ವಾಂಖೆಡೆ ಎಂಬ ಹೆಸರು ಕೇಳಿದ ಕೂಡಲೇ ಕ್ರಿಕೆಟ್ ಪ್ರಿಯರಿಗೆಲ್ಲಾ ಥಟ್ ಅಂತಾ ನೆನಪಾಗೋದೇ, ಮುಂಬೈನಲ್ಲಿರುವ ಸುಪ್ರಸಿದ್ದ ವಾಂಖೆಡೆ ಕ್ರೀಡಾಂಗಣ. 1974 ರಲ್ಲಿ ಮುಂಬೈ ಕ್ರಿಕೆಟ್ ಸಂಘದ ಅಧ್ಯಕ್ಷರಾಗಿದ್ದ ಬ್ಯಾರಿಸ್ಟರ್ ಶೇಷರಾವ್ ವಾಂಖೆಡೆ ನೆನಪಿನಾರ್ಥ ಆ ಕ್ರೀಡಾಂಗಣಕ್ಕೆ ವಾಂಖೆಡೆ ಕ್ರೀಡಾಂಗಣ ಎಂಬ ಹೆಸರನ್ನಿಡಲಾಗಿದೆ. ಆದರೆ ಕಳೆದ ಎರಡು ಮೂರು ವಾರಗಳಿಂದ ದೇಶಾದ್ಯಂತ ಪ್ರಚಲಿವಿರುವ ಮತ್ತೊಂದು ಹೆಸರೇ ಸಮೀರ್ ವಾಂಖೆಡೆ. ಯಾರೀ ಸಮೀರ್ ವಾಂಖೆಡೆ? ಅವರ ಸಾಧನೆಗಳೇನು? ಅವರ ಹೆಸರು ಈಗ ಏಕೆ ಪ್ರಚಲಿತದಲ್ಲಿದೆ? ಎಂಬುದನ್ನು ಸವಿವರವಾಗಿ ತಿಳಿಯೋಣ.
2004ರ ಬ್ಯಾಚ್ ಇಂಡಿಯನ್ ರೆವಿನ್ಯೂ ಸರ್ವೀಸ್ (IRS) ಅಧಿಕಾರಿಯಾದ 42 ವರ್ಷದ ಸಮೀರ್ ವಾಂಖೆಡೆ ಮೂಲತಃ ಮುಂಬೈನವರೇ ಆಗಿದ್ದು ಅವರ ತಂದೆಯೂ ನಿವೃತ್ತ ಪೊಲೀಸ್ ಅಧಿಕಾರಿಗಳಾಗಿದ್ದಾರೆ. 2017ರಲ್ಲಿ ಸಮೀರ್ ಮರಾಠಿ ನಟಿ ಕ್ರಾಂತಿ ರೆಡ್ಕರ್‌ರನ್ನು ವಿವಾಹವಾಗಿದ್ದಾರೆ. ಸಮೀರ್ ಎನ್‍ಸಿಬಿಯಲ್ಲಿ ಸೇವೆ ಸಲ್ಲಿಸುವ ಮುನ್ನ ಏರ್ ಇಂಟೆಲಿಜೆನ್ಸ್ ಯೂನಿಟ್ (AIU) ಮತ್ತು ರಾಷ್ಟ್ರೀಯ ತನಿಖಾ ಏಜೆನ್ಸಿಯ ಹೆಚ್ಚುವರಿ ಎಸ್ಪಿಯಾಗಿ ಸೇವೆ ಸಲ್ಲಿಸಿರುವುದಲ್ಲದೇ, ಕಂದಾಯ ಗುಪ್ತಚರ ನಿರ್ದೇಶನಾಲಯದಲ್ಲೂ (DRI) ಜಂಟಿ ಆಯುಕ್ತರಾಗಿಯೂ ಕೆಲಸ ಮಾಡಿದ್ದವರು, ತಮ್ಮ ಸೇವಾ ಅವಧಿಯಲ್ಲಿ, ನ್ಯಾಯಯುತವಾಗಿ ತೆರಿಗೆಯನ್ನು ಕಟ್ಟದೇ ಸರ್ಕಾರಕ್ಕೆ ವಂಚಿಸುತ್ತಿದ್ದ ಸುಮಾರು 200 ಸೆಲೆಬ್ರಿಟಿಗಳು ಸೇರಿದಂತೆ 2,500 ಜನರನ್ನು ಪತ್ತೆಹಚ್ಚಿ ಕೇವಲ ಎರಡು ವರ್ಷಗಳಲ್ಲಿ ಅವರಿಂದ ದಂಡ ಸಹಿತ 87 ಕೋಟಿ ಆದಾಯವನ್ನು ರಾಜ್ಯದ ಬೊಕ್ಕಸಕ್ಕೆ ಸೇರುವಂತೆ ಮಾಡಿದ ಅತ್ಯಂತ ಪ್ರಾಮಾಣಿಕ, ನಿರ್ಭೀತ, ಶಿಸ್ತುಬದ್ಧ ಅಧಿಕಾರಿ ಎಂದು ಹೆಸರು ಮಾಡಿದ್ದಾರೆ.
