ಗಂಡ, ಹೆಂಡತಿ ಮತ್ತು ಮುದ್ದಾದ ಮಗಳು ಇದ್ದ ಅದೊಂದು ಸುಂದರವಾದ ಕುಟುಂಬ. ಒಬ್ಬಳೇ ಮಗಳಾಗಿದ್ದರಿಂದ ಬಹಳ ಮುದ್ದಿನಿಂದಲೇ ಗಿಣಿ ಸಾಕುವಂತೆ ಸಾಕಿ ಸಲಹಿದ್ದರು. ನೋಡ ನೋಡುತ್ತಿದ್ದಂತೆಯೇ ಮಗಳು ಬೆಳೆದು ದೊಡ್ಡವಳಾಗುತ್ತಿದ್ದಂತೆಯೇ ಅವಳಿಗೊಂದು ಒಳ್ಳೆಯ ಹುಡುಗನನ್ನು ನೋಡಿ ಮದುವೆ ಮಾಡಬೇಕೆಂದು ನಿರ್ಧರಿಸಿ ತಮ್ಮ ಬಂಧು ಮಿತ್ರರೊಂದಿಗೆ ತಮ್ಮ ಮಗಳಿಗೆ ಅನುರೂಪವಾದಂತಹ ಸಂಬಂಧವಿದ್ದರೆ ತಿಳಿಸಿ ಎಂದೂ ಸೂಚಿಸಿದ್ದರು.
ಅಲ್ಲಿ ಮತ್ತೊಂದು ಸುಂದರ ಸುಸಂಸ್ಕೃತ ಸುಖೀ ಕುಟುಂಬದವರೊಬ್ಬರೂ ಸಹಾ ಅವರ ವಿದ್ಯಾವಂತ, ವಿವೇಕವಂತ ಮಗನಿಗೂ ಸಂಬಂಧವನ್ನು ಹುಡುಕುತ್ತಿದ್ದರು. ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತು ಎನ್ನುವಂತೆ ಎರಡೂ ಕುಟಂಬಕ್ಕೂ ಪರಿಚಯವಿದ್ದವರೊಬ್ಬರು ಆ ಎರಡೂ ಕುಟುಂಬವನ್ನು ಪರಿಚಯಿಸಿ ಒಗ್ಗೂಡಿಸಿದ ಪರಿಣಾಮ ಆ ಮನೆಯ ಮಧುಮಗಳು ಈ ಮನೆಯ ಮಧುಮಗನೊಂದಿಗೆ ವಿವಾಹವಾಗಿ ಎರಡೂ ಕುಟುಂಬಗಳು ಒಂದಾದವು.
ಆರಂಭದ ಮೂರ್ನಾಲ್ಕು ತಿಂಗಳುಗಳ ಕಾಲ ನಿಜವಾಗಿಯೂ ಮಧುಚಂದ್ರದಂತೆಯೇ ಇದ್ದು, ನವದಂಪತಿಗಳು ಬಹಳ ಅನ್ಯೋನ್ಯವಾಗಿದ್ದರು. ಅತ್ತೆ ಮತ್ತು ಮಾವ ಸಹಾ ಮಕ್ಕಳು ಈಗ ತಾನೇ ಮದುವೆಯಾಗಿದ್ದಾರೆ ಅವರಿಗಿಷ್ಟ ಬಂದಂತೆ ಇರಲಿ ಎಂದು ಯಾವುದೇ ರೀತಿಯ ತೊಂದರೆ ಕೊಡುತ್ತಿರಲಿಲ್ಲ. ಇಡೀ ವಾರ ತನ್ನ ಗಂಡನ ಮನೆಯಲ್ಲಿ ಇರುವಾಗ ಸಂತೋಷದಿಂದ ಇರುತ್ತಿದ್ದ ಹೆಂಡತಿ ವಾರಾಂತ್ಯದಲ್ಲಿ ಅಮ್ಮನ ಮನೆಗೆ ಹೋಗಿ ಬಂದ ನಂತರ ಅದೇಕೋ ಏನೋ ಗೊಂದಲಕ್ಕೆ ಬಿದ್ದವಳಂತೆ ಅನ್ಯಮನಸ್ಕಳಾಗಿರುತ್ತಿದ್ದದ್ದನ್ನು ಗಮನಿಸಿದ ತಾಯಿ ಮತ್ತು ಮಗ ಹೊಸದಾಗಿ ಮದುವೆಯಾಗಿ ತವರು ಮನೆ ಬಿಟ್ಟು ಬಂದಿರುವ ಕಾರಣ ಹೀಗಾಗುತ್ತಿರಬಹುದು. ನಂತರದ ದಿನಗಳಲ್ಲಿ ಇವೆಲ್ಲವೂ ಸರಿ ಹೋಗಬಹುದು ಎಂದೇ ಭಾವಿಸಿದ್ದರು.
