ನಮ್ಮ ಧ್ವಜಾರೋಣದ ವಿಶೇಷತೆಗಳು ಮತ್ತು ಧ್ವಜ ಸಂಹಿತೆ

delhi

ನಮಗೆಲ್ಲರಿಗೂ ತಿಳಿದಿರುವಂತೆ ಆಗಸ್ಟ್ 15ರ ಸ್ವಾತಂತ್ರ್ಯ ದಿನೋತ್ಸವ ಮತ್ತು ಜನವರಿ 26 ಗಣರಾಜ್ಯೋತ್ಸವ, ಎರಡೂ ದಿನಗಳೂ ದೇಶದ ರಾಜಧಾನಿ ದೆಹಲಿಯ ಕೆಂಪುಕೋಟೆ ಮುಂದೆ ನಮ್ಮ ತ್ರಿವರ್ಣ ಧ್ವಜವನ್ನು ಆರೋಹಣ ಮಾಡಲಾಗುತ್ತದೆ. ಆದರೆ ಕುತೂಹಲಕಾರಿಯಾದ ವಿಶೇಷತೆ ಏನೆಂದರೆ, ಸ್ವಾತಂತ್ರ್ಯ ದಿನೋತ್ಸವದಂದು ನಮ್ಮ ರಾಷ್ಟ್ರಧ್ವಜವನ್ನು ಹಾರಿಸಲಾಗುವುದಾದರೇ, ಅದೇ ಗಣರಾಜ್ಯೋತ್ಸವದಂದು ನಮ್ಮ ತ್ರಿವರ್ಣಧ್ವಜವನ್ನು ಅನಾವರಣಗೊಳಿಸಲಾಗುತ್ತದೆ.

ಧ್ವಜವನ್ನು ಹಾರಿಸುವ ಮತ್ತು ಧ್ವಜವನ್ನು ಅನಾವರಣಗೊಳಿಸುವ ಎರಡೂ ಪ್ರಕ್ರಿಯೆಗಳು, ಧ್ವಜದ ಕಂಬದ ಮೇಲೆ ನಡೆದು ನೋಡುಗರಿಗೆ ಅಂತಹ ವ್ಯತ್ಯಾಸ ಕಾಣದಿದ್ದರೂ, ಅತ್ಯಂತ ಸೂಕ್ಷ್ಮವಾಗಿ ಗಮನಿಸಿದಲ್ಲಿ ಬಹಳ ವೆತ್ಯಾಸದ ಜೊತೆಗೆ ಅದರ ಹಿಂದೆ ಸೂಕ್ಷ್ನವಾದ ಅರ್ಥಪೂರ್ಣ ವಿಷಯಗಳು ಅಡಕವಾಗಿವೆ.

prime_minister

ಆಗಸ್ಟ್ 15 ರಂದು ನಮ್ಮ ತ್ರಿವರ್ಣ ಧ್ವಜವನ್ನು ಅಚ್ಚುಕಟ್ಟಾಗಿ ಮಡಿಚಿ, ಧ್ವಜಸ್ಥಂಭದ ಮಧ್ಯಕ್ಕೆ ಕಟ್ಟಲಾಗಿರುತ್ತದೆ. ಪ್ರಧಾನ ಮಂತ್ರಿಗಳು ನಿಧಾನವಾಗಿ ಹಗ್ಗದ ತುದಿಯನ್ನು ಜಗ್ಗಿ ಧ್ವಜವು ಚಿಚ್ಚಿಕೊಂಡಾಗ ಧ್ವಜವನ್ನು ಕಂಬದ ತುದಿಯವರೆಗೂ ಎಳೆದು ಧ್ವಜಸ್ಥಂಭದ ತುತ್ತ ತುದಿಯನ್ನು ತಲುಪಿಸುವ ಮೂಲಕ ಧ್ವಜವನ್ನು ಹಾರಿಸಲಾಗುತ್ತದೆ. ಇದು ವಸಾಹತುಶಾಹಿ ಪ್ರಾಬಲ್ಯದಿಂದ ನಮ್ಮ ದೇಶವನ್ನು ಮುಕ್ತಗೊಳಿಸಲಾಯಿತು ಎಂಬುದನ್ನು ಸೂಚಿಸುವ ಸಂಕೇತವಾಗಿದೆ.

