ಸಿರಿವಂತರ ಮಕ್ಕಳೇ ಹೀಗೇಕೇ?

ಅಕ್ಟೋಬರ್ 2, ಗಾಂಧಿ ಜಯಂತಿ. ದೇಶಕ್ಕೆ ಸ್ವಾತ್ರಂತ್ರ್ಯ ತಂದು ಕೊಟ್ಟವರಲ್ಲಿ ಮುಂಚೂಣಿಯಲ್ಲಿದ್ದ ನಾಯಕನಿಗೆ ಗೌರವ ಅರ್ಪಿಸುವ ಸಲುವಾಗಿ ಅವರು ಪಾಲಿಸುತ್ತಿದ್ದ ಅಹಿಂಸಾ ತತ್ವವನ್ನು ಎತ್ತಿ ಹಿಡಿಯುವ ಸಲುವಾಗಿ ಆ ದಿನ ದೇಶಾದ್ಯಂತ ಮಧ್ಯ ಮತ್ತು ಮಾಂಸದ ವ್ಯಾಪಾರವನ್ನು ನೀಷೇಧಿಸಲಾಗಿರುತ್ತದೆ ಮತ್ತು ಇಡೀ ದಿನ ಗಾಂಧಿಯವರ ತತ್ವ ಮತ್ತು ಆದರ್ಶಗಳನ್ನು ಇಂದಿನ ಯುವ ಜನತೆಗೆ ತಿಳಿಸುವ ಕಾರ್ಯದಲ್ಲಿ ಬಹುತೇಕ ಎಲ್ಲರೂ ನಿರತರಾಗಿರುವಾಗಲೇ ಅದೇ ರಾತ್ರಿ ಮುಂಬೈಯ್ಯಿನ ಐಷಾರಾಮಿ ಹಡುಗೊಂದರಲ್ಲಿ ಬೆಚ್ಚಿ ಬೀಳುವ ಸಂಗತಿಯೊಂದು ನಡೆದಿದೆ. ಸಮಾಜದಲ್ಲಿ ಗಣ್ಯರೆನಿಸಿಕೊಂಡವರ ಮಕ್ಕಳು ಡ್ರಕ್ಸ್ ಪಾರ್ಟಿ ಮಾಡುತ್ತಿದ್ದಾಗ ಎನ್‍ಸಿಬಿಯ ಕೈಯಲ್ಲಿ ಸಿಕ್ಕಿ ಹಾಕಿಕೊಂಡಿರುವುದು ನಿಜಕ್ಕೂ ವಿಪರ್ಯಸವೇ ಸರಿ. ಅದರಲ್ಲೂ ಹಿಂದಿ ಚಿತ್ರರಂಗದ ಬಾದ್ ಷಹಾ ಎಂದೇ ಪ್ರಸಿದ್ಧಿಯಗಿರುವ ಶಾರೂಖ್ ಖಾನ್ ಮಗ ಆರ್ಯನ್ ಖಾನ್ ಸಹಿತ 8 ಜನರು ಎನ್‍ಸಿಬಿ ಬಲೆಗೆ ಬಿದ್ದಿರುವುದು ಗಮನಾರ್ಹವಾಗಿದೆ.

