ನಮ್ಮ ಸನಾತನ ಧರ್ಮದಲ್ಲಿ ಶಿವನ ವಾಸಸ್ಥಾನಗಳು ಎಂದು ಹೇಳುವ ಐದು ಪವಿತ್ರ ಕ್ಷೇತ್ರಗಳಿವೆ. ಅವುಗಳೆಂದರೆ, ಕೈಲಾಸ ಮಾನಸ ಸರೋವರ್, ಆದಿ ಕೈಲಾಸ್, ಕಿನ್ನರ್ ಕೈಲಾಸ್, ಶ್ರೀಖಂಡ್ ಮಹಾದೇವ್ ಕೈಲಾಸ್ ಮತ್ತು ಮಣಿಮಹೇಶ್ ಕೈಲಾಸ್. ಪ್ರತಿಯೊಬ್ಬ ಹಿಂದೂವಿಗೂ ಈ ಕ್ಷೇತ್ರಗಳಿಗೆ ತನ್ನ ಜೀವಮಾನದಲ್ಲಿ ಒಮ್ಮೆಯಾದರೂ ಈ ಶ್ರೀಕ್ಷೇತ್ರಗಳಿಗೆ ಹೋಗಿ ಶಿವನ ಕೃಪಾಶೀರ್ವಾದಕ್ಕೆ ಪಾತ್ರರಾಗಲು ಬಯಸುತ್ತಾರೆ. ನಾವಿಂದು ಅಂತಹ ಪುಣ್ಯ ಕ್ಷೇತ್ರಗಳಲ್ಲಿ ಅತ್ಯಂತ ದುರ್ಗಮವಾದ ಆದರೆ ಅತ್ಯಂತ ರೋಚಕವಾದ ಕಿನ್ನರ್ ಕೈಲಾಸ್ ನೋಡಿ ಕೊಂಡು ಬರೋಣ ಬನ್ನಿ.
ಕಿನ್ನರ್ ಕೈಲಾಸ ಪರ್ವತ ಅಥವಾ ಸ್ಥಳೀಯ ಭಾಷೆಯಲ್ಲಿ ಕಿನ್ನೌರ್ ಕೈಲಾಸ್ ಪರ್ವತ ಕಲ್ಪದಲ್ಲಿರುವ ಎತ್ತರದ ಗಿರಿ ಶೃಂಗಗಳಲ್ಲೊಂದಾಗಿದೆ. ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯ ಕಿನ್ನರ್ ಕೈಲಾಶ್ ಶ್ರೇಣಿಯು ಇಂಡೋ-ಟಿಬೆಟಿಯನ್ ಗಡಿಯ ಸಮೀಪದಲ್ಲಿ ಸಮುದ್ರ ಮಟ್ಟದಿಂದ 17200 ಅಡಿ ಎತ್ತರದಲ್ಲಿದೆ. ಈ ಪರ್ವತ ಶ್ರೇಣಿಯ ಎತ್ತರ ಸುಮಾರು 6500 ಮೀಟರ್ ಇದೆ. ಇದು ಕಿನ್ನೌರ್ ಜಿಲ್ಲೆಯ ದಕ್ಷಿಣದ ಗಡಿಯಾಗಿದ್ದು ಹಿಂದೂ ಮತ್ತು ಬೌದ್ದರಿಬ್ಬರಿಗೂ ಈ ಪರ್ವತ ಧಾರ್ಮಿಕ ನಂಬಿಕೆಯ ತಾಣವಾಗಿದೆ.
