ನಮ್ಮ ನಾಡಿನ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಅದ್ದೂರಿಯಾಗಿ ನಡೆಯುವ ದಸರಾದಂತೆಯೇ ಕೊಡಗಿನ ಮಡಿಕೇರಿಯ ದಸರಾ ಆಚರಣೆಯೂ ಅಷ್ಟೇ ಪ್ರಸಿದ್ಧಿಯಾಗಿದೆ. ಮೈಸೂರು ದಸರಾ ಮಧ್ಯಾಹ್ನ ಆರಂಭವಾಗಿ ಸಂಜೆ ಸೂರ್ಯಾಸ್ತಮಾನದ ವೇಳೆಗೆ ಪೂರ್ಣಗೊಂಡರೆ ಮಡಿಕೇರಿ ದಸರಾ ಆರಂಭವಾಗುವುದೇ ರಾತ್ರಿಯ ವೇಳೆ. ಹಾಗಾಗಿ ದಸರಾ ಮೈಸೂರಿನಲ್ಲಿ ಆರಂಭವಾಗಿ ಮಡಿಕೇರಿಯಲ್ಲಿ ಮುಳುಗುತ್ತದೆ ಎಂಬ ಮಾತು ಚಾಲ್ತಿಯಲ್ಲಿದೆ. ಇಂತಹ ಅದ್ದೂರಿಯಾದ ಮಡಿಕೇರಿ ದಸರಾ ಹಬ್ಬದ ಹಿನ್ನೆಲೆ ಮತ್ತು ಆಚರಣೆಯ ಬಗ್ಗೆ ಸವಿಸ್ತಾರವಾಗಿ ತಿಳಿದು ಕೊಳ್ಳೋಣ.
ಮೈಸೂರಿನ ದಸರಾಕ್ಕಿರುವ ಇತಿಹಾಸದಂತೆಯೇ ಮಡಿಕೇರಿ ದಸರಾಕ್ಕೂ ಪುರಾತನವಾದ ಇತಿಹಾಸವಿದ್ದು, ಶಿವಮೊಗ್ಗದ ಇಕ್ಕೇರಿಯಿಂದ ಕೊಡಗಿನ ಹಾಲೇರಿಗೆ ಬಂದು ನೆಲೆಸಿದ ಹಾಲೇರಿ ವಂಶಸ್ಥರು ವಿಜಯದಶಮಿ ಆಚರಣೆ ಮಾಡುತ್ತಿದ್ದರು. ಕೊಡಗನ್ನು ಆಳಿದ ದೊಡ್ಡವೀರರಾಜೇಂದ್ರ ಮಹಾರಾಜರು ಸಹಾ ಆಯುಧಪೂಜೆ, ಶ್ರೀದೇವಿಯ ಆರಾಧನೆ ಸೇರಿದಂತೆ ನವರಾತ್ರಿ ಉತ್ಸವ ಆಚರಿಸುತ್ತಿದ್ದರು ಎಂಬದಕ್ಕೆ ಅನೇಕ ಉಲ್ಲೇಖಗಳಿವೆ.
