ಕನ್ನಡ ಚಲನಚಿತ್ರರಂಗದ ಪ್ರತಿಭಾವಂತ ಸರಳ ಸಜ್ಜನ ಸದಾಕಾಲವೂ ವಿನೀತರಾಗಿರುತ್ತಿದ್ದ ಪುನೀತ್ ರಾಜಕುಮಾರ್ ಅಕ್ಟೋಬರ್ 29ರ ಬೆಳಿಗ್ಗೆ 11:30ರ ಹೊತ್ತಿಗೆ ಅಕಾಲಿಕವಾಗಿ ನಮ್ಮೆಲ್ಲರನ್ನು ಅಗಲಿರುವುದು ನಿಜಕ್ಕೂ ದುಃಖಕವವೇ ಸರಿ. ಭಗವಂತ ಮೃತರ ಆತ್ಮಕ್ಕೆ ಸದ್ಗತಿಯನ್ನು ಕೊಡಲಿ ಮತ್ತು ದುಃಖತಪ್ತ ಅವರ ಕುಟುಂಬವರ್ಗ ಮತ್ತು ಅಭಿಮಾನಿಗಳಿಗೆ ಅವರ ಅಕಾಲಿಕ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ನೀಡಲಿ.
ಪುನೀತ್ ಅವರ ಅಕಾಲಿಕ ಮರಣದ ನಂತರ ಬಹುತೇಕರರ ಬಾಯಿಯಿಂದ ಕೇಳಿ ಬರುತ್ತಿರುವ ಎರಡು ಸುದ್ದಿ ಎಂದರೆ, ಅಯ್ಯೋ ಪುನೀತ್ ರಾಜಕುಮಾರ್ ಅವರಿಗೆ ಕೇವಲ 46 ವರ್ಷ ವಯಸ್ಸಾಗಿತ್ತು. ಖಂಡಿತವಾಗಿಯೂ ಸಾಯುವ ವಯಸ್ಸಲ್ಲ ಸದಾ ಕಾಲವೂ ಫಿಟ್ ಅಂಡ್ ಫೈನ್ ಆಗಿದ್ದ ವ್ಯಕ್ತಿ ಅಂತಹ ವ್ಯಕ್ತಿಗೆ ಸಾವು ಬರಬಾರದಾಗಿತ್ತು. ಚೆನ್ನಾಗಿ ಕುಡಿದು, ತಿಂದು ಯಾವುದೇ ವ್ಯಾಯಾಮ ಮಾಡದೇ, ಮಾಡಬಾರದ ಕೆಲಸಗಳನ್ನೆಲ್ಲಾ ಮಾಡ್ತಾ ಇರುವವರು ಇನ್ನೂ ಗುಂಡು ಕಲ್ಲಿನ ಹಾಗಿ ಎಪ್ಪತ್ತು ಎಂಭತ್ತು ವರ್ಷಗಳ ಕಾಲ ಇರ್ಬೇಕಾದ್ರೇ, ಯಾವುದೇ ರೀತಿಯ ವ್ಯಸನಗಳಿಲ್ಲದ ಆರೋಗ್ಯಕರವಾದ ಜೀವನ ನಡೆಸುತ್ತಿದಂತಹ ಪುನೀತ್ ಅಸುನೀಗಿರುವುದು ನಿಜಕ್ಕೂ ದುಃಖಕರವೇ ಸರಿ
ಇನ್ನು ಮತ್ತೊಬ್ಬರು ಹೇಳುವ ಪ್ರಕಾರ ಅತಿಯಾದ ಜಿಮ್ ಮತ್ತು ವರ್ಕೌಟ್ ಮಾಡಿರುವ ಕಾರಣ, ಹೃದಯದ ಮೇಲೆ ಹೆಚ್ಚಾದ ಒತ್ತಡ ಬಿದ್ದಿರುವ ಕಾರಣ ಹೃದಯಾಘಾತವಾಗಿದೆ. ಹಾಗಾಗಿ ಎಷ್ಟೇ ವೈದ್ಯಕೀಯ ತಂತ್ರಜ್ಞಾನ ಇದ್ದರೂ ಅವರನ್ನು ಉಳಿಸಿಕೊಳ್ಳಲಾಲಿಲ್ಲ ಎನ್ನುವುದು ಮತ್ತೊಬ್ಬರ ವಾದ.
