ಕಿತ್ತೂರು ರಾಣಿ ಚೆನ್ನಮ್ಮ ಎಂದಾಕ್ಷಣ ಥಟ್ ಅಂತಾ ನಮ್ಮೆಲ್ಲರ ಕಣ್ಮುಂದೆ ಬರುವುದೇ ಕಿತ್ತೂರು ರಾಣಿ ಚೆನ್ನಮ್ಮ ಕನ್ನಡ ಸಿನಿಮಾದಲ್ಲಿ ಹಿರಿಯ ನಟಿ ಬಿ ಸರೋಜಾ ದೇವಿ ಅವರು ಬ್ರಿಟೀಷರ ಅಧಿಕಾರಿ ಥ್ಯಾಕರೆ ಅವರು ಕಪ್ಪ ಕೇಳಲು ಬಂದಾಗ, ನೀವೇನು ಈ ನೆಲವನ್ನು ಉತ್ತಿರೇ? ಬಿತ್ತಿರೇ? ಬೆಳೆದರೇ? ನಿಮಗೇಕೆ ಕೊಡಬೇಕು ಕಪ್ಪಾ? ನಿಮಗೇಕೆ ಕೊಡಬೇಕು ಕಪ್ಪಾ? ಎಂದು ಅಬ್ಬಿರಿದು ಬಿಬ್ಬಿರಿದ ಸಂಭಾಷಣೆಯೇ ನಮ್ಮ ಕಿವಿಗೆ ಅಪ್ಪಳಿಸುವುದಲ್ಲದೇ, ಅಂತಿಮವಾಗಿ ಆ ಯುದ್ಧದಲ್ಲಿ ಬ್ರಿಟಿಷ್ ಅಧಿಕಾರಿ ಥ್ಯಾಕರೆವನ್ನು ಸೋಲಿಸಿದ್ದನ್ನು ನೋಡಿ ಹೆಮ್ಮೆ ಪಟ್ಟಿದ್ದೇವೆ. ಅಂತಹ ಸಾಹಸಿ ಮತ್ತು ಪ್ರಾತಃಸ್ಮರಣಿಯ ವೀರನಾರಿಯ ಜಯಂತಿಯಂದು ಆಕೆಯ ಯಶೋಗಾಥೆಯನ್ನು ಮೆಲುಕು ಹಾಕುವ ಮೂಲಕ ಆಕೆಗೆ ನಮನಗಳನ್ನು ಸಲ್ಲಿಸೋಣ.
ಬೆಳಗಾವಿಯಿಂದ ಉತ್ತರಕ್ಕೆ ಸುಮಾರು 6 ಕಿ.ಮಿ. ದೂರದಲ್ಲಿರುವ ಕಾಕತಿಯ ದೇಸಾಯಿ ಧೂಳಪ್ಪಗೌಡರರಿಗೆ 23 ಅಕ್ಟೋಬರ್ 1778ರಲ್ಲಿ ಚನ್ನಮ್ಮನವರು ಜನಿಸುತ್ತಾರೆ. ಹುಟ್ಟಿನಿಂದಲೇ ಬಹಳ ಮುದ್ದಾಗಿದ್ದರೂ ಅಷ್ಟೇ ಧೈರ್ಯಸ್ಥೆಯಾಗಿದ್ದ ಕಾರಣ ಆಕೆಗೆ ಎಳೆ ವಯಸ್ಸಿನಲ್ಲಿಯೇ ಕುದುರೆ ಸವಾರಿ, ಕತ್ತೀವರಸೆ, ಬಿಲ್ವಿದ್ಯೆಗಳನ್ನು ಆಕೆಗೆ ಕರಗತ ಮಾಡಿಸುವ ಮೂಲಕ ಆಕೆಯ ತಂದೆ ಆಕೆಯನ್ನು ಗಂಡು ಮಕ್ಕಳ ರೀತಿಯಲ್ಲಿ ಬೆಳೆಸಿ ಚಿಕ್ಕವಯಸ್ಸಿನಿಂದಲೇ ಆಕೆಗೆ ನಾಯಕಿಯನ್ನಾಗಿಸಿ ಮದುವೆಯ ವಯಸ್ಸಿಗೆ ಬಂದಾಗ ಅಕೆಯನ್ನು ಪಕ್ಕದ ಕಿತ್ತೂರಿನ ಪಾಳೆಯಗಾರನಾಗಿದ್ದ ಮಲ್ಲಸರ್ಜನೊಂದಿಗೆ ಮದುವೆಯನ್ನು ಮಾಡಿಕೊಡುವ ಮೂಲಕ ಸೊಸೆಯಾಗಿ, ರಾಜಮಾತೆಯಾಗಿ ಆಕೆ ಕಿತ್ತೂರಿಗೆ ಬರುತ್ತಾಳಲ್ಲದೇ ಅವರಿಬ್ಬರ ಸುಖಃ ದಾಂಪತ್ಯದ ಕುರುಹಾಗಿ ಅವರಿಬ್ಬರಿಗೆ ಶಿವಲಿಂಗನೆಂಬ ಪುತ್ರನ ಜನನವಾಗುತ್ತದೆ.
