ಊನಕೋಟಿ

unakoti

ನಮ್ಮ ಸನಾತನ ಧರ್ಮದಲ್ಲಿ ಅನೇಕ ಪುರಾಣ ಪುಣ್ಯಕಥೆಗಳಿದ್ದು ಅವೆಲ್ಲವೂ ಭಾರತದಲ್ಲಿ ಸಾವಿರಾರು ವರ್ಷಗಳ ಹಿಂದೆ ನಡೆದದ್ದು ಎಂದು ನಂಬಿದರೆ, ಇನ್ನೂ ಅನೇಕರು ಅದು ಕೇವಲ ಕಾಲ್ಪನಿಕ ಕಟ್ಟು ಕಥೆ ಎಂದು ವಾದ ಮಾಡುವವರೂ ಇದ್ದಾರೆ. ಹಾಗೆ ವಾದ ಮಾಡುವವರಿಗೆ ಉತ್ತರಿಸುವಂತೆ ಆ ಪುರಾಣ ಕಥೆಗಳಲ್ಲಿ ಉಲ್ಲೇಖವಿರುವ ಬಹುತೇಕ ನದಿಗಳು, ನಗರಗಳು ಭಾರತಾದ್ಯಂತ ಹರಡಿಕೊಂಡಿದ್ದು ಈ ಪುರಾಣ ಕಥೆಗಳಿಗೆ ಪೂರಕವಾಗಿದೆ. ಪುರಾಣ ಕಥೆಯಲ್ಲಿ ಬರುವ ಇಂತಹದ್ದೇ ಒಂದು ದಂತಕತೆಗೆ ಜ್ವಲಂತ ಉದಾಹರಣೆಯಾಗಿ ತ್ರಿಪುರದ ಕಾಡುಗಳಲ್ಲಿ ಗೋಚರವಾಗಿರುವ, ಕಾಲ ಭೈರವನ ಪವಿತ್ರ ಯಾತ್ರಾ ಸ್ಥಳವಾದ ಊನಕೋಟಿಯ ಬಗ್ಗೆ ತಿಳಿದುಕೊಳ್ಳೋಣ.

un4

ಉತ್ತರ ತ್ರಿಪುರಾದ ಜಂಪುಯಿ ಬೆಟ್ಟಗಳ ಮೇಲೆ ಸ್ವರ್ಗವೇ ಭೂ ಲೋಕಕ್ಕೆ ಇಳಿದಿರುವಂತಹ ಕಾನನ್ದದಲ್ಲಿ ಸುಂದರವಾದ ಊನಕೋಟಿಯ ಪಾರಂಪರಿಕ ತಾಣವಿದೆ. ಇಲ್ಲಿನ ಬೃಹತ್ತಾದ ಬೆಟ್ಟದಲ್ಲಿ ಕೆತ್ತಲಾದ ದೈತ್ಯವಾದ ಬುಡಕಟ್ಟು ಮನುಷ್ಯರ ಮತ್ತು ವಿವಿಧ ಹಿಂದೂ ದೇವರುಗಳ ಕೆತ್ತನೆ ಇರುವ ಶಿಲ್ಪಗಳ ನೆಲೆಯಾಗಿದೆ. ಈ ಪ್ರದೇಶದಲ್ಲಿ ನೂರಾರು ಹಿಂದೂ ದೇವರುಗಳು ಮತ್ತು ದೇವತೆಗಳ ಮೂರ್ತಿಗಳು ಇದ್ದರೆ, ಇನ್ನೂ ಹಲವಾರು ಇನ್ನೂ ಪತ್ತೆಯಾಗದ ಶಿಲ್ಪಗಳು ಇಲ್ಲಿವೆ. ಎಲ್ಲಕ್ಕಿಂತಲೂ ಹೆಚ್ಚಾಗಿ, ಉನಕೋಟೀಶ್ವರ ಕಾಲ ಭೈರವನೆಂಬ 30 ಅಡಿ ಎತ್ತರದ ಶಿವನ ತಲೆಯ ಕೆತ್ತನೆಯು ಅತ್ಯಂತ ಆಕರ್ಷಣೀಯವಾಗಿರುವುದಲ್ಲದೇ, ಅತ್ಯಂತ ಪೂಜನೀಯವೂ ಆಗಿದೆ. ಈ ಕೆತ್ತನೆಗಳನ್ನು ಅತ್ಯಂತ ನುರಿತ ಕುಶಲಕರ್ಮಿಗಳು ಮಾಡಿರುವುದು ಸ್ಪಷ್ಟವಾಗಿರುವುದಲ್ಲದೇ, ಹಚ್ಚ ಹಸಿರಿನಿಂದ ಸುತ್ತುವರೆದಿರುವ ಈ ಸ್ಥಳವು ಶೈವ ತೀರ್ಥಯಾತ್ರೆಯ ಸ್ಥಳವಾಗಿದ್ದು 8 ನೇ ಅಥವಾ 9 ನೇ ಶತಮಾನ ಅಥವಾ ಬಹುಶಃ ಅದಕ್ಕಿಂತ ಮುಂಚಿನ ಪ್ರಾಚೀನ ದೇವಾಲಯಗಳ ಅವಶೇಷಗಳಿಂದ ಕೂಡಿದೆ. ಈ ಶಿಲ್ಪಕಲಾಕೃತಿಗಳು ಕಾಂಬೋಡಿಯಾದ ಅಂಕೋರ್ ವಾಟ್ ದೇವಸ್ಥಾನದಲ್ಲಿ ಇರುವಂತೆಯೇ ಇರುವುದು ಬಹಳ ವಿಶೇಷವಾಗಿದೆ.

