ಕರ್ನಾಟಕದ ಕುಳ್ಳ ಎಂದೇ ಪ್ರಖ್ಯತವಾಗಿರುವ ದ್ವಾರಕೀಶ್ ಕನ್ನಡ ಚಲನಚಿತ್ರರಂಗದಲ್ಲಿ ನಟ, ನಿರ್ಮಾಪಕ, ನಿರ್ದೇಶಕರಾಗಿ ಖ್ಯಾತರಾಗಿರುವುದಲ್ಲದೇ ಕನ್ನಡ ಚಿತ್ರರಂಗದಲ್ಲಿ ಅನೇಕರಿಗೆ ಆಶ್ರಯದಾತರಾಗಿರುವುದಲ್ಲದೇ, ಕನ್ನಡ ಚಿತ್ರರಂಗದಲ್ಲಿ ಅನೇಕ ಪ್ರಥಮಗಳಿಗೆ ಕಾರಣೀಭೂತರಾಗಿದ್ದಾರೆ. ಅಂತಹ ದ್ವಾರಕೀಶ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಕುರಿತಾಗಿ ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಮೆಲುಕು ಹಾಕೋಣ.
ಬಂಗ್ಲೆ ಶಾಮರಾವ್ ದ್ವಾರಕಾನಾಥ್ ಎಂಬುದು ದ್ವಾರಕೀಶ್ ಅವರ ನಿಜನಾಮವಾಗಿದ್ದು, ಹುಣಸೂರಿನ ಬಂಗ್ಲೆ ಶಾಮಾರಾವ್ ಮತ್ತು ಜಯಮ್ಮದಂಪತಿಗಳಿಗೆ ಆಗಸ್ಟ್ 19 1942 ರಲ್ಲಿ ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸುತ್ತಾರೆ. ಮುಂದೆ ಅವರ ವಿದ್ಯಾಭ್ಯಾಸವೆಲ್ಲವೂ ಮೈಸೂರಿನ ಶಾರದಾ ವಿಲಾಸ್ ಮತ್ತು ಬನುಮಯ್ಯ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮುಗಿಸಿದ ನಂತರ ಮೈಸೂರಿನ CPC ಪಾಲಿಟೆಕ್ನಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೊಮೋ ಮುಗಿಸುವಷ್ಟರಲ್ಲಿ ಅದಾಗಲೇ ಅವರ ಸೋದರು ಉದ್ಯಮದಲ್ಲಿ ತೊಡಗಿಸಿಕೊಂಡಿದ್ದು ದ್ವಾರಕನಾಥ್ ಅವರಿಗೂ ಭಾರತ್ ಆಟೋ ಸ್ಪೇರ್ ಸ್ಟೋರ್ ಅರಂಭಿಸಿ ಕೆಲಕಾಲ ವ್ಯವಹಾರದಲ್ಲಿ ತೊಡಗಿಕೊಂಡಿದ್ದರು.