ಕಿತ್ತೂರಿನ ರಾಣಿ ಚೆನ್ನಮ್ಮನ ಸಾಧನೆಗಳ ಬಗ್ಗೆ ತಿಳಿದುಕೊಳ್ಳುವ ಮುನ್ನಾ ಕಿತ್ತೂರಿನ ಇತಿಹಾದ ಬಗ್ಗೆ ಸ್ವಲ್ಪ ತಿಳಿಸಿಕೊಳ್ಳುವುದು ಅವಶ್ಯಕವಾಗಿದೆ. ಮೂಲತಃ ಮಲೆನಾಡಿನ ಬೇಡ ಮನೆತನದಿಂದ ಬಂದ ಮಲ್ಲ ಹೆಸರಿನ ಸೋದರರಿಬ್ಬರು ಕಿತ್ತೂರಿನ ಕ್ರಿ.ಶ. 1586 ರಷ್ಟರಲ್ಲಿ ವಿಜಾಪುರದ ಆದಿಲಶಾಹಿ ಸೈನ್ಯಕ್ಕೆ ಸೇರಿಕೊಂಡು ಪರಾಕ್ರಮ ತೋರಿದ ಕಾರಣ ಆ ಸೋದರರಲ್ಲಿ ಹಿರಿಯನಿಗೆ ಶಂಷೇರ್ ಜಂಗ್ ಬಹಾದ್ದೂರ್ ಬಿರುದಿಗೆ ಪಾತ್ರನಾಗಿದ್ದಲ್ಲದೇ, ಹುಬ್ಬಳ್ಳಿ ವಿಭಾಗದ ಸರದೇಶಮುಖ್ ರನ್ನಾಗಿ ನೇಮಿಸಲಾಯಿತು.
ಮುಂದೇ ಆಲ್ಲಿನ ರಾಜಕೀಯ ಪರಿಸ್ಥಿತಿ ಬದಲಾಗುತ್ತಾ, ಹಿಂದೂಸ್ತಾನದಲ್ಲಿ ಮೊಘಲರ ಶಕ್ತಿ ದುರ್ಬಲವಾಗುತ್ತಿದ್ದರೆ, ಅತ್ತ ದಕ್ಷಿಣದಲ್ಲಿ ಸ್ವರಾಜ್ಯದ ವಿಸ್ತರಣೆಗಾಗಿ ಹೋರಾಡುತ್ತಿದ್ದ ಪೇಶ್ವೆಗಳು, ಆಕ್ರಮಣಕಾರಿ ಧೋರಣೆಯ ಹೈದರಾಬಾದಿನ ನಿಜಾಮನ ಜೊತೆ ಮೈಸೂರಿನ ಹೈದರ್ ಅಲಿ ತಮ್ಮ ಅಸ್ಮಿತೆ ಮತ್ತು ಅಸ್ಥಿತ್ವಕ್ಕಾಗಿ ಸಣ್ಣ ಪುಟ್ಟ ಪಾಳೆಯಗಾರರ ಮೇಲೆ ಧಾಳಿ ನಡೆಸುತ್ತಾ ವಿಸ್ತರಣಾ ಮನೋಭಾವನೆಯನ್ನು ಬೆಳಸಿಕೊಂಡಿದ್ದರು.