ಡ್ರಗ್ಸ್ ಕೇಸ್ ವಿಚಾರವಾಗಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಆರ್ಯನ್ ಖಾನ್ ತನಿಖೆಯ ಸಂಧರ್ಭದಲ್ಲಿ ಬಿಚ್ಚಿಟ್ಟಿರುವ ವಿಷಯಗಳು ನಿಜಕ್ಕೂ ಭಯ ಹುಟ್ಟಿಸುವಂತಿದೆ. ಆರ್ಯನ್ ಖಾನ್ ಮದ್ಯ, ಮಾದಕ ದ್ರವ್ಯದ ಅಭ್ಯಾಸ ಮತ್ತು ಮಾನಿನಿಯರ ಸಹವಾಸ ಸುಮಾರು ವರ್ಷಗಳ ಹಿಂದಿನಿಂದಲೂ ಇದ್ದು ಈ ವಿಷಯ ಅವರ ತಂದೆ ತಾಯಿಯರಿಗೆ ತಿಳಿದಿದ್ದು ಅವರೆಂದು ಅದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿಲ್ಲ‌ ಎನ್ನುವುದು ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಇದಕ್ಕೆ ಪುರಾವೆ ಎನ್ನುವಂತೆ ಕೆಲವು ವರ್ಷಗಳ ಹಿಂದೆ ಹಿರಿಯ ನಟಿ ಸಿಮಿಗರೆವಾಲ್ ನಡೆಸಿ ಕೊಡುವ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಶಾರೂಖ್ ಖಾನ್ ತನ್ನ ಮಗ, ಮದ್ಯ, ಮಾದಕ ದ್ರವ್ಯ ಮತ್ತು ಮಾನಿನಿಯರ ಸಹವಾಸ ಮಾಡಿದರೆ ತನ್ನದೇನೂ ಅಭ್ಯಂತರವಿಲ್ಲ. ಅವನು ಎಲ್ಲವನ್ನೂ ಅನುಭವಿಸಲಿ ಎಂಬ ಆಶೆಯನ್ನು ವ್ಯಕ್ತಪಡಿಸಿದ್ದರು. ಬಹುಶಃ ಮುಂದೊಂದು ದಿನ ತನ್ನ ಮಗ ಇದೇ ರೀತಿಯಾಗಿ ಸಿಕ್ಕಿಕೊಳ್ಳುತ್ತಾನೆ ಎಂಬ ದೂರಾಲೋಚನೆ ಇತ್ತೋ ಇಲ್ಲವೋ ಆದರೆ ಆವರ ಮಗ ಮಾತ್ರ ಅದನ್ನು ಅಕ್ಷರಶಃ ಮಾಡಿ ತೋರಿಸಿರುವುದು ನಿಜಕ್ಕೂ ದುಖಃಕರ ಎಂದರೂ ತಪ್ಪಾಗದು.