ಇನ್ನು ಜನಪದ ಉಲ್ಲೇಖದ ಪ್ರಕಾರ ಸುಮಾರು 300 ವರ್ಷಗಳ ಹಿಂದೆ ಮಡಿಕೇರಿಯ ಸುತ್ತ ಮುತಲ್ಲೂ ಭಾರೀ ಸಾಂಕ್ರಮಿಕ ರೋಗ ತಲೆದೋರಿ ನೂರಾರು ಮಂದಿ ಸಾವನ್ಬಪ್ಪಿದ್ದರಂತೆ. ಆಗ ಊರಿನ ಜನರೆಲ್ಲಾ ಸೇರಿ ತಮ್ಮ ಊರಿನ ಶಕ್ತಿದೇವತೆಗಳ ಮೊರೆ ಹೋದಾಗಾ, ಅವರ ಮೊರೆಯನ್ನು ಆಲಿಸಿದ ಶಕ್ತಿದೇವತೆಗಳು ರೋಗವನ್ನು ದೂರ ಮಾಡಿದವು ಎಂಬ ಪ್ರತೀತಿ ಇರುವ ಕಾರಣ, ಅಂದಿನಿಂದ ಪ್ರತೀವರ್ಷವೂ ನವರಾತ್ರಿಯ ಒಂಭತ್ತು ದಿನಗಳ ಕಾಲ ಈ ಶಕ್ತಿದೇವತೆಗಳ ಕರಗವನ್ನು ಆಚರಿಸಿ, ಆ ಒಂಭತ್ತು ದಿನಗಳ ಕಾಲ ನಗರ ಪ್ರದಕ್ಷಿಣೆ ಮಾಡಿ ಭಕ್ತರಿಗೆ ಆಶೀರ್ವಾದ ನೀಡುತ್ತವೆ. ಪ್ರತಿವರ್ಷವೂ ವಿಜಯದಶಮಿಯ ಮುನ್ನಾ ದಿನ ಶಕ್ತಿದೇವತೆಗಳ ಆರಾಧನೆ ಮಾಡಲಾಗುತ್ತದೆ.
ಇನ್ನೂ ಒಂದು ಪೌರಾಣಿಕ ಹಿನ್ನಲೆಯ ಪ್ರಕಾರ ಹಿಂದೆ ಪಾರ್ವತೀ ದೇವಿ ದುಷ್ಟರನ್ನು ಹತ್ತಿಕ್ಕಲು ಹೊರಡುವ ಮುನ್ನಾ ಮಹಾವಿಷ್ಣುವಿನನ್ನು ಭೇಟಿ ಮಾಡಿದಳಂತೆ. ಆಗ ಮಹಾವಿಷ್ಣು ತನ್ನ ಆಯುಧಗಳಾದ ಶಂಖ ಚಕ್ರ ಗಧೆ ಮತ್ತು ಪದ್ಮಗಳನ್ನು ಪಾರ್ವತೀ ದೇವಿಗೆ ಕೊಟ್ಟು ಕಳುಹಿಸಿದನಂತೆ. ಆಗ ಪಾರ್ವತೀ ದೇವಿ ವಿವಿಧ ದೇವತೆಗಳ ರೂಪ ತಾಳಿ, ಅದೇ ಆಯುಧಗಳಿಂದ ಆ ರಾಕ್ಷಸರನ್ನು ಸಂಹರಿಸಿದಳಂತೆ. ಹಾಗಾಗಿ ಅಂದಿನಿಂದ ಪ್ರತೀವರ್ಷವೂ ಆ ಊರಿನ ನಾಲ್ಕು ಶಕ್ತಿ ದೇವತೆಗಳಾದ ಕಂಚಿ ಕಾಮಾಕ್ಷಿ, ಕುಂದುರುಮೊಟ್ಟೆ ಚೌಟಿಮಾರಿಯಮ್ಮ, ದಂಡಿನ ಮಾರಿಯಮ್ಮ, ಕೋಟೆ ಮಾರಿಯಮ್ಮನ ಕರಗದ ಉತ್ಸವಗಳನ್ನು ಅಚರಿಸುವ ಪದ್ದತಿ ಆರಂಭವಾಯಿತು ಎನ್ನುವುದು ಸ್ಥಳೀಯರ ನಂಬಿಕೆಯಾಗಿದೆ.