ಇಂತಹ ರಾಜಕೀಯ ಪರಿಸ್ಥಿತಿಯಲ್ಲಿಯೇ ಭಾರತಕ್ಕೆ ವ್ಯಾಪರಕ್ಕೆಂದು ಆಗಮಿಸಿ ನಮ್ಮಲ್ಲಿನ ಒಳಜಗಳನ್ನೇ ಬಂಡವಾಳ ಮಾಡಿಕೊಂಡು ಧೂರ್ತ, ಕ್ರೂರ ಧೋರಣೆಯ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ನಿಧಾನವಾಗಿ ಭಾರತದಲ್ಲಿ ಒಂದೊಂದೇ ಪ್ರದೇಶವನ್ನು ತನ್ನ ಕೈವಶ ಮಾಡಿಕೊಳ್ಳುತ್ತಿತ್ತು. ಅದೇ ಸಮಯದಲ್ಲಿ ಮೈಸೂರಿನ ಟಿಪ್ಪು ಸುಲ್ತಾನ್ ಮಲ್ಲಸರ್ಜನನ್ನು ಬಂಧಸಿ, ಕಪಾಲದುರ್ಗದಲ್ಲಿ ಸೆರೆಯಿಟ್ಟಿದ್ದನು. ಅದು ಹೇಗೋ ಉಪಾಯದಿಂದ ಆ ಸೆರೆಮನೆಯಿಂದ ತಪ್ಪಿಸಿಕೊಂಡ ಮಲ್ಲಸರ್ಜನನಿಗೆ ಇದೇ ಬ್ರಿಟೀಷ್ ಅಧಿಕಾರಿ ವೆಲ್ಲೆಸ್ಲಿ 1803ರಲ್ಲಿ ನೆರವು ನೀಡುವ ಮೂಲಕ ಮತ್ತೆ ಕಿತ್ತೂರನ್ನು ಭದ್ರ ಗೊಳಿಸಲು ಸಹಾಯ ಮಾಡಿದನು.
ಪೇಶ್ವೆಯವರಿಗೆ 1909ರಲ್ಲಿ 1,75,000 ರಷ್ಟು ಕಪ್ಪ ಕೊಟ್ಟಿದ್ದರೂ ವಿಶ್ವಾಸಘಾತ ಮಾಡಿ ಮಲ್ಲಸರ್ಜನನ್ನು ೩ ವರ್ಷ ಕಾಲ ಪುಣೆಯಲ್ಲಿ ಸೆರೆ ಇಟ್ಟು ನಂತರ 1918ರಲ್ಲಿ ಬಿಡುಗಡೆ ಮಾಡಿ ಆತ ಕಿತ್ತೂರಿಗ ಮರಳುವಾಗ ದಾರಿಯಲ್ಲೇ ಅಸುನೀಗಿದಾಗ ಮಲ್ಲಸರ್ಜನನ ಮಗ ಶಿವಲಿಂಗ ರುದ್ರಸರ್ಜನು ಮರಾಠರು ಮತ್ತು ಟಿಪ್ಪು ಸುಲ್ತಾನರಿಂದ ಪದೇ ಪದೇ ಧಾಳಿಯ ಕಿರಿಕಿರಿ ತಪ್ಪಿಸಿಕೊಳ್ಳುವ ಸಲುವಾಗಿ ಬ್ರಿಟಿಷರರೊಂದಿಗೆ ಪ್ರತಿ ವರ್ಷ ರೂ. 1,70,000 ಕಪ್ಪ ನೀಡುವ ಒಪ್ಪಂದ ಮಾಡಿಕೊಳ್ಳುತ್ತಾನೆ. ದುರಾದೃಷ್ಟವಷಾತ್ ಶಿವಲಿಂಗರುದ್ರ ಸರ್ಜನು 11 ಸೆಪ್ಟೆಂಬರ 1824 ರಂದು ವಾರಸುದಾರರಿಲ್ಲದೆ ತೀರಿಕೊಂಡಾಗ ಆತನ ಹೆಂಡತಿ ವೀರಮ್ಮನಿಗೆ ಕೇವಲ 11 ವರ್ಷ ವಯಸ್ಸಾಗಿರುತ್ತದೆ. ಹೀಗೆ ರಾಜನ ದಿಕ್ಕಿಲ್ಲದೇ ಅನಾಥವಾಗಿದ್ದ ಕಿತ್ತೂರಿನ ಸಂಸ್ಥಾನಕ್ಕೆ ನಿಷ್ಟರಾಗಿದ್ದ ಮಾಸ್ತಮರಡಿ ಗೌಡರ ಪುತ್ರ ಶಿವಲಿಂಗಪ್ಪನನ್ನು ದತ್ತಕ ತೆಗೆದುಕೊಂಡ ರಾಣಿ ಚೆನ್ನಮ್ಮ ತನ್ನ ಮೊಮ್ಮಗನ ಹೆಸರಿನಲ್ಲಿ ಸಂಸ್ಥಾನವನ್ನು ಆಳ್ವಿಕೆ ಮಾಡಲು ಅನುವಾಗುತ್ತಾಳೆ.