ಕಳೆದ ವರ್ಷ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸತ್ತ ನಂತರ, ಅವನ ಸಾವಿನ ಸುತ್ತ ಮಾದಕ ದ್ರವ್ಯಗಳ ಜಾಡಿದೆ ಎಂಬುದನ್ನು ಅರಿತ ತನಿಖಾದಳ ಡ್ರಗ್ಸ್ ಆ್ಯಂಗಲ್ (Drugs Angle) ಎಂದು ಕರೆಯಲ್ಪಡುವ ತನಿಖೆ ಪ್ರಾರಂಭಿಸಿದಾಗಿನಿಂದ ಮಾದಕದ್ರವ್ಯ ನಿಯಂತ್ರಣ ಬ್ಯೂರೋ (NCB ) ಪ್ರಾಮುಖ್ಯತೆ ಪಡೆದು ಈ ಕಾರ್ಯಾಚರಣೆಗೆ ದಕ್ಷ ಅಧಿಕಾರಿ ಸಮೀರ್ ವಾಂಖೆಡೆ ಅವರಿಗೆ ನೇತೃತ್ವವಹಿಸಲಾಗಿದೆ. ಸಮೀರ್ ಮಾದಕ ದ್ರವ್ಯ ಜಾಲಗಳು ಹಾಗೂ ಅದರ ಹಿಂದಿನ ಕಾಣದ ಕೈಗಳನ್ನು ಬಗ್ಗು ಬಡಿದು ಮುಂಬೈ ನಗರವನ್ನು ಮಾದಕದ್ರವ್ಯದಿಂದ ಮುಕ್ತಗೊಳಿಸುವ ಸಂಕಲ್ಪತೊಟ್ಟು ನಿರ್ಭೀತಿಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇದೇ ಅಕ್ಟೋಬರ್ 3 ರಂದು ಮುಂಬೈ ನಗರದಲ್ಲಿ ಸಮುದ್ರ ಮಧ್ಯೆ ಕ್ರೂಸ್ ಒಂದರಲ್ಲಿ ರೇವ್ ಪಾರ್ಟಿ ನಡೆಯುತ್ತಿದೆ ಎಂಬ ಸಂದೇಶ ಸಿಕ್ಕ ನಂತರ ಸಮೀರ್ ವಾಂಖೆಡೆ ನೇತೃತ್ವದಲ್ಲಿ ಧಾಳಿ ನಡೆಸಿದಾಗ ಅಚ್ಚರಿ ಎನ್ನುವಂತೆ ಹಿಂದಿ ಚಲನಚಿತ್ರರಂಗದ ಖ್ಯಾತ ನಟ ಶಾರೂಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನೂ ಒಳಗೊಂಡಂತೆ ಸುಮಾರು ಖ್ಯಾತನಾಮರ ಮಕ್ಕಳುಗಳನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ. 23 ವರ್ಷದ ತರುಣ ಆರ್ಯನ್ ಖಾನ್ ಬಂಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಹಲವಾರು ಬಾಲಿವುಡ್ ನಟ ನಟಿಯರು ನಾಚಿಕೆ ಮಾನ ಮರ್ಯಾದೆ ಇಲ್ಲದೇ ಆರ್ಯನ್ ಖಾನ್ ಪರ ವಹಿಸಿದ್ದಲ್ಲದೇ ಅಮಾಯಕರನ್ನು ಬಂಧಿಸಲಾಗಿದೆ ಎಂಬ ವಾದವನ್ನು ಇಟ್ಟರೇ ಇಂತಹ ಸಮಯಕ್ಕೇ ಕಾಯುತ್ತಿರುವ ಕೆಲ ಸಮಯ ಸಾಧಕರು ಇದಕ್ಕೂ ಕೋಮುವಾದವನ್ನು ಬಳಿದು ಆರ್ಯನ್ ಮುಸಲ್ಮಾನರಾಗಿರುವ ಕಾರಣ ಅವರ ವಿರುದ್ಧ ಇಲ್ಲದ ಸಲ್ಲದ ಆರೋಪದೊಂದಿಗೆ ನ್ಯಾಯಾಂಗ ಬಂಧನ ಮಾಡಲಾಗಿದೆ ಎಂಬ ವಾದವನ್ನು ಮಂಡಿಸಿರುವುದು ನಿಜಕ್ಕೂ ದುರಾದೃಷ್ಟವೇ ಸರಿ.
