ಮೂಲತಃ ಕೇರಳದ ಶ್ರೋತ್ರೀಯರು, ಜ್ಯೋತಿಷಿಗಳು ಹಾಗೂ ವೇದಪಾರಂಗತರಾಗಿದ್ದ ಶ್ರೀ ಅನಂತ ಪದ್ಮನಾಭ ನಂಬೂದರಿ ಮತ್ತು ಪದ್ಮಾಂಬಳ್ ಎಂಬ ದಂಪತಿಗಳಿಗೆ ಬಹಳ ದಿನಗಳ ಕಾಲ ಮಕ್ಕಳಾಗದೇ ನಂತರದಲ್ಲಿ ಭಗವಂತನ ಅನುಗ್ರಹದಿಂದ ಬಾಲಕನೊಬ್ಬನ ಜನನವಾಗಿ ಆತನಿಗೆ ಕುಮಾರಸ್ವಾಮಿ ಎಂದು ನಾಮಕರಣ ಮಾಡುತ್ತಾರೆ. ದುರಾದೃಷ್ಟವಷಾತ್ ಆ ಬಾಲಕ ಸುಮಾರು 10-12 ವರ್ಷಗಳ ಕಾಲ ಅಸ್ವಸ್ಥತೆಯಿಂದಲೇ ನರಳುತ್ತಾ ಮಾತನಾಡಲಾಗದೇ ನಡೆಯಲೂ ಅಗದೇ ಎಲ್ಲಾ ಕಡೆಯಲ್ಲೂ ಆತನನ್ನು ತಾಯಿಯೇ ಎತ್ತು ಕೊಂಡು ತಿರುಗಾಡ ಬೇಕಾದಂತಹ ಪರಿಸ್ಥಿತಿ ಇರುತ್ತದೆ. ಆಗ ಆ ವೃದ್ಧ ದಂಪತಿಗಳಿಬ್ಬರೂ ಕೊಲ್ಲೂರಿನ ಮೂಕಾಂಬಿಕ ದೇವಿಗೆ ಹರಕೆ ಹೊತ್ತು ಅಲ್ಲಿಗೆ ಬಂದು ಮಗನಿಗೆ ಆರೋಗ್ಯಭಾಗ್ಯ ನೀಡು ಎಂದು ತಾಯಿಯಲ್ಲಿ ಶರಣಾಗುತ್ತಾರೆ. ದೇವಿಯ ಕೃಪೆ ಮತ್ತು ಅಲ್ಲಿನ ವೈದ್ಯರ ಚಿಕಿತ್ಸೆಯಿಂದ ನಿಧಾನವಾಗಿ ಬಾಲಕನಿಗೆ ಮಾತಾಡುವ ಮತ್ತು ಎದ್ದು ನಡೆದಾಡುವ ಶಕ್ತಿ ಪ್ರಾಪ್ತವಾಗುತ್ತದೆ. ಅದೇ ಸಮಯದಲ್ಲಿ ಅಲ್ಲಿಗೆ ಮಂತ್ರಾಲಯದಿಂದ ಬಂದಿದ್ದ ಯತಿಗಳು ಆ ಬಾಲಕನಿಗೆ ಗುರು ರಾಘವೇಂದ್ರ ಕೃಪಾಶೀರ್ವಾದವು ಸದಾಕಲವೂ ಇರಲೆಂದು ರಾಘವೇಂದ್ರ ಎಂದು ಮರುನಾಮಕರಣ ಮಾಡಿ ಹರಸುತ್ತಾರೆ.
ಬಾಲಕನು ತನ್ನ ವಯೋಸಹಜ ಹುಡುಗರೊಂದಿಗೆ ಬೆರೆಯುವಷ್ಟರಲ್ಲಿ ಅವರ ಕುಟುಂಬ ಬಾರ್ಕೂರಿನ ಶ್ರೀ ನರಸಿಂಹಯ್ಯ ಮತ್ತು ಪುತಲೀಬಾಯಿ ಎಂಬುವರ ಆಶ್ರಯಕ್ಕೆ ಬರುತ್ತಾರೆ. ಅದೇ ಸಮಯದಲ್ಲಿ ರಾಘವೇಂದ್ರರ ತಾಯಿಯವರು ವಿಧಿವಶರದಾಗ ಅವನ ತಂದೆ ಅವನನ್ನು ಶ್ರೀ ನರಸಿಂಹಯ್ಯ ದಂಪತಿಗಳ ಸುಪರ್ದಿಗೇ ಬಿಟ್ಟು ಧ್ಯಾನ ಮಾಡುವ ಸಲುವಾಗಿ ಹಿಮಾಲಯಕ್ಕೆ ಹೊರಟು ಹೋಗುತ್ತಾರೆ.
ಬಾರ್ಕೂರಿನಲ್ಲಿ ಪುತಲೀಬಾಯಿಯವರು ರಾಘವೇಂದ್ರನನ್ನು ಅತ್ಯಂತ ಜತನದಿಂದ ನೋಡಿಕೊಳ್ಳುತ್ತಿದ್ದರೂ, ಆತನಿಗೆ ದೇವರನ್ನು ಕಾಣುವ ಆಸೆ. ಅದಕ್ಕಾಗಿ ಆತ ದೇಶದಾದ್ಯಂತ ಮಠ, ಮಂದಿರಗಳ ಅಲೆದಾಡುತ್ತಾ ಕಂಡ ಕಂಡ ಸಾಧು ಸಂತರನ್ನು ಭೇಟಿಯಾಗಿ ಅವರಿಂದ ಸೂಕ್ತವಾದ ಸಮಾಧಾನ ದೊರೆಯದಿದ್ದಾಗ, ಸ್ವಾಮಿ ಶಿವಾನಂದರ ಪರಿಚಯವಾಗಿ ಅವರ ಸನ್ನಿಧಿಯಲ್ಲಿ ಬ್ರಹ್ಮಚರ್ಯವನ್ನು ಸ್ವೀಕರಿಸುವುದಲ್ಲದೇ, ಧ್ಯಾನ ಮಾರ್ಗವನ್ನು ಹಿಡಿದಿದ್ದಲ್ಲದೇ, ಅವರ ಮಾರ್ಗದರ್ಶನದ ಮೇರೆಗೆ ಬರೋಡಾಕ್ಕೆ ಹೋಗಿ, ಪ್ರೊ.ರಾಜರತ್ನ ಮಾಣಿಕ್ರಾಯ್ರವರ ಬಳಿಗೆ ಹೋಗಿ ಯೋಗ ಮತ್ತು ದೈಹಿಕ ಶಿಕ್ಷಣದ ತರಬೇತಿಯನ್ನು ಪಡೆದು ಬಿ.ಪಿ.ಇ ಪದವಿಯನ್ನು ಗಳಿಸುತ್ತಾರೆ. ಜ್ಞಾನಾರ್ಜನೆಯ ಸಲುವಾಗಿ ಹಾಗೆ ಪ್ರಯಾಣ ಮುಂದುವರೆಸಿ ಕರಾಚಿ ತಲುಪಿ ಅಂದಿನ ಅತ್ಯಂತ ಪ್ರಸಿದ್ಧ ಆಯುರ್ವೇದ ತಜ್ಞರಾದ ಪಂಡಿತ್ ಲಕ್ಷ್ಮಣಬಾಬಾರವರಲ್ಲಿ ಆಯುರ್ವೇದ ಮತ್ತು ಯುನಾನಿ ವೈದ್ಯಕೀಯ ಪದ್ದತಿಯ ಆಭ್ಯಾಸ ಮಾಡುತ್ತಾರೆ
ಅದೇ ಸಮಯದಲ್ಲಿ ದೇಶಾದ್ಯಂತ ಗಾಂಧಿಯವರ ನೇತೃತ್ವದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಚಳುವಳಿಯಿಂದ ಆಕರ್ಷಿತರಾಗಿ ಗ್ರಾಮೀಣ ಭಾರತದ ಸೇವೆಗಾಗಿ ತಮಗೆ ಗೊತ್ತಿದ್ದ ಧ್ಯಾನ, ಯೋಗ ಮತ್ತು ಆರ್ಯುವೇದದ ಮೂಲಕ ಜನರ ಸೇವೆಗಾಗಿ ತಮ್ಮನ್ನು ತಾವೇ ಮುಡಿಪಾಗಿಡಿಸಿಕೊಂಡು ಅಲ್ಲಿಂದ ಕರ್ನಾಟಕದ ಕರಾವಳಿ ಮತ್ತು ಮಧ್ಯ ಕರ್ನಾಟಕ ಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಯುವಕರಿಗಾಗಿ ೪೧ ದಿನಗಳ ಯೋಗ ಶಿಬಿರಗಳನ್ನು ನಡೆಸುತ್ತಾ, ಜೀವನ ಮೌಲ್ಯಗಳನ್ನು ಜಾಗತೃಗೊಳಿಸುವುದರಲ್ಲಿ ತೊಡಗಿಸಿಕೊಂಡರು. ಇದೇ ರೀತಿ ಊರೂರು ಸುತ್ತುತ್ತಾ ರಾಘವೇಂದ್ರರು ೧೯೪೨ ರ ಡಿಸೆಂಬರ್ ತಿಂಗಳಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿ ಎಂಬ ಗ್ರಾಮದಲ್ಲಿ ತಮ್ಮ ಶಿಬಿರವನ್ನು ಹಮ್ಮಿಕೊಂಡರು. ದುರಾದೃಷ್ಟವಶಾತ್ ಕಾಲರಾ ಮಾರಿಯ ಹಾವಳಿ ಆರಂಭವಾಗಿ, ಆ ಮಲ್ಲಾಡಿಹಳ್ಳಿಯ ಅನೇಕರು ಕಾಲರಾದಿಂದಾಗಿ ಸಾವನ್ನಪ್ಪಿದಾಗ, ರಾಘವೇಂದ್ರರು ತಮಗೆ ಗೊತ್ತಿದ್ದ ಆಯುರ್ವೇದ ಪದ್ದತಿಯಲ್ಲಿ ಪ್ರತಿ ಮನೆಗಳಿಗೂ ಹೋಗಿ ಔಷಧೋಪಚಾರಗಳನ್ನು ನೀಡಿದ ಫಲವಾಗಿ ಅನೇಕ ರೋಗಿಗಳು ಆರೋಗ್ಯವಾದರು. ಅದೇ ರೀತಿ ತಮ್ಮ ಸುತ್ತಮುತ್ತಲೂ ಪರಿಸರದ ಸ್ವಚ್ಛತೆಗಳ ಬಗ್ಗೆ ಮನದಟ್ಟು ಮಾಡಿಕೊಟ್ಟಿದ್ದಲ್ಲದೇ, ಶುಚಿತ್ವಕ್ಕೆ ಹೆಚ್ಚು ಆದ್ಯತೆ ಕೊಟ್ಟು, ಬಿಸಿಯಾದ, ತಾಜಾ ಆಹಾರ ಸೇವನೆಯ ಮಹತ್ವವನ್ನು ತಿಳಿಸಿಕೊಟ್ಟರು. ಹೀಗೆ ಅಲ್ಲಿನ ಶಿಬಿರ ಮುಗಿಸಿಕೊಂಡು ಮತ್ತೊಂದು ಗ್ರಾಮಕ್ಕೆ ಹೋಗುವ ಮೊದಲು ತಮ್ಮ ಮಾಳೇನಹಳ್ಳಿಯ ಗುರುಗಳಾದ ಶ್ರೀ ಶಂಕರ ಲಿಂಗ ಭಗವಾನರ ಆಶೀರ್ವಾದ ಪಡೆಯಲು ಹೋದಾಗ, ಶ್ರೀಗಳು ಯಾವುದೇ ನಾಗರಿಕ ಸೌಲಭ್ಯತೆಗಳೇ ಇಲ್ಲದಿದ್ದಂತಹ ಮಲ್ಲಾಡಿಹಳ್ಳಿಯಲ್ಲಿ ಸ್ವಚ್ಚತೆಯ ಬಗ್ಗೆ ಜಾಗೃತಿ ಮೂಡಿಸಿ ಇಡೀ ರಾಷ್ಟ್ರದ ಗಮನ ಸೆಳೆಯುವಂತೆ ಮಾಡಿರುವ ಕಾರಣ, ನಿಮ್ಮ ಯೋಗದನವೆಲ್ಲವೂ ಇದೇ ಊರಿನಲ್ಲೇ ಕಳೆಯಬೇಕೆಂದು ಕೋರಿದಾಗ, ಶ್ರೀ ಶಂಕರಲಿಂಗ ಭಗವಾನರ ಆಜ್ಞಾನುಸಾರ ಮಲಾಡಿಹಳ್ಳಿಯಲ್ಲೇ ತಮ್ಮ ಇಡೀ ಜೀವನವನ್ನು ಕಳೆಯಲು ರಾಘವೇಂದ್ರರು ನಿರ್ಧರಿಸಿದರು.
