ಅಕ್ಟೋಬರ್ 2, ದೇಶದ ಇಬ್ಬರು ಮಹಾನ್ ನಾಯಕರ ಜಯಂತಿ. ಇಬ್ಬರೂ ಸ್ವಾತಂತ್ರ್ಯ ಹೋರಾಟಗಾರರೇ ಆದರೂ, ಒಬ್ಬರು ಚರಕ ಹಿಡಿದು ದೇಶವನ್ನು ವಿಭಜಿಸಿ ಶತ್ರುರಾಷ್ಟ್ರದ ಸೃಷ್ಟಿಗೆ ಕಾರಣೀಭೂತರಾದರೇ ಅದೇ ಮತ್ತೊಬ್ಬರು ಹಾಗೆ ಸೃಷ್ಟಿಯಾದ ಶತ್ರುರಾಷ್ಟ್ರ ನಮ್ಮ ದೇಶದ ಮೇಲೆ ಕಾಲು ಕೆರೆದುಕೊಂಡು ಧಾಳಿ ನಡೆಸಿದಾಗ ತಮ್ಮ ದಿಟ್ಟ ನಿರ್ಧಾರಗಳಿಂದ ನರಕ ಸದೃಶವನ್ನು ತೋರಿಸಿದವರು. ಅದರೆ ಅದೇಕೋ ಏನೋ ಅಕ್ಟೋಬರ್ 2ರಂದು ಅದಾವುದೋ ಪೂರ್ವಾಗ್ರಹ ಪೀಡಿತರಾಗಿ ಮೊದಲನೆಯವರನ್ನೇ ಎತ್ತಿ ಮೆರೆದಾಡುತ್ತಾ ಎರಡನೆಯವರನ್ನು ನಗಣ್ಯರೀತಿಯಲ್ಲಿ ಕಡೆಗಾಣಿಸುವುದು ಈ ದೇಶದ ಪ್ರಾಮಾಣಿಕ ದೇಶ ಭಕ್ತರಿಗೆ ಮಾಡುವ ಅಪಮಾನವೇ ಸರಿ ಎಂದರೂ ತಪ್ಪಾಗದು.
ಗಾಂಧಿಯವರ ಕುರಿತಾದ ಮಾಹಿತಿ ಇಡೀ ದೇಶಕ್ಕೇ ತಿಳಿದಿರುವಾಗ ಎಲೆಮರೆಕಾಯಿಯಂತಿದ್ದ ದೇಶದ ಎರಡನೇ ಪ್ರಧಾನ ಮಂತ್ರಿಗಳಾಗಿದ್ದ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿಗಳ ಕುರಿತಾದ ಲೇಖನವನ್ನು ಬರೆದು ಪ್ರಕಟಿಸಿದ ಕೂಡಲೇ ಅದೇಕೋ ಏನೋ ಕೆಲವರಿಗೆ ಇದ್ದಕ್ಕಿದ್ದಂತೆಯೇ ಹಾವು ತುಳಿದಂತೆ ಬೆಚ್ಚಿಬಿದ್ದು ವಿಷಯಕ್ಕೆ ಸಂಬಂಧವೇ ಇಲ್ಲದ ಮತ್ತು ನಿಸ್ಸಂದೇಹವಾಗಿ ಅನಗತ್ಯವಾಗಿ ಗೋಡ್ಸೇ ಮತ್ತು ಗಾಂಧಿಯವರ ಪ್ರಸ್ತಾಪವನ್ನು ಮಾಡುತ್ತಾ ವಿಷಯಾಂತರವನ್ನು ಮಾಡುತ್ತಾ ಉಳಿದವರನ್ನು ಕೆರಳಿಸುವ ಪ್ರಯತ್ನ ಮಾಡಲು ಯತ್ನಿಸಿದರೆ ಅದಕ್ಕೆ ಪೂರಕವಾಗಿ ಅವರದ್ದೇ ಮನಸ್ಸಿನವರು ಅವರನ್ನು ಬೆಂಬಲಿಸುತ್ತಾ ಅನೇಕ ರಾಷ್ಟ್ರಭಕ್ತರನ್ನು ಅತ್ಯಂತ ಕೀಳು ಮಟ್ಟದಲ್ಲಿ ಅವಾಚ್ಯ ಪದಗಳಿಂದ ನಿಂದಿಸುವುದು ನಿಜಕ್ಕೂ ಹೇಸಿಗೆ ಎನಿಸುತ್ತದೆ.
ಹಾಗಾದರೆ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕೇವಲ ಗಾಂಧಿ ಮತ್ತು ನೆಹರು ಅವರುಗಳು ಮಾತ್ರವೇ? ಗಾಂಧಿಯವರು ಸ್ವಾತಂತ್ರ್ಯ ಚಳುವಳಿಯಲ್ಲಿ ತೊಡಗಿಸಿಕೊಳ್ಳುವ ಮೊದಲೇ ದೇಶದಲ್ಲಿ ಲಕ್ಷಾಂತರ ದೇಶಭಕ್ತರು ತಮಗೆ ತೋಚಿದಂತೆ ಹೋರಾಟ ನಡೆಸಿರಲಿಲ್ಲವೇ? 1857 ರಲ್ಲಿ ಮಂಗಲ್ ಪಾಂಡೆಯ ಹೋರಾಟವನ್ನು ದಂಗೆ ಎಂದು ಬ್ರಿಟೀಷರು ಬಣ್ಣಿಸಿದರೂ ಅದು ಖಂಡಿತವಾಗಿಯೂ ಅದು ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂಬುದು ಬ್ರಿಟೀಷರಿಗೂ ತಿಳಿದಿತ್ತು. ಈ ಪ್ರಕರಣ, ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಲು ಪ್ರೇರಣೆ ನೀಡುವ ಮೂಲಕ, ಬ್ರಿಟಿಷರಿಗೆ ಭಯ ಹುಟ್ಟಿಸಿದ್ದಂತೂ ಸುಳ್ಳಲ್ಲ. ಲಾಲ್-ಬಾಲ್-ಪಾಲ್ ಎಂದೇ ಪ್ರಖ್ಯಾತರಾಗಿದ್ದ, ರಾಷ್ಟ್ರೀಯತಾವಾದಿಗಳಾದ ಲಾಲಾ ಲಜಪತ್ ರಾಯ್, ಲೋಕಮಾನ್ಯ ಬಾಲ ಗಂಗಾಧರ ತಿಲಕ್ ಮತ್ತು ಬಿಪಿನ್ ಚಂದ್ರ ಪಾಲ್ ಅವರಂತಹವರು ಸಾರ್ವಜನಿಕ ಗಣೇಶೋತ್ಸವ ಆರಂಭಿಸಿದ್ದಲ್ಲದೇ, ಪ್ರತಿಯೊಂದು ಹಳ್ಳಿ ಹಳ್ಳಿಗಳಲ್ಲಿ ಭಜನೆ ಮತ್ತು ಲಾವಣಿಗಳ ಮುಖಾಂತರ ಸ್ವಾತ್ರಂತ್ರ್ಯ ಹೋರಾಟದ ಕಿಚ್ಚನ್ನು ಹಚ್ಚಿಸುವ ಮೂಲಕ ಸಾಮಾನ್ಯ ಜನರೂ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕುವಂತೆ ಪ್ರೇರೇಪಿಸಿದ್ದು ಎಲ್ಲರಿಗೂ ತಿಳಿದಿರುವ ವಿಷಯವೇ ಸರಿ.