ನಿಜ ಹೇಳಬೇಕೆಂದರೆ ಕಲೆ ಎನ್ನುವುದು ದ್ವಾರಕನಾಥ್ ಅವರಿಗೆ ಹುಟ್ಟಿನಿಂದಲೇ ಬಂದಿತ್ತು ಎಂದರೂ ತಪ್ಪಾಗದು ಅವರ ತಾಯಿಯ ಸಹೋದರರಾದ ಶ್ರೀ ಹುಣಸೂರು ಕೃಷ್ಣಮೂರ್ತಿಗಳು ಅದಾಗಲೇ ಖ್ಯಾತ ನಟ, ಗೀತರಚನೆಕಾರ, ಕಥೆಗಾರ, ರಂಗಕರ್ಮಿ, ಚಲನಚಿತ್ರ ನಿರ್ದೇಶಕ ಮತ್ತು ನಿರ್ಮಾಪಕರಾಗಿ ಖ್ಯಾತಿಗಳಿಸಿದ್ದಲ್ಲದೇ, ಗುಬ್ಬಿ ವೀರಣ್ಣ, ಮೊಹಮ್ಮದ್ ಪೀರ್ ಮತ್ತು ಬಿ.ಆರ್.ಪಂತುಲು ಅಂತಹವರೊಂದಿಗೆ ಕೆಲಸ ಮಾಡಿದ ನಂತರ, ಸತ್ಯ ಹರಿಶ್ಚಂದ್ರ ಭಕ್ತ ಕುಂಬಾರ, ಬಬ್ರುವಾಹನ ಮುಂತಾದ ರಾಜಕುಮಾರ್ ಅವರಿಗೆ ಹೆಸನ್ನು ತಂದುಕೊಟ್ಟ ಪೌರಾಣಿಕ ಚಿತ್ರಗಳಲ್ಲದೇ ಅನೇಕ ಸಾಮಾಜಿಕ ಚಿತ್ರಗಳನ್ನು ನಿರ್ದೇಶಿಸಿ ಪ್ರಖ್ಯಾತರಾಗಿದ್ದರು. ಆಗ್ಗಾಗ್ಗೆ ಅವರ ಮನೆಗೆ ಹೋಗಿ ಬರುತ್ತಿದ್ದ ದ್ವಾರಕನಾಥ್ ಸಹಜವಾಗಿ ಚಿತ್ರರಂಗದತ್ತ ಆಕರ್ಷಿತರಾಗಿ ಮದ್ರಾಸಿನಲ್ಲಿದ್ದ 1963 ರಲ್ಲಿ ಅವರ ಮಾವನ ಮನೆಗೆ ಹೋಗಿ ಅವರ ಚಿತ್ರಗಳಲ್ಲಿಅಭಿನಯಿಸಲು ಅವಕಾಶ ನೀಡುವಂತೆ ಹೇಳಿಕೊಂಡರು.
ತನ್ನ ಸೋದರಳಿನ ಕೋರಿಕೆಯನ್ನು ಮನ್ನಿಸಿದ ಹುಣಸೂರು ಕೃಷ್ಣಮೂರ್ತಿಗಳು ತಮ್ಮ ವೀರ ಸಂಕಲ್ಪ ಚಿತ್ರದಲ್ಲಿ ಮೊದಲಬಾರಿಗೆ ಬಣ್ಣವನ್ನು ಹಚ್ಚಿಸುತ್ತಾರೆ. ಅಲ್ಲಿಂದ ಶುರುವಾದ ಬಣ್ಣದ ಗೀಳು ಬಲುಬೇಗನೇ ಅವರನ್ನು ಸಂಪೂರ್ಣವಾಗಿ ಸೆಳೆದುಕೊಂಡಿತು. ತಮ್ಮ ದೇಹದ ಆಕಾರ ಮತ್ತು ವ್ಯಕ್ತಿತ್ವದ ಬಗ್ಗೆ ಅರಿವಿದ್ದ ದ್ವಾರಕನಾಥ್ ಆರಂಭದಲ್ಲಿ ಹಾಸ್ಯಪಾತ್ರಗಳಲ್ಲಿ ಅಭಿನಯಿಸತೊಡಗಿದರೆ, ನಂತರ ಅವರೊಳಗಿದ್ದ ವ್ಯಾಪಾರಿ ಗುಣ ಜಾಗೃತಗೊಂಡು ಚಿತ್ರರಂಗ ಪ್ರವೇಶಿಸಿದ ಕೇವಲ ಮೂರು ವರ್ಷಗಳಲ್ಲಿಯೇ 1966 ರಲ್ಲಿ, ದ್ವಾರಕನಾಥ್ ಅವರು ಪಾಲುದಾರಿಕೆಯಲ್ಲಿ ತಮ್ಮ ಮೊದಲ ಚಿತ್ರ ಮಮತೆಯ ಬಂಧನವನ್ನು ನಿರ್ಮಿಸಿ ಯಶಸ್ಸನ್ನು ಕಾಣುತ್ತಾರೆ. ಇವೆಲ್ಲದರ ಮಥ್ಯೆ ಕನ್ನಡ ಚಲನಚಿತ್ರ ನಿರ್ಮಾಪಕ ಸಿ.