ನಮಗೆಲ್ಲಾ ಗೊತ್ತಿರುವಂತೆ ಪ್ರಭು ಶ್ರೀರಾಮನ ಭಂಟ ಹನುಮಂತ ಮಹಾನ್ ಪರಾಕ್ರಮಿ. ಆತನ ಪೌರುಷವನ್ನು ಮೆಚ್ಚಿ ಕೊಂಡಾಡವರೇ ಇಲ್ಲಾ. ಶಕ್ತಿ ಮತ್ತು ಸಾಹಸಗಳಿಗೆ ಹನುಮಂತನೇ ಸಾಟಿ.. ಹಾಗಾಗಿಯೇ ಅನಾದಿಕಾಲದಿಂದಲೂ ಪ್ರತೀ ಊರುಗಳ ಹೆಬ್ಬಾಗಿಲಿನಲ್ಲಿಯೇ ಆಂಜನೇಯಸ್ವಾಮಿಯ ಗುಡಿಗಳನ್ನು ಕಟ್ಟಿಸಿ ಅದರ ಅಕ್ಕ ಪಕ್ಕಗಳಲ್ಲಿಯೇ ಗರಡೀ ಮನೆಗಳು ಇರುವುದನ್ನು ಕಾಣಬಹುದಾಗಿದೆ. ಪ್ರತಿಯೊಬ್ಬ ಪೈಲ್ವಾನರೂ ಜೈ ಭಜರಂಗಬಲಿ ಎಂದು ಹನುಮಂತನನ್ನೇ ಪ್ರಾರ್ಥಿಸಿಯೇ ಅಖಾಡಕ್ಕೆ ಇಳಿಯುತ್ತಾರೆ. ಹಾಗಾಗಿ ಸಂಶಾಸ್ಪದವಿಲ್ಲದೇ ಹನುಮಂತ ನಿಜವಾದ ಗಂಡಸು ಎನ್ನುವುದು ನಿರ್ವಿವಾದ.
ಆದರೆ ಸ್ತ್ರೀ ರೂಪದಲ್ಲಿರುವ ಅಪರೂಪದ ಹನುಮಂತನ ದೇವಸ್ಥಾನವೊಂದು ಛತ್ತೀಸ್ ಘಡದ ರತನ್ ಪುರ್ ಜಿಲ್ಲೆಯ ಗಿರ್ಜಾಬಂಧ್ ಗ್ರಾಮದಲ್ಲಿದೆ. ದೇವತೆಯ ರೂಪದಲ್ಲಿರುವ ಈ ಹನುಮಂತನನ್ನು ಯಾರು ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸುತ್ತಾರೋ ಅಂತಹವರಿಗೆ ದೇವಿಯ ರೂಪದ ಹನುಮಂತ ಸಕಲ ಇಚ್ಚೆಗಳನ್ನು ಪೂರೈಸುತ್ತಾನೆ ಎಂಬ ನಂಬಿಕೆ ಸ್ಥಳಿಯರಿಗೆ ಇದೆ. ಅಂತಹ ವಿಶೇಷ ದೇವಸ್ಥಾನದ ಬಗ್ಗೆ ನಾವಿಂದು ತಿಳಿಯೋಣ ಬನ್ನಿ.
ಈ ದೇವಾಲಯವು ಛತ್ತೀಸ್ ಘಡದ ಬಿಲಾಸ್ಪುರ ನಗರದಿಂದ 25 ಕಿ.ಮೀ ದೂರದಲ್ಲಿರುವ ರತನ್ ಪುರಜಿಲ್ಲೆಯ ಗಿರ್ಜಾಬಂಧ್ ನಲ್ಲಿದೆ. ಜಗತ್ತಿನಲ್ಲಿ ಮಹಿಳಾ ರೂಪದಲ್ಲಿ ಇರುವ ಬ್ರಹ್ಮಚಾರಿ ಆಂಜನೇಯನ ಏಕೈಕ ಎನ್ನಬಹುದಾದ ಸಾವಿರಾರು ವರ್ಷಗಳಷ್ಟು ಹಳೆಯದಾದ ಈ ವಿಶಿಷ್ಟ ದೇವಾಲಯದ ಸ್ಥಾಪನೆಯ ಹಿಂದಿರುವ ದಂತಕಥೆಯೂ ಸಹ ಸಾಕಷ್ಟು ಕುತೂಹಲಕಾರಿಯಾಗಿದೆ.