ಈ ಪ್ರದೇಶದ ಹೆಸರಾದ ಊನಕೋಟಿ ಎಂದರೆ, ಒಂದು ಕೋಟಿಗಿಂತಲೂ ಒಂದು ಕಡಿಮೆ ಅಂದರೆ 99,99,999 ಎಂಬ ಸಂಖ್ಯೆಯಾಗುತ್ತದೆ. ಈ ಹೆಸರಿನ ಹಿಂದೆಯೂ ಕುತೂಹಲಕರವಾದ ಪೌರಾಣಿಕ ಕಥೆಗಳಿವೆ.

un1

ಹಿಂದೂ ಪುರಾಣಗಳ ಪ್ರಕಾರ, ಶಿವನು ಒಮ್ಮೆ ಕೈಲಾಸದಿಂದ ಕಾಶಿಗೆ ಹೋಗುವ ಮಾರ್ಗದಲ್ಲಿ ಈ ಪ್ರದೇಶದಲ್ಲಿ 99,99,999 ದೇವತೆಗಳು ಮತ್ತು ತನ್ನ ಗಣಗಳ ಜೊತೆಯಲ್ಲಿ ಒಂದು ರಾತ್ರಿ ಕಳೆದಿದ್ದಲ್ಲದೇ, ಮಾರನೆಯ ದಿನ ಸೂರ್ಯೋದಯಕ್ಕೆ ಮುಂಚೆಯೇ ಎಲ್ಲರೂ ಎದ್ದು ಕಾಶಿಯ ಕಡೆಗೆ ಹೋರಡುವಂತೆ ಸೂಚಿಸಿದ್ದನಂತೆ. ದುರದೃಷ್ಟವಶಾತ್, ಮಾರನೆಯ ದಿನ ಸೂರ್ಯೋದಯಕ್ಕಿಂತಲೂ ಮುಂಚೆ, ಮಹಾಶಿವನನ್ನು ಹೊರತುಪಡಿಸಿ ಉಳಿದವರಾರೂ ಎಚ್ಚರಗೊಳ್ಳದ ಕಾರಣ, ಪರಶಿವನೊಬ್ಬನೇ, ಕಾಶಿಗೆ ಹೊರಡುವ ಮುನ್ನ ಉಳಿದ ಎಲ್ಲರನ್ನೂ ಕಲ್ಲಾಗುವಂತೆ ಶಾಪ ಕೊಟ್ಟ ಕಾರಣ, ಕೋಟಿಗೆ ಒಂದು ಕಡಿಮೆ ಇದ್ದಷ್ಟು ಜನರೆಲ್ಲರೂ, ಈ ರೀತಿಯಾಗಿ ಕಲ್ಲಾಗಿ ಮಾರ್ಪಟ್ಟ ಕಾರಣ, ಈ ಪ್ರದೇಶಕ್ಕೆ ಊನಕೋಟಿ ಎಂಬ ಹೆಸರು ಬಂದಿತೆಂದು ನಂಬಲಾಗಿದೆ.