ಅದೇ ಸಮಯದಲ್ಲಿ ದತ್ತು ಪುತ್ರರು ರಾಜ್ಯವಾಳುವ ಹಾಗಿಲ್ಲ ಎಂಬ ಕಾನೂನನ್ನು ಜಾರಿಗೆ ತಂದು ಅನಾಥ ರಾಜ್ಯಗಳನ್ನು ತಮ್ಮ ಕೈ ವಶಮಾಡಿಕೊಳ್ಳುತ್ತಿದ್ದ ಬ್ರಿಟೀಷರ ಧಾರವಾಡದ ಕಲೆಕ್ಟರ್ ಥ್ಯಾಕರೆ ಚೆನ್ನಮ್ಮ ಈ ರೀತಿಯಾಗಿ ರಾಜ್ಯಾಡಳಿತ ಮಾಡಲು ಸಾಧ್ಯವಿಲ್ಲ ಎಂದು ತಿಳಿಸುವುದಲ್ಲದೇ, 13 ಸೆಪ್ಟೆಂಬರ 1824ರಂದು ಥ್ಯಾಕರೆ ಸ್ವತಃ ಕಿತ್ತೂರಿಗೆ ಬಂದು ಈಸ್ಟ್ ಇಂಡಿಯಾ ಕಂಪನಿಯ ಮುಂದಿನ ಆದೇಶ ಬರುವವರೆಗೂ ತಾತ್ಕಾಲಿಕವಾಗಿ ಮಲ್ಲಪ್ಪಶೆಟ್ಟಿ ಹಾಗು ಹಾವೇರಿಯ ವೆಂಕಟರಾವ್ ಅವರನ್ನು ಕಿತ್ತೂರಿನ ಸಂಸ್ಥಾನದ ವ್ಯವಹಾರವನ್ನು ನಿರ್ವಹಿಸಲು ನೇಮಕ ಮಾಡುವುದಲ್ಲದೇ, ಕಿತ್ತೂರಿನ ಭಂಡಾರಕ್ಕೆ ಬೀಗ ಮುದ್ರೆ ಹಾಕುತ್ತಾನೆ.
