ಆಂಗ್ಲ ಭಾಷೆಯಲ್ಲಿ ಒಂದು ನಾಣ್ಣುಡಿ ಇದೆ. success has many fathers, failure is an orphan. ಅಂದರೆ, ಯಾರಾದರೂ ಯಶಸ್ಸನ್ನು ಗಳಿಸಿದಲ್ಲಿ ಅದಕ್ಕೆ ಪ್ರತಿಫಲವನ್ನು ಬಯಸುವವರೇ ಹೆಚ್ಚಿನವರಿರುತ್ತಾರೆ. ಅದೇ ತಪ್ಪಾದಲ್ಲಿ ಅದಕ್ಕೆ ಹೊಣೆಗಾರರಾಗಲು ಯಾರೂ ಬಯಸುವುದಿಲ್ಲ. ಈಗಾಗಲೇ ನಮಗೆಲ್ಲರಿಗೂ ಗೊತ್ತಿರುವಂತೆ ಈ ಬಾರಿಯ ಓಲಂಪಿಕ್ಸ್ ಪಂದ್ಯಾವಳಿಯಲ್ಲಿ ಭಾರತಕ್ಕೆ ಮೊದಲ ಪದಕವನ್ನು ಗಳಿಸುವ ಮೂಲಕ ಹೆಮ್ಮೆ ತಂದಿದ್ದು ವೇಯ್ಟ್ ಲಿಫ್ಟರ್ ಸೈಖೋಮ್ ಮೀರಾಬಾಯಿ ಚಾನು. ಈ ಪದಕದ ಹಿಂದೆ ಇರುವ ಪರಿಶ್ರಮ ನಿಜಕ್ಕೂ ಅಧ್ಭುತ ಮತ್ತು ಅನನ್ಯವೇ ಸರಿ. ಅದಕ್ಕಿಂತಲೂ ಹೆಮ್ಮೆ ಪಡಬೇಕಾಗಿರುವುದು ಆಕೆ ತನ್ನ ಗೆಲುವಿನ ಪಾಲನ್ನು ಅರ್ಪಿಸಿರುವ ಪರಿ ನಿಜಕ್ಕೂ ಅಭಿನಂದನಾರ್ಹ. ಹಾಗಾದರೇ ಆಕೆ ಅದನ್ನು ಯಾರಿಗೆ ಅರ್ಪಿಸಿದ್ದಾರೆ ಎನ್ನುವುದನ್ನು ತಿಳಿಯೋಣ ಬನ್ನಿ.
ಸೈಖೋಮ್ ಮೀರಾಬಾಯಿ ಚಾನು 8 ಆಗಸ್ಟ್ 1994 ರಂದು ಮಣಿಪುರದ ಇಂಫಾಲ್ ನಗರದಿಂದ ಸುಮಾರು 30 ಕಿಮೀ ದೂರದಲ್ಲಿ ಇರುವ ನಾಂಗ್ಪಾಕ್ ಕಾಕ್ಚಿಂಗ್ ಎಂಬ ಗ್ರಾಮದಲ್ಲಿ ಮೀಟೇಯ್ ಕುಟುಂಬದಲ್ಲಿ ಜನಿಸುತ್ತಾರೆ. ಮನೆಯಲ್ಲಿ ನಿಜಕ್ಕೂ ಕಡು ಬಡತನವಿತ್ತು. ಆಕೆ ಸುಮಾರು 12 ವರ್ಷದವಳಿದ್ದಾಗ ಆಕೆಯ ಮನೆಯಲ್ಲಿ ಅಡುಗೆಯನ್ನು ಮಾಡಲು ಉರುವಲುಗಳನ್ನು ತರಲು ಹತ್ತಿರದ ಕಾಡಿನಿಂದ ಉರುವಲುಗಳನ್ನು ಅಯ್ದುಕೊಂಡು ಬರುವಾಗ ಆಕೆ ತನ್ನ ಅಣ್ಣನಿಗಿಂತಲೂ ಹೆಚ್ಚಿನ ಭಾರದ ಹೊರೆಗಳನ್ನು ಹೊತ್ತು ತರುತ್ತಿದ್ದನ್ನು ಗಮನಿಸಿದ ಆಕೆಯ ಕುಟುಂಬ ಆಕೆಯನ್ನು ಕ್ರೀಡೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿತು.