ಹಿಂದೂ ಪೌರಾಣಿಕ ಕಥೆಗಳ ಪ್ರಕಾರ, ಪ್ರಬಲವಾದ ಹಿಮಾಲಯ ಶ್ರೇಣಿಗಳು ಶಿವನ ಪವಿತ್ರ ವಾಸಸ್ಥಾನವಾಗಿದ್ದು, ಅಲ್ಲಿ ಶಿವನು ತನ್ನ ಅರ್ಧಾಂಗಿ ಪಾರ್ವತಿ ದೇವಿಯೊಂದಿಗೆ ವಾಸಿಸುತ್ತಾನೆ ಎಂಬ ನಂಬಿಕೆ ಇದೆ. ಹಾಗಾಗಿ ಕಿನ್ನರ್ ಕೈಲಾಸ್ ಪರ್ವತ ದೇವಾನು ದೇವತೆಗಳು ವಾಸಿಸುವ ನಿಖರವಾದ ಸ್ಥಳ ಎಂದೇ ಇಲ್ಲಿನ ಸ್ಥಳೀಯರು ಭಾವಿಸುತ್ತಾರೆ, ಸುತ್ತಮುತ್ತಲಿನ ಉಳಿದೆಲ್ಲಾ ಪರ್ವತಗಳಿಗೆ ಹೋಲಿಸಿದಲ್ಲಿ ಇದು ಅತ್ಯಂತ ಸವಾಲಿನ ಚಾರಣಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದ್ದು, ಈ ಪರ್ವತಕ್ಕೆ ಹೋಗುವ ಮಾರ್ಗವು ಖಂಡಿತವಾಗಿಯೂ ಸುಲಭವಾಗಿರದೇ ಇದನ್ನು ಚಾರಣ ಮಾಡಲು ಗಂಡೆದೆಯ ಗುಂಡಿಗೆ ಬೇಕಾಗುತ್ತದೆ.
ಕಿನ್ನರ್ ಕೈಲಾಶ್ ಧಾರ್ಮಿಕ ಮಹತ್ವ
ಶಿವನ ಕಟ್ಟಾ ಭಕ್ತರಿಗೆ, ಕಿನ್ನೌರ್ ಅತ್ಯಂತ ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿದ್ದು, ಈ ಸ್ಥಳವು 79 ಅಡಿ ಎತ್ತರದ ಶಿವಲಿಂಗದ ನೆಲೆಯಾಗಿದೆ. ಸಾಧಾರಣವಾಗಿ ಶಿವನ ಲಿಂಗ ಎಂದ ತಕ್ಷಣ ನಮ್ಮ ಕಣ್ಣ ಮುಂದೆ ಬರುವ ಶಿವಲಿಂಗದಂತೆ ಇರದೇ ಇದೊಂದು ನೀರ್ಗಲ್ಲಿನಂತೆ ಇರುವುದು ಇದರ ವಿಶೇಷ. ಇದು ಮೂಲತಃ ಶಿಲಾ ಸ್ತಂಭದ ಮೇಲೆ ಅಂದವಾಗಿ ಸಮತೋಲಿತವಾಗಿರುವ ಕಲ್ಲಿನ ಕಂಬವಾಗಿದ್ದು ತ್ರಿಶೂಲವನ್ನು ಹೋಲುತ್ತದೆ. ಇದಕ್ಕಿಂತಲೂ ಇದರ ಮತ್ತೊಂದು ವಿಶೇಷವೆಂದರೆ ಈ ಶಿವನ ಬಣ್ಣ ಕ್ಷಣ ಕ್ಷಣಕ್ಕೂ ವಿವಿಧ ಬಣ್ಣಗಳಿಗೆ ಬದಲಾಯಿಸುವ ಕಾರಣ ಇದು ಪವಾಡ ಎಂದು ಆಸ್ತಿಕರು ನಂಬಿದರೆ, ಕ್ಷಣ ಕ್ಷಣಕ್ಕೂ ಮೋಡಗಳಿಂದ ಆವೃತವಾಗಿ ಹವಾಮಾನ ವೈಪರಿತ್ಯದಿಂದಾಗಿ ಬೆಳಕಿನ ವಕ್ರೀಭವನ ಈ ಶಿವನ ಮೇಲೆ ಬಿದ್ದು ವಿವಿಧ ಬಣ್ಣಗಳಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ವಿಜ್ಞಾನಿಗಳು ನಂಬುತ್ತಾರೆ. ಇದರ ಸಮೀಪದಲ್ಲಿಯೇ ಸಮುದ್ರ ಮಟ್ಟದಿಂದ 14900 ಅಡಿ ಎತ್ತರದಲ್ಲಿರುವ ಪಾರ್ವತಿ ಕುಂಡ್ ಎಂಬ ನೈಸರ್ಗಿಕ ಕೊಳವಿದೆ.