ಸ್ಟಾರ್ ಮಕ್ಕಳು ಈ ರೀತಿಯಾಗಿ ಕೆಟ್ಟ ಹಾದಿ ಹಿಡಿದಿರುವುದು ಇದೇ ಮೊದಲೇನಲ್ಲ ಮತ್ತು ಇದೇ ಕೊನೆಯೂ ಅಲ್ಲ ಎನ್ನುವುದು ಸತ್ಯ. ಬಾಲಿವುಡ್‌ನಲ್ಲಿ ಮುನ್ನಾಭಾಯಿ ಎಂದೇ ಪ್ರಸಿದ್ದಿ ಪಡೆದಿರುವ ಖಳನಾಯಕ್ ಖ್ಯಾತಿಯ ಸಂಜಯ್ ದತ್ ಅವರ ಜೀವನವೂ ಎಂಭತ್ತರ ದಶಕದಲ್ಲಿ ಇದೇ ರೀತಿಯಾಗಿತ್ತು. ಅಪ್ಪ ಸುನೀಲ್ ದತ್ ಪ್ರಖ್ಯಾತ ನಟರಾಗಿದ್ದಲ್ಲದೇ ರಾಜಕೀಯದಲ್ಲೂ ತೊಡಗಿಸಿಕೊಂಡಿದ್ದರು. ಇನ್ನು ಅಮ್ಮ ನರ್ಗೀಸ್ ಅಂದಿನ ಕಾಲದ ಹೆಸರಾಂತ ನಾಯಕಿಯಾಗಿ ಸದಾಕಾಲವೂ ತಮ್ಮ ತಮ್ಮ ಕೆಲಸದಲ್ಲಿ ನಿರತರಾಗಿದ್ದ ಕಾರಣ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗದಿರಲೆಂದು ಬೋರ್ಡಿಂಗ್ ಶಾಲೆಗೆ ಸೇರಿಸಿದ್ದರು. ಹೇಳಿ ಕೇಳಿ ಅದು ಹೆಸರುವಾಸಿಯಾದ ಬೋರ್ಡಿಂಗ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದವರೆಲ್ಲರೂ ಸಿರಿವಂತರ ಮಕ್ಕಳೇ, ಅಪ್ಪಾ ಅಮ್ಮಂದಿರ ಅಂಕುಶವಿಲ್ಲದೇ ಲಂಗು ಲಗಾಮಿಲ್ಲದೇ ಐಶಾರಾಮ್ಯ ಜೀವನ ನಡೆಸುತ್ತಲೇ ಕಲಿಯಬಾರದ ವಯಸ್ಸಿನಲ್ಲಿಯೇ ಎಲ್ಲಾ ದುರ್ವಿದ್ಯೆಗಳನ್ನು ಕಲಿತಾಗಿತ್ತು.1981 ರಲ್ಲಿ ಅದೇ ತಾನೇ ಸಂಜಯ್ ದತ್ ಅವರ ಚೊಚ್ಚಲು ಚಿತ್ರ ರಾಕಿ ಬಿಡುಗಡೆಯಾದ ಮೂರೇ ದಿನಕ್ಕೇ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ನಿಂದ ಬಹುದಿನಗಳ ಕಾಲ ನರಳುತ್ತಿದ್ದ ಆತನ ತಾಯಿ ನರ್ಗಿಸ್ ನಿಧನರಾದ ಮೇಲಂತೂ, ಅದೇ ದುಖಃವನ್ನು ಮರೆಯುವ ಸಲುವಾಗಿ ಆರಂಭಿಸಿದ ಕುಡಿತ ಮತ್ತು ಮಾದಕದ್ರವ್ಯದ ಸೇವನೆ, ಕೆಲವೇ ಕೆಲವು ದಿನಗಳಲ್ಲಿ ಮಿತಿಮೀರಿ ಹೋಗಿ ಸದಾಕಾಲವೂ ನಶೆಯಲ್ಲಿಯೇ ತೇಲಾಡುವಂತಾಗಿತ್ತು. ಇನ್ನು ಮಾದಕದ್ರವ್ಯವನ್ನು ಹೊಂದಿಸಿಕೊಳ್ಳುವ ಸಲುವಾಗಿ ದಾವೂದ್ ನಂತಹ ದೇಶದ್ರೋಹಿಯ ಪರಿಚಯವನ್ನು ಮಾಡಿಕೊಂಡು ಅವನೊಂದಿಗೆ ಅನೇಕ ಕಾನೂನು ಬಾಹ್ಯ ವ್ಯವಹಾರಗಳನ್ನೂ ಮಾಡಿ ಅಂತಿಮವಾಗಿ ಸೆರೆಮನೆಯಲ್ಲಿ ಕೊಲೆಗಡುಕರು ವಂಚಕರ ಜೊತೆಯಲ್ಲಿ ಶಿಕ್ಷೆಯನ್ನು ಅನುಭವಿಸಬೇಕಾಯಿತು.