ಸುಮಾರು ಹತ್ತು ಸಾವಿರವರ್ಷಗಳಷ್ಟು ಹಿಂದೆ ಈ ಗಿರ್ಜಾಬಂಧ್ ಪ್ರದೇಶವನ್ನು ಪೃಥ್ವಿ ದೇವ್ಜು ಎಂಬ ರಾಜ ಆಳುತ್ತಿದ್ದನು. ಬಹಳ ಚಿಕ್ಕವಯಸ್ಸಿನಲ್ಲಿಯೇ ಕುಷ್ಟರೋಗಕ್ಕೆ ತುತ್ತಾದ ಆತ ಅದರಿಂದ ಪಾರಾಗಲು ನೋಡದ ವೈದ್ಯರಿಲ್ಲ ಬೇಡಿಕೊಳ್ಳದ ದೇವರಿಲ್ಲ. ಎಷ್ಟೇ ರೀತಿಯ ಚಿಕಿತ್ಸೆಗಳನ್ನು ಪಡೆದರೂ ಆತನಿಗೆ ಗುಣವಾಗದ ಕಾರಣ ರಾಜನಾಗಿದ್ದು ಇರುವುದು ಎಷ್ಟು ಸರಿ ಎಂದು ಯೋಚಿಸುತ್ತಲೇ ಆತ ಖಿನ್ನತೆಯಿಂದ ನರಳುತ್ತಿದ್ದ.
ಆತ ಅದೊಮ್ಮೆ ರಾಜ ನಿದ್ರಿಸುತ್ತಿರುವಾಗ ಆಂಜನೇಯಸ್ವಾಮಿ ಆತನಿಗೆ ಕನಸಿನಲ್ಲಿ ಬಂದು ಗಿರಿಜಾಬಂಧ್ ಪ್ರದೇಶದಲ್ಲಿ ತನಗೊಂದು ದೇವಾಲಯ ನಿರ್ಮಿಸಲು ಸೂಚನೆ ನೀಡಿದನಂತೆ. ಆಂಜನೇಯ ಸ್ವಾಮಿಯ ಪರಮಭಕ್ತನಾಗಿದ್ದ ಆತ ದೇವರ ಅಜ್ಞೆಯಂತೆ ಅಲ್ಲೊಂದು ದೇವಾಲಯದ ನಿರ್ಮಾಣವನ್ನು ಪ್ರಾರಂಭಿಸಿ ಇನ್ನೇನು ದೇವಾಲಯದ ಕಾಮಗಾರಿ ಪೂರ್ಣಗೊಳ್ಳುತ್ತಿರುವಾಗ ದೇವಸ್ಥಾನದಲ್ಲಿ ಯಾವ ರೀತಿಯ ಹನುಮಂತನ ವಿಗ್ರಹವನ್ನು ಸ್ಥಾಪಿಸಬೇಕು ಎಂಬ ಗೊಂದಲದಲ್ಲಿದ್ದಾಗ, ಮತ್ತೆ ಆ ರಾಜನ ಕನಸಿನಲ್ಲಿ ಆಂಜನೇಯಸ್ವಾಮಿ ಕಾಣಿಸಿಕೊಂಡು ದೇವಾಲಯದ ಬಳಿಯೇ ಇದ್ದ ಮಹಾಮಾಯ ಕುಂಡದಲ್ಲಿ ಇದ್ದೇನೆ ಎಂದು ತಿಳಿಸಿತಂತೆ. ಮತ್ತೆ ರಾಜ ಅಲ್ಲೆಲ್ಲಾ ಹುಡುಕಾಡಿ ಎಲ್ಲಿಯೂ ದೇವರ ವಿಗ್ರಹ ಕಾಣಿಸದಿದ್ದಾಗ ಚಿಂತಾಕ್ರಾಂತನಾಗಿದ್ದಾಗ ಪುನಃ ಕನಸಿನಲ್ಲಿ ಬಂದ ಸ್ವಾಮಿ ಕೊಳದ ಸ್ನಾನದ ಕಟ್ಟೆಯ ಮೂಲೆಯಲ್ಲಿರುವುದಾಗಿ ತಿಳಿಸಿದಾಗ, ಮಾರನೆಯ ದಿನ ತನ್ನ ಪರಿವಾರದ ಸಮೇತನಾಗಿ ಆ ಸ್ಥಳಕ್ಕೆ ಹೋಗಿ ಹುಡುಕಿದಾಗ ಅಲ್ಲಿ ಕಂಡ ಮೂರ್ತಿಯನ್ನು ನೋಡಿ ಅವರಿಗೆ ಬಹಳವಾದ ಅಚ್ಚರಿ ಮೂಡಿತು.