ಮತ್ತೊಂದು ಆವೃತ್ತಿಯ ಪ್ರಕಾರ, ಈ ಪ್ರದೇಶದಲ್ಲಿ ಕಾಲು ಕುಮಾರ್ ಎಂಬ ಪ್ರತಿಭಾವಂತ ಮತ್ತು ಶಿವಪಾರ್ವತಿಯ ಪರಮ ಭಕ್ತರಾಗಿದ್ದ ಶಿಲ್ಪಿ ಒಬ್ಬರಿದ್ದರಂತೆ. ಅದೊಮ್ಮೆ ಶಿವಪಾರ್ವತಿಯರು ಈ ಪ್ರದೇಶದ ಮೂಲಕ ಹಾದು ಹೋಗುವುದನ್ನು ಗಮನಿಸಿ ತನ್ನನ್ನೂ ಅವರೊಂದಿಗೆ ಕರೆದುಕೊಂಡು ಹೋಗಲು ಕೇಳಿದರಂತೆ.

un3

ಭಕ್ತನ ಈ ನಿವೇದನೆಯನ್ನು ಶಿವನು ಒಪ್ಪಿಕೊಳ್ಳಲು ನಿರಾಕರಿಸಿದಾಗ ಬೇಸರಗೊಂಡ ಭಕ್ತನ ಅಸೆಯನ್ನು ತಣಿಸುವ ಸಲುವಾಗಿ ಪಾರ್ವತಿಯು ಒಂದು ಪರಿಹಾರರ್ಥವಾಗಿ ಒಂದು ರಾತ್ರಿಯ ಒಳಗೆ, ಶಿವ ಮತ್ತು ಅವನ ಪರಿವಾರದ 1,00,00,000 ಪ್ರತಿಮೆಗಳನ್ನು ಕೆತ್ತಿದಲ್ಲಿ ಕಾಲು ಕುಮಾರ್ ಅವರನ್ನು ಕರೆದುಕೊಂಡು ಹೋಗುವುದಾಗಿ ಸೂಚಿಸುತ್ತಾಳೆ. ಇದಕ್ಕೆ ಒಪ್ಪಿದ ಕಾಲು ಕುಮಾರ್ ಲಗು ಬಗೆನೆ ಕಾರ್ಯವನ್ನು ಆರಂಭಿಸಿ ಬೆಳಗಾಗುವುದರೊಳಗೆ ಕೆತ್ತನೆಯನ್ನು ಮುಗಿಸಲು ಆರಂಭಿಸುತ್ತಾನ್ರೆ. ಆದರೆ ದುರದೃಷ್ಟವಶಾತ್, ಮರುದಿನ ಸೂರ್ಯೋದಯವಾಗುವ ಸಮಯಕ್ಕೆ ಕಾಲು ಕುಮಾರ್ ಒಂದು ಕೋಟಿಗೆ ಒಂದು ಕಡಿಮೆ ಪ್ರತಿಮೆಯನ್ನು ಕೆತ್ತಿದ್ದ ಕಾರಣ, ಶಿವಪಾರ್ವತಿಯರು ಅವನನ್ನು ಅಲ್ಲಿಯೇ ಬಿಟ್ಟು ತಮ್ಮ ಪ್ರಯಾಣವನ್ನು ಮುಂದುವರೆಸಿದರಂತೆ.

ಇದೇ ಕಥೆಯ ಮತ್ತೊಂದು ಆವೃತ್ತಿಯು ಇದ್ದು ಅದು ಇನ್ನೂ ಅರ್ಥಪೂರ್ಣವಾಗಿದೆ. ಶಿಲ್ಪಿ ಕಾಲು ಕುಮಾರ್ ಅವರಿಗೆ ಕನಸಿನಲ್ಲಿ ಶಿವನು ಪ್ರತ್ಯಕ್ಷವಾಗಿ ತನ್ನ ಮತ್ತು ತನ್ನ ಶಿಷ್ಯಗಣದ ಕೆತ್ತನೆಗಳನ್ನು ಕೆತ್ತುವಂತೆ ಸೂಚಿಸುತ್ತಾನೆ ಅದರಂತೆ ಕಾಲು ಕುಮಾರ್ ಕೆಲಸವನ್ನು ಆರಂಭಿಸಿ, 99,99,999 ಶಿವ ಮತ್ತು ಶಿವ ಗಣದ ಕೆತ್ತನೆಯನ್ನು ಕೆತ್ತಿ ಇದರ ಜೊತೆ ತನ್ನ ಖ್ಯಾತಿಯೂ ಶಾಶ್ವತವಾಗಿ ಇರಲೆಂಬ ಬಯಕೆಯಿಂದಾಗಿ ಕಡೆಯದಾಗಿ ತನ್ನದೇ ಆದ ಪ್ರತಿಕೃತಿಯನ್ನು ಕೆತ್ತಿ ತನ್ನ ಸ್ವಪ್ರತಿಷ್ಠೆಯಿಂದಾಗಿ ಕೋಟಿಗೆ ಒಂದು ಕಡಿಮೆ ದೇವಾನು ದೇವತೆಗಳ ಕೆತ್ತನೆ ಮಾಡಿದ ಕಾರಣ ಈ ಪ್ರದೇಶಕ್ಕೆ ಊನಕೋಟಿ ಎಂಬ ಹೆಸರು ಬಂದಿದೆ ಎಂಬ ಕಥೆಯೂ ಇದೆ.