ಅದೊಂದು ದಿನ ತಾಯಿ ಹೊಸದಾಗಿ ಮದುವೆಯಾಗಿದ್ದ ಮಗಳನ್ನು ತಮ್ಮ ಪರಿಚಯವಿದ್ದ ವಕೀಲರ ಬಳಿ ಕರೆದುಕೊಂಡು ಹೋಗಿ, ವಕೀಲರೇ ನಮ್ಮ ಮಗಳಿಗೆ ವಿಚ್ಚೇದನ ಕೊಡಿಸಿ ಎಂದು ಕೇಳಿಕೊಳ್ಳುತ್ತಾಳೆ. ವಕೀಲರೂ ಸಹಾ ಅ ಮದುವೆಗೆ ಹೋಗಿ ನವದಂಪತಿಗಳಿಗೆ ಆಶೀರ್ವದಿಸಿದ್ದ ಕಾರಣ ಅವರಿಗೆ ಬಹಳ ಅಚ್ಚರಿಯಾಗಿ,
ಏನಮ್ಮಾ ನಿನ್ನ ಗಂಡ ನಿನಗೆ ಹೊಡೆಯುತ್ತಾನಾ ?
ನಿನ್ನ ಗಂಡನಿಗೆ ನಿನ್ನ ಮೇಲೇ ಪ್ರೀತಿ ಇಲ್ಲವೇ? ಬೇರೆ ಯಾವುದಾದರು ಅನೈತಿಕ ಸಂಬಂಧವಿದೆಯೇ?
ನಿಮ್ಮ ಅತ್ತೆ ಮಾವ ಏನಾದರೂ ಹಿಂಸಿಸುತ್ತಿದ್ದಾರಾ?
ಅವರು ನಿಮ್ಮ ತವರಿನಿಂದ ವರದಕ್ಷಿಣೆ ಏನಾದರೂ ತರಲು ಒತ್ತಾಯ ಮಾಡುತ್ತಿದ್ದಾರಾ?
