ತಲಕಾವೇರಿ, ತೀರ್ಥೋಧ್ಭವ ಮತ್ತು ತುಲಾ ಸಂಕ್ರಮಣ

ನಾವು ಪ್ರತಿನಿತ್ಯವೂ ಸ್ನಾನ ಮಾಡುವಾಗ ಗಂಗೇಚ ಯಮುನೇ ಚೈವ ಗೋದಾವರಿ ಸರಸ್ವತೀ | ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ಎಂದು ಹೇಳಿಕೊಂಡೇ ಸ್ನಾನ ಮಾಡುತ್ತೇವೆ. ಅಂದರೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಏಳು ನದಿಗಳಾದ – ಗಂಗಾ, ಯಮುನಾ, ಗೋದಾವರಿ, ಸರಸ್ವತಿ, ನರ್ಮದಾ, ಸಿಂಧೂ, ಕಾವೇರಿ ನದಿಗಳು ಭಾರತೀಯರ ಪೂಜನೀಯ ಜಲಸಂಪತ್ತಾಗಿದೆ. ಅದರಲ್ಲೂ ದಕ್ಷಿಣ ಭಾರತ ಮತ್ತು ಕರ್ನಾಟಕಕ್ಕೆ ಈ ಕಾವೇರಿ ನದಿಯು ಜೀವ ನದಿಯಾಗಿರುವುದರಿಂದಲೇ ಅದನ್ನು ಕೇವಲ ನದಿ ಎಂದು ಭಾವಿಸದೇ, ಕಾವೇರಿ ತಾಯಿ ಎಂದೇ ಸಂಭೋದಿಸುತ್ತೇವೆ ಮತ್ತು ಪರ ಭಕ್ತಿಯಿಂದ ಕಾವೇರಿ ತಾಯಿಯನ್ನು ಆರಾಧಿಸುತ್ತೇವೆ.

tk1

ಸಾಧಾರಣವಾಗಿ ನದಿ ಮೂಲ ಋಷಿ ಮೂಲ, ಗಂಡಸರ ಸಂಬಳ ಹೆಂಗಸರ ವಯಸ್ಸು ಕೇಳಬಾರದು ಅಥವಾ ಹುಡುಕಬಾರದು ಎನ್ನುವ ಆಡು ಮಾತಿದೆ. ಆದರೆ, ಕರ್ನಾಟಕದ ಪರಮ ಪವಿತ್ರ ಕಾವೇರಿ ನದಿಯು ಕರ್ನಾಟಕದ ಕೊಡಗು ಜಿಲ್ಲೆಯ ಬ್ರಹ್ಮಗಿರಿಯ ತಪ್ಪಲಲ್ಲಿರುವ ತಲಕಾವೇರಿಯಲ್ಲಿ ಉಗಮವಾಗುತ್ತದೆ ಎಂಬುದು ಎಲ್ಲರಿಗೂ ಸ್ಪಷ್ಟವಾಗಿದೆ. ಇಂತಹ ಕಾವೇರಿ ನದಿ. ತುಲಾಸಂಕ್ರಮಣದ ಕನ್ಯಾ ಲಗ್ನದಲ್ಲಿ ತಲಕಾವೇರಿಯ ಪವಿತ್ರ ತೀರ್ಥಕುಂಡಿಕೆಯಲ್ಲಿ ತೀರ್ಥೋದ್ಭವವಾಗಿ ಅಲ್ಲಿಂದ ಮುಂದೆ ಹಾರಂಗಿ, ಹೇಮಾವತಿ, ಲಕ್ಷ್ಮಣ ತೀರ್ಥ, ಕಬಿನಿ, ಶಿಂಷಾ, ಅರ್ಕಾವತಿ, ಸುವರ್ಣಾವತಿ, ಲೋಕಪಾವನಿ, ಭವಾನಿ, ನೊಯಲ್ ನದಿಗಳು ಕಾವೇರಿಯೊಂದಿಗೆ ಸೇರಿಸಿಕೊಂಡು ಕರ್ನಾಟಕ, ತಮಿಳುನಾಡು ಮತ್ತು ಕೇರಳದ ಕೋಟ್ಯಾಂತರ ಜನರ ಬಾಯಾರಿಕೆಯನ್ನು ನಿವಾರಿಸುವುದಲ್ಲದೇ, ಲಕ್ಷಾಂತರ ಎಕರೆ ಕೃಷಿ ಭೂಮಿಗೆ ನೀರುಣಿಸುತ್ತಿದೆ. ಹಾಗಾಗಿಯೇ ಕಾವೇರಿಯ ಶೇಕಡಾ 95 ರಷ್ಟು ನೀರು ವ್ಯವಸಾಯಕ್ಕೆ ಬಳಕೆಯಾಗುವುದರಿಂದಲೇ, ಅದು ದಕ್ಷಿಣ ಭಾರತದ ಜೀವ ನದಿಯಾಗಿ ಕೋಟ್ಯಾಂತರ ಜನರ ಆರಾಧ್ಯ ದೈವವಾಗಿ ಪೂಜನೀಯಳಾಗಿದ್ದಾಳೆ.