ವಿ. ಶಿವಶಂಕರ್ ಅವರು ದ್ವಾರಕನಾಥ್ ಎಂಬುದು ಹಳೆಯ ಹೆಸರಾಗಿರುವ ಕಾರಣ ದ್ವಾರಕೀಶ್ ಎಂಬ ಹೊಸ ಹೆಸರನ್ನು ಸೂಚಿಸುತ್ತಾರೆ. 1969 ರಲ್ಲಿ ಸ್ವತಂತ್ರವಾಗಿ ದ್ವಾರಕಾ ಫಿಲ್ಮ್ ಎಂಬ ಬ್ಯಾನರ್ ಆರಂಭಿಸಿ ಕನ್ನಡದ ವರನಟ ರಾಜಕುಮಾರ್ ಅವರನ್ನು ನಾಯಕರನ್ನಾಗಿ ಮಾಡಿಕೊಂಡು ಮೇಯರ್ ಮುತ್ತಣ್ಣ ಚಿತ್ರವನ್ನು ನಿರ್ಮಿಸುತ್ತಾರೆ. ಈ ಚಿತ್ರದಲ್ಲಿ ಡಾ.ರಾಜ್‌ಕುಮಾರ್ ಮತ್ತು ಭಾರತಿ ಅವರ ಅಮೋಘ ಅಭಿನಯದಿಂದಾಗಿ ಚಿತ್ರ ಅತ್ಯಂತ ಯಶಸ್ವಿಯಾಗಿದ್ದೇ ತಡಾ ಮಂದೆ ಸುಮಾರು ಎರಡು ಎರಡು ದಶಕಗಳ ಕಾಲ ಮುಟ್ಟಿದ್ದೆಲ್ಲವೂ ಚಿನ್ನ ಎಂಬಂತಾಗಿ ಒಂದರ ಹಿಂದೆ ಒಂದರಂತೆ ಬಾಕ್ಸ್ ಆಫೀಸ್ ಯಶಸ್ಸನ್ನು ಕಾಣುವ ಮೂಲಕ ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವೀ ನಿರ್ಮಾಪಕರಾಗುತ್ತಾರೆ.
1972ರಲ್ಲಿ ಬಿಡುಗಡೆಯಾದ ನಾಗರಹಾವು ಚಿತ್ರದಲ್ಲಿ ಅಮೋಘವಾಗಿ ಅಭಿನಯಿಸಿದ್ದ ವಿಷ್ಣುವರ್ಧನ್ ದ್ವಾರಕೀಶ್ ಕಣ್ಣಿಗೆ ಬಿದ್ದನಂತರ ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಅವರ ಜೋಡಿ ಒಂದರ ಹಿಂದೆ ಒಂದಂತೆ ಅನೇಕ ಕಳ್ಳಾ-ಕುಳ್ಳ ಹಾಸ್ಯಭರಿತ ಸಾಹಸವುಳ್ಳ ಸರಣಿಯ ಚಿತ್ರಗಳನ್ನು ಮಾಡುತ್ತಾ, ಕನ್ನಡ ಚಿತ್ರರಂಗದ ಕಳ್ಳ-ಕುಳ್ಳ ಜೋಡಿ ಎಂದೇ ಪ್ರಸಿದ್ಧವಾಗಿತ್ತು. ಎಪ್ಪತರ ದಶಕದವರೆಗೂ ಮದರಾಸು ಮತ್ತು ಮೈಸೂರಿನ ಕೆಲವು ಸ್ತುಡಿಯೋ ಅಥವಾ ಹೆಚ್ಚೆಂದರೆ ಸುತ್ತ ಮುತ್ತಲಿನ ಹೊರಾಂಗಣಗಳಲ್ಲಿ ಚಿತ್ರೀಕರಣಗೊಳ್ಳುತ್ತಿದ್ದರೆ, 1978ರಲ್ಲಿ ದ್ವಾರಕೀಶ್ ಬಹಳ ಧೈರ್ಯಮಾಡಿ ಕನ್ನಡ ಚಿತ್ರರಂಗದಲ್ಲಿ ಪ್ರಪ್ರಥಮವಾಗಿ ಸಿಂಗಪೂರಿನಲ್ಲಿ ರಾಜಾ ಕುಳ್ಳ ಚಿತ್ರವನ್ನು ಸಿಂಗಾಪುರದಲ್ಲಿ ಚಿತ್ರೀಕರಣ ಮಾಡಿ ಯಶಸ್ವಿಯಾಗುತ್ತಾರೆ. ಅವರು ಭಾರತದ ಹೊರಗೆ ಕನ್ನಡ ಚಲನಚಿತ್ರವನ್ನು ಚಿತ್ರೀಕರಿಸಿದ ಮೊದಲ ನಿರ್ಮಾಪಕ ಎಂದು ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅದೊಂದು ಮೈಲಿಗಲ್ಲಾಗಿದೆ. ದ್ವಾರಕೀಶ್ ಮಂಜುಳ, ವಿಷ್ಣುವರ್ಧನ್ ಆರತಿಯರ ಜೋಡಿ ಅತ್ಯಂತ ಯಶಸ್ವಿಯಾಗುತ್ತದೆ. 1985ರಲ್ಲಿ ವಿಷ್ಣುವರ್ಧನ್ ಮತ್ತು ಭವ್ಯ ನಟಿಸಿದ ನೀ ಬರೆದ ಕಾದಂಬರಿ ಚಿತ್ರದ ಮೂಲಕ ನಿರ್ದೇಶಕರಾಗಿಯೂ ಖ್ಯಾತರಾಗುತ್ತಾರೆ. ಇಷ್ಟರ ಮಧ್ಯೆ ಮಂಕುತಿಮ್ಮ, ಪೆದ್ದಗೆದ್ದ, ಅದೃಷ್ಟವಂತ ಮುಂತಾದ ಚಿತ್ರಗಳಲ್ಲಿ ತಾವೇ ನಾಯಕರಾಗಿಯೂ ನಟಿಸಿ ಸೈ ಎನಿಸಿಕೊಳ್ಳುತ್ತಾರೆ.
ಇವೆಲ್ಲವುಗಳಿಂದ ಉತ್ಸಾಹಿತರಾದ ದ್ವಾರಕೀಶ್ ಮೂರ್ನಾಲ್ಕು ತಮಿಳು ಚಿತ್ರಗಳನ್ನೂ ನಿರ್ಮಿಸಿ ಯಶಸ್ವಿಯಾಗುತ್ತಾರೆ. ಆಫ್ರಿಕಾದಲ್ಲಿ ಶೀಲಾ ಎಂಬ ಚಿತ್ರವನ್ನು ಕನ್ನಡ ತಮಿಳು ಹಿಂದಿಯಲ್ಲಿ ನಿರ್ಮಿಸಿ ಕೈ ಸುಟ್ಟುಕೊಂಡಿದ್ದನ್ನು ಭರಿಸಿಕೊಳ್ಳುವ ಸಲುವಾಗಿ ಕೆಲವು ಯಶಸ್ವಿ ಗುರುಶಿಷ್ಯರು, ಮನೆ ಮನೇ ಕಥೆ ಯಂತಹ ತಮಿಳು ಮತ್ತು ತೆಲುಗು ಚಿತ್ರಗಳನ್ನು ಕನ್ನಡದಲ್ಲಿ ದಿಢೀರ್ ಎಂದು ರಿಮೇಕ್ ಮಾಡಿ ಯಶಸ್ವಿಯಗುವ ಮೂಲಕ ನಷ್ಟವನ್ನು ಸರಿದೂಗಿಸಿಕೊಳ್ಳುತ್ತಾರೆ. 