ಡ್ರಗ್ಸ್ ಪ್ರಕರಣದಲ್ಲಿ ಶಾರುಖ್ ಖಾನ್ ಮಗ ಆರ್ಯನ್ ಖಾನ್ ಅವರನ್ನು ಬಂಧಿಸಿದ ಕೂಡಲೇ, ದಕ್ಷ ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆಯವರಿಗೆ ಸಾಕಷ್ಟು ತೊಂದರೆ ನೀಡಲು ಒಂದು ತಂಡವೇ ಸಿದ್ಧವಾಗಿದೆ. ಎಲ್ಲದ್ದಕ್ಕಿಂತಲೂ ಆಶ್ಚರ್ಯವೆಂದರೆ ಜನರ ಪರವಾಗಿ ಪ್ರಾಮಾಣಿಕವಾಗಿ ಮತ್ತು ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತೇನೆ ಎಂದು ಜನರ ಮುಂದೆ ಪ್ರಮಾಣವಚನ ಸ್ವೀಕರಿಸಿ ಮಹಾರಾಷ್ಟ್ರಾದ ಶಿವಸೇನೆ, ಕಾಂಗ್ರೇಸ್ ಮತ್ತು ಎನ್.ಸಿ.ಪಿ ಮೈತ್ರಿಯ ಸರ್ಕಾರದಲ್ಲಿ ಸಚಿವರಾಗಿರುವ ನವಾಬ್ ಮಲಿಕ್ ಸಮೀರ್ ವಾಂಖೆಡೆ ವಿರುದ್ಧ ತಿರುಗಿ ಬಿದ್ದಿದ್ದು. ಸಮೀರ್ ಅವರು ವೈಯಕ್ತಿಕ ದಾಖಲೆ ಹಾಗೂ ಜನ್ಮ ಪ್ರಮಾಣ ಪತ್ರವನ್ನು ನಕಲು ಮಾಡಿದ್ದಾರೆ. ಅವರು ಹುಟ್ಟಿನಿಂದ ಮುಸ್ಲಿಂ ಆಗಿದ್ದು, ಅವರ ನಿಜವಾದ ಹೆಸರು ಸಮೀರ್ ದಾವೂದ್ ವಾಂಖೆಡೆ ಎಂದು ಟೀಕೆ ಮಾಡಿದ್ದಲ್ಲದೇ ಈ ಪ್ರಕರಣದಲ್ಲಿ ಸುಮಾರು 25 ಕೋಟಿಗಳಷ್ಟು ಲಂಚವನ್ನು ಸಮೀರ್ ತಮ್ಮ ತಂಡದವರ ಮೂಲಕ ಪಡೆದಿದ್ದಾರೆ ಎಂಬ ಆರೋಪವನ್ನು ಮಾಡಿದ್ದಲ್ಲದೇ, ಲಾಕ್ ಡೌನ್ ಸಂದರ್ಭದಲ್ಲಿ ಸಮೀರ್ ಮಾಲ್ಡೀವ್ಸ್ ನಲ್ಲಿದ್ದು ಅಲ್ಲಿಂದಲೇ, ಅವರು ಬಾಲಿವುಡ್ ಸೆಲೆಬ್ರಿಟಿಗಳನ್ನು ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದಾರೆ ಎಂಬ ಆರೋಪವನ್ನು ಮಾಡುವ ಮೂಲಕ ಸಚಿವ ನವಾಬ್ ಮಲಿಕ್ ಇಡೀ ಪ್ರಕರಣದ ದಿಕ್ಕನ್ನು ತಪ್ಪಿಸಲು ಷಡ್ಯಂತ್ರ ಮಾಡಲು ಕಟಿ ಬದ್ಧರಾಗಿ ನಿಂತಿರುವುದು ಸ್ಸಷ್ಟವಾಗಿ ಗೋಚರಿಸುತ್ತಿರುವುದು ನಿಜಕ್ಕೂ ಅಸಹ್ಯಕರವಾಗಿದೆ.