ಸ್ಕಂದ ಪುರಾಣದಲ್ಲಿ ಉಲ್ಲೇಖದಂತೆ, ಬ್ರಹ್ಮಗಿರಿಯಲ್ಲಿ ಕವೇರ ಎಂಬ ಮುನಿಗೆ ಬಹಳ ಕಾಲ ಮಕ್ಕಳಾಗದೇ ಹೋದಾಗ ಆ ಮುನಿಯು ಸುಮಾರು ಸಾವಿರ ವರ್ಷಗಳವರೆಗೆ ಬ್ರಹ್ಮನನ್ನು ಕುರಿತು ತಪಸ್ಸು ಮಾಡುತ್ತಾನೆ. ದಿನದಿಂದ ದಿನಕ್ಕೆ ಆತನ ತಪ್ಪಸ್ಸಿನ ಘೋರತೆ ಹೆಚ್ಚಾದ ಫಲವಾಗಿ ಆತನ ದೇಹದಿಂದ ಹೊರಸೂಸಲ್ಪಡುವ ಶಾಖವೂ ಮೂರು ಲೋಕಕ್ಕೂ ಅವರಿಸಿದಾಗ, ಜನಸಾಮಾನ್ಯರು, ಋಷಿ ಮುನಿಗಳು ಮತ್ತು ದೇವಾನು ದೇವತೆಗಳು ಇದರಿಂದ ಪಾರುಗಾಣಿಸುವಂತೆ ಬ್ರಹ್ಮ ದೇವನನ್ನು ಕೇಳಿಕೊಳ್ಳುತ್ತಾರೆ. ಆಗ ಬ್ರಹ್ಮದೇವರು ಕವೇರ ರಾಜನ ತಪಸ್ಸಿಗೆ ಮೆಚ್ಚಿ ಅವನ ಮುಂದೆ ಪ್ರತ್ಯಕ್ಷನಾಗಿ ಆತನಿಗೆ ಸಂತಾನವನ್ನು ಕರುಣಿಸುತ್ತಾನೆ.