ಸ್ಥಳೀಯರ ನಂಬಿಕೆಯ ಪ್ರಕಾರ, ಈ ಕೊಳವನ್ನು ಪಾರ್ವತಿ ದೇವಿ ಸೃಷ್ಟಿ ಮಾಡಿದ್ದಾಳೆ ಎನ್ನಲಾಗುತ್ತದೆ. ಈ ಸ್ಥಳವು ಶಿವ ಮತ್ತು ಪಾರ್ವತಿ ದೇವಿಯ ನೆಚ್ಚಿನ ಭೇಟಿಯ ಸ್ಥಳವಾಗಿತ್ತು ಹಾಗಾಗಿ ಆಶಿಕಿ ಉದ್ಯಾನವನ್ (ಪ್ರೇಮಿಗಳ ಉದ್ಯಾನವನ) ಎಂದೂ ಕರೆಯಲಾಗುತ್ತದೆ. ಇಲ್ಲಿನ ಮತ್ತೊಂದು ಪೌರಾಣಿಕ ನಂಬಿಕೆಯ ಪ್ರಕಾರ, ಪ್ರತಿ ಚಳಿಗಾಲದಲ್ಲೂ ಶಿವನು ಇದೇ ಕಿನ್ನರ್ ಕೈಲಾಸ್ ನಲ್ಲಿಯೇ ದೇವರು ಮತ್ತು ದೇವತೆಗಳ ಸಭೆಯನ್ನು ಇಲ್ಲಿ ನಡೆಸುತ್ತಿದ್ದನಂತೆ ಹಾಗಾಗಿ ಶಿವಭಕ್ತರು ಪ್ರತೀ ವರ್ಷದ ಚಳಿಗಾಲದ ಸಮಯದಲ್ಲಿ ಇಲ್ಲಿ ನಡೆಯುವ ಯಾತ್ರೆಗೆ ತಂಡೋಪ ತಂಡವಾಗಿ ಬಂದು ಶಿವನ ಜೊತೆ ಎಲ್ಲಾ ದೇವತೆಗಳ ಆಶೀರ್ವಾದಕ್ಕೆ ಪಾತ್ರರಾಗುತಾರೆ.
ಕಿನ್ನರ್ ಕೈಲಾಸ್ ಚಾರಣದ ಹಾದಿ
ಹಿಮಾಚಲ ಪ್ರದೇಶದ ಅತ್ಯಂತ ಸುಂದರವಾದ ಸಟ್ಲೆಜ್ ನದಿಯ ದಡದಲ್ಲಿ ಇರುವ ಟ್ಯಾಂಗ್ಲಿಂಗ್ ಎಂಬ ಕುಗ್ರಾಮವು ಕಿನ್ನರ ಕೈಲಾಸಿನ ಬೇಸ್ ಕ್ಯಾಂಪ್ ಅರ್ಥಾತ್ ಪ್ರಾರಂಭದ ಸ್ಥಳವಾಗಿದೆ. ಇದು ಸಮುದ್ರ ಮಟ್ಟದಿಂದ ಸುಮಾರು 7050 ಅಡಿ ಎತ್ತರದಲ್ಲಿದೆ. ಅಲ್ಲಿಂದ ರೋಮಾಂಚಕಾರಿ ಮತ್ತು ಅಷ್ಟೇ ಅಪಾಯಕಾರಿ ಜೂಲಾ ಪುಲ್ ಅರ್ಥಾತ್ ನೇತಾಡುವ ಸೇತುವೆ ಅಥವಾ ಶಾಂಗ್ಟಾಂಗ್ ಸೇತುವೆಯನ್ನು ದಾಟಿಕೊಂಡು ಪ್ರಯಾಣವನ್ನು ಮುಂದುವರೆಸಬೇಕಾಗುತ್ತದೆ.
14 ಕಿ.ಮೀ ಉದ್ದದ ಈ ಚಾರಣ ನಿಸ್ಸಂದೇಹವಾಗಿ ಕಠಿಣವಾಗಿದೆ, ಆದರೆ ಧೃಢ ಸಂಕಲ್ಪ ಮಾಡಿ ಈ ಸವಾಲನ್ನು ಸ್ವೀಕರಿಸಿದಲ್ಲಿ ಚಾರಣದ ಸಮಯದಲ್ಲಿ ಸುತ್ತಮುತ್ತಲಿನ ಪ್ರಕೃತಿಯ ಸುಂದರವಾದ ರಮಣೀಯ ದೃಶ್ಯಗಳನ್ನು ಕಣ್ತುಂಬಿಸಿಕೊಳ್ಳಬಹುದಾಗಿದೆ. ಹಿಮದಿಂದ ಆವೃತವಾದ ತಣ್ಣನೆಯ ಪರ್ವತಗಳು, ಸೊಂಪಾದ ಹಸಿರು ಸೇಬು ತೋಟಗಳು ಮತ್ತು ಅದ್ಭುತ ದೃಶ್ಯಾವಳಿಗಳು ಮನಸ್ಸಿಗೆ ಮುದನೀಡುವುದರಲ್ಲಿ ಸಂದೇಹವೇ ಇಲ್ಲ. ಈ ಚಾರಣವು ಸಾಂಗ್ಲಾ ಕಣಿವೆ ಮತ್ತು ಹ್ಯಾಂಗ್ರಾಂಗ್ ಕಣಿವೆಯ ಮೂಲಕ ಸಾಗುವಾಗ ಅಲ್ಲಿಯ ಪ್ರಕೃತಿಯನ್ನು ವರ್ಣಿಸುವುದಕ್ಕಿಂತಲೂ ಅನುಭವಿಸಿದರೇ ಚಂದ.
