ರಾಜಮಂಡ್ರಿಯಲ್ಲಿ ನಡೆಯಲ್ಲಿದ್ದ ತಮ್ಮ ಸ್ನೇಹಿತರ ಮಗಳ ಮದುವೆಯಲ್ಲಿ ಭಾಗವಹಿಸಲು ರಾಯರು ತಮ್ಮ ಪತ್ನಿಯ ಜೊತೆ ವಿಶಾಖಪಟ್ಟಣಂನಿಂದ ಜನ್ಮಭೂಮಿ ರೈಲನ್ನು ಬೆಳ್ಳಂಬೆಳಗ್ಗೆ ಹತ್ತುತ್ತಾರೆ. ಬೆಳ್ಳಬೆಳಿಗ್ಗೆ ಎದ್ದಿದ್ದು ಮತ್ತು ಮುಂಜಾನೆಯ ತಂಗಾಳಿಯು ಬೀಸುತಿದ್ದರಿಂದ ಹಾಗೇ ಜೊಂಪು ಹತ್ತಿದ್ದೇ ಗೊತ್ತಾಗದೇ ರೈಲು ಟುನಿ ನಿಲ್ದಾಣದಲ್ಲಿ ಟೀ.. ಚಾಯ್… ಕಾಪೀ.. ಕಾಪೀ… ಎಂದು ಕಾಫೀ ಮಾರಿಕೊಂಡು ಬಂದ ವ್ಯಾಪಾರಿಯ ಶಬ್ಧದಿಂದಾಗಿ ಎಚ್ಚರವಾಗಿ ಎರಡು ಕಪ್ ಕಾಫಿ ಕೊಡಪ್ಪಾ ಎಂದು ಕೇಳಿ ಪಡೆಯುತ್ತಾರೆ.
ಒಂದು ಕಪ್ಪನ್ನು ತಮ್ಮ ಮಡದಿಗೆ ಕೊಟ್ಟು ಮತ್ತೊಂದು ಕಪ್ಪಿನ ಕಾಫಿಯ ಒಂದು ಗುಟುಕನ್ನು ಸವಿದು ಕಾಫಿಯ ಘಮಲು ಬಹಳ ಚೆನ್ನಾಗಿದ್ದರಿಂದ ಅವನನ್ನು ಹಾಗೆಯೇ ಅಭಿನಂದಿಸಿ ಎಷ್ಟಪ್ಪಾ ಕೊಡಬೇಕು? ಎಂದು ಕೇಳುತ್ತಾರೆ. ಆಗ ಆ ಕಾಫೀ ಮಾರುವವನು ಸರ್ 20 ರೂಪಾಯಿಗಳನ್ನು ಕೊಡಿ ಎಂದಾಗ, ತಮ್ಮ ಪರ್ಸಿನಿಂದ 200 ರೂಪಾಯಿಯ ನೋಟೊಂದನ್ನು ಆತನಿಗೆ ಕೊಡುತ್ತಾರೆ.
ಸರ್ ಚಿಲ್ಲರೇ ಇಲ್ಲವೇ? ಎಂದು ಕೇಳಿ, ತನ್ನ ಕೈನಿಂದ ಕಾಫಿಯ ಕೆಟಲನ್ನು ಇಳಿಸಿ ಚಿಲ್ಲರೆಗಾಗಿ ಶರ್ಟಿನ ಜೇಬನ್ನೆಲ್ಲಾ ತಡಗಾಡುವ ಸಮಯದಲ್ಲಿ ರೈಲು ಹೊರಡಲು ಅನುವಾದಾಗ, ಲಗುಬಗನೇ ಚಿಲ್ಲರೆಯನ್ನು ಕೊಡದೆಯೇ ಚಲಿಸುತ್ತಿದ್ದ ರೈಲನಿಂದ ಇಳಿದು ಕಿಟಕಿಯಿಂದ ಚಿಲ್ಲರೆ ಕೊಡಲು ಪ್ರಯತ್ನಿಸಿದನಾದರೂ, ಇವರ ಬೋಗಿ ಇಂಜಿನ್ನಿನ ಪಕ್ಕದಲ್ಲೇ ಇದ್ದ ಕಾರಣ ಚಿಲ್ಲರೆಯನ್ನು ಪಡೆದುಕೊಳ್ಳಲು ರಾಯರಿಗೆ ಸಾಧ್ಯವಾಗಲಿಲ್ಲ. ಕಾಫೀ ಚಟದ ನೆಪದಲ್ಲಿ ಚಿಲ್ಲರೆ ಇದೆಯೋ ಎನ್ನುವುದನ್ನೂ ಗಮನಿಸದೇ ಅನ್ಯಾಯವಾಗಿ ಬೆಳ್ಳಂಬೆಳಿಗ್ಗೆಯೇ 180 ರೂಪಾಯಿಗಳನ್ನು ಕಳೆದುಕೊಂಡನಲ್ಲಾ ಎಂದು ತಮ್ಮನ್ನೇ ತಾವು ಹಳಿದುಕೊಳ್ಳುತ್ತಾರೆ.
