ನಮ್ಮ ಸನಾತನ ಹಿಂದೂ ಧರ್ಮದಲ್ಲಿ ಜನಿಸಿದ ಪ್ರತಿಯೊಬ್ಬರೂ ಹುಟ್ಟಿದಾರಿಂದಲೇ ಐದು ಋಣಗಳಿಗೆ ಭಾಜನರಾಗುತ್ತಾರೆ. ತಮ್ಮ ಜೀವಿತಾವಧಿಯಲ್ಲಿ ಈ ಐದೂ ಋಣಗಳಿಂದ ಮುಕ್ತಿ ಹೊಂದಿದಲ್ಲಿ ಮಾತ್ರವೇ ಅವರಿಗೆ ಅಂತಿಮವಾಗಿ ಸದ್ಗತಿ ದೊರೆಯುತ್ತದೆ ಎಂದು ನಮ್ಮ ಪುರಾಣಗಳಲ್ಲಿ ಹೇಳಲಾಗಿದೆ. ಆ ಐದು ಋಣಗಳೆಂದರೆ, ದೇವಋಣ, ಋಷಿಋಣ, ಪಿತೃಋಣ, ಭೂತಋಣ ಮತ್ತು ಸಮಾಜಋಣ. ಈ ಐದು ಋಣಗಳಲ್ಲಿ ಪಿತೃಋಣವನ್ನು ತೀರಿಸುವ ಸಲುವಾಗಿ ಮಾಡುವ ಪಕ್ರಿಯೆಯನ್ನೇ ಶ್ರಾಧ್ಧಕರ್ಮ ಅಥವಾ ಶ್ರಾದ್ಧ ಇನ್ನುಆಡು ಭಾಷೆಯಲ್ಲಿ ತಿಥಿ ಎನ್ನಲಾಗುತ್ತದೆ
ಈ ಭೂಮಿಯಲ್ಲಿ ನಮ್ಮ ಜನನಕ್ಕೆ ಕಾರಣೀಭೂತರಾದ ನಮ್ಮ ತಂದೆ ತಾಯಿಯರು ಮತ್ತು ನಮ್ಮ ವಂಶದವರಿಗೆ ಅವರಿಂದ ಪಡೆದ ಸಹಾಯಕ್ಕಾಗಿ ಯಥಾಶಕ್ತಿ ಕೃತಜ್ಞತೆಗಳನ್ನು ಸಲ್ಲಿಸುವ ಮಹಾಕಾರ್ಯವೇ ಶ್ರಾಧ್ಧ. ಹಾಗಾಗಿಯೇ ಇದನ್ನು ಯಜ್ಞವೆಂದೂ ಕರೆಯಲಾಗುತ್ತದೆ.
ತಂದೆ ತಾಯಿಯರು ಮತ್ತು ಸಂಬಂಧಿಕರ ಮರಣೋತ್ತರ ಪ್ರಯಾಣವು ಸುಖಕರ ಮತ್ತು ಕ್ಲೇಶರಹಿತವಾಗಿ, ಅವರಿಗೆ ಸದ್ಗತಿಯು ಸಿಗಲೆಂದು ಮಾಡುವ ಸಂಸ್ಕಾರಕ್ಕೇ ಶ್ರಾಧ್ಧ ಎನ್ನಲಾಗುತ್ತದೆ. ಈ ಶ್ರಾದ್ಧಕರ್ಮಗಳಲ್ಲಿ ಪಿತೃಗಳಿಗೆ ಹವಿರ್ಭಾಗವನ್ನು ಕೊಡುವುದರಿಂದ ಅವರನ್ನು ಸಂತುಷ್ಟಗೊಳಿಸುವ ಮೂಲಕ ಅವರ ಅತೃಪ್ತವಾಗಿ ಉಳಿದಿದ್ದ ಆಸೆಗಳಿಗೆ ಮುಕ್ತಿಯನ್ನು ಕೊಡಬಹುದಾಗಿದೆ. ಪಿತೃಗಳು ಆತ್ಮಗಳು ಅತೃಪ್ತವಾಗಿಯೇ ಉಳಿದರೆ, ಆ ವಾಸನಾಯುಕ್ತ ಪಿತೃಗಳು ದುಷ್ಟ ಶಕ್ತಿಗಳ ಅಧೀನಕ್ಕೊಳಪಟ್ಟು ಅವರ ಗುಲಾಮರಾಗುತ್ತಾರೆ. ಈ ದುಷ್ಟ ಶಕ್ತಿಗಳು ವಾಸನಾಯುಕ್ತ ಪಿತೃಗಳ ಮೂಲಕ ತಮ್ಮ ಕುಟುಂಬದವರಿಗೆ ತೊಂದರೆಗಳನ್ನು ನೀಡುವ ಸಂಭವವೂ ಇರುವ ಕಾರಣ, ಶ್ರಧ್ಧೆಯಿಂದ ಶ್ರಾದ್ಧವನ್ನು ಮಾಡುವ ಮೂಲಕ ನಮ್ಮ ಪಿತೃಗಳನ್ನು ಆ ದುಷ್ಟ ಶಕ್ತಿಗಳಿಂದ ವಿಮುಕ್ತಿ ಗೊಳಿಸುವುವ ಮೂಲಕ ನಮ್ಮ ಇಡೀ ಕುಟುಂಬಕ್ಕೆ ನೆಮ್ಮದಿಯನ್ನು ತಂದು ಕೊಡಬಹುದೆಂದು ನಮ್ಮ ಶಾಸ್ತ್ರಗಳು ಹೇಳುತ್ತವೆ.
ಹಾಗಾಗಿ ತಮ್ಮ ಮಾತಾ ಪಿತೃಗಳು ಹಿಂದೂ ಪಂಚಾಗದ ಪ್ರಕಾರ ಮರಣ ಹೊಂದಿದ ತಿಥಿಯ ದಿನದಂದು ಶ್ರಾದ್ಧ ಕಾರ್ಯವನ್ನು ಮಾಡುವುದು ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಎಲ್ಲರಿಗೂ ತಮ್ಮ ಪೋಷಕರು ದೈವಾಧೀನರಾದ ತಿಥಿ ಸರಿಯಾಗಿ ಅರಿವಿಲ್ಲದಿದ್ದ ಪಕ್ಷದಲ್ಲಿ ಭಾದ್ರಪದ ಮಾಸದ ಕೃಷ್ಣಪಕ್ಷದ ಪಾಡ್ಯದಿಂದ ಅಮಾವಾಸ್ಯೆಯವರೆಗೂ ಪಿತೃಪಕ್ಷ ಎಂದು ಕರೆಯಲಾಗುವ ಈ ಹದಿನೈದು ದಿನಗಳಲ್ಲಿ ತಮ್ಮ ಅನುಕೂಲದ ಪ್ರಕಾರ ತಮ್ಮ ಕುಲದ ಎಲ್ಲ ಪಿತೃಗಳೂ ಸೇರಿದಂತೆ ಅಗಲಿದ ಆವರ ಆಪ್ತರು, ಬಂಧು-ಮಿತ್ರರು ಮತ್ತು ಸಾಕುಪ್ರಾಣಿಗಳಿಗೂ ಸಹಾ ತರ್ಪಣ ಕೊಡುವ ಮೂಲಕ ಶ್ರಾದ್ಧವನ್ನು ಮಾಡಬಹುದಾಗಿದೆ. ಆ ಹದಿನೈದು ದಿನಗಳ ಕಾಲ ಪಿತೃಕಾರ್ಯವನ್ನು ಮಾಡಲು ಸಾಧ್ಯವಾಗದಿದ್ದಲ್ಲಿ ಪಿತೃಪಕ್ಷದ ಕಡೆಯ ದಿನವಾದ ಅಮಾವಾಸ್ಯೆಯಂದು ಶ್ರಾದ್ಧ ಮಾಡಲು ಅತ್ಯಂತ ಹೆಚ್ಚು ಯೋಗ್ಯವಾದ ದಿನವಾಗಿದೆ ಈ ಅಮಾವಾಸ್ಯೆಯನ್ನು ಮಹಾಲಯ ಅಮಾವಾಸ್ಯೆ ಅಥವಾ ಸರ್ವಪಿತ್ರೀ ಅಮಾವಾಸ್ಯೆ ಎಂದೂ ಕರೆಯಲಾಗುತ್ತದೆ.