ಎಂದು ಪ್ರಶ್ನೆ ಮೇಲೆ ಪ್ರಶ್ನೆಗಳನ್ನು ಕೇಳುತ್ತಲೇ ಹೋದಾಗ
ಎಲ್ಲದ್ದಕ್ಕೂ ಇಲ್ಲ, ಇಲ್ಲ, ಇಲ್ಲಾ.. ಎಂದೇ ಹೇಳುತ್ತಿದ್ದರೆ
ಇದರ ಮಧ್ಯೆ ಬಾಯಿ ಹಾಕಿದ ತಾಯಿ, ನನ್ನ ಮಗಳು ಅವರ ಗಂಡನ ಮನೆಯಲ್ಲಿ ತುಂಬಾ ಕಷ್ಟ ಪಡುತ್ತಿದ್ದಾಳೆ. ಅವರೆಲ್ಲರೂ ಅವಳಿಗೆ ತುಂಬಾನೇ ಹಿಂಸಿಸುತ್ತಿದ್ದಾರೆ ಎಂದು ಸ್ವಲ್ಪ ಜೋರಾಗಿ ಹೇಳಿದ್ದನ್ನು ಗಮನಿಸಿದ ವಕೀಲರು ಬಿಡೀ ಅಮ್ಮಾ.. ನಿಮ್ಮ ಮಗಳ ಸಮಸ್ಯೆ ಅರ್ಥವಾಯಿತು. ಆ ಸಮಸ್ಯೆಯನ್ನು ಬಗೆ ಹರಿಸುವ ಮೊದಲು ಕೆಲವೊಂದು ಪ್ರಶ್ನೆಗಳಿಗೆ ದಯವಿಟ್ಟು ಉತ್ತರಿಸಿ ಎಂದು ಹೇಳುತ್ತಲೇ,
ನಿಮ್ಮ ಮನೆಯಲ್ಲಿ ನೀವೇ ಆಡುಗೆ ಮಾಡ್ತೀರಲ್ವಾ? ಹಾಗೆ ಅಡುಗೆ ಮಾಡುವಾಗ ನೀವು ಎಷ್ಟು ಸಲಾ ಕೈ ಆಡಿಸುತ್ತೀರೀ? ಎಂದು ಕೇಳಿದರು.
ಹೌದು ಸರ್ ನಾನೇ ಅಡುಗೆ ಮಾಡ್ತೀನಿ. ಅಡುಗೆ ಮಾಡುವಾಗ ತಳ ಹಿಡಿಯದಿರಲಿ ಎಂದು ಕೈ ಆಡಿಸಿ ನಂತರ ಕೈ ಆಡಿಸುವುದಿಲ್ಲ ಎಂದರು.
ಹಾಗೆ ಕೈಯ್ಯಾಡಿಸಿದರೇ ಏನಾಗುತ್ತದೆ? ಎಂದು ಕೇಳಿದ ಮರು ಪ್ರಶ್ನೆಗೆ
ಹುಡುಗಿಯ ತಾಯಿ ಇಲ್ಲಾ ಸರ್ ಹಾಗೆ ಪದೇ ಪದೇ ಕೈಯ್ಯಾಡಿಸುತ್ತಿದ್ದಲ್ಲಿ ಅಡುಗೆ ಹಳಸಿಹೋಗುತ್ತದೆ ಎಂದರು.
ಅಮ್ಮಾ ಇದೇ ಕೆಲಸವನ್ನು ನೀವು ನಿಮ್ಮ ಮಗಳ ಜೀವನದಲ್ಲಿಯೂ ಅಳವಡಿಸಿಕೊಂಡಲ್ಲಿ ಆಕೆಯ ಜೀವನ ಹಸನಾಗಿ ಇರುತ್ತದೆ. ಹೌದು ನಿಜ ನಿಮ್ಮ ಒಬ್ಬಳೇ ಮಗಳನ್ನು ಬಹಳ ಮುದ್ದಿನಿಂದ ಸಾಕಿ ಸಲಹಿದ್ದೀರಿ. ಎಲ್ಲಿ ನೆಲದ ಮೇಲೆ ಕಾಲಿಟ್ಟರೆ ಆಕೆಯ ಪಾದಗಳು ಸವೆದು