ಇಂತಹ ವ್ಯಸನ ಕೇವಲ ಚಿತ್ರರಂಗಕ್ಕೆ ಮಾತ್ರವೇ ಮೀಸಲಾಗಿರದೇ, ಪ್ರಸಕ್ತ ರಾಜಕೀಯದಲ್ಲಿ ಮುಂಚೂಣಿಯಲ್ಲಿರುವ ನಾಯನೊಬ್ಬ ತನ್ನ ಗೆಳತಿಯೊಂದಿಗೆ ಅಂತರಾಷ್ಟ್ರೀಯ ವಿಮಾನ ನಿಲ್ಡಾಣದಲ್ಲಿ ಮಾದಕ ದ್ರವ್ಯದೊಂದಿಗೆ ಸಿಕ್ಕಿಕೊಂಡು ಆತನ ತಾಯಿಯ ಕೋರಿಕೆಯಂತೆ ಅಂದಿನ ಪ್ರಧಾನಿಗಳಾಗಿದ್ದ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರು ಮಧ್ಯಸ್ಥಿಕೆ ವಹಿಸಿ ಆತನನ್ನು ಬಿಡಿಸಿದ್ದಲ್ಲದೇ ಮನೆಯನದ ಗೌರವವನ್ನು ಕಾಪಾಡುವ ಸಲುವಾಗಿ ಪ್ರಕರಣ ಹೊರಬಾರದಂತೆ ನೋಡಿಕೊಂಡರು ಎಂಬ ವಿಷಯ ಇಂದಿಗೂ ಚಾಲ್ತಿಯಲ್ಲಿದೆ. ಇಂದಿಗೂ ಆ ಸ್ವಘೋಷಿತ ಯುವ ರಾಜಕಾರಣಿಯ ಮಾತುಕತೆ, ವರ್ತನೆ ಮತ್ತು ಹಾವಭಾವಗಳನ್ನು ಸೂಕ್ಶ್ಮವಾಗಿ ಗಮನಿಸಿದಲ್ಲಿ ಆತ ಸದಾಕಾಲಚೂ ನಶೆಯಲ್ಲಿಯೇ ಇರುತ್ತಾನೇನೋ ಎಂಬತಿರುತ್ತದೆ ಎಂಬುದೇ ಬಹುತೇಕರ ಅಭಿಪ್ರಾಯವಾಗಿದೆ.

ಇದೇ ರೀತಿಯಲ್ಲೇ ಬೆಂಗಳೂರಿನ ಶಾಂತಿನಗರದ ಶಾಸಕರರ ಮಗನ ಹತ್ತಾರು ಪ್ರಕರಣಗಳು ದಾಖಲಾಗಿ ಇಂದಿಗೂ ನ್ಯಾಯಾಲಯದಲ್ಲಿ ವಿಚಾರಣೆಗಳು ನಡೆಯುತ್ತಿರುವುದನ್ನು ಸ್ಮರಿಸಬಹುದಾಗಿದೆ.

ಈ ಪ್ರಸಂಗಗಳನ್ನು ನೋಡಿ ಎಲ್ಲಾ ದೊಡ್ಡವರ ಮಕ್ಕಳೂ ಹೀಗೆಯೇ ಎಂದು ಸಾರಾಸಗಟಾಗಿ ಹೇಳಲಾಗದು. ಪ್ರಖ್ಯಾತ ಹಿಂದಿ ಚಿತ್ರವಾದ, ತ್ರೀ ಈಡಿಯಟ್ಸ್ ಸಿನಿಮಾದಲ್ಲಿ ನಟಿಸಿರುವ ಮಾಧವನ್, ಅವರ ಮಗ ವೇದಾಂತ್‌ ಇದಕ್ಕೆ ಅಪವಾದ ಎನ್ನುವಂತಿದ್ದು, ಆತ ಸ್ಟಾರ್ ಮಗ ಎಂಬ ಹಮ್ಮು ಬಿಮ್ಮು ಇಲ್ಲದೇ ಸುಸಂಸ್ಕೃತನಾಗಿ ಬೆಳೆದಿರುವುದಲ್ಲದೇ, ದೇಶದ ಉದಯೋನ್ಮುಖ ಈಜುಗಾರನಾಗಿ ತನ್ನ 14 ವಯಸ್ಸಿನಲ್ಲೇ, 2019ರಲ್ಲಿ ಏಷಿಯನ್ ಏಜ್ ಗ್ರೂಫ್ ಆಫ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್‌ನಲ್ಲಿ 4x100m ಫ್ರೀಸ್ಟೈಲ್ ರಿಲೆಯ ತಂಡದ ಭಾಗವಾಗಿ ಬೆಳ್ಳಿ ಪದಕ ಗೆಲ್ಲುವ ಮೂಲಕ ತನ್ನ ಹೆತ್ತ ಪೋಷಕರಿಗೂ ಮತ್ತು ದೇಶಕ್ಕೂ ಹೆಮ್ಮೆ ತಂದಿದ್ದಾನೆ. ಈ ಸಂತೋಷದ ವಿಷಯವನ್ನು ಸೋಶಿಯಲ್ ಮೀಡಿಯಾದಲ್ಲಿ ಮಾಧವನ್ ಹಂಚಿಕೊಂಡು ದೇವರ ಕೃಪೆಯಿಂದಾಗಿ ದೇಶವವನ್ನು ಪ್ರತಿನಿಧಿಸಿದ ತನ್ನ ಮಗನ ಚೊಚ್ಚಲ ಪದಕವಾಗಿದೆ ಎಂದು ತಮ್ಮ ಮಗನ ಸಾಧನೆಯನ್ನು ಹಂಚಿಕೊಂಡಿದ್ದಲ್ಲದೇ, ಮಗನೇ, ಎಲ್ಲ ವಿಚಾರದಲ್ಲಿಯೂ ನನಗಿಂತಲೂ ನೀನು ಮುಂದಿದ್ದು, ನನಗೆ ಹೊಟ್ಟೆಕಿಚ್ಚು ಬರುವಂತೆ ಮಾಡಿದ್ದೀಯಾ. ನನ್ನ ಹೃದಯ ಹೆಮ್ಮೆಯಿಂದ ತುಂಬಿದೆ. ನಿನ್ನಿಂದ ನಾನು ತುಂಬ ಕಲಿಯುವುದಿದೆ. ನಿನ್ನಂತ ಮಗನನ್ನು ಪಡೆಯಲು ಪುಣ್ಯ ಮಾಡಿದ್ದೇನೆ ಎಂದು ಆನಂದ ಭಾಷ್ಪಸುರಿಸಿದ್ದನ್ನು ನೋಡಿದ್ದೇವೆ.