ನಮ್ಮ ಧರ್ಮದ ನಂಬಿಕೆಯ ಪ್ರಕಾರ ಒಂದು ಕುಟುಂಬದ ಮೂರು ತಲೆಮಾರಿನ ಹಿರಿಯರು/ಪೂರ್ವಜರು/ಪಿತೃಗಳಆತ್ಮವು ಪಿತೃಲೋಕದಲ್ಲಿ ಶಾಶ್ವತ ಸ್ಥಾನವನ್ನು ಇನ್ನೂ ಪಡೆಯಲಾಗದೇ, ಭೂಮಿ ಮತ್ತು ಸ್ವರ್ಗದ ನಡುವಿನ ಪ್ರದೇಶದಲ್ಲಿ ವಾಸ ಮಾಡಿಕೊಂಡಿರುತ್ತಾರೆ. ಹಾಗಾಗಿ ಅಂತಹವರಿಗೆ ಸದ್ಗತಿಯನ್ನು ಕೊಡುವ ಮತ್ತು ಅವರಿಗೆ ದೈನಂದಿನ ಭೋಜನಾದಿ (ನಮ್ಮ ಒಂದು ವರ್ಷ ದೇವಲೋಕದಲ್ಲಿ ಒಂದು ದಿನ) ಪ್ರಕ್ರಿಯೆಗಳನ್ನು ನೋಡಿಕೊಳ್ಳುವ ಸಲುವಾಗಿ ಈ ಪಿತೃಪಕ್ಷದಲ್ಲಿ ಪಿಂಡ ಪ್ರಧಾನವನ್ನೋ ಇಲ್ಲವೇ ಎಡೆಯನ್ನು ಇಡುವ ಸಂಪ್ರದಾಯವಿದೆ. ಹಾಗಾಗಿ ಶ್ರಾದ್ಧ ಮಾಡುವಾಗ ಶ್ರಾದ್ಧ ತಂದೆಯದ್ದಾಗಿದ್ದರೆ ಅಪ್ಪ, ತಾತ ಮತ್ತು ಮುತ್ತಾತ, ಇನ್ನೂ ತಾಯಿಯ ಶ್ರಾದ್ಧವಾಗಿದ್ದರೆ, ತಾಯಿ, ಅಜ್ಜಿ ಮತ್ತು ಮುತ್ತಜ್ಜಿಯರು ಹೀಗೆ ಮೂರು ತಲೆಮಾರಿನ ಪೂರ್ವಜರಿಗೆ ಪಿಂಡ ಪ್ರದಾನ ಮತ್ತು ತರ್ಪಣ ಕೊಡುವ ಸಂಪ್ರದಾಯವಿದೆ.
ಇನ್ನು ಒಂದು ಪೌರಾಣಿಕ ಕಥೆಯ ಪ್ರಕಾರ, ಪಿತೃಪಕ್ಷದ ಆರಂಭವಾಗುವಾಗ ಸೂರ್ಯನು ಕನ್ಯಾರಾಶಿಗೆ ಪ್ರವೇಶಿಸಿ ನಂತರದ ಮುಂದಿನ ರಾಶಿಗೆ ಹೋಗುವ ಮಧ್ಯದ ಸಮಯದಲ್ಲಿ ಪಿತೃಗಳ ಆತ್ಮವು ಭೂಮಿಯಲ್ಲಿರುವ ತಮ್ಮ ವಂಶಜರ ಮನೆಗಳಿಗೆ ಬಂದು ವಾಸಿಸುತ್ತವೆ ಎಂಬ ನಂಬಿಕೆ ಇದೆ. ಮಹಾಭಾರತದಲ್ಲಿ ದಾನ, ವೀರ, ಶೂರ ಎಂಬ ಪ್ರಖ್ಯಾತಿಯಾಗಿರುವ ಕರ್ಣನನ್ನು ದೇವದೂತರು ಸ್ವರ್ಗಕ್ಕೆ ಕರೆದೊಯ್ಯುವಾಗ ಮಾರ್ಗದ ಮಧ್ಯೆ ಆತನಿಗೆ ಹಸಿವಾದಾಗ ಸುತ್ತ ಮುತ್ತಲೂ ಕೇವಲ ಬೆಳ್ಳಿ, ಬಂಗಾರ, ವಜ್ರ, ವೈಢೂರ್ಯಗಳು ಮಾತ್ರವೇ ಇರುತ್ತದೆಯೇ ಹೊರತು ಆವರಿಗೆ ತಿನ್ನಲು ಏನೂ ಸಿಗುವುದಿಲ್ಲ. ತಿನ್ನಲು ಈ ರೀತಿಯಾಗಿ ಏನೂ ಸಿಗದಿರಲು ಕಾರಣವೇನು ಎಂದು ವಿಚಾರಿಸಿದಾಗ, ಕರ್ಣ ತನ್ನ ಜೀವಿತಾವಧಿಯಲ್ಲಿ ಯಥೇಚ್ಛವಾಗಿ ಬೆಳ್ಳಿ, ಬಂಗಾರ, ವಜ್ರ, ವೈಢೂರ್ಯಗಳನ್ನು ದಾನ ಮಾಡಿದ್ದರೂ ತಮ್ಮ ಪೂರ್ವಜರಿಗೆ ಶ್ರಾದ್ಧ ಮಾಡದೇ ಇದ್ದ ಕಾರಣ ಅವರಿಗೆ ಯಾವುದೇ ಆಹಾರ ಸಿಗದೇ ಇದ್ದ ಕಾರಣಕ್ಕೆ ಈ ರೀತಿಯ ಪರಿಸ್ಥಿತಿ ಉಂಟಾಯಿತು ಎಂಬುದರ ಅರಿವಾಯಿತು. ಹಾಗಾಗಿ ಈ ಲೋಪವನ್ನು ಸರಿಪಡಿಸುವ ಸಲುವಾಗಿ ಈ ಮೊದಲೇ ಹೇಳಿದಂತೆ ತಮ್ಮ ಮೂರು ತಲೆಮಾರಿನ ಪೂರ್ವಜರನ್ನು ಆರಾಧಿಸಿ ಅವರಿಗೆ ಶ್ರದ್ಧೆಯಿಂದ ಶ್ರಾದ್ಧ ಮಾಡುವ ಮೂಲಕ ಅವರಿಗಿಷ್ಟವಾದ ಭೋಜನವನ್ನು ಹಾಕಿಸುವ ಮೂಲಕ ಪಿತೃ ಋಣವನ್ನುಈ ಪಿತೃಪಕ್ಷದಲ್ಲಿ ತೀರಿಸುವ ಸಂಪ್ರದಾಯ ರೂಢಿಗೆ ಬಂದಿದೆ ಎಂದು ನಂಬಿಕೆಯಾಗಿದೆ.
ಇನ್ನು ನಮ್ಮ ಶಾಸ್ತ್ರಗಳ ಪ್ರಕಾರ, ಈ ಪಿತೃ ಪಕ್ಷದ ಸಮಯವನ್ನು ಅಪರಕರ್ಮಗಳಿಗಾಗಿ ಮೀಸಲಾಗಿರಿಸಿರುವ ಕಾರಣ, ಈ ಹದಿನೈದು ದಿನಗಳಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ ಮತ್ತು ಈ ಅವಧಿಯಲ್ಲಿ ಹೊಸ ವಸ್ತುಗಳನ್ನಾಗಲೀ ಹೊಸ ಕೆಲಸವನ್ನು ಮಾಡುವುದಿಲ್ಲ. ಅದೇ ರೀತಿ ಪಿತಋಣವನ್ನು ತೀರಿಸುವವರು ಮಾಂಸಾಹಾರ ಸೇವಿಸುವರಾಗಿದ್ದಲ್ಲೀ ಈ ಅವಧಿಯಲ್ಲಿ ಮಾಂಸಾಹಾರವನ್ನು ಸೇವಿಸದಿರುವ ಸಂಪ್ರದಾಯವೂ ರೂಢಿಯಲ್ಲಿದೆ. ಇದಕ್ಕೂ ಒಂದು ಹೆಜ್ಜೆ ಮುಂದುವರೆದು, ಶ್ರಾಧ್ಧ ಮಾಡುವ ಕತೃ ಈ ಹದಿನೈದು ದಿನಗಳ ಕಾಲ ಕಾಲಿಗೆ ಚಪ್ಪಲಿಯನ್ನು ಧರಿಸದೇ, ವಪನ ಕ್ರಿಯೆ (ಮುಖ ಕ್ಷೌರ ಮತ್ತು ಕೂದಲು ಕತ್ತರಿಸುವುದು) ಯನ್ನಾಗಲೀ ಅಥವಾ ಉಗುರುಗಳನ್ನೂ ಸಹಾ ಕತ್ತರಿಸಬಾರದು ಎನ್ನುವ ನಿಯಮವಿದೆ.
