ಅದೊಮ್ಮೆ ಭಿಕ್ಷುಕನೊಬ್ಬ ರೈಲಿನಲ್ಲಿ ಹಾಗೆಯೇ ಭಿಕ್ಷೆ ಬೇಡುತ್ತಿರುವಾಗ ಸೂಟು ಬೂಟುಗಳನ್ನು ಧರಿಸಿದ್ದ ಒಬ್ಬ ಗಣ್ಯವ್ಯಕ್ತಿಯನ್ನು ನೋಡಿ ಈ ವ್ಯಕ್ತಿ ಬಹಳ ಶ್ರೀಮಂತನಾಗಿರಬೇಕು. ಅವನ ಬಳಿ ಬಿಕ್ಷೆ ಬೇಡಿದಲ್ಲಿ ಆತ ಖಂಡಿತವಾಗಿಯೂ ತುಂಬಾ ಹಣವನ್ನು ಕೊಡುತ್ತಾನೆ ಎಂದು ಭಾವಿಸಿ ಆ ವ್ಯಕ್ತಿಯ ಬಳಿ ಹೋಗಿ ಭಿಕ್ಷೆಯನ್ನು ಕೇಳಿದನು.
ಆ ವ್ಯಕ್ತಿ ಭಿಕ್ಷುಕನನ್ನು ಒಮ್ಮೆ ಮೇಲಿಂದ ಕೆಳಗಿನವರೆಗೂ ನೋಡಿ, ನೀವು ಹೀಗೆ ಯಾವಾಗಲೂ ಜನರಿಂದ ಭಿಕ್ಷೆ ಕೇಳುತ್ತಲೇ ಇರುತ್ತೀರಿ. ಆದರೆ ನೀವು ಯಾರಿಗಾದರೂ ಏನನ್ನಾದರೂ ಒಮ್ಮೆ ನೀಡಿದ್ದೀರಾ? ಎಂದು ಕೇಳಿದರು. ಅಯ್ಯೋ ಸ್ವಾಮೀ, ನಾನು ಬಡವ ಮತ್ತು ಭಿಕ್ಷುಕ. ನಾನೇ ಬೇರೆಯವರ ಬಳಿ ಕಾಡೀ ಬೇಡಿ ನನ್ನ ಹೊಟ್ಟೆಯನ್ನು ಹೊರೆದುಕೊಳ್ಳುತ್ತಿದ್ದೇನೆ. ನಾನು ಬೇರೆಯವರಿಗೆ ಹೇಗೆ ಏನನ್ನಾದರೂ ಕೊಡಲು ಸಾಧ್ಯ? ಎಂದು ವಿನಮ್ರನಾಗಿ ಹೇಳಿತ್ತಾನೆ.
ನೀವು ಯಾರಿಗೂ ಏನನ್ನೂ ಕೊಡಲು ಸಾಧ್ಯವಾಗದಿದ್ದಲ್ಲಿ, ನಿಮಗೆ ಯಾರಿಂದಲು ಏನನ್ನೂ ಕೇಳುವ ಹಕ್ಕಿಲ್ಲ ಎಂದು ಭಾವಿಸುವ ಉದ್ಯಮಿ ನಾನು. ನೀವು ನನಗೆ ಏನನ್ನಾದರೂ ನೀಡಿದಲ್ಲಿ ಅದಕ್ಕೆ ಪ್ರತಿಯಾಗಿ ನಾನು ಸಹಾ ನಿಮಗೆ ಏನಾದರೂ ನೀಡಬಲ್ಲೆ ಎಂದು ಖಡಾಖಂಡಿತವಾಗಿ ಹೇಳಿಬಿಡುತ್ತಾರೆ. ಅದೇ ಸಮಯಕ್ಕೆ ಆ ವ್ಯಕ್ತಿ ತಲುಪಬೇಕಾಗಿದ್ದ ನಿಲ್ದಾಣ ಬಂದ ಕಾರಣ ಆತ ರೈಲಿನಿಂದ ಕೆಳಗಿಳಿದು ಹೊರಟು ಹೋಗುತ್ತಾರೆ.