ಮಡಿಕೇರಿಯಲ್ಲಿ ದಸರಾ ಆಚರಣೆ ಬಹಳ ವಿಭಿನ್ನವಾಗಿರುತ್ತದೆ. ಈ ಆಚರಣೆಯ ತಯಾರಿ ಸುಮಾರು 3 ತಿಂಗಳ ಮೊದಲೇ ಆರಂಭವಾಗಿ ಸ್ಥಳಿಯರಿಂದ ಹಣ ಸಂಗ್ರಹ ಮಾಡಿ ದಸರಾ ಸಿದ್ಧತೆಗೆ ಕಾರ್ಯಾರಂಭ ಮಾಡಲಾಗುತ್ತದೆ. ಮಹಾಲಯ ಅಮವಾಸ್ಯೆಯ ಮಾರನೆಯ ದಿನದಂದು ಈ ನಾಲ್ಕು ದೇವಾಲಯಗಳ ಅರ್ಚಕರು ಕರಗ ಕಟ್ಟಲು ಬೇಕಾದ ಪರಿಕರಗಳನ್ನು ತಲೆಯ ಮೇಲೆ ಹೊತ್ತುಕೊಂಡು ಊರ ಹೊರಭಾಗದಲ್ಲಿರುವ ಪಂಪಿನ ಕೆರೆ ಎಂಬ ಸ್ಥಳಕ್ಕೆ ಭಾಜಾಭಜಂತ್ರಿ ತಂಡದಿಂದಿಗೆ ಹೋಗುತ್ತಾರೆ. ಕರಗವನ್ನು ಹೊರುವ ಪೂಜಾರಿಯು ತಲೆಯ ಕೂದಲನ್ನು ನುಣ್ಣಗೆ ತೆಗಿಸಿ, ಹಳದಿ ಬಣ್ಣದ ಕಚ್ಚೆಯನ್ನು ಧರಿಸಿ, ಒಂದು ಕೈಯಲ್ಲಿ ಸಣ್ಣದಾದ ಕತ್ತಿ ಮತ್ತು ಇನ್ನೊಂದು ಕೈಯಲ್ಲಿ ಮರದ ಬೆತ್ತವನ್ನು ಹಿಡಿದಿರುತ್ತಾರೆ. ದೇವಸ್ಥಾನದ ಅರ್ಚಕರು ಮಲ್ಲಿಗೆ, ಕನಕಾಂಬರ, ಸೇವಂತಿಗೆ ಮೊದಲಾದ ಹೂವುಗಳನ್ನು ಬಳಸಿ ಕರಗ ಕಟ್ಟಲು ಪ್ರಾರಂಭಿಸುತ್ತಾರೆ ಕರಗ ಕಟ್ಟಿದ ನಂತರ ಈ ನಾಲ್ಕು ಕರಗಗಳಿಗೆ ಪೂಜೆ ಇರುತ್ತದೆ. ಈ ಪೂಜೆಯ ನಂತರ ದೇವಾಲಯದ ಅರ್ಚಕರು ತಮ್ಮ ತಲೆಯ ಮೇಲೆ ಕರಗವನ್ನು ಹೊತ್ತುಕೊಂಡು ರಥಬೀದಿಲ್ಲಿರುವ ದೇವಸ್ಥಾನಗಳಿಗೆ ಹೋಗಿ ಪೂಜೆಯನ್ನು ಸಲ್ಲಿಸುತ್ತಾರೆ. ಕರಗದ ನೃತ್ಯ ನೋಡಲು ತುಂಬಾ ಆಕರ್ಷಕವಾಗಿರುತ್ತದೆ. ಈ ರೀತಿ ಕರಗದ ಮೂಲಕ ಮಡಿಕೇರಿ ದಸರಾಕ್ಕೆ ಚಾಲನೆಗೊಂಡು ಈ ಶಕ್ತಿ ದೇವತೆಗಳ ಕರಗ ಉತ್ಸವ ಮುಂದಿನ 9 ದಿನಗಳ ಕಾಲ ನಗರದ ಬೀದಿಗಳಲ್ಲಿ ನಡೆಯುತ್ತದೆ.