ಕಾಫೀ ಕುಡಿಯುತ್ತಲೇ ಇದನ್ನೆಲ್ಲಾ ಗಮನಿಸುತ್ತಿದ್ದ ರಾಯರ ಮಡದಿ, ಇಷ್ಟು ವಯಸ್ಸಾಗಿ ಅನುಭವ ಪಡೆದಿದ್ದರೂ, ಈ ರೀತಿಯಾಗಿ ದುಡ್ಡನ್ನು ಕಳೆದುಕೊಂಡಿರಲ್ಲಾ. ಕಾಫಿ ಕುಡಿಯುವ ಮೊದಲೇ ಹಣವನ್ನೇಕೆ ಕೊಡಬೇಕಿತ್ತು ಎಂದು ಮೂದಲಿಸಿದಾಗ, ಹೇ ಇದರಲ್ಲಿ ನನ್ನದು ಮತ್ತು ಅವನದ್ದೇನೂ ತಪ್ಪಿಲ್ಲ. ಆತ ಬೇಕೇಂದೇನೂ ಚಿಲ್ಲರೇ ಕೊಡದೇ ಓಡಿ ಹೋಗಲಿಲ್ಲ. ರೈಲು ವೇಗವಾಗಿ ಚಲಿಸಿದ ಕಾರಣ ಹೀಗಾಯಿತು. 180 ರೂಪಾಯಿಗಳೇನು ಹೆಚ್ಚಿನ ನಷ್ಟವೇನಿಲ್ಲ ಎಂದು ಸಮಜಾಯಿಸಿ ಕೊಡಲು ಪ್ರಯತ್ನಿಸುತ್ತಾರೆ.
ಆದರೆ ಗಂಡನ ತಪ್ಪನ್ನು ಸದಾಕಾಲವು ಎತ್ತಿ ಆಡಲು ಸಿದ್ಧವಿರುವ ಪತ್ನಿಯರಂತೆ ರಾಯರ ಪತ್ನಿಯೂ ನಮ್ಮ ಹತ್ತಿರ ಪೈಸೆ ಪೈಸೆಗೂ ಲೆಖ್ಖಾ ಕೇಳುತ್ತೀರಿ. ಹೀಗೆ ಹೊರಗೆಲ್ಲೋ ಕಳೆದುಕೊಳ್ಳುತ್ತೀರಿ. ಬೆಳಗಿನಿಂದ ಹತ್ತಾರು ರೈಲುಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತವೆ. ವ್ಯಾಪಾರಂ ದ್ರೋಹ ಚಿಂತನಂ ಎನ್ನುವಂತೆ ಪ್ರತಿಯೊಂದು ರೈಲಿನಲ್ಲಿಯೂ ನಿಮ್ಮಂತಹ ಹತ್ತಾರು ಬಕರಾಗಳು ಸಿಕ್ಕರೂ ಸಾಕು ಅವನಿಗೆ ಕಾಫೀ ಮಾರಿದ ಹಣಕ್ಕಿಂತಲೂ ಹೆಚಿನ ಹಣವನ್ನು ಸಂಪಾದಿಸಿಬಿಡುತ್ತಾನೆ ಎಂದು ಕುಹಕವಾಡುತ್ತಾರೆ.