ಆ ವ್ಯಕ್ತಿ ಹೇಳಿದ ವಿಷಯ ಭಿಕ್ಷುಕನ ಹೃದಯವನ್ನು ನಾಟಿದ್ದಲ್ಲದೇ ಅದೇ ಕುರಿತಂತೆ ಗಹನವಾಗಿ ಯೋಚಿಸಲಾಂಭಿಸುತ್ತಾನೆ. ಕಡೆಗೆ ಯಾರಿಂದಲಾದರೂ ಏನನ್ನಾದರು ಭಿಕ್ಷೆಯ ರೂಪದಲ್ಲಿ ಪಡೆದಾಗ ಅದಕ್ಕೆ ಪ್ರತಿಯಾಗಿ ಖಂಡಿತವಾಗಿಯೂ ಏನನ್ನಾದರೂ ಕೊಡಲೇ ಬೇಕೆಂದು ತೀರ್ಮಾನಿಸುತ್ತಾನಾದರು, ಅವನಿಗೆ ಏನು ಕೊಡಬಹುದು ಎಂಬುದರ ಅರಿವಿಲ್ಲದೇ, ಒಂದೆರಡು ದಿನಗಳ ಕಾಲ ಭಿಕ್ಷೆಯನ್ನೇ ಬೇಡುವುದನ್ನು ನಿಲ್ಲಿಸಿಬಿಡುತ್ತಾನೆ.
ಅದೇ ಯೋಚನೆಯಲ್ಲಿಯೇ ರೈಲ್ವೇ ನಿಲ್ದಾಣದ ಕಲ್ಲು ಬೆಂಚಿನ ಮೇಲೆ ಕುಳಿತಿದ್ದಾಗ, ನಿಲ್ದಾಣದ ಅಕ್ಕ ಪಕ್ಕದಲ್ಲಿ ಸುಂದರವಾಗಿ ಅರಳಿರುವ ಹೂವುಗಳು ಅವನ ಕಣ್ಣುಗಳಿಗೆ ಬೀಳುತ್ತಿದ್ದಂತೆಯೇ ಅವನಿಗೇ ಅರಿವಿಲ್ಲದಂತೆ ಆತನ ಮುಖದಲ್ಲಿ ಮಂದಹಾಸ ಬೀರುತ್ತದೆ. ಕೂಡಲೇ, ಆತ ಕೆಲವೊಂದು ಹೂಗಳನ್ನು ಕಿತ್ತು ತನ್ನ ಕೈಗಳಲ್ಲಿ ಹಿಡಿದುಕೊಂಡು ಪುನಃ ಬಿಕ್ಷೆ ಬೇಡಲು ಆರಂಭಿಸುತ್ತಾನೆ, ಈ ಬಾರಿ ಆತನಿಗೆ ಭಿಕ್ಷೆ ನೀಡಿದವರಿಗೆ ಪ್ರತಿಯಾಗಿ ಕೆಲವು ಸುಂದರ ಹೂವುಗಳನ್ನು ನೀಡಲಾರಂಭಿಸುತ್ತಾನೆ. ಆ ಹೂವುಗಳನ್ನು ಪಡೆದವರು ಸಂತೋಷ ಪಡುವುದನ್ನು ನೋಡಿ ಭಿಕ್ಷುಕನಿಗೆ ಒಂದು ರೀತಿಯ ಆನಂದವಾಗುತ್ತದೆ. ಇದೇ ಆಭ್ಯಾಸ ಪ್ರತಿದಿನವೂ ರೂಢಿಯಾಗಿ ಹೋಗುತ್ತದೆ. ನೀಡಿದ ಭಿಕ್ಷೆಗೆ ಪ್ರತಿಯಾಗಿ ಸುಂದರವಾದ ಹೂವುಗಳನ್ನು ಪಡೆಯುತ್ತಿದ್ದ ಕಾರಣ ಬಹಳಷ್ಟು ಜನರು ಅವನಿಗೆ ಭಿಕ್ಷೆ ಕೊಡಲಾರಂಭಿಸುತ್ತಾರೆ. ತನ್ನ ಬಳಿ ಹೂವುಗಳು ಇರುವವರೆಗೂ ಭಿಕ್ಷೆ ಬೇಡುವುದು ಹೂಗಳೆಲ್ಲವೂ ಖಾಲಿಯಾದಾಗ ಸುಮ್ಮನಿರುವುದೇ ಅಭ್ಯಾಸವಾಗಿ ಹೋಗುತ್ತದೆ.
