ಏರ್ ಇಂಡಿಯ

ಇತ್ತೀಚೆಗೆ ದೇಶಾದ್ಯಂತ ನೆಡೆಯುತ್ತಿರುವ ಬಹುಮುಖ್ಯ ಚರ್ಚೆ ಎಂದರೆ, ಈ ಸರ್ಕಾರ ದೇಶವನ್ನು ಒಂದೊಂದಾಗಿ ಮಾರಲು ಹೊರಟಿದೆ. ಸರ್ಕಾರ ನಡೆಸಿ ಎಂದು ಅವರನ್ನು ಅಧಿಕಾರಕ್ಕೆ ತಂದರೆ ಇವರು ಹೀಗೆ ಒಂದೊಂದೇ ಸರ್ಕಾರೀ ಸಂಸ್ಥೆಗಳನ್ನು ಮಾರಾಟ ಮಾಡಲು ಅವರಿಗೆ ಯಾವ ಹಕ್ಕಿದೆ? ಎಂಬುದರ ಕುರಿತಾಗಿದೆ. ಹಾಗಾದರೆ ನಿಜವಾಗಿಯೂ ನಡೆಯುತ್ತಿರುದಾದರೂ ಏನು? ಎಂಬುದರ ಕುರಿತಾಗಿ ಚರ್ಚೆ ಮಾಡೋಣ.

ಅದೊಂದು ಸಣ್ಣ ಮಕ್ಕಳ ಶಾಲೆ. ಶಾಲೆಯ ಶಿಕ್ಷಕಿ ಪ್ರತೀ ವಿದ್ಯಾರ್ಥಿಗಳಿಗೂ ಒಂದೊಂದು ಹಣ್ಣನ್ನು ತರಲು ಹೇಳಿದ್ದ ಕಾರಣ ಎಲ್ಲಾ ಮಕ್ಕಳೂ ಸಂತೋಷದಿಂದ ಮಾರನೆಯ ದಿನ ಹಣ್ಣುಗಳನ್ನು ತಂದು ಅದನ್ನು ಆ ಶಿಕ್ಷಕಿಗೆ ತೋರಿಸಿದಾಗ ಅದನ್ನು ತಾನು ಹೇಳುವವರೆಗೂ ತಮ್ಮ ಚೀಲದಲ್ಲೇ ಇಟ್ಟು ಕೊಳ್ಳಲು ತಿಳಿಸಿದರೆ, ಹೀಗೆ ಒಂದು, ಎರಡು, ಮೂರು, ನಾಲ್ಕು ಹೀಗೇ ಹತ್ತು ದಿನಗಳು ಕಳೆದವು. ಚೀಲದಲ್ಲಿದ್ದ ಹಣ್ಣು ಕೊಳೆತು ನಾರಲು ಆರಂಭವಾದಾಗ, ಅದರ ನಾತವನ್ನು ತಡೆಯಲು ವಿದ್ಯಾರ್ಥಿಗಳಿಗೆ ಅಗದಿದ್ದರೂ ಶಿಕ್ಷಕಿಯ ಭಯದಿಂದ ಸಹಿಸಿಕೊಂಡಿದ್ದರು. ಅದೊಮ್ಮೆ ಎಲ್ಲಾ ವಿದ್ಯಾರ್ಥಿಗಳೂ ಒಟ್ಟಿಗೆ ಚರ್ಚೆ ಮಾಡಿ ಆ ಕೊಳೆತ ಹಣ್ಣುಗಳನ್ನು ಬೀಸಾಡಲು ತೀರ್ಮಾನಿಸಿದ್ದಲ್ಲದೇ ಎಲ್ಲರೂ ಕೊಳೆತು ನಾರುತ್ತಿದ್ದ ಹಣ್ಣುಗಳನ್ನು ಬಿಸಾಡಿದ ನಂತರ ನೆಮ್ಮೆದಿಯಾಗಿ ಶಾಲೆಗೆ ಬರುತ್ತಾರೆ. ಅದೇ ದಿನ ಶಿಕ್ಷಕಿಯು ಎಲ್ಲರೂ ನಾನು ಹೇಳಿದ ಹಣ್ಣುಗಳನ್ನು ಜೋಪಾನವಾಗಿ ಇಟ್ಟು ಕೊಂಡಿದ್ದೀರಿ ಎಂದು ಭಾವಿಸುತ್ತೇನೆ ಎಂದು ಕೇಳುತ್ತಾರೆ. ಆಗ ಆ ವಿದ್ಯಾರ್ಥಿಗಳೆಲ್ಲರೂ ಒಕ್ಕೊರಲಿನಿಂದ, ಮಿಸ್, ಐದಾರು ದಿನಗಳ ಕಾಲ ಚೆನ್ನಾಗಿದ್ದ ಹಣ್ಣುಗಳು ದಿನೇ ದಿನೇ ಕಳೆದಂತೆ ಕೊಳೆತು ನಾರುತ್ತಿದ್ದಾಗ ಸಹಿಸಿಕೊಳ್ಳಲಾಗದೇ, ವಿಧಿ ಇಲ್ಲದೇ ಬಿಸಾಡಬೇಕಾಯಿತು ಎಂದರು. ಇಂತಹ ಉತ್ತರವನ್ನೇ ನಿರೀಕ್ಷಿಸುತ್ತಿದ್ದ ಆ ಶಿಕ್ಷಕಿ ಇದೇ ನೋಡಿ ಸೂಕ್ತವಾದ ಸಮಯದಲ್ಲಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳದೇ ಮುಂದೂಡುತ್ತಾ ಹೋದಲ್ಲಿ ಸಮಸ್ಯೆ ಉಲ್ಬಣವಾಗಿ ಈ ರೀತಿಯಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ವಿವರಿಸಿದರು.