ಮಣಿಪುರದಲ್ಲಿ ಮಕ್ಕಳಿಗೆ ಅವರಿಗಿಷ್ಟ ಪಡುವೆ ಕ್ರೀಡೆಯನ್ನು ಆರಿಸಿಕೊಳ್ಳುವ ನಿರ್ಧಾರವನ್ನು ಕೊಡಲಾಗುತ್ತದೆ ಮತ್ತು ಅದಕ್ಕೆ ಸೂಕ್ತವಾದ ತರಭೇತಿಯನ್ನೂ ಸಹಾ ನೀಡಲಾಗುತ್ತದೆ. ಹಾಗಾಗಿಯೇ ಮಣಿಪುರ ನಮ್ಮ ದೇಶಕ್ಕೆ ಅನೇಕ ಹೆಮ್ಮೆಯ ಕ್ರೀಡಾಪಟುಗಳನ್ನು ಕೊಡುಗೆಯಾಗಿ ನೀಡಿದೆ. ಅದೇ ರೀತಿ ಮೀರಾಬಾಯಿ ಚಾನು ತನ್ನ ಮನೆಯಿಂದ ಇಂಫಾಲ್ನಿಂದ 30 ಕಿಮೀ ದೂರದಲ್ಲಿರುವ ಕ್ರೀಡಾ ತರಭೇತಿ ಕೇಂದ್ರಕ್ಕೆ ಬಂದು ಆರಂಭದಲ್ಲಿ ಬಾಕ್ಸಿಂಗ್ ಆಟವನ್ನು ಕಲಿಯಲು ಇಚ್ಚಿಸಿದರು ಆಕೆ ಬಹಳವಾಗಿ ಕುಳ್ಳಗಿದ್ದ ಕಾರಣ ಬೇರೊಂದು ಆಟವನ್ನು ಆಯ್ಕೆ ಮಾಡಿಕೊಳ್ಳಲು ಅಲ್ಲಿನ ತರಭೇತುದಾರರು ಸೂಚಿಸುತ್ತಾರೆ. ಚಿಕ್ಕ ವಯಸ್ಸಿನಲ್ಲಿ ಭಾರವಾದ ಮರದ ದಿಮ್ಮಿಗಳನ್ನು, ಊರುವಲುಗಳನ್ನು ಎತ್ತುತ್ತಿದ್ದನ್ನು ನೆನಪಿಸಿಕೊಂಡು ಭಾರ ಎತ್ತುವ ಕ್ರೀಡೆಯನ್ನು ಆಯ್ಕೆ ಮಾಡಿಕೊಂಡಾಗ ಭಾರತದ ಮಾಜಿ ಅಂತರಾಷ್ಟ್ರೀಯ ವೇಟ್ ಲಿಫ್ಟರ್ ಮತ್ತು ತರಬೇತುದಾರರಾಗಿದ್ದ ಅನಿತಾ ಅವರ ಗಮನಕ್ಕೆ ಚಾನು ಬಂದಿದ್ದೇ ತಡಾ ಅವರ ಬದುಕಿನಲ್ಲಿ ಬಾರೀ ಬದಲಾವಣೆಯಾಗುತ್ತದೆ.
2020 ರ ಟೋಕಿಯೊ ಒಲಿಂಪಿಕ್ಸ್ನಲ್ಲಿ ಮಹಿಳೆಯರ 49 ಕೆಜಿಯಲ್ಲಿ ಬೆಳ್ಳಿ ಪದಕ ಗೆಲ್ಲುವುದಕ್ಕೆ ಮೊದಲು, ಮೀರಾಬಾಯಿ ಚಾನು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ವಿಶ್ವ ಚಾಂಪಿಯನ್ಶಿಪ್ ಮತ್ತು ಬಹು ಪದಕಗಳನ್ನು ಗೆದ್ದಿದ್ದಾರೆ. ಹೀಗಾಗಿ ಭಾರತ ಸರ್ಕಾರವು ಕ್ರೀಡೆಗೆ ಆಕೆ ನೀಡಿರುವ ಕೊಡುಗೆಗಳನ್ನು ಗಮನಿಸಿ ಈಗಾಗಲೇ ಪದ್ಮಶ್ರೀ ನೀಡಿ ಗೌರವಿಸಿದೆಯಲ್ಲದೇ, 2018 ರಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ನೀಡಿ ಪ್ರೋತ್ಸಾಹಿಸಿದೆ.