ಥ್ಯಾಕರೆಯ ಈ ರೀತಿಯ ಉದ್ಧಟನವೇ ಲೇಖನದ ಆರಂಭದಲ್ಲಿ ಹೇಳಲಾಗಿರುವ ಸಿನಿಮಾದಲ್ಲಿ ತೋರಿಸಿರುವ ಸನ್ನಿವೇಶ ಬರುವುದಲ್ಲದೇ, ಥ್ಯಾಕರೆಯ ಆದೇಶವನ್ನು ರಾಣಿ ಚೆನ್ನಮ್ಮಾ ಖಡಾಖಂಡಿತವಾಗಿ ತಿರಸ್ಕರಿಸುತ್ತಾಳಲ್ಲದೇ ಥ್ಯಾಕರೆಗೆ ಕಪ್ಪವನ್ನೂ ಕೊಡುವುದಿಲ್ಲ ಮತ್ತು ರಾಜ್ಯವನ್ನು ಕೊಡುವುದಿಲ್ಲ ಎಂದು ಹೇಳಿ ಕಳುಹಿಸುತ್ತಾಳೆ. ಇದರಿಂದ ಬ್ರಿಟೀಷರು ಕೋಪಗೊಂಡು ಕಿತ್ತೂರಿನ ಮೇಲೆ ಆಕ್ರಮಣವನ್ನು ಮಾಡಬಹುದು ಎಂದು ಅರಿತು ಅದನ್ನು ತಪ್ಪಿಸುವ ಸಲುವಾಗಿ ಚೆನ್ನಮ್ಮ ಬ್ರಿಟಿಷ್ ಅಧಿಕಾರಿ ಮನ್ರೋನಿಗೆ ಹಾಗು ಚಾಪ್ಲಿನ್ನನಿಗೂ ಸಂಧಾನಕ್ಕಾಗಿ ಪತ್ರ ಬರೆಯುತ್ತಾಳಲ್ಲದೇ, ಮುಂದಾಲೋಚನೆಯಿಂದ ಕೊಲ್ಲಾಪುರ ಮೊದಲಾದ ನೆರೆಯ ಸಂಸ್ಥಾನಗಳ ದೊರೆಗಳಿಗೆ ಕಿತ್ತೂರಿನ ಪರವಾಗಿ ಸಹಾಯ ಮಾಡಲು ಕೋರಿ ಪತ್ರ ವ್ಯವಹಾರವನ್ನೂ ಮಾಡುತ್ತಾಳೆ.
ರಾಣಿ ಚೆನ್ನಮ್ಮಳಿಂದ ಅವಮಾನಿತನಾಗಿದ್ದ ಬ್ರಿಟಿಷ್ ಅಥಿಕಾರಿ ಥ್ಯಾಕರೆ 21 ಅಕ್ಟೋಬರ್ 1824ರಂದು ತನ್ನ ಸೈನ್ಯದೊಂದಿಗೆ ಕಿತ್ತೂರಿಗೆ ಆಗಮಿಸಿ ಅಕ್ಟೋಬರ್ 23ರಂದು ಕೋಟೆಯ ಮೇಲೆ ತೋಪು ಹಾರಿಸಲು ಸಿದ್ಧನಾಗುತ್ತಿದ್ದಂತೆಯೇ, ಥಟ್ಟನೆ ಸರದಾರ ಗುರುಸಿದ್ದಪ್ಪನವರ ಮುಂದಾಳುತನದಲ್ಲಿ ಕೋಟೆಯ ಬಾಗಿಲಿನಿಂದ ಸಾವಿರಾರು ಜನ ಕಿತ್ತೂರು ವೀರ ಸೈನಿಕರು ಥ್ಯಾಕರೆಯ ಸೈನ್ಯದ ಮೆಲೆ ಮುಗಿ ಬೀಳುತ್ತಾರೆ. ರಾಣಿ ಚೆನ್ನಮ್ಮನ ಅಂಗರಕ್ಷಕ ಅಮಟೂರು ಬಾಳಪ್ಪನ ಗುಂಡಿಗೆ ಥ್ಯಾಕರೆ ಬಲಿಯಾದರೆ, ಬ್ರಿಟಿಷ್ ಅಧಿಕಾರಿ, ಸ್ಟೀವನ್ಸನ್ ಹಾಗು ಈಲಿಯಟ್ ಅವರನ್ನು ಸೆರೆಹಿಡಿಯುತ್ತಾರೆ.
ಈ ಸೋಲಿನಿಂದ ಬ್ರಿಟೀಷರು ಕೋಪಗೊಂಡರೂ ಸಮಸ್ಯೆಯನ್ನು ನಾಜೂಕಾಗಿ ಪರಿಹರಿಸುವ ನಿಟ್ಟಿನಿಂದ, ಚೆನ್ನಮ್ಮವೊಂದಿಗೆ ಪತ್ರ ಪತ್ರವ್ಯವಹಾರವನ್ನು ನಡೆಸುವ ಮೂಲಕ, 1824 ಡಿಸೆಂಬರ್ 2 ರಂದು ಸ್ಟೀವನ್ಸನ್ ಹಾಗು ಈಲಿಯಟ್ ಅವರನ್ನು ಬಿಡುಗಡೆ ಮಾಡಿಸಿಕೊಂಡು ಚನ್ನಮ್ಮನೊಂದಿಗೆ ಯಾವುದೇ ವೈಮನಸ್ಯ ಇಲ್ಲವೆಂದು ಮೇಲ್ನೋಟಕ್ಕೆ ತೋರ್ಪಡಿಸುತ್ತಾರಾದರೂ, ಡಿಸೆಂಬರ್ 3 ರಂದು ಇದ್ದಕ್ಕಿದ್ದಂತೆಯೇ ತಮ್ಮ ಅಪಾರ ಸೈನ್ಯದೊಂದಿಗೆ ಕಿತ್ತೂರನ್ನು ಮುತ್ತಿಗೆ ಹಾಕಿ ಕೋಟೆಯನ್ನು ಒಡೆಯಲು ಪ್ರಾರಂಭಿಸುತ್ತಾರೆ.
