ಭಾವೈಕ್ಯತೆಯ ರಾಯಭಾರಿ ಅಬ್ದುಲ್ ಕಲಾಂ

KALAM5

ಈ ದೇಶ ಕಂಡ ಅತ್ಯುತ್ತಮ ರಾಷ್ಟ್ರಪತಿಗಳಲ್ಲಿ ಒಬ್ಬರಾದ ಶ್ರೀ ಅಬ್ದುಲ್ ಕಲಾಂ ಅವರ ಹೃದಯ ಶ್ರೀಮಂತಿಕೆ ಮತ್ತು ಈ ದೇಶದ ಧರ್ಮಾಚಾರಣೆಗಳಲ್ಲಿ ಅವರಿಗಿದ್ದ ಅಪರಿಮಿತ ನಂಬಿಕೆಯನ್ನು ಅವರ ಕಾಲದಲ್ಲಿ ರಾಷ್ಟ್ರಪತಿ ಭವನದ ಕಂಟ್ರೋಲರ್ ಆಗಿದ್ದ ಲೆಫ್ಟಿನೆಂಟ್ ಕರ್ನಲ್ ಅಶೋಕ್ ಕಿಣಿ ಎಚ್ ಆವರ ಅಂಗ್ಲ ಭಾಷೆಯ ಲೇಖನ ನಿಜಕ್ಕೂ ಹೃದಯವನ್ನು ತಟ್ಟಿದ ಕಾರಣ ಅದರ ಭಾವಾನುವಾವನ್ನು‌ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಆಗ ತಾನೇ ಶ್ರೀ ಕಲಾಂ ಅವರು ರಾಷ್ಟ್ರಪತಿಗಳಾಗಿ ಪದವಿಯನ್ನು ಸ್ವೀಕರಿಸಿದ್ದರು. ಅವರಿಗೆ ರಾಷ್ಟ್ರಪತಿ ಭವನಕ್ಕೆ ಮೊದಲ ಬಾರಿಗೆ ಸನಾತನ ಧರ್ಮಗುರುಗಳಾದ ಕಂಚೀ ಪೀಠದ ಶಂಕರಾಚಾರ್ಯಾರಾಗಿದ್ದ ಶ್ರೀ ಶ್ರೀ ಜಯೇಂದ್ರ ಸರಸ್ವತಿಗಳನ್ನು ರಾಷ್ಟ್ರಪತಿಗಳ ಭವನಕ್ಕೆ ಕರೆಸಿ ಅವರಿಗೆ ಸೂಕ್ತವಾದ ಗೌರವವನ್ನು ನೀಡಲು ನಿರ್ಧರಿಸಿದ್ದರು. ಹಾಗಾಗಿ ಅವರು ಈ ನಿಟ್ಟಿನಲ್ಲಿ ರಾಷ್ಟ್ರಪತಿ ಭವನದ ರೀತಿ ರಿವಾಜು (ಪ್ರೋಟೋಕಾಲ್) ತಿಳಿದುಕೊಳ್ಳಲು ನನ್ನನ್ನು ಆವರ ಬಳಿಗೆ ಕರೆಸಿಕೊಂಡಾಗ, ನಾನು ಸಂತರನ್ನು ರಾಷ್ಟ್ರ ಪತಿ ಭವನದ ಮುಖ್ಯದ್ವಾರದಲ್ಲಿ ಎದುರುಗೊಂಡು ಅವರನ್ನು ನಿಮ್ಮ ಬಳಿಗೆ ಕರೆದು ಕೊಂಡು ಬರುತ್ತೇನೆ ಎಂದು ತಿಳಿಸಿದಾಗ, ಕೆಲವು ನಿಮಿಷಗಳ ಆಳವಾದ ಆಲೋಚನೆಯ ನಂತರ, ನಾನೇ ಖುದ್ದಾಗಿ ಅವರನ್ನು ಕರೆತಂದರೆ ಏನಾಗುತ್ತದೆ? ಎಂದು ಮುಗ್ಧ ಮಗುವಿನ ರೀತಿಯಲ್ಲಿ ಕೇಳಿದರು.

