ಅಮ್ಮಾ= ಅ+ಮ+ಮ+ಆ. ಅಕ್ಕರೆಯಿಂದ , ಮಮತೆ ಮತ್ತು ಮಮಕಾರದಿಂದ, ಆರೈಕೆ ಮಾಡುವವಳೇ ಅಮ್ಮಾ. ಜಗತ್ತಿನಲ್ಲಿ ಯಾರಿಗೇ ಆಗಲಿ ಅಥವಾ ಯಾವುದಕ್ಕೇ ಆಗಲಿ ಪರ್ಯಾಯ ಸಿಗಬಹುದೇನೋ ಆದರೆ ಅಮ್ಮನಿಗೆ ಮಾತ್ರ ಪರ್ಯಾಯವೇ ಇಲ್ಲಾ. ಆಕೆ ಮಾತ್ರಾ ಅದ್ವಿತೀಯಳು, ಅನುಕರಣಿಯಳು, ಸದಾವಂದಿತಳು. ತಾಯಿ ಇಲ್ಲದೇ ಜಗವಿಲ್ಲಾ. ತಾಯಿ ಇಲ್ಲದೇ ನಾವಿಲ್ಲ. ಜನ್ಮ ಕೊಟ್ಟ ತಾಯಿ ಮತ್ತು ಆಶ್ರಯ ನೀಡುತ್ತಿರುವ ಭೂಮಿ ತಾಯಿಗೆ ಪರ್ಯಾಯವೇ ಇಲ್ಲ. ಹಾಗಾಗಿ ಅವರಿಬ್ಬರೂ ಸದಾಕಾಲವೂ ಪೂಜ್ಯರು ವಂದಿತರು ಮತ್ತು ಆದರಣೀಯರೇ ಸರಿ.
ಒಂಭತ್ತು ತಿಂಗಳು ತನ್ನ ಗರ್ಭದಲ್ಲಿ ಅಂಡಾಣುವಿನಿಂದ ಮಗುವಿನ ರೂಪ ತಾಳುವವರೆಗೆ ಜೋಪಾನವಾಗಿಟ್ಟುಕೊಂಡು, ತಾನು ತಿನ್ನುವ ಆಹಾರವನ್ನೇ ತನ್ನ ಒಡಲಿನಲ್ಲಿರುವ ಮಗುವಿನೊಂದಿಗೆ ಕರಳು ಬಳ್ಳಿಯ ಮೂಲಕ ಹಂಚಿಕೊಂಡು ದೇಹದ ನೂರಾರು ಮೂಳೆಗಳು ಮುರಿದಾಗ ಆಗುವ ನೋವಿನಷ್ಟೇ ನೋವನ್ನು ಪ್ರಸವ ಸಮಯದಲ್ಲಿ ಅನುಭವಿಸಿದರೂ, ಎಲ್ಲವನ್ನೂ ಸಂಯಮದಿಂದ ತಾಳಿಕೊಂಡು ಸಂತೋಷದಿಂದಲೇ ಜನ್ಮ ಕೊಡುತ್ತಾಳೆ. ಜನ್ಮ ಕೊಟ್ಟ ನಂತರ ತನ್ನ ತನ್ನ ಎದೆಹಾಲನ್ನು ಉಣಿಸುತ್ತಾ ತನ್ನೆಲ್ಲಾ ಕಷ್ಟ ಮತ್ತು ನೋವಿನ ನಡುವೆಯೂ ತನ್ನ ಬಹುಪಾಲು ಸಮಯವನ್ನು ಮಕ್ಕಳ ಆರೈಕೆಗಳಿಗೇ ಮೀಸಲಿಟ್ಟು ಆವರೆಲ್ಲಾ ಆವಶ್ಯಕತೆಗಳನ್ನೂ ಪೂರೈಸುತ್ತಾಳೆ. ಮನೆಯೇ ಮೊದಲ ಪಾಠ ಶಾಲೆ. ತಾಯಿಯೇ ಮೊದಲ ಗುರು ಎನ್ನುವಂತೆ ತಮ್ಮ ಮಕ್ಕಳ ತೊದಲು ನುಡಿಗಳನ್ನು ಅರ್ಥೈಸಿಕೊಂಡು ಅದಕ್ಕೊಂದು ಸರಿಯಾದ ಭಾಷಾ ಸ್ವರೂಪ ನೀಡಿ, ಅವರನ್ನು ತಿದ್ದಿ ತೀಡೀ ದೊಡ್ಡವರನ್ನಾಗಿ ಮಾಡುತ್ತಾಳೆ. ಹಾಗಾಗಿ ಅಮ್ಮಾ ನೀನೂ ನಮಗಾಗಿ ಸಾವಿರ ವರುಷಾ.. ಸುಖಾವಾಗಿ ಬಾಳಲೇ ಬೇಕು ಈ ಮನೆ ಬೆಳಕಾಗೀ.. ಎಂದು ಅಣ್ಣಾವ್ರು ಹಾಡಿರುವುದು ನೆನಪಾಯ್ತು.
ಕಾರ್ತೀಕ ಮಾಸದ ಪಾಡ್ಯ. ಅರ್ಥಾತ್ ಬಲಪಾಡ್ಯಮಿ. ದೀಪಾಳಿಹಬ್ಬ. ಬೆಳಕಿನ ಹಬ್ಬ ದೀಪಾವಳಿ ಎಂದ ಮೇಲೆ ದೇಶಾದ್ಯಂತ ಸಂಭ್ರಮವೋ ಸಂಭ್ರಮ. ನಮ್ಮ ಮನೆಯಲ್ಲಿ ಉಳಿದವರ ಮನೆಯವರಿಗಿಂತ ಒಂದು ಗುಲಗಂಜಿ ಗಾತ್ರ ಹೆಚ್ಚಿನ ಸಂಭ್ರಮ ಎಂದರೂ ತಪ್ಪಾಗದು. ಏಕೆಂದರೆ ಬಲಿಪಾಡ್ಯಮಿಯ ದಿನದಂದೇ ನಮ್ಮಮ್ಮ ಹುಟ್ಟಿದ್ದು.
ನಮ್ಮಮ್ಮ ಹುಟ್ಟಿದ ದಿನವನ್ನು ಇಡೀ ದೇಶವೇ ಪ್ರತಿ ವರ್ಷವೂ ಸಡಗರಗಳಿಂದ ಪಟಾಕಿ ಹಚ್ಚಿ ಸಂಭ್ರಮಿಸುತ್ತಾರೆ ಎಂದು ಅಮ್ಮಾ ಇರುವವರೆಗೂ ರೇಗಿಸುತ್ತಿದ್ದೆ. ಸಾಧಾರಣವಾಗಿ ಮತ್ತೊಬ್ಬರನ್ನು ಚಿನ್ನದಂತಹವರು ಎಂದು ಹೊಗಳುವುದು ಸರ್ವೇ ಸಾಮಾನ್ಯ. ಆದರೆ ನಮ್ಮಮ್ಮ ಸತ್ಯವಾಗಿಯೂ ಚಿನ್ನದ ಹುಡುಗಿಯೇ. ಏಕೆಂದರೆ ನಮ್ಮಮ್ಮ ಹುಟ್ಟಿದ್ದೇ ಚಿನ್ನದ ನಾಡು ಕೆ.ಜಿ.ಎಫ್ ನಲ್ಲಿಯೇ. ಹಾಗಾಗಿಯೇ, ಕೆಲ ವರ್ಷಗಳ ಹಿಂದೆ ರಾಜ್ಯ ರಾಜಕಾರಣದಲ್ಲಿ ಬಳ್ಳಾರಿಯ ಗಣಿ ಬ್ರದರ್ಸ್ ಗಳದ್ದೇ ಕಾರುಬಾರು ನಡೆಯುತ್ತಿದ್ದಾಗ, ನಮ್ಮ ಅಮ್ಮನ ತವರಿನಲ್ಲಿಯೂ ಗಣಿಗಾರಿಕೆಯೇ ನಡೆಯುತ್ತಿದ್ದ ಕಾರಣ ಅದರಲ್ಲೂ ನಮ್ಮಮ್ಮನ ಮನೆಯಿಂದ ಕೂಗಳತೆಯ ದೂರದಲ್ಲೇ ಛಾಂಪಿಯನ್ ರೀಫ್ ಗಣಿ ಇದ್ದ ಕಾರಣ, ನಾನು ಅಗ್ಗಾಗ್ಗೆ ತಮಾಷೆಗೆಂದು ನೀವೆಲ್ಲರೂ ಭಯಾನಕ ಗಣಿ ಸಿಸ್ಟರ್ಸ್ ಎಂದೇ ನಮ್ಮಮ್ಮ ಮತ್ತು ನಮ್ಮ ಚಿಕ್ಕಮ್ಮಂದಿರನ್ನು ರೇಗಿಸುತ್ತಿದ್ದೆ.
ನಮ್ಮ ಮನೆಯಲ್ಲಿ ಪ್ರತೀ ವರ್ಷವೂ ಅಮ್ಮನ ಹುಟ್ಟು ಹಬ್ಬಕ್ಕೆ ಹೆಚ್ಚಿನ ಮಹತ್ವ ಇರುತ್ತಿತ್ತು. ದುರದೃಷ್ಟವಷಾತ್ 12 ವರ್ಷದ ಹಿಂದೆ ಆ ದೇವರು ನಮ್ಮಮ್ಮನನ್ನು ತನ್ನ ಬಳಿಗೆ ಕರೆಸಿ ಕೊಂಡಾಗಲೂ ಅಮ್ಮ ಇಲ್ಲದಿದ್ದರೇನಂತೆ ಎಂದು ಅಮ್ಮನ ರೂಪದಲ್ಲಿರುವ ಚಿಕ್ಕಮ್ಮಂದಿರು, ಅಪ್ಪನ ತಮ್ಮನ ಹೆಂಡತಿ ಚಿಕ್ಕಮ್ಮ, ಸೋದರತ್ತೆ, ಸೋದರ ಮಾವನ ಮಡದಿ ಅತ್ತೆ, ಹೆಣ್ಣು ಕೊಟ್ಟ ಅತ್ತೆ, ಅಮ್ಮನ ಆಪ್ತ ಸ್ನೇಹಿತೆಯರು ಹೀಗೆ ಪ್ರತೀ ವರ್ಷ ಒಬ್ಬೊಬ್ಬರಲ್ಲಿ ಅಮ್ಮನನ್ನು ಕಾಣುತ್ತಾ ಅವರಿಗೆ ಯಥಾಶಕ್ತಿ ಸೇವೆ ಸಲ್ಲಿಸಿಕೊಂಡು ಬರುವುದು ವಾಡಿಕೆಯಾಗಿದೆ.
ಕಳೆದ ಬಾರಿ ಅದಕ್ಕಿಂತಲೂ ಸ್ವಲ್ಪ ವಿಭಿನ್ನವಾಗಿ ಅಮ್ಮನ ಹುಟ್ಟು ಹಬ್ಬವನ್ನು ಆಚರಿಸಬೇಕೆಂದು ದಿಢೀರ್ ನಿರ್ಧರಿಸಿದೆವು. ಜಾತಸ್ಯ ಮರಣಂ ಧೃವಂ ಎಂಬಂತೆ ಹುಟ್ಟಿದವರು ಸಾಯಲೇ ಬೇಕು ಎನ್ನುವ ಜಗದ ನಿಯಮದಂತೆ ನಮ್ಮಮ್ಮ ಇಂದು ನಮ್ಮೊಂದಿಗೆ ಭೌತಿಕವಾಗಿ ಇಲ್ಲದಿರಬಹುದು. ಆದರೆ ಅಮ್ಮ ಹುಟ್ಟಿ, ಬೆಳೆದ ನಂತರ ನನಗೆ ಜನ್ಮ ನೀಡಿದ ಊರಂತೂ ಇದೆ. ಹಾಗಾಗಿ ಅಮ್ಮನ ಹುಟ್ಟಿದ ಹಬ್ಬಕ್ಕೆ ಅಮ್ಮಾ ಹುಟ್ಟಿದ ಊರು, ಅವರು ವಾಸಿಸುತ್ತಿದ್ದ ಮನೆ, ಅವರು ನಡೆದಾಡಿದ ಸ್ಥಳ, ಅವರು ಇಷ್ಟಪಡುತ್ತಿದ್ದ ದೇವಸ್ಥಾನಗಳಿಗೆ ಹೋಗಿ ಬಂದಲ್ಲಿ ಅಮ್ಮನ ಮಡಿಲಿನಲ್ಲಿ ಇದ್ದ ಅನುಭವ ಖಂಡಿತವಾಗಿಯೂ ಮತ್ತೊಮ್ಮೆ ಸಿಕ್ಕೇ ಸಿಗುತ್ತದೆ ಎಂದು ಭಾವಿಸಿ, ಸುಮಾರು ವರ್ಷಗಳ ನಂತರ ( 14 ವರ್ಷಗಳ ಹಿಂದೆ ಅಮ್ಮನ ಜೊತೆ ಕೆಜಿಎಫ್ ಗೆ ಹೋಗಿದ್ದೇ ಕಡೆ) ಮತ್ತೊಮ್ಮೆ ಇಡೀ ಸಂಸಾರದೊಂದಿಗೆ ಅಮ್ಮನ ಹುಟ್ಟುಹಬ್ಬದಂದು ಕೆಜಿಎಫ್ ಹೋಗಿ ಕೆಲ ಕಾಲ ಅಮ್ಮನ ಊರಿನಲ್ಲಿ ಕಾಲ ಕಳೆದು ಬಂದ ಅನುಭವ ನಿಜಕ್ಕೂ ಅವರ್ಣನೀಯ. ಬೆಳಿಗ್ಗೆಯಿಂದಲೂ ಉಚ್ಚ್ರಾಯ ಸ್ಥಿತಿಯಲ್ಲಿದ್ದ ನಾನು ನೋಡಿದ್ದ ಗಣಿ, ಆಸ್ಪತ್ರೆ, ಹತ್ತಾರು ಕಟ್ಟಡಗಳು ಇಂದು ಪಾಳು ಬಿದ್ದು, ಕಳ್ಳಿಗಳು ಬೆಳೆದುಕೊಂಡು ಹೋಗಿರುವ ಕಟ್ಟಡಗಳನ್ನು ನೋಡುತ್ತಿದ್ದಂತೆಯೇ ಕರಳು ಚುರುಕ್ ಎಂದು ಅದರ ಹಿಂದಿನ ಇತಿಹಾಸವನ್ನು ಹೇಳಿದ್ದನ್ನೇ ಹತ್ತಾರು ಬಾರಿ ಹೇಳುತ್ತಿದ್ದದ್ದನ್ನು ಕೇಳಿ ಕೇಳಿ ಸುಸ್ತಾದ ನಮ್ಮ ಮಡದಿ ಮತ್ತು ಮಕ್ಕಳು ಪ್ರೀತಿಯಿಂದ ಗದರಿದಾಗಲೇ ಸುಮ್ಮನಾಗಿದ್ದು.
ಕೋಲಾರ, ಅಂತರಗಂಗೆ, ಕೆಜಿಎಫ್ ಗಣಿಗಳು ಮಾರಿಕುಪ್ಪಂನ ಸಾಯಲ್ ಸಿಮೆಂಟ್ ಬ್ಲಾಕ್ನಲ್ಲಿದ್ದ ಅಮ್ಮನ ಮನೆ, ಕೋಟಿ ಲಿಂಗ, ದಾರಿಯಲ್ಲಿ ಅಮ್ಮನಿಗೆ ಜೀವಜಲವನ್ನು ಕುಡಿಸಿದ್ದ ಬೇತಮಂಗಲದ ಕೆರೆ, ಬಂಗಾರದ ತಿರುಪತಿ ಕಡೆಗೆ ಮುಳುಬಾಗಿಲು ವರದರಾಜಸ್ವಾಮಿಯ ದರ್ಶನ ಹೀಗೆ ಅಮ್ಮಾ ಓಡಾಡಿದ್ದ ಕಡೆಯಲೆಲ್ಲಾ ಓಡಾಡಿ ಅದೊಮ್ಮೆ ಅಜ್ಜಿ ಜೊತೆ ಬಂದಿದ್ದಾಗ ಹೀಗಾಗಿತ್ತು, ಹಾಗಾಗಿತ್ತು, ನನ್ನ ಕೈಲಿ ಮೆಟ್ಟಿಲು ಹತ್ತೋದಿಕ್ಕೆ ಆಗೋದಿಲ್ಲಪ್ಪಾ ಎಂದು ಇಲ್ಲೇ ಇದೇ ಮೆಟ