ಹೋಗಬಹುದು ಎನ್ನುವಷ್ಟರ ಮಟ್ಟಿಗೆ ಸಾಕಿ ಸಲಹಿದ್ದೀರಿ. ಆಕೆಗೆ ಒಳ್ಳೆಯ ವಿದ್ಯೆ, ಸಂಸ್ಕಾರ ಮತ್ತು ಸಂಸ್ಕೃತಿಗಳನ್ನು ಕಲಿಸಿದ್ದೀರಿ. ನೀವೀಗ ಅರ್ಥ ಮಾಡಿ ಕೊಳ್ಳಬೇಕಾದ ಸತ್ಯವೇನೆಂದರೆ ಮದುವೆಗೆ ಮುಂಚೆ ಆಕೆ ನಿಮ್ಮ ಮಗಳು. ಮದುವೆ ಆದ ನಂತರ ಆಕೆ ಮತ್ತೊಬ್ಬರ ಮನೆಯ ಸೊಸೆ. ಅಲ್ಲಿ ಆಕೆಗೆ ಅದ ಜವಾಬ್ಧಾರಿಗಳು ಇರುತ್ತವೆ. ಸಣ್ಣ ಮಗು ಆರಂಭದಲ್ಲಿ ನಡಿಗೆ ಕಲಿಯುವಾಗ ಬಿದ್ದು ಎದ್ದು ನಂತರ ತನ್ನ ಪಾಡಿಗೆ ನಡಿಗೆಯನ್ನು ಕಲಿತು ಕೊಳ್ಳುತ್ತದೆ. ಮಗು ಬೀಳುತ್ತದೆ ಎಂದು ಅದನ್ನು ಕಂಕಳಲ್ಲಿ ಎತ್ತಿಕೊಂಡೇ ಹೋಗುತ್ತಿದ್ದಲ್ಲಿ ಅದು ಎಂದಿಗೂ ಸ್ವತಂತ್ರ್ಯವಾಗಿ ನಡಿಗೆಯನ್ನು ಕಲಿಯುವುದೇ ಇಲ್ಲ ಅಲ್ಲವೇ?.
ಆರಂಭದಲ್ಲಿ ಅದು ಆಕೆಗೆ ಗಂಡನ ಮನೆ ಎನಿಸಿದರು ಕ್ರಮೇಣ ಅದು ಆಕೆಯ ಮನೆಯೇ ಅಗುತ್ತದೆ. ಕೆಲ ವರ್ಷಗಳ ಹಿಂದೆ ನೀವೂ ಅದೇ ರೀತಿಯಲ್ಲಿಯೇ ಗಂಡನ ಮನೆಗೆ ಬಂದು ಎಲ್ಲವನ್ನೂ ಕಲಿತುಕೊಂಡಿರಲಿಲ್ಲವೇ? ಅದೇ ರೀತಿಯಲ್ಲಿ ಆಕೆಯೂ ಕೆಲ ದಿನಗಳಲ್ಲಿ ಕಲಿತುಕೊಳ್ಳುತ್ತಾಳೆ. ಆಕೆ ಖುದ್ದಾಗಿ ನಿಮ್ಮ ಬಳಿ ಯಾವುದಾದರೂ ಸಮಸ್ಯೆಗಳನ್ನು ಹೇಳಿಕೊಂಡಲ್ಲಿ ಮಾತ್ರವೇ ಅದಕ್ಕೆ ಸೂಕ್ತವಾದ ಪರಿಹಾರ ನೀಡಬೇಕಷ್ಟೇ ಹೊರತು, ಅನಾವಶ್ಯಕವಾಗಿ ಆಕೆಯ ಸಂಸಾರದಲ್ಲಿ ಮೂಗು ತೂರಿಸಿಕೊಂಡು ಹೋದಲ್ಲಿ, ಅವಳು ತನ್ನ ಗಂಡನ ಮನೆಯಲ್ಲಿ ಹೊಂದಿಕೊಳ್ಳಲು ಸಾಧ್ಯವಾಗದೇ ಸಂಸಾರ ಒಡೆದು ಹೋಗಿ ಆಕೆ ಖಿನ್ನತೆಗೆ ಹೋಗುವ ಸಾಧ್ಯತೆಯೂ ಇದೆ.