ದೇಶದಲ್ಲಿ ಇಷ್ಟೆಲ್ಲಾ ರೀತಿಯಲ್ಲಿ ಹೋರಾಟಗಳು ನಡೆಯುತ್ತಿರುವಾಗ ಗಾಂಧಿಯವರು ದಕ್ಷಿಣ ಆಫ್ರಿಕಾದಲ್ಲಿ ಬ್ಯಾರಿಸ್ಟರ್ ಅಗಿ ಅತ್ಯಂತ ಐಶಾರಾಮ್ಯ ಜೀವನ ನಡೆಸುತ್ತಿದ್ದದ್ದನ್ನು ಸುಳ್ಳು ಎನ್ನಲಾಗದು. ಅದೇ ಸಮಯದಲ್ಲಿ ದಕ್ಷಿಣ ಆಫ್ರಿಕಾದಲ್ಲಿದ್ದ ವರ್ಣಬೇಧ ನೀತಿಯಿಂದಾಗಿ ಅದೊಮ್ಮೆ ರೈಲಿನಲ್ಲಿ ಹೋಗುತ್ತಿದ್ದಾಗ ಗಾಂಧಿಯವರಿಗೆ ಆದ ಅವಮಾನ ತಾಳಲಾಗದೆ ಭಾರತಕ್ಕೆ ಹಿಂದಿರುಗಿದಾಗ ಇಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಚಳುವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಾಗ ಆ ಹೋರಾಟಕ್ಕೆ ಒಂದು ರೀತಿಯ ಓಘ ದೊರೆಯಿತು ಎನ್ನುವುದು ಸತ್ಯವಾದರೂ, ಗಾಂಧಿಯವರು ತೆಗೆದುಕೊಂಡ ನಿರ್ಧಾರಗಳೆಲ್ಲವೂ ಸರಿ ಎಂದು ಹೇಳಲಾಗದು. ಅವರಲ್ಲಿಯೂ ದೂರದರ್ಶಕತ್ವದ ಕೊರತೆ ಎದ್ದುಕಾಣುತ್ತಿತ್ತು. ಅದರಲ್ಲೂ ಅದುವರೆಗೂ ಸ್ವಾತಂತ್ಯ್ರ ಹೋರಾಟಗಾರರು ನಡೆಸಿಕೊಂಡು ಬಂದಿದ್ದ ಉಗ್ರ ಹೋರಾಟವನ್ನು ಬಹಿರಂಗವಾಗಿಯೇ ತಮ್ಮ ಪತ್ರಿಕೆಗಳಲ್ಲಿ ಟೀಕಿಸುತ್ತಿದ್ದದ್ದಲ್ಲದೇ, ಬ್ರಿಟಿಷರ ವಿರುದ್ಧ ಆರಂಭಿಸಿದ್ದ ಅಸಹಕಾರ ಚಳುವಳಿ ದೇಶಾದ್ಯಂತ ತೀವ್ರಗೊಂಡು ಅದನ್ನು ಹತ್ತಿಕ್ಕಲು ಬ್ರಿಟಿಷರು ಹೈರಾಣಾಗಿದ್ದಾಗ ಅದೆಲ್ಲೋ ನಡೆದ ಜನಾಂಗೀಯ ದಂಗೆಯನ್ನು ಬೆಂಬಲಿಸಿ ಮುಸಲ್ಮಾನರು ಖಿಲಾಫತ್ ಚಳುವಳಿ ನಡೆಸಿದರೆ ಅದಕ್ಕೆ ಸ್ಪಂದಿಸಿ ತಮ್ಮ ಮಹತ್ವಾಕಾಂಕ್ಷೆಯ ಅಸಹಕಾರ ಚಳುವಳಿಯನ್ನೇ ಹಿಂಪಡೆದ ಗಾಂಧಿಯವರ ನಿರ್ಧಾರ ಚರ್ಚಾಸ್ಪದವೇ ಹೌದು. ಗಾಂಧಿಯವರಿಗೆ ಸ್ವಾತಂತ್ರ್ಯ ಪಡೆಯುವುದಕ್ಕಿಂತಲೂ ತಾವು ನಂಬಿದ್ದ ಅಹಿಂಸಾ ತತ್ವ ಸಿದ್ದಾಂತವೇ ಮುಖ್ಯವಾಗಿ ಕಾರಣ ಸಾವಿರಾರು ಪ್ರಾಮಾಣಿಕ ದೇಶಭಕ್ತರುಗಳ ಬಲಿದಾನವಾಗಿ ಹೋಗಿದ್ದು ಈಗ ಇತಿಹಾಸ.