ಬಾಲಿವುಡ್ ನಟ ನಟಿಯರು ನಾನಾ ರೀತಿಯ ಕಾರಣಗಳಿಂದ ಬಂಧನವಾದಾಗ ಅವರ ವಿರುದ್ಧ ತನಿಖೆ ನಡೆಸುವ ಶಕ್ತಿಯನ್ನು ಕುಗ್ಗಿಸುವ ಸಲುವಾಗಿ ಈ ರೀತಿಯ ಮಾಫಿಯಾ ಶಕ್ತಿಗಳು ಹುಟ್ಟಿಕೊಳ್ಳುವುದು ಹೊಸತೇನಲ್ಲ. ಬಾಲಿವುಡ್ಡಿನ ಮತ್ತೊಬ್ಬ ಖ್ಯಾ(ಕು)ತ ನಟ ಸಲ್ಮಾನ್ ಖಾನ್ ಚಲಾಯಿಸುತ್ತಿದ್ದ ಲ್ಯಾಂಡ್ ಕ್ರೂಸರ್ ಪಾದಚಾರಿ ಮಾರ್ಗದಲ್ಲಿ ಮಲಗಿದ್ದ ಐದು ಜನರರ ಮೇಲೆ ಹರಿದು ಅವರೆಲ್ಲರೂ ಸ್ಥಳದಲ್ಲೇ ಅಸುನೀಗಿದಾಗ ಅದೇ ಸ್ಥಳದಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ 1998 ರ ಬ್ಯಾಚ್‌ಗೆ ಸೇರಿದ ರವೀಂದ್ರ ಪಾಟೀಲ್ ಪ್ರಮುಖ ಸಾಕ್ಷಿಯಾಗಿ ನ್ಯಾಯಾಲಯದಲ್ಲಿ ಸತ್ಯವನ್ನು ಹೇಳಿದ ಕಾರಣ, ಅವರ ಹೇಳಿಕೆಯ ಆಧಾರದ ಮೇಲೆ ಸಲ್ಮಾನ್‌ಗೆ 5 ವರ್ಷಗಳ ಶಿಕ್ಷೆ ವಿಧಿಸಲಾಯಿತು.
ನ್ಯಾಯಾಲಯದಲ್ಲಿ ತನಿಖೆ ನಡೆಯುತ್ತಿದ್ದಾಗಲೇ ರವೀಂದ್ರ ಪಾಟೀಲ್ ಅವರಿಗೆ ತಮ್ಮ ಹೇಳಿಕೆಯನ್ನು ಬದಲಾಯಿಸುವಂತೆ ಒತ್ತಡವನ್ನು ಹೇರಲಾಗಿ ಅದಕ್ಕೆ ಜಗ್ಗದಿದ್ದಾಗ. ಅನೇಕ ಬೆದರಿಕೆಗಳನ್ನು ಹಾಕಲಾಯಿತು. ಅದಕ್ಕೂ ಜಗ್ಗದಿದ್ದಾಗ ಅವರ ಮೇಲೆ 20 ಕ್ಕೂ ಹೆಚ್ಚು ಕ್ರಿಮಿನಲ್ ಮೊಕದ್ದಮೆಗಳನ್ನು ಹಾಕುವ ಮುಖಾಂತರ ಅವರನ್ನು ಕೆಲಸದಿಂದ ವಜಾಗೊಳಿಸಲಾಯಿತು. ಸತ್ಯ ಹೇಳಿದ್ದಕ್ಕಾಗಿ ಈ ಪರಿಯ ಕಷ್ಟವನ್ನು ಅನುಭವಿಸಬೇಕಾಗಿ ಬಂದ ಕಾರಣ ರವೀಂದ್ರ ಅವರು ಮಾನಸಿಕ ಒತ್ತಡಕ್ಕೆ ಒಳಗಾಗಿ ರಸ್ತೆ ರಸ್ತೆಗಳಲ್ಲಿ ಭಿಕ್ಷೆ ಬೇಡುವಂತಾಯಿತು. ನಂತರದ ದಿನಗಳಲ್ಲಿ ಖಾಯಿಲೆಗೆ ತುತ್ತಾಗಿ ಸರ್ಕಾರಿ ಟಿಬಿ ಆಸ್ಪತ್ರೆಯಲ್ಲಿ ತಿಂಗಳಾನು ಗಟ್ಟಲೆ ನರಳಿ ನರಳಿ ಸಾವನ್ನಪ್ಪಿದ್ದು ನಿಜಕ್ಕೂ ದುಃಖಕರವೇ ಸರಿ.