ಮದುವೆಯಾಗಿ ಕೇವಲ ಮೂರ್ನಾಲ್ಕು ತಿಂಗಳುಗಳಾಗಿವೆ. ಆಕೆ ಅವಳ ಗಂಡನ ಮನೆಯವರ ನಡುವಳಿಕೆಯನ್ನು ಅರ್ಥಮಾಡಿಕೊಂಡು ಅದಕ್ಕೆ ಅನುಗುಣವಾಗಿ ಹೊಂದಿಕೊಂಡು ಹೋಗಲು ಸಮಯಾವಕಾಶ ಕೊಡಬೇಕೇ ಹೊರತು, ಅವಳಿಗೆ ಈ ರೀತಿಯಾಗಿ ತಪ್ಪು ಹೆಜ್ಜೆಯನ್ನು ಇಡುವಂತೆ ಮಾಡಬೇಡಿ, ಸಂಬಂಧವನ್ನು ಒಗ್ಗೂಡಿಸಲು ಪ್ರಯತ್ನಿಸಬೇಕೇ ಹೊರತು ಸಂಬಂದ ಒಡೆಯುವ ಕೆಲಸವನ್ನು ದಯವಿಟ್ಟು ಮಾಡಬೇಡಿ ನಿಮಗೆ ಮತ್ತು ನಿಮ್ಮ ಮಗಳಿಗೆ ಶುಭವಾಗಲಿ ಎಂದು ಹೇಳಿ ಕಳುಹಿಸಿದರು.
ಇನ್ನು ಹೊಸದಾಗಿ ಹೆಣ್ಣು ಮಗಳದ್ದೂ ಒಂದಷ್ಟು ಜವಾಬ್ಧಾರಿ ಇರುತ್ತದೆ. ಆಕೆ ಹೇಗೆ ತನ್ನ ಗಂಡನ ಮನೆಯವರನ್ನು ಅರ್ಥಮಾಡಿಕೊಳ್ಳುತ್ತಾಳೋ ಹಾಗೆಯೇ ಆಕೆಯ ಪತಿಯೂ ತನ್ನ ಮನೆಯವರನ್ನು ಅರ್ಥ ಮಾಡಿಕೊಳ್ಳಲು ಸಮಯ ಕೊಡಬೇಕು. ಒಬ್ಬರ ಬಗ್ಗೆ ಮತ್ತೊಬ್ಬರ ಅಭಿಪ್ರಾಯಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುವ ಕಾರಣ, ಆಕೆ ತಾನೇ ತನ್ನ ಮನೆಯವರ ಬಗ್ಗೆ ಆಭಿಪ್ರಾಯಗಳನ್ನು ಕಟ್ಟಿಕೊಡುವ ಮೂಲಕ ತಪ್ಪು ಸಂದೇಶ ರವಾನಿಸಬಾರದು.
ಹೊಸಾ ಮಧುಮಗಳನ್ನು ನೆನಪಿಸಿಕೊಂಡಾಗ ಈ ಚಿತ್ರದಲ್ಲಿ ಧ್ಯಾನ್ಯಗಳನ್ನು ತುಂಬಿದ್ದ ಡಬ್ಬದಲ್ಲಿ ಸಿಕ್ಕಿಕೊಂಡ ಇಲಿ ಮರಿಯ ಕಥೆ ನೆನಪಾಗುತ್ತದೆ ಅಲ್ಲೊಂದು ಇಲಿ ಮರಿ ಧಾನ್ಯಗಳಿಂದ ತುಂಬಿದ ಡಬ್ಬದೊಳಗೆ ಹೋದ ತಕ್ಷಣ ತನ್ನಷ್ಟು ಸುಖೀ ಯಾರೋ ಇಲ್ಲಾ ಎಂದು ಭಾವಿಸಿ ಬೇರಾವುದನ್ನೂ ಯೋಚಿಸದೇ ತನ್ನಷ್ಟಕ್ಕೆ ತಾನು ಸದ್ದಿಲ್ಲದೇ ಧಾನ್ಯಗಳನ್ನು ತಿನ್ನತೊಡಗಿತು. ಡಬ್ಬಿಯಲ್ಲಿ ಧಾನ್ಯ ಕಡಿಮೆ ಯಾಗುತ್ತಿದ್ದಂತೆಯೇ ಅದಕ್ಕೆ ಅರಿವಿಲ್ಲದೆಯೇ ಅದು ಡಬ್ಬದಲ್ಲಿ ಬಂಧಿಯಾಗಿ ಹೊರ ಬರಲು ಗೊತ್ತಾಗದೇ ಪರದಾಡತೊಡಗಿತು.
