ಪ್ರತೀ ದಿನ ಬೆಳಿಗ್ಗೆ ಏನಪ್ಪಾ ತಿಂಡಿ ಮಾಡೋದೂ ಎಂಬ ಜಿಜ್ಞಾಸೆ ಬಹುತೇಕ ಹೆಣ್ಣುಮಕ್ಕಳಿಗೆ ಕಾಡುವುದು ಸಹಜವಾಗಿದೆ. ಅಂತಹವರೆಲ್ಲರಿಗೂ ಥಟ್ ಅಂತಾ ಸುಲಭವಾಗಿ ಆದರೆ ಅಷ್ಟೇ ಪರಿಮಳಯುಕ್ತ, ಪೌಷ್ಥಿಕವಾದ, ರುಚಿಯಾದ ಮನೆಯವರೆಲ್ಲರೂ ಇನ್ನೂ ಬೇಕು ಮತ್ತಷ್ಟು ಬೇಕು ಎಂದು ಕೇಳಿ ಕೇಳಿ ತಿನ್ನುವಂತಹ ಸಬ್ಬಸಿಗೆ ಸೊಪ್ಪಿನ ಬಾತ್ (ಸಬ್ಬಸಿಗೆ ಚಿತ್ರಾನ್ನ) ಮಾಡುವ ವಿಧಾನವನ್ನು ನಮ್ಮ ನಳಪಾಕದಲ್ಲಿ ತಿಳಿದುಕೊಳ್ಳೋಣ.
ಸಬ್ಬಸಿಗೆ ಸೊಪ್ಪಿನ ಬಾತ್ ತಯಾರಿಸಲು ಬೇಕಾಗುವ ಪದಾರ್ಥಗಳು
- ಅಕ್ಕಿ – 1 ಬಟ್ಟಲು
- ಅಡುಗೆ ಎಣ್ಣೆ – – 2 ರಿಂದ 3 ಚಮಚ
- ಕಡಲೇ ಕಾಯಿ ಬೀಜ 1 ಚಮಚ
- ಗೊಡಂಬಿ – 1 ಚಮಚ
- ಕಡಲೇ ಬೇಳೆ – 1/2 ಚಮಚ
- ಉದ್ದಿನ ಬೇಳೆ – 1/2 ಚಮಚ
- ಸಾಸಿವೆ – 1/4 ಚಮಚ
- ಜೀರಿಗೆ- 1/4 ಚಮಚ
- ಚಕ್ಕೆ – 1/4 ಇಂಚು
- ಚಿಟುಕಿ ಅರಿಶಿನ
- ಚಿಟುಕಿ ಇಂಗು
- ಸಬ್ಬಸಿಗೆ ಸೊಪ್ಪು – 1 ಕಟ್ಟು
- ಸಣ್ಣಗೆ ಹೆಚ್ಚಿದ ಈರುಳ್ಳಿ – 1
- ಬೆಳ್ಳುಳ್ಳಿ – 2 ರಿಂದ 3 ಎಸಳು (ಐಚ್ಛಿಕ)
- ಹಸೀ ಬಟಾಣಿ – 1/2 ಬಟ್ಟಲು (ಐಚ್ಛಿಕ)
- ಹಸಿ ಮೆಣಸಿನಕಾಯಿ – 3 ರಿಂದ 5 (ಖಾರಕ್ಕೆ ಅನುಗುಣವಾಗಿ)
- ಕತ್ತರಿಸಿದ ಕೊತ್ತಂಬರಿ ಸೊಪ್ಪು ಸ್ವಲ್ಪ
- ಕರಿಬೇವಿನ ಸೊಪ್ಪು – ಸ್ವಲ್ಪ
- ಶುಂಠಿ – 1/4 ಇಂಚು
- ನಿಂಬೆ ರಸ – 1 ಚಮಚ
- ರುಚಿಗೆ ತಕ್ಕಷ್ಟು ಉಪ್ಪು
ಸಬ್ಬಸಿಗೆ ಸೊಪ್ಪಿನ ಬಾತ್ ತಯಾರಿಸುವ ವಿಧಾನ
- ಮೊದಲು ಅಕ್ಕಿಯನ್ನು ಚೆನ್ನಾಗಿ ತೊಳೆದು ಸ್ವಲ್ಪ ಉದುರಾಗಿರುವಂತೆ ಅನ್ನವನ್ನು ಮಾಡಿಕೊಂಡು ಅನ್ನವನ್ನು ಆರಲು ಬಿಡಿ. .
- ಸಬ್ಬಸಿಗೆ ಸೊಪ್ಪನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಅದನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ.
- ಒಂದು ಗಟ್ಟಿ ತಳದ ಬಾಣಲಿಗೆ ಎಣ್ಣೆಯನ್ನು ಹಾಕಿ ಎಣ್ಣೆ ಕಾದ ನಂತರ ಅದಕ್ಕೆ ಸಾಸಿವೆ ಹಾಕಿ ಸಿಡಿಸಿಕೊಳ್ಳಿ
- ನಂತರ ಕಡಲೇ ಕಾಯಿ ಬೀಜ, ಗೋಡಂಬಿ ಕಡಲೇಬೇಳೆ, ಉದ್ದಿನ ಬೇಳೆ, ಜೀರಿಗೆ ಮತ್ತು ಚಕ್ಕೆಯನ್ನು ಒಂದೊಂದಾಗಿ ಎಣ್ಣೆಗೆ ಹಾಕಿ ಕೆಂಪಗೆ ಬರುವವರೆಗೂ ಹುರಿದು ಕೊಳ್ಳಿ
- ಈಗ ಹಸೀ ಮೆಣಸಿನಕಾಯಿ, ಕರಿಬೇವನ್ನು ಸೇರಿಸಿ ಹಸೀ ಹೋಗುವವರೆಗೂ ಹುರಿದುಕೊಂಡು ಅದಕ್ಕೆ ಕತ್ತರಿಸಿದ ಈರುಳ್ಳಿ ಸೇರಿಸಿ ಕೆಂಪಗೆ ಆಗುವರೆಗೂ ಹುರಿದುಕೊಳ್ಳಿ
- ಈಗ ಹಸೀ ಬಟಾಣಿ, ಶುಂಠಿ ಮತ್ತು ಬೆಳ್ಳುಳ್ಳಿ ಸೇರಿಸಿ ಹಸೀ ಹೋಗುವವರೆಗೂ ಹುರಿದುಕೊಳ್ಳಿ
- ಈಗ ಚಿಟುಕಿ ಇಂಗು ಮತ್ತು ಅರಿಶಿನ ಸೇರಿಸಿ ಅದಕ್ಕೆ ರುಚಿಗೆ ತಕ್ಕ ಉಪ್ಪು ಸೇರಿಸಿ
- ನಂತರ ಹೆಚ್ಚಿದ ಸಬ್ಬಸಿಗೆ ಸೊಪ್ಪನ್ನು ಬೆರಸಿ ಅದಕ್ಕೆ ನಿಂಬೇ ಹಣ್ಣಿನ ರಸ ಸೇರಿ ಕೇವಲ ಒಂದೆರಡು ನಿಮಿಷ ಬಾಡಿಸಿದಲ್ಲಿ ಸಬ್ಬಸಿಗೆ ಸೊಪ್ಪಿನ ಬಾತ್ ಗೊಜ್ಜು ಸಿದ್ಧ. (ಸಬ್ಬಸಿಗೆ ಸೊಪ್ಪನ್ನು ಹೆಚ್ಚು ಬಾಡಿಸುವುದು/ಬೇಯಿಸುವುದರಿಂದ ಅದರ ಸುವಾಸನೆ ಮತ್ತು ಸತ್ವ ಕಳೆದು ಹೋಗುತ್ತದೆ)
- ಆರಲು ಬಿಟ್ಟಿದ್ದ ಅನ್ನಕ್ಕೆ ಎರಡು ಚಮಚ ಎಣ್ಣೆಯನ್ನು ಬೆರೆಸಿ, ಅದಕ್ಕೆ ತಕ್ಕಷ್ಟು ತಯಾರಿಸಿ ಕೊಂಡಿರುವ ಗೊಜ್ಜನ್ನು ಬೆರೆಸಿ ಹದವಾಗಿ ಗಂಟಾಗದಂತೆ ಕಲೆಸಿ ಅದರ ಮೇಲೆ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಬೆರೆಸಿದಲ್ಲಿ ರುಚಿಕರವಾದ ಸಬ್ಬಸಿಗೆ ಸೊಪ್ಪಿನ ಬಾತ್ (ಸಬ್ಬಸಿಗೆ ಸೊಪ್ಪಿನ ಚಿತ್ರಾನ್ನ) ಸವಿಯಲು ಸಿದ್ದ.