KALAM4

ಅದಕ್ಕುತ್ತರವಾಗಿ ಸರ್ ನೀವು ಈ ದೇಶದ ರಾಷ್ಟ್ರಪತಿಗಳು ಎಂದು ನೆನಪಿಸಿದೆ. ಅದಕ್ಕವರು ಸುಮ್ಮನೇ ಮುಗುಳ್ನಗೆ ಚೆಲ್ಲಿದರೇ ಹೊರತು ಏನನ್ನೂ ಹೇಳಲಿಲ್ಲ. ಆನಂತರ ಸ್ವಾಮಿಗಳನ್ನು ತಮ್ಮ ಕಛೇರಿಯ ಒಳಗೆ ಕರೆ ತಂದು ಅಲ್ಲಿರುವ ಅತಿಥಿಗಳಿಗಾಗಿ ಇರುವ ಆಸನವೊಂದನ್ನು ತೋರಿಸಿ ಅದರ ಮೇಲೆ ಅವರನ್ನು ಕುಳ್ಳರಿಸುತ್ತೇನೆ ಎಂದಾಗ ಮತ್ತೆ ಕಲಾಂ ಅವರು ಸ್ವಾಮಿಗಳನ್ನು ಈ ಸಾಧಾರಣ ಆಸನದ ಬದಲು ನಾನು ಕುಳಿತುಕೊಳ್ಳುವ ಆಸನದಲ್ಲಿ ಕೂರಿಸಿದರೆ ಏನಾಗುತ್ತದೆ? ಎಂದರು. ಅದಕ್ಕೆ ನಾನು ಸರ್ ಅದು ರಾಷ್ಟ್ರಪತಿಗಳ ಆಸನ ಎಂದು ನೆನಪಿಸಿದೆ. ಮತ್ತೆ ಅದಕ್ಕವರು ಸುಮ್ಮನೇ ಮುಗುಳ್ನಗೆ ಚೆಲ್ಲಿದರೇ ಹೊರತು ಏನನ್ನೂ ಹೇಳಲಿಲ್ಲ.