ಚಿಕ್ಕವಯಸ್ಸಿನಲ್ಲಿಯೇ ತಂದೆ ತಾಯಂದಿರ ಪ್ರೀತಿಯನ್ನು ಕಳೆದುಕೊಂಡು ಅನಾಥರಂತೆ ಮತ್ತೊಬ್ಬರ ಮನೆಯಲ್ಲಿ ಬೆಳೆದ್ದನ್ನು ನೆನಪಿಸಿಕೊಂಡು ಮಲ್ಲಾಡಿ ಹಳ್ಳಿಯ ಸುತ್ತಮುತ್ತಲಿನ ಅನಾಥರ, ಬಲಹೀನರರು, ಬಡವರು ಮತ್ತು ರೋಗಿಗಳಿಗೆ ಆ ರೀತಿಯ ತೊಂದರೆ ಆಗದಿರಲೆಂದು ಮಲ್ಲಾಡಿಹಳ್ಳಿಯಲ್ಲೇ 1943ನೇ ಇಸವಿ ಮಹಾಶಿವರಾತ್ರಿಯ ಶುಭದಿನದಂದು ಊರಿನವರು ಪ್ರೀತಿಯಿಂದ ನೀಡಿದ ಒಂದು ನಿವೇಶನ, ಮತ್ತು ಸಂಕಜ್ಜಿ ಎಂಬ ಹಿರಿಯರು ನೀಡಿದ ಒಂದು ಕಾಣಿಕೆಯ ಗಂಟಿನಿಂದ ಅಸಂಖ್ಯಾತ ಜನರ ಬದುಕಿಗೆ ಅಧಾರವಾದ ಆ ತಾಣವಾಗಿ ಅನಾಥಸೇವಾಶ್ರಮ ಎಂಬ ಅನಾಥ ಆಶ್ರಮವೊಂದನ್ನು ಆರಂಭಿಸಿ, ಅಲ್ಲಿ ಬಡವರಿಗೆ ವಿದ್ಯಾ ಬುದ್ಧಿಯನ್ನು ಕಲಿಸಿ, ಅವರ ಜೀವನ ಶೈಲಿಯನ್ನು ಸುಧಾರಿಸಿ, ಜೀವನದಲ್ಲಿ ಬೆಳಕು ಮೂಡಿಸುವಂತಹ ಕಾರ್ಯಗಳನ್ನು ಯೋಜಿಸಿಕೊಂಡರು.
ಸೇವಾಶ್ರಮದಲ್ಲಿ ಭಾರತಿಯ ಪರಂಪರೆಯ ಯೋಗ, ವ್ಯಾಯಾಮಗಳನ್ನೂ ಅತ್ಯಂತ ನಿಷ್ಥೆ ಪ್ರೀತಿ ವಿಶ್ವಾಸದಿಂದ ಬೋಧಿಸಿ ಅಲ್ಲಿನ ಗ್ರಾಮೀಣ ಜನರಿಂದ ವ್ಯಾಯಾಮದ ಮೇಷ್ಟ್ರು ಎಂದೇ ಪ್ರೀತಿಯಿಂದ ಕರೆಸಿಕೊಳ್ಳುತ್ತಲೇ, ಸ್ವತಃ ತಾವೇ 5 ದಶಕಗಳ ಕಾಲ ತಪ್ಪದೇ ಔಷಧಿಗಳನ್ನೂ ವಿತರಿಸತೊಡಾಗಿದರು. ಮಠದ ರೀತಿಯಲ್ಲಿದ್ದರೂ, ಯಾವುದೇ ಧಾರ್ಮಿಕ ಸಾಂಪ್ರದಾಯಿಕ ಕಟ್ಟು ಪಾಡುಗಳಿಲ್ಲದೇ, ಜಾತಿಯ ಧರ್ಮದ ಬೇಧವಿಲ್ಲದೇ, ಜನರ ಕಷ್ಟ ಸುಖಃಗಳಿಗೆ ಸ್ಪಂದಿಸುತ್ತಿದ್ದ ರಾಘವೇಂದ್ರರನ್ನು ಮಲ್ಲಾಡಿಹಳ್ಳಿಯ ಜನತೆ, ಸ್ವಾಮೀಜಿ ಎಂದು ಪ್ರೀತಿಯಿಂದ ಕರೆಯಲಾರಂಭಿಸಿ ರಾಘವೇಂದ್ರ ಸ್ವಾಮಿಗಳು ಎನಿಸಿಕೊಂಡರೆ, ರಾಘವೇಂದ್ರರು ಮಾತ್ರಾ ತಮ್ಮನ್ನು ತಾವು ತಿರುಕ ಎಂದೇ ಕರೆದುಕೊಂಡಿದ್ದಲ್ಲದೇ, ತಿರುಕ ಎನ್ನುವ ಹೆಸರಿನಿಂದಲೇ, ಯೋಗ, ಆಯುರ್ವೇದ, ಮನೆಮದ್ದುಗಳ ಹಲವಾರು ಪುಸ್ತಕಗಳನ್ನು ರಚಿಸುವ ಮೂಲಕ ಜನಪ್ರಿಯರಾದರು.