ಆ ಶಾಲೆಯಲ್ಲಿ ಅಂದು ಶಿಕ್ಷಕಿ ತೋರಿಸಿದ ಪ್ರಾತ್ಯಕ್ಷಿಕೆಯನ್ನೇ ಇಂದು ಕೇಂದ್ರ ಸರ್ಕಾರವೂ ಮಾಡುತ್ತಿದೆ. ಸ್ವಾತಂತ್ರ್ಯ ಬಂದ ಸಮಯದಲ್ಲಿ ದೇಶದ ಆಭಿವೃದ್ಧಿಗಾಗಿ ಸಾರ್ವಜನಿಕ ಉದ್ಯಮಗಳನ್ನು ಸರ್ಕಾರ ಆರಂಭಿಸಿದ್ದು ಸೂಕ್ತವಾದ ನಿರ್ಧಾರವಾಗಿತ್ತು. ಆದರೇ ಅದೇ ಸರ್ಕಾರದ ಮೀಸಲಾತಿಯ ಪ್ರಭಾವದಿಂದ ಅರ್ಹತೆಯೇ ಇಲ್ಲದವರು ಸರ್ಕಾರ ಮತ್ತು ಸಾರ್ವಜನಿಕ ಉದ್ಯಮಗಳಲ್ಲಿ ತುಂಬಿ ತುಳುಕಿ ಕೆಲಸವೇ ಮಾಡದೇ ಕೈತುಂಬ ಸಂಬಳ ತೆಗೆದುಕೊಳ್ಳುವವರೇ ಹೆಚ್ಚಾದ ಪರಿಣಾಮ ಕೆಲವೇ ವರ್ಷಗಳಲ್ಲಿ ಈ ಎಲ್ಲಾ ಉದ್ಯಮಗಳೂ ನಷ್ಟವನ್ನು ಅನುಭವಿಸ ತೊಡಗಿದವು. ದುರಾದೃಷ್ಟವಷಾತ್ ಈ ಹಿಂದೆ ಆಳ್ವಿಕೆ ನಡೆಸಿದ ಎಲ್ಲಾ ಸರ್ಕಾರಗಳು ಜನರ ತೆರಿಗೆ ದುಡ್ಡುಗಳನ್ನು ಅನುದಾನವಾಗಿ ಕೊಡುತ್ತಲೇ ಸೆರಗಿನಲ್ಲಿ ಕೆಂಡವನ್ನು ಇಟ್ಟುಕೊಂಡು ಮುಂದುವರಿಸಿಕೊಂಡು ಹೋದ ಪರಿಣಾಮವಾಗಿಯೇ, ಇಂದಿನ ಸರ್ಕಾರ ಅದನ್ನು ಖಾಸಗೀ ವ್ಯಕ್ತಿಗಳ ಜೊತೆ ಮರುಹೂಡಿಕೆ ಮಾಡುವ (Disinvestment) ಇಲ್ಲವೇ ಬಾರೀ ಪ್ರಮಾಣದಲ್ಲಿ ನಷ್ಟ ಅನುಭವಿಸುತ್ತಿರುವ ಸಂಸ್ಥೆಗಳನ್ನು ಖಾಸಗಿಯವರಿಗೆ ಪರಿಭಾರೆ ಮಾಡಿ ಒಂದಿಷ್ಟು ಸಂಪನ್ಮೂಲಗಳನ್ನು ಸಂಗ್ರಹ ಮಾಡಲು ಹೊರಟಿರುವುದು ನಿಜಕ್ಕೂ ಶ್ಲಾಘನೀಯವೇ ಸರಿ. ದುರಾದೃಷ್ಟವಷಾತ್ ತಾ ಕಳ್ಳ ಪರರ ನಂಬ ಎನ್ನುವಂತಿರುವ ಕೆಲವರು ಸರ್ಕಾರದ ದೂರದೃಷ್ಟಿಯನ್ನು ಗ್ರಹಿಕೆ ಮಾಡುವುದರಲ್ಲಿ ಎಡುವುತ್ತಿರುವುದಲ್ಲದೇ, ಅದನ್ನೇ ದೊಡ್ಡದಾಗಿ ಮಾಡಿಕೊಂಡು ಜನರನ್ನು ಸರ್ಕಾರದ ವಿರುದ್ಧ ದಂಗೆ ಏಳುವಂತೆ ಪ್ರಚೋದಿಸುತ್ತಿರುವುದು ನಿಜಕ್ಕೂ ಅಚ್ಚರಿಯೇ ಸರಿ.