ನೋಡಮ್ಮಾ ನಾವು ಜನರನ್ನು ನಂಬಬೇಕು, ರೈಲು ಇದ್ದಕ್ಕಿದ್ದಂತೆಯೇ ಆರಂಭವಾದರೆ ಅವನು ತಾನೇ ಏನು ಮಾಡಬಲ್ಲ? ಅವನು ನಮ್ಮ ಹಣದಲ್ಲಿ ಎಷ್ಟು ದಿನ ತಾನೇ ಬದುಕುತ್ತಾನೆ? ಎಂದು ಶಾಂತ ಚಿತ್ತದಲ್ಲಿ ರಾಯರು ಹೇಳುತ್ತಿದ್ದರೆ, ಅವರ ಪತ್ನಿ ದಿನಕ್ಕೆ ನಿಮ್ಮಂತಹ ನಾಲ್ಕು ಜನರು ಸಿಕ್ಕರೆ ಸಾಕು ಅವರು ಚೆನ್ನಾಗಿಯೇ ಬದುಕುತ್ತಾನೆ ಎಂದು ದುರುಗುಟ್ಟಿ ನೋಡುತ್ತಾರೆ.
ಅಲ್ಲಿಂದ ಮುಂದೆ ರೈಲು ವೇಗವಾಗಿ ಹೋಗುತ್ತಾ ನೋಡ ನೋಡುತ್ತಿದ್ದಂತೆಯೇ, ಮುಂದಿನ ನಿಲ್ದಾಣವಾದ ಅಣ್ಣಾವರಂ ದಾಟಿದರೂ ರಾಯರ ಮಡದಿಯ ಬುಸುಗುಟ್ಟುವಿಕೆ ಕಡಿಮೆ ಯಾಗಿರಲಿಲ್ಲ. ಎಲ್ಲಿಯವರೆಗೂ ನಿಮ್ಮಂತಹ ಮೋಸ ಹೋಗುವವರು ಇರುತ್ತಾರೋ ಅಲ್ಲಿಯವರೆಗೂ ಮೋಸ ಮಾಡುವವರು ಇರುತ್ತಲೇ ಇರುತ್ತಾರೆ. ನೀವು ಸುಖಾ ಸುಮ್ಮನೇ ಎಲ್ಲರನ್ನೂ ನಂಬಿ ಮೋಸಹೋಗುತ್ತೀರಿ ಎಂದು ಹೇಳುತ್ತಲೇ ಹೋದರೂ ರಾಯರು ಬಿಡು ಮಾರಾಯ್ತೀ, ಅವರು ಬಡವರು! ನಮ್ಮ ಹಣದಿಂದ ಅರಮನೆಯನ್ನೇನು ಕಟ್ಟಲು ಸಾಧ್ಯವೇ? ಎಂದು ಸಮಾಧಾನಪಡಿಸಲು ಪ್ರಯತ್ನಿಸುತ್ನಿಸಿದರಾದರು ಆಕೆಯ ಕೋಪ ಇನ್ನೂ ಇಳಿದಿರಲಿಲ್ಲ. ಅಷ್ಟರಲ್ಲಿ ಇಡೀ ಬೋಗಿ ತುಂಬಿಕೊಂಡು ಅನೇಕರು ನಿಂತು ಕೊಂಡು ಪ್ರಯಾಣಿಸುವಷ್ಟು ಭರ್ತಿಯಾಗಿತ್ತು.
ರಾಯರು ಕಿಟಕಿಯಿಂದ ರೈಲಿನೊಂದಿಗೆ ಓಡುತ್ತಿರುವಂತೆ ಭಾಸವಾಗುತ್ತಿದ್ದ ಗಿಡಮರಗಳನ್ನೂ ಮತ್ತು ಹೊಲ ಗದ್ದೆಗಳನ್ನು ನೋಡುತ್ತಾ ದುಃಖವನ್ನು ಮರೆಯಲು ಪ್ರಯತ್ನಿಸುತ್ತಿದ್ದರೆ, ಅಕ್ಕ ಪಕ್ಕದ ಸಹ ಪ್ರಯಾಣಿಕರು ಇವರನ್ನು ಕಂಡು ಅವರವರ ಭಾವಕ್ಕೆ ತಕ್ಕಂತೆ ಊಹಿಸಿಕೊಂಡು ರಾಯರನು ಮೌಲ್ಯಮಾಪನ ಮಾಡುತ್ತಿದ್ದರು. ಕೆಲವರು ರಾಯರನ್ನು ಮೂರ್ಖರೆಂದು ಭಾವಿಸುತ್ತಿದ್ದರೆ ಇನ್ನೂ ಕೆಲವರು ಸಹಾನುಭೂತಿ ಮತ್ತು ಕರುಣೆಯಿಂದ ನೋಡುತ್ತಿದ್ದರು. ಇನ್ನೂ ಕೆಲವರು ಗಂಡ ಹೆಂಡತಿಯ ಮುನಿಸನ್ನು ಕಂಡು ಉಚಿತ ಮನರಂಜನೆಯನ್ನು ಪಡೆದುಕೊಳ್ಳುತ್ತಿದ್ದರು.