ದೊಡ್ಡವರ ಮಕ್ಕಳ ಡ್ರಗ್ಸ್ ಕೇಸ್‌ಗಳು ಕೇವಲ ನಮ್ಮ ದೇಶದಲ್ಲೇ ಮೊದಲೇನಲ್ಲ. ವಿಶ್ವದ ಹಲವು ರಾಷ್ಟ್ರಗಳಲ್ಲಿ ಸ್ಟಾರ್ ನಟರುಗಳು, ಕ್ರೀಡಾಪಟುಗಳು, ಪಾಪ್ ಹಾಡುಗಾರರು ಬಹಳಷ್ಟು ಸೆಲೆಬ್ರಿಟಿಗಳು ಡ್ರಗ್ಸ್ ಕೇಸ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ವಿಶ್ವದಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಪ್ರತಿಭಾನ್ವಿತ ನಟ ಜಾಕಿ ಚಾನ್ ಮಗನೂ ಸಹಾ ಒಮ್ಮೆ ಡ್ರಗ್ಸ್ ಕೇಸ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದ.

ಮಗ ಮಾದಕವಸ್ತು ಪ್ರಕರಣದಲ್ಲಿ ಸಿಲುಕಿಕೊಂಡ ಸುದ್ದಿ ತಿಳಿಯುತ್ತಿದ್ದಂತೆಯೇ ಉಳಿದೆಲ್ಲಾ ತಂದೆಯಂತೆ ತನ್ನ ಮಗನನನ್ನು ರಕ್ಷಿಸಲು ಮುಂದಾಗದ ಜಾಕಿ ಚಾನ್ ಅವನ ತಪ್ಪಿಗೆ ತಕ್ಕ ಶಿಕ್ಷೆಯಾಗಲಿ ಎಂಬ ಧೃಢನಿರ್ಧಾರ ತಾಳಿದ್ದಲ್ಲದೇ, ತಾನು ಬೆವರು ಸುರಿಸಿ ಕಷ್ಟ ಪಟ್ಟು ಸಂಪಾದನೆ ಮಾಡಿದ್ದ ಹಣದಲ್ಲಿ ಸುಮಾರು 350 ದಶಲಕ್ಷ ಡಾಲರ್ ಮೌಲ್ಯವನ್ನು ದಾನ ಮಾಡಿ, ಈ ಹಣದಲ್ಲಿ ತನ್ನ ಮಗನಾದ ಜೈಸಿಗೆ ಒಂದು ನಯಾಪೈಸೆಯೂ ಕೊಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದ.

