ಸ್ಯಾಕ್ಸೊಫೋನ್ ಚಕ್ರವರ್ತಿ ಕದ್ರಿ ಗೋಪಾಲನಾಥ್

ನಮ್ಮ ಸನಾತನ ಧರ್ಮದಲ್ಲಿ ಪ್ರತಿಯೊಂದು ಶುಭಕಾರ್ಯಗಳಲ್ಲಿ ಮಂಗಳವಾದ್ಯದ್ದೇ ಮುಂದಾಳತ್ವ. ಮಂಗಳ ವಾದ್ಯಗಳಿಲ್ಲದೇ ದೇವರ ಉತ್ಸವಗಳೇ ಹೊರೊಡೋದಿಲ್ಲ. ಹಾಗಾಗಿ ನಾದಸ್ವರ ಮತ್ತು ಭಾಜಾಭಜಂತ್ರಿಗಳನ್ನು ಕರ್ನಾಟಕದ ಪ್ರತಿಯೊಂದು ಹಳ್ಳಿ ಹಳ್ಳಿಗಳಲ್ಲೂ ಕಾಣಬಹುದಾಗಿದೆ. ಇತ್ತೀಚೆಗೆ ದೇಸೀ ನಾದಸ್ವರಗಳ ಜಾಗದಲ್ಲಿ ನಿಧಾನವಾಗಿ ಪಾಶ್ಚಾತ್ಯ ವಾದನವಾದ ಸ್ಯಾಕ್ಸಾಫೋನ್ ಆವರಿಸಿಕೊಳ್ಳುತ್ತಿದೆ. ಹಾಗೆ ದೇಸೀ ಕರ್ನಾಟಕ ಸಂಗೀತ ಪದ್ಧತಿಗೆ ಪಾಶ್ಚ್ಯತ್ಯ ವಾದನವನ್ನು ಸುಲಲಿತವಾಗಿ ಅಳವಡಿಸಿಕೊಂಡು ಅತ್ಯಂತ ಸುಶ್ರಾವ್ಯವಾಗಿ ಸ್ಯಾಕ್ಸೋಫೋನ್ ನುಡಿಸುವುದರಲ್ಲಿ ಸಿದ್ಧಹಸ್ತರಾಗಿದ್ದ ಕರಾವಳಿ ಮೂಲದ ಕದ್ರಿ ಗೋಪಾಲನಾಥ್ ಅವರ ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಮೆಲುಕು ಹಾಕೋಣ.