ಭಾರತ ಸರ್ಕಾರ ಆಕೆಯ ಮೇಲಿಟ್ಟ ಭರವಸೆಯನ್ನು ಹುಸಿಗೊಳಿಸದೇ, ಟೋಕಿಯೋ ಓಲಂಪಿಕ್ಸಿನಲ್ಲಿ ರಜತ ಪದಕವನ್ನು ಗೆದ್ದು ಭಾರತಕ್ಕೆ ಹಿಂದಿರುಗಿದಾಗ ಮೀರಾಬಾಯಿಯವರಿಗೆ ಭರ್ಜರಿಯಾದ ಸ್ವಾಗತವನ್ನು ನೀಡಿದ್ದಲ್ಲದೇ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಲ್ಲದೇ ಅನೇಕ ಸಂಘ ಸಂಸ್ಥೆಗಳೂ ಬಾರಿ ಮೊತ್ತದ ಬಹುಮಾನಗಳ ಸುರಿಮಳೆಯನ್ನು ಸುರಿದಿದೆ. ಮೀರಾ ಇಲ್ಲಿಯವರೆಗೆ ತಲುಪಲು ಜೀವನದಲ್ಲಿ ಅನೇಕ ಸಂಘರ್ಷಗಳನ್ನು ಮೆಟ್ಟಿ ನಿಂತಿದ್ದಾರೆ. ಅಕೆಯ ಕಷ್ಟದ ಸಮಯದಲ್ಲಿ ಮೀರಾ ಅವರಿಗೆ ಹಲವರು ಜನರು ಪತ್ಯಕ್ಷವಾಗಿಯೋ ಇಲ್ಲವೇ ಪರೋಕ್ಷವಾಗಿ ಸಹಾಯವನ್ನು ಮಾಡಿದ್ದಾರೆ. ಹಾಗೆ ಆಕೆಗೆ ಸಹಾಯ ಮಾಡಿದವರಲ್ಲಿ ಟ್ರಕ್ ಚಾಲಕರು ಇದ್ದಾರೆ ಎಂದರೆ ಅಚ್ಚರಿ ಆಗುತ್ತದೆ ಅಲ್ಲವೇ?
ತಮ್ಮ ಊರಾದ ನಾಂಗ್ಪಾಕ್ ಕಾಕ್ಚಿಂಗ್ ನಿಂದ 30 ಕಿಮೀ ದೂರದ ಇಂಫಾಲ್ ನಗರ ದಲ್ಲಿರುವ ಖುಮಾನ್ ಲಂಪಕ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿರುವ ತರಬೇತಿ ಶಿಬಿರಕ್ಕೆ ಪ್ರತಿದಿನವೂ ಬರಲು ಆಕೆ ಬಸ್ ಮುಖಾಂತರ ಬರಬೇಕಿತ್ತು. ಆದರೆ ಮನೆಯಲ್ಲಿದ್ದ ಕಿತ್ತು ತಿನ್ನುವ ಬಡತನದಿಂದಾಗಿ ಅಕೆಗೆ ಬಸ್ ಪ್ರಯಾಣದ ಹಣವನ್ನು ಹೊಂದಿಸಲಾಗದೇ ಮನೆಯಲ್ಲಿ ಕೊಡುತ್ತಿದ್ದ 10/20 ರೂಪಾಯಿಗಳನ್ನು ಆದೇ ದಾರಿಯಲ್ಲಿ ಹೋಗುತ್ತಿದ್ದ ಟ್ರಕ್ ಚಾಲಕರಿಗೆ ನೀಡಿ ಪ್ರಯಾಣಿಸುತ್ತಿದ್ದರು. ಮೊದ ಮೊದಲು ಆಕೆಯಿಂದ ಹಣವನ್ನು ಸ್ವೀಕರಿಸುತ್ತಿದ್ದ ಟ್ರಕ್ ಚಾಲಕರಿಗೆ ಕೆಲ ದಿನಗಳ ನಂತರ ಆಕೆಯ ಪರಿಶ್ರಮವು ಅರ್ಧವಾಗಿ ಬಹುತೇಕ ಟ್ರಕ್ ಚಾಲಕರು ಆಕೆಗೆ ಸ್ನೇಹಿತರಾಗಿ ಅಕೆಯ ಬಳಿ ಹಣವನ್ನೇ ತೆಗೆದುಕೊಳ್ಳದೇ ಉಚಿತವಾಗಿ ಕರೆದುಕೊಂಡು ಹೋಗಲಾರಂಭಿಸಿದರು. ಈ ಸ್ನೇಹ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಟ್ರಕ್ ಆಕೆಯ ಮನೆಯ ಮುಂದೆ ಬಂದ ತಕ್ಷಣ ಜೋರಾಗಿ ಹಾರ್ನ್ ಮಾಡಿ ಅಕೆಯ ಮನೆಯಿಂದಲೇ ಕರೆದುಕೊಂಡು ಹೋಗುವಷ್ಟ ಮಟ್ಟಿಗಿನ ಗೆಳೆತನ ಬೆಳೆದಿತ್ತು. ಹಾಗಾಗಿ ಮೀರಾಬಾಯಿ ಚಾನು ನೆಮ್ಮದಿಯಿಂದ ಯಾವುದೇ ಭಯ, ಭೀತಿ ಅಥವಾ ಸಂಕೋಚವಿಲ್ಲದೇ ಧೈರ್ಯದಿಂದ ತರಬೇತಿ ಶಿಬಿರಕ್ಕೆ ಹೋಗಿ ತನ್ನ ಕಠಿಣವಾದ ತರಭೇತಿ ಮುಗಿಸಿ ಮನೆಗೆ ಹಿಂದಿರುಗುವ ಸಮಯದಲ್ಲಿ ಮತ್ತೊಂದು ಪರಿಚಿತ ಟ್ರಕ್ ಮುಖಾಂತರ ಮನೆಗೆ ಬರುತ್ತಿದ್ದರು.
ಟ್ರಕ್ ಚಾಲಕರು ಮತ್ತು ಮೀರಾಳ ನಡುವಿನ ಈ ಅವಿನಾಭಾವ ಸಂಬಂಧದಿಂದಾಗಿ ಟ್ರಕ್ ಚಾಲಕರು ಉಚಿತವಾಗಿ ಕರೆದುಕೊಂಡು ಹೋಗಿ ಕರೆದುಕೊಂಡು ಬರುತ್ತಿದ್ದ ಕಾರಣ, ಪ್ರಯಾಣಕ್ಕೆಂದು ಮನೆಯಲ್ಲಿ ಕೊಡುತ್ತಿದ ಹಣ ಉಳಿತಾಯವಾಗಿ ಅದೇ ಹಣದಿಂದಲೇ ತರಬೇತಿಯ ಮಧ್ಯದಲ್ಲಿ ಇಷ್ಟ ಪಟ್ಟಿದ್ದನ್ನು ತಿನ್ನಲು ಸಹಕಾರಿಯಾಗಿತು. ಹಾಗಾಗಿ ಆಕೆ ತನ್ನ ಈ ಗೆಲುವಿನ ಪಾಲನ್ನು ತನ್ನ ತರಭೇತಿ ಸಮಯದಲ್ಲಿ ನಿಸ್ವಾರ್ಥವಾಗಿ ಸಹಾಯ ಮಾಡಿದ ಆ ಎಲ್ಲಾ ಟ್ರಕ್ ಚಾಲಕರಿಗೆ ಅರ್ಪಿಸಿರುವುದಲ್ಲದೇ,ಅಕೆ ಅವರೆಲ್ಲರನ್ನು ತನ್ನ ಮನೆಗೆ ಕರೆಸಿ ಅವರಿಗೆ ಸತ್ಕಾರ ಮಾಡುವ ಮೂಲಕ ಉಪಕಾರ ಸ್ಮರಣೆ ಮಾಡಿರುವುದು ನಿಜಕ್ಕೂ ಅನನ್ಯವೇ ಸರಿ.