ಡಿಸೆಂಬರ್ 4 ರಂದು ಸರದಾರ ಗುರುಸಿದ್ದಪ್ಪ ಸೆರೆಯಾಳಾದರೆ, ಡಿಸೆಂಬರ್ 5 ರಂದು ರಾಣಿ ಚೆನ್ನಮ್ಮ ಮತ್ತು ಅಕೆಯ ಸೊಸೆಯಂದಿರಾದ ವೀರಮ್ಮ ಮತ್ತು ಜಾನಕಿಬಾಯಿಯವರನ್ನು ಬ್ರಿಟಿಷರು ಯುದ್ಧ ಕೈದಿಗಳನ್ನಾಗಿ ಮಾಡಿಕೊಂಡು ಡಿಸೆಂಬರ್ 12 ರಂದು ಚೆನ್ನಮ್ಮ ಹಾಗು ವೀರಮ್ಮರನ್ನು ಬೈಲಹೊಂಗಲದ ಸರೆಮನೆಯಲ್ಲಿ ಕೂಡಿಹಾಕಲಾಗುತ್ತದೆ. ಅಲ್ಲಿಯೇ 4 ವರ್ಷಗಳ ಕಾಲ ಸೆರೆಯಾಳಾಗಿಯೇ ಉಳಿದ ರಾಣಿ ಚೆನ್ನಮ್ಮ 1829 ಫೆಬ್ರುವರಿ 2 ರಂದು ನಿಧನವಾಗುತ್ತಾಳೆ.
ಹೀಗೆ ಅಪ್ಪಟ ದೇಶಪ್ರೇಮಿ ಚೆನ್ನಮ್ಮ ನಿಧನಳಾದರೂ ಬ್ರಿಟೀಷರ ವಿರುದ್ಧ ಕಿತ್ತೂರಿನ ಹೋರಾಟ ನಿಲ್ಲದೇ ರಾಣಿ ಚೆನ್ನಮ್ಮನ ಬಲಗೈ ಬಂಟ ಸಂಗೊಳ್ಳಿ ರಾಯಣ್ಣ ಸುತ್ತಮುತ್ತಲಿನ ಊರಿನ ವೀರರನ್ನು ಸಂಘಟನೆ ಮಾಡಿ ಶಕ್ತಿಯುತವಾದ ಸೈನವನ್ನು ಕಟ್ಟಿ ಗೆರಿಲ್ಲಾ ಮಾದರಿಯ ಹೋರಾಟವನ್ನು ಮಾಡುತ್ತಲೇ ಬ್ರಿಟೀಷರಿಗೆ ತಲೆ ನೋವಾಗಿರುತ್ತಾನೆ. ರಾಯಣ್ಣನ ಹೋರಾಟಕ್ಕೆ ನೆರವು ನೀಡುತ್ತಿರುವ ಸಂಶಯದ ಮೇಲೆ ವೀರಮ್ಮನನ್ನು ಬ್ರಿಟಿಷರು ಮೊದಲು ಕುಸುಗಲ್ಲಿಗೆ, ನಂತರ ಬಳಿಕ ಬೇರೊಂದು ಗುಪ್ತವಾದ ಸ್ಥಳಕ್ಕೆ ಕರೆದೊಯ್ಯುತ್ತಾರೆ.