ಈ ಕೆತ್ತನೆಗಳ ಹಿಂದಿನ ದಂತಕಥೆಗಳು ಏನೇ ಇರಲಿ, ಇಂದಿನ ಆಧುನಿಕ ಕಾಲದಲ್ಲಿಯೇ ಈ ಪ್ರದೇಶಕ್ಕೆ ಬರಲು ಕಷ್ಟವಾಗಿರುವ ಕಾಲದಲ್ಲಿ ಅದೆಷ್ಟೋ ಕಾಲದಲ್ಲಿ ಈ ಪ್ರಮಾಣದಲ್ಲಿ ಈ ಪ್ರದೇಶದಲ್ಲಿ ಅದೂ ಇಷ್ಟು ಸುಂದರವಾಗಿ ಸಾವಿರಾರು ಕೆತ್ತನೆಗಳನ್ನು ಕೆತ್ತಿರುವುದಕ್ಕೆ ಅಭಿನಂದನೆಗಳನ್ನು ಸಲ್ಲಿಸಲೇ ಬೇಕು. ಈ ವಿಸ್ಮಯಕಾರಿ ಕೆತ್ತನೆಗಳಲ್ಲಿ ಅತ್ಯಂತ ಪ್ರಸಿದ್ಧವಾದದ್ದು

unganesha

ಮತ್ತು ಈ ಪ್ರದೇಶದ ಕೇಂದ್ರ ಬಿಂದುವಾದ 30 ಅಡಿ ಎತ್ತರದ ಊನಕೋಟೀಶ್ವರ ಕಾಲ ಭೈರವನ ತಲೆ ಮತ್ತು ದೈತ್ಯಾಕಾರದ ಗಣೇಶನ ಆಕೃತಿಗಳು ನೋಡಲು ನಯನ ಮನೋಹರವಾಗಿದೆ. ಸುಮಾರು 10 ಅಡಿ ಎತ್ತರದ ಶಿವನ ಶಿರಸ್ತ್ರಾಣದ ಒಂದು ಬದಿಯಲ್ಲಿ ದುರ್ಗಾ ದೇವಿ ಸಿಂಹದ ಮೇಲೆ ನಿಂತಿದ್ದರೆ, ಮತ್ತೊಂದೆಡೆ ಗಂಗಾ ದೇವಿಯು ಮಕರ ರಾಶಿಯ ಮೇಲೆ ಕುಳಿತಿರುವಂತೆ ಕೆತ್ತಲಾಗಿದ್ದು, ಇವೆರಡರ ಜೊತೆ ನಂದಿ ಹನುಮಾನ್ ಮತ್ತು ರಾವಣ ಸೇರಿದಂತೆ ಹಲವಾರು ಮೂರ್ತಿಗಳನ್ನು ಕೆತ್ತಲಾಗಿರುವುದನ್ನು ನೋಡುವುದಕ್ಕೆ ಎರಡು ಕಣ್ಣುಗಳು ಸಾಲಾದಾಗಿದೆ.

un2

ಇಲ್ಲಿನ ಸ್ಥಳಿಯರ ಪ್ರಕಾರ 60ರ ದಶಕದಲ್ಲಿ ಈ ಪ್ರದೇಶದಲ್ಲಿ ಆದ ಭೂಕಂಪದಿಂದಾಗಿ ಆದ ಭೂಕುಸಿತದಿಂದಾಗಿ ಇನ್ನೂ ಸಾವಿರಾರು ಕೆತ್ತನೆಗಳು ಭೂಮಿಯೊಳಗೆ ಹುದುಗಿಹೋಗಿವೆ ಎಂದು ನಂಬಲಾಗಿದೆ. ಅದೇ ರೀತಿ ವರ್ಷದ 365 ದಿನಗಳೂ ಹರಿಯುವ ಜಲಪಾತವೂ ಸಹಾ ಇದೇ ಭೂಕಂಪದ ಸಮಯದಲ್ಲಿ ತನ್ನ ಪಾತ್ರವನ್ನು ಬದಲಿಸಿದೆ ಎಂದು ಹೇಳಲಾಗುತ್ತದೆ.