ಎಷ್ಟೇ ಕಷ್ಟಗಳಿದ್ದರೂ ಗೆಲ್ಲುವ ಛಲ ಮತ್ತು ಮನಸ್ಸಿದ್ದರೆ ಏನು ಬೇಕಾದರೂ ಸಾಧಿಸಲು ಸಾಧ್ಯ ಎನ್ನುವುದಕ್ಕೆ ಮೀರಾಬಾಯಿ ಚಾನು ಅವರ ಬದುಕೇ ಜ್ವಲಂತ ಉದಾಹರಣೆ. ಆ ರೀತಿಯಾಗಿ ಛಲ ಬಿಡದ ತ್ರಿವಿಕ್ರಮನಂತೆ ಸಾಧನೆ ಮಾಡಲು ಹೊರಟಿರುವವರಿಗೆ ಯಾರದ್ದೋ ಮುಖಾಂತರ ಸಹಾಯ ಮಾಡಿಸಲು ಭಗವಂತನ ಅನುಗ್ರಹ ಸದಾಕಾಲವೂ ಇರುತ್ತದೆ ಎನ್ನುವುದಕ್ಕೆ ಈ ಟ್ರಕ್ ಚಾಲಕರ ನಿಸ್ವಾರ್ಥ ಸೇವೆಯೇ ಸಾಕ್ಷಿ. ಜೀವನದಲ್ಲಿ ಎಷ್ಟೇ ಎತ್ತರಕ್ಕೇರಿದರು ತನ್ನ ಹುಟ್ಟೂರು ಮತ್ತು ತನಗೆ ಸಹಾಯ ಮಾಡಿದವರನ್ನು ಮರೆಯದೇ ಅವರ ಉಪಕಾರ ಸ್ಮರಣೆ ಮಾಡಿರುವುದು ಎಲ್ಲರಿಗೂ ಅನುಕರಣೀಯವಾಗಿದೆ ಎಂದರೂ ತಪ್ಪಾಗಲಾರದು. ಇದೇ ಅಲ್ವೇ ನಮ್ಮ ಸನಾತನ ಸಂಸ್ಕಾರ ಮತ್ತು ಸಂಪ್ರದಾಯ.
ಮೀರಾಬಾಯಿ ಚಾನು ಅವರ ಸಾಧನೆ ಮತ್ತು ಅವರ ಸಂಸ್ಕಾರಗಳಿಂದ ಪ್ರೇರಣೆಗೊಂಡು ಇನ್ನೂ ಲಕ್ಷಾಂತರ ಕ್ರೀಡಾಪಟುಗಳು ನೂರಾರು ಕ್ರೀಡಾಕೂಟದಲ್ಲಿ ಸಾವಿರಾರು ಪದಕಗಳನ್ನು ಗೆಲ್ಲುವ ಮೂಲಕ ನಮ್ಮ ಭಾರತ ದೇಶದ ಹಿರಿಮೆ ಮತ್ತು ಗರಿಮೆಯನ್ನು ಎತ್ತಿಹಿಡಿಯುವಂತಾಗಲಿ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
ಕಣ್ಣೀರು ತರಿಸುವಂತ ಘಟನೆಗಳು. ಸಣ್ಣ ಸಣ್ಣ ಸಹಾಯ ಮಾಡಿದವರ ನೆನಪನ್ನು ಇರಿಸಿಕೊಳ್ಳದಿರುವ ಈ ದಿನದಲ್ಲಿ. ಮೀರಾಬಾಯಿ ಚಾನು ಅವರು ಮಾಡಿದ ಕೃತಜ್ಞತೆಯ ಕೆಲಸ ಎಲ್ಲರನ್ನು ನಾಚಿಸುವಂತೆ ಮಾಡಿದೆ. ಭಾರತಾಂಬೆಯ ಪುತ್ರಿಗೆ ನಾವು ಶಿರ ಬಾಗಿ ನಮಿಸುವೆವು
LikeLiked by 1 person
ನಿಜವಾಗಲೂ ಹೆಮ್ಮೆಯೆನಿಸುತ್ತದೆ
LikeLiked by 1 person