ಪಿತೃ ಪಕ್ಷದ ಹದಿನೈದು ದಿನಗಳಲ್ಲಿ ಪಿತೃಗಳ ಆತ್ಮವು ಭೂಮಿಯಲ್ಲಿರುವ ತಮ್ಮ ವಂಶಜರ ಮನೆಗಳಿಗೆ ಯಾವುದೇ ರೂಪದಲ್ಲಿ ಬರಬಹುದು ಎಂಬ ನಂಬಿಕೆ ಇರುವ ಕಾರಣ, ಈ ಹದಿನೈದು ದಿನಗಳಲ್ಲಿ, ಯಾವುದೇ ಮನುಷ್ಯರು, ಪ್ರಾಣಿಗಳು, ಪಶು ಮತ್ತು ಪಕ್ಷಿಗಳನ್ನು ಅಗೌರವಿಸದೇ, ಅವರುಗಳಿಗೆ ಯಥಾಶಕ್ತಿ ಆಹಾರವನ್ನು ನೀಡಬೇಕು ಎಂದೂ ಶಾಸ್ತ್ರದಲ್ಲಿ ತಿಳಿಸಲಾಗಿದೆ. ಇನ್ನೂ ಈ ಪಿತೃ ಪಕ್ಷದಲ್ಲಿ ಪಿತೃಗಳನ್ನು ಸಂತೃಪ್ತ ಪಡಿಸುವ ಸಲುವಾಗಿ ಆಹಾರವನ್ನು ತಯಾರಿಸುವ ಸಲುವಾಗಿ ಕಬ್ಬಿಣದ ಪಾತ್ರೆಗಳಲ್ಲಿ ಅಡುಗೆಯನ್ನು ಮಾಡದೇ, ತಾಮ್ರ ಅಥವಾ ಹಿತ್ತಾಳೆಯ ಪಾತ್ರೆಗಳನ್ನು ಬಳಸುವುದು ಉತ್ತಮವಾಗಿರುವುದಲ್ಲದೇ, ಆಹಾರ ತಯಾರಿಸುವಾಗ, ಜೀರಿಗೆ, ಕರೀ ಉಪ್ಪು, ಸೋರೆಕಾಯಿ ಮತ್ತು ಸೌತೆಕಾಯಿಗಳು ನಿಷಿದ್ಧವಾಗಿದೆ.
ಈ ಪಿತೃಪಕ್ಷದಲ್ಲಿ ಶ್ರಾದ್ಧ ಕರ್ಮಗಳನ್ನು ಮನೆಯಲ್ಲಿ ಮಾಡುವುದಕ್ಕಿಂತಲೂ, ಅಪರ ಕರ್ಮಕ್ಕೆಂದೇ ಪ್ರಸಿದ್ಧವಾಗಿರುವ ತೀರ್ಥಕ್ಷೇತ್ರಗಳಾದ ಗಯ, ಪ್ರಯಾಗ, ಬದರಿನಾಥದಲ್ಲಿ ಶ್ರಾದ್ಧ ಮಾಡಿದಲ್ಲಿ ಪೂರ್ವಜರಿಗೆ ಹೆಚ್ಚಿನ ಮೋಕ್ಷ ಸಿಗುತ್ತದೆ ಎಂದು ನಂಬಲಾಗಿದೆ.
- ಪಕ್ಷಮಾಸದಲ್ಲಿ ವಿಧಿವತ್ತಾಗಿ ಆಚಾರ್ಯ ಮುಖೇನ ಬ್ರಾಹ್ಮಣರು ಮತ್ತು ಬಂಧುಗಳ ಸಮ್ಮುಖದಲ್ಲಿ ಶ್ರಾದ್ಧವನ್ನು ಮಾಡಲು ಸಾಧ್ಯವಾಗದಿದ್ದಲ್ಲಿ, ಒಬ್ಬ ಬ್ರಾಹ್ಮಣರಿಗೆ ಅವರ ಒಂದು ದಿನಕ್ಕೆ ಅಗತ್ಯವಿರುವ ಅಕ್ಕಿ, ಬೇಳೆ, ಬೆಲ್ಲ, ಹಾಲು, ಮೊಸರು, ತುಪ್ಪಾ ಮತ್ತು ತರಕಾರಿಗಳ ಜೊತೆ ಯಥಾ ಶಕ್ತಿ ದಕ್ಷಿಣೆಯ ಸ್ವಯಂಪಾಕ ನೀಡುವ ಮೂಲಕವೂ ಶ್ರಾದ್ಧವನ್ನು ಮಾಡಬಹುದಾಗಿದೆ
- ಈ ರೀತಿಯಲ್ಲಿ ಸ್ವಯಂ ಪಾಕವನ್ನೂ ನೀಡಲು ಸಾಧ್ಯವಾಗದಿದ್ದಲ್ಲಿ ಕಡೇ ಪಕ್ಷ ಒಂದು ಹಸುವಿಗೆ ಅಕ್ಕಿ, ಬೆಲ್ಲ ಮತ್ತು ಹಣ್ಣುಗಳನ್ನು ನೀಡುವ ಮೂಲಕವೂ ಪಿತೃಗಳ ಋಣ ಸಂದಾಯ ಮಾಡಬಹುದಾಗಿದೆ.
- ಇನ್ನು ಗೋವುಗಳಿಗೆ ಕೊಡುವಷ್ಟೂ ಆರ್ಥಿಕವಾಗಿ ಸಧೃಡರಾಗಿಲ್ಲದಿದ್ದ ಪಕ್ಷದಲ್ಲಿ ಹತ್ತಿರದ ಅರಳೀ ಮರಕ್ಕೆ ಶ್ರದ್ಧೆಯಿಂದ ಮೂರು ಸುತ್ತು ಪ್ರದಕ್ಷಿಣೆ ಹಾಕಿ ಭಕ್ತಿಯಿಂದ ಅರಳೀ ಮರವನ್ನು ತಬ್ಬಿಕೊಂಡು ಭಗವಂತ ಆರ್ಥಿಕವಾಗಿ ಸಧೃಡನಾಗಿಲ್ಲದ ಕಾರಣ ನಮ್ಮ ಪಿತೃಗಳನ್ನು ಸಂಪ್ರೀತಗೊಳಿಸಲು ಸಾಧ್ಯವಾಗದ ಕಾರಣ ನಿನ್ನಲ್ಲಿ ಶರಣಾಗತಿ ಬಯಸುತ್ತಿದ್ದೇನೆ. ದಯವಿಟ್ಟು ಇದನ್ನು ಮನ್ನಿಸಿ ನಮ್ಮ ಪಿತೃಗಳನ್ನು ಸಂಪನ್ನಗೊಳಿಸು ಎಂದು ಬೇಡಿ ಕೊಳ್ಳುವ ಮೂಲಕವೂ ಶ್ರಾಧ್ಧವನ್ನುಆಚರಿಸಬಹುದಾಗಿದೆ.
- ಹೀಗೆ ಮಾಡಲು ಆಗದೇ ಹೋದಲ್ಲಿ ಹತ್ತಿರದ ನದಿ, ಹಳ್ಳ ಕೊಳ್ಳಗಳು ಅದೂ ಇಲ್ಲದಿದ್ದಲ್ಲಿ ಮನೆಯಲ್ಲಿಯೇ ಶುದ್ಧವಾಗಿ ಸ್ನಾನ ಮಾಡಿ ಆತ್ಮಶುದ್ಧಿಯಿಂದ ಪೂರ್ವಜರನ್ನು ನೆನಸಿಕೊಂಡು ಪೂರ್ವಾಭಿಕವಾಗಿ ಮೂರು ಬಾರಿ ಅರ್ಘ್ಯ ನೀಡುವ ಮೂಲಕವೂ ಶ್ರಾಧ್ಧವನ್ನು ಮಾಡಬಹುದಾಗಿದೆ.
- ಮೇಲೆ ತಿಳಿಸಿದ ಯಾವುದೇ ರೀತಿಯಲ್ಲೂ ಶ್ರಾದ್ಧವನ್ನು ಮಾಡಲು ಸಾಧ್ಯವಾಗದೇ ಹೋದಲ್ಲಿ, ಸ್ನಾನ ಮಾಡಿ ಶುಚಿರ್ಭೂತರಾಗಿ, ಶ್ರದ್ಧಾ ಭಕ್ತಿಯಿಂದ ತಮ್ಮ ತಂದೆ ತಾಯಿಯರು ಮತ್ತು ಪೂರ್ವಜರನ್ನು ನೆನೆಸಿಕೊಂಡು ಆತ್ಮಶುದ್ಧಿಯಿಂದ ಒಂದು ತೊಟ್ಟು ಕಣ್ಣಿರು ಹಾಕುವ ಮೂಲಕ ಅಶ್ರುತರ್ಪಣವನ್ನು ನೀಡುವ ಮೂಲಕವೂ ಕನಿಷ್ಟ ಪಕ್ಷದಲ್ಲಿ ಪಿತೃಗಳ ಋಣವನ್ನು ತೀರಿಸಬಹುದಾಗಿದೆ. ಆದರೆ ಯಾರಿಗೂ ಇಂತಹ ದೈನೇಸಿ ಸ್ಥಿತಿ ಬಾರದಿರಲಿ ಎನ್ನುವುದೇ ಎಲ್ಲರ ಆಶಯವಾಗಿದೆ.