ಜಂಪುಯಿ ಬೆಟ್ಟಗಳು ತ್ರಿಪುರಾದ ಅತ್ಯುನ್ನತ ಗಿರಿಧಾಮವಾಗಿದ್ದು ಈ ಮೊದಲೇ ತಿಳಿಸಿದಂತೆ ಇಲ್ಲಿನ ವಾತಾವರಣವು ಸ್ವರ್ಗದಲ್ಲಿರುವಂತೆ ಭಾಸವಾಗುತ್ತದೆ ದಟ್ಟವಾದ ಕಾಡುಗಳ ಮಧ್ಯದಲ್ಲಿ ಸುಂದರ ವಾದ ಆರ್ಕಿಡ್‌ಗಳು, ಹಚ್ಚ ಹಸಿರಿನ ಭೂದೃಶ್ಯಗಳು ಮತ್ತು ಸುಂದರವಾದ ಕಿತ್ತಳೆ ತೋಟಗಳು. ಅದರ ಮಂಜಿನ ಕಣಿವೆಗಳ ವಿಹಂಗಮ ನೋಟಗಳು, ಕಿತ್ತಳೆ ಬಣ್ಣದ ಪರಿಮಳಯುಕ್ತ ಬೆಟ್ಟಗಳು ಮತ್ತು ವಿಶಿಷ್ಟವಾದ ವಾತಾವರಣವು ಇದನ್ನು ವಸಂತಕಾಲದ ಶಾಶ್ವತ ಆಸನ ಎಂದೇ ಹೆಚ್ಚು ಜನಪ್ರಿಯವಾಗಿದೆ ಈ ಬೆಟ್ಟ ಶ್ರೇಣಿಯ ಪೂರ್ವದಲ್ಲಿ ಮಿಜೋರಾಂ ಇದ್ದರೆ ದಕ್ಷಿಣದಲ್ಲಿ ಬಾಂಗ್ಲಾದೇಶದ ಚಿತ್ತಗಾಂಗ್ ಬೆಟ್ಟ ಪ್ರದೇಶವಿದೆ.

un1

ಪ್ರತಿ ವರ್ಷ ಜನವರಿ ತಿಂಗಳಿನಲ್ಲಿ ಸಣ್ಣದಾದ ಜಾತ್ರೆ ನಡೆದರೆ, ಏಪ್ರಿಲ್ ತಿಂಗಳಲ್ಲಿ ಅಶೋಕಸ್ತಮಿ ಮೇಳ ಎಂದು ಕರೆಯಲ್ಪಡುವ ದೊಡ್ಡ ಜಾತ್ರೆ ನಡೆಯುತ್ತದೆ. ಈ ಜಾತ್ರೆಗೆ ದೇಶ ವಿದೇಶಗಳಿಂದ ಸಾವಿರಾರು ಯಾತ್ರಿಕರು ಇಲ್ಲಿಗೆ ಭೇಟಿ ನೀಡಿ ಕಾಲ ಭೈರವೇಶ್ವರನ ಕೃಪಾಶೀರ್ವಾದಕ್ಕೆ ಪಾತ್ರರಾಗುವುದಲ್ಲದೇ, ಇಲ್ಲಿನ ಬೆಟ್ಟಗಳಲ್ಲಿ ಸಾಹಸಮಯ ಮತ್ತು ವಿಸ್ಮಯಕಾರಿ ಚಾರಣಗಳನ್ನು ಮಾಡುವುದಲ್ಲದೇ, ದಟ್ಟ ಮಂಜಿನ ನಡುವೆ ಆಕರ್ಷಕವಾಗಿ ಉದಯಿಸುವ ಸೂರ್ಯೋದಯ ಮತ್ತು ಹಾಗೇ ಮುಳುಗುವ ಸೂರ್ಯಾಸ್ತಗಳನ್ನು ಇಲ್ಲಿರುವ ಎತ್ತರದ . ವಾಚ್‌ಟವರ್ ಗಳ ಮೇಲೆ ನಿಂತು ಆನಂದಿಸುತ್ತಾರೆ. ಅದರ ಜೊತೆ ಜೊತೆಯಲ್ಲಿಯೇ ಅತ್ಯುನ್ನತ ಶಿಖರ -ಬೆಟ್ಲಿಂಗ್‌ಚಿಪ್ -ಬಾಂಗ್ಲಾದೇಶದ ಚಿತ್ತಗಾಂಗ್ ಬೆಟ್ಟ ಪ್ರದೇಶಗಳು, ಕಾಂಚನಪುರ -ದಸ್ತಾ ಕಣಿವೆ ಮತ್ತು ತ್ರಿಪುರಾ ಮತ್ತು ಮಿಜೋರಾಂನ ಇತರ ಬೆಟ್ಟಗಳ ಸಾಲುಗಳ ಪ್ರಕೃತಿಯನ್ನು ಆಹ್ಲಾದಿಸುತ್ತಾರೆ. ಅದೇ ರೀತಿ ಇದೇ ಬೆಟ್ಟದ ಬುಡದಲ್ಲಿರುವ ಲುಶಾಯ್ ಮತ್ತು ರಿಯಂಗ್ ಬುಡಕಟ್ಟುಗಳ ಸ್ಥಳೀಯ ಬುಡಕಟ್ಟು ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿಯ ಜನರ ಜನಪ್ರಿಯ ವರ್ಣಮಯ ಮಿಜೊ ಸಮುದಾಯದ ಆತಿಥ್ಯವನ್ನು ಸವಿಯುತ್ತಾರೆ.