kadri3

ದಕ್ಷಿಣ ಕನ್ನಡ ಜಿಲ್ಲೆಯ ಸಜಿಪಮೂಡ ಊರಿನಲ್ಲಿ ಅತ್ಯಂತ ಶ್ರೇಷ್ಠ ನಾದಸ್ವರ ವಾದಕರೆಂದೇ ಪ್ರಸಿದ್ಧರಾಗಿದ್ದ ಶ್ರೀ ತನಿಯಪ್ಪ ಮತ್ತು ನಾಗಮ್ಮ ದಂಪತಿಗಳ ಮಗನಾಗಿ ಗೋಪಾಲನಾಥರು 1949 ಡಿಸೆಂಬರ್ 6 ರಂದು ಜನಿಸಿದರು. ಬಾಲ್ಯದಿಂದಲೇ ಸಂಗೀತವೆಂಬುದು ಅವರ ಮನೆಯಲ್ಲಿ ನಲಿದಾಡುತ್ತಿದ್ದ ಕಾರಣ, ಚಿಕ್ಕವಯಸ್ಸಿನಲ್ಲಿಯೇ ತಮ್ಮ ತಂದೆಯವರಿಂದಲೇ ನಾದಸ್ವರ ವಾದನದ ಶಿಕ್ಷಣವನ್ನು ಪಡೆದರು ಅದೊಮ್ಮೆ ಮೈಸೂರಿನ ಅರಮನೆಯ ಬ್ಯಾಂಡ್ ಸೆಟ್ಟಿನಲ್ಲಿ ಸ್ಯಾಕ್ಸಫೋನ್ ವಾದನವನ್ನು ಕೇಳಿ ಆ ವಾದ್ಯದಲ್ಲಿರುವ ವೈವಿದ್ಯತೆಗೆ ಮನಸೋತು ತಾವೂ ಸಹಾ ಸ್ಯಾಕ್ಸಫೋನ್ ಕಲಿತುಕೊಂಡು ಅದರಲ್ಲಿಯೇ ಸಾಧನೆಯನ್ನು ಮಾಡ ಬೇಕೆಂಬ ಧೃಢ ಸಂಕಲ್ಪವನ್ನು ಮಡಿಕೊಂಡು ಸುಮಾರು 20 ವರ್ಷಗಳ ಕಾಲ ಮಂಗಳೂರಿನ ಕಲಾನಿಕೇತನದ ಎನ್. ಗೋಪಾಲಕೃಷ್ಣ ಅಯ್ಯರ್ ಅವರಿಂದ ಒಂದು ರೀತಿಯ ನಿರಂತರ ತಪಸ್ಸಿನಂತೆ ಸಂಗೀತಾಭ್ಯಾಸವನ್ನು ಮಾಡಿದ ಕದ್ರಿಯವರು ಮುಂದೆ ಹೆಚ್ಚಿನ ಅಭ್ಯಾಸಕ್ಕಾಗಿ ಮದ್ರಾಸಿನ ಟಿ. ಎನ್. ಗೋಪಾಲಕೃಷ್ಣನ್ ಅವರ ಬಳಿ ಶಿಷ್ಯತ್ವವನ್ನು ಆರಂಭಿಸಿ ಅತ್ಯಂತ ಶ್ರದ್ಧೆಯಿಂದ ಸಂಗೀತವನ್ನು ಅಭ್ಯಾಸ ಮಾಡಿದ ಕರ್ನಾಟಕ ಸಂಗೀತ ಮತ್ತು ಸ್ಯಾಕ್ಸೊಫೋನ್ ವಾದ್ಯಗಳೆರಡರಲ್ಲೂ ಪ್ರಭುತ್ವ ಸಾಧಿಸುವ ಮೂಲಕ. ಒಬ್ಬ ಅಂತರರಾಷ್ಟ್ರೀಯ ಮಟ್ಟದ ಪ್ರತಿಭೆಯಾಗಿ ಹೊರಹೊಮ್ಮಿದರು. ತಮ್ಮ ಎಲ್ಲಾ ಸಾಧನೆಗಳ ಹಿಂದಿರುವ ಶಕ್ತಿಯೇ ತಮ್ಮ ಗುರುಗಳ ಅನುಗ್ರಹವೇ ಎಂದು ಸಾರಿ ಸಾರಿ ಭಕ್ತಿಯಿಂದ ಗೋಪಾಲನಾಥರು ಸ್ಮರಿಸುತ್ತಿದ್ದರು.