ಸರ್ಕಾರದ ಅಧೀನದಲ್ಲಿದ್ದ ಏರ್ ಇಂಡಿಯಾ ಕಂಪನಿಯು ವರ್ಷದಿಂದ ವರ್ಷಕ್ಕೆ ನಷ್ಟವನ್ನೇ ಅನುಭವಿಸುತ್ತಾ ಸರ್ಕಾರಕ್ಕೆ ನುಂಗಲಾರದ ತುತ್ತಾಗಿತ್ತು. 2009-10ರ ಆರ್ಥಿಕ ವರ್ಷದಿಂದೀಚೆಗೆ ಏರ್ ಇಂಡಿಯಾಗಾಗಿ ಕೇಂದ್ರ ಸರ್ಕಾರವು ₹ 1,10,276 ಕೋಟಿ ಖರ್ಚು ಮಾಡಿದ್ದರೂ ರಾವಣ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿ ಸಂಸ್ಥೆ ಉದ್ಧಾರವಾಗದೇ ಹೋದಾಗಾ ಭಾರತ ಸರ್ಕಾರವು ಏರ್ ಇಂಡಿಯಾದ ಶೇ 100ರಷ್ಟು ಬಂಡವಾಳ ಹಿಂಪಡೆಯಲು ನಿರ್ಧರಿಸಿ ಅಷ್ಟೂ ಷೇರುಗಳನ್ನು ಮಾರಾಟ ಮಾಡಲು ನಿರ್ಧರಿಸಿ ಬಹಿರಂಗ ಹರಾಜಿಗೆಂದು ಸಾರ್ವಜನಿಕರನ್ನು ಕರೆದಾಗ, ಏಳು ಸಂಸ್ಥೆಗಳು ಅದರಲ್ಲಿ ಆಸಕ್ತಿ ತೋರಿಸಿದವು. ಅವುಗಳ ಪೈಕಿ ಐದು ಪ್ರಸ್ತಾವಗಳು ನಿರ್ಧಾರಿತ ಮಾನದಂಡಗಳನ್ನು ಪೂರೈಸಿಲ್ಲ ಎನ್ನುವ ಕಾರಣಕ್ಕೆ ತಿರಸ್ಕೃತಗೊಂಡಿದ್ದವು. ಅಂತಿಮವಾಗಿ ಏರ್ ಇಂಡಿಯಾ ಟಾಟಾ ಸನ್ಸ್ ಕಂಪನಿಗೆ ₹ 18,000 ಕೋಟಿಯ ಭಾರೀ ಮೊತ್ತಕ್ಕೆ ಹಸ್ತಾಂತರವಾಗಲಿದೆ ಎಂದು ಸರ್ಕಾರದ ಪ್ರತಿನಿಧಿಗಳು ಘೋಷಿಸಿದಾಗ, ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ ಎಂದರೂ ಅತಿಶಯೋಕ್ತಿಯೇನಲ್ಲ. ಸದ್ಯಕ್ಕೆ ಏರ್ ಇಂಡಿಯಾ ಕಂಪನಿಯ ಮೇಲಿರುವ ಒಟ್ಟು ಸಾಲದ ಹೊರೆ ₹ 61,562 ಕೋಟಿಗಳಿದ್ದು ಅದರಲ್ಲಿ ಟಾಟಾ ಸನ್ಸ್ ಕಂಪನಿಯು ₹ 15,300 ಕೋಟಿ ಸಾಲದ ಹೊರೆಯನ್ನು ಹೊತ್ತುಕೊಳ್ಳಬೇಕಾಗುತ್ತದೆ ಮತ್ತು ಉಳಿದ ₹ 46,262 ಕೋಟಿ ಸಾಲ ತೀರುವಳಿ ಜವಾಬ್ದಾರಿಯನ್ನು ಸರ್ಕಾರವು ವಹಿಸಿಕೊಳ್ಳುವ ಮೂಲಕ ಏರ್ ಇಂಡಿಯದಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಉದ್ಯೋಗಿಗಳ ಹಿತರಕ್ಷಣೆಗೆ ಮುಂದಾಗಿರುವುದು ಶ್ಲಾಘನೀಯವಾಗಿದೆ. ಈ ಎಲ್ಲಾ ಉದ್ಯೋಗಿಗಳನ್ನೂ ಒಂದು ವರ್ಷಗಳ ಕಾಲ ಕಂಪನಿಯಲ್ಲಿಯೇ ಉಳಿಸಿಕೊಂಡು ಅವರ ಕೆಲಸ ಮತ್ತು ಕಾರ್ಯತತ್ಪರತೆಯ ಬಗ್ಗೆ ಸುಧೀರ್ಘವಾದ ಚರ್ಚೆ ನಡೆಸಿ ಅಂತಿಮವಾಗಿ ಅವರ ಸೇವೆಯನ್ನು ಮುಂದುವರೆಸಿಕೊಳ್ಳಬೇಕೇ ಇಲ್ಲವೇ, ಅಂತಹವರನ್ನು ಸ್ವಯಂ ನಿವೃತ್ತಿ ಯೋಜನೆಯಡಿಯಲ್ಲಿ ತರಬೇಕೇ ಎಂಬ ತೀರ್ಮಾನ ಟಾಟಾ ಕಂಪನಿಯದ್ದಾಗಿರುತ್ತದೆ ಎಂಬುದನ್ನು ಸ್ಪಷ್ಟಪಡಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ತನ್ಮೂಲಕ ಜರಡಿಯಲ್ಲಿ ಗಟ್ಟಿಕಾಳುಗಳು ಉಳಿದುಕೊಂಡು ಜೊಳ್ಳುಗಳೆಲ್ಲವೂ ಉದುರಿಹೋಗಿ ಕಂಪನಿಗೆ ಲಾಭವಾಗಲಿದೆ ಎನ್ನುವುದೇ ಎಲ್ಲರ ಅಭಿಪ್ರಾಯವಾಗಿದೆ.