ಈ ಬಾತಿಗೆ ದೊಡ್ಡ ಮೆಣಸಿನಕಾಯಿ, ಹಸೀ ಅವರೇಕಾಳು ಮತ್ತು ಕೊಬ್ಬರಿ ತುರಿಯನ್ನು ಸೇರಿಸಿದಲ್ಲಿ ಇದರ ರುಚಿಯನ್ನು ಮತ್ತಷ್ಟು ಹೆಚ್ಚಿಸಬಹುದು.
ಇನ್ನೇಕೆ ತಡಾ ನೋಡ್ಕೊಳ್ಳೀ, ಮಾಡ್ಕೊಳ್ಳೀ, ತಿನ್ಕೋಳ್ಳಿ
ಏನಂತೀರೀ?
ನಿಮ್ಮವನೇ ಉಮಾಸುತ
ಮನದಾಳದ ಮಾತು : ಸಬ್ಬಸಿಗೆ ಸೊಪ್ಪು ಕೇವಲ ರುಚಿ ಮತ್ತು ಸುವಾಸನೆಯನ್ನು ಹೆಚ್ಚಿಸುವುದಲ್ಲದೇ, ಬಹಳ ಆರೋಗ್ಯಕರವೂ ಹೌದು. ಸಬ್ಬಸಿಗೆ ಸೊಪ್ಪನ್ನು ನಿರಂತರವಾಗಿ ಸೇವಿಸುವ ಮೂಲಕ ನಿದ್ರಾಹೀನತೆಯನ್ನು ನಿವಾರಿಸಿಕೊಳ್ಳಬಹುದಾಗಿದೆ. ಸಬ್ಬಸಿಗೆ ಸೊಪ್ಪು ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಮಧುಮೇಹ ನಿಯಂತ್ರಣಕ್ಕೂ ಸಬ್ಬಸಿಗೆ ಸೊಪ್ಪು ರಾಮಬಾಣವಾಗಿದೆ. ಇನ್ನು ಹೆಣ್ಣುಮಕ್ಕಳಿಗಂತೂ ಸಬ್ಬಸಿಗೆ ಸೊಪ್ಪು ಬಹು ಉಪಕಾರಿಯಾಗಿದೆ. ಹೆಣ್ಣು ಮಕ್ಕಳ ಋತುಚಕ್ರವನ್ನು ಸರಿಪಡಿಸುವಲ್ಲಿ ಸಬ್ಬಸಿಗೆ ಸೊಪ್ಪು ಸಹಕಾರಿಯಾಗಿದೆ. ಬಾಣಂತಿಯರ ಎದೆಹಾಲಿನ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಸಬ್ಬಸಿಗೆ ಸೊಪ್ಪನ್ನು ದಿನವೂ ಆಹಾರದ ರೂಪದಲ್ಲಿ ಕೊಡಲಾಗುತ್ತದೆ. ಸಣ್ಣ ಮಕ್ಕಳು ಪೆಟ್ಟು ಮಾಡಿಕೊಂಡಲ್ಲಿ, ಸಬ್ಬಸಿಗೆ ಸೊಪ್ಪಿನ ರಸವನ್ನು ಹಚ್ಚುವುದರಿಂದ, ಗಾಯವು ಬೇಗನೆ ವಾಸಿಯಾಗುತ್ತದೆ. ಇನ್ನು ಪದೇ ಪದೇ ಬಿಕ್ಕಳಿಗೆ ಬರುವವರಿಗೂ ಪ್ರತಿ ನಿತ್ಯದ ಆಹಾರದಲ್ಲಿ ಸಬ್ಬಸಿಗೆ ಸೊಪ್ಪಿನ ಬಳಕೆಯನ್ನು ಹೆಚ್ಚಿಸಿದ್ದಲ್ಲಿ ಬಿಕ್ಕಳಿಕೆಯನ್ನು ನಿಯಂತ್ರಿಸಬಹುದಾಗಿದೆ.
Good article
LikeLiked by 1 person
ನನ್ನ ಫೇವರಿಟ್… ಸರ್
LikeLike