president2

ಅದೇ 1950 ಜನವರಿ 26ರ ನಂತರ ಪ್ರತೀ ಗಣರಾಜ್ಯೋತ್ಸವದಂದು, ನಮ್ಮ ತ್ರಿವರ್ಣ ಧ್ವಜವನ್ನು ಹಾರಿಸದೇ ಕೇವಲ ಅನಾವರಣ ಗೊಳಿಸಲಾಗುತ್ತದೆ. ಅಂದರೆ, ಧ್ವಜವನ್ನು ಅದಾಗಲೇ ಕಂಬದ ತುತ್ತ ತುದಿಯಲ್ಲಿ ಕಟ್ಟಲಾಗಿದ್ದು, ರಾಷ್ಟ್ರಪತಿಗಳು ಹಗ್ಗವನ್ನು ನಿಧಾನವಾಗಿ ಜಗ್ಗಿದ ಕೂಡಲೇ ಧ್ವಜ ಬಿಚ್ಚಿಕೊಂಡು ಅನಾವರಣಗೊಳ್ಳುತ್ತದೆ. ಇದು ನಮ್ಮ ದೇಶದ ಸ್ವತಂತ್ರ ಧ್ವಜವಾಗಿದ್ದು ಅದಾಗಲೇ ದೇಶದೆಲ್ಲಡೆಯಲ್ಲಿಯೂ ರಾರಾಜಿಸುತ್ತಿರುವ ಕಾರಣ ಅದನ್ನು ಮತ್ತೆ ಕೆಳಗಿನಿಂದ ಹಾರಿಸುವ ಪ್ರಮೇವಿಲ್ಲದೇ ಅದನ್ನು ನೇರವಾಗಿ ಅನಾವರಣ ಗೊಳಿಸಲಾಗುತ್ತಿದೆ ಎಂಬುದರ ಸಂಕೇತವಾಗಿದೆ.

ಈ ರೀತಿಯಾಗಿ ನಮ್ಮ ತ್ರಿವರ್ಣ ಧ್ವಜಾರೋಹಣ ನಮ್ಮ ದೇಶದ ಇತಿಹಾಸದೊಂದಿಗೆ ಬೆಸುಗೆಯಾಗಿರುವದಲ್ಲದೇ ಆ ಸಮಯ ಸಂಧರ್ಭಗಳನ್ನು ನಾವು ಹೇಗೆ ಅರ್ಥೈಸಿಕೊಂಡು ಅದಕ್ಕೆ ಪೂರಕವಾಗಿ ನಾವು ಹೇಗೆ ಗೌರವಿಸುತ್ತೇವೆ ಎಂಬುದಕ್ಕೆ ಈ ಪ್ರಕ್ರಿಯೆಗಳು ಜ್ವಲಂತ ಉದಾರಣೆಯಾಗಿದೆ.

flaf4

ನಮ್ಮ ದೇಶ, ನಮ್ಮ ಸಂಸ್ಕಾರ ನಮ್ಮ ಸಂಸ್ಕೃತಿ ಮತ್ತು ನಮ್ಮ ತ್ರಿವರ್ಣ ಧ್ವಜ ನಮ್ಮ ದೇಶದ ಹೆಮ್ಮೆಯ ಪ್ರತೀಕವಾಗಿದೆ. ಅದಕ್ಕೆ ಗೌರವಿಸುವುದು ಮತ್ತು ರಕ್ಷಿಸುವುದು ಪ್ರತಿಯೊಬ್ಬ ಭಾರತೀಯರ ಅದ್ಯ ಕರ್ತವ್ಯವೇ ಆಗಿದೆ. ಹಾಗಾಗಿ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದಂದು ನಮ್ಮ ನಿಮ್ಮ ಮನ ಮತ್ತು ಮನೆಗಳ ಎರಡರ ಮೇಲೂ ಸ್ವಚ್ಚಂದವಾಗಿ ನಮ್ಮ ತ್ರಿವರ್ಣ ಧ್ವಜವನ್ನು ಹಾರಿಸೋಣ ಮತ್ತು ಸಂಜೆ ಸೂರ್ಯಾಸ್ತದ ಸಮಯಕ್ಕೆ ಸರಿಯಾಗಿ ಧ್ವಜವನ್ನು ಕೆಳಗಿಳಿಸಿ ನೆಲಕ್ಕೆ ತಾಗದಂತೆ ಜೋಪಾನವಾದ ಸ್ಥಳದಲ್ಲಿ ತೆಗೆದಿಡೋಣ.