ರಾಘವೇಂದ್ರ ಸ್ವಾಮೀಜಿಯವರ ನಿಸ್ವಾರ್ಥ ಸೇವೆ ಮತ್ತು ವ್ಯಕ್ತಿತ್ವದಿಂದ ಪ್ರಭಾವಿತರಾದ, ಹೊಳಲ್ಕೆರೆಯ ಪ್ರಾಥಮಿಕ ಶಾಲೆಯ ಉಪಾಧ್ಯಾಯ ವೃತ್ತಿಯಲ್ಲಿದ್ದ ಸೂರ್ಯನಾರಾಯಣರಾವ್ ರಾಘವೇಂದ್ರ ಸ್ವಾಮಿಗಳ ಜೊತೆಗೆ ಸೇರಿಕೊಂಡುಸೂರ್ ದಾಸ್ ಜೀ ಎಂಬ ಹೆಸರಾಗಿಸಿಕೊಂಡು ಇಬ್ಬರೂ ಸೇರಿ ಒಟ್ಟೊಟ್ಟಿಗೆ ಆಶ್ರಮವನ್ನು ಬೆಳಸತೊಡಗಿದರು. ಉಳಿದ ಸ್ವಾಮೀಜಿಗಳಂತೆ ಕಾವಿಧಾರಿಯಾಗದೇ, ಕಾಯಕವೇ ಕೈಲಾಸ ಎಂಬು ತತ್ವದಡಿಯಲ್ಲಿ ಕೇವಲ ಖಾದಿ ಬಟ್ಟೆಯ ಬಿಳಿಯ ಚಡ್ಡಿ ಮತ್ತು ಅರ್ಧ ತೋಳಿನ ಅಂಗಿ ಧರಿಸುತ್ತಾ ಸರಳ ಜೀವನದಿಂದಲೇ, ಜನರ ಸೇವೆಗಾಗಿಯೇ ತಮ್ಮ ಬದುಕನ್ನು ಮೀಸಲಾಗಿಟ್ಟರು. ಆಶ್ರಮ ನಡೆಸಲು ಜೋಳಿಗೆ ಹಿಡಿದು ಹೊರಟರೆ, ರಾಘವೇಂದ್ರರ ಸೇವಾಕೈಂಕರ್ಯದಿಂದ ಪ್ರಭಾವಿತಗೊಂಡಿದ್ದ ಜನರು ಉದಾರವಾಗಿ ದೇಣಿಗೆ ನೀಡಿದರು. ಜಾತಿ, ಮತ, ಪಂಥಗಳ ಹಂಗಿಲ್ಲದೆ ಆ ಆಶ್ರಮದಲ್ಲಿ ಎಲ್ಲಾ ವಿದ್ಯಾರ್ಥಿಗಳೂ ಒಟ್ಟಿಗೆ ವಿದ್ಯಾಭ್ಯಾಸದ ಜೊತೆಗೆ ಊಟ ಒಂದೇ ಕಡೆಯಾದರೂ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕ ವಸತಿಗೃಹ ವ್ಯವಸ್ಥೆ ಹೊಂದಿದ್ದ ಆ ಶಾಲೆಗೆ ಸುತ್ತಮುತ್ತಲ ಗ್ರಾಮಗಳ ಮಕ್ಕಳಲ್ಲದೇ ಕರ್ನಾಟಕದ ಬೇರೆ ಬೇರೆ ಭಾಗಗಳಿಂದಲೂ ವಿದ್ಯಾರ್ಥಿಗಳು ಬಂದು ಕಲಿಯಲಾರಂಭಿಸಿದರು.
1958 ರಲ್ಲಿ ಸರ್ವಸೇವಾ ಬೋಧಕ ಶಿಕ್ಷಣಾಲಯ-ಎಂಬ ಶಿಕ್ಷಕರ ತರಬೇತಿ ಸಂಸ್ಥೆ, 1969 ರಲ್ಲಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳನ್ನು ಒಳಗೊಂಡ ಪದವಿಪೂರ್ವ ಕಾಲೇಜು, 1979 ರಲ್ಲಿ ವೃತ್ತಿಶಿಕ್ಷಣ ವಿಭಾಗ, 1968 ರಲ್ಲಿ ಆಶ್ರಮದ ರಜತ ಮಹೋತ್ಸವದ ನೆನಪಿಗಾಗಿ ರಜತ ಮಹೋತ್ಸವ ದೈಹಿಕ ಶಿಕ್ಷಣ ಸ್ವಾಮೀಜಿವವರ ಶತಮಾನೋತ್ಸವದ ನೆನಪಾಗಿ ಶತಮಾನೋತ್ಸವ ದೈಹಿಕ ಶಿಕ್ಷಣ ಮಹಾವಿದ್ಯಾಲಯಗಳನ್ನು ಪ್ರಾರಂಭಿಸಿದರು. ಆಶ್ರಮದ ಆವರಣದಲ್ಲಿ ವಿಶಿಷ್ಠವಾದ ಧನ್ವಂತರಿ ಆಸ್ಪತ್ರೆ ಸಮುಚ್ಛಯ ಮತ್ತು ವಿಶ್ವಯೋಗ ಮಂದಿರಗಳನ್ನು ಕಟ್ಟಿಸಿದರು.