ai4

ನಿಜ ಹೇಳಬೇಕೆಂದರೆ, ಏರ್ ಇಂಡಿಯವನ್ನು ಆರಂಭಿಸಿದ್ದೇ ಜೆಆರ್‌ಡಿ ಟಾಟಾರವರು. ಏರ್ ಇಂಡಿಯಾದ ಆರಂಭಿಸಿದ ಕತೆಯೇ ಒಂದು ರೋಚಕವಾಗಿದೆ. ಜೆಆರ್‌ಡಿ ಟಾಟಾರವರ ಬಾಲ್ಯವೆಲ್ಲವೂ ಫ್ರಾನ್ಸ್‌ನಲ್ಲಿ ಲೂಯಿಸ್ ಬ್ಲೂರಿಯೋಟ್‌ನ ನೆರೆಹೊರೆಯಲ್ಲಿ ಕಳೆದದ್ದಲ್ಲದೇ, 1907 ರಲ್ಲಿ ಅಂತಾರಾಷ್ಟ್ರೀಯ ಸಾಗರೋತ್ತರ ವಿಮಾನಯಾನವನ್ನು ಮಾಡಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದಂತಹವರಾಗಿದ್ದರು. 1929 ರಲ್ಲಿ ಮುಂಬೈನಲ್ಲಿ (ಅಗಿನ ಬಾಂಬೆ) ಫ್ಲೈಯಿಂಗ್ ಕ್ಲಬ್ ಆರಂಭಿಸಿ, ವಿಮಾನಗಳ ಕುರಿಗಾಗಿ ಅಧ್ಯಯನ ಮಾಡಲು ಸುಮಾರು ಗಂಟೆಗಳ ಕಾಲ ವಿಮಾನ ಯಾನ ಮಾಡಿದ್ದಲ್ಲದೇ, ಅದರ ಬಗ್ಗೆ ಸುದೀರ್ಘವಾದ ಅಧ್ಯಯನ ಮಾಡಿ, ಅಂತಿಮವಾಗಿ, 1932 ರಲ್ಲಿ 2 ಲಕ್ಷ ರೂ.ಗಳ ಹೂಡಿಕೆಯೊಂದಿಗೆ ಟಾಟಾ ಏವಿಯೇಷನ್ ಸೇವೆಯನ್ನು ಆರಂಭಿಸುವ ಮೂಲಕ ತಾವೇ ಸ್ವತಃ ಏರ್ ಇಂಡಿಯಾದ ಮೊದಲ ವಿಮಾನದ ಚಾಲನೆಯನ್ನೂ ಮಾಡಿದ್ದರು. ಆರಂಭದಲ್ಲಿ ಅದು ಕೇವಲ ಸರಕು ಸಾಗಣಿಕೆಯ ವಿಮಾನವಾಗಿದ್ದು, ಅತೀ ಶೀಘ್ರದಲ್ಲೇ ಲಾಭ ಗಳಿಸುವ ಉದ್ಯಮವಾಗಿ 1937 ರಲ್ಲಿ ಕೇವಲ ಐದು ವರ್ಷಗಳಲ್ಲಿಯೇ ಟಾಟಾ ಏರ್ ಮೇಲ್ ಲಾಭ 60,000 ರಿಂದ 6 ಲಕ್ಷಕ್ಕೆ ಏರಿತ್ತು.