ಹಾಗೆ ಬ್ರಹ್ಮ ದೇವರಿಂದ ಆಶೀರ್ವಾದ ಫಲವಾಗಿ ಕವೇರ ಮುನಿ ದಂಪತಿಗಳಿಗೆ ಪುತ್ರಿಯ ಜನನವಾಗಿ ಆಕೆಗೆ ಲೋಪಮುದ್ರೆ ಎಂಬ ಹೆಸರು ಹೆಸರಿನಿಂದ ಮುದ್ದಾಗಿ ಬೆಳೆಯುತ್ತಿರುತ್ತಾಳೆ. ಅದೇ ರೀತಿ ಕವೇರ ಮುನಿಯ ಮಗಳಾಗಿದ್ದರಿಂದ ಕಾವೇರಿ ಎಂಬ ಅನ್ವರ್ಥನಾಮವೂ ಜೊತೆ ಜೊತೆಯಲ್ಲಿಯೇ ಹುಟ್ಟಿಕೊಳ್ಳುತ್ತದೆ. ಅದೊಮ್ಮೆ ಅಗಸ್ತ್ಯ ಮುನಿಯು ತನ್ನ ಶಿಷ್ಯರೊಂದಿಗೆ ಲೋಕಲ್ಯಾಣಕ್ಕಾಗಿ ಪರ್ಯಟನೆ ಮಾಡುತ್ತಿದ್ದಾಗ, ಬ್ರಹ್ಮಗಿರಿ ಪ್ರದೇಶಕ್ಕೆ ಬಂದಿದ್ದಾಗ ಅಲ್ಲಿ ಕಾವೇರಿಯನ್ನು ಕಂಡು ಆಕೆಯನ್ನು ವಿವಾಹ ಮಾಡಿಕೊಂಡು ತಮ್ಮ ಪರ್ಯಟನೆಯನ್ನು ಮುಂದುವರೆಸುತ್ತಿದ್ದಾಗ ತಮ್ಮ ಪತ್ನಿಯಾದ ಲೋಪಮುದ್ರೆಯನ್ನು ತಮ್ಮ ತಪಶ್ಯಕ್ತಿಯಿಂದ ನೀರಾಗಿ ಪರಿವರ್ತಿಸಿ ಆ ನೀರನ್ನು ತಮ್ಮ ಕಮಂಡಲದೊಳಗೆ ಬಂಧಿಸಿಟ್ಟು ಕೊಳ್ಳುತ್ತಾರೆ. ಅದೊಂದು ಸಂಜೆ ಪೂಜೆಗೆ ಕುಳಿತಿರುವಾಗ ಜೋರಾಗಿ ಬೀಸಿದ ಗಾಳಿಗೆ ಅವರ ಕಮಂಡಲ ಉರುಳಿ ಹೋಗಿ, ಲೋಕಕಲ್ಯಾಣಾರ್ಥವಾಗಿ ಕಾವೇರಿ ನದಿಯಾಗಿ ಗುಪ್ತಗಾಮಿನಿಯಾಗಿ ಹರಿಯುತ್ತಾ, ಭೃಂಗಡೇಶ್ವರದಲ್ಲಿ ತನ್ನೊಂದಿಗೆ ಸಣ್ಣ ಸಣ್ಣ ನದಿಗಳೊನ್ನು ತನ್ನೊಂದಿಗೆ ಸೇರಿಸಿಕೊಂಡು ಮುಂದೆ ಹರಿಯುತ್ತಾಳೆ ಎಂಬ ಉಲ್ಲೇಖವಿದೆ.

tk3

ಈ ರೀತಿಯಾಗಿ ಕರ್ನಾಟಕದ ಕಾಶ್ಮೀರ ಎಂದೇ ಪ್ರಸಿದ್ದಿಯಾಗಿರುವ ನಿತ್ಯಹರಿದ್ವರ್ಣ ಕಾಡುಗಳನ್ನೇ ಹಾಸಿ ಹೊದ್ದಿಕೊಂಡಿರುವ ಸುಂದರವಾದ ಪ್ರಕೃತಿಯ ಮಡಿಲಿನಲ್ಲಿರುವ ಕೊಡಗು ಜಿಲ್ಲೆಯ ಬ್ರಹ್ಮಗಿರಿ ಬೆಟ್ಟದ ಮೇಲಿದೆ. ಇದು ಸಮುದ್ರ ಮಟ್ಟದಿಂದ ಸುಮಾರು 5000 ಅಡಿ ಎತ್ತರವಿದ್ದು ಕೊಡಗಿನ ಮುಖ್ಯ ಪಟ್ಟಣವಾದ ಮಡಿಕೇರಿಯಿಂದ ಕೇವಲ 48 ಕಿ. ಮಿ. ದೂರದಲ್ಲಿದೆ.