ಈ ಕುರಿತಂತೆ ಪುನೀತ್ ಅವರಿಗೆ ಮೊದಲ ಚಿಕಿತ್ಸೆ ನೀಡಿದ ಅವರ ಕುಟುಂಬ ವೈದ್ಯ ಡಾ. ರಮಣರಾವ್ ಅವರೇ ಹೇಳಿರುವಂತೆ ಅವರ ಆಸ್ಪತ್ರೆಗೆ ಅಪ್ಪು ಚಿಕಿತ್ಸೆಗೆ 11:15ಕ್ಕೆ ಬಂದಾಗ ಅವರ ಮೈ ಬೆವರುತ್ತಿತ್ತಾದರೂ BP, Sugar & ECG ಎಲ್ಲವೂ ಸರಿಯಾಗಿಯೇ ಇತ್ತಾದರೂ ದುರಾದೃಷ್ಟವಷಾತ್ ಇದ್ದಕ್ಕಿದ್ದಂತೆಯೇ ಹೃದಯಸ್ಥಂಭನವಾದ ಕಾರಣ ಅಲ್ಲೇ ಕುಸಿದು ಬಿದ್ದಿದ್ದಾರೆ. ಕೇವಲ 10-15 ನಿಮಿಷಗಳ ಕಾಲದೊಳಗೆ ವಿಕ್ರಂ ಆಸ್ಪತ್ರೆಗೆ ಸಾಗಿಸುವ ಹೊತ್ತಿಗೆ ಜವರಾಯ ತನ್ನ ಕೆಲಸವನ್ನು ಮುಗಿಸಿಬಿಟ್ಟಿದ್ದು ವಾಸ್ತವ ಅಂಶ.
ಇಷ್ಟರ ಮಧ್ಯೆ ಮಾಧ್ಯಮದವರು ಜಿಮ್ನಲ್ಲಿ ಅಪ್ಪು ಮಾಡುತ್ತಿದ್ದ ವರ್ಕೌಟ್ ದೃಶ್ಯಗಳನ್ನು ಪದೇ ಪದೇ ತೋರಿಸುತ್ತಿದ್ದಾಗ, ಈ ಜಿಮ್ ಎನ್ನುವುದು ಎಲ್ಲಾ ವಯಸ್ಸಿನವರಿಗೂ ಅಲ್ಲ , 30-35 ವರ್ಷಗಳ ತನಕ ದೇಹವನ್ನು ಚೆನ್ನಾಗಿ ಜಿಮ್ ನಲ್ಲಿ ದಂಡಿಸಿ ನಂತರ ಜಿಮ್ ಬಿಟ್ಟು ಯೋಗ, ಧ್ಯಾನಗಳಲ್ಲಿ ನಿರತವಾಗಿದ್ದರೆ ದೇಹ ಆರೋಗ್ಯವಾಗಿ ಮತ್ತು ಸದೃಢವಾಗಿರುತ್ತದೆ. ಜಿಮ್ ನಲ್ಲಿ ಎಲ್ಲರ ಜೊತೆಯಾಗಿ ಮಾಡುವಾಗ ಪೈಪೋಟಿಯಿಂದಾಗಿ ಅತಿಯಾದ ಭಾರ ಎತ್ತಿ ವ್ಯಾಯಾಮ ಮಾಡುತ್ತಾರೆ. ಹೀಗೆ ಮಾಡುವಾಗ ದೇಹಕ್ಕೆ ತುಸು ತ್ರಾಸದಾಯಕವೆನಿಸಿದರೂ ಎಲ್ಲರ ಜೊತೆ ಮಾಡುವಾಗ ಜೋಶ್ ನಲ್ಲಿ ವ್ಯಾಯಾಮ ಮಾಡಿದಾಗ ಅವರ ಅರಿವಿಲ್ಲದಂತೆಯೇ ಹೃದಯದ ಮೇಲೆ ಬಹಳ ಒತ್ತಡ ಬೀಳುತ್ತದೆ. 