ai1

1938 ರಲ್ಲಿ ಈ ವಿಮಾನ ಸಂಸ್ಥೆ ತನ್ನ ಹೆಸರನ್ನು ಟಾಟಾ ಏರ್‌ಲೈನ್ಸ್ ಎಂದು ಬದಲಾಯಿಕೊಂಡಾಗಲೇ ಪ್ರಪಂಚಾದ್ಯಂತ. ಎರಡನೆಯ ಮಹಾಯುದ್ಧ ಪ್ರಾರಂಭವಾಗಿ, ಅಂದಿನ ಬ್ರಿಟಿಷ್ ಸರ್ಕಾರ ಟಾಟಾ ಏರ್‌ಲೈನ್ಸಿನ ಎಲ್ಲಾ ವಿಮಾನಗಳನ್ನೂ ತನ್ನ ವಶಕ್ಕೆ ಪಡೆದು ಅದನ್ನು ಯುದ್ಧಗಳಲ್ಲಿ ಬಳಸಿಕೊಂಡಿತ್ತು. ಎರಡನೆಯ ಮಹಾಯುದ್ಧ ಮುಗಿದ ಸರ್ಕಾರದೊಂದಿಗೆ ತೀವ್ರವಾಗಿ ಹೋರಾಟ ನಡೆಸಿದ ಫಲವಾಗಿ ಮತ್ತೆ ಟಾಟಾ ಸಂಸ್ಥೆ ವಿಮಾನ ಸಂಸ್ಥೆಯ ನಿಯಂತ್ರಣವನ್ನು ಮರಳಿ ಪಡೆದದ್ದಲ್ಲದೇ, 1946 ರಲ್ಲಿ ಟಾಟಾ ಏರ್‌ಲೈನ್ಸ್ ಎಂದಿದ್ದ ಹೆಸರನ್ನು ಏರ್ ಇಂಡಿಯಾ ಎಂದು ಮರುನಾಮಕರಣ ಮಾಡಿ ಸಾರ್ವಜನಿಕವಾಗಿ ಷೇರು ಮಾರುಕಟ್ಟೆಗೆ ಪ್ರವೇಶ ಮಾಡಿತು. ಸ್ವಾತಂತ್ರ್ಯಾನಂತರ ಅಕ್ಟೋಬರ್ 1947 ರಲ್ಲಿ, ಏರ್-ಇಂಡಿಯಾ ಇಂಟರ್ನ್ಯಾಷನಲ್ ಎಂಬಂತಾಗಿ ಸರ್ಕಾರದ ಶೇಕಡಾ 49 ರಷ್ಟು ಪಾಲಿನ ಜೊತೆಗೆ ಟಾಟಾ ಕುಟುಂಬಕ್ಕೆ ಶೇಕಡಾ 25 ರಷ್ಟನ್ನು ಪಾಲು ಮತ್ತು ಉಳಿದ್ದದ್ದು ಸಾರ್ವಜನಿಕರ ಒಡೆತನದಲ್ಲಿರುವ ಒಂಡಂಬಡಿಕೆಗೆ ಸಹಿ ಮಾಡುವ ಮೂಲಕ, ಏರ್ ಇಂಡಿಯಾ ಬಾಂಬೆ-ಲಂಡನ್ ಮಾರ್ಗದಲ್ಲಿ ತನ್ನ ಮೊದಲ ಅಂತಾರಾಷ್ಟ್ರೀಯ ವಿಮಾನಯಾನವನ್ನು ಆರಂಭಿಸಿತು. ಇದೇ ಸಮಯದಲ್ಲಿಯೇ ತನ್ನ ಚಿಹ್ನೆಯಾಗಿ ಈಗ ಬಹುಜನಪ್ರಿಯವಾಗಿರುವ ಮಹಾರಾಜನನ್ನು ಬಳಸಿಕೊಳ್ಳಲಾಯಿತು.