ಮಡಿಕೇರಿಯಿಂದ ಭೃಗಂಡೇಶ್ವರದ ಮೂಲಕ ಎತ್ತರೆತ್ತರದ ಸಾಲು ಸಾಲು ಬೆಟ್ಟಗಳ ನಡುವೆ ಕಾಫೀ ಏಲಕ್ಕಿ ಮೆಣಸಿನ ತೋಟಗಳ ಮಧ್ಯೆ ಬ್ರಹ್ಮಗಿರಿ ಬೆಟ್ಟವನ್ನು ತಲುಪುತ್ತಿದ್ದಂತೆ ವಿಶಾಲವಾದ ತಲಕಾವೇರಿಯ ಮಹಾದ್ವಾರ ಕಣ್ಣಿಗೆ ಗೋಚರಿಸುತ್ತದೆ, ಅಲ್ಲಿ ಕಾಫೀ, ಟೀ, ತಂಪುಪಾನೀಯ, ಚುರುಮುರಿ, ಬಗೆ ಬಗೆಯ ಕತ್ತರಿಸಿದ ಹಣ್ಣುಗಳನ್ನು ಮಾರುವ ಸಣ್ಣ ಪುಟ್ಟ ಪೆಟ್ಟಿಗೆ ಅಂಗಡಿಗಳನ್ನು ದಾಟಿ ಮುಂದೆ ಸಾಗಿದಲ್ಲಿ, ದೂರದಲ್ಲಿ ತಲಕಾವೇರಿಯ ಮಹಾದ್ವಾರ ಗೋಚರಿಸುತ್ತದೆ. ವರ್ಷದ ಸುಮಾರು ತಿಂಗಳುಗಳ ಕಾಲ ಇಲ್ಲಿ ಮಂಜು ಮುಸುಕಿರುವುದನ್ನೇ ನೋಡಿಯೇ ಏನೋ? ರವಿ ಕಾಣದ್ದನ್ನು ಕವಿ ಕಂಡ ಎಂಬಂತೆ ಮಕ್ಕಳ ಕವಿ ಎಂದೇ ಪ್ರಖ್ಯಾತರಾಗಿದ್ದ ಶ್ರೀ ಜಿ. ಪಿ. ರಾಜರತ್ನಂ ಅವರು
ಬೂಮೀನ್ ತಬ್ಬಿದ್ ಮೋಡ್ ಇದ್ದಂಗೆ ಬೆಳ್ಳಿ ಬಳಿದಿದ್ ರೋಡ್ ಇದ್ದಂಗೆ
ಸಾಫಾಗ್ ಅಳ್ಳ ತಿಟ್ಟಿಲ್ದಂಗೆ ಮಡಿಕೇರಿ ಮೇಲ್ ಮಂಜು! ಎಂಬ ಪದ್ಯವನ್ನು ಬರೆದಿದ್ದರೇನೋ ಎನ್ನುವಮ್ತೆ ಕ್ಷಣ ಕ್ಷಣಕ್ಕೂ ಮಂಜು ಕಣ್ಣು ಮುಚ್ಚಾಲೆಯಾಟವಾಡುವುದು ನಿಜಕ್ಕೂ ನೋಟ ಆವಿಸ್ಮರಣೀಯ ಅನುಭವವಾಗಿರುತ್ತದೆ. ಕ್ಯಾಮೆರಾ ಫೋಕಸ್ ಮಾಡಿ ಕ್ಲಿಕ್ ಮಾಡುವಷ್ಟರಲ್ಲಿಯೇ ಕ್ಷಣ ಮಾತ್ರದಲ್ಲಿಯೇ ಮಂಜು ಆವರಿಸಿಕೊಳ್ಳುತ್ತದೆ.