ಅದೊಂದು ದಿನ ಆತ ಹಾಗೆಯೇ ರೈಲಿನಲ್ಲಿ ಭಿಕ್ಷೆ ಬೇಡುತ್ತಿದ್ದಾಗ, ಆ ಹಿಂದೆ ಕಂಡಿದ್ದ ಉದ್ಯಮಿಯನ್ನು ನೋಡಿ ಹರ್ಷಿತನಾಗಿ, ಆತನ ಬಳಿ ಹೋಗಿ, ಸ್ವಾಮೀ ನಾನಿಂದು ನೀವು ಕೊಡುವ ಭಿಕ್ಷೆಗೆ ಪ್ರತಿಯಾಗಿ ಈ ಹೂವುಗಳನ್ನು ಕೊಡುತ್ತಿದ್ದೇನೆ ಎಂದು ಹೇಳಿದಾಗ, ಆವ್ಯಕ್ತಿಯು ಆತನಿಗೆ ಸ್ವಲ್ಪ ಹಣವನ್ನು ನೀಡಿ ಅದಕ್ಕೆ ಪ್ರತಿಯಾಗಿ ಕೆಲವು ಹೂವುಗಳನ್ನು ಪಡೆದದ್ದಲ್ಲದೇ ತಾನು ಹೇಳಿದ್ದನ್ನು ಯಥಾವತ್ತಾಗಿ ಭಿಕ್ಷುಕನು ಜಾರಿಗೆ ತಂದಿದ್ದನ್ನು ಕಂಡು ಸಂತಸ ಪಡುತ್ತಾ, ಮಾತನ್ನು ಮುಂದುವರೆಸಿ, ವಾವ್!! ನೀವೀಗ ಭಿಕ್ಷುಕರಾಗಿರದೇ, ನನ್ನಂತೆಯೇ ನೀವು ಸಹಾ ಉದ್ಯಮಿಗಳಾಗಿರುವುದನ್ನು ನೋಡಿ ನನಗೆ ಬಹಳ ಆನಂದವಾಗಿದೆ ಎಂದು ಹೇಳಿ ತನ್ನ ನಿಲ್ದಾಣ ಬಂದಾಗ ಯಥಾ ಪ್ರಕಾರ ರೈಲನ್ನು ಇಳಿದು ಹೋಗುತ್ತಾರೆ.
ಭಿಕ್ಷುಕನಿಗೆ ಮತ್ತೊಮ್ಮೆ, ಆ ವ್ಯಕ್ತಿಯು ಹೇಳಿದ ಮಾತುಗಳು ಮತ್ತೆ ಹೃದಯಕ್ಕೆ ಆಳವಾಗಿ ನಾಟಿದ್ದಲ್ಲದೇ, ಮತ್ತೆ ಮತ್ತೆ ಆ ವ್ಯಕ್ತಿಯು ಹೇಳಿದ್ದನ್ನೇ ಮನಸ್ಸಿನಲ್ಲಿ ಮನನ ಮಾಡುತ್ತಲೇ ಹೋದಾಗ ಥಟ್ ಅಂತಾ ಅತನ ಮನಸ್ಸಿನಲ್ಲೊಂದು ಆಲೋಚನೆ ಹೊಳೆದು, ಕೂಡಲೇ ರೈಲಿನಿಂದ ಇಳಿದು ಸಂತೋಷದಿಂದ ಏರು ಧನಿಯಲ್ಲಿ ಇನ್ನು ಮುಂದೆ ನಾನು ಭಿಕ್ಷುಕನಲ್ಲಾ! ನಾನೀಗ ಉದ್ಯಮಿ!. ನಾನೂ ಕೂಡಾ ಇನ್ನು ಕೆಲವೇ ದಿನಗಳಲ್ಲಿ ದೊಡ್ಡ ಶ್ರೀಮಂತನಾಗಿ ಸಮಾಜದಲ್ಲಿ ಸಂಭಾವಿತ ಗಣ್ಯವ್ಯಕ್ತಿಯಾಗುತ್ತೇನೆ ಎಂದು ಎಂದು ಕೂಗುವುದನ್ನು ಕೇಳಿಸಿಕೊಂಡ ನಿಲ್ದಾಣದಲ್ಲಿದ್ದ ಪ್ರಯಾಣಿಕರು, ಬಹುಶಃ ಈ ಭಿಕ್ಷುಕನಿಗೆ ಹುಚ್ಚು ಹಿಡಿದಿದೆ ಎಂದೇ ಭಾವಿಸುತ್ತಾರೆ.