ಇನ್ನು ಪಿತೃಪಕ್ಷದ 15 ದಿನಗಳಲ್ಲಿ ಎಲ್ಲಾ ದಿನಗಳಲ್ಲಿ ಎಲ್ಲರಿಗೂ ತರ್ಪಣ ಕೊಡಲು ಬಾರದೇ, ಕೆಲವೊಂದು ದಿನಗಳನ್ನು ಕೆಲವರಿಗಷ್ಟೇ ಮೀಸಲಾಗಿದ್ದು ಅದರ ವಿವರ ಹೀಗಿದೆ.
- ಪ್ರತಿಪದ – ಶುಕ್ಲ ಮತ್ತು ಕೃಷ್ಣ ಪಕ್ಷದ ಪಾಡ್ಯ ತಿಥಿಯಲ್ಲಿ ಮೃತರಾದವರಿಗೆ ಶ್ರಾದ್ಧ ಮಾಡಬೇಕು. ಈ ದಿನ ತಾಯಿಯ ಅಜ್ಜ ಮತ್ತು ಅಜ್ಜಿಗೆ ಶ್ರಾದ್ಧ ಮಾಡಲು ಈ ದಿನ ಅತ್ಯಂತ ಶ್ರೇಷ್ಠವಾದ ದಿನವಾಗಿದೆ
- ದ್ವಿತೀಯ – ಶುಕ್ಲ ಮತ್ತು ಕೃಷ್ಣ ಪಕ್ಷದ ದ್ವಿತೀಯ ತಿಥಿಯಲ್ಲಿ ಮೃತರಾಗಿದ್ದವರಿಗೆ ಈ ದಿನ ಶ್ರಾದ್ಧ ಮಾಡುವುದು ಅತ್ಯಂತ ಶ್ರೇಷ್ಠಕರ ಈ ದಿನದ ಶ್ರಾದ್ಧವನ್ನು ದೂಜ್ ಶ್ರಾದ್ಧ ಎಂದೂ ಕರೆಯುತ್ತಾರೆ.
- ತೃತೀಯ – ಶುಕ್ಲ ಮತ್ತು ಕೃಷ್ಣ ಪಕ್ಷದ ತೃತಿಯ ತಿಥಿಯಂದು ಮೃತರಾಗಿದ್ದವರಿಗೆ ಈ ದಿನ ಶ್ರಾದ್ಧ ಮಾಡುವುದು ಅತ್ಯಂತ ಶ್ರೇಷ್ಠಕರ ಈ ದಿನದ ಶ್ರಾದ್ಧವನ್ನು ತ್ರೀಜ್ ಶ್ರಾದ್ಧ ಎಂದು ಕರೆಯಲಾಗುತ್ತದೆ.
- ಚತುರ್ಥಿ – ಶುಕ್ಲ ಮತ್ತು ಕೃಷ್ಣ ಪಕ್ಷದ ಚತುರ್ಥಿ ದಿನದಂದು ಮೃತರಾಗಿರುತ್ತಾರೋ ಮತ್ತು ಯಾರು ವಿಶೇಷವಾಗಿ ಭರಣಿ ನಕ್ಷತ್ರದಲ್ಲಿ ಮೃತರಾಗಿರುತ್ತಾರೋ ಅಂತಹವರಿಗೆ ಈದಿನ ಈ ದಿನ ಶ್ರಾದ್ಧ ಮಾಡುವುದರಿಂದ ಅವರ ಆತ್ಮಕ್ಕೆ ಮೋಕ್ಷ ದೊರೆಯುವುದು
- ಪಂಚಮಿ –ಶುಕ್ಲ ಮತ್ತು ಕೃಷ್ಣ ಪಕ್ಷದ ಪಂಚಮಿಯ ತಿಥಿಯಲ್ಲಿ ಮೃತರಾಗಿದ್ದವರಿಗೆ ಈ ದಿನ ಶ್ರಾದ್ಧ ಮಾಡ ಬೇಕು ಈ ದಿನವನ್ನು ಕುನ್ವಾರ ಪಂಚಮಿ ಎಂದೂ ಸಹ ಕರೆಯಲಾಗುತ್ತದೆ.
- ಷಷ್ಟಿ – ಶುಕ್ಲ ಮತ್ತು ಕೃಷ್ಣ ಪಕ್ಷದ ಷಷ್ಟಿ ತಿಥಿಯಲ್ಲಿ ಮೃತರಾಗಿದ್ದವರಿಗೆ ಈ ದಿನ ಶ್ರಾದ್ಧ ಮಾಡ ಬೇಕು ಈ ದಿನವನ್ನು ಚಾತ್ ಶ್ರಾದ್ಧ ಎಂದು ಸಹ ಕರೆಯುತ್ತಾರೆ.
- ಸಪ್ತಮಿ- ಕನ್ಯಾ ಸಂಕ್ರಮಣ, ಪೂರ್ವೇದ್ಯುಶ್ರಾದ್ಧ, ಶುಕ್ಲ ಮತ್ತು ಕೃಷ್ಣ ಪಕ್ಷದ ಸಪ್ತಮಿ ತಿಥಿಯಲ್ಲಿ ಮೃತರಾಗಿದ್ದವರಿಗೆ ಈ ದಿನ ಶ್ರಾದ್ಧ ಮಾಡ ಬೇಕು.
- ಅಷ್ಟಮಿ – ಮಧ್ಯಾಷ್ಟಮಿ ಶ್ರಾದ್ಧ, ಶುಕ್ಲ ಮತ್ತು ಕೃಷ್ಣ ಪಕ್ಷದ ಅಷ್ಟಮಿ ತಿಥಿಯಲ್ಲಿ ಮೃತರಾಗಿದ್ದವರಿಗೆ ಈ ದಿನ ಶ್ರಾದ್ಧ ಮಾಡ ಬೇಕು ಈ ದಿನವನ್ನು ಪರ್ವನ್ ಶ್ರಾದ್ಧ ಎಂದು ಸಹ ಕರೆಯುತ್ತಾರೆ.
- ನವಮಿ – ಅವಿಧವಾ ನವವಿ ವ್ಯತೀಪಾತ ಶ್ರಾದ್ಧ, ಅನ್ವಷ್ಟಕ ಶ್ರಾದ್ಧ ಈ ದಿನ ಅದರಲ್ಲೂ ವಿಶೇಷವಾಗಿ ಈ ದಿನ ತಾಯಿಯ ಶ್ರಾದ್ಧ ಮಾಡಲು ಅತ್ಯಂತ ಶ್ರೇಷ್ಠವಾದ ದಿನವಾಗಿದೆ. ಈ ದಿನವನ್ನು ಅವಿಧವಾನವಮಿ ದಿನದಂದು ಕರೆಯಲಾಗುತ್ತಿದ್ದು, ಈ ದಿನ ತಂದೆ ಜೀವಂತ ಇದ್ದು ತಾಯಿ ಇಲ್ಲದವರಿಗೇ ಮಾತ್ರವೇ ಮೀಸಲಾಗಿದೆ.
- ದಶಮಿ – ಶುಕ್ಲ ಮತ್ತು ಕೃಷ್ಣ ಪಕ್ಷದ ದಶಮಿ ತಿಥಿಯಲ್ಲಿ ಮೃತರಾಗಿದ್ದವರಿಗೆ ಈ ದಿನ ಶ್ರಾದ್ಧ ಮಾಡ ಬೇಕು
- ಏಕಾದಶಿ – ಯತಿ ಮಹಾಲಯ ಈ ದಿನವನ್ನು ಯತಿ ಮಹಾಲಯ ಎಂದು ಕರೆಯಲಾಗುತ್ತಿದ್ದು ಈ ದಿನವನ್ನು ವಿಶೇಷವಾಗಿ ಯತಿಗಳಿಗೇ ಮೀಸಲಾಗಿರಿಸಿದ ದಿನವಾಗಿದೆ.
- ದ್ವಾದಶಿ – ಶುಕ್ಲ ಮತ್ತು ಕೃಷ್ಣ ಪಕ್ಷದ ದ್ವಾದಶಿ ತಿಥಿಯಲ್ಲಿ ಮೃತರಾಗಿದ್ದವರಿಗೆ ಈ ದಿನ ಶ್ರಾದ್ಧ ಮಾಡ ಬೇಕು
- ತ್ರಯೋದಶಿ – ಶುಕ್ಲ ಮತ್ತು ಕೃಷ್ಣ ಪಕ್ಷದ ತ್ರಯೋದಶಿ ಅಥವಾ ವಿಶೇಷವಾಗಿ ಮಖಾ ನಕ್ಷತ್ರದಲ್ಲಿ ಮೃತರಾಗಿರುವವರಿಗೆ ಶ್ರಾದ್ಧ ಮಾಡುವುದರಿಂದ ಪುಣ್ಯ ಲಭಿಸುತ್ತದೆ.