ರೈಲು ಪೀತಾಪುರದ ಹೊರವಲಯವನ್ನು ತಲುಪುವ ಹೊತ್ತಿಗೆ, ಎಲ್ಲರೂ ಆ ಘಟನೆಯನ್ನು ಮರೆತು ತಮ್ಮ ತಮ್ಮ ಪಾಡಿಗೆ ಇರುವಾಗಲೇ, ಅಷ್ಟು ಜನರ ಮಧ್ಯೆ ಒಬ್ಬ ಚಿಗುರು ಮೀಸೆಯ ಹದಿ ಹರೆಯದ ಹುಡುಗ ಟೀ.. ಚಾಯ್… ಕಾಪೀ.. ಕಾಪೀ… ಎನ್ನುತ್ತಲೇ, ರಾಯರ ಬಳಿ ಬಂದು “ಸರ್, ಎರಡು ಕಾಫಿ ಖರೀದಿಸಿ 200 ರೂಪಾಯಿ ನೋಟು ಕೊಟ್ಟಿದ್ದು ನೀವೇನಾ? ಎಂದಾಗ, ರಾಯರು ಒಂದು ಕ್ಷಣ ಆನಂದಿತರಾದರೂ, ಅರೇ ನನಗೆ ಕಾಫಿ ಕೊಟ್ಟಿದ್ದು ವಯಸ್ಸಾದ ವ್ಯಕ್ತಿಯಲ್ಲವೇ? ಈತನಲ್ಲ ಎಂದೆನಿಸಿದರೂ, ಹೌದಪ್ಪಾ, ನಾನೇ 200 ರೂಪಾಯಿ ನೋಟೊಂದನ್ನು ಕಾಫಿ ಮಾರಾಟ ಮಾಡುತ್ತಿದ್ದ ವ್ಯಕ್ತಿಗೆ ನೀಡಿ ಚಿಲ್ಲರೆ ಸ್ವೀಕರಿಸುವ ಮುನ್ನವೇ ರೈಲು ಹೊರಟು ಹೋಯಿತು ಎಂದು ಹೇಳುತ್ತಾರೆ.
ಅದು ಸರೀ, ಸ್ವಾಮೀ, ಟುನಿ ನಿಲ್ದಾಣದಲ್ಲಿ ಕಾಫಿ ಕುಡಿದ ವ್ಯಕ್ತಿನೀವೇನಾ? ಎಂದು ಮತ್ತೊಮ್ಮೆ ಆ ಹುಡುಗ ಕೇಳಿದಾಗ, ನಾನು ಯಾಕೆ ಸುಳ್ಳು ಹೇಳಲೀ? ಬೇಕಾದರೆ ಇವರೆಲ್ಲರನ್ನೂ ಕೇಳು ಎಂದು ಅಕ್ಕ ಪಕ್ಕದವರತ್ತ ಕೈ ತೋರಿಸುತ್ತಾರೆ.