ai5

ಅದೇಕೋ ಏನೋ ಅಂದಿನ ನೆಹರು ಸರ್ಕಾರ ಇದ್ದಕ್ಕಿದ್ದಂತೆಯೇ ರಾಷ್ಟ್ರೀಕರಣದತ್ತ ಚಿಂತನೆ ನಡೆಸಿ, ಸರ್ಕಾರದ್ದೇ 49 ಪ್ರತಿಶತದಷ್ಟು ಪಾಲನ್ನು ಹೊಂದಿದ್ದರೂ, 1953 ರಲ್ಲಿ, ಟಾಟಾ ಕುಟುಂಬಕ್ಕೆ 2.8 ಕೋಟಿ ರೂ.ಗಳನ್ನು ನೀಡಿ ಒಂದು ರೀತಿಯಲ್ಲಿ ಬಲವಂತವಾಗಿಯೇ ಏರ್ ಇಂಡಿಯಾದ ಸಂಪೂರ್ಣ ಷೇರುಗಳನ್ನು ಖರೀದಿಸಿದ ಸರ್ಕಾರ ನಾಗರಿಕ ವಿಮಾನಯಾನವನ್ನು ಸಂಪೂರ್ಣವಾಗಿ ರಾಷ್ಟ್ರೀಕರಣಗೊಳಿಸಿತು, ಸರ್ಕಾರದ ಈ ರೀತಿ ನೀತಿಗಳು ಜೆಆರ್‌ಡಿ ಟಾಟಾ ಅವರಿಗೆ ಅಚ್ಚರಿ ಮೂಡಿಸಿದ್ದಲ್ಲದೇ, ಸರ್ಕಾರವು ವಾಯು ಸಾರಿಗೆ ಉದ್ಯಮವನ್ನು ನಡೆಸಿಕೊಂಡ ರೀತಿ ಅವರಿಗೆ ಕೋಪದ ಜೊತೆಗೆ ಬೇಸರವನ್ನೂ ತರಿಸಿತ್ತು. ಅದಕ್ಕಾಗಿಯೇ ಏರ್ ಇಂಡಿಯಾದ ರಾಷ್ಟ್ರೀಕರಣವಾದರೂ, ಸುಮಾರು 25 ವರ್ಷಗಳ ಕಾಲ ಜೆಆರ್‌ಡಿ ಟಾಟಾ ಅವರನ್ನೇ ಆ ಸಂಸ್ಥೆಯ ಅಧ್ಯಕ್ಷರಾಗಿ ಮುಂದುವರೆಸಿದ ಅಂದಿನ ಸರ್ಕಾರ ಜನವರಿ 1, 1978 ರಲ್ಲಿ ಮುಂಬೈನಿಂದ ಹಾರಿದ್ದ ಏರ್ ಇಂಡಿಯಾದ ಬೋಯಿಂಗ್ 747 ವಿಮಾನವು ಅರೇಬಿಯನ್ ಸಮುದ್ರದಲ್ಲಿ ಪತನವಾಗಿ ಅದರಲ್ಲಿದ್ದ ಎಲ್ಲಾ 213 ಪ್ರಯಾಣಿಕರು ಮತ್ತು ಸಿಬ್ಬಂಧಿ ವರ್ಗ ಸಮುದ್ರದ ಪಾಲಾದಾಗ ಅಂದಿನ ಮೊರಾರ್ಜಿ ದೇಸಾಯಿ ಸರ್ಕಾರವು ಜೆಆರ್‌ಡಿ ಟಾಟಾವನ್ನು ಅಧ್ಕಕ್ಷ ಸ್ಥಾನದಿಂದ ವಜಾಮಾಡಿತು.. ಮುಂದೆ 1980 ರಲ್ಲಿ ಪುನಃ ಇಂದಿರಾ ಗಾಂಧಿಯವರು ಅಧಿಕಾರಕ್ಕೆ ಬಂದಾಗ ಜೆಆರ್‌ಡಿ ಟಾಟಾ ಅವರನ್ನು ಏರ್ ಇಂಡಿಯಾದ ನಿರ್ದೇಶಕರ ಮಂಡಳಿಗೆ ಮರಳಿ ಕರೆ ತಂದಿದ್ದಲ್ಲದೇ, 1986 ರವರೆಗೂ ಅದೇ ಸ್ಥಾನದಲ್ಲಿ ಮುಂದುವರೆಸಿದ ನಂತರ ಅಂದಿನ ಪ್ರಧಾನಿಗಳಾಗಿದ್ದ ಸ್ವತಃ ಅದೇ ಸಂಸ್ಥೆಯಲ್ಲಿ ಪೈಲೆಟ್ ಆಗಿ ಕಾರ್ಯನಿರ್ವಹಿಸಿದ್ದ ಶ್ರೀ ರಾಜೀವ್ ಗಾಂಧಿ ಅವರು ರತನ್ ಟಾಟಾ ಅವರನ್ನು ಏರ್ ಇಂಡಿಯಾ ಅಧ್ಯಕ್ಷರನ್ನಾಗಿ ನೇಮಿಸಿದರು. ರತನ್ ಟಾಟಾರವರು 1989 ರವರೆಗೆ ಅದೇ ಸ್ಥಾನದಲ್ಲಿ ಮುಂದುವರೆದಿದ್ದರು.

ai2

1990 ರ ದಶಕದಲ್ಲಿ ಪ್ರಧಾನ ಮಂತ್ರಿಗಳಾಗಿದ್ದ ಶ್ರೀ ನರಸಿಂಹರಾವ್ ಮತ್ತು ಅಂದಿನ ಹಣಕಾಸಿನ ಮಂತ್ರಿಗಳಾಗಿದ್ದ ಶ್ರೀ ಮನಮೋಹನ ಸಿಂಗ್ ಆವರ ಸಾರಥ್ಯದಲ್ಲಿ ಭಾರತ ದೇಶದಲ್ಲಿ ಆರಂಭವಾದ ಆರ್ಥಿಕತೆಯ ಉದಾರೀಕರಣದ ನಂತರ ನಂತರ, ಹತ್ತಾರು ಖಾಸಗಿ ವಿಮಾನ ಯಾನ ಸಂಸ್ಥೆಗಳು ಆರಂಭವಾಗಿ ಸಮಯಕ್ಕೆ ಸರಿಯಾದ ಹಾರಾಟದ ಜೊತೆಗೆ ಉತ್ತಮ ಸೇವೆಯನ್ನು ಕೊಡಲಾರಂಭಿಸಿ ಕೊಟ್ಟ ಹಣಕ್ಕೆ ಕಿಂಚಿತ್ತೂ ಮೋಸವಿಲ್ಲದಂತೆ ಸೇವೆಯನ್ನು ಒದಗಿಸಲು ಆರಂಭಿಸಿದಾಗ, ಸರ್ಕಾರೀ ನಿರಂಕುಶ ಧೋರಣೆಯನ್ನೇ ಹೊಂದಿದ್ದ ಏರ್ ಇಂಡಿಯಾ ನಿಧಾನವಾಗಿ ನಷ್ಟದತ್ತ ಜಾರಿ ಹೋಗಿ ಕಡೆಗೆ ವಿಮಾನಗಳು ಬಾನಿಗೆ ಏರಲಾದಷ್ಟು ಹದಗೆಟ್ಟು ಹೋಗಿದ್ದು ಈಗ ಇತಿಹಾಸ.