ಈ ಆಶ್ರಮದ ಹೊರತಾಗಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯ ದುಮ್ಮಿಯಲ್ಲಿ, ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ದೇವರಹಳ್ಳಿಯಲ್ಲಿ, ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಶೆಟ್ಟಿಹಳ್ಳಿಗಳಲ್ಲಿ ಪ್ರೌಢಶಾಲೆಗಳನ್ನು ಆರಂಭಿಸಲಾಯಿತು. ನಂತರ ಮೈಸೂರಿನ ಕುವೆಂಪು ನಗರದಲ್ಲಿ ಶ್ರೀ ರಾಘವೇಂದ್ರ ಗುರುಕುಲ ವಿದ್ಯಾಪೀಠ ಸ್ವತಂತ್ರ ವಿಜ್ಞಾನ ಪಿ.ಯು.ಕಾಲೇಜು ಹಾಗೂ ಸಮೀರ ಶಿಕ್ಷಕರ ತರಬೇತಿ ಕೇಂದ್ರಗಳು ಸ್ಥಾಪಿತವಾಗಿ ಆಶ್ರಮದ ಮೂಲೋದ್ದೇಶವನ್ನು ಮುಂದುವರೆಸಿಕೊಂಡು ಹೋಗಲಾಗುತ್ತಿದೆ.
ಆಶ್ರಮದ ಆವರಣದಲ್ಲಿ ವಿವಿಧ ಬಗೆಯ ಸಸ್ಯಮೂಲಿಕೆಗಳ ಔಷಧಿವನಗಳನ್ನು ರಾಘವೇಂದ್ರ ಸ್ವಾಮಿಗಳು ತಮ್ಮ ಕೈಯಾರೆ ಬೆಳೆಸಿದ್ದಲ್ಲದೇ ತಮ್ಮ ಚಿಕಿತ್ಸೆಗೆ ಅವಶ್ಯಕವಾಗಿದ್ದ ಗಿಡಮೂಲಿಕೆಗಳನ್ನು ಅದೇ ತೋಟದಿಂದ ಪಡೆದುಕೊಳ್ಳುತ್ತಿದ್ದರು.
ಪತಂಜಲಿ ಮಹರ್ಷಿಗಳ ಹೆಸರಿನಲ್ಲಿ ಮೂಲಯೋಗ ಶಿಕ್ಷಣ ಶಿಬಿರ ಎಂದು ಪ್ರತಿ ವರ್ಷ ಅಕ್ಟೋಬರ್ ತಿಂಗಳ 4 ರಿಂದ 25ರವರೆಗೆ 21 ದಿನಗಳ ಯೋಗ ಶಿಬಿರವನ್ನು ಆರಂಭಿಸಿ ಈ ಶಿಬಿರಕ್ಕೆ ದೇಶದ ನಾನಾ ಭಾಗಗಳಿಂದ ಬಂದ ಸಾವಿರಾರು ಆಸಕ್ತರು ಇದರ ಲಾಭವನ್ನು ಪಡೆದುಕೊಂಡರು. ಪ್ರತೀ ವರ್ಷದ ಶ್ರಾವಣಮಾಸದಲ್ಲಿ ಒಂದು ತಿಂಗಳುಗಳ ಕಾಲ ಮೌನವ್ರತವನ್ನು ಆಚರಿಸುತ್ತಿದ್ದದ್ದು ವಿಶೇಶವಾಗಿತ್ತು.
ಮಲ್ಲಾಡಿಹಳ್ಳಿಯ ರಾಘವೇಂದ್ರ ಸ್ವಾಮಿಗಳು 4 ಕಾವ್ಯಗಳು, 9 ಕಾದಂಬರಿಗಳು, 12 ನಾಟಕಗಳು, 2 ಗೀತ ನಾಟಕ, 7 ಏಕಪಾತ್ರಾಭಿನಯ, 1 ವಚನ ಸಾಹಿತ್ಯ 3 ಕಥಾ ಸಂಕಲನ, 4 ಆಯುರ್ವೇದ, ಬೃಹತ್ ಯೋಗ ದರ್ಶನದ ಯೋಗ ಸಂಪುಟವೂ ಸೇರಿದಂತೆ 4 ಯೋಗ, 5 ವ್ಯಾಯಾಮ, 2 ಇತರೆ 1 ಆತ್ಮ ನಿವೇದನಯೂ ಸೇರಿದಂತೆ ಜೋಳಿಗೆ ಪವಾಡ ಎಂಬ ಅವರದ್ದೇ ಆದ ರಾಘವೇಂದ್ರರ ಆತ್ಮಚರಿತ್ರೆಯ ಪುಸ್ತಕಗಳನ್ನು ಈ ಸಾರಸ್ವಾತ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ.