- ಚತುರ್ದಶಿ – ಈ ದಿನವನ್ನು ಘಾತ ಚತುರ್ದಶಿ ಎಂದೂ ಕರೆಯಲಾಗುತ್ತಿದ್ದು, ಈ ದಿನದಂದು ಶಸ್ತ್ರಾಸ್ತ್ರದಲ್ಲಿ ಹತರಾದವರಿಗೆ ಮತ್ತು ಅಪಘಾತದಲ್ಲಿ ಮೃತರಾದವರಿಗೆ ಮಾತ್ರ ಮೀಸಲಾಗಿದೆ.
- ಮಹಾಲಯ ಅಮಾವಾಸ್ಯೆ ಸರ್ವಪಿತೃ ಅಮಾವಾಸ್ಯೆ ಮಾತಾಮಹ ಶ್ರಾದ್ಧ – ಶುಕ್ಲ ಮತ್ತು ಕೃಷ್ಣ ಪಕ್ಷದ ಪೂರ್ಣಿಮೆ ಮೃತರಾಗಿದ್ದವರಿಗೆ ಈ ದಿನ ಶ್ರಾದ್ಧ ಮಾಡುವುದಲ್ಲದೇ, ಈ ದಿನದಂದು ಕುಟುಂಬದಲ್ಲಿ ಮೃತರಾದ ಎಲ್ಲಾ ಪೂರ್ವಜರಿಗೂ ಮತ್ತು ತಮ್ಮ ಮಿತ್ರರು ಮತ್ತು ತಮ್ಮ ಸಾಕು ಪ್ರಾಣಿಗಳು ಎಲ್ಲರಿಗೂ ಶ್ರಾದ್ಧ ಮಾಡಲು ಸೂಕ್ತವಾದ ದಿನವಾದ ಕಾರಣ ಈ ದಿನವನ್ನು ಸರ್ವ ಪಿತೃ ಅಮವಾಸ್ಯೆ ದಿನ ಎಂದು ಕರೆಯಲಾಗುತ್ತದೆ.
ಶ್ರಧ್ಧೆಯಿಂದ ಶ್ರಾಧ್ಧ ಮಾಡುವ ಮೂಲಕ, ಶರೀರ, ಮನಸ್ಸು ಮತ್ತು ವಂಶ ಎಲ್ಲವೂ ಶುದ್ಧವಾಗುವ ಕಾರಣ, ಶ್ರಾದ್ಧ ಮಾಡುವುದು ಪ್ರತೀ ಕರ್ತೃವಿನ ಆದ್ಯ ಕರ್ತವ್ಯವಾಗಿದೆ. ಹಾಗಾಗಿ ಯಾವ ಕಾರಣಕ್ಕೂ ಈ ಪವಿತ್ರ ಕಾರ್ಯವನ್ನು ಬಿಡದೇ ಮೇಲೆ ತಿಳಿಸಿದ ಯಾವಾದಾದರೂ ಒಂದು ರೀತಿಯಲ್ಲಿ ಪೋಷಕರು ಮೃತರಾದ ದಿನದಂದು ಮಾಡಲು ಸಾಧ್ಯವಾಗದೇ ಹೋದಲ್ಲಿ ಪಿತೃಪಕ್ಷದಲ್ಲಿ ಯಾವುದೇ ಜಾತಿ, ಬಡವ ಬಲ್ಲಿದ ಎಂಬ ತಾರತಮ್ಯವಿಲ್ಲದೇ ತರ್ಪಣಕೊಡಲು ಅರ್ಹನಾದ (ತಂದೆ ಇಲ್ಲದವರು) ಪ್ರತಿಯೊಬ್ಬ ಹಿಂದುವೂ ಮಾಡಲೇ ಬೇಕು ಎಂದು ನಮ್ಮ ಶಾಸ್ತ್ರಗಳಲ್ಲಿ ತಿಳಿಸಲಾಗಿದೆ.
ಕಡೆಯ ಮಾತು : ಹೆತ್ತವರು ಬದುಕಿದ್ದಾಗ ಸರಿಯಾಗಿ ನೋಡಿ ಕೊಳ್ಳದೇ, ಸತ್ತಾಗ ಅತ್ತೂ ಕರೆದು, ನೂರಾರು ಜನರನ್ನು ಕರೆಸಿ ಭಕ್ಷ ಭೋಜನಗಳನ್ನು ಹಾಕಿಸಿದಲ್ಲಿ ಎದ್ದು ಬರುವವರೇ, ಹೆತ್ತವರು. ಹಾಗಾಗಿ ಬದುಕಿರುವಾಗ ನಮ್ಮ ಪೋಷಕರನ್ನು ಚೆನ್ನಾಗಿ ನೋಡಿಕೊಳ್ಳುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
ನೆನೆಯುವ ಸಂದರ್ಭ
ಹಿಂದೆ ಒಂದು ಕುಟುಂಬದಲ್ಲಿ ಬರೀ ಅಜ್ಜ, ಅಜ್ಜಿ, ಮಕ್ಕಳ ಮಾತ್ರವಲ್ಲದೆ, ಅಜ್ಜಿಯ ಅಣ್ಣ- ತಮ್ಮಂದಿರು, ಅಕ್ಕ- ತಂಗಿಯರು, ತಾತನ ಕಡೆ ಸಂಬಂಧಿಕರು ಕಡಿಮೆ ಎಂದರು ೨ ರಿಂದ ೩ ತಲೆಮಾರಿನ ಮಕ್ಕಳ, ಮರಿ ಮಕ್ಕಳು ೩೦ ರಿಂದ ೪೦ ಜನ ಒಂದೆಡೆ ಸೇರಿ ನೆಡೆಯುವ ಕಾರ್ಯಕ್ರಮ, ಇಲ್ಲ ಇಲ್ಲ ಹಬ್ಬ ಎನ್ನಬಹುದು.
ಇದು ಎತಕ್ಕೆ ಈ ವಿಷಯ ಬಂತು ಎಂದು ಕೇಳಿದಾಗ, ಮನೆಯಲ್ಲಿ ಹಿರಿಯರು ನಮ್ಮನ್ನು ಅಗಲಿದಾಗ ಕಾಡುವ ಏಕಾಂತ ತನ ಹಲವು ದಿವಸಗಳು ಕಳೆದರು ಅದರ ನೋವು ಮರೆಯಲು ಸಾಲದು.
ವಿಶಾಲಾಕ್ಷಿ ಅಜ್ಜಿ.
ನಮ್ಮ ಮನೆಯಲ್ಲಿ ನನ್ನ ತಂದೆ ತಾಯಿ, ನಾನು ನನ್ನ ತಮ್ಮ ಹಾಗೂ ನನ್ನ ಪ್ರೀತಿಯ ಅಜ್ಜಿ , ಹೆಚ್ಚು ಕಡಿಮೆ ನಮ್ಮ ಅಜ್ಜಿ ನಮ್ಮ ಮನೆಯಲ್ಲಿ ಹೆಚ್ಚಾಗಿ ಇದ್ದದು. ತಾಯಿಯ ತಾಯಿ, ಅತ್ಯಂತ ಸಾತ್ವಿಕ ಸ್ವಭಾವ ಹೊಂದಿದ್ದು ನನ್ನ ಅಜ್ಜಿ, ಮೊಮ್ಮಕ್ಕಲ್ಲಿ ನನ್ನನ್ನು ಕಂಡರೆ ಅತ್ಯಂತ ಪ್ರೀತಿ, ಮನೆಯಲ್ಲಿ ತಂದೆ ಇಲ್ಲವೆ ತಾಯಿ ಬೈದರೆ ನನ್ನನ್ನು ಅವರಿಂದ ಕರೆದುಕೊಂಡು ಹೋಗಿ ನಿಧಾನವಾಗಿ ನನ್ನನ್ನು ತಿದ್ದಿತಿಡಿ ಸಮಾಧಾನ ಚಿತ್ತರಾಗಿ
ನನ್ನ ನೆರವಿಗೆ ಬಂದು ನಿಲ್ಲುತ್ತಿದ್ದರು ಹಾಗೂ ಮನೆಯಲ್ಲಿ ಚಕ್ಕಲ್ಲಿ, ನಿಪಟ್ಟು, ಕೊಡ ಬಳೆ ತಿಂಡಿಗಳನ್ನು ತಮ್ಮಗೆ ಇದಂತಹ ಪಾಲನ್ನು ತಾವು ತಿನ್ನದೆ, ಅದನ್ನು ಬಚ್ಚಿಟ್ಟು ಯಾರಿಗೂ ಕಾಣದ ರೀತಿಯಲ್ಲಿ ನನಗೆ ಕೊಟ್ಟು ಸಂತೋಷ ಪಡುತ್ತಿದ್ದರೂ, ನಮ್ಮ ಅಜ್ಜಿಗೆ 6 ಜನ ಮಕ್ಕಳು, ಒಂದು ಗಂಡು, ಉಳಿದೆಲ್ಲ ಹೆಣ್ಣು ಮಕ್ಕಳು. ನಮ್ಮ ಅಜ್ಜಿ ಚಿಕ್ಕ ವಯಸ್ಸಿನಲ್ಲೇ ಗಂಡನನ್ನು ( ನನ್ನ ಅಜ್ಜ) ಕಳೆದುಕೊಂಡು, ಅದರಲ್ಲೂ ಎಲ್ಲಾ ಮಕ್ಕಳು ಒಳ್ಳೆಯ ಸಂಸ್ಕರ ನೀಡಿ, ಸಂಸಾರ ಮುನ್ನಡೆಸಿದರು. ನಮ್ಮ ಅಜ್ಜಿಯ ಇನ್ನೊಂದು ವಿಶೇಷವಾದ ಗುಣ ಎಂದರೆ ಅಳಿಯಂದಿರು ಮನೆಯಲ್ಲಿ ಇದ್ದರೆ ತಾವು ಅಡುಗೆ ಮನೆ ಇಲ್ಲವೆ ಯಾವುದಾದರೂ ಮೂಲೆಯಲ್ಲಿ
ಹೂ ಭತ್ತಿ ಬಿಡುಸುತ್ತ ಸದಾ ಚಟುವಟಿಕೆಗಳನ್ನು ಕೆಲಸದಲ್ಲಿ ಮಗ್ನರಾಗುತ್ತಿದ್ದರೂ.