ಇಲ್ಲ! ಇಲ್ಲ ಸ್ವಾಮೀ! ನಾನು ನಿನ್ನನ್ನು ಅನುಮಾನಿಸುತ್ತಿಲ್ಲ ಆದರೆ ನಾನು ಚಿಲ್ಲರೆ ಕೊಡ ಬೇಕಾದ ವ್ಯಕ್ತಿ ನೀವೇನಾ? ಎಂದು ಖಚಿತ ಪಡಿಸಿಕೊಳ್ಳಲು ನಿಮ್ಮನ್ನು ಪದೇ ಪದೇ ಕೇಳಿದೆ ಕ್ಷಮಿಸಿ ಎಂದು ಹೇಳುತ್ತಾ ತನ್ನ ಜೇಬಿನಿಂದ 180 ರೂಪಾಯಿಗಳ ಚಿಲ್ಲರೆಯನ್ನು ತೆಗೆದು ರಾಯರ ಕೈಗಿಡುತ್ತಾನೆ
ರಾಯರಿಗೆ ಒಂದು ಕಡೇ ಸಂತೋಷ ಮತ್ತೊಂದು ಕಡೆ ಆಶ್ಚರ್ಯದಿಂದ ನೀನು ಯಾರಪ್ಪಾ? ಎಂದು ಕೇಳಿದರು. ಸ್ವಾಮೀ ನಾನು ಅವರ ಮಗ. ಟುನಿ ನಿಲ್ಡಾಣದಲ್ಲಿ ರೈಲು ಹೆಚ್ಚಿನ ಹೊತ್ತು ನಿಲ್ಲದ ಕಾರಣ, ಪ್ರತಿ ದಿನವೂ ಈ ರೀತಿಯ ಒಂದು ಅಥವಾ ಎರಡು ಘಟನೆಗಳು ಟುನಿ ನಿಲ್ದಾಣದಲ್ಲಿ ನಡೆಯುತ್ತವೆ. ಚಿಲ್ಲರೆ ಕೊಡುವಾಗ ಇಲ್ಲವೇ ಪಡೆಯುವಾಗ ರೈಲು ಪ್ರಾರಂಭವಾಗುತ್ತದೆ. ಎಷ್ಟೋ ಬಾರಿ ನಾವು ಸಹಾ ಹಣವನ್ನೂ ಕಳೆದುಕೊಳ್ಳುತ್ತೇವೆ.
ಅದಕ್ಕಾಗಿಯೇ, ನಾನು ಸಹಾ ಅದೇ ರೈಲಿನಲ್ಲಿ ಕಾಫೀ ಟೀ ಮಾರುತ್ತಾ ಇರುತ್ತೇನೆ. ನಮ್ಮ ತಂದೆ ರೈಲಿನಿಂದ ಇಳಿದ ನಂತರ ನನಗೆ ಕರೆ ಮಾಡಿ ಚಿಲ್ಲರೆ ಕೊಡಬೇಕಾದ ವಿವರ ವ್ಯಕ್ತಿಯ ವಿವರದ ಜೊತೆಗೆ ಭೋಗಿ ಮತ್ತು ಸೀಟ್ ವಿವರಗಳನ್ನು ತಿಳಿಸುತ್ತಾರೆ. ನಾನು ಹಾಗೆಯೇ ಕಾಫೀ, ಟೀ ಮಾರುತ್ತಲೇ ಬೋಗಿಯಿಂದ ಬೋಗಿಯಾನ್ನು ದಾಟುತ್ತಾ. ಚಿಲ್ಲರೆಯನ್ನು ಕೊಟ್ಟು ಮುಂದಿನ ನಿಲ್ದಾಣದಲ್ಲಿ ಇಳಿದು ಮತ್ತೊಂದು ರೈಲಿನಲ್ಲಿ ಪುನಃ ಟುನಿಗೆ ಮರಳುತ್ತೇನೆ. ನಮಗೆ ಬೇರೆಯವರು ದುಡ್ಡು ಕೊಡದಿದ್ದರೂ ಪರವಾಗಿಲ್ಲ. ಆದರೆ ನಾವು ಬೇರೆಯವರ ಹಣದ ಋಣದಲ್ಲಿ ಇರಬಾರದು ಎಂದು ನಮ್ಮ ತಂದೆ ನಂಬಿರುವ ಕಾರಣ, ನಾವಿಬ್ಬರೂ ಈ ರೀತಿಯ ವ್ಯವಸ್ಥೆಯನ್ನು ಮಾಡಿಕೊಂಡಿದ್ದೇವೆ ಎನ್ನುತ್ತಾ, ಸರಿ ಸಾರ್ ನಾನು ಬರುತ್ತೇನೆ ಎನ್ನುತ್ತಾನೆ.