ಆದಾದ ನಂತರ ಆ ಭಿಕ್ಷುಕ ಆ ರೈಲ್ವೇ ನಿಲ್ಡಾಣದಲ್ಲಿ ಕಾಣಿಸುವುದೇ ಇಲ್ಲ. ಬಹುಶಃ ಆತ ಹುಚ್ಚನಾಗಿ ಊರೂರು ಅಲೆಯುತ್ತಿರಬಹುದು ಎಂದೇ ಎಲ್ಲರೂ ಭಾವಿಸಿರುತ್ತಾರೆ. ಸುಮಾರು ಮೂರ್ನಾಲ್ಕು ವರ್ಷಗಳ ನಂತರ ಸೂಟು ಬೂಟು ಧರಿಸಿದ ಇಬ್ಬರು ಅಚಾನಕ್ಕಾಗಿ ರೈಲಿನಲ್ಲಿ ಭೇಟಿಯಾಗಿ ಒಬ್ಬರನ್ನೊಬ್ಬರು ನೋಡಿದಾಗ, ಒಬ್ಬರು ಕೈ ಜೋಡಿಸಿ ಮತ್ತೊಬ್ಬರಿಗೆ ನಮಸ್ಕರಿಸಿ, ಸರ್ ನೀವು ನನ್ನನ್ನು ಗುರುತಿಸುತ್ತೀರಾ? ಎಂದು ಕೇಳುತ್ತಾನೆ.
ಆಗ ಆ ಸಹಪ್ರಯಾಣಿಕರು, ಕ್ಷಮಿಸಿ. ನನಗೆ ನಿಮ್ಮ ಪರಿಚಯವಿಲ್ಲ ಇದೇ ಮೊದಲ ಬಾರಿಗೆ ನಿಮ್ಮನ್ನು ಭೇಟಿಯಾಗುತ್ತಿದ್ದೇನೆ ಎಂದಾಗ, ಆಗ ಮೊದಲನೆಯವರು ಸರ್ ದಯವಿಟ್ಟು ಮತ್ತೊಮ್ಮೆ ನೆನಪಿಸಿಕೊಳ್ಳಿ ನಾವಿಬ್ಬರೂ ಮೂರನೇ ಬಾರಿಗೆ ಭೇಟಿಯಾಗುತ್ತಿದ್ದೇವೆ ಎಂದಾಗ, ಆ ಎರಡನೆಯ ವ್ಯಕ್ತಿಗೆ ಆಶ್ಚರ್ಯವಾಗಿ, ಕ್ಷಮಿಸಿ ನನಗೆ ಸರಿಯಾಗಿ ನೆನಪಿಲ್ಲ. ನಾವು ಈ ಮೊದಲು ಎಲ್ಲಿ ಮತ್ತು ಯಾವಾಗ ಭೇಟಿಯಾಗಿದ್ದೆವು ಎಂದು ತಿಳಿಸಬಹುದೇ? ಎಂದು ಕೇಳುತ್ತಾರೆ.
ಈಗ ಮೊದಲ ವ್ಯಕ್ತಿ ಮುಗುಳ್ನಕ್ಕು, ಸರಿ ನಾವಿಬ್ಬರೂ ಈ ಮೊದಲು ಒಂದೇ ರೈಲಿನಲ್ಲಿ ಎರಡು ಬಾರಿ ಭೇಟಿಯಾಗಿದ್ದೆವು. ನಾನು ಜೀವನದಲ್ಲಿ ಏನು ಮಾಡಬೇಕು ಎಂದು ನಮ್ಮ ಮೊದಲ ಭೇಟಿಯಲ್ಲಿ ತಿಳಿಸಿದ ಅದೇ ಭಿಕ್ಷುಕ ನಾನು. ನಂತರ ನಮ್ಮ ಎರಡನೇ ಭೇಟಿಯಲ್ಲಿ ನಾನು ನಿಜವಾಗಿಯೂ ಯಾರೆಂಬುದನ್ನು ನನಗೆ ಮನನವಾಗುವಂತೆ ತಿಳಿಸಿದಿರಿ. ಮುಂದೆ ಸ್ಪಷ್ಟ ಗುರಿ, ಹಿಂದೆ ನಿಮ್ಮಂತಹ ದಿಟ್ಟ ಗುರುವನ್ನು ಮನಸ್ಸಿನಲ್ಲಿಯೇ ಆರಾಧಿಸುತ್ತಾ, ನಿಮ್ಮನ್ನು ದ್ರೋಣಾಚಾರ್ಯರಂತೆ ನನ್ನನ್ನು ಏಕಲವ್ಯ ಎಂದು ಭಾವಿಸಿಕೊಂಡ ಪರಿಣಾಮವಾಗಿ ನಾನಿಂದು ಈ ಬಹಳ ದೊಡ್ಡ ಹೂವಿನ ವ್ಯಾಪಾರಿಯಾಗಿದ್ದೇನೆ ಮತ್ತು ಅದೇ ವ್ಯಾಪಾರಕ್ಕೆ ಸಂಬಂಧಿಸಿದಂತೆ ಮತ್ತೊಂದು ನಗರಕ್ಕೆ ಹೋಗುತ್ತಿದ್ದೇನೆ ಎಂದು ತಿಳಿಸುತ್ತಾರೆ.