ಈಗ ಅದೇ ಕಾರ್ಯತಂತ್ರವನ್ನು ಆರ್ಯನ್ ಖಾನ್ ಕೇಸ್ ನಲ್ಲಿಯೂ ಮುಂದುವರೆಸಿ ಸಮೀರ್ ವಾಖೆಂಡೆ ಅವರ ವಿರುದ್ದ ವಯಕ್ತಿಕವಾದ ಆರೋಪಗಳನ್ನು ಮಾಡುತ್ತಿರುವ ಮುಖಾಮ್ತರ ದೊಡ್ಡ ಷಡ್ಯಂತ್ರ ನಡೆಸುತ್ತಿರುವುದು ಸ್ವಷ್ಟವಾಗಿ ಗೋಚರಿಸುತ್ತಿದೆ.
ನಿಜ ಹೇಳಬೇಕೆಂದರೆ, ಜೂನ್ 2007 ರಲ್ಲಿ ಪುಣೆಯಲ್ಲಿ ರಾಜ್ಯ ಅಬಕಾರಿ ಇಲಾಖೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ನಿವೃತ್ತರಾದ ಸಮೀರ್ ಅವರ ತಂದೆ ಜ್ಞಾನದೇವ್ ಕಚ್ರುಜಿ ವಾಂಖೆಡೆ ಅವರು ಜನ್ಮತಃ ಹಿಂದುಗಳಾಗಿದ್ದು, 6 ವರ್ಷದ ಹಿಂದೆಯೇ ಮೃತಪಟ್ಟಿರುವ ಜಹೀದಾ ಎಂಬ ಮುಸ್ಲಿಂ ಮಹಿಳೆಯನ್ನು ವಿವಾಹವಾಗಿ ಸಮೀರ್ ವಾಂಖೆಡೆ ಮತ್ತು ಕ್ರಿಮಿನಲ್ ಲಾಯರ್ ಆಗಿರುವ ಯಾಸ್ಮಿನ್ ವಾಂಖೆಡೆ ಎಂಬ ಇಬ್ಬರು ಮಕ್ಕಳಿದ್ದಾರೆ. 2006 ರಲ್ಲಿ ತಮ್ಮ ತಾಯಿಯ ಆಸೆಯಂತೆ ಮುಸ್ಲಿಂ ಸಂಪ್ರದಾಯದಂತೆಯೇ ಸಮೀರ್ ಶಬಾನಾ ಖುರೈಶಿ ಎಂಬ ಮುಸ್ಲಿಂ ಮಹಿಳೆಯನ್ನು ವಿವಾಹವಾದರೂ, ಮುಸ್ಲಿಂ ಆಗಿ ಮತಾಂತರವಾಗಿರಲಿಲ್ಲ. ನಂತರ 2016 ರಲ್ಲಿ ಸಿವಿಲ್ ನ್ಯಾಯಾಲಯದ ಮೂಲಕ ಪರಸ್ಪರ ಒಪ್ಪಂದದ ಮುಖಾಂತರ ಅವರಿಬ್ಬರಿಗೂ ವಿಚ್ಛೇದನವಾದ ನಂತರ 2017 ರಲ್ಲಿ ಕ್ರಾಂತಿ ರೆಡ್ಕರ್ ಎಂಬ ಹಿಂದೂ ಮರಾಠಿ ರಂಗಭೂಮಿ ಮತ್ತು ಚಲನಚಿತ್ರರಂಗದ ನಟಿಯಾನ್ನು ವಿವಾಹವಾಗಿದ್ದಾರೆ ಇವೆಲ್ಲವೂ ಸಮೀರ್ ಅವರ ವೈಯಕ್ತಿಕ ಬದುಕಾಗಿದ್ದು ಈಗ ಖಾರೂಖ್ ಖಾನ್ ಮಗನ ಬಂಧನ ನಡೆಸಿ ತನಿಖೆ ನಡೆಸುತ್ತಿರುವಾಘ ಅವರ ದಾಖಲೆಗಳನ್ನು ಸಾರ್ವಜನಿಕವಾಗಿ ಬಯಲು ಮಾಡುವ ಮೂಲಕ ಅವರ ಕುಟುಂಬದ ಖಾಸಗಿತನದಲ್ಲಿ ಮೂಗು ತೂರಿಸುವ ಕೆಲಸ ಮಾಡುತ್ತಿರುವುದು ನಿಜಕ್ಕೂ ಅಸಹ್ಯ ಎನಿಸುತ್ತಿದೆ.