kalam3

ನಮ್ಮ ಮಾತುಕತೆಯಾಗಿ ಸುಮಾರು ಮೂವತ್ತು ನಿಮಿಷಗಳ ನಂತರ, ಆ ಸಂತರು ರಾಷ್ಟ್ರಪತಿ ಭವನ ಬಳಿಗೆ ಬರುತ್ತಿದ್ದಾರೆ ಎಂಬ ಸುದ್ದಿ ತಿಳಿದು ಅವರನ್ನು ಬರಮಾಡಿಕೊಳ್ಳಲು ನಾನು ಖುದ್ದಾಗಿ ಮುಖ್ಯ ದ್ವಾರದ ಬಳಿ ಹೋದೆ. ಸ್ವಾಮೀಜಿಯವರ ವಾಹನ ಇನ್ನೇನು ಕೆಲವೇ ಸೆಕೆಂಡುಗಳಲ್ಲಿ ಮುಖ್ಯ ದ್ವಾರ ತಲುಪುತ್ತಿದೆ ಎನ್ನುವಷ್ಟರಲ್ಲಿ ನನ್ನ ಹಿಂದೆ ಯಾರೋ ಬಂದು ನಿಂತ ಹಾಗಾಗಿ, ಹಿಂದಿರುಗಿ ನೋಡಿದರೇ ನನಗೇ ಆಶ್ಚರ್ಯವಾಗುವಂತೆ, ಡಾ ಕಲಾಂ ಅವರು ಮುಖ್ಯದ್ವಾರದ ಬಳಿ ಸ್ವಾಮಿಜೀಗಳನ್ನು ಬರಮಾಡಿಕೊಳ್ಳಲು ನನ್ನ ಹಿಂದೆ ನಿಂತಿದ್ದಾರೆ. ಕೂಡಲೇ ನಾನು ಆವರ ಹಿಂದೆ ಹೋಗಿ ನಿಂತೆ. ಸ್ವಾಮೀಜಿಗಳು ತಮ್ಮ ವಾಹನದಿಂದ ಇಳಿದ ಕೂಡಲೇ, ಕಲಾಂ ಆವರೇ ಖುದ್ಧಾಗಿ ಹೂಮಾಲೆ ಹಾಕಿ ಅವರೊಂದಿಗೆ ಉಭಯ ಕುಶಲೋಪರಿಯನ್ನು ವಿಚಾರಿಸುತ್ತಾ ಕಲಾ ಅವರ ಕಛೇರಿಗೆ ಕರೆದು ಕೊಂಡು ಬಂದರು. ಈ ಮೊದಲೇ ನಾವು ಮಾತನಾಡಿದಂತೆ, ಸಂದರ್ಶಕರ ಆಸನದಲ್ಲಿ ಸಂತರ ಆಸನವನ್ನು (ಹುಲಿ ಚರ್ಮದ ಆಸನ) ಹಾಸಲು ನಾನು ಸ್ವಾಮೀಜಿಯವರ ಶಿಷ್ಯರಿಗೆ ಸೂಚಿಸುತ್ತಿದ್ದದ್ದನ್ನು ಗಮನಿಸಿದ ರಾಷ್ಟ್ರಪತಿಗಳು ಆ ಹುಲಿ ಚರ್ಮವನ್ನು ತಮ್ಮ ಆಸನದ ಮೇಲೆ ಹಾಕುವಂತೆ ನಿರ್ದೇಶಿಸಿದ್ದನ್ನು ಗಮನಿಸಿ ನಾನು ಕೆಲ ಕಾಲ ಆಘಾತಕ್ಕೊಳಗಾದರೂ ಅದನ್ನು ಸಾವರಿಸಿಕೊಂದು ಸ್ವಾಮಿಜೀಗಳಿಗೆ ಫಲಪುಷ್ಪದ ಬುಟ್ಟಿಯನ್ನು ಅರ್ಪಿಸಿ ನಾವೆಲ್ಲರೂ ಅಲ್ಲಿಂದ ಹೊರಗೆ ಬಂದೆವು.

ಸುಮಾರು ಹೊತ್ತಿನವರೆಗೂ ಸ್ವಾಮೀಜಿಗಳು ಮತ್ತು ರಾಷ್ಟ್ರಪತಿಗಳ ನಡುವೆ ಅನೇಕ ವಿಷಯಗಳು ಚರ್ಚೆಯಾಗಿ ನಿಗಧಿಯಂತೆ ಸ್ವಾಮೀಜಿಗಳು ಹೊರಡಲು ಅನುವಾದಾಗ ರಾಷ್ಟ್ರಪತಿಗಲೇ ಎಲ್ಲಾ ಸಾಮಾನ್ಯ ಭಕ್ತರಂತೆಯೇ ಸ್ವಾಮಿಗಳಿಗೆ ನಮಸ್ಕರಿಸಿ ಮತ್ತೆ ಅವರ ವಾಹನದ ವರೆಗೂ ಬೀಳ್ಕೊಟ್ಟರು. ನಂತರ ನಾವಿಬ್ಬರೂ ಮತ್ತದೇ ಕಛೇರಿಯಲ್ಲಿ ಭೇಟಿಯಾದೆವು.