ಟ್ಯಾಂಗ್ಲಿಂಗ್ನಿಂದ ಸುಮಾರು 8 ಕಿ.ಮೀ ದೂರವಿರುವ ಮಾಲಿಂಗ್ ಖಾಟಾಗೆ ಚಾರಣ ಮಾಡಿ ಸ್ವಲ್ಪ ವಿರಾಮವನ್ನು ತೆಗೆದುಕೊಂಡು ಅಲ್ಲಿಂದ ಸುಮಾರು 5 ಕಿ.ಮೀ ದೂರವಿರುವ ಪಾರ್ವತಿ ಕುಂಡಕ್ಕೆ ತಲುಪಿ ಅಲ್ಲಿ ಆಯಾಸವನ್ನು ಪರಿಹರಿಸಿಕೊಂಡು ಅಲ್ಲಿಂದ ಸುಮಾರು ಒಂದು ಕಿಲೋಮೀಟರ್ ದೂರದ ಕಲ್ಲುಗಳ ಮಧ್ಯೆಯ ಚಾರಣವನ್ನು ಮಾಡಿದಲ್ಲಿ ನಮ್ಮ ಗಮ್ಯಸ್ಥಾನವಾದ ಕಿನ್ನರ್ ಕೈಲಾಸದ ಶಿವಲಿಂಗದ ದರ್ಶನ ಪಡೆಯಬಹುದಾಗಿದೆ.
ತೀರಾ ಅಗತ್ಯವಿರುವವರು ರೆಕ್ಕಾಂಗ್ ಪಿಯೋ ಅಥವಾ ಟ್ಯಾಂಗ್ಲಿಂಗ್ ಹಳ್ಳಿಯಿಂದ ಗೈಡ್ ಗಳನ್ನಾಗಲೀ ಅಥವಾ ಪೋರ್ಟರ್ಗಳ ಸೇವೆಯನ್ನು ಪಡೆಯ ಬಹುದಾದರು ನಮ್ಮಷ್ಟಕ್ಕೆ ನಾವು ಸಾಹಸ ಮಯವಾಗಿ ಚಾರಣ ಮಾಡಿದ ನಂತರ ಗಮ್ಯ ಸ್ಥಳವನ್ನು ತಲುಪಿದಾಗ ದೊರೆಯುವ ಆನಂದಕ್ಕೆ ಬೆಲೆ ಕಟ್ಟಲಾಗದು. ಈ ಮೊದಲೇ ಹೇಳಿದಂತೆ ಕ್ಷಣ ಕ್ಷಣಕ್ಕೂ ಇಲ್ಲಿನ ಹವಾಮಾನ ಬದಲಾಗುತ್ತಲೇ ಹೊಗುವುದರಿಂದ ಮಧ್ಯಾಹ್ನ 1 ರಿಂದ 2 ಗಂಟೆಯ ಒಳಗೇ ದೇವರ ದರ್ಶನ ಮಾಡಿಕೊಂಡು ಕತ್ತಲಾಗುವುದರೊಳಗೆ ಸುರಕ್ಷಿತ ಸ್ಥಳವನ್ನು ತಲುಪಿಕೊಳ್ಳುವುದು ಉತ್ತಮವಾಗಿದೆ.