ದಿಟ್ಟತನದ ದೈರ್ಯಸ್ಥ ಅಧಿಕಾರಿ ಸಮೀರ್ ವಾಂಖೆಡೆ ಈ ರೀತಿಯ ಗೊಡ್ಡು ಬೆದರಿಕೆಗಳಿಗೆ ಜಗ್ಗದೇ, ತನಿಖೆಯ ಹಾದಿ ತಪ್ಪಿಸುವ ಉದ್ದೇಶದಿಂದ ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ. ಬಾಲಿವುಡ್ ನಟ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ನವಾಬ್ ಮಲಿಕ್ ಅನಗತ್ಯವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಈ ಪ್ರಕರಣದಲ್ಲಿ ನವಾಬ್ ಮಲಿಕ್ ಅವರನ್ನೂ ಬಂಧಿಸಬಹುದು ಎಂಬ ಭಯದಿಂದಾಗಿ ತನಿಖೆಯ ಹಾದಿ ತಪ್ಪಿಸಲು ನನ್ನ ವಿರುದ್ಧ ಆರೋಪಗಳನ್ನು ಮಾಡುವ ಮುಖಾಂತರ ಬಹಳ ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದು ತಿರುಗಿ ಬಿದ್ದಿರುವುದಲ್ಲದೇ ನ್ಯಾಯಾಂಗದ ಮೊರೆ ಹೋಗಿರುವುದು ಶ್ಲಾಘನೀಯವಾಗಿದೆ.
ಸಮೀರ್ ಅವರ ಬೆಂಬಲಕ್ಕೆ ಅವರ ತಂದೆ ನಿವೃತ್ತ ಪೋಲೀಸ್ ಅಧಿಕಾರಿಗಳಾದ ಜ್ಞಾನದೇವ್ ವಾಂಖೆಡೆ ಮತ್ತು ಸಮೀರ್ ಅವರ ಪತ್ನಿ ಕ್ರಾಂತಿ ಅವರುಗಳು ನಿಂತಿದ್ದರೆ, ಈ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಕೇಂದ್ರದ ಗೃಹಇಲಾಖೆಯೂ ನಿರ್ಭಿಡೆಯಿಂದ ತನಿಖೆ ನಡೆಸುವಂತಾಗಲು ಸಮೀರ್ ಅವರಿಗೆ Z+ security ನೀಡುವ ಮೂಲಕ ಈ ಎಲ್ಲಾ ಮಾಫಿಯಾಗಳನ್ನು ಮಟ್ಟ ಹಾಕಲು ಸಮೀರ್ ಅವರ ಬೆಂಬಲಕ್ಕೆ ನಿಂತಿರುವುದು ಶ್ಲಾಘನಿಯವಾಗಿದೆ.