WhatsApp Image 2021-10-08 at 11.39.21 PM

ಏರ್ ಇಂಡಿಯಾದ ತನ್ನ 89 ನೇ ಹುಟ್ಟುಹಬ್ಬದ ಒಂದು ವಾರದಲ್ಲಿಯೇ 68 ವರ್ಷಗಳ ನಂತರ, ಅಕ್ಟೋಬರ್ 15, 2021ರಂದು ಪುನಃ ಸಂಪೂರ್ಣವಾಗಿ ತಾನೇ ಹುಟ್ಟು ಹಾಕಿದ್ದ ಸದ್ಯದಲ್ಲಿ ನಷ್ಟದಲ್ಲಿಯೇ ಇದ್ದ ಏರ್ ಇಂಡಿಯಾ ಎಂಬ ಸರ್ಕಾರಿ ಕಂಪನಿಯನ್ನು ತನ್ನ ವಶಕ್ಕೆ ಪಡೆದುಕೊಳ್ಳುವ ಮೂಲಕ ನಿಜವಾದ ರಾಷ್ಟ್ರೀಯತೆಯ ಕಾಳಜಿಯನ್ನು ಮೆರೆದಿದೆ ಎಂದರೂ ತಪ್ಪಾಗದು. ಜನವರಿ 1961ರಲ್ಲಿ ಅಮೇರಿಕಾದ ಅಂದಿನ ಅಧ್ಯಕ್ಷರಾಗಿದ್ದ ಜಾನ್ ಎಫ್ ಕೆನಡಿಯವರು, ನಿಮ್ಮ ದೇಶವು ನಿಮಗಾಗಿ ಏನು ಮಾಡಬಹುದು ಎಂದು ಕೇಳಬೇಡಿ, ಅದರ ಬದಲಾಗಿ ನಿಮ್ಮ ದೇಶಕ್ಕಾಗಿ ನೀವು ಏನು ಮಾಡಬಹುದು? ಎಂದು ಒಮ್ಮೆ ಯೋಚಿಸಿ ಎಂದು ಹೇಳಿದ್ದನ್ನು ಇಂದು ಟಾಟಾ ಸಂಸ್ಥೆ ಅಕ್ಷರಶಃ ಜಾರಿಗೆ ತಂದಿರುವುದು ನಿಜಕ್ಕೂ, ಅನನ್ಯ ಮತ್ತು ಅಭಿನಂದನಾರ್ಹವೇ ಸರಿ.

ಲಾಭದಲ್ಲಿರುವ ಕಂಪನಿಗಳನ್ನು ಕೊಂಡು ಕೊಳ್ಳಲು ಸರದಿಯಲ್ಲಿ ನಿಂತು ಕೊಂಡವರೇ ಹೆಚ್ಚಾಗಿರುವಾಗ, ದೇಶಕ್ಕೆ ಹೊರೆಯಾಗಿ ನಷ್ಟದಲ್ಲಿ ನಡೆಯುತ್ತಿದ್ದ ಕಂಪನಿಯನ್ನು ಪ್ರತಿಷ್ಟೆಗಾಗಿ ಖರೀದಿಸಿ, ತನ್ಮೂಲಕ ಸಾವಿರಾರು ಜನರಿಗೆ ಉದ್ಯೋಗವನ್ನು ನೀಡುವುದಲ್ಲದೇ, ಜಾಗತಿಕ ಪ್ರಪಂಚದಲ್ಲಿ ಮತ್ತೆ ಏರ್ ಇಂಡಿಯಾ ಮಹಾರಾಜನ ಹಿರಿಮೆಯನ್ನು ಎತ್ತಿ ಹಿಡಿಯಲು ಹೊರಟಿರುವ ಟಾಟಾ ಸಂಸ್ಥೆಯ ಈ ಕಾರ್ಯಕ್ಕೆ ನಮ್ಮೆಲ್ಲರ ಬೆಂಬಲನ್ನು ಕೊಡೋಣ. ಕೆಮ್ಮುವಳಾದರೂ ನಮ್ಮವಳಲ್ಲವೇ? ಎನ್ನುವ ಗಾದೆಯಂತೆ ಸಂಕಷ್ಟದ ಸಮಯದಲ್ಲಿ ಭಾರತ ಸರ್ಕಾರಕ್ಕೆ ಬೆಂಬಲ ಸೂಚಿಸಿರುವ ಕಾರಣ, ಮುಂದಿನ ಬಾರಿ ವಿಮಾನ ಯಾನ ಮಾಡುವಾಗ ಪ್ರಜ್ಞಾಪೂರ್ವಕವಾಗಿ ಏರ್ ಇಂಡಿಯಾ ವಿಮಾನಗಳಲ್ಲೇ ಪ್ರಯಾಣಿಸುವ ಮುಖಾಂತರ ಏರ್ ಇಂಡಿಯಾ ಮತ್ತೊಮ್ಮೆ ಲಾಭದ ಸಂಸ್ಥೆಯನ್ನಾಗಿ ಮಾಡುವತ್ತ ನಮ್ಮ ಅಳಿಲು ಸೇವೆಯನ್ನು ಸಲ್ಲಿಸೋಣ. ಹನಿ ಹನಿ ಗೂಡಿದರೆ ಹಳ್ಳ. ತೆನೆ ತೆನೆ ಗೂಡಿದರೆ ಬಳ್ಳ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