ಇವೆಲ್ಲಾ ಬೆಳವಣಿಗೆಯ ನಡುವೆಯೂ ರಾಯಣ್ಣನ ಹೋರಾಟ ಮುಂದುವರೆದಿರುತ್ತದೆ. ದುರಾದೃಷ್ಟವಷಾತ್ ಆತನ ಸಂಗಡಿಗರಂತೆಯೇ ನಟಿಸುತ್ತಲೇ ಕೆಲವು ವಿಶ್ವಾಸದ್ರೋಹಿಗಳು 1830 ಫೆಬ್ರುವರಿಯಲ್ಲಿ ರಾಯಣ್ಣನನ್ನು ಬ್ರಿಟಿಷರಿಗೆ ಹಿಡಿದುಕೊಟ್ಟು ಬ್ರಿಟೀಷರಿಂದ ಬಾರೀ ಮೊತ್ತದ ಬಹುಮಾನವನ್ನು ನಿರೀಕ್ಷಿಸುತ್ತಿದ್ದರೆ, ಇಂತಹ ದೇಶದ್ರೋಹಿ ಕಾರ್ಯಕ್ಕಾಗಿ ಲಿಂಗನಗೌಡ ಮತ್ತು ವೆಂಕನಗೌಡರಿಗೆ ಬ್ತಿಟೀಶ್ ಸರ್ಕಾರ ಕೇವಲ 300/- ರೂಪಾಯಿ ಬಹುಮಾನ ಕೊಡುತ್ತದೆ. ಕೇವಲ 300/- ರೂಪಾಯಿ ಆಸೆಗಾಗಿ ಒಬ್ಬ ನಿಜವಾದ ದೇಶಪ್ರೇಮಿಯನ್ನು ಬಲಿ ತೆಗೆದುಕೊಂಡಿದ್ದು ಅಕ್ಷಮ್ಯ ಅಪರಾಧವೇ ಸರಿ.
ಮುಂದೆ ಮೇ 1830 ರಲ್ಲಿ ರಾಣಿ ಚೆನ್ನಮ್ಮನ ದತ್ತುಪುತ್ರ ಶಿವಲಿಂಗಪ್ಪ ಹಾಗು ಇತರೇ 400 ಜನರು ಬ್ರಿಟಿಷರಿಗೆ ಸ್ವಯಂ ಸೆರೆಯಾದರೆ, ಅದೇ ಜುಲೈ 1830 ರಂದು ವೀರಮ್ಮ ಸೆರೆಮನೆಯಲ್ಲಿ ಮರಣಹೊಂದುತ್ತಾಳೆ. ವಿಷ ತೆಗೆದುಕೊಂಡು ಮರಣ ಹೊಂದಿದಳೆಂದೂ ಹೇಳಲಾಗುತ್ತದೆಯಾದರೂ, ಬ್ರಿಟಿಷರೇ ವೀರಮ್ಮನಿಗೆ ವಿಷ ಹಾಕಿ ಕೊಂದರೆಂದೇ ಇಂದಿಗೂ ಅಲ್ಲಿನ ಜನರ ನಂಬಿಕೆಯಾಗಿದೆ. 1831 ಜನೆವರಿ 26 ರಂದು ಸಂಗೊಳ್ಳಿ ರಾಯಣ್ಣನನ್ನು ನಂದಗಡದಲ್ಲಿ ಗಲ್ಲಿಗೇರಿಸುವ ಮೂಲಕ ಕಿತ್ತೂರಿನ ಸಂಸ್ಥಾನ ಶಾಶ್ವತವಾಗಿ ಇತಿಹಾಸದ ತೆಕ್ಕೆಗ ಜಾರಿಹೋದದ್ದು ದುರಂತವೇ ಸರಿ.
ಒಬ್ಬ ಮಹಿಳೆಯಾಗಿ ದಿಟ್ಟತನದಿಂದ ಬ್ರಿಟೀಷರನ್ನು ಎದುರಿಸಿದ ವೀರ ಮಹಿಳೆ ರಾಣಿ ಚೆನ್ನಮ್ಮನವವರ 243ನೇ ಜನ್ಮದಿನೋತ್ಸವದಂದು ನಮ್ಮ ನಮಗನಗಳನ್ನು ಸಲ್ಲಿಸೋಣ ಅಲ್ಲವೇ?
ಏನಂತಿರೀ?
ನಿಮ್ಮವನೇ ಉಮಾಸುತ