ಚಿತ್ರರಂಗದ ಯಾವುದೇ ಹಿನ್ನಲೆಯಿಲ್ಲದೇ ಕೇವಲ ತನ್ನ ಸಾಹಸಮಯ ದೃಶ್ಯಗಳಿಂದಾಗಿ ಇಷ್ಟೆಲ್ಲಾ ಹಣವನ್ನು ಗಳಿಸಿದ್ದೇನೆ. ಅದೇ ಹಣದಲ್ಲಿ ತನ್ನ ಮಗನಿಗೆ ತಕ್ಕ ಮಟ್ಟಿಗಿನ ವಿದ್ಯಾಭ್ಯಾಸವನ್ನು ಮಾಡಿಸಿದ್ದೇನೆ. ಅವನು ಸಮರ್ಥನಾಗಿದ್ದಲ್ಲಿ ತನ್ನ ಸ್ವಂತ ಪರಿಶ್ರಮದಿಂದ ಹಣವನ್ನು ಸಂಪಾದಿಸಿ ಖರ್ಚು ಮಾಡಲಿ. ಆತನಿಗೆ ಅಗತ್ಯಕ್ಕಿಂತ ಹೆಚ್ಚಿನ ಹಣವನ್ನು ಕೊಟ್ಟ ಪರಿಣಾಮವಾಗಿಯೇ ಆತ ದುವ್ಯಸನಿಯಾಗಿದ್ದ. ಹಾಗಾಗಿ ಅವನಿಗೆ ಕಿಂಚಿತ್ತೂ ಆಸ್ತಿಯನ್ನು ನೀಡುವುದಿಲ್ಲ ಎಂದು ಹೇಳಿದ್ದು ಬಹುತೇಕರಿಗೆ ಅಚ್ಚರಿ ಮೂಡಿಸಿತ್ತು.

ಈ ಪ್ರಕರಣದ ನಂತರ ಜಾಕಿಚಾನ್ ಸಾರ್ವಜನಿಕವಾಗಿ ತನ್ನ ಮಗನ ಪರವಾಗಿ ಕ್ಷಮೆ ಕೇಳಿದ್ದಲ್ಲದೇ, ನನ್ನ ಮಗನ ಈ ಪ್ರಕರಣ ವಿಶ್ವದ ಎಲ್ಲಾ ಯುವಕರುಗಳಿಗೆ ಎಚ್ಚರಿಕೆಯ ಗಂಟೆಯಾಗಿ ಅವರೆಲ್ಲರೂ ಮಾದಕವಸ್ತುಗಳಿಂದ ದೂರವಿರುತ್ತಾರೆ. ಎಂದು ಭಾವಿಸುತ್ತೇನೆ ಎಂದು ಹೇಳಿದ್ದಲ್ಲದೇ, ನಾನಂತೂ ನನ್ನ ಮಗನನ್ನು ಸರಿಯಾಗಿ ಬೆಳೆಸುವಲ್ಲಿ ವಿಫಲವಾದೆ ಹಾಗಾಗಿ ಅವನ ದುಷ್ಕೃತ್ಯದ ಸಂಪೂರ್ಣ ಜವಾಬ್ದಾರಿಯನ್ನು ನಾನೇ ಹೊತ್ತುಕೊಂಡು ಇಡೀ ಸಮಾಜದ ಮುಂದೆ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದು ಮನಕುಲುಕವಂತಿತ್ತು.