WhatsApp Image 2021-08-04 at 10.54.38 PM

ಹಾಗೆ ಭೇಟಿಯಾದ ಸಂದರ್ಭದಲ್ಲಿ ರಾಷ್ಟ್ರಪತಿಗಳ ನಿವಾಸದ ರೀತಿ ರಿವಾಜುಗಳನ್ನು ಕಡೆಯ ಕ್ಷಣಗಳಲ್ಲಿ ಆ ರೀತಿಯಲ್ಲಿ ಬದಲಾಯಿಸಿದ ಕಾರಣವನ್ನು ಸ್ವಲ್ಪ ಧೈರ್ಯ ಮಾಡಿ ಕೇಳಿಯೇ ಬಿಟ್ಟೆ. ಪ್ರಶ್ನೆ ಕೇಳಿದ ನಂತರ, ರಾಷ್ಟ್ರಪತಿಗಳನ್ನು ಈ ರೀತಿಯಾಗಿ ಪ್ರಶ್ನಿಸಬಹುದೇ? ಅದರಿಂದ ಅವರೆಲ್ಲಿ ಕೋಪ ಮಾಡಿಕೊಳ್ಳುತ್ತಾರೋ? ಎಂಬ ಅಂಜಿಕೆ ನನ್ನ ಮನದಲ್ಲಿತ್ತು. ಆದರೆ ಮತ್ತದೇ ಸಂತನ ರೀತಿಯಲ್ಲೇ ಮುಗುಳ್ನಕ್ಕು ನಾನು ಇಲ್ಲಿಗೆ ರಾಷ್ಟ್ರಪತಿಯಾಗಿರುವುದು ಕೇವಲ ಐದು ವರ್ಷಗಳ ಕಾಲಕ್ಕೆ ಮಾತ್ರಾ. ಆದರೆ ಆ ಜಗದ್ಗುರುಗಳು ಜೀವನ ಪರ್ಯಂತ ವಿಶೇಷವಾದ ಗೌರವನ್ನು ಹೊಂದಿರುತ್ತಾರೆ, ಅಂತಹ ಸಾಧು ಸಂತರು ಈ ರಾಷ್ಟ್ರಪತಿಗಳ ಆಸನದಲ್ಲಿ ಕುಳಿತಾಗ ಅವರ ಅದಮ್ಯವಾದ ಆಧ್ಯಾತ್ಮಿಕ ಶಕ್ತಿಗಳು ಈ ಆಸನಕ್ಕೆ ಲಭಿಸಿ ಮುಂದೆ ಈ ಸ್ಥಾನದಲ್ಲಿ ಕುಳಿತುಕೊಳ್ಳುವ ಪ್ರತಿಯೊಬ್ಬರಿಗೂ ಅವರ ಕೃಪಾ ಶೀರ್ವಾದ ಆಚಂದ್ರಾರ್ಕವಾಗಿರುತ್ತದೆ. ಹಾಗಾಗಿಯೇ ನಾನು ಅವರನ್ನು ಈ ಸ್ಥಾನದಲ್ಲಿ ಕುಳ್ಳರಿಸಿದೆ ಎಂದಾಗ ನನ್ನ ಮನಸ್ಸು ತುಂಬಿ ಬಂದು ಸರ್ ನಾನು ಇದುವರೆವಿಗೂ ನಿಮ್ಮನ್ನು ಕೇವಲ ವಿಜ್ಞಾನಿ ಎಂದು ಕೊಂಡಿದ್ದೆ. ಆದರು ನೀವು ಕೇವಲ ವಿಜ್ಞಾನಿಗಳು ಮಾತ್ರವಾಗಿರದೇ ಮಹಾನ್ ದಾರ್ಶನಿಕರು ಮತ್ತು ಭಾವೈಕ್ಯತೆಯ ನಿಜವಾದ ರಾಯಭಾರಿಗಳು. ನಿಮ್ಮೀ ಸರಳತೆ, ನಿಮ್ಮ ಈ ಸಂಸ್ಕಾರ ಮತ್ತು ಈ ದೇಶದ ಸಂಪ್ರದಾಯಗಳ ಮೇಲಿಟ್ಟಿರುವ ಪ್ರೀತಿ ನಿಜಕ್ಕೂ ಅನನ್ಯ ಮತ್ತು ಅನುಕರಣೀಯ‌‌ ಎಂದು ಅವರಿಗೆ ಹೇಳಿ, ಮನಃಪೂರ್ವಕವಾಗಿ ಅವರಿಗೆ ವಂದಿಸಿ ಅಲ್ಲಿಂದ ಹೊರಬಿದ್ದಾಗ ಜೀವನದಲ್ಲಿ ಏನನ್ನೋ ಸಾಧಿಸಿದ ಅನುಭವ ನನಗಾಗಿತ್ತು ಎಂದು ಹೇಳಿಕೊಂಡಿದ್ದಾರೆ ಅಂದಿನ ರಾಷ್ಟ್ರಪತಿ ಭವನದ ಕಂಟ್ರೋಲರ್ ಆಗಿದ್ದ ಲೆಫ್ಟಿನೆಂಟ್ ಕರ್ನಲ್ ಅಶೋಕ್ ಕಿಣಿ ಆವರು.