ಸ್ವಾಮೀಜಿಗಳ ಈ ಪರಿಯ ಸಾಧನೆಗಳನ್ನು ಗುರುತಿಸಿ ಕರ್ನಾಟಕ ಸರ್ಕಾರ, ಅವರ ಹೆಸರನ್ನು ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳಿಗೆ ಕೇಂದ್ರಸರ್ಕಾರಕ್ಕೆ ಶಿಫಾರಸ್ಸು ಮಾಡಲು ಮುಂದಾದಾಗ, ಅಯ್ಯೋ ಅಂತಹ ಪ್ರಶಸ್ತಿ ಪುರಸ್ಕಾರಳು ನನಗೇನೂ ಬೇಡ. ಆಶ್ರಮದ ದೈನಂದಿನ ಚಟುವಟಿಕೆಗಳಿಗೆ ಅರ್ಥಿಕ ನೆರವಿನ ಅವಶ್ಯಕತೆ ಇದೆ ಅದನ್ನು ಪೂರೈಸಿದರೆ ಸಾಕು ಎಂದು ವಿನಮ್ರವಾಗಿ ಕೋರಿದ್ದರು. ಅದೇ ರೀತಿ ಕುವೆಂಪು ವಿಶ್ವವಿದ್ಯಾಲಯವೂ ಅವರಿಗೆ ಗೌರವ ಡಾಕ್ಟರೇಟ್ ಕೊಡಲು ನಿರ್ಧರಿಸಿದಾಗಲೂ ಅವರ ನಿಲುವು ಅಚಲವಾಗಿತ್ತು. ದಾನಿಗಳ ಕೊಡುಗೆ ಮತ್ತು ಅವರ ಪುಸ್ತಕಗಳ ಮಾರಟದಿಂದ ಬಂದ ಅಲ್ಪಸ್ವಲ್ಪ ಹಣದಿಂದಲೇ ಆಶ್ರಮದ ಎಲ್ಲ ಖರ್ಚುವೆಚ್ಚಗಳು ನಡೆಯುತಿತ್ತು. ಅಕಸ್ಮಾತ್ ಅದಕ್ಕೆ ಕೊರತೆಯಾದಲ್ಲಿ ಯಥಾಪ್ರಕಾರ ಜೋಳಿಗೆ ಹಿಡಿದು ಹೊರಟರೆಂದರೆ ಭಕ್ತಾದಿಗಳು ಅವರ ಕೈ ಹಿಡಿಯದೇ ಬಿಡುತ್ತಿರಲಿಲ್ಲ.
ಮೂಲತಃ ಕೇರಳದಲ್ಲಿ ಜನಿಸಿ ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ವಿದ್ಯಾಭ್ಯಾಸ ಮಾಡಿ ಅಂತಿಮವಾಗಿ ಮಲ್ಲಾಡಿಹಳ್ಳಿಯನ್ನು ತಮ್ಮ ಕರ್ಮಭೂಮಿಯನ್ನಾಗಿಸಿಕೊಂಡು ಸಾಮಾಜಿಕ ಸೇವೆಗಾಗಿಯಾಗಿಯೇ ಕನ್ನಡಮಣ್ಣಿನ ಮಗನಾಗಿ ತಮ್ಮ ಇಡೀ 106 ವರ್ಷಗಳ ಕಾಲ ಸುದೀರ್ಘವಾದ ಜೀವನವನ್ನು ಸವೆಸಿದರು. ಇಷ್ಟರ ಮಧ್ಯೆ ಒಂದೆರಡು ಬಾರಿ ಹೃದಯಾಘಾತದಿಂದ ಸಾವರಿಕೊಂಡಿದ್ದರೂ 1996ರಲ್ಲಿ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಸುಮಾರು ಓಂದು ತಿಂಗಳುಗಳಿಗೂ ಅಧಿಕಕಾಲ ಕೋಮಾ ಸ್ಥಿತಿಯಲ್ಲಿದ್ದ ಸ್ವಾಮಿಗಳು ಆಗಸ್ಟ್ 31ರಂದು ಬುತ್ತಿ ಗಂಟು ತೀರಿತಿನ್ನು, ಹೊರಟೆ ನನ್ನ ಊರಿಗೆ ಎನ್ನುತ್ತಾ ಇಹ ತೊರೆದು ಪರದೆಡೆಗೆ ನಡದೇ ಬಿಟ್ಟರು.