ರಾಜನು ಕನಸಿನಲ್ಲಿ ಆದ ಅಪ್ಪಣೆಯಂತೆ ಮಹಾಮಾಯ ಕುಂಡದಿಂದ ಹೊರತೆಗೆದ ಸ್ತ್ರೀ ರೂಪದ ಹನುಮಂತನ ವಿಗ್ರಹವನ್ನು ದೇವಾಲಯದ ಗರ್ಭಗುಡಿಯಲ್ಲಿ ಸಕಲ ಶಾಸ್ತ್ರಾಧಾರಿತ ರೀತಿಯಲ್ಲಿ ಪ್ರತಿಷ್ಠಾಪನೆ ಮಾಡಿ ನಿತ್ಯಪೂಜೆಯನ್ನು ಆರಂಭಿಸಲಾಯಿತು. ಹತ್ತು ಸಾವಿರ ವರ್ಷಗಳಷ್ಟು ಹಿಂದೆ ಕಟ್ಟಿದ ಆ ದೇವಸ್ಥಾನದಲ್ಲಿ ಇಂದಿಗೂ ಬಹಳ ಶ್ರದ್ದಾ ಭಕ್ತಿಗಳಿಂದ ಪೂಜಾವಿಧಾನಗಳನ್ನು ವಿಧಿವತ್ತಾಗಿ ಆಚರಿಸಿಕೊಂಡು ಬಂದಿದ್ದಾರೆ. ವಿಗ್ರಹವನ್ನು ಮಹಾಮಾಯ ಕುಂಡದಿಂದ ಹೊರತೆಗೆದ ಕಾರಣ ಈ ದೇವಸ್ಥಾನವನ್ನು ಮಹಾಮಾಯಿ ದೇವಸ್ಥಾನ ಎಂದೂ ಕರೆಯಲಾಗುತ್ತದೆ. ಇಲ್ಲಿ ಮತ್ತೊಂದು ಕುತೂಹಲಕಾರಿಯಾದ ವಿಷಯವೆಂದರೆ ಈ ದೇವಸ್ಥಾನ ಕಟ್ಟಿದ ನಂತರ ಕೆಲವೇ ದಿನಗಳಲ್ಲಿ ರಾಜನು ಕುಷ್ಟರೋಗದಿಂದ ಸಂಪೂರ್ಣವಾಗಿ ಗುಣಮುಖರಾದರಂತೆ. ಅಂದಿನಿಂದ ಈ ದೇವಿಯ ರೂಪದ ಹನುಮಂತನನ್ನು ಯಾರು ಭಕ್ತಿಯಿಂದ ಪೂಜಿಸುತ್ತಾರೋ ಅವರ ಸಕಲ ಇಚ್ಚೆಗಳನ್ನು ಪೂರೈಸುತ್ತಾನೆ ಎಂಬ ನಂಬಿಕೆ ಸ್ಥಳಿಯರಲ್ಲಿದೆ. ಈ ಸ್ತ್ರೀ ರೂಪದ ಹನುಮಂತನ ಜೊತೆಯಲ್ಲಿಯೇ ಭಗವಾನ್ ರಾಮ (ಎಡ) ಮತ್ತು ಸೀತಾಮಾತೆ (ಬಲ) ಭುಜದ ಮೇಲೆ ಹೊತ್ತುಕೊಂಡಿರುವ ಹನುಮನ ವಿಗ್ರಹವನ್ನು ಸಹ ಇಲ್ಲಿ ನೋಡಬಹುದಾಗಿದೆ.