tk4

ತಲಕಾವೇರಿಯ ಮಹಾದ್ವಾರವನ್ನು ಪ್ರವೇಶಿಸಿ ಮೆಟ್ಟಲುಗಳನ್ನು ಏರಿ ಮುಂದೆ ಹೋಗುತ್ತಿದ್ದಂತೆಯೇ ಬ್ರಹ್ಮಗಿರಿ ಬೆಟ್ಟದ ತಪ್ಪಲಲ್ಲಿ ಸದಾಕಾಲವೂ ಎದೆ ಮಟ್ಟದಷ್ಟು ನೀರು ತುಂಬಿರುವ ಪುಷ್ಕರಿಣಿ ಎದುರಾಗುತ್ತದೆ. ಈ ಪುಷ್ಕರಣಿಗೆ ಇಳಿದು ಅದರಲ್ಲಿ ಭಕ್ತಿಯಿಂದ ಮುಂದೆ ಸಾಗಿದಲ್ಲಿ ಸುಮಾರು 2/2 ಅಡಿ ಅಗಲದ ಕುಂಡಿಕೆ ಕಾಣಿಸುತ್ತದೆ. ಇದೇ ಸಣ್ಣ ಕುಂಡಿಕೆಯೇ ಪವಿತ್ರ ಕಾವೇರಿಯ ಉಗಮಸ್ಥಾನವಾಗಿದೆ. ಪುಷ್ಕರಣಿಯಲ್ಲಿ ಮೂರು ಮುಳುಗು ಹಾಕಿ ಕುಂಡಿಕೆ ಇರುವ ಸ್ಥಳಕ್ಕೆ ಬಂದಲ್ಲಿ, ಅಲ್ಲಿರುವ ಪುರೋಹಿತರು ತಮ್ಮ ತಂಬಿಗೆಯಿಂದ ಕುಂಡಿಕೆಯಲ್ಲಿರುವ ಪವಿತ್ರ ನೀರನ್ನು ಭಕ್ತಾದಿಗಳ ತಲೆಯ ಮೇಲೇ ಹಾಕುವಾಗ ಆಗುವ ರೋಮಾಂಚನವನ್ನು ವರ್ಣಿಸುವುದಕ್ಕಿಂತಲೂ ಅನುಭವಿಸಿದರೇ ಹೆಚ್ಚು ಆನಂದ ತರುತ್ತದೆ. ಆ ತಣ್ಣನೆಯ ಪರಿಶುದ್ಧ ಸ್ಪಟಿಕದಂತಹ ನೀರು ಮೈಮನಗಳನ್ನು ಪುಳಕಿತಗೊಂಡು ಕಾವೇರಿಯ ಬಗ್ಗೆ ಧನ್ಯತಾ ಭಾವನೆ ಮೂಡಿಬರುವುದಂತು ಸತ್ಯ. ಸ್ನಾನ ಮುಗಿಸಿ, ತೀರ್ಥ ಕುಂಡಿಕೆಯ ಪಕ್ಕದಲ್ಲಿಯೇ ಸದಾಕಾಲವು ನಿರಂತರವಾಗಿ ಉರಿಯವ ಜ್ಯೋತಿ ಮಂಟಪದಲ್ಲಿ ಜಲಕ್ಕೇ ಅಲ್ಲಿನ ಪುರೋಹಿತರು ಕುಂಕುಮಾರ್ಚನೆ, ಮಂಗಳಾರತಿ ಮಾಡಿ ಪೂಜೆ ಸಲ್ಲಿಸುವ ಮೂಲಕ ಕಾವೇರಿ ಮಾತೆಗೆ ಭಕ್ತಿಯಿಂದ ತಲೆ ಬಾಗುವುದು ನಿಜಕ್ಕೂ ಅನನ್ಯ.