kalam1

ನಮ್ಮ ದೇಶದ ತುತ್ತ ತುದಿಯ ಊರು ರಾಮೇಶ್ವರಂನ ಒಂದು ಸಾಧಾರಣ ಮುಸ್ಲಿಂ ಬೆಸ್ತರ ಕುಟುಂಬದಲ್ಲಿ ಜನಿಸಿ ತಮ್ಮ ಸ್ವಂತ ಪ್ರಯತ್ನದಿಂದ ದೇಶ ಕಂಡ ಅತ್ಯುತ್ತಮ ಬಾಹ್ಯಾಕಾಶ ವಿಜ್ಞಾನಿಯಾಗಿ ಅನೇಕ ಸಾಧನೆಗಳನ್ನು ಮಾಡಿ ವಿಶ್ವ ವಿಖ್ಯಾತರಾದ ನಂತರ ದೇಶದ ಪ್ರಥಮ ಪ್ರಜೆಯಾದರೂ ತಾವು ಚಿಕ್ಕಂದಿನಲ್ಲಿ ತಮ್ಮ ಹುಟ್ಟೂರಾದ ರಾಮೇಶ್ವರದಲ್ಲಿ ಕಲಿತ ಸಂಪ್ರದಾಯ ಮತ್ತು ಸಂಸ್ಕಾರಗಳನ್ನು ರಾಷ್ಟ್ರಪತಿ ಭವನದಲ್ಲೂ ಎತ್ತಿ ಹಿಡಿಯುವ ಮೂಲಕ ನಿಜವಾದ ಭಾವೈಕ್ಯತೆಯನ್ನು ತೋರಿಸಿದ್ದಾರೆ.

ಅದೊಮ್ಮೆ ಹೈದರಾಬಾದಿನ MIM ಸಂಸದ ಅಸಾದುದ್ದೀನ್ ಓವೈಸಿ DRDO & ISRO ಚೇರ್ಮನ್ ಪ್ರೋ.ರಾಧಾಕೃಷ್ಣನ್ ಅವರಿಗೆ ಪತ್ರವೊಂದನ್ನು ಬರೆದು ನಮ್ಮ ದೇಶದ ಸ್ವದೇಶಿ ಕ್ಷಿಪಣಿಗಳಿಗೆ ಕೇವಲ ತ್ರಿಶೂಲ್, ಅಗ್ನೀ, ಪೃಥ್ವೀ, ಪಿನಾಕ್, ತೇಜಸ್ ಮುಂತಾದ ಹಿಂದು ಹೆಸರುಗಳನ್ನೇಕೆ ಇಡುತ್ತೀರಿ? ಜ್ಯಾತಾತೀತ ಹೆಸರುಗಳನ್ನೇಕೆ ಇಡುವುದಿಲ್ಲ? ಎಂದು ಪ್ರಶ್ನಿಸಿದ್ದರಂತೆ.

ಈ ಪತ್ರವನ್ನೋದಿದ ಪ್ರೋ.ರಾಧಾಕೃಷ್ಣನ್ ಅದಕ್ಕೆ ಅಷ್ಟೇ ಸರಳವಾಗಿ ಆದರೆ ತುಂಬಾ ಸುಂದರವಾಗಿ ಕೊಟ್ಟ ಉತ್ತರ ಹೀಗಿತ್ತು.