ಅದೇ ಹುಟ್ಟು ಸಿರಿವಂತರಾದ ಟಾಟಾ ಕುಟುಂಬದವರಾಗಲೀ, ವಿಪ್ರೋದ ಅಜೀಜ್ ಪ್ರೇಮ್ ಜೀ ಮಕ್ಕಳಾಗಲೀ, ಅಂಬಾನಿ ಮಕ್ಕಳಾಗಲೀ, ಇತ್ತೀಚೆಗೆ ಸಿರಿವಂತರಾದ ಇನ್ಫೋಸಿಸ್ ಸುಧಾಮೂರ್ತಿಯವರ ಮಕ್ಕಳು ಹುಟ್ಟುತ್ತಲೇ ಹಣವನ್ನು ನೋಡಿದರೂ, ತಂದೆ ತಾಯಿಯರ ಜವಾಬ್ದಾರಿತನದಿಂದಾಗಿ ಈ ರೀತಿಯಲ್ಲಿ ಹಾಳಾಗದೇ, ಉನ್ನತ ವ್ಯಾಸಂಗವನ್ನು ಮುಗಿಸಿ ತಮ್ಮ ಕುಟುಂಬದ ವ್ಯವಹಾರಗಳನ್ನು ಯಶಸ್ವಿಯಾಗಿ ಮನ್ನಡೆಸಿಕೊಂಡು ಹೋಗುತ್ತಿದ್ದಾರೆ.

ದುರಾದೃಷ್ಟವಶಾತ್ ಚಾಕೀಚಾನ್ ರಂತೆ ತಪ್ಪನ್ನು ಒಪ್ಪಿಕೊಂಡು ತಿದ್ದಿಕೊಳ್ಳುವ, ಇಲ್ಲವೇ ಮಾಧವನ್ ರೀತಿಯಲ್ಲಿ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಬೆಳೆಸುವ ಬಗ್ಗೆ ಇಂದಿನ ಬಹುತೇಕ ಸಿರಿವಂತರು ಗಮನಿಸುವ ಬದಲಾಗಿ, ಆರ್ಯನ್ ಖಾನ್ ಪ್ರಕರಣಕ್ಕೆ ಧರ್ಮ ಮತ್ತು ರಾಜಕೀಯವನ್ನು ಬೆರೆಸಿ, ಅನಗತ್ಯವಾಗಿ ಪ್ರಕರಣವನ್ನು ರಾಜಕೀಯವಾಗಿ ಗಬ್ಬೆಬ್ಬಿಸಲು ಪ್ರಯತ್ನಿಸುತ್ತಿರುವ ಕೆಲವು ನಟ ನಟಿಯರ ಬೌದ್ಧಿಕ ದಿವಾಳಿತನದ ಬಗ್ಗೆ ನಿಜಕ್ಕೂ ಖೇದಕರವೆನಿಸುತ್ತದೆ.

ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ತಿಯಲ್ಲಿ ಕೊಡೆ ಹಿಡಿದು ನಡೆದನಂತೆ ಎನ್ನುವಂತೆ, ಇದ್ದಕ್ಕಿದ್ದಂತೆಯೇ ಹಣ ನೋಡಿದ ತಕ್ಷಣ ವಯಸ್ಸಿಗೆ ಬಂದ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ಕಲಿಸದೇ ಹೋದಲ್ಲಿ ಈ ರೀತಿಯ ಪ್ರಸಂಗಗಳು ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಹಾಗಾಗಿ ಈ ಪ್ರಕರಣಗಳು ಎಲ್ಲಾ ಪೋಷಕರಿಗೂ ಎಚ್ಚರಿಕೆಯ ಗಂಟೆಯಾಗಿ ತಮ್ಮ ಎಷ್ಟೇ ದಣಿವರಿಯದ ಕೆಲಸಗಳ ಮಧ್ಯೆಯೂ, ಮಕ್ಕಳ ಬಗ್ಗೆ ಗಮನವಿರಲಿ ಎನ್ನುವುದಷ್ಟೇ ಈ ಲೇಖನದ ಉದ್ದೇಶವಾಗಿದೆಯೇ ಹೊರತು ಯಾರನ್ನೂ ತೆಗಳುವ ಇಲ್ಲವೇ ಯಾರನ್ನೋ ಹೊಗಳುವ ಇರಾದೆ ಇಲ್ಲವಾಗಿದೆ. ತಪ್ಪು ಮಾಡುವುದು ಸಹಜ ಆದರೆ ಅದೇ ತಪ್ಪನ್ನು ತಿದ್ದಿಕೊಂಡು ಯಶಸ್ವಿಯಾಗಿ ಮನ್ನಡೆಯುವವನೇ ಮನುಜ.

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s