ಪವಿತ್ರ ಕುಂಡಿಕೆಯ ಪಕ್ಕದಲ್ಲಿ ಸ್ವಲ್ಪ ಮೆಟ್ಟಲುಗಳನ್ನು ಹತ್ತಿ ಮೇಲಕ್ಕೆ ಹೋದಲ್ಲಿ ಗಣಪತಿ ಮತ್ತು ಅಗಸ್ತೇಶ್ವರ ದೇವಸ್ಥಾನವಿದ್ದು ಅಲ್ಲಿನ ದೇವರುಗಳ ದರ್ಶನ ಪಡೆದು ಅಲ್ಲಿರುವ ಛಾವಡಿಯಲ್ಲಿ ಸ್ವಲ್ಪ ಕಾಲ ಕುಳಿತುಕೊಂಡಲ್ಲಿ ಅಗುವ ಹಿತಾನುಭವ ನಿಜಕ್ಕೂ ಅನನ್ಯ. ದೇವಾಲಯದ ಪಕ್ಕದಲ್ಲೇ ಇರುವ ಸುಮಾರು 300-400 ಮೆಟ್ಟಿಲುಗಳ 300 ಅಡಿ ಎತ್ತರದ ಬ್ರಹ್ಮಗಿರಿ ಬೆಟ್ಟ ಏರಿ ತುದಿ ತಲುಪುತ್ತಾ ಅಲ್ಲಿನ ಸಾಲು ಸಾಲು ಬೆಟ್ಟಗಳ ಸಾಲು ಮನಮೋಹಕ ಕಾನನ, ಮುಖಕ್ಕೇ ಮುತ್ತಿಡುವ ಬೆಳ್ಳಿ ಮೋಡಗಳು ಮಟ್ಟಿಲು ಹತ್ತಿದ ಆಯಾಸವನ್ನು ಕೆಲವೇ ಕ್ಷಣಗಳಲ್ಲಿ ನಿವಾರಿಸಿಬಿಡುತ್ತದೆ.

tk2

ತಲಕಾವೇರಿಯ ಪ್ರಮುಖ ಆಕರ್ಷಣೆಯೆಂದರೆ ಪ್ರತೀ ವರ್ಷ ಅಕ್ಟೋಬರ್ 17 ನೇ ತಾರೀಕು ಅಥವಾ ಅಪರೂಪಕ್ಕೆ ಒಮ್ಮೊಮ್ಮೆ 18 ನೇ ತಾರೀಕಿನಂದು ತುಲಾ ಸಂಕ್ರಮಣದಂದು ಕೊಡವರ ಆರಾಧ್ಯ ದೈವ ಕಾವೇರಿ ತೀರ್ಥರೂಪವಾಗಿ ಮೂರು ಬಾರಿ ಉಕ್ಕಿ ಹರಿಯುವ ತೀರ್ಥೋಧ್ಭವವನ್ನು ಕಣ್ತುಂಬಿಸಿ ಕೊಳ್ಳುವುದಕ್ಕಾಗಿ ದೇಶ ವಿದೇಶಗಳಿಂದ ಲಕ್ಷಾಂತರ ಜನರು ತಲಕಾವೇರಿಗೆ ಬಂದು ಭಕ್ತಿಯಿಂದ ಮಿಂದು ಸಂಭ್ರಮಿಸುತ್ತಾರೆ. ಅರ್ಚಕರಿಂದ ವಿವಿಧ ಪೂಜೆಗಳು ನಡೆಯುತ್ತಿದ್ದರೆ, ಮತ್ತೊಂದೆಡೆ ಪುರೋಹಿತರ ವೇದಘೋಷಗಳ ನಡುವೆಯೇ ನಿಗಧಿತ ಸಮಯಕ್ಕೆ ಸರಿಯಾಗಿ ಪವಿತ್ರ ಕುಂಡದಲ್ಲಿ ಕೆಲಕ್ಷಣಗಳು ತೀರ್ಥ ಉಧ್ಭವಾಗುತ್ತಿದ್ದರೆ ಅದನ್ನು ಕಂಡು ಪುನೀತಾದ ಭಕ್ತರ ಹೃದಯಸ್ಪರ್ಶಿ ಹರ್ಷೋಧ್ಗಾರ ಮುಗಿಲು ಮುಟ್ಟಿರುತ್ತದೆ. ಪುರೋಹಿತರೂ ಸಹಾ ಅದೇ ರಸ ಕ್ಷಣದಲ್ಲಿ ಜಯ ಘೋಷದೊಂದಿಗೆ ತಂಬಿಗೆಯಿಂದ ಕುಂಡದಿಂದ ಉದ್ಭವವಾಗುವ ಪವಿತ್ರ ಕಾವೇರಿ ತೀರ್ಥವನ್ನು ಜನಸ್ಥೋಮದ ಮೇಲೆ ಪ್ರೋಕ್ಷಿಸುವುದು ನಿಜಕ್ಕೂ ಅಧ್ಭುತವೇ ಸರಿ.