30-35 ವರ್ಷ ಧಾಟಿದ ನಂತರ ದೇಹದ ತೂಕವೂ ಹೆಚ್ಚಾಗುತ್ತಾ ಹೋಗುವುದಲ್ಲದೇ, ದೇಹದ ಕಸುವು ಸಹಾ ಕಡಿಮೆಯಾಗುತ್ತದೆ. ಸ್ವಚ್ಚಂದ ಗಾಳಿಯಾಡದ, ಹವಾನಿಯಂತ್ರಿತ ನಾಲ್ಕು ಗೋಡೆಗಳ ಮಧ್ಯೆ ವಿರಾಮವಿಲ್ಲದೇ ಮೇಲಿಂದ ಮೇಲೆ ಒಂದೆರಡು ಗಂಟೆಗಳ ಕಾಲ ಮಿಲ್, ಸೈಕ್ಲಿಂಗ್, ಕ್ರಾಸ್ ಟ್ರೈನರ್ ಮಾಡುತ್ತಾ ಬೆವರನ್ನು ಸುರಿಸಿ ನಂತರ ತೂಕದ ಕಬ್ಬಿಣದ ಗುಂಡುಗಳನ್ನು ಎತ್ತುವ ಮೂಲಕ ವ್ಯಾಯಾಮ ಮಾಡುವುದರಿಂದ ದೇಹಕ್ಕೆ ಆಯಾಸವಾಗುವುದಲ್ಲದೇ ಹೃದಯದ ಮೇಲೆ ಅನಾವಶ್ಯಕ ಒತ್ತಡ ಬೀಳುತ್ತದೆ. ಇದರ ಜೊತೆ ಜಿಮ್ ಟ್ರೈನರ್ ಗಳ ಸಲಹೆ ಮೇರೆಗೆ ವಿವಿದ poutine powder, muscle mass powder, Harmon injection, steroids ಆ ಕ್ಷಣಕ್ಕೆ ಫಲಿತಾಂಶಗಳನ್ನು ನೀಡುತ್ತವಾದರೂ ದೀರ್ಘಕಾಲ ಅವುಗಳನ್ನು ಬಳಸುವುದು ದೇಹಕ್ಕೆ ಮಾರಕ ಎನ್ನುವುದು ಹಲವರ ಅಭಿಪ್ರಾಯ.
ಬಲ್ಲ ಮೂಲಗಳ ಪ್ರಕಾರ ಪುನೀತ್ ಅವರು ಸದಾಶಿವ ನಗರದ ಅಫಿನಿಟಿ ಇಂಟರ್‌ನ್ಯಾಶನಲ್ ಮತ್ತು ಸ್ವಿಚ್ ವೆಲ್ನೆಸ್ ಎಂಬ ಎರಡು ಜಿಮ್ ಗಳಲ್ಲಿ ತಮ್ಮ ದೇಹದಾಢ್ಯವನ್ನು ಮಾಡುತ್ತಿದ್ದದ್ದಲ್ಲದೇ ಅವರ ಮನೆಯಲ್ಲಿಯೂ ಸುಸಜ್ಜಿತವಾದ ಸಣ್ನದೊಂದು ಜಿಮ್ ಹೊಂದಿದ್ದರು. ಅಫಿನಿಟಿ ಇಂಟರ್‌ನ್ಯಾಶನಲ್ ಪ್ರಮಾಣೀಕೃತ ಜಿಮ್ ಟ್ರೈನರ್ (certified gym trainer) ಮಧು ಅವರು ಮಾಧ್ಯಮದ ಸಂದರ್ಶನವೊಂದರಲ್ಲಿ ಹೇಳಿದಂತೆ ಪುನೀತ್ ಅವರು ವಾರಕ್ಕೆ 4-5 ದಿನಗಳ ಕಾಲ ತಮ್ಮೊಂದಿಗೆ ಪ್ರಮಾಣೀಕೃತ ವೈಯಕ್ತಿಕ ತರಬೇತುದಾರ (certified personal trainer) ಸಲಹೆಯಂತೆಯೇ ದಿನಕ್ಕೆ ಮೂರ್ನಾಲ್ಕು ಗಂಟೆಗಳ ಕಾಲ ದೇಹವನ್ನು ದಂಡಿಸುತ್ತಿದ್ದರಲ್ಲದೇ, ಅವರಿಗೆ ತಿಳಿದಿರುವಂತೆ ಪುನೀತ್ ಯಾವುದೇ ರೀತಿಯ poutine powder ತೆಗೆದುಕೊಳ್ಳುತ್ತಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹೀಗೆ ಪುನೀತ್ ಅವರ ಕುಟುಂಬ ವೈದ್ಯರು ಮತ್ತು ಜಿಮ್ ತರಭೇತುದಾರರು ಹೇಳಿರುವಂತೆ ಪುನೀತ್ ಅವರ ಸಾವಿಗೆ ಕೇವಲ ಜಿಮ್ ಮಾಡಿರುವುದೇ ಕಾರಣವಲ್ಲ. ಏಕೆಂದರೆ ಇದೇ ರೀತಿಯ ತರಭೇತನ್ನು ಅವರು ಪ್ರತೀದಿನವು ಮಾಡುತ್ತಲೇ ಇದ್ದರು. ಮಾಧ್ಯಮಗಳಲ್ಲಿಯೇ ತೋರಿಸುರುವಂತೆ ಹಿಂದಿನ ದಿನ ರಾತ್ರಿ 11ರ ವರೆವಿಗೂ ಸಂಗೀತ ನಿರ್ದೇಶಕ ಗುರುಕಿರಣ್ ಅವರ ಹುಟ್ಟು ಹಬ್ಬದ ಪಾರ್ಟಿಯಲ್ಲಿ ಚಿತ್ರರಂಗದ ಬಹುತೇಕ ಗಣ್ಯರೊಂದಿಗೆ ಚೆನ್ನಾಗಿಯೇ ಕಾಲ ಕಳೆದಿದ್ದಾರೆ. ಸಾಯುವ ಎರಡು ಮೂರು ದಿನಗಳ ಹಿಂದಿನಿಂದಲೂ ಶಿವರಾಜ್ ಕುಮಾರ್ ಅವರ ಭಜರಂಗಿ-2 ಸಿನಿಮಾ ಮತ್ತು ದುನಿಯಾ ವಿಜಯ್ ಅವರ ಸಲಗ ಚಿತ್ರದ ಪ್ರಚಾರದಲ್ಲಿ ಶಿವರಾಜ್ ಕುಮಾರ್ ಮತ್ತು ಯಶ್ ಅವರೊಂದಿಗೆ ಲವಲವಿಕೆಯಿಂದಲೇ ಕುಣಿದು ಕುಪ್ಪಳಿಸಿದ್ದದ್ದನ್ನು ನೋಡಿದ್ದೇವೆ. ಹೃದಯಾಘಾತವಾದಾಗ ಒಂದು ಗಂಟೆಯ ಚಿನ್ನದ ಕಾಲಾವಕಾಶವಿದ್ದು ಆ ಒಂದು ಘಂಟೆಯ ಒಳಗೆ ಸೂಕ್ತ ಚಿಕಿತ್ಸೆ ದೊರಕಿದಲ್ಲಿ ಬದುಕುವ ಸಾಧ್ಯತೆ ಇದೆ. ಆದರೆ ಇಲ್ಲಿ ಪುನೀತ್ ಅವರಿಗೆ ತೀವ್ರವಾದ ಹೃದಯಸ್ಥಂಭನವಾಗಿರುವ ಕಾರಣ ಏನೂ ಮಾಡಲು ಸಾಧ್ಯವಾಗಲಿಲ್ಲ ಎಂದೇ ಅವರ ಕುಟುಂಬವೈದ್ಯರು ತಿಳಿಸಿರುವುದು ಗಮನಾರ್ಹ. ಹಾಗಾಗಿ ಜಿಮ್ ಎನ್ನುವುದೇ ಅವರ ಸಾವಿಗೆ ಕಾರಣವಾಗಿರದೇ ಸಾಯುವುದಕ್ಕೊಂದು ಅದೊಂದು ನೆಪವಷ್ಟೇ ಎನ್ನುವುದೇ ನನ್ನ ವಯಕ್ತಿಕ ಭಾವನೆಯಾಗಿದೆ.