1974-1986ರ ಅವಧಿಯಲ್ಲಿ ಕನ್ನಡದ ಸೂಪರ್‌ಸ್ಟಾರ್ ವಿಷ್ಣುವರ್ಧನ್ ಅವರೊಂದಿಗೆ ಒಂದು ಡಜನ್ ಚಲನಚಿತ್ರಗಳನ್ನು ಮಾಡಿದ್ದಲ್ಲದೇ ಅವುಗಳಲ್ಲಿ ಬಹುತೇಕ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಯಶಸ್ಸು ಏರುತ್ತಾ ಹೋದಂತೆ ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಅವರುಗಳ ಮಧ್ಯದಲ್ಲಿ ಪರಸ್ಪರ ನಾನು ಹೆಚ್ಚು ನೀನು ಹೆಚ್ಚು. ನನ್ನಿಂದ ನೀನು ಎಂಬ ಅಹಂ ನಿಂದಾಗಿ ಆವರಿಬ್ಬರ ನಡುವಿನ ವೈಮನಸ್ಯದಿಂದಾಗಿ ಈ ಜೋಡಿ ಕೆಲಕಾಲ ಪರಸ್ಪರ ದೂರವಾದಾಗಲಿಂದಲೇ ದ್ವಾರಕೀಶ್ ಆವರ ಕೆಟ್ಟ ಸಮಯ ಆರಂಭವಾಗುತ್ತದೆ.
ನನ್ನಿಂದಲೇ ಬೆಳೆದ ವಿಷ್ಣುವರ್ಧನ್ ನನಗೇ ತಿರುಗಿಬಿದ್ದನಲ್ಲಾ ಎಂಬ ಜಿದ್ದಿನಿಂದಾಗಿ ಅವನಿಗಿಂತಲೂ ದೊಡ್ಡ ಮಟ್ಟದ ನಾಯಕನನ್ನು ಬೆಳೆಸುತ್ತೇನೆ ಎಂದು ಅನೇಕ ಹೊಸಾ ನಟರುಗಳನ್ನು ಹಾಕಿಕೊಂಡು ಚಿತ್ರಗಳ ಮೇಲೆ ಚಿತ್ರಗಳನ್ನು ನಿರ್ಮಿಸಿದರೂ ಡ್ಯಾನ್ಸ್ ರಾಜ ಡ್ಯಾನ್ಸ್,ಶೃತಿ, ಶೃತಿ ಹಾಕಿದ ಹೆಜ್ಜೆ ಹೀಗೆ ಮೂರ್ನಾಲ್ಕು ಚಿತ್ರಗಳ ಹೊರತಾಗಿ ಬಹುತೇಕ ಚಿತ್ರಗಳು ನೆಲಕಚ್ಚಿದ ಪರಿಣಾಮ ಆರ್ಥಿಕವಾಗಿ ಬಲವಾದ ಪೆಟ್ಟನ್ನು ಅನುಭವಿಸಬೇಕಾಗುತ್ತದೆ. ಕೆಟ್ಟ ಮೇಲೆ ಹಳೇ ಗಂಡನ ಪಾದವೇ ಗತಿ ಎಂದು ಮತ್ತೆ ವಿಷ್ಣುವರ್ಧನ್ ಜೊತೆ ನಿರ್ಮಿಸಿದ ರಾಯರು ಬಂದರು ಮಾವನ ಮನೆಗೆ ಮತ್ತು ಕಿಲಾಡಿಗಳು ಆರ್ಥಿಕವಾಗಿ ಕೈಹಿಡಿದ ಪರಿಣಾಮವಾಗಿ 2004 ರಲ್ಲಿ ಕನ್ನಡ ಚಿತ್ರರಂಗದಲ್ಲಿಯೇ ಆಭೂತ ಪೂರ್ವ ಯಶಸ್ಸನ್ನು ಕಂಡ ಪಿ ವಾಸು ನಿರ್ದೇಶನದ ವಿಷ್ಣುವರ್ಧನ್, ರಮೇಶ್, ಸೌಂದರ್ಯ ಮತ್ತು ಪ್ರೇಮ ಅವರುಗಳು ಮುಖ್ಯಪಾತ್ರದಲ್ಲಿದ್ದ ಆಪ್ತಮಿತ್ರ ಚಿತ್ರ ಅವರ ಹಿಂದಿನ ಎಲ್ಲಾ ಸೋಲುಗಳ ಮರೆಮಾಚಿದ್ದಂತೂ ಸುಳ್ಳಲ್ಲ.