ತೀರ್ಥೋಧ್ಭವಕ್ಕೆ ಆಗಮಿಸಿದವರೆಲ್ಲರು ಆ ಪುಣ್ಯ ತೀರ್ಥವನ್ನು ಸಂಗ್ರಹಿಸಿ ಕೊಂಡು ಅದನ್ನು ತಮ್ಮ ಬಂಧು ಮಿತ್ರರೊಂದಿಗೆ ಹಂಚಿಕೊಂಡರೆ ಪುಣ್ಯ ಲಭಿಸುತ್ತದೆ ಎನ್ನುವ ಎಂಬ ಪ್ರತೀತಿಯೂ ಇದೆ. ಅದೇ ರೀತಿ ಮರಣಶ್ಯಯೆಯಲ್ಲಿರುವವರಿಗೂ ಗಂಗ ಜಲ ಹಾಕುವ ರೀತಿಯಲ್ಲೇ ಈ ತೀರ್ಥವನ್ನು ಹಾಕುವುದರಿಂದ ಅವರಿಗೆ ಮುಕ್ತಿ ಲಭಿಸುತ್ತದೆ ಎಂಬ ನಂಬಿಕೆಯೂ ಇಲ್ಲಿನ ಭಕ್ತಾದಿಗಳಿಗಿದೆ.

ತಲಕಾವೇರಿಯಲ್ಲಿ ಈ ರೀತಿಯಾಗಿ ತೀರ್ಥೋಧ್ಭವ ನಡೆಯುವ ಸಮಯದಲ್ಲೇ ದೇಶ ವಿದೇಶದಲ್ಲಿ ಇರುವ ಕೊಡವರು ತಮ್ಮ ಕುಲದೇವತೆಯಾದ ಕಾವೇರಿ ಮಾತೆಯನ್ನು ಮತ್ತು ಕುಲ ದೈವವಾದ ಇಗ್ಗುತಪ್ಪ(ಸುಬ್ರಮಣ್ಯ ಸ್ವಾಮಿ) ನನ್ನು ಭಕ್ತಿಯಿಂದ ಆರಾಧಿಸುತ್ತಾರೆ. ಆ ದಿನದಂದು ಮನೆ ಮಂದಿಯೆಲ್ಲಾ ಒಟ್ಟು ಸೇರಿ ಹಿರಿಯ ಮುತ್ತೈದೆಯ ಮುಂದಾಳತ್ವದಲ್ಲಿ ಮನೆಯ ದೇವರ ಕೋಣೆಯಲ್ಲಿ ಸೌತೆಕಾಯಿ (ಬೆಳ್ಳೆರಿ ಕಾಯಿ) ಅಥವಾ ತೆಂಗಿನಕಾಯಿಗೆ ಕೆಂಪು ರೇಶ್ಮೆ ವಸ್ತ್ರ ಸುತ್ತಿ, ಹೂವು, ಅಭರಣ, ಪತ್ತಾಕ (ಕೊಡವರ ಮಾಂಗಲ್ಯ) ದಿಂದ ಅಲಂಕರಿಸಿ ಮೂರು ವಿಳ್ಯದೆಲೆ ಅಡಿಕೆ, ಹಣ್ಣು ಹಂಪಲು ಇಟ್ಟು, ಅಕ್ಕಿಯಿಂದ ಮಾಡಿದ ದೋಸೆ, ಕುಂಬಳಕಾಯಿಯಿಂದ ಮಾಡಿದ ಹುಳಿ/ಗೊಜ್ಜಿನ ಜೊತೆಗೆ ಪಾಯಸವನ್ನು ಸಹಾ ನೈವೇದ್ಯ ಮಾಡಿ ಹಬ್ಬವನ್ನು ಆಚರಿಸುವ ಮೂಲಕ ಕಾವೇರಿ ಮಾತೆಗೆ ತಮ್ಮ ಭಕ್ತಿಯನ್ನು ಸಮರ್ಪಿಸುತ್ತಾರೆ.