ಅವನ ಉತ್ತರಿಂದ ಆಶ್ಚರ್ಯಚಕಿತರಾದ ರಾಯರು ಏನಪ್ಪಾ ನೀನು ಓದುತ್ತಿಲ್ಲವೇ? ಎಂದಾಗ, ಹೌದು ಸಾರ್, ನಾನು ಹತ್ತನೇ ತರಗತಿಯನ್ನು ಓದುತ್ತಿದ್ದೇನೆ, ನಾನು ಬೆಳಿಗ್ಗೆ ಅಪ್ಪನೊಂದಿಗೆ ಈ ರೀತಿಯಾಗಿ ಸಹಾಯ ಮಾಡಿದರೆ, ನನ್ನ ಅಣ್ಣ ಮಧ್ಯಾಹ್ನ ತಂದೆಗೆ ಸಹಾಯ ಮಾಡುತ್ತಾನೆ ಎಂದು ಹೇಳಿದಾಗ, ಇಂತಹ ಸಂಸ್ಕಾರವನ್ನು ಕಲಿಸಿರುವ ನಿಮ್ಮ ತಂದೆಯೊಂದಿಗೆ ಮಾತನಾಡ ಬೇಕು ಎನಿಸಿದೆ, ದಯವಿಟ್ಟು ಕರೆ ಮಾಡಿಕೊಡುವೆಯಾ? ಎಂದು ಹೇಳಿದಾಗ ಆ ಹುಡುಗ ಬಹಳ ಮುಜುಗರದಿಂದಲೇ ತನ್ನ ತಂದೆಗೆ ಕರೆ ಮಾಡಿ ಮೊದಲು ಚಿಲ್ಲರೆ ಕೊಟ್ಟ ವಿಷಯವನ್ನು ತಿಳಿಸಿ, ನಂತರ ರಾಯರು ಅವರೊಂದಿಗೆ ಮಾತನಾಡಲು ಬಯಸುತ್ತಾರೆ ಎಂದು ಹೇಳಿ ಫೋನನ್ನು ರಾಯರ ಕೈಗಿಡುತ್ತಾನೆ.
ಸ್ವಾಮೀ, ನಿಮ್ಮ ಮಗ 200 ರೂ.ಗಳ ನೋಟಿಗೆ ಚಿಲ್ಲರೆ ಕೊಟ್ಟಿದ್ದಾನೆ. ನಿಮ್ಮೀ ಪ್ರಾಮಾಣಿಕತೆಗೆ ನಾನು ಮೆಚ್ಚುಗೆಯನ್ನು ವ್ಯಕ್ತಪಡಿಸುವ ಸಲುವಾಗಿ ನಾನು ನಿಮ್ಮೊಂದಿಗೆ ಮಾತನಾಡಲು ಇಚ್ಚಿಸಿದೆ. ನೀವು ನಿಮ್ಮ ಮಕ್ಕಳಿಗೆ ಶಿಕ್ಷಣ ಕೊಡುವುದರ ಜೊತೆಗೆ ಅವರಲ್ಲಿ ಪ್ರಾಮಾಣಿಕತೆ ಮತ್ತು ಜೀವನದ ಮೌಲ್ಯಗಳನ್ನು ಕಲಿಸಿಕೊಟ್ಟಿರುವುದು ನನಗೆ ನನಗೆ ತುಂಬಾ ಸಂತೋಷವಾಗಿದೆ. ಹಾಗಾಗಿ ನಾನು ನಿಮ್ಮ ಇಡೀ ಕುಟುಂಬವನ್ನು ಅಭಿನಂದಿಸುತ್ತೇನೆ ಎನ್ನುತ್ತಾರೆ.