ಸ್ವಾತಂತ್ಯ್ರ ಹೋರಾಟದ ಸಂಧರ್ಭದಲ್ಲಿ ಕೇವಲ 23 ವರ್ಷದ ತರುಣ ಭಗತ್ ಸಿಂಗ್ ಮತ್ತವರ ಸ್ನೇಹಿತರು ಬ್ರಿಟೀಷರನ್ನು ಹೆದರಿಸುವ ಸಲುವಾಗಿ ಕೋರ್ಟಿನ ಆವರಣದಲ್ಲಿ ಸಾಧಾರಣವಾದ ಬಾಂಬ್ ಹಾಕಿದ್ದಕ್ಕೆ ಬ್ರಿಟೀಷರು ಅತ್ಯಂತ ಕಠಿಣವಾದ ಗಲ್ಲು ಶಿಕ್ಷೆಯನ್ನು ವಿಧಿಸಿದ್ದರ ವಿರುದ್ಶ ಗಾಂಧಿಯವರು ಪ್ರತಿಭಟನೆ ನಡೆಸಿ, ಭಗತ್ ಸಿಂಗ್ ಅವರನ್ನು ಉಳಿಸಬೇಕೆಂದು ಅಂದಿನ ಬಹುತೇಕ ಸ್ವಾತಂತ್ರ್ಯ ಹೋರಾಟಗಾರರು ಗಾಂಧಿಯವರನ್ನು ಕೇಳಿಕೊಂಡಾಗ, ಭಗತ್ ಸಿಂಗ್ ಅವರ ತೀವ್ರವಾದ ನಮಗೆ ಒಪ್ಪದ ಕಾರಣ ನಾವು ಅವರ ಪರವಾಗಿ ಬ್ರಿಟೀಷರ ಬಳಿ ಮಾತನಾಡುವುದಿಲ್ಲ ಎಂದು ಗಾಂಧಿಯವರು ಖಡಾಖಂಡಿತವಾದ ನಿರ್ಧಾರ ತೆಗೆದುಕೊಂಡ ಕಾರಣದಿಂದಾಗಿಯೇ, ಭಗತ್ ಸಿಂಗ್ ಮತ್ತವರ ಸ್ನೇಹಿತರ ಬಲಿದಾನವಾಯಿತು. ಅದೇ ರೀತಿ ಉಧಮ್ ಸಿಂಗ್ ಅವರ ವಿಷಯದಲ್ಲೂ ಗಾಂಧಿಯವರ ತಪ್ಪು ನಿರ್ಧಾರಗಳು ಜಗಜ್ಜಾಹೀರಾತಾಗಿತ್ತು
ಇನ್ನು ಶಾಸ್ತ್ರಿಗಳ ವಿಚಾರಕ್ಕೆ ಬಂದಲ್ಲಿ, ಹೌದು ನಿಜ. ಮೋಹನ್ ಚಂದ್ ಕರಮಚಂದ್ ಗಾಂಧಿಯವರ ಅಸಹಕಾರ ಚಳವಳಿಯಿಂದಲೇ ಪ್ರೇರಿತರಾಗಿ ವಿಧ್ಯಾರ್ಥಿಯಾಗಿದ್ದ ಶಾಸ್ತ್ರಿಗಳು ಸ್ವಾತ್ರಂತ್ರ್ಯ ಚಳುವಳಿಯಲ್ಲಿ ಪ್ರಾಮಾಣಿಕವಾಗಿ ಮತ್ತು ನಿಸ್ವಾರ್ಥವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಲ್ಲದೇ ಅದಕ್ಕಾಗಿ ಕಠಿಣವಾದ ಸೆರೆಮನೆಯ ವಾಸವನ್ನು ಅನುಭವಿಸಿದ ನಂತರ ತಮ್ಮ ಸ್ವಂತ ಶಕ್ತಿ ಮತ್ತು ಸಾಮರ್ಥ್ಯದಿಂದ ಎಲ್ಲರ ಮನವನ್ನು ಗೆದ್ದು ಉತ್ತರ ಪ್ರದೇಶದ ಸರ್ಕಾರದಲ್ಲಿ ಗೃಹಸಚಿವರಾಗಿ, ನಂತರ ಕೇಂದ್ರದಲ್ಲಿ ಗೃಹಖಾತೆಯೂ ಸೇರಿದಂತೆ ವಿವಿಧ ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸಿ, ನೆಹರು ಅವರು ಕಾಲವಾದ ನಂತರ ಎಲ್ಲರ ಬಹುಮತದೊಂದಿಗೆ ದೇಶದ ಎರಡನೇ ಪ್ರಧಾನ ಮಂತ್ರಿಗಳಾಗಿ ಕೇವಲ 17 ತಿಂಗಳುಗಳ ಕಾಲ ದೇಶವನ್ನು ಮುನ್ನಡೆಸಿದರೂ, 17 ವರ್ಷಗಳ ಕಾಲ ದೇಶವನ್ನಾಳಿದ್ದ ನೆಹರು ಅವರನ್ನೇ ಮರೆಯುವಂತೆ ಮಾಡಿ, ಕಡೆಗೆ ರಷ್ಯಾದಲ್ಲಿ ಅನುಮಾನಾಸ್ಪದವಾಗಿ ಅಸುನೀಗಿದ ಲಾಲ್ ಬಹಾದ್ದೂರ್ ಶಾಸ್ತ್ರಿಗಳ ಕುರಿತಾದ ಲೇಖನ ಬರೆದರೆ ಅದೇಕೋ ಕೆಲವರಿಗೆ ತಡೆದುಕೊಳ್ಳಲಾಗದೇ ವಿನಾಕಾರಣ ವಾಚಾಮಗೋಚರವಾಗಿ ಇನ್ನೂ ಕೆಲವರು ಅಶ್ಲೀಲವಾಗಿ ಪ್ರತಿಕ್ರಿಯಿಸುವುದು ನಿಜವಾಗಿಯೂ ಅಚ್ಚರಿ ಮೂಡಿಸುವುದಲ್ಲದೇ, ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದ ಕುರಿತಾದ ಅವರ ಬೌದ್ಧಿಕ ದಿವಾಳಿತನವನ್ನು ನೆನೆದು ಕನಿಕರ ಉಂಟಾಗುತ್ತದೆ
ದೇಶದ ಬಗ್ಗೆ ನಿಜವಾದ ಭಕ್ತಿಯಿಂದ ನಿಸ್ವಾರ್ಥವಾಗಿ ಸ್ವಾತ್ರಂತ್ರ್ಯ ಹೋರಾಟದ ಹುತ್ತವನ್ನು ಲಕ್ಷಾಂತರ ಹೋರಾಟಗಾರರು ಗೆದ್ದಲು ಹುಳುಗಳಂತೆ ಕಟ್ಟಿದರೆ, ಆ ಗೆದ್ದಲು ಹುಳುಗಳ ಪ್ರಮುಖರಾಗಿ ಗಾಂಧಿಯವರು ತೊಡಗಿಸಿಕೊಂಡರೆ, ಯಾವುದೇ ರೀತಿಯ ಪ್ರಯತ್ನವನ್ನೇ ಮಾಡದೇ, ಗೆದ್ದಲು ಹುಳುಗಳನ್ನು ತಿನ್ನುತ್ತಲೇ ಆ ಹುತ್ತಕ್ಕೆ ಬಂದು ಸೇರಿಕೊಳ್ಳುವ ಹಾವಿನಂತೆ ನೆಹರು ನೆಹರು ವಂಶಜರು ಸೇರಿಕೊಂಡಿದ್ದು ಈ ದೇಶ ಕಂಡ ಅತ್ಯಂತ ದೌರ್ಭಾಗ್ಯಗಳಲ್ಲಿ ಒಂದಾಗಿದೆ ಎಂದು ಹೇಳಲು ಮನಸ್ಸಿಗೆ ಬಹಳ ನೋವಾಗುತ್ತದೆ.