ಈ ಕರಗಗಳು ಮಡಿಕೇರಿ ನಗರ ಮತ್ತು ಸುತ್ತಮುತ್ತ 9 ದಿನಗಳುಗಳ ಕಾಲ ಸಂಚರಿಸುತ್ತವೆ. ಹಾಗೆ ಕರಗ ಬರುವ ಬೀದಿಯಲ್ಲಿ ಪ್ರತೀ ಮನೆಯವರೂ ಬಹಳ ಶ್ರದ್ಧಾ ಭಕ್ತಿಯಿಂದ ಸಾರಿಸಿ ಗುಡಿಸಿ ಬಣ್ಣ ಬಣ್ಣದ ರಂಗೋಲಿಯನ್ನು ಇಟ್ಟು ತಮ್ಮ ಮನೆಯ ಮುಂದೆ ಈ ಕರಗ ಬಂದಾಗ ಅದಕ್ಕೆ ಮಂಗಳಾರತಿ ಮಾಡಿ ನಮಿಸುವುದು ಇಲ್ಲಿ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಈ ನಾಲ್ಕು ಕರಗಗಳು ಮಡಿಕೇರಿಯ ಶಕ್ತಿ ದೇವತೆಗಳನ್ನು ಪ್ರತಿನಿಧಿಸುತ್ತಿದ್ದು ಈ 10 ದಿನಗಳಲ್ಲಿ . ಎಲ್ಲಾ ದೇವಸ್ಥಾನಗಳನನ್ನೂ ಬಗೆ ಬಗೆಯ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಿರುವ ಕಾರಣ, ಇಡೀ ಮಡಿಕೇರಿ ಝಗಮಗಿಸುತ್ತಾ ಅತ್ಯಂತ ಸುಂದರವಾಗಿ ಕಾಣುತ್ತದೆ.
ದಸರಾದ 10 ದಿನಗಳಲ್ಲೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿರುತ್ತದೆ. ಮೊದಲ 7 ದಿನಗಳು ಮಡಿಕೇರಿಯ ಟೌನ್ ಹಾಲ್ ಕಾವೇರಿ ಕಲಾಕ್ಷೇತ್ರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದರೆ, ಉಳಿದ ಮೂರು ದಿನಗಳ ಕಾರ್ಯಕ್ರಮಗಳನ್ನು ಗಾಂಧಿ ಮೈದಾನ ಎಂದು ಕರೆಯಲ್ಪಡುವ ರಾಜಸೀಟ್ ಬಳಿಯ ವೇದಿಕೆಯಲ್ಲಿ ನಡೆಸಲಾಗುತ್ತದೆ. ವಿಜಯದಶಮಿಯ ದಿನ ರಾತ್ರಿ 9 ರಿಂದ ವಾದ್ಯಗೋಷ್ಠಿ ಆರಂಭವಾದರೆ, ಬೆಳಿಗ್ಗೆ 6 ಗಂಟೆಯವರೆಗೆ ನಿರಂತರವಾಗಿ ನಡೆಯುತ್ತದೆ. ಹಾಗಾಗಿಯೇ ಮೈಸೂರಿನ ದಸರಾ ನೋಡಲು ಬಂದ ಅನೇಕರು ಅಲ್ಲಿನ ಬನ್ನಿ ಮಂಟಪದ ಪೂಜೆ ಮುಗಿದ ನಂತರ ನೇರವಾಗಿ ಮಡಿಕೇರಿಗೆ ಬಂದು ರಾತ್ರಿ ಇಡೀ ನಡೆಯುವ ವಿವಿಧ ಮೆರವಣಿಗೆಯಲ್ಲಿ ಭಾಗವಹಿಸಿ ಸಂಭ್ರಮಿಸುವ ರೂಢಿಯನ್ನು ಇಟ್ಟಿಕೊಂಡಿದ್ದಾರೆ.