ಇವಲ್ಲದರ ಮಧ್ಯೆ ಅಕ್ಟೋಬರ್ 28ರಂದು ನ್ಯಾಯಾಲಯ ಆರ್ಯನ್ ಖಾನ್ ಗೆ ಬೇಲ್ ನೀಡಿದ್ದು ಆತ ಜೈಲಿನಿಂದ ಹೊರ ಬಂದು ಮನೆ ಸೇರುವ ವೇಳೆಯಲ್ಲಿ ಭಾರಿ ಸಂಖ್ಯೆಯಲ್ಲಿ ಶಾರುಖ್ ಖಾನ್ ಅಭಿಮಾನಿಗಳು ಜಮಾಯಿಸಿ ಲಕ್ಷಾಂತರ ರೂಪಾಯಿಗಳ ಪಟಾಕಿಯನ್ನು ಸುಡುವ ಮೂಲಕ ಒಂದು ವಾರದ ಮೊದಲೇ ಮುಂಬೈಯಲ್ಲಿ ದೀವಾವಳಿಯನ್ನು ಆಚರಿಸಿ ಆರ್ಯನ್ ನಾವು ನಿಮ್ಮೊಂದಿಗೆ ಇದ್ದೇವೆ ಎಂಬ ಫಲಕಗಳನ್ನು ಹಿಡಿಯುವ ಮೂಲಕ ಬೆಚ್ಚು ಬೀಳಿಸಿದಾರೆ. ಇತ್ತೀಚಿಗೆ ನಾನಾ ರೀತಿಯ ಕ್ರಿಮಿನಲ್ ಆರೋಪಗಳ ಅಡಿಯಲ್ಲಿ ನ್ಯಾಯಾಂಗ ಬಂಧನದಲ್ಲಿ ತನಿಖೆಗೆ ಒಳಗಾಗಿ ಬಿಡುಗಡೆ ಆಗುವವರಿಗೆ ಸಾವಿರಾರು ಕೆಜಿ ಸೇಬಿನ ಹಾರ ಹಾಕಿ ಲಕ್ಷಾಂತರ ರೂಪಾಯಿಗಳ ಪಟಾಕಿ ಸಿಡಿಸಿ ಸಾವಿರಾರು ವಾಹನಗಳ ಮುಖಾಂತರ ನಾಲ್ಕಾರು ಗಂಟೆಗಳ ಕಾಲ ರಸ್ತೆಯನ್ನು ಅನಧಿಕೃತವಾಗಿ ಬಂದ್ ಮಾಡುವ ಸಂಪ್ರದಾಯವನ್ನು ಹುಟ್ಟು ಹಾಕುತ್ತಿರುವುದು ಈ ದೇಶ ಎತ್ತಸಾಗಲು ಹೊರಟಿದೆ ಎಂಬುದರ ಅರಿವಾಗುತ್ತಿದೆ.
ಈ ಲೇಖನದ ಮೂಲಕ ನಮ್ಮ ದೇಶವಾಸಿಗಳಲ್ಲಿ ಕೇಳಿಕೊಳ್ಳುವುದೇನೆಂದರೆ ದಯವಿಟ್ಟು ಕೆಟ್ಟ ಕೆಲಸಕ್ಕೆ ಧರ್ಮದ ನಂಟನ್ನು ಬೆರೆಸದಿರೋಣ. ಈ ದೇಶದಲ್ಲಿ ಯಾರೇ ತಪ್ಪು ಮಾಡಿದರೂ ಅಂತಹವರು ಶಿಕ್ಷೆಗೆ ಒಳಪಟ್ಟು ಮತ್ತೊಬ್ಬರು ಆಂತಹ ತಪ್ಪನ್ನು ಮರುಕಳಿಸಂದಂತೆ ಆಗಲಿ. ಇನ್ನು ತನಿಖೆ ನಡೆಸುತ್ತಿರುವವರು ಯಾವುದೇ ಜಾತಿ ಧರ್ಮಕ್ಕೇ ಸೇರಿದ್ದರೂ, ಒಬ್ಬ ನೈಜದೇಶಪ್ರೇಮಿಗಳ ರೀತಿಯಲ್ಲಿ ಅವರಿಗೆ ನೈತಿಕ ಬೆಂಬಲ ನೀಡುವ ಮೂಲಕ ಧರ್ಮಕ್ಕೂ, ಕರ್ತವ್ಯಕ್ಕೂ ಸಂಬಂಧ ಕಲ್ಸಿಸದಿರೋಣ ಮತ್ತು ನಿಜವಾದ ತಪ್ಪಿತಸ್ಥರಿಗೆ ಸಜ ಆಗುವಂತೆ ಆಶಿಸೋಣ.
ಏನಂತೀರೀ?
ನಿಮ್ಮವನೇ ಉಮಾಸುತ