ಮಾನ್ಯರೇ, ನೀವು ಮಂಡಿಸಿರುವ ವಿಷಯ ನಿಶ್ಚಯವಾಗಿಯೂ ವಿಚಾರಮಾಡಬೇಕಾದ ಸಂಗತಿಯೇ. ಆದರೇ…. ನಮ್ಮ ಕ್ಷಿಪಣಿಗಳ ಹೆಸರನ್ನು ನಿರ್ಧರಿಸುವ ವ್ಯಕ್ತಿ ಹಿಂದುವಾಗಿರದೇ ಅವರೊರ್ವ ಮುಸ್ಲೀಂ ವ್ಯಕ್ತಿಯಾಗಿದ್ದು ಅವರ ನಿರ್ಣಯವೇ ಅಂತಿಮವಾಗಿರುತ್ತದೆ ಎಂದು ಕ್ಷಿಪಣಿಗಳ ಸರದಾರ ವಿಜ್ಞಾನಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಹಸ್ತಾಕ್ಷರದೊಂದಿಗೆ ಈ ಎಲ್ಲಾ ಕ್ಷಿಪಣಿಗಳ ಹೆಸರನ್ನು ನಮೂದಿಸಿದ್ದ ಅನುಮೋದನೆಯ ಪತ್ರವನ್ನು ಲಗತ್ತಿಸಿ ಕಳುಹಿಸಿಕೊಡುತ್ತಾರೆ.

ಕಲಾಂ ಸಾಹೇಬರು ತಮ್ಮ ಮೊದಲನೇ ಹೋವರ್ ಕ್ರಾಫ್ಟ್ ನ ಹೆಸರನ್ನು ನಂದಿ ಎಂದು ನಾಮಕರಣ ಮಾಡಿದ್ದರು.

ಹಿಂದು ಮತ್ತು ಮುಸ್ಲೀಂ ಹೆಸರಿನಲ್ಲಿ ಬೆಂಕಿ ಹಚ್ಚುವ ಓವೈಸಿಯಂಥವರಿಗೆ ಈ ಉತ್ತರ ಖಂಡಿತವಾಗಿಯೂ ತಪರಾಕಿಯಾಗಿತ್ತು ಎಂದು ಹೇಳಬೇಕಿಲ್ಲ ಅಲ್ಲವೇ?

ಧರ್ಮದ ಹೆಸರಿನಲ್ಲಿ ಪ್ರತಿದಿನವೂ ಹೊಡೆದಾಡುವವರೆಲ್ಲರೂ ಕಲಾಂ ಅವರಿಂದ ಪ್ರೇರಿತರಾಗಿ ದೇಶದ ಬಹುಸಂಖ್ಯಾತರ ಭಾವನೆಗಳಿಗೆ ಸ್ಪಂದಿಸುವ ಮನೋಭಾವನೆಯನ್ನು ಬೆಳಸಿಕೊಂಡಲ್ಲಿ, ದೇಶದಲ್ಲಿ ಯಾವುದೇ ಕೋಮು ಗಲಭೆಗಳು ನಡೆಯದೇ ಭಾವೈಕ್ಯತೆಯು ಮೂಡಿ ದೇಶವಾಸಿಗಳಲ್ಲರೂ ಸಾಮರಸ್ಯದಿಂದ ಇರಬಹುದು ಅಲ್ಲವೇ?

ಏನಂತೀರೀ?
ನಿಮ್ಮವನೇ ಉಮಾಸುತ

One thought on “ಭಾವೈಕ್ಯತೆಯ ರಾಯಭಾರಿ ಅಬ್ದುಲ್ ಕಲಾಂ

  1. ಅದ್ಭುತವಾದ ಸಂಗತಿಯನ್ನು ನಮಗೆ ಪರಿಚಯಿಸಿದ್ದಕ್ಕೆ ತಮಗೆ ಧನ್ಯವಾದಗಳು ಸರ್

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s