ಸ್ವಾಮೀಜಿಯವರು ಕಾಲವದ ನಂತರ ಅವರ ಆಶ್ರಮದ ಸಂಪೂರ್ಣ ಜವಾಬ್ಧಾರಿಯನ್ನು ಚಿತ್ರದುರ್ಗದ ಶ್ರೀ. ಶ್ರೀ. ಮರುಘರಾಜೇಂದ್ರಸ್ವಾಮಿಗಳು ತೆಗೆದುಕೊಂಡು ಅತ್ಯಂತ ಯಶಸ್ವಿಯಾಗಿ ಕಾಲೇಜುಗಳು, ಹಾಗೂ ಋಗ್ಣಾಲಯ, ಮಕ್ಕಳ, ಶಾಲಾ ಶಿಕ್ಷಕರ ವಸತಿಗೃಹಗಳು, ಚೆನ್ನಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಮಲ್ಲಾಡಿ ಹಳ್ಳಿಯ ಆಶ್ರಮದಲ್ಲಿ ಸ್ವಾಮೀಜಿಯವರ ನೆನಪಿನಲ್ಲಿ ಸ್ಮಾರಕವೊಂದನ್ನು ಸ್ಥಾಪಿಸಲಾಗಿದ್ದು ಅದರ ಪಕ್ಕದಲ್ಲೇ ಅವರ ಪರಮಾಪ್ತರಗಿದ್ದ ಶ್ರೀ ಸೂರ್ದಾಸ್ ಅವರ ಸ್ಮಾರಕವನ್ನೂ ನಿರ್ಮಿಸಿರುವ ಮೂಲಕ ಆ ಹಿರಿಯ ಚೇತನಗಳನ್ನು ಪ್ರತಿದಿನವೂ ನೆನಪಿಸಿಕೊಳ್ಳುವಂತಹ ಕಾರ್ಯಗಳು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
ಮಲ್ಲಾಡಿಹಳ್ಳಿ ಸ್ವಾಮಿಗಳು ಒಬ್ಬ ಅಪ್ಪಟ ದೇಶ ಭಕ್ತರು, ಮಹಾಸಾಧಕರು, ತಪಸ್ವಿಗಳು, ಪರಮಯೊಗಾಚಾರ್ಯರು, ಮಹಾಸಂಘಟಕರು, ಸಾರ್ಥಕ ಬದುಕಿನ ನಿಷ್ಕಾಮ ಕರ್ಮಯೋಗಿ. ಮೇಲಾಗಿ ಆಯುರ್ವೇದದಲ್ಲಿ ಪರಿಣಿತರಾಗಿದ್ದ ಕಾರಣದಿಂದಲೇ ಅಭಿನವ ಧನ್ವಂತರಿ ಎಂದೇ ಜನಪ್ರಿಯರಗಿದ್ದರು. ಕರ್ನಾಟಕದ ಮೂಲೆ ಮೂಲೆಗಳಿಗೂ ಹಳ್ಳಿ ಹಳ್ಳಿಗೂ ಹೋಗಿ, ದಲಿತರು, ಬಡವರು, ಅಸಹಾಯಕರುಗಳನ್ನೂ ಉದ್ಧರಿಸುವ ಕಾಯಕವನ್ನು ಒಂದು ಪೂಜೆಯಾಗಿ ಸ್ವೀಕರಿಸಿ, ಅಲ್ಲಿ ಯೋಗ ಶಿಬಿರಗಳನ್ನು ನಡೆಸುವ ಮೂಲಕ, ಆರೋಗ್ಯ ಮತ್ತು ನೈರ್ಮಲ್ಯೀಕರಣಗಳ ಬಗ್ಗೆ ಗ್ರಾಮೀಣ ಜನತೆಗೆ ಅರಿವನ್ನು ಮೂಡಿಸುವುದರ ಮೂಲಕ ಆಯಾಯಾ ಊರುಗಳ ಸರ್ವತೋಮುಖ ಪ್ರಗತಿಗಳಿಗೆ ಕಾರಣರಾದ ಮಲ್ಲಾಡಿಹಳ್ಳಿ ಶ್ರೀ ರಾಘವೇಂದ್ರ ಸ್ವಾಮಿಗಳು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.
ಏನಂತೀರಿ?
ನಿಮ್ಮವನೇ ಉಮಾಸುತ
I am fortunate to have treatment for my asthama from Swamiji at malladi Halli at about two years.( 1992 to 1994)During that period,I had the privilege to talk with Shri Swamiji on various subjects.He was very simple and down to earth person. I never forgot those days with Swamiji.Later I came to know that Shri Jaggi Vasudev (known as Sadguru) was his desciple.Om Sadguru.🙏🙏🙏🙏🙏
LikeLiked by 1 person