ಮಡಿಕೇರಿ ಹತ್ತು ದೇವಸ್ಥಾನಗಳಿಂದ ಹೊರಡುವ ಮೆರವಣಿಗೆಯೇ ಇಲ್ಲಿಯ ದಸರಾದ ಪ್ರಮುಖ ಆಕರ್ಷಣೆಯೆಂದರೆ ಅತಿಶಯವೇನಲ್ಲ. ವಿಜಯದಶಮಿಯ ರಾತ್ರಿ ಸುಮಾರು 9 ಗಂಟೆಗೆ ಆರಂಭವಾಗಿ ಮಾರನೇಯ ದಿನ ಬೆಳಿಗ್ಗೆ ಕೊನೆಗೊಳ್ಳುತ್ತದೆ. ಪ್ರತಿಯೊಂದು ಉತ್ಸವವೂ ಸುಮಾರು 2೦ 25 ಅಡಿಗಳಷ್ಟು ಎತ್ತರವಿದ್ದು ತರ ತರಹದ ಬಣ್ಣ ಬಣ್ಣದ ವಿವಿಧ್ಯಮಯ ವಿದ್ಯುತ್ ದೀಪಗಳಿಂದ ಅಲಂಕೃತವಾಗಿರುವುದನ್ನು ವರ್ಣಿಸುವುದಕ್ಕಿಂತಲೂ ನೋಡಿದರೇ ಬಲು ಆನಂದ ಎನಿಸುತ್ತದೆ. ಈ ಉತ್ಸವಗಳ ಮುಂದೆ ಬಾಜಾ ಭಜಂತ್ರಿಗಳು ಮತ್ತು ಇತ್ತೀಚಿನ ಡಿಜೆಯ ಮುಖಾಂತರ ಎದೆ ಝಲ್ ಎನಿಸುವಂತಹ ಹಾಡುಗಳಿಗೆ ಮನಸೋ ಇಚ್ಚೆ ಕುಣಿಯಲೆಂದೇ ಸಾವಿರಾರು ಯುವಕರು ಬರುತ್ತಾರೆ.
ಮಡಿಕೇರಿಯ ದಸರಾ ಈ ಪರಿಯಾದ ಅದ್ದೂರಿಯಿಂದ ಆಚರಿಸುವಂತಾಗಲೂ ಕಾರಣೀಭೂತರಾದ ರಾಜಸ್ಥಾನದ ಭೀಮ್ ಸಿಂಗ್ ಅವರನ್ನು ಈ ಸಮಯದಲ್ಲಿ ನೆನಪಿಸಿಕೊಳ್ಳಲೇ ಬೇಕಿದೆ. ಭೀಮ್ ಸಿಂಗ್ ಅವರ ಪೂರ್ವಜರು ರಾಜಸ್ಥಾನದಿಂದ ಮೈಸೂರಿಗೆ ವಲಸೆ ಬಂದು ವ್ಯಾಪಾರ ವಹಿವಾಟುಗಳನ್ನು ನಡೆಸಿಕೊಂಡು ಹೋಗುತ್ತಿದ್ದರು. ಕಾಲ ಕ್ರಮೇಣ ಭೀಮ್ ಸಿಂಗ್ ಆವರ ತಂದೆ ಅರ್ಜುನ್ ಸಿಂಗ್ ಜೀವನೋಪಾಯಕ್ಕಾಗಿ ಮಡಿಕೇರಿಗೆ ಬಂದು ನೆಲೆಸಿದರು. ಅಪಾರ ದೈವ ಭಕ್ತರಾಗಿದ್ದ ಭೀಮ್ ಸಿಂಗ್ ಆರ ಕುಟುಂಬ ಈ ದಸರಾ ಹಬ್ಬದ ಮೆರಗನ್ನು ಹೆಚ್ಚಿಸಲು ಪ್ರಯತ್ನಿಸಿದ್ದಲ್ಲದೇ ಅನೇಕ ವರ್ಷಗಳ ಕಾಲ ಮದಿಕೇರಿ ದಸರಾ ಮಹೋತ್ಸವದ ಪ್ರಧಾನ ಸಂಚಾಲಕರಾಗಿದ್ದರು. ಈ ಹಿಂದೆ ಮೆರವಣಿಗೆಯನ್ನು ನಾಲ್ಕು ಜನರು ಪಲ್ಲಕ್ಕಿಯ ಮೇಲೆ ಹೊತ್ತೊಕೊಂಡೋ ಇಲ್ಲವೇ ಎತ್ತಿನ ಗಾಡಿಗಳ ಮೇಲೆ ಕೊಂಡುಯ್ಯುತ್ತಿದ್ದ ಜಾಗದಲ್ಲಿ ಭೀಮ್ ಸಿಂಗ್ ಮೂತ್ತ ಮೊದಲಬಾರಿಗೆ ಟ್ರಾಕ್ಟರ್ ಮೇಲೆ ಹಲಗೆಗಳನ್ನು ಜೋಡಿಸಿ ನಯನ ಮನೋಹರವಾದ ಸುಂದರವಾದ ಮಂಟಪಗಳನ್ನು ನಿರ್ಮಿಸಿ ದಸರಾ ಮಹೋತ್ಸವವನ್ನು ಮತ್ತಷ್ಟು ಆಕರ್ಷಣಿಯವಾಗಿಸಿದರು.
