಾಟಿ, ಕಸಿವಿಸಿಯಾದರೂ, ಅದನ್ನು ತೋರಿಸಿ ಕೊಳ್ಳದೇ, ಹೂಂ ಅಪ್ಪಾ ಮನೆಯಲ್ಲಿ ಎಲ್ಲರೂ ಚೆನ್ನಾಗಿಯೇ ಇದ್ದೇವೆ. ಇವತ್ತು ಸಂಜೆ ನಮ್ಮ ಮನೆಯವರ ಸ್ನೇಹಿತರ ರಿಸೆಶ್ಪನ್ನಿಗೆ ಹೋಗೋದಿತ್ತು. ಈ ಮೂರು ತಿಂಗ್ಳಲ್ಲಿ, ಅತ್ತೆಯ ಕೈ ರುಚಿ ತಿಂದು ತಿಂದು ಸ್ವಲ್ಪ ದಪ್ಪಗೆ ಆಗಿಬಿಟ್ಟಿರುವ ಕಾರಣ, ಈ ಬಟ್ಟೆಗಳು ಸ್ವಲ್ಪ ಟೈಟಾಗ್ತಾ ಇತ್ತು. ಹಾಗಾಗಿ ಇಲ್ಲೇ ಟೈಲರ್ ಅಂಗಡಿ ಹತ್ರಾ ನಮ್ಮ ಮನೆಯವರೇ ಬಿಟ್ಟು ಅವರು ಆಫೀಸಿಗೆ ಹೋದ್ರು. ಆದ್ರೇ ಟೈಲರ್ ಅಂಗಡಿ ಇನ್ನೂ ತೆಗೆಯಲು ಇನ್ನೂ ಅರ್ಧ ಮುಕ್ಕಾಲು ಗಂಟೆ ಆಗತ್ತೇ ಅಂತ ಅದರ ಪಕ್ಕದ ಅಂಗಡಿಯವರು ಹೇಳಿದ್ರು. ಹಾಗಾಗಿ ಮನೆಗೆ ಬಂದೇ. ನೀವು ಮದುವೆ ಮನೆಗೆ ಹೋಗಿ ಬನ್ನಿ ನಾನು ಟೈಲರ್ ಹತ್ರಾ ಹೋಗಿ ಬರ್ತೀನಿ ಎಂದು ಹೇಳುತ್ತಾ ಮನೆಯ ಒಳಗೂ ಹೋಗದೇ ಮನೆಯ ಹೊರಗೇ ಅಪ್ಪಾ ಅಮ್ಮನ ಕಾಲಿಗೆ ನಮಸ್ಕರಿಸಿ, ಮದ್ವೇ ಮುಗಿಸಿಕೊಂಡು ನಮ್ಮ ಮನೆಗೆ ಬನ್ನಿ ನಾನು ಕಾಯ್ತಾ ಇರ್ತೀನಿ ಎಂದು ಹೇಳಿ ಮನೆಯಿಂದ ಸ್ವಲ್ಪ ದೂರ ಬಂದು ಯಾರಿಗೂ ಕಾಣದ ಹಾಗೆ ಆಟೋ ಹತ್ತಿ ತನ್ನ ಮನೆಗೆ ಹೋದಳು.
ಗಂಡ ಮತ್ತು ಅತ್ತೇ ಮೇಲೆ ಕೋಪ ಮಾಡ್ಕೋಂಡು ದುಡುದುಡನೇ ಬ್ಯಾಗ್ ತೆಗೆದುಕೊಂಡು ಹೋದವಳು ಇಷ್ಟು ಬೇಗನೆ ಮನೆಗೆ ಬಂದು ಬಿಟ್ಟಳಲ್ಲಾ? ಎಂದು ಅತ್ತೆ ಆಶ್ಚರ್ಯಚಕಿತರಾಗಿ ನೋಡುತ್ತಿದ್ದರೆ, ಸೀದಾ ಮನೆಯೊಳಗೆ ಬಂದು, ಚಪ್ಪಲಿಯನ್ನು ಮೂಲೆಯಲ್ಲಿ ಬಿಟ್ಟು ಅತ್ತೆಯ ಕಾಲು ಹಿಡಿದು ನನ್ನನ್ನು ಕ್ಷಮಿಸಿ ಬಿಡಿ ಅತ್ತೇ!! ನಾನು ವಿನಾಕಾರಣ ನಿಮ್ಮ ಮೇಲೆ ಆರೋಪ ಮಾಡಿಬಿಟ್ಟೇ ಎಂದು ಕಣ್ಣೀರು ಸುರಿಸುತ್ತಾಳೆ.
ಸೊಸೆಯ ಈ ರೀತಿಯ ಮಾರ್ಪಾಟು ಅತ್ತೆಗೆ ಅಚ್ಚರಿ ಮೂಡಿಸಿತಾದರೂ ತಮ್ಮ ತಪ್ಪಿನ ಅರಿವಾಗಿ ಕ್ಷಮೆಯಾಚಿಸಿದ ಮೇಲೆ ಅವರನ್ನು ಕ್ಷಮಿಸುವುದು ದೊಡ್ಡ ಗುಣ ಎಂದು ಸೊಸೆಯ ಬುಜವನ್ನು ಹಿಡಿದು ಮೇಲಕ್ಕೆ ಎಬ್ಬಿಸಿ ಸಂತೈಸುತ್ತಾರೆ.