kadri8

1978ರಲ್ಲಿ ಮಂಗಳೂರು ಆಕಾಶವಾಣಿಯಲ್ಲಿ ತಮ್ಮ ಮೊದಲ ಸಂಗೀತ ಕಛೇರಿ ನೀಡುವ ಮೂಲಕ ಕಾರ್ಯಕ್ರಮ ಆರಂಭಿಸಿದ ಕದ್ರಿಯವರು ನಂತರ ಆಕಾಶವಾಣಿ ಎ ಟಾಪ್ ಶ್ರೇಣಿಯ ಕಲಾವಿದರಾದರು. ಮದ್ರಾಸಿನ ಚೆಂಬೈ ಮೆಮೋರಿಯಲ್ ಟ್ರಸ್ಟ್ನಲ್ಲಿ ನಡೆದ ಅವರ ಮೊದಲ ಹೊರಾಂಗಣ ಕಾರ್ಯಕ್ರಮ ಅವರಿಗೆ ಎಲ್ಲೆಡೆಯಿಂದ ಪ್ರಸಿದ್ಧಿ ತಂದುಕೊಟ್ಟಿತು. ನಂತರ ಅವರ ಕಚೇರಿಗಳು ಕರ್ನಾಟಕ, ಆಂಧ್ರ, ತಮಿಳುನಾಡು, ಕೇರಳ ರಾಜ್ಯಗಳಲ್ಲಿಯೇ ಅಲ್ಲದೆ ಉತ್ತರ ಭಾರತದ ಪ್ರತಿಷ್ಟಿತ ಉತ್ಸವ- ವೇದಿಕೆಗಳಲ್ಲಿ ನಡೆದದ್ದಲ್ಲದೇ, ಬಿಬಿಸಿಯ ಆಹ್ವಾನದ ಮೇರೆಗೆ ರಾಯಲ್ ಆಲ್ಬರ್ಟ್ ಹಾಲ್‌ನಲ್ಲಿ, ಫ್ರಾಗ್ ಜಾಸ್ ಫೆಸ್ಟಿವಲ್, ಬರ್ಲಿನ್ ಸಂಗೀತೋತ್ಸವ, ಮೆಕ್ಸಿಕೋದ ಸೆರ್ವಾಂಟಿನೊ ಉತ್ಸವ, ಲಂಡನ್‌ನ ಪ್ರೊಮೆನಾಡೊ, ಪ್ಯಾರಿಸ್‌ನ ಹೈಲ್ ಫೆಸ್ಟಿವಲ್ ಮುಂತಾದ ವಿಶ್ವ ಉತ್ಸವ-ವೇದಿಕೆಗಳಲ್ಲಿಯೂ ಕದ್ರಿಯವರು ತಮ್ಮ ಸ್ಯಾಕ್ಸೋಫೋನ್ ಸುಧೆಯನ್ನು ಹರಿಸಿದ್ದರು. ಯೂರೋಪ್, ಸ್ವಿಜರ್‌ಲ್ಯಾಂಡ್, ಯುನೈಟೆಡ್ ಕಿಂಗ್ಡಂ, ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ಜರ್ಮನಿ, ಸಿಂಗಪೂರ್, ಬಹರೇನ್, ಕ್ವೆಟಾರ್, ಮಸ್ಕಟ್, ಮಲೇಷಿಯಾ, ಶ್ರೀಲಂಕಾ ಹೀಗೆ ವಿಶ್ವದಾದ್ಯಂತ ನಿರಂತರವಾಗಿ ಯಶಸ್ವಿಯಾಗಿ ಕಚೇರಿಗಳನ್ನು ನಡೆಸಿಕೊಂಡು ಬಂದಿದ್ದರು.

kadri4

ಆರಂಭದಲ್ಲಿ ಕದ್ರಿಯವರು ಕರ್ನಾಟಕ ಶಾಸ್ತ್ರೀಯ ಸಂಗೀತ ಸುಧೆಯನ್ನು ಹರಿಸುತ್ತಿದ್ದವರು, ನಂತರ ಹಿಂದುಸ್ತಾನಿ ಕಲಾವಿದರೊಂದಿಗೆ ಜುಗಲ್‌ಬಂದಿ, ಪಾಶ್ಚಾತ್ಯ ವಾದ್ಯಗಳೊಂದಿಗೆ ಜಾಝ್, ಫ್ಯೂಷನ್ ಹೀಗೆ ವೈವಿಧ್ಯಪೂರ್ಣ ಕಾರ್ಯಕ್ರಮಗಳಲ್ಲಿ ತಮ್ಮ ಸಂಗೀತ ಪ್ರತಿಭೆಯನ್ನು ಅನಾವರಣಗೊಳಿಸಿದ್ದರು. ಇದಲ್ಲದೇ ಅನೇಕ ವೈಶಿಷ್ಟ್ಯಪೂರ್ಣ ಆಲ್ಬಂಗಳಲ್ಲಿಯೂ ಸಹಾ ಅವರ ಸಂಗೀತ ಶ್ರೋತೃಗಳ ಮನಸ್ಸನ್ನು ತಣಿಸಿತ್ತು. ವಿದೇಶಿ ಮೂಲದ ಸ್ಯಾಕ್ಸೋಫೋನ್‌ ವಾದ್ಯವನ್ನು ಶುದ್ಧ ಶಾಸ್ತ್ರೀಯ ಸಂಗೀತಕ್ಕೆ ಅಳವಡಿಸಿಕೊಳ್ಳುವ ಮೂಲಕ ಆ ವಾದ್ಯಕ್ಕೊಂದು ಗೌರವಾನ್ವಿತ ಸ್ಥಾನ ದೊರಕಿಸಿ ಕೊಟ್ಟ ಕಾರಣ ಕದ್ರಿ ಗೋಪಾಲನಾಥ್ ಅವರನ್ನು ಸ್ಯಾಕ್ಸೊಫೋನ್ ಚಕ್ರವರ್ತಿ ಎಂದೇ ಜನರು ಕರೆಯಲಾರಂಭಿಸಿದರು. ಕದ್ರಿ ಗೋಪಾಲನಾಥ್ ಅವರಿಂದ ಪ್ರೇರಿತರಾಗಿ ಇಂದು ದಕ್ಷಿಣ ಕನ್ನಡಲ್ಲಿ ನೂರಾರು ಕಲಾವಿದರು ಮದುವೆ ಮುಂಜಿ ಮತ್ತಿತರೇ ಶುಭಸಂಧರ್ಭಗಳಲ್ಲಿ ಅತ್ಯಂತ ಇಂಪಾಗಿ ಸಾಕ್ಸಾಫೋನ್ ನುಡಿಸುತ್ತಿದ್ದಾರೆ. ಅದರಲ್ಲೂ ಹತ್ತಾರು ಮಹಿಳೆಯರೂ ಸಹಾ ಸಾಕ್ಸಾಪೋನ್ ನುಡಿಸುವುದರಲ್ಲಿ ಎತ್ತಿದ ಕೈ ಆಗಿರುವುದು ಗಮನಾರ್ಹವಾಗಿದೆ.