ನಮ್ಮ ಮೊದಲ ಭೇಟಿಯಲ್ಲಿ ನೀವು ನನಗೆ ಪ್ರಕೃತಿಯ ನಿಯಮದಂತೆ ನಾವು ಏನಾದರೂ ನೀಡಿದಲ್ಲಿ ಮಾತ್ರವೇ ಮತ್ತೊಬ್ಬರಿಂದ ನಾವು ಏನಾದರೂ ಪಡೆಯಲು ಅರ್ಹರಾಗುತ್ತೇವೆ ಎಂಬುದನ್ನು ತಿಳಿಸಿದಿರಿ. ನನ್ನ ಜೀವನದಲ್ಲಿ ಅದು ಗಂಭಿರವಾದ ಪರಿಣಾಮವನ್ನು ಬೀರಿತಾದರೂ ನಾನು ಭಿಕ್ಷುಕನಾಗಿಯೇ ಮುಂದುವರೆದನಾದರೂ ಅಲ್ಲಿಂದ ಮೇಲೆ ಏರುವ ಪ್ರಯತ್ನವನ್ನೇ ಮಾಡಲಿಲ್ಲ.
ಅದೇೆ ಎರಡನೇ ಬಾರಿ ನಿಮ್ಮನ್ನು ಭೇಟಿ ಮಾಡಿದಾಗ ನೀವು ನನ್ನನ್ನು ಭಿಕ್ಷುಕ ಎಂದು ಭಾವಿಸದೇ ನನ್ನನ್ನು ವ್ಯಾಪಾರಿ ಎಂದು ಗುರುತಿಸಿರಿ. ಅಂದಿನಿಂದ ನನ್ನ ಬಗ್ಗೆ ನನಗಿದ್ದ ದೃಷ್ಟಿಕೋನವೇ ಬದಲಾಯಿತು. ನನ್ನ ಬಗ್ಗೆ ಆ ನಿಮ್ಮ ವಿಶ್ವಾಸ ನನಗೆ ನಂಬಿಕೆ ಮತ್ತು ಆತ್ಮವಿಶ್ವಾಸವನ್ನು ಮೂಡಿಸಿದ್ದಲ್ಲದೇ ನೀವು ಹೇಳಿದ್ದನ್ನೇ ನಾನು ಸಾಧಿಸಿ ತೋರಿಸಲು ನಿರ್ಧರಿ ಆ ಕ್ಷಣದಿಂದಲೇ ಭಿಕ್ಷೆ ಬೇಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿ, ನಾನು ಭಿಕ್ಷುಕನಲ್ಲಾ. ನಾನು ಹೂವಿನ ವ್ಯಾಪಾರಿ ಎಂದು ನಿರ್ಧರಿಸಿ, ಮಾರನೆಯ ದಿನದಿಂದಲೇ, ಸಣ್ಣದಾಗಿ ಹೂವಿನ ವ್ಯಾಪಾರ ಆರಂಭಿಸಿ ಶ್ರದ್ಧೆ ಮತ್ತು ಕಠಿಣ ಪರಿಶ್ರಮ ಪಟ್ಟ ಕಾರಣ, ನಾನಿಂದು ಯಶಸ್ವಿಯಾದ ಹೂವಿನ ವ್ಯಾಪಾರಿಯಾಗಿದ್ದೀನಿ. ಹಾಗಾಗಿ ನಾನು ನಿಮಗೆ ಸದಾ ಚಿರಋಣಿಯಾಗಿದ್ದೇನೆ ಎಂದು ಆನಂದ ಭಾಷ್ಪವನ್ನು ಸುರಿಸುತ್ತಾ ಪರಸ್ಪರ ಅಪ್ಪಿಕೊಳ್ಳುತ್ತಾರೆ