ತವರಿನ ಬೆಂಬಲ ತನಗೆ ಸದಾಕಾಲವೂ ಇರುತ್ತದೆ ಎಂದು ಭಾವಿಸಿದ ಗಂಡನ ಮನೆಗೆ ಹೋದ ಮಗಳು ಆರಂಭದಲ್ಲಿ ತನ್ನ ಗಂಡನ ಮನೆಯಲ್ಲಿ ನಡೆಯುವ ಪ್ರತಿಯೊಂದು ಸಣ್ಣ ಪುಟ್ಟ ವಿಚಾರಗಳನ್ನೂ ತನ್ನ ತಾಯಿಯ ಮನೆಗೆ ಹೇಳುತ್ತಲೇ ಹೋಗುವ ಮುಖಾಂತರ ಆಕೆಗೇ ಅರಿವಿಲ್ಲದಂತೆಯೇ ದಬ್ಬದಲ್ಲಿ ಸಿಕ್ಕಿಕೊಂಡ ಇಲಿ ಮರಿಯಂತೆ ತಾನೇ ಸಿಕ್ಕಿ ಹಾಕಿಕೊಂಡು ಹೊರಬರಲಾಗದೇ ಒದ್ದಾಡುವಂತಹ ಪರಿಸ್ಥಿತಿ ತಂದುಕೊಳ್ಳುತ್ತಾಳೆ.
ಅತ್ತ ದರಿ ಇತ್ತ ಪುಲಿ ಎನ್ನುವಂತೆ ಅತ್ತ ತವರನ್ನು ಬಿಡಲಾಗದೇ ಇತ್ತ ಗಂಡನ ಮನೆಯಲ್ಲಿಯೂ ಹೊಂದಿಕೊಳ್ಳಲಾಗದೇ ವಿಲಿ ವಿಲಿ ಒದ್ದಾಡುವಂತಾಗುತ್ತದೆ. ಈ ಪರದಾಟ ಕೆಲವೊಮ್ಮೆ ಅತಿರೇಕಕ್ಕೂ ಹೋದಂತಹ ಉದಾಹರಣೆಗಳು ಹಲವಾರಿವೆ. ಹಾಗಾಗಿ ತಾಯಂದಿರು ತಮ್ಮ ಮಗಳ ಮೇಲೆ ಪ್ರೀತಿ ಇರಬೇಕೆಯೇ ಹೊರತು, ಅತೀಯಾದ ಕರಡಿ ಪ್ರೀತಿಯಿಂದ ಮಗಳ ಬಾಳಿನಲ್ಲಿ ಖಳನಾಯಕಿಯಾಗಬಾರದು. ಅದೇ ರೀತಿ ಮಗಳಿಗೂ ಸಹಾ ತವರಿನ ಮೇಲೆ ಪ್ರೀತಿ ಇರಬೇಕೇ ಹೊರತು, ಕೊಟ್ಟ ಹೆಣ್ಣು ಕುಲಕ್ಕೆ ಹೊರಗು ಎನ್ನುವ ಮಾತನ್ನು ಸದಾಕಾಲವೂ ಮನಸ್ಸಿನಲ್ಲಿಟ್ಟು ಕೊಂಡು ತನ್ನ ಮನೆಯಲ್ಲಿ ಎಲ್ಲರೊಂದಿಗೆ ಹೊಂದಿಕೊಂಡು ತನ್ನ ಜೀವನವನ್ನು ಸರಿ ದಾರಿಗೆ ಕೊಂಡೊಯ್ಯುವ ಮೂಲಕ ಹೋದ ಮನೆಗೂ, ತನ್ನ ತವರಿಗೂ ಕೀರ್ತಿ ತರುವಂತಾಗಬೇಕು.
ಏನಂತೀರಿ?
ನಿಮ್ಮವನೇ ಉಮಾಸುತ
ಸರಿಯಾದ ಮಾತು… ಸರ್
LikeLike