ತ್ರಿಪುರಾದ ರಾಜಧಾನಿ ಅಗರ್ತಲಾ ಉನಕೋಟಿಯಿಂದ 180 ಕಿಮೀ ದೂರದಲ್ಲಿದ್ದು ಇಲ್ಲಿಗೆ ದೆಹಲಿ, ಕೋಲ್ಕತಾ ಮತ್ತು ಗುವಾಹಟಿಯಿಂದ ಏರ್ ಇಂಡಿಯಾ, ಜೆಟ್ ಏರ್‌ವೇಸ್ ಮತ್ತು ಇಂಡಿಗೋ ಏರ್‌ಲೈನ್ಸ್ ಗಳ ದೈನಂದಿನ ವಿಮಾನಗಳಿದ್ದು ಅಲ್ಲಿಂದ NH44 ಮೂಲಕ ಖಾಸಗೀ ವಾಹನಗಳ ಮೂಲಕ ಇಲ್ಲಿಗೆ ತಲುಪಬಹುದಾಗಿದೆ.

ಇನ್ನು ರೈಲಿನ ಮುಖಾಂತರವೂ ಕುಮಾರಘಾಟ್ (160 ಕಿಮೀ) ಮತ್ತು ಧರ್ಮನಗರ (200 ಕಿಮೀ) ರೈಲ್ವೇ ನಿಲ್ದಾಣಕ್ಕೆ ತಲುಪಿ ಅಲ್ಲಿಂದ ಸ್ಥಳೀಯ ಸಾರಿಗೆ ವ್ಯವಸ್ಥೆ ಇಲ್ಲವೇ ಖಾಸಗೀ ವಾಹನಗಳ ಮೂಲಕ ಊನಕೋಟಿಯನ್ನು ತಲುಪಬಹುದಾಗಿದೆ.

ಅದೇ ರೀತಿಯಲ್ಲಿ NH44 ರಸ್ತೆಯ ಮುಖಾಂತರವೂ ಅಗರ್ತಲ ತಲುಪಿ ಅಲ್ಲಿಂದ ನಿಯಮಿತವಾಗಿ ಸಂಚರಿಸುವ ಬಸ್ ಗಳ ಮುಖಾಂತರ ಊನಕೋಟಿಯನ್ನು ತಲುಪಬಹುದಾಗಿದೆ.

ಊನಕೋಟಿಯ ಬಗ್ಗೆ ಇಷ್ಟೆಲ್ಲಾ ತಿಳಿದುಕೊಂಡ ಮೇಲೆ ಇನ್ನೇಕೆ ತಡಾ, ಒಂದು ವಾರಗಳ ಕಾಲ ರಜೆ ಹಾಕಿಕೊಂಡು ಪೂರ್ವಾಂಚಲ ರಾಜ್ಯಗಳಿಗೆ ಪ್ರವಾಸ ಹೋಗಿ ಅದರ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಇದೇ ಲೇಖನ ಸಂಪ‌ ಮಾಸಪತ್ರಿಕೆ ಅಕ್ಟೋಬರ್ 2021ರ ಸಂಚಿಕೆಯಲ್ಲಿ ಪ್ರಕಟವಾಗಿದೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s