1958 ರಲ್ಲಿ ಭೀಮ್ ಸಿಂಗ್ ಅವರು ತಂದ ಬದಲಾವಣೆಯನ್ನು ಅವರ ಮುಂದಿನ ಪೀಳಿಗೆಯವರೂ ಆಧುನಿಕ ತಂತ್ರಜ್ಞಾನದ ಸಹಾಯದಿಂದ ಹಿಂದಿಗಿಂತಲೂ ಅದ್ದೂರಿಯಾಗಿ ಮೆರವಣಿಗೆಗಳನ್ನು ಆಚರಿಸಿಕೊಂಡು ಹೋಗುವ ಮುಖಾಂತರ ಮಡಿಕೇರಿ ದಸರಾ ಉತ್ಸವದ ವೈಭವಕ್ಕೆ ಮತ್ತಷ್ಟು ಮೆರಗನ್ನು ತಂದಿದ್ದಾರೆ.
ಮಡಿಕೇರಿ ದಸರಾದ ಬಗ್ಗೆ ಇಷ್ಟೆಲ್ಲಾ ವಿಷಯಗಳನ್ನು ತಿಳಿದ ನಂತರ, ಇನ್ನೇಕೆ ತಡಾ, ಈ ಬಾರಿ ಸಮಯ ಮಾಡಿಕೊಂಡು ಮೈಸೂರು ದಸರಾದ ಜೊತೆ ಮಡಿಕೇರಿ ದಸರಾವನ್ನೂ ಸಹಾ ನೋಡಿಕೊಂಡು ಅದರ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
ಮಡಿಕೇರಿಯ ದಸರಾದ ಬಗ್ಗೆ ಸುಂದರವಾಗಿ ವರ್ಷಿಣಿಸಿರುವ ಪ್ರಿಯ. ಶ್ರೀ . ಶ್ರೀಕಂಠ ಬಾಳಗಂಚಿ ನಿಮ್ಮ ಲೇಖನ ಅದ್ಭುತವಾಗಿ ಮೂಡಿಬಂದಿದೆ.
ನಾನು ಮಡಕೇರಿ ತಾಲೋಕು ಮಡಕೇರಿಯಿoಡ 26 ҡṃ ದೂರದ ಸಂಪಾಜೆ ಗ್ರಾಮದಲ್ಲಿ. 30 ವರ್ಷ ನೆಲಸಿದ್ದು ಪ್ರತಿ ವರ್ಷ ತಪ್ಪದೆ ಮಡಿಕೇರಿ ದಸರಾಕ್ಕೆ. ಹೋಗುತ್ತಿದ್ದು. ನಿಮ್ಮ ಒಂದೊಂದು ಪದಗಳು ಸತ್ಯ ವಾಗಿದ್ದು ಅದನ್ನು ಅನುಭವಿಸಿದ ನೆನಪನ್ನು. 20 ವರ್ಷಗಳ ನಂತರ ನಿಮ್ಮ ಲೇಖನವನ್ನು. ಬರೆದು ಓದಿ ಅನುಭವಿಸಲು ಅನುವು ಮಾಡಿಕೊಟ್ಟ. ಪ್ರಿಯ, ಶ್ರೀ. ಶ್ರೀಕಂಠ ಬಾಳಗಂಚಿ ರವರಿಗೆ
ಧನ್ಯವಾದಗಳು 🙏🙏🙏
LikeLike
ಧನ್ಯೋಸ್ಮಿ
LikeLike