ಸಾಮನ್ಯವಾಗಿ ರತನಪುರದ ಪ್ರದೇಶ ಅತ್ಯಂತ ಕಡು ಬಿಸಿಲಿನ ಪ್ರದೇಶವಾಗಿರುವುದರಿಂದ ಚಳಿಗಾಲದ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡುವುದು ಉತ್ತಮವಾಗಿದೆ. ಅಕ್ಟೋಬರ್ ನಿಂದ ಮಾರ್ಚ್ ನಡುವೆ ಅಲ್ಲಿಗೆ ಹೋಗಲು ಸೂಕ್ತವಾದ ಸಮಯವಾಗಿದೆ.
ರೈಲಿನಲ್ಲಿ ಬಿಲಾಸ್ಪುರಕ್ಕೆ ತಲುಪಿ ಅಲ್ಲಿಂದ 25 ಕಿ.ಮೀ ದೂರದಲ್ಲಿರುವ ಗಿರ್ಜಾಬಂಧ್ ಗೆ ಕಾರು ಅಥವಾ ಸ್ಥಳೀಯ ಬಸ್ಸುಗಳು ಮೂಲಕ ತಲುಪಬಹುದಾಗಿದೆ.
ವಿಮಾನದ ಮೂಲಕ ಹತ್ತಿರದ ರಾಯ್ಪುರದ ಸ್ವಾಮಿ ವಿವೇಕಾನಂದ ವಿಮಾನ ನಿಲ್ದಾಣಕ್ಕೆ ತಲುಪಿ ಅಲ್ಲಿಂದ ಸುಮಾರು 140 ಕಿ.ಮೀ ದೂರದಲ್ಲಿರುವ ಗಿರ್ಜಾಬಂಧ್ ಗೆ ಸುಮಾರು 4-5 ಗಂಟೆಗಳ ಪ್ರಯಾಣದಲ್ಲಿ ಕಾರು ಅಥವಾ ಸ್ಥಳೀಯ ಬಸ್ಸುಗಳು ಮೂಲಕ ತಲುಪಬಹುದಾಗಿದೆ.
ದೇವಸ್ಥಾನದ ಬಗ್ಗೆ ಇಷ್ಟೆಲ್ಲಾ ವಿಚಾರ ತಿಳಿದುಕೊಂಡ ಮೇಲೆ ಇನ್ನೇಕೆ ತಡಾ ಸಮಯ ಮಾಡಿಕೊಂಡು ಗಿರ್ಜಾಬಂಧ್ ಗೆ ಭೇಟಿ ನೀಡಿ ಮಹಾಮಾಯಾ ದೇವಸ್ಥಾನದ ಸ್ತ್ರೀರೂಪದ ಆಂಜನೇಯ ಸ್ವಾಮಿಯ ಕೃಪಾಶೀರ್ವಾದಕ್ಕೆ ಪಾತ್ರರಾಗೋಣ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