ಅದಾವುದೋ ಕಾಣದ ಕಾರಣಗಳಿಂದಾಗಿ ಗಾಂಧಿಯವರನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಯುವಂತೆ ಮಾಡಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದ ಜವಹರ್ ಲಾಲ್ ನೆಹರು, ಯಾರು ತನ್ನ ವಯಕ್ತಿಕ ಹಿತಾಸ್ತಕ್ತಿಗೆ ಅಡ್ಡಿಯಾಗುತ್ತಾರೆ ಎಂದು ಭಾವಿಸುತ್ತಿದ್ದರೋ ಅಂತಹವರನ್ನು ಅತ್ಯಂತ ಕ್ರೂರ ರೀತಿಯಲ್ಲಿ ಮಟ್ಟ ಹಾಕುತ್ತಿದ್ದದ್ದಲ್ಲದೇ ಅವರ ವಿರುದ್ಧ ಎಂತಹ ಆರೋಪಗಳನ್ನು ಮಾಡಲೂ ಹೇಸುತ್ತಿರಲಿಲ್ಲ ಎಂಬುದಕ್ಕೆ ಲೆಖ್ಖವೇ ಇಲ್ಲ. ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರೇರಣಾದಾಯಕರಾಗಿದ್ದ ವಿನಾಯಕ ದಾಮೋದರ ಸಾವರ್ಕರ್, ದಲಿತ ಪರ ಹೋರಾಟದ ಮೂಲಕವೇ ದೇಶಾದ್ಯಂತ ಪ್ರವರ್ಧಮಾನಕ್ಕೆ ಬಂದ ಮತ್ತು ಈ ದೇಶ ಕಂಡ ಅತ್ಯಂತ ಹೆಮ್ಮೆಯ ಜ್ಞಾನಿ ಮತ್ತು ಪ್ರಕಾಂಡ ಪಂಡಿತರಾಗಿದ್ದ ಶ್ರೀ ಬಿ. ಆರ್. ಅಂಬೇಡ್ಕರ್, ಕ್ರಾಂತಿಕಾರಿಗಳ ನಾಯಕ ಸುಭಾಷ್ ಚಂದ್ರಬೋಸ್ ಅವರುಗಳನ್ನು ನೆಹರು ನಡೆಸಿಕೊಂಡ ರೀತಿ ನಿಜಕ್ಕೂ ದೇಶ ಭಕ್ತರ ರಕ್ತವನ್ನು ಕುದಿಯುವಂತೆ ಮಾಡುತ್ತದೆ. ಇವರೆಲ್ಲರ ಏಳಿಗೆಗೆ ಧಕ್ಕೆ ತಂದಿದ್ದಲ್ಲದೇ ಈ ಮಹಾನ್ ನಾಯಕರುಗಳ ಸಾಮರ್ಥ್ಯಕ್ಕೆ ಸಿಗಬೇಕಾದ ಅಧಿಕಾರ ಸಿಗದಂತೆ ಮಾಡಿದ್ದಲ್ಲದೇ ಅವರನ್ನೇ ದೇಶದ್ರೋಹಿಗಳಂತೆ ಬಿಂಬಿಸಿರುವುದನ್ನು ಇಂದಿಗೂ ಅವರ ಕುಂಟುಂಬದ ಅನುಯಾಯಿಗಳು ಮುಂದುವರೆಸಿಕೊಂಡು ಈ ನಾಯಕರುಗಳನ್ನು ಅವಹೇಳನ ಮಾಡುವುದು ನಿಜಕ್ಕೂ ಅಕ್ಷಮ್ಯ ಅಪರಾಧವೇ ಸರಿ.
ಇಂತಹ ಒಂದು ಕುಟುಂಬದ ಗುಲಾಮೀ ಮನೋಭಾವನೆಯ ವ್ಯಕ್ತಿಗಳನ್ನು ನೋಡುತ್ತಿದ್ದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಓದಿದ್ದ ಈ ಪ್ರಸಂಗ ನೆನಪಾಗುತ್ತದೆ.