ಭಿಕ್ಷುಕನು ತನ್ನನ್ನು ಭಿಕ್ಷುಕನನ್ನಾಗಿಯೇ ಪರಿಗಣಿಸಿದ್ದ ಕಾರಣ ಆತ ಭಿಕ್ಷುಕನಾಗಿಯೇ ಭಿಕ್ಷೆ ಬೇಡುತ್ತಲೇ ಇದ್ದ. ಯಾವಾಗ ತನ್ನನ್ನು ತಾನು ವ್ಯಾಪಾರಿ ಎಂದು ಪರಿಗಣಿಸಿದನೋ ಅಂದಿನಿಂದ ಆತ ವ್ಯಾಪಾರಿಯಾಗಿ ಬದಲಾಗಿ ಯಶಸ್ವಿಯಾಗಿ ಹೋದ. ಎಲ್ಲಿಯವರೆಗೂ ತನ್ನ ಸಾಮರ್ಥ್ಯವನ್ನು ಅರಿವಿಲ್ಲದೇ ಮಾಡುವ ಕೆಲಸವನ್ನೇ ಮುಂದುವರೆಸುತ್ತಿರುತ್ತಾರೋ ಅಲ್ಲಿಯವರೆಗೂ ಆತ ಮುಂದುವರೆಯುವುದಿಲ್ಲ. ತ್ರೇತಾಯುಗದಲ್ಲೂ ಹನುಮಂತನ ಶಕ್ತಿಯನ್ನು ಜಾಂಬವಂತ ನೆನಪಿಸಿದಾಗಲೇ, ಆಂಜನೇಯ ಸಮುದ್ರ ಲಂಘನ ಮಾಡಿದ್ದು. ದ್ವಾಪರಯುಗದಲ್ಲಿ ಕೃಷ್ಣ ಅರಳೀ ಎಲೆಯನ್ನು ಸೀಳಿ ಅಕ್ಕ ಪಕ್ಕದಲ್ಲಿ ಎಸೆದಾಗಲೇ ಜರಾಸಂಧನ ವಧೆಯಾಗಿದ್ದು ಮತ್ತು ಕೃಷ್ಣ ತೊಡೆ ತಟ್ಟಿ ತೋರಿಸಿದಾಗಲೇ ಭೀಮ ಧುರ್ಯೋಧನನ್ನು ವಧಿಸಿದ್ದು. ನಮ್ಮ ಶಕ್ತಿ, ಸಾಮರ್ಥ್ಯದ ಮೇಲೆ ನಂಬಿಕೆ ಮತ್ತು ಆತ್ಮವಿಶ್ವಾಸ ಇದ್ದರೆ ಎಷ್ಟು ಎತ್ತರಕ್ಕೆ ಏರಬಹುದು ಎನ್ನುವುದಕ್ಕೆ ಈ ಪ್ರಸಂಗವೇ ಜ್ವಲಂತ ಉದಾಹರಣೆ ಅಲ್ಲವೇ?
ಏನಂತೀರೀ?
ನಿಮ್ಮವನೇ ಉಮಾಸುತ
ಗೆಳೆಯರೊಬ್ಬರು ಕಳುಹಿಸಿದ್ದ ಆಂಗ್ಲ ಸಂದೇಶವೊಂದರ ಭಾವಾನುವಾದ
ತುಂಬಾ ಚೆನ್ನಾಗಿದೆ ಕಥೆ. ಬಹುಶಃ ನಾವಿಂದು ಕೆಲವು ಕಡೆ ಇಂತಹ ರೀತಿಯಲ್ಲಿ ಭಿಕ್ಷೆ ಬೇಡುವ ಪಧ್ಧತಿಯ ನ್ನು ಕಾಣುತ್ತೇವೆ.ಸಣ್ಣ ಸಣ್ಣ ವಸ್ತುಗಳನ್ನು ನೀಡುವ ಮೂಲಕ ಭಿಕ್ಷೆ ಕೇಳುತ್ತಾರೆ. ಭಿಕ್ಷೆಗೂ ಒಂದು ಘನತೆ ಗೌರವಗಳನ್ನು ಕತೆ ನಿರೂಪಿಸುತ್ತದೆ.
LikeLiked by 1 person
ಇದರ ಸಂಪೂರ್ಣ ಶ್ರೇಯ ಮೂಲ ಲೇಖಕರಿಗೇ ಸಲ್ಲುತ್ತದೆ
LikeLike