ಆತ್ತೆ ಕ್ಷಮಿಸಿದ್ದರಿಂದ ಸಂತಸಗೊಂಡ ಸೊಸೆ, ನಡೆದದ್ದೆಲ್ಲವನ್ನೂ ಕೂಲಂಕುಷವಾಗಿ ಅತ್ತೆಗೆ ತಿಳಿಸಿ ಇನ್ನೆಂದೂ ತನ್ನಿಂದ ಈ ರೀತಿಯ ತಪ್ಪಾಗದು ಎಂದು ಭಾಷೆ ಕೊಡುತ್ತಾಳಲ್ಲದೇ, ಅಂದಿನಿಂದ ಅವರಿಬ್ಬರೂ ಕೇವಲ ಅತ್ತೆ ಸೊಸೆಯಾಗಿರದೇ, ತಾಯಿ ಮಗಳಂತೆ ಅನ್ಯೋನ್ಯವಾಗಿ ಸುಖವಾಗಿ ಬಾಳ ತೊಡಗಿದರು.
ಹಾವು ಮುಂಗುಸಿ ತರಹಾ ಕಿತ್ತಾಡುತ್ತಿದ್ದ ಅತ್ತೇ ಸೊಸೆಯರು ಇದ್ದಕ್ಕಿಂದ್ದಂತೆಯೇ ಒಂದಾಗಿದ್ದದ್ದನ್ನು ಗಮನಿಸಿದ ಮಗ, ಇದು ಹೇಗಾಯ್ತು ಎಂದು ತಿಳಿದುಕೊಳ್ಳುವ ಮನಸ್ಸಾದರೂ, ಜೇನುಗೂಡಿಕೆ ಕಲ್ಲು ಎಸೆದು ಜೇನುಹುಳಗಳಿಂದೇಕೆ ಕಚ್ಚಿಸಿಕೊಳ್ಳಬೇಕು ? ಎಂದು ಸುಮ್ಮನಾಗುತ್ತಾನೆ.
ನಿಜ ಹೇಳ್ಬೇಕು ಅಂದ್ರೇ, ಯಾರ ಮನೆಯಲ್ಲಿ ಅತ್ತೇ ತನ್ನ ಸೊಸೆಯಲ್ಲಿ ಮಗಳನ್ನು ಕಾಣ್ತಾರೋ? ಯಾರ ಮನೆಯಲ್ಲಿ ಸೊಸೆ ತನ್ನ ಅತ್ತೆಯಲ್ಲಿ ತಾಯಿಯನ್ನು ಕಾಣ್ತಾರೋ ಆ ಮನೆ ಖಂಡಿತವಾಗಿಯೂ ನಂದಗೋಕುಲವಾಗಿರುತದೆ. ಅದೇ ರೀತಿ ಎಲ್ಲಾ ಹೆಣ್ಣು ಹೆತ್ತ ತಂದೆ ತಾಯಿಯರೂ ತಮ್ಮ ಮಗಳ ಸಂಸಾರ ಚೆನ್ನಾಗಿ ಇರಲಿ ಎಂದೇ ಬಯಸುತ್ತಾರೆಯೇ ಹೊರತು ಯಾರೂ ಮಗಳ ಸಂಸಾರ ಒಡೆಯಲು ಮುಂದಾಗುವುದಿಲ್ಲ.
ಅದಕ್ಕೇ ನಾನು ಬಹಳಷ್ಟು ಬಾರೀ ಗಂಡು ಹೆಣ್ಣು ಜಾತಕ ಹೊಂದಾಣಿಕೆ ಮಾಡುವ ಸಮಯದಲ್ಲಿ ತಮಾಷೆಗೆಂದು ಹೇಳ್ತಾನೇ ಇರ್ತೀನಿ. ಗಂಡು ಹೆಣ್ಣು ಜಾತಕ ಹೊಂದಾಣಿಕೆ ಆಗ್ದೇ ಹೋದ್ರೋ ಅವರಿಬ್ಬರೂ ಸ್ಚಲ್ಪ ದಿನಗಳ ನಂತರ ಪರಸ್ಪರ ಅರ್ಥಮಾಡ್ಕೊಂಡು ಚೆನ್ನಾಗಿಯೇ ಸಂಸಾರ ಮಾಡಿ ಬಿಡುತ್ತಾರೆ. ಜಾತಕ ನೋಡುವಾಗ ಅತ್ತೇ ಸೊಸೆಯ ಜಾತಕಾ, ಅತ್ತೇ ಅಳಿಯನ ಜಾತಕಗಳು ಹೊಂದಾಣಿಕೆ ಆಗತ್ತಾ ಅಂತ ನೋಡಿಬಿಟ್ಟರೇ ಅವರ ಸಂಸಾರ ಆನಂದ ಸಾಗರವಾಗಿರುತ್ತದೆ ಅಲ್ವೇ?
ಈ ಕಥೆ ಇಷ್ಟ ಆದ್ರೇ ಲೈಕ್ ಮಾಡಿ ಎಲ್ಲಾ ಅಮ್ಮಾ ಅತ್ತೆ ಮತ್ತು ಸೊಸೆಯಂದಿರಿಗೆ ತಲುಪಿಸಿ.
ಏನಂತೀರೀ?
ನಿಮ್ಮವನೇ ಉಮಾಸುತ