ಕದ್ರಿಯವರು ಕೇವಲ ಕಛೇರಿಗಳಿಗಷ್ಟೆ ತಮ್ಮನ್ನು ತಾವು ಸೀಮಿತಗೊಳಿಸದೇ ಚಲನಚಿತ್ರಗಳಲ್ಲಿಯೂ ತಮ್ಮ ವೈಶಿಷ್ಟ್ಯಪೂರ್ಣವಾದ ಕಲೆಯ ಮೂಲಕ ಜನರ ಮನಸ್ಸೂರೆಗೊಂಡಿದ್ದರು. ದಕ್ಷಿಣ ಭಾರತದ ಹೆಸರಾಂತ ಸಂಗಿತ ನಿರ್ದೇಶಕ ಎ.ಆರ್. ರೆಹಮಾನ್ ಅವರು ಮತ್ತೊಬ್ಬ ಖ್ಯಾತ ನಿರ್ದೇಶಕ ಕೆ. ಬಾಲಚಂದರ್ ಅವರ ತಮಿಳು ಚಿತ್ರ ಡ್ಯುಯೆಟ್ ಚಿತ್ರದ ಎಲ್ಲಾ ಹಾಡುಗಳಲ್ಲಿಯೂ ಸ್ಯಾಕ್ಸೋಫೋನ್ ಬಳಸಿಕೊಳ್ಳುವ ಮೂಲಕ ಕದ್ರಿಯವರಿಗೆ ರಾತ್ರೋರಾತ್ರಿ ಪ್ರಸಿದ್ದಿಯನ್ನು ಪಡೆದುಕೊಂಡರು ಎಂದರು ಅತಿಶಯೋಕ್ತಿಯೇನಲ್ಲ. ಮುಂದೆ ಅನೇಕ ಚಿತ್ರಗಳಲ್ಲಿ ಪ್ರೇಕ್ಷಕರು ಅವರ ಸಾಕ್ಸಾಫೋನ್ ಕೇಳುವಂತಾಯಿತು.

kadri6

ಕದ್ರಿಯವರು ಬಹುತೇಕ ಎಲ್ಲಾ ಸಂಗೀತಗಾರರೊಂದಿಗೆ ವೇದಿಕೆಯನ್ನು ಹಂಚಿಕೊಂಡಿದ್ದ ಕದ್ರಿಯವರು ಸಂಗಿತ ಸಾಮ್ರಾಟ್ ಡಾ.ಬಾಲಮುರಳಿಕೃಷ್ಣರವರ ಜೊತೆ ವೇದಿಕೆ ಹಂಚಿಕೊಳ್ಳುವುದು ಬಹಳ ಸಂತೋಷದ ವಿಷಯ ಎಂದು ಹೇಳುತ್ತಿದ್ದರು. ಸಂಗೀತದೊಂದಿದೆ ಸಮಾಜದ ಬಗ್ಗೆಯೂ ಅತ್ಯಂತ ಕಾಳಜಿಯನ್ನು ಹೊಂದಿದ್ದ ಕದ್ರಿಯವರು ಕಾರ್ಗಿಲ್ ಯುದ್ದದ ಸಮಯದಲ್ಲಿ ಯುದ್ಧದ ನಿಧಿಗಾಗಿ 400 ಮಂದಿ ಸಹ ಕಲಾವಿದರೊಡನೆ ಚೆನ್ನೈನ ನಾರದ ಗಾನಸಭಾದಲ್ಲಿ ಕಾರ್ಯಕ್ರಮವೊಂದನ್ನು ನಡೆಸಿಕೊಟ್ಟು ಅದರಿಂದ ಸಂಗ್ರಹವಾದ ಲಕ್ಷಾಂತರ ರೂಪಾಯಿ ಹಣವನ್ನು ಕಾರ್ಗಿಲ್ ಯುದ್ಧ ನಿಧಿಗಾಗಿ ಸಮರ್ಪಿಸಿದ್ದರು.

ಇಷ್ಟು ಪ್ರಖ್ಯಾತಿಯನ್ನು ಹೊಂದಿದ್ದ ಕದ್ರಿ ಗೋಪಾಲನಾಥರಿಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಅರಸಿ ಬಂದಿದ್ದವು. ಅವುಗಳಲ್ಲಿ ಪ್ರಮುಖವಾದವುಗಳೆಂದರೆ,

  • ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ
  • ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ
  • ತಮಿಳುನಾಡು ಸರಕಾರದ ಕಲೈಮಾಮಣಿ
  • ಕರ್ನಾಟಕ ಕಲಾಶ್ರೀ
  • ಶೃಂಗೇರಿ – ಮಂತ್ರಾಲಯ – ಅಹೋಬಿಲ ಮುಂತಾದ ಪೀಠಗಳಿಂದ ಸನ್ಮಾನ
  • ಶ್ರೀ ಕಂಚಿ ಕಾಮಕೋಟಿ ಪೀಠ, ಶ್ರೀ ಶೃಂಗೇರಿ ಶಾರದಾ ಪೀಠ ಮತ್ತು ಶ್ರೀ ಪಿಳ್ಳ್ಯಾರಪಟ್ಟಿ ದೇವಸ್ಥಾನಗಳ ಆಸ್ಥಾನ ವಿದ್ವಾನ್ ಸಹಾ ಆಗಿದ್ದರು.
  • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
  • ಬೆಂಗಳೂರು ವಿಶ್ವವಿದ್ಯಾಲಯದ ಮತ್ತು ವಿವಿಧ ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಅಲ್ಲದೇ, ಗಾನಕಲಾ ಭೂಷಣ, ನಾದ ಗಂಧರ್ವ, ನಾದೋಪಾಸನ ಬ್ರಹ್ಮ ಸುನಾದ, ನಾದಕಲಾ ರತ್ನ, ನಾದಕಲಾನಿಧಿ, ಸಂಗೀತ ವಿದ್ಯಾರತ್ನ, ಸಂಗೀತ ರತ್ನ ಮುಂತಾದ ಬಿರುದು ಬಾವಲಿಗಳು ಕದ್ರಿಯವರಿಗೆ ಲಭಿಸಿದ್ದವು.

kadri5

ಜಾತಸ್ಯ ಮರಣಂ ಧೃವಂ ಎನ್ನುವಂತೆ ಎಷ್ಟೇ ಸಾಧಕರಾಗಿದ್ದರೂ ಒಂದಲ್ಲಾ ಒಂದು ದಿನ ಭಗವಂತನ ಕರೆ ಬಂದಕೂಡಲೇ ಸದ್ದಿಲ್ಲದೇ ಹೋಗಬೇಕು ಎನ್ನುವಂತೆ, ಅಕ್ಟೋಬರ್ 11 2019 ರಂದು ಬೆಳಗಿನ ಜಾವ ತಮ್ಮ 69 ನೆಯ ವಯಸ್ಸಿನಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗುವ ಮೂಲಕ ಸಂಗೀತ ಲೋಕದ ನಕ್ಷತ್ರವೊಂದು ಮಿಂಚಿ ಮರೆಯಾಗಿದ್ದಂತೂ ಸುಳ್ಳಲ್ಲ.

kadri7

ಕದ್ರಿ ಗೋಪಾಲ್ ನಾಥ್ ನಮ್ಮೊಡನಿದ್ದ ಒಬ್ಬ ಕಿಂದರ ಜೋಗಿ ಎನ್ನಬಹುದು. ಅವರ ಸ್ಯಾಕ್ಸೋಫೋನ್ ವಾದನ ನಮ್ಮನ್ನು ಮಂತ್ರಮುಗ್ಧರನ್ನಾಗಿಸಿ, ನಮ್ಮ ಇರುವನ್ನೇ ಮರೆಯುವಂತೆ ಮಾಡುವ ಮಹಾಶಕ್ತಿ ಅದಕ್ಕಿತ್ತು. ಪರಮಾತ್ಮ ಶ್ರೀಕೃಷ್ಣನ ಮುರಳಿಗಾನಕ್ಕೆ ಹೀಗೆ ವಿವರಿಸುವುದು ಸಹಜ. ಅದನ್ನೇ ಕದ್ರಿಯವರ ವಾದನ ಮೋಡಿಗೂ ಹೋಲಿಸಿದರೆ ಸಹಜ ವೆನ್ನಿಸುತ್ತೆ. ಅದರ ಸಮ್ಮೋಹನ ಶಕ್ತಿ ವರ್ಣಿಸಲಾಗದು. ಇಂತಹ ಅಪ್ರತಿಮ ವಾದಕರನ್ನು ಹೊಂದಿದ ನಾವೇ ಧನ್ಯರು! ಹೀಗೆ ಅವರ ಅಭಿಮಾನಿಯವರು ವರ್ಣಿಸಿರುವುದರಲ್ಲಿ ಅತಿಶಯವೆನಿಸದು.

manikanth_kadri

ಕದ್ರಿ ಅವರ ಮಗ ಮಣಿಕಾಂತ್ ಕದ್ರಿಯವರು ತಮ್ಮ ತಂದೆಯವರ ಹಾದಿಯನ್ನೇ ಹಿಡಿದಿದ್ದು ಅವರು ಇಂದು ದಕ್ಷಿಣ ಭಾರತದ ಯಶಸ್ವಿ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಅವರು ಸಂಗೀತ ನೀಡಿರುವ ಬಹುತೇಕ ಕನ್ನಡ ಚಿತ್ರಗಳು ಅತ್ಯಂತ ಯಶಸ್ವಿಯಾಗಿದ್ದು ಮಣಿಕಾಂತ್ ಕದ್ರಿಯವರಿಗೆ ಹೆಸರನ್ನು ತಂದುಕೊಟ್ಟಿದೆ.

kadri1

ಹೀಗೆ ಅರಮನೆಯ ಬ್ಯಾಂಡಿನಲ್ಲಿ ನೋಡಿದ್ದ ಪಾಶ್ಚಾತ್ಯ ವಾದನವಾದ ಸ್ಯಾಕ್ಸಾಫೋನನ್ನು ತಮ್ಮ ಸ್ವಂತ ಪರಿಶ್ರಮದಿಂದ ದೇಸೀ ಕರ್ನಾಟಕ ಸಂಗೀತ ಪದ್ಧತಿಗೆ ಸುಲಲಿತವಾಗಿ ಅಳವಡಿಸಿಕೊಂಡು ಅತ್ಯಂತ ಸುಶ್ರಾವ್ಯವಾಗಿ ಪೇಕ್ಷಕರನ್ನು ನಾದಲೋಕದಲ್ಲಿ ತಲ್ಲೀನರಾಗಿಸಿ ಕರ್ನಾಟಕದ ಕೀರ್ತಿಯನ್ನು ವಿಶ್ವದಾದ್ಯಂತ ಪಸರಿಸಿದ ಕರಾವಳಿ ಮೂಲದ ಕದ್ರಿ ಗೋಪಾಲನಾಥ್ ಅವರು ಖಂಡಿತವಾಗಿಯೂ ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತೀರಿ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s