ಅದೊಂದು ದಿನ ಸಮುದ್ರ ತೀರದಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ದೂರದ ಸಮುದ್ರದ ಮಧ್ಯೆ ಪ್ರಯಾಣಿಕರಿಂದ ತುಂಬಿದ್ದ ಹಡುಗೊಂದು ಬಂಡೆಯೊಂದಕ್ಕೆ ಬಡಿದು ಸಮುದ್ರದಲ್ಲಿ ಮುಳುಗುತ್ತಿರುವುದನ್ನು ನೋಡಿ ಗಾಭರಿಯಾಯಿತು. ಹಡಗು ನೀರಿನಲ್ಲಿ ಮುಳುಗುತ್ತಿದ್ದಾಗ ಈಜು ಬಾರದ ಬಹುತೇಕರು ನೀರಿನಲ್ಲಿ ಮುಳುಗಿ ಸತ್ತರೆ, ಈಜು ಬರುತ್ತಿದ್ದವರು ಅಲ್ಪ ಸ್ವಲ್ಪ ದೂರ ಈಜಿ ನಂತರ ಮುಂದುವರೆಸಲಾಗದೇ ನೀರಿನಲ್ಲಿ ಮುಳುಗಿ ಹೋದದ್ದನ್ನು ನೋಡಿಯೂ ಏನೂ ಮಾಡಲಾಗದ ಪರಿಸ್ಥಿತಿಯಲ್ಲಿದ್ದ ಆವ್ಯಕ್ತಿ ಮಮ್ಮಲ ಮರುಗಿದರು.
ಅದೇ ಸಂಜೆ, ಈ ವಿಷಯವನ್ನು ತನ್ನ ಸ್ನೇಹಿತರಿಗೆ ಹಂಚಿಕೊಂಡಾಗ ಅವರೆಲ್ಲರೂ ಹಡಗು ಮುಳುಗಿದ ಬಗ್ಗೆ ವಿಷಾಧ ವ್ಯಕ್ತ ಪಡಿಸಿದರು. ನಂತರ ತನ್ನ ಮಾತನ್ನು ಮುಂದುವರೆಸಿದ ಆ ವ್ಯಕ್ತಿ, ಹಡಗಿನಲ್ಲಿದ್ದ ಒಬ್ಬ ಪಾಪಿಯನ್ನು ಕೊಲ್ಲುವ ಸಲುವಾಗಿ ಆ ದೇವರಉ ನೂರಾರು ಅಮಾಯಕ ಜನರನ್ನು ಕೊಂದಿದ್ದು ಸರಿಯಲ್ಲ ಎಂಬ ಆಭಿಪ್ರಾಯವನ್ನು ವ್ಯಕ್ತಪಡಿಸಿದರು.
ಹೀಗೆ ಹೇಳುತ್ತಿರುವಾಗಲೇ, ಆತನ ಕಾಲಿನಲ್ಲಿ ಏನೋ ಕಡಿದಂತಾಗಿ ಆತ ಕೆಳಗೆ ನೋಡಿದಾಗ ಆತನ ಕಾಲಿನ ಬೆರಳುಗಳನ್ನು ಒಂದು ಕೆಂಪು ಇರುವೆ ಕಚ್ಚುತ್ತಿದ್ದರೆ, ಇನ್ನೂ ಅನೇಕ ಇರುವೆಗಳು ಆತನ ಪಾದದ ಸುತ್ತಲೂ ಇದ್ದವು. ಇದರಿಂದ ಕೋಪಗೊಂಡ ಆ ವ್ಯಕ್ತಿ ಆ ಕೆಂಪು ಇರುವೆಗಳನ್ನು ತನ್ನ ಕಾಲಿನಿಂದ ಹೊಸಕಿ ಹಾಕಲು ಪ್ರಯತ್ನಿಸುತ್ತಿದ್ದಾಗಲೇ, ದೇವರು ಆಲ್ಲಿ ಪ್ರತ್ಯಕ್ಷನಾಗಿ, ನೋಡಿದೆಯಾ ಮನುಜಾ, ನಿನ್ನ ಕಾಲನ್ನು ಕಚ್ಚಿದ ಒಂದು ಇರುವೆ ಕೊಲ್ಲಲು ಹೋಗಿ ನೀನು ಹೇಗೆ ನೂರಾರು ಮುಗ್ಧ ಇರುವೆಗಳನ್ನು ಕೊಲ್ಲುತ್ತಿದ್ದೇಯೇ? ನಾನು ಅನ್ಯಾಯ ಮಾಡಿದೆ ಎಂದು ಬೊಬ್ಬಿರಿಯುವ ಮೊದಲು ನಿಮ್ಮ ತಪ್ಪುಗಳನ್ನು ಮೊದಲು ಅರಿವು ಮಾಡಿಕೊಂಡಲ್ಲಿ ನಿಜವಾದ ಸತ್ಯವು ತಿಳಿಯುತ್ತದೆ ಎಂದರಂತೆ.