ದ್ವಾರಕೀಶ್ ಚಿತ್ರಗಳು ಸತತವಾಗಿ ಸೋಲನ್ನು ಅನುಭವಿಸುತ್ತಿದ್ದರೂ ಅವರೆಂದೂ ಧೃತಿಗೆಡದೇ ಮರಳಿ ಯತ್ನವ ಮಾಡು ಮರಳಿ ಯತ್ನವ ಮಾಡು, ದುಡ್ಡು ಕಳೆದ ಕೊಂಡ ಕಡೆಯಲ್ಲೇ ಪುನಃ ದುಡ್ಡನ್ನು ಗಳಿಸುವ ಎನ್ನುವ ತತ್ವದಂತೆ ಅಷ್ಟೆಲ್ಲಾ ವೈಫಲ್ಯಗಳ ನಡುವೆಯೂ ದ್ವಾರಕೀಶ್ ಹತಾಶರಾಗಲಿಲ್ಲ. ಅವರು ಕನ್ನಡ ಚಿತ್ರರಂಗಕ್ಕೆ ಹೊಸ ಮುಖಗಳನ್ನು ಪರಿಚಯಿಸುವ ಮತ್ತು ಹೊಸ ಬಗೆಯ ಸಿನಿಮಾಗಳನ್ನು ಮಾಡುವುದನ್ನು ಮುಂದುವರೆಸಿದರು. ನಿರ್ಮಾಪಕರಾಗಿ ನಟ-ನಟಿಯರಷ್ಟೇ ಅಲ್ಲ- ಹೊಸ ನಿರ್ದೇಶಕರು ಮತ್ತು ಇತರ ತಂತ್ರಜ್ಞರಿಗೂ ಅವಕಾಶ ಕೊಟ್ಟಿದ್ದಾರೆ ಮತ್ತು ಅರೀತಿಯಾಗಿ ಪ್ರಸಿದ್ಧರಾದವರೆಲ್ಲರೂ ಇಂದಿಗೂ ದ್ವಾರಕೀಶ್ ಅವರನ್ನೇ ತಮ್ಮ ತಮ್ಮ ಗಾಡ್ ಫಾದರ್ ಎಂದು ಪರಿಗಣಿಸುತ್ತಾರೆ ಎನ್ನುವುದು ಗಮನಾರ್ಹವಾಗಿದೆ. ಇದುವರೆವಿಗೂ ಅವರು 50ಕ್ಕೂ ಹೆಚ್ಚಿನ ಕನ್ನಡ ಚಲನಚಿತ್ರಗಳನ್ನು ನಿರ್ಮಿಸಿದ್ದಾರಲ್ಲದೇ ಸುಮಾರು 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾನಾ ಪಾತ್ರಗಳಲ್ಲಿ ನಟಿಸಿದ್ದಾರೆ.