ಹಾಂ! ಒಂದು ಮಾತು ಧ್ವಜವನ್ನು ಹಾಗೆ ಎಲ್ಲೆಂದರಲ್ಲಿ ಹೇಗೆಂದರಲ್ಲಿ ಯಾವುದೋ ರೀತಿಯ ಧ್ವಜವನ್ನು ಹಾರಿಸಲು ಅವಕಾಶವಿಲ್ಲ. ಅದಕ್ಕೂ ಒಂದು ಧ್ವಜ ಸಂಹಿತೆ ಇದೆ. ಭಾರತದ ಧ್ವಜ ಸಂಹಿತೆಯ ಪ್ರಕಾರ, ಭಾರತೀಯ ಧ್ವಜವು 2:3 ಅಗಲ ಮತ್ತು ಎತ್ತರ ಆಕಾರ ಅನುಪಾತವನ್ನು ಹೊಂದಿದೆ. ಧ್ವಜದ ಎಲ್ಲಾ ಮೂರು ಬಣ್ಣಗಳೂ (ಕೇಸರಿ, ಬಿಳಿ ಮತ್ತು ಹಸಿರು) ಸರಿ ಸಮಾನ ಗಾತ್ರದಲ್ಲಿದ್ದು ಅದರ ಮಧ್ಯದಲ್ಲಿ ನೀಲಿ ಬಣ್ಣದ ಅಶೋಕ ಚಕ್ರವು 24 ಸಮ-ಅಂತರದ ರೇಖೆಗಳನ್ನು ಹೊಂದಿರಬೇಕು.

ಈ ಧ್ವಜದ ಬಣ್ಣವು ತ್ಯಾಗ,ಶಾಂತಿ ಮತ್ತು ಸಮೃದ್ಧಿಯ ಸಂಕೇತವಾಗಿದ್ದು ಈ ಮೂಲಕ ದೇಶದ ವಿಭಿನ್ನ ಜಾತಿ, ಮತ, ಪಂಗಡ ಮತ್ತು ಸಂಸ್ಕೃತಿಯ ಜನರನ್ನು ಒಂದೇ ದ್ವಜದಡಿ ನಿಲ್ಲಿಸಿ ದೇಶದ ಏಕತೆಯನ್ನು ಸಾರುವ ದಿವ್ಯ ಸಾಧನವಾಗಿದೆ. ಇಂತಹ ರಾಷ್ಟ್ರದ್ವಜವನ್ನು ಅವಮಾನಿಸುವುದು ಅಥವಾ ಅವಹೇಳನ ಮಾಡುವುದು ರಾಷ್ಟ್ರದ್ರೋಹ ಆಗುತ್ತದೆ.

garaga

ಇಂತಹ ದ್ವಜವು ಕೇವಲ ಕೈ ನೇಯ್ಗೆಯಿಂದಲೇ ಸಿದ್ದವಾದ ಶುದ್ಧ ಖಾದಿಯಿಂದಲೇ ತಯಾರಿಸಲ್ಪಟ್ಟಿರ ಬೇಕೆಂಬ ನಿಯವೂ ಇದೆ. ಇದಕ್ಕೆ ಉಪಯೋಗಿಸುವ ಬಟ್ಟೆಯು ಉಣ್ಣೆ, ರೇಷ್ಮೆ ಇಲ್ಲವೇ ಹತ್ತಿಯದ್ದೇ ಆಗಿರಬೇಕು ಆದರೆ ಅದು ಕೈ ನೂಲು ಮತ್ತು ಕೈ ನೇಯ್ಗೆಯದೇ ಆಗಿರಬೇಕು. ಹಾಗಾಗಿ ಈ ವಿಶಿಷ್ಟ ರಾಷ್ಟ್ರಧ್ವಜವನ್ನು ತಯಾರಿಸುವ ಹಕ್ಕು ಕೇವಲ ನಮ್ಮ ಕರ್ನಾಟಕದ ಧಾರವಾಡ ಜಿಲ್ಲೆಯ ಗರಗ ಗ್ರಾಮದ ಸಹಕಾರ ಸಂಘಕ್ಕೆ ಮಾತ್ರವೇ ನೀಡಿದ್ದು ಉತ್ತರ ಕರ್ನಾಟಕದಾದ್ಯಂತ ಅದರ ಒಟ್ಟು ೫೨ ಘಟಕಗಳು ಇಂತಹ ರಾಷ್ಟ್ರಧ್ವಜದ ನಿರ್ಮಾಣದಲ್ಲಿ ತೊಡಗಿವೆ. ಹಾಗಾಗಿ ಇಲ್ಲಿ ನಿರ್ಮಾನ ಗೊಂಡರಾಷ್ಟ್ರ ಧ್ವಜವು ಮಾತ್ರವೇ ಅಧಿಕೃತ ಧ್ವಜವಾಗಿದ್ದು ರಸ್ತೆ ಬದಿಯಲ್ಲಿಯೂ ಅಥವಾ ನಮ್ಮ ಮನೆಯ ಗಲ್ಲಿಯ ಅಂಗಡಿಗಳಲ್ಲಿ ಕೊಳ್ಳುವ ಪ್ಲಾಸ್ಟಿಕ್ ಮತ್ತು ಯಾವೋದು ಬಟ್ಟೆಗಳ ಧ್ವಜವು ಅಧಿಕೃತ ಮಾನ್ಯತೆ ಪಡೆಯುವುದಿಲ್ಲ.