2 thoughts on “ಏರ್ ಇಂಡಿಯ

  1. I wholy disagree. The disinvent by CG shows its irresponsiity towards PSUs and infavour of pvt operstors. The father should always take responsibilty of the fmly ratherthan sherking. The policy of the CG & top management are wholly responsible for the downfall of all PSUs. Handing over of PSUs & the connected property ie, vacant land&buldg at throaway price to pvt is the policy of all political parties in power after 1980s. Being an rtd.employee of BSNL we have seen all these yrs and fighting against it.

    Like

    1. ಬಿ.ಎಸ್.ಎನ್.ಎಲ್ ಸಂಸ್ಥೆಯ ನಿವೃತ್ತ ಉದ್ಯೋಗಿಯಾಗಿ ನಿಮ್ಮಿಂದ ಈ ರೀತಿಯ ಪ್ರತಿಕ್ರಿಯೆ ಸ್ವಲ್ಪ ಅಚ್ಚರಿ ಎನಿಸಿತು. ನಿಮ್ಮ ಸಂಸ್ಥೆಗೆ ಸರ್ಕಾರ ಎಲ್ಲಾ ರೀತಿಯ ಸೌಲಭ್ಯವಗಳನ್ನು ನೀಡಿದ್ದರೂ ಅದನ್ನು ಸದುಪಯೋಗ ಪಡಿಸಿಕೊಳ್ಳಲು ನಿಮ್ಮ ಸಿಬ್ಬಂದಿಯವರು ವಿಫಲರಾಗಿದ್ದಲ್ಲದೇ ನಿಮ್ಮ ಗ್ರಾಹಕರ ಸೇವೆ ತೀರಾ ಕಳಪೆಯಾಗಿತ್ತು. ಒಂದು ಸಮಸ್ಯೆ ಪರಿಹರಿಸಲು ಒಂದೆರಡು ವಾರಗಳ ಕಾಲ ಕಾಯಬೇಕಿತ್ತು. ಅದೇ ಸಮಯದಲ್ಲಿ ನಿಮ್ಮ ಪ್ರತಿಸ್ಪರ್ಧಿಗಳು ಕೆಲವೇ ನಿಮಿಷಗಳಲ್ಲಿ ಸಮಸ್ಯೆಯನ್ನು ಬಗೆ ಹರಿಸುತ್ತಿದ್ದ ಕಾರಣ ಸ್ವಾಭಾವಿಕವಾಗಿ ಗ್ರಾಹಕರೆಲ್ಲರೂ ಅವರತ್ತ ವಾಲಿದ್ದರಲ್ಲಿ ಅತಿಶಯವೇನಿಲ್ಲ. ಅದೇ ರೀತಿ ಮೀಸಲಾತಿಯ ಮೇರೆಗೆ ಆಯ್ಕೆಯಾದವರೇ ಹೆಚ್ಚಾಗಿದ್ದ ಕಾರಣ ಆಧುನಿಕ ತಂತ್ರಜ್ಞಾನವನ್ನು ಕಲಿಯಲು ಮನಸ್ಸು ಮಾಡದೇ, ಅದೇ ಒಬಿರಾಯನ ಕಾಲದ್ದೇ ತಂತ್ರಜ್ಞಾನವನ್ನು ಮುಂದುವರೆಸಿಕೊಂಡು ಹೋಗಿದ್ದೇ ನಿಮ್ಮ ಸಂಸ್ಥೆಯ ಅವನತಿಗೆ ಕಾರಣವಾಯಿತು ಎಂದರೂ ತಪ್ಪಾಗದು

      ಇನ್ನು ಪೋಷಕರು ಮಕ್ಕಳು ನಡೆಯುವವರಿಗೂ ಕೈ ಹಿಡಿಯುತ್ತಾರೆಯೇ ಹೊರತು ನಡಿಗೆ ಕಲಿತಮೇಲೂ ಕೈ ಹಿಡಿದು ನಡೆಸಬೇಕಂದರೆ ಹೇಗೆ?

      Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s