ಈ ಮೇಲಿನ ದೃಷ್ಟಾಂತವನ್ನು ಗಾಂಧಿ ಮತ್ತು ನೆಹರು ಅವರ ಅನುಯಾಯಿಗಳಿಗೆ ಸೂಕ್ತ ಎನಿಸುತ್ತದೆ. ನಿಮ್ಮ ವಯಕ್ತಿಕ ತತ್ವ ಸಿದ್ಧಾಂತಗಳು ಏನೇ ಇರಲಿ, ಗಾಂಧಿ ಮತ್ತು ನೆಹರು ಕುಟುಂಬದ ಬಗ್ಗೆ ನಿಮ್ಮ ಸ್ವಾಮಿ ನಿಷ್ಟೆ ಎಷ್ಟೇ ಇರಲಿ ಆದರೆ ದಯವಿಟ್ಟು ಸ್ವಾತ್ರಂತ್ರ್ಯ ಹೋರಾಟದ ಇತಿಹಾಸವನ್ನು ತಿರುಚುವ ಪ್ರಯತ್ನವನ್ನು ಮಾಡದಿರಿ. ಏಕೆಂದರೆ ಈ ದೇಶಕ್ಕೆ ಗಾಂಧಿ ಮತ್ತು ನೆಹರು ಅವರ ಪಾತ್ರ ಕೇವಲ ಕೆನೆಪದರವಾಗಿದೆ ಮತ್ತು ಅದಕ್ಕೆ ತಕ್ಕಷ್ಟು ಪ್ರತಿಫಲವನ್ನು ಅವರು ಮತ್ತು ಅವರ ಕುಟುಂಬ ಅನುಭವಿಸಿಯಾಗಿದೆ. ಹಾಗಾಗಿ ಇನ್ನು ಮುಂದಾದರೂ ದೇಶಕ್ಕಾಗಿ ನಿಸ್ವಾರ್ಥವಾಗಿ ತ್ಯಾಗ ಮತ್ತು ಬಲಿದಾನ ಮಾಡಿದ ಲಕ್ಷಾಂತರ ಎಲೆಮರೆಕಾಯಿಯಂತಹ ಪ್ರಾಥಃಸ್ಮರಣೀಯರಿಗೆ ಸಲ್ಲಬೇಕಾದ ಗೌರವವನ್ನು ಸಲ್ಲಿಸುವವರ ಜೊತೆ ಕೈ ಜೋಡಿಸಿ. ಅಕಸ್ಮಾತ್ ನಿಮ್ಮ ತತ್ವ ಸಿದ್ಧಾಂತ ಅದಕ್ಕೆ ಒಪ್ಪದೇ ಹೋದಲ್ಲಿ ದಯವಿಟ್ಟು ವಾಚಾಮಗೋಚರವಾಗಿ ಬೈಯ್ದಾಡುತ್ತಾ ಅವರನ್ನೂ ಅವರ ಅಮ್ಮ, ಮಡದಿ, ಅಕ್ಕ ತಂಗಿಯರನ್ನು ಅವಮಾನಿಸದಿರಿ. ಇದು ಖಂಡಿತವಾಗಿಯೂ ನಮ್ಮ ಸಂಸ್ಕಾರ ಮತ್ತು ಸಂಸ್ಕೃತಿಯಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ನಾವಂತೂ ಭಾಗವಹಿಸಿರಲಿಲ್ಲ.ಆದರೆ ದೇಶದಪರ ಹೋರಾಟ ನಡೆಸಿದರವರ ನಡುವೆ ತಾರತಮ್ಯ ಮಾಡುವುದು ತರವಲ್ಲ ಅಲ್ಲವೇ?
ಏನಂತೀರಿ?
ನಿಮ್ಮವನೇ ಉಮಾಸುತ