ಕಿಶೋರ್ ಕುಮಾರ್ ಅವರನ್ನು ಕನ್ನಡ ಚಲನಚಿತ್ರೋದ್ಯಮಕ್ಕೆ ಕರೆತಂದವರೂ ದ್ವಾರಕೀಶ್ ಅವರೇ. ಕಿಶೋರ್ ಕುಮಾರ್ ಅವರು ಹಾಡಿದ ಆಡು ಆಟ ಆಡು ಹಾಡು ಅತ್ಯಂತ ಜನಪ್ರಿಯವಾಯಿತು. ಆಪ್ತಮಿತ್ರ ಚಿತ್ರವಂತೂ ಬೆಂಗಳೂರಿನ ಸಂತೋಷ್ ಮತ್ತು ಮೈಸೂರಿನ ರಣಜಿತ್‌ನಲ್ಲಿ ಚಿತ್ರಮಂದಿರಗಳಲ್ಲಿ ಪ್ರತಿ ದಿನ ನಾಲ್ಕು ಪ್ರದರ್ಶನಗಳೊಂದಿಗೆ ಒಂದು ವರ್ಷ ಪ್ರದರ್ಶನವನ್ನು ಯಶಸ್ವಿಯಾಗಿ ಪೂರೈಸಿದ ಮೊದಲ ಕನ್ನಡ ಚಲನಚಿತ್ರವಾಗಿದೆ. ಆಪ್ತಮಿತ್ರ ಚಿತ್ರದ ಹೆಸರಿಗೆ ಅನ್ವರ್ಥವಾಗಿ ವಿಷ್ಣುವರ್ಧನ್ ಮತ್ತೊಮ್ಮೆ ಅಪ್ತಮಿತ್ರನಾಗಿ ಹೊರಹೊಮ್ಮಿ, ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಮೊತ್ತದ ಹಣವನ್ನು ಗಳಿಸಿಕೊಡುವ ಮೂಲಕ ಅವರ ಹಿಂದಿನ ಚಿತ್ರಗಳಿಂದ ಅಗಿದ್ದ ನಷ್ಟವನ್ನೆಲ್ಲಾ ಮತ್ತು ಎಲ್ಲಾ ಸಾಲಗಳನ್ನು ತೀರಿಸಲು ಸಹಾಯ ಮಾಡಿತು. ಈ ಚಿತ್ರ ವಿಷ್ಣುವರ್ಧನ್ ಮತ್ತು ದ್ವಾರಕೇಶ್ ಅವರ ಯಶಸ್ವಿ ಜೋಡಿಯ ಮರು-ಆಗಮನವಾಗಿ ಗುರುತಿಸಲ್ಪಟ್ಟರೆ, ದುರಾದೃಷ್ಠವಷಾತ್ ಇದು ನಟಿ ಸೌಂದರ್ಯ ಅವರ ಕೊನೆಯ ಚಿತ್ರವಾಗಿ ಹೋಗಿದ್ದು ಬೇಸರದ ಸಂಗತಿಯಾಗಿತ್ತು.
ಏಪ್ರಿಲ್ 26, 1967 ರಂದು ದ್ವಾರಕೀಶ್ ತಮ್ಮ ಸಂಬಂಧಿಗಳೇ ಆಗಿದ್ದ ಅಂಬುಜಾ ಅವರನ್ನು ಮದುವೆಯಾಗಿ ಅವರ ಸುಂದರ ದಾಂಪತ್ಯದ ಫಲವಾಗಿ 4 ಗಂಡುಮಕ್ಕಳಿದ್ದಾರೆ. ಮೊದಲನೇ ಮಗ ತಂದೆಯೊಂದಿಗೆ ಚಿತ್ರನಿರ್ಮಾಣದಲ್ಲಿ ತೊಡಗಿದ್ದರೆ, ಉಳಿದವರು ಒಂದೆರದು ಚಿತ್ರಗಳಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಿ ನಂತರ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ಕೆಲ ವರ್ಷಗಳ ಹಿಂದೆ ಶೈಲಜ ಎಂಬುವರನ್ನೂ ಸಹಾ ಎರಡನೇ ಮದುವೆ ಮಾಡಿಕೊಂಡು ಇಬ್ಬರ ಹೆಂಡಿರ ಮುದ್ದಿನ ರಾಜನಾಗಿದ್ದಾಗಲೇ ಕೆಲವೇ ತಿಂಗಳ ಹಿಂದೆ ಅವರ ಮೊದಲನೇ ಪತ್ನಿ ಅಂಬುಜ ಅವರು ಅಗಲಿದ್ದಾರೆ.