ಇಂತಹ ಸಮಯದಲ್ಲಿಯೇ ನಾವುಗಳು ಪ್ರಾಥಮಿಕ ಶಾಲೆಯಲ್ಲಿ ಕಲಿತ ಶ್ರೀ ಕಯ್ಯಾರ ಕಿಞ್ಞಣ್ಣ ರೈ ಅವರ ವಿರಚಿತ ನಮ್ಮ ತ್ರಿವರ್ಣ ಧ್ವಜದ ಕುರಿತಾದ ಪದ್ಯವೊಂದು ನೆನಪಿಗೆ ಬರುತ್ತಿದೆ.

ಏರುತಿಹುದು ಹಾರುತಿಹುದು
ನೋಡು ನಮ್ಮ ಬಾವುಟ
ತೋರುತಿಹುದು ಹೊಡೆದು ಹೊಡೆದು
ಬಾನಿನಗಲ ಪಟಪಟ

ಕೇಸರಿ ಬಿಳಿ ಹಸಿರು ಮೂರು
ಬಣ್ಣ ನಡುವೆ ಚಕ್ರವು
ಸತ್ಯ ಶಾಂತಿ ತ್ಯಾಗ ಮೂರ್ತಿ
ಗಾಂಧಿ ಹಿಡಿದ ಚರಕವು

ಇಂತ ಧ್ವಜವು ನಮ್ಮ ಧ್ವಜವು
ನೋಡು ಹಾರುತಿರುವುದು
ಧ್ವಜದ ಶಕ್ತಿ ನಮ್ಮ ಭಕ್ತಿ
ನಾಡ ಸಿರಿಯ ಮೆರೆವುದು

ಕೆಂಪು ಕಿರಣ ತುಂಬಿ ಗಗನ
ಹೊನ್ನ ಬಣ್ಣವಾಗಿದೆ
ನಮ್ಮ ನಾಡ ಗುಡಿಯ ಬಣ್ಣ
ನೋಡಿರಣ್ಣ ಹೇಗಿದೆ

flag2

ನಮ್ಮ ದೇಶ, ನಮ್ಮ ಸಂಸ್ಕೃತಿ, ನಮ್ಮ ಸಂಪ್ರದಾಯ ಮತ್ತು ನಮ್ಮ ಧ್ವಜ ಪ್ರತಿಯೊಬ್ಬ ಭಾರತೀಯರಿಗೂ ಪವಿತ್ರವಾಗಿದ್ದು ನಮ್ಮ ಭಾರತಾಂಬೆಯ ಕೀರ್ತಿಯು ಆಗಸದಲ್ಲಿ ಎತ್ತರೆತ್ತರಕ್ಕೆ ಹಾರುವ ಧ್ವಜದಂತೆ ಮುಗಿಲೆತ್ತರಕ್ಕೆ ಏರಲಿ, ಪ್ರಪಂಚದ ಉಳಿದೆಲ್ಲಾ ದೇಶಗಳಿಗಿಂತಲೂ ಶ್ರೇಷ್ಠವಾದ ಪರಂಪರೆಯುಳ್ಳ ನಮ್ಮ ರಾಷ್ಟ್ರದ ಧ್ಯೇಯೋದ್ದೇಶಗಳು ಎಲ್ಲಕ್ಕಿಂತಲೂ ಎತ್ತರದಲ್ಲಿ ರಾರಾಜಿಸಲಿ. ಮತ್ತೊಮ್ಮೆ ಭಾರತ ವಿಶ್ವಗುರುವಾಗಿ ಮೆರೆಯಲಿ ಎಂಬುದೇ ನಮ್ಮೆಲ್ಲರ ಆಸೆಯಾಗಿದೆ.

ಏನಂತೀರೀ?
ನಿಮ್ಮವನೇ ಉಮಾಸುತ

ವಂದೇ ಮಾತರಂ, ಜೈ ಹಿಂದ್.

One thought on “ನಮ್ಮ ಧ್ವಜಾರೋಣದ ವಿಶೇಷತೆಗಳು ಮತ್ತು ಧ್ವಜ ಸಂಹಿತೆ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s