ಹೀಗೆ ಅಜ್ಜಿ ಪ್ರತಿ ದಿವಸ ಬೆಳ್ಳಿಗೆ ಮಡಿವುಟ್ಟು ಪೂಜೆ ಸಲ್ಲಿಸಿ, ತಿಂಡಿ ಮಾಡಿ, ಅದನ್ನು ನಮಗೂ ನೀಡಿ, ತಾವು ತೆಗೆದು ಕೊಳ್ಳದೆ, ಎಷ್ಟೇ ಹೇಳಿದರು ಅವರು ಎನೊ ಒಂದು ಕಾರಣ ನೀಡಿ ತಪ್ಪಿಸಿಕೊಳ್ಳುತ್ತಿದ್ದರು.
ಅದು ೧೯೮೯ ನಾನು ಆಗತಾನೆ ೯ ತರಗತಿ ರಜೆಯ ಮುಗಿಸಿ ೧೦ ನೆಯ ತರಗತಿಗೆ ಪ್ರಾರಂಭ, ಶಾಲೆಗೆ ಹೋಗಿ ಬರುತ್ತಿದೆ,
ಒಂದು ದಿನ ಇದೇ ರೀತಿಯಲ್ಲಿ ಅಜ್ಜಿ ಮಡಿವೂಟ್ಟು ಒದ್ದೆ ಬಟ್ಟೆಯಲ್ಲಿ ದೇವರ ದೀಪ ಹಚ್ಚಿ, ಪೂಜೆ ಸಲ್ಲಿಸಿ, ನಮ್ಮೆಲ್ಲರಿಗೂ ತಿಂಡಿ ನೀಡಿ, ಇನ್ನೇನು ತಾವು ತೆಗೆದು ಕೊಳ್ಳ ಬೇಕು, ನೋಡು ನೋಡುತ್ತಿದ್ದಂತೆ ದೀರ್ಘವಾದ ಉಸ್ಸಿರು ಬಿಟ್ಟು ನಮಗೆ ಏನು ಆಗುತ್ತಿದೆ ಎಂದು ತೋಚದೆ, ನನ್ನ ತಮ್ಮ ಜೋರಾಗಿ ಕಿರುಚ ತೊಡಗಿದ, ನನ್ನ ಅಮ್ಮ ಅಡುಗೆ ಮನೆಯಿಂದ ಓಡಿ ಬಂದರು, ನಮ್ಮ ತಂದೆ night shift ಮುಗಿಸಿ ಬೆಳ್ಗಿಗೆ ಮನೆಗೆ ಬಂದು ನಿದ್ರೆ ಯಲ್ಲಿ ಇದ್ದರೂ, ನಮ್ಮ ಕಿರುಚಾಟದಿಂದ ಅವರು ಎದ್ದು ಬಂದರು. ಕೇವಲ ೧ ರಿಂದ ೨ ನಿಮಿಷಗಳು ನಮ್ಮ ಅಜ್ಜಿಯ ಕತ್ತು, ಕುಳಿತ ಜಾಗದಿಂದ ವಾಲಿ ನನ್ನ ತಮ್ಮನ ಕಡೆಗೆ ಕುಸಿದರು,
ಮನೆಯ ಸಮೀಪದಲ್ಲಿ ಇದ್ದ ಡಾ! ಕರೆತಂದು ಪರೀಕ್ಷೆ ಮಾಡಲು ಅವರಿಂದ ಬಂದಂತಹ ಉತ್ತರ ಅಜ್ಜಿ ಇನ್ನಿಲ್ಲ…. ಈ ಮಾತನ್ನು ಕೇಳಿ ಒಂದೇ ಸಮನೆ ಎಲ್ಲಾರೂ ಅಳ ತೊಡಗಿದರು. ಎನು ಮಾಡಬೇಕೆಂದು ತೋಚದೆ ನಮ್ಮ ತಂದೆ ಅಜ್ಜಿಯ ಕೈ ಕಾಲುಗಳನ್ನು ಉಜ್ಜಿ ಇನ್ನೂ ಜೀವ ಇರಬಹುದು ಎಂಬ ನಂಬಿಕೆ ಯಿಂದ ಸುಮಾರು ಒತ್ತು ಶಾಕ ಕೊಡುತ್ತಿದ್ದರು. ಇದು ಇನ್ನೂ ನನ್ನ ಮನಸ್ಸಿಗೆ ಅಚ್ಚು ಹೊತ್ತಿದೆ.
ಮಹೇಶ್ವರಿ ಚಿಕ್ಕಮ್ಮ
ಅಜ್ಜಿಯ 4ನೇ ಮಗಳು, ನಮ್ಮ ಚಿಕ್ಕಮ್ಮ ಬಗ್ಗೆ ಹೇಳಬೇಕೆಂದರೆ ಯಾವುದಾದರೂ ಮಾಡಬೇಕೆಂದು ದೃಡ ನಿರ್ಧಾರ ತೆಗೆದು ಕೊಂಡರೆ ಅದು ಮುಗಿಯುವ ತನಕ ಬಿಡುವುದಿಲ್ಲ. ಯಾರನ್ನೊ ನಂಬಿ surety ಹಾಕಿ, ಆತ ತೀರಿಕೊಂಡು, ಅದರ ಸಾಲ ಇವರ ಮೇಲೆ ಹೊರೆ ಬಿದ್ದು, ಅದರ ಸಲುವಾಗಿ ಮನೆಯ ಮಾರುವ ಪ್ರಸಂಗ ಒದಗಿ ಬಂದು, ನಂತರ ಸಣ್ಣದಾದ ಇನ್ನೊಂದು ಮನೆ ಕಟ್ಟಿ ಮಾರಿ, ನಂತರ ಮತ್ತೊಂದು site ತೆಗೆದುಕೊಂಡು ಇನೇನೂ ಮನೆ ಮುಗಿಯುವ ಹಂತದಲ್ಲಿ ಹಾಸಿಗೆ ಹಿಡಿದರು, ಮನೆಯ ಕಟ್ಟಿ ದೂಳಿನ ಕಣಗಳು ಸಾಮಾನ್ಯವಾಗಿ ಏನೋ ಕೆಮ್ಮು , ಕಫ ಇರಬಹುದು ಎಂದು ಮನೆಯ ಹತ್ತಿರದ ನರ್ಸಿಂಗ್ ಹೋಮ್ ಅಡ್ಮಿಟ್ ಮಾಡಲಾಯಿತು, ಅಲ್ಲಿ ಉಪಚರಿಸುತ್ತಿದ್ದ Dr.ಗಳ ಸಲಹೆಯಂತೆ ಬೇರೆ ಕಡೆ ಶಿಫ್ಟ್ ಮಾಡಲಾಯಿತು, ಶಿವಾಜಿ ನಗರದ ಹತ್ತಿರ ವಿರುವ ಜೈನ್ hospital ನಲ್ಲಿ ಸೇರಿಸಲಾಯಿತು, ಇತ್ತ ಕಡೆ ಮನೆಯ ಗೃಹ ಪ್ರವೇಶವನ್ನು ಸರಳವಾಗಿ ಆಚರಿಸಲಾಯಿತು, ನಾನು ಸಹ 2 ದಿನಗಳು ರಾತ್ರಿ ವೇಳೆಯಲ್ಲಿ hospital ನಲ್ಲಿ ನೋಡಿಕೊಳ್ಳಲು ಉಳಿದುಕೊಂಡಿದೆ, ಆದರೆ ಚಿಕಿತ್ಸೆ ಫಲಕಾರಿಯಾಗದೆ 49/50 ರ ವಯಸ್ಸಿನಲ್ಲಿ 2002 ನಿಧನರಾದರು. ಇಬ್ಬರು ಸಣ್ಣ ವಯಸ್ಸಿನ ಮಕ್ಕಳು ಇನ್ನೂ ಅವರ ಕಾಲ ಮೇಲೆ ನಿಂತುಕೊಂಡಿರಲ್ಲಿಲ್ಲ, ಇದೊಂದು ಅತ್ಯಂತ ದುಃಖ ಕರವಾದ ಪ್ರಸಂಗ ಎಲ್ಲಾ ಜವಾಬ್ದಾರಿ ನಮ್ಮ ಚಿಕ್ಕಪ್ಪ ಮೇಲೆ ಬಿದ್ದಿತು.