ಒಳ್ಳೆಯ ಆಹಾರ, ಸ್ವಲ್ಪ ವ್ಯಾಯಾಮ, ಕಣ್ತುಂಬ ನಿದ್ದೆಯ ಜೊತೆಗೆ ಉತ್ತಮ ಜೀವನ ಶೈಲಿಯನ್ನು ರೂಢಿಸಿಕೊಂಡಲ್ಲಿ ಆರೋಗ್ಯಕರವಾದ ಜೀವನವನ್ನು ಸಾಗಿಸಬಹುದಾಗಿದೆ ಎನ್ನುವುದು ನನ್ನದೇ ಸ್ವ-ಅನುಭವವಾಗಿದೆ. ಅಪಘಾತದಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿ ನಾನಾ ರೀತಿಯ ಔಷಧೋಪಚಾರ ಪಡೆದು, ಕೆಲಸದ ಒತ್ತಡದಿಮ್ದ ಸರಿಯಾದ ಸಮಯಕ್ಕೆ ಊಟ ತಿಂಡಿ ನಿದ್ರೆ ಇಲ್ಲದೇ ನಾನಾ ರೀತಿಯ ಕಾರಣಗಳಿಂದಾಗಿ 94 ಕೆಜಿಗಳಷ್ಟು ತೂಗುತ್ತಿದ್ದ ನಾನು, 5 ವರ್ಷಗಳ ಹಿಂದೆ ಉತ್ತಮವಾದ ಆಹಾರ ಪದ್ದತಿಯ ಜೊತೆಗೆ ಜಿಮ್ ನಲ್ಲಿ light stretching exercises, cardio, abs pushup ಮಾಡುವ ಮುಖಾಂತರ 68 ಕೆಜಿಗಳಿಗೆ ದೇಹದ ತೂಕವನ್ನು ಇಳಿಸಿಕೊಂಡು ನಂತರ ಅದೇ ಉತ್ತಮ ಆಹಾರದ ಪದ್ದತಿಯನ್ನೇ ಜೀವನ ಶೈಲಿಯಾಗಿಸಿಕೊಳ್ಳುವುದರ ಜೊತೆಗೆ ಯೋಗಾಸನ ಪ್ರಾಣಾಯಾಮ, ಉತ್ತಮವಾದ ಸಾಹಿತ್ಯ ಚಟುವಟಿಕೆಗಳೊಂದಿಗೆ ನೆಮ್ಮದಿಯ ಜೀವನ ಸಾಗಿಸುತ್ತಿದ್ದೇನೆ.
ಅದಕ್ಕೇ ಅಲ್ಲವೇ ನಮ್ಮ ಹಿರಿಯರು ಒಂದು ಹೊತ್ತು ಉಂಡವ ಯೋಗಿ. ಎರಡು ಹೊತ್ತು ಉಂಡವ ಭೋಗಿ. ಮೂರು ಹೊತ್ತು ಉಂಡವ ರೋಗಿ. ನಾಲ್ಕು ಹೊತ್ತು ಉಣ್ಣುವವನನ್ನು ಎತ್ಕೊಂಡು ಹೋಗಿ ಎಂಬ ಕಿವಿ ಮಾತನ್ನು ಹೇಳಿದ್ದಾರೆ. ಹಾಗಾಗಿ ಯಾರನ್ನೋ ಮೆಚ್ಚಿಸುವ ಸಲುವಾಗಿ ಕಟ್ಟು ಮಸ್ತಾದ ದೇಹವನ್ನು ಮಾಡಲು ಹೋಗಿ ಅನಾವಶ್ಯಕವಾಗಿ ದೇಹದಂಡನೆ ಮಾಡುತ್ತಾ ಆರೋಗ್ಯವನ್ನು ಹಾನಿ ಮಾಡಿಕೊಳ್ಳದಿರೋಣ. ಜೀವ ಇದ್ದಲ್ಲಿ ಮಾತ್ರವೇ ಜೀವನ. ಹಾಗಾಗಿ ಲಂಘನಂ ಪರಮೌಷಧಂ ಎನ್ನುವಂತೆ ಜೀವಕ್ಕೆ ಎಷ್ಟು ಬೇಕೋ ಅಷ್ಟನ್ನು ತಿನ್ನಬೇಕೇ ಹೊರತು ತಿನ್ನುವದಕ್ಕೇ ಜೀವಿಸಬಾರದು. ಹಾಗೆ ತಿಂದದ್ದನ್ನು ಅಂದಂದೇ ಕರಗಿಸಿಕೊಳ್ಳುವ ಮೂಲಕ ಆರೋಗ್ಯಕರವಾದ ಜೀವನವನ್ನು ನಡೆಸಬಹುದು.
ಜಾತಸ್ಯ ಮರಣಂಧೃವಂ. ಹುಟ್ಟುವಾಗಲೇ ಸಾಯುವ ದಿನವನ್ನೂ ಭಗವಂತ ಹಣೆಮೇಲೆ ಬರೆದು ಕಳುಹಿಸಿರುತ್ತಾನೆ.ಆ ಸಮಯ ಬಂದಾಗ ಹೊರಟು ಹೋಗ್ತಾರೆ. ಮಿಕ್ಕಿದ್ದೆಲ್ಲವೂ ಕೇವಲ ನೆಪ ಅಷ್ಟೇ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