ಕೊಡಗಿನ ತಲಕಾವೇರಿಯಲ್ಲಿ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ನಡೆಯುವ ತೀರ್ಥೋದ್ಭವ ಯಶಸ್ವಿಯಾಗುವ ಮೂಲಕ, ಕಾವೇರಿ ನದಿಯಲ್ಲಿ ನಿರಂತರವಾಗಿ ವರ್ಷಪೂರ್ತಿಯೂ ಯಥೇಚ್ಚವಾದ ನೀರು ಹರಿದು ರಾಜ್ಯ ರಾಜ್ಯಗಳ ನಡುವೆ ಕಾವೇರಿ ನೀರಿನ ಕುರಿತಾದ ಸಮಸ್ಯೆಗಳು ಸುಲಭವಾಗಿ ಬಗೆ ಹರೆದು ಎಲ್ಲರ ಮನಸ್ಸಿನಲ್ಲೂ ನೆಮ್ಮದಿಯನ್ನು ತರುವಂತಾಗಲಿ.

ತೀರ್ಥೋದ್ಭವ ನಡೆದ ನಂತರವೂ ಸುಮಾರು ಒಂದು ತಿಂಗಳುಗಳ ಕಾಲ ಈ ಜಾತ್ರಾ ಮಹೋತ್ಸವ ನಡೆಯುವ ಕಾರಣ ಸಮಯ ಮಾಡಿಕೊಂಡು ತಲಕಾವೇರಿಗೆ ಭೇಟಿ ನೀಡಿ ತಾಯಿ ಕಾವೇರಿಯ ಕೃಪಾಶೀರ್ವಾದಕ್ಕೆ ಪಾತ್ರರಾಗೋಣ ಅಲ್ವೇ? ಹಾಂ!! ಮಧ್ಯಾಹ್ನದ ಸಮಯದಲ್ಲಿ ಭೇಟಿ ನೀಡಿದಾಗ, ಅಲ್ಲಿನ ಪ್ರಸಾದ ಅದರಲ್ಲೂ ವಿಶೇಷವಾದ ಪಾಯಸದ ರುಚಿಯನ್ನು ಸವಿದು ಅದರ ಅನುಭವವನ್ನು ನಮ್ಮೊಂದಿಗೆ ಹಂಚ್ಕೊಳ್ಳೋದು ಮಾತ್ರಾ ಮರೀಬೇಡಿ.

ಏನಂತೀರೀ?

ನಿಮ್ಮವನೇ ಉಮಾಸುತ

2 thoughts on “ತಲಕಾವೇರಿ, ತೀರ್ಥೋಧ್ಭವ ಮತ್ತು ತುಲಾ ಸಂಕ್ರಮಣ

    1. ಸಂಪೂರ್ಣವಾಗಿ ವಿಷಯವನ್ನು ತಿಳಿಸುವಾಗ ಕೆಲವೊಮ್ಮೆ ಲೇಖನ ದೊಡ್ದದಾಗಿ ಬಿಡುತ್ತದೆ.

      ಸಮಯ‌ ಮಾಡಿಕೊಂಡು ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು

      Like

Leave a comment