ಸರ್ ನಿಮ್ಮೀ ಅಭಿಮಾನಕ್ಕೆ ತುಂಬಾ ಸಂತೋಷವಾಗುತ್ತದೆ. ನಾನು ಕೇವಲ ಐದನೇ ತರಗತಿಯವರೆಗೆ ಮಾತ್ರ ಓದಿರಬಹುದು ಆದರೆ ಆ ದಿನಗಳಲ್ಲಿ ಶಿಕ್ಷಣದ ಜೊತೆಗೆ ನೈತಿಕತೆ ಮತ್ತು ಜೀವನದ ಮೌಲ್ಯಗಳನ್ನು ಪಂಚತಂತ್ರ ಸಣ್ಣ ಸಣ್ಣ ಕಥೆಗಳ ಮೂಲಕ ನಮಗೆ ಕಲಿಸಿಕೊಡಲಾಗುತ್ತಿತ್ತು. ಪಠ್ಯಪುಸ್ತಕಗಳಲ್ಲಿಯೂ ಸಹ ಪ್ರಾಮಾಣಿಕತೆ ಮತ್ತು ಸಮಗ್ರತೆಯಂತಹ ಮೌಲ್ಯಗಳನ್ನು ಬಲಪಡಿಸುವಂತಹ ವಿಷಯಗಳನ್ನು ಹೊಂದಿದ್ದವು ಆದರಿಂದಗಿಯೇ ನಮಗೆ ಒಳ್ಳೆಯದು ಮತ್ತು ಕೆಟ್ಟದ್ದು, ಸರಿ ಮತ್ತು ತಪ್ಪುಗಳ ವ್ಯತ್ಯಾಸ ತಿಳಿಯುವುದರಲ್ಲಿ ಸಹಕಾರಿಯಾಗಿದೆ. ಆ ತತ್ವಗಳೇ ಇಂದಿಗೂ ನಮಗೆ ಪ್ರಾಮಾಣಿಕ ಜೀವನ ನಡೆಸಲು ಮಾರ್ಗದರ್ಶನ ನೀಡುತ್ತಿದೆ. ದುರಾದೃಷ್ಟವಶಾತ್ ಇಂದಿನ ಶಾಲೆಗಳ ಶಿಕ್ಷಣದಲ್ಲಿ ಅಂತಹ ಮೌಲ್ಯಗಳನ್ನು ಕಲಿಸಿಕೊಡುತ್ತಿಲ್ಲ. ಜೀವನದ ಮೌಲ್ಯಕ್ಕಿಂತಲು ಅಂಕಗಳ ಬೆನ್ನೆತ್ತಿ ಹೋಗುತ್ತಿರುವುದು ನಿಜಕ್ಕೂ ಬೇಸವಾಗುತ್ತಿದೆ.
ನನ್ನ ಮಕ್ಕಳು ಮನೆಯಲ್ಲಿ ಓದುತ್ತಿದ್ದಾಗ, ಅದನ್ನು ಕೇಳಿಸಿಕೊಂಡಿದ್ದೇನೆ. ಅವರ ಪಠ್ಯಕ್ರಮದಲ್ಲಿ ನೈತಿಕ ಕಥೆಗಳು, ಸ್ಫೂರ್ತಿದಾಯಕ ಕವನಗಳು, ಪಂಚತಂತ್ರ, ರಾಜರತ್ನಂ ಅವರ ಮಕ್ಕಳ ಕಥೆಗಳ ಬದಲಾಗಿ, ಮೌಲ್ಯವಿಲ್ಲದ ಗೊಡ್ಡು ವಿಷಯಗಳನ್ನು ಕಲಿಯುತ್ತಿರುವುದನ್ನು ಗಮನಿಸಿದ್ದೇನೆ. ಅದಕ್ಕಾಗಿಯೇ ನನಗೆ ತಿಳಿದಿರುವ ಕೆಲವು ಮೌಲ್ಯಗಳನ್ನು ಕಲಿಸಿಕೊಡುವ ಸಲುವಾಗಿ ನಾನು ಈ ರೀತಿಯ ಸರಳ ಕಾರ್ಯಗಳನ್ನು ಅವರಿಂದ ಮಾಡಿಸುತ್ತೇನೆ.
ಈ ಮಾತುಗಳನ್ನು ಕೇಳುತ್ತಿದ್ದಂತೆಯೇ ಆ ಕಾಫೀ ಮಾರಾಟಗಾರನ ದೂರದೃಷ್ಟಿ ಮತ್ತು ಅದನ್ನು ಅನೂಚಾನಾಗಿ ಪಾಲಿಸುತ್ತಿರುವ ಅವರ ಮಕ್ಕಳ ಕುರಿತಾಗಿ ಆಶ್ಚರ್ಯಚಕಿತರಾಗಿ ಅಭಿನಂದನಾಪೂರ್ವಕವಾಗಿ ಆ ಹುಡುಗನ ಬೆನ್ನನ್ನು ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೆಲ್ಲಾ ಗಮನಿಸುತ್ತಿದ್ದ ರಾಯರ ಮಡದಿ ಒಂದು ಕ್ಷಣ ಇಂಗು ತಿಂದ ಮಂಗನಂತಾದರೂ ನಂತರ ಸಾವರಿಸಿಕೊಂಡು ರಾಯರತ್ತ ಕ್ಷಮೆಯಾಚಿಸುವ ರೀತಿಯಲ್ಲಿ ದೇಶಾವರಿ ನಗೆ ಬೀರಿ ಪರಿಸ್ಥಿತಿಯನ್ನು ಸರಿಪಡಿಸಲು ಪ್ರಯತ್ನಿಸುತ್ತಾರೆ.