ಕಿನ್ನರ್ ಕೈಲಾಸದ ಚಾರಣವು ಪ್ರತೀ ವರ್ಷ ಮೇ ತಿಂಗಳಿಂದ ಅಕ್ಟೋಬರ್ ತಿಂಗಳ ನಡುವೆ ಅನುವು ಮಾಡಿ ಕೊಡಲಾಗುತ್ತದೆಯಾದರೂ, ಈ ಪ್ರದೇಶದಲ್ಲಿ ಭಾರಿ ಮಳೆಯಾಗಿ ಭೂಕುಸಿತ, ಮೋಡ ಸ್ಪೋಟಗಳು ಇಲ್ಲಿನ ಸರ್ವೇ ಸಾಮಾನ್ಯವಾಗಿ ಚಾರಣಿಗರಿಗೆ ಕಷ್ಟಕರವಾಗುವ ಕಾರಣ, ಮೇ, ಜೂನ್, ಇಲ್ಲವೇ ಸೆಪ್ಟೆಂಬರ್, ಅಕ್ಟೋಬರ್ ತಿಂಗಳಿನಲ್ಲಿ ಹೋಗುವುದು ಉತ್ತಮವಾಗಿದೆ.
ವಿಪರೀತವಾದ ಶೀತದ ಹಿಮಗಾಳಿ ಬೀಸುವ ಕಾರಣ, ಉತ್ತಮವಾದ ಉಣ್ಣೇ ಬಟ್ಟೆಗಳ ಜೊತೆಗೆ ಚಾರಣಕ್ಕೆ ಅನುಗುಣವಾದ ಶೂಗಳನ್ನು ಧರಿಸಿಕೊಂಡು ಹೋಗುವುದು ಉತ್ತಮವಾಗಿದೆ. ಚಾರಣದ ಮಧ್ಯೆ ವಿಪರೀತ ಆಯಾಸವಾಗುವ ಕಾರಣ, ಕುಡಿಯಲು ನೀರಿನ ಬಾಟೆಲ್ ನೊಂದಿಗೆ ಕೈಯ್ಯಲ್ಲಿ ಊರುಗೋಲು ಮತ್ತು ಟಾರ್ಚು ಮತ್ತು ಪ್ರಥಮಚಿಕಿತ್ಸಾ ಪಟ್ಟೆಗೆಯನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗುವುದು ಅತ್ಯಾವಶ್ಯಕವಾಗಿದೆ.
ಪ್ರತಿ ವರ್ಷವೂ ಸಾವಿರಾರು ಶಿವ ಭಕ್ತರು ಮತ್ತು ಚಾರಣಿಗರು ಕಿನ್ನರ್ ಕೈಲಾಶ್ ಯಾತ್ರೆಯನ್ನು ಮಾಡುವುದರಿಂದ ಗುಂಪು ಗುಂಪಿನಲ್ಲಿ ಸೂಕ್ತ ಮಾರ್ಗದರ್ಶನದೊಂದಿಗೆ ಹವಾಮಾನದ ವೈಪರೀತ್ಯಗಳನ್ನು ಗಮನದಲ್ಲಿ ಇಟ್ಟುಕೊಂಡು ಪ್ರವಾಸ ಕೈಗೊಳ್ಳುವುದು ಉತ್ತಮವಾಗಿದೆ. ಈ ಪವಿತ್ರ ಶಿವನನ್ನು ನೋಡಿಕೊಂಡು ಬರಲು ಸುಮಾರು 2 ರಿಂದ 3 ದಿನಗಳ ಕಾಲವಾಗುವುದರಿಂದ ಅದಕ್ಕೆ ತಕ್ಕ ಊಟೋಪಚಾರಗಳನ್ನು ತೆಗೆದುಕೊಂಡು ಹೋಗುವುದು ಅತ್ಯಾವಶ್ಯಕವಾಗಿದೆ.
ಸರಿ ಹಾಗಾದ್ರೇ, ಕುಳಿತಲ್ಲಿಯೇ ಕಿನ್ನರ್ ಕೈಲಾಸವಾಸಿಯ ದರ್ಶನ ಪಡೆದರೂ ಪ್ರತ್ಯಕ್ಷಿಸಿ ನೋಡಿದರೂ ಪ್ರಮಾಣಿಸಿ ನೋಡು ಎನ್ನುವಂತೆ ಸಮಯ ಮಾಡಿಕೊಂಡು ಕಿನ್ನರ್ ಕೈಲಾಸ ಯಾತ್ರೆ ಕೈಗೊಂಡು ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ತಾನೇ?
ಕಿನ್ನರ್ ಕೈಲಾಸದ ಶಿವನ ದರ್ಶನ ಇಲ್ಲಿಂದಲೇ ಮಾಡೋಣ ಬನ್ನಿ.
ಏನಂತೀರೀ?
ನಿಮ್ಮವನೇ ಉಮಾಸುತ