ಇತ್ತೀಚೆಗೆ ಅವರ ಬ್ಯಾನರಿನ 50 ನೇ ಚಿತ್ರವಾಗಿ ನಿರ್ಮಿಸಿದ ಚೌಕ ಕೂಡಾ ಅತ್ಯಂತ ಯಶಸ್ವಿಯಾಗಿತ್ತು. ಇದೇ ಚಿತ್ರದ ಮೂಲಕ ಸುಧೀರ್ ಅವರ ಎರಡನೇ ಮಗ ತರುಣ್ ಚೊಚ್ಚಲು ಚಿತ್ರಕ್ಕೇ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರೆ ಅಪ್ಪಾ ಐ ಲವ್ ಯೂ ಪಾ.. ಹಾಡಿನಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದ ಮತ್ತೊಬ್ಬ ಹಿರಿಯ ನಟ ಮತ್ತು ನಿರ್ದೇಶಕ ಕಾಶೀನಾಥ್ ಅವರ ಕಡೆಯ ಚಿತ್ರವಾಗಿದ್ದು ದುರಾದೃಷ್ಟವಾಗಿತ್ತು.
ಹೀಗೆ ಕನ್ನಡ ಚಿತ್ರರಂಗಕ್ಕೆ ಹಾಸ್ಯ ನಟನಾಗಿ ಪ್ರವೇಶಿಸಿ ನಾಯಕ ನಟ, ಪೋಷಕ ನಟನಾಗಿದ್ದಲ್ಲದೇ, ನಿರ್ಮಾಪಕ, ನಿರ್ದೇಶಕರಾಗಿ ಹಲವಾರು ಹೊಸಾ ಪ್ರತಿಭೆಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಲ್ಲದೇ ಕನ್ನಡ ಚಿತ್ರರಂಗದಲ್ಲಿ ಅನೇಕ ಪ್ರಥಮಗಳಿಗೆ ಕಾರಣೀಭೂತರಾದ ದ್ವಾರಕೀಶ್ ಅವರು ನಮ್ಮ ಹೆಮ್ಮೆಯ ಕನ್ನಡ ಕಲಿಗಳೇ ಸರಿ.
ಏನಂತೀರೀ?
ನಿಮ್ಮವನೇ ಉಮಾಸುತ
ಕರ್ನಾಟಕದ ಕುಳ್ಳ ಎಂದೇ ಖ್ಯಾತಿ ಪಡೆದಿರುವ ದ್ವಾರಕೀಶ್ ನಮ್ಮ ಕನ್ನಡಿಗರು ಎನ್ನುವುದು ಕೂಡ ಹೆಮ್ಮೆಯ ವಿಷಯ….. ಇಡೀ ಜೀವನವನ್ನು ಚಿತ್ರರಂಗಕ್ಕೆ ಮೀಸಲಿಟ್ಟ ಸಾಹಸಿ ಎಂದೇ ಹೇಳಬಹುದು….. ಚಿತ್ರರಂಗ ಒಂದು ವ್ಯಾಪಾರಿ ಉದ್ದಿಮೆ..ಏಳು ಬೀಳುಗಳು ಸಾಮಾನ್ಯ…. ಯಾವುದಕ್ಕೂ ಜಗ್ಗದೆ ಜಯ,ಅಪಜಯ ಗಳನ್ನು ಸಮಾನವಾಗಿ ಕಂಡ ದ್ವಾರಕೀಶ್ ನೂರ್ಕಾಲ ಬಾಳಲಿ.
LikeLiked by 1 person
ಸತ್ಯವಾದ ಮಾತು ಸರ್. ಕಳೆದು ಕೊಂಡ ಕಡೆಯಲ್ಲಿ ಪಡೆದುಕೊಳ್ಳಬೇಕು ಎನ್ನುವ ದ್ವಾರಕೀಶ್ ಅವರ ಛಲ ನಿಜಕ್ಕೂ ಅನನ್ಯವೇ ಸರಿ
LikeLike