ಬಂದ ಕೆಲಸವನ್ನು ಮುಗಿಸಿಕೊಂಡ ಹುಡುಗ ಇದಾವುದಕ್ಕೂ ತಲೆ ಕೆಡಸಿಕೊಳ್ಳದೇ ತನ್ನ ಪಾಡಿಗೆ ತಾನು ರೈಲಿನಿಂದ ಇಳಿದು ಹೋಗುತ್ತಿದ್ದಂತೆಯೇ, ಮನಸ್ಸಿನಲ್ಲಿಯೇ ಆ ಹುಡುಗನ ಸಂಸ್ಕಾರಕ್ಕೆ ವಂದಿಸುತ್ತಾ, ಇಂತಹ ಕಲಿಯುಗದಲ್ಲೂ ಈ ರೀತಿಯ ಪ್ರಾಮಾಣಿಕರು ಸದಾಚಾರವನ್ನು ಪಾಲಿಸುತ್ತಿರುವುದರಿಂದಲೇ ಧರ್ಮವು ಇನ್ನೂ ಪ್ರವರ್ಧಮಾನಕ್ಕೆ ಬರುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ಕೊಂಡು ನಿಟ್ಟುಸಿರು ಬಿಟ್ಟರೆ, ಅದುವರೆವಿಗೂ ಈ ಘಟನೆಯ ಬಗ್ಗೆ ತಲಾ ತಟ್ಟಿ ಮಾತನಾಡುತ್ತಿದ್ದ ಸಹಪ್ರಯಾಣಿಕರೂ ಮೂಗಿನ ಮೇಲೆ ಬೆರಳಿಟ್ಟುಕೊಂಡು ಗರ ಬಡಿದವರಂತೆ, ಈಗಲೂ ಇಂತಹ ಸಹೃದಯದವರು ಇದ್ದಾರೆಯೇ? ಎಂದು ಮಾತನಾಡಿಕೊಂಡರು.
ಇದೇ ಅಲ್ಲವೇ ನಮ್ಮ ಧರ್ಮ, ಇದನ್ನೇ ಅಲ್ಲವೇ ನಮ್ಮ ಹಿರಿಯರು ನಮಗೆ ಹೇಳಿ ಕೊಟ್ಟಿದ್ದು ಮತ್ತು ಇದನ್ನೇ ಅಲ್ಲವೇ ನಾವು ನಮ್ಮ ಮುಂದಿನ ಪೀಳಿಗೆಗೆ ಕಲಿಸಿ ಕೊಡಬೇಕಾಗಿರುವುದು.
ಏನಂತೀರೀ?
ನಿಮ್ಮವನೇ ಉಮಾಸುತ
ಈ ಲೇಖನ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಉದ್ಯೋಗಿ ಮತ್ತು ತೆಲುಗಿನ ಖ್ಯಾತ ಬರಹಗಾರಾದ ಶ್ರೀ ಜೆ.ಪಿ.ಶರ್ಮಾ ಅವರ ಲೇಖನವೊಂದರ ಭಾವಾನುವಾದವಾಗಿದೆ.
My native place Hirisave, now I leave in Hassan, I meet your grandfather Sri Gamaki Nanjudiah and leasen his Gamaki also. This coffee story is very I also experienced same type.
Thank
H V SHIV SHANKAR
LikeLiked by 1 person
ನಮ್ಮ ತಾತನವರ ಪರಿವಯಸ್ಥರು ಎಂಬ ವಿಷಯ ಕೇಳಿ ತುಂಬಾ ಸಂತೋಷವಾಯಿತು. ನಿಮ್ಮ ದೂರವಾಣಿ ಸಂಖ್ಯೆ ಕೊಡಿ. ಸಂಪರ್ಕದಲ್ಲಿ ಇರೋಣ.
LikeLike
Super morality story thanks to the writer
LikeLiked by 1 person