ದೊಡ್ಡಮ್ಮ-ದೊಡ್ಡಪ್ಪ
ನಾನು ಆಗಲೇ ಹೇಳಿದಂತೆ ನಮ್ಮ ಅಜ್ಜಿಗೆ 6 ಜನ ಮಕ್ಕಳು, 2 ನೆಯ ಮಗಳೆ ನಮ್ಮ ದೊಡ್ಡ ಮ್ಮ, ನಾನು ಕೇಳಿದಂತೆ ನಮ್ಮ ದೊಡ್ಡಮ್ಮ ಬಗ್ಗೆ ಹೇಳಿದರೆ ಅದು ತಪ್ಪು, ಏಕೆಂದರೆ ದೊಡ್ಡಮ್ಮ ಮಾತ್ರವಲ್ಲ ಅದರ ಜೋತೆಗೆ ನಮ್ಮ ದೊಡ್ಡಪ್ಪನ ಪಾತ್ರವು ಮುಖ್ಯ, ನಮ್ಮ ತಾತ ನವರು ತೀರಿ ಹೋದ ಮೇಲೆ, ನಮ್ಮ ದೊಡ್ಡಪ್ಪ- ದೊಡ್ಡಮ್ಮ ಜವಾಬ್ದಾರಿಯುತವಾಗಿ ಎಲ್ಲಾ
ಹೆಣ್ಣು ಮಕ್ಕಳಿಗೂ ತಂದೆ ತಾಯಿಯ ಸ್ಥಾನದಲ್ಲಿ ನಿಂತು ಮದುವೆ ಮಾಡಿದರು, ಇದರ ಅಂಗವಾಗಿ ಎಲ್ಲಾ ಮಕ್ಕಳು ಚೆನ್ನಾಗಿ ಇದ್ದಾರೆ. ನಾನು ಸಣ ವಯಸ್ಸಿನಲ್ಲಿ ರಜೆಯ ಸಂದರ್ಭದಲ್ಲಿ ಅವರ ಮನೆಗೂ, ಅವರ ಮಕ್ಕಳು ನಮ್ಮ ಮನೆಗೂ ರಜೆಯನ್ನು ಕಳೆಯುತ್ತಿದ್ದೆವು. ನಮ್ಮ ತಂದೆ ಹಾಗೂ ದೊಡ್ಡಪ್ಪ ಒಂದೇ ಊರಿನವರು, ದೊಡ್ಡಪ್ಪ ಗಮಕಿಗಳು, BEL ನಲ್ಲಿ ಕೆಲಸ ಮಾಡಿದರು, ಮೂರು ಜನ ಮಕ್ಕಳು, ಎಲ್ಲಾ ಮಕ್ಕಳು ಮದುವೆಯಾಗಿ ಬೆಂಗಳೂರುನಲ್ಲಿ ವಾಸ.
ಅಂದು 2010 ಬೆಳ್ಳಿಗೆ phone call ಬಂದಿತು, ನಾನು ಇನ್ನೂ ನಿದ್ರೆ ಯಲ್ಲಿ ಇದ್ದು, phone ತೆಗೆದುಕೊಂಡು hello ಎಂದು ಉತ್ತರಿಸುವ ಮೊದಲೇ ದೊಡ್ಡಮ್ಮ ಇನ್ನಿಲ್ಲ ಎಂದು ಸುದ್ದಿ, ಇದೇನಿದು ಕನಸು ಏನೊ ಗಾಬರಿ, ನಾನು ಕಾತ್ರಿ ಮಾಡಿಕೊಳ್ಳಲು phone ಮಾಡಿ ತಿಳಿಯಲು, ಅದು ನಿಜವಾದ ಸುದ್ದಿ ಎಂದು ತಿಳಿಯಿತು, ನನ್ನ ತಂದೆ ತಾಯಿ ಅಕ್ಕನ ಮೊಮ್ಮಗಳು ಮದುವೆಗೆ ಕುಣಿಗಲ್ ಹೋಗಿದ್ದರು, ಅಲ್ಲಿ ಗೆ phone ಮಾಡಿ ತಿಳಿಸಿ, ಅವರು ಬರುವುದಕ್ಕೆ ತಿಳಿಸಿ ಹೇಳಿದೆ, ನಮ್ಮ ದೊಡ್ಡಮ್ಮನ ತೀರಿ ಕೊಂಡ ವಿಷಯ ಮನಸ್ಸಿಗೆ ಅತ್ಯಂತ ನೊವಿನ ವಿಚಾರ.
October 2 ರಂದು ಹರೀಶ್ ಮಗಳ ನಾಮಕರಣದಲ್ಲಿ ಸಂತೋಷದಿಂದ ಪಾಲ್ಗೂಂಡು ಎಲ್ಲಾರು ಊಟ ಮುಗಿಸಿ ಕೊಂಡು ಇನ್ನೇನು ಹೊರಡಲು ಪ್ರಾರಂಭಿಸಿದರು, ನಮ್ಮ ದೊಡ್ಡಮ್ಮ ಮಗಳಾದ ಲಕ್ಷ್ಮೀ phone ಮಾಡಿ ನನಗೆ ತಿಳಿಸಲು ದೊಡ್ಡಪ್ಪ ಇನ್ನಿಲ್ಲವೆಂದು, ಏನು ಮಾಡಲು ಒಂದು ತೋಚದೆ ಒಂದು ಎರಡು ನಿಮಿಷಗಳು ಹಾಗಯೆ ಇದ್ದೆ, ನಂತರ ಅಲ್ಲಿದವರಿಗೆ ತಿಳಿಸಿ ಅಲ್ಲಿಂದ ನಾವು ಎಲ್ಲರೂ ವಿದ್ಯಾರಣ್ಯಪುರಕ್ಕೆ ಹೊರಟೇವು, ತುಂಬಿ ಬದುಕಿದ ನಮ್ಮ ದೊಡ್ಡಪ್ಪನ ಅಂತಿಮ ನಮನಗಳು ತಿರಿಸಲು.
ಕೇಶವಮೂರ್ತಿ ಮಾವ
ನನಗೆ ಹೆಣ್ಣು ಕೊಟ್ಟ ಮಾವ, ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿ. ನಮ್ಮ ಮಾವನ ಬಗ್ಗೆ ಹೇಳಬೇಕೆಂದರೆ, ಅವರು ತುಂಬಾ ಭಯಗಸ್ತ ವ್ಯಕ್ತಿ, ಸುಮ್ಮನೆ ಬೇಡದಿರ ವಿಷಯಕ್ಕೂ ಭಯಪಡುತ್ತಿದ್ದರೂ, ನಾಳೆ ಏನಾಗುತ್ತದೊ, ನೀರು ಬರುತ್ತದೊ ಇಲ್ಲವೋ, ಹೀಗೆ ಬೇಡವಾದ ವಿಷಯಗಳ ಯೋಚನೆ ಮಾಡುತ್ತಿದ್ದರು, CQAL ನಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದಿದರು. ಸಹಜವಾಗಿ ಪ್ರತಿ ನಿತ್ಯ walking ಮಾಡುತ್ತಿದ್ದರು, ಒಮ್ಮೆ walking ಮುಗಿಸಿ ಮನೆಗೆ ಬರುವಾಗ ಕಾಲಿನಲ್ಲಿ ಕಬ್ಬಿಣದ ಮಳೆ ಚುಚ್ಚಿ ತಿಂಗಳ ಗಟ್ಟಲೆ ಒದ್ಡಡಿದರು, ಇದು ನಮ್ಮೆಲ್ಲರಿಗೂ ಒಂದು ರೀತಿಯ ಭಯ ಆವರಿಸಿಕೊಂಡಿತ್ತು, ಇನ್ನೊಂದು ವಿಷಯ ನಮ್ಮ ಮಾವನ ಬಗ್ಗೆ ಹೇಳಬೇಕೆಂದರೆ ಅವರಿಗೆ ಯಾರಿಗೂ ಹೊರೆ ಯಾಗಬಾರದು ಎಂಬುದು ಅವರ ಇಚ್ಚೆ, ಹೀಗೆ ನಿವೃತ್ತಿ ಹೊಂದಿದ ಮೇಲೆ ಹಲವಾರು ವೇದ ಪಾಠದ ಸ್ನೇಹಿತರು ಸಿಕ್ಕಿ, ಮನೆಯಲ್ಲಿ ಕೂಡ ವೇದ ಪಾಠವನ್ನು ಅಭ್ಯಾಸ ಮಾಡುತ್ತಿದ್ದರು, ಆದರೆ ಯಾವುದನ್ನು ಬಯಸುತ್ತಿರಲ್ಲಿಲ್ಲ , ಹೀಗೆ 2018 ಜನವರಿಯ 7ರಂದು ಬೆಳ್ಳಿಗೆ ವೇದ ಪಾಠದ ಸಹಪಾಠಿಗಳ ಜೋತೆಗೆ ಮನೆಯ ಸಮೀಪದ ಮಹಾಮಲೇಶ್ವರ ( ಶಿವನ ) ಗುಡಿಯಲ್ಲಿ ರುದ್ರ- ಚಮಕ ಪಾರಾಯಣ ಮಾಡಿ ಮನೆಗೆ 12.30 ಗೆ ಬಂದರು, ನಮ್ಮ ಮಾವನವರು ಸುಸ್ತು ಪಡುತ್ತಿದ್ದರು, ಕಾಲಿ ಹೊಟ್ಟೆಯಲ್ಲಿ ಇದ್ದದ್ದರಿಂದ ಸಹಜವಾಗಿ ನಮ್ಮ ಆತ್ತೆ ತಿಂಡಿಯನ್ನು ಕೊಡಲು ಮುಂದಾದರು, ಎರಡು ತುತ್ತು ತಿಂದು ಏಕೊ motion ಗೆ ಹೊಗುವದಾಗಿದೆ ಬಂದು ತಿಂಡಿಯನ್ನು ತೆಗೆದು ಕೊಳ್ಳುವೆ ಎಂದು Toilet ಗೆ ಹೋದರು, ಅಲ್ಲೆ ಕುಸಿದು ಬಿದ್ದರು, ನಮ್ಮ ಅತ್ತೆ ಜೋರಾಗಿ ಕಿರುಚಿಕೊಂಡದ್ದನು ಪಕ್ಕದ ಮನೆಯವರು ನೆರವಿನಿಂದ ಆಸ್ಪತ್ರೆಗೆ ಸೇರಿಸಲಾಯಿತು, ಅಲ್ಲಿದ Dr. Heart attack ಆಗಿದೆ ಕೂಡಲೇ ನೀವು Heart ಗೆ ಸಂಬಂಧ ಪಟ್ಟ Hospital ಗೆ ಸೇರಿಸಿ ಎಂದರು, ಅಲ್ಲಿಂದ ನಮ್ಮ ಅತ್ತೆ ಬೇರೆ Hospital shift ಮಾಡುವ ಮಧ್ಯೆ ನಮ್ಮ ಮಾವನವರು ಕೊನೆ ಉಸಿರಾಟ ನಿಂತು ಹೋಯಿತು, ಆಗತಾನೆ ನಾನು 2 ಪಾಳಿ ಇದ್ದೆ, ನನ್ನ ಹೆಂಡತಿ 2.30 phone call ಮಾಡಿ ಒಂದೇ ಸಮನೆ ಆಳುತ್ತಿದ್ದಳು ಏನು ವಿಷಯ ಹೇಳು ಎಂದು ಕೇಳಿದರು ಬಿಕ್ಕಳಿಸಿ ಬಿಕ್ಕಳಿಸಿ ಒಂದೇ ಸಮನೆ ಆಳಿತ್ತಿದ್ದಳು, ಅವಳು ಆಳುತ್ತಿದ್ದದನು ಕಂಡು ನನಗೆ ಏನು ಆಗಿದೆ ಎಂದು ಅರಿತು ಸಮಧಾನದಿಂದ ಕೇಳಿದಾಗ, ಎಲ್ಲಾ ವಿಷಯ ಕೇಳುತ್ತಿದ್ದಂತೆ ನನ್ನ ಕೈ ಕಾಲು ನಡುಗಿತ್ತು, ನನ್ನ ಧ್ವನಿಯು ಸ್ಥಗಿತ ಗೊಂಡು ಏನು ಹೇಳಬೇಕೆಂದು ತೊಚದೆ, ಕಣ್ಣಿಗಳಲ್ಲಿ ನೀರು ಬರಲು ಸುಮ್ಮನೆ ಭಯ ಪಡ ಬೇಡ ನಾನು ಬರುವೆ ಎಂದು ಅವಳಿಗೆ ಸಮಾಧಾನ ಮಾಡಿ ನಾನು ಮುನ್ನಡೆದೆ.
ಫಣಿಶ್ ಚಿಕ್ಕಪ್ಪ
ನಮ್ಮ ಅಜ್ಜಿಯ ಕಡೆಯ ಅಳಿಯ, ನಮ್ಮ ಚಿಕ್ಕಪ್ಪ ಒಂದು ರೀತಿಯಲ್ಲಿ ಹೇಳುವುದಾದರೆ ಯಾವುದೇ ಅಕಾಂಷೆ ಇಲ್ಲ, ಮನೆ ಮಠ ಯಾವುದು ಆಸಕ್ತಿ ಇಲ್ಲ, ತಕ್ಕ ಸಂಪಾದನೆ ಇದ್ದರೂ ಹಾಗೂ ಒಳ್ಳೆಯ ಸರ್ಕಾರಿ ವ್ಯಕ್ತಿ ಗಳು ಪರಿಚಯ ವಿದ್ದರೂ ಯಾವುದಕ್ಕೂ ಉಪಯೋಗಿಸ ಕೊಳದೆ ಒಂದು ರೀತಿಯ ನಿರ್ಲಿಪ್ತ ಜೀವನ ನಡೆಸುತ್ತಿದ್ದರು, ಅಪ್ಪಟ ರಾಜಕುಮಾರ ಅಭಿಮಾನಿ, ಹಿಂದೆ ಯಾವುದೇ ರಾಜ್ ಚಿತ್ರ ಬಿಡುಗಡೆಯಾದರೆ ತಪ್ಪದೆ ಟಾಕೀಸ್ ಹೋಗುತ್ತಿದ್ದರು. ಅವರ ಜೋತೆಗೆ ನಾನು ಶಿವರಾಜ್ ಕುಮಾರ್ ಅಭಿನಯದ ಮೊದಲ ಆನಂದ ಚಿತ್ರ ಕ್ಕೆ ನಾವೆಲ್ಲರೂ ಹೋಗಿದ್ದೆವು.
ಕಳೆದ ವರ್ಷ ಅವರು ಆರೋಗ್ಯ ಕೆಟ್ಟು ಜಾಂಡಿಸ್ ನಿಂದ ಅವರು ತೀರಿಕೊಂಡರು.
ಈಗ ವಿಷಯಕ್ಕೆ ಬರೋಣ, ಈ ಮಾಸ ಭಾದ್ರಪದ ಮಾಸದ ಕೃಷ್ಣ ಪಕ್ಷ( ಪಿತೃ ಪಕ್ಷ) ಇಲ್ಲಿ ನಾವೆಲ್ಲರೂ ಹಿರಿಯರನ್ನು ನೆನೆದು, ಅವರ ಮಾರ್ಗ ದರ್ಶನಲ್ಲಿ ನೆನೆದು, ಅವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತ ಬಾಳ್ಳೊಣ 🙏🏻🙏🏻💐💐
ಇದು ನನ್ನ ಸ್ವಂತ ಅನುಭವದ ಮಾತು, ಇದಕ್ಕೆ ಏನಾದರೂ ತಿಳಿಸ ಬೇಕಾದರೆ ಸಂತೋಷವಾಗಿ ತಿಳಿಸ ಬಹುದು. ಇನ್ನೊಂದು ವಿಷಯ ಇಲ್ಲಿ ನನ್ನ ತಾಯಿಯ ಸಂಬಂಧ ಕಡೆ ಮಾತ್ರ ಬರೆದಿರುವೆ, ಮುಂದೆ ನನ್ನ ತಂದೆ ಕಡೆ ಸಂಬಂಧ ಕೂಡ ಬರಯುವೆ.
ಆರ್.ಸುದರ್ಶನ
LikeLiked by 1 person
ವಾವ್!! ಅದ್ಭುತವಾದ ಬರಹ. ನಿನ್ನೆಲ್ಲಾ ಭಾವನೆಗಳನ್ನು ಅತ್ಯಂತ ಸಮರ್ಪಕವಾಗಿ ಅಚ್ಚುಕಟ್ಟಾಗಿ ಪೋಣಿಸಿದ್ದೀಯೆ. ದಯವಿಟ್ಟು ನಿನ್ನ ಬರಹವನ್ನು ಹೀಗೆಯೇ ಮುಂದುವರಿಸಿದಲ್ಲಿ ಖಂಡಿತವಾಗಿಯೂ ನೀನೊಬ್ಬ ಅದ್ಭುತವಾದ ಬರಹಗಾರನಾಗುವುದರಲ್ಲಿ ಸಂದೇಹವೇ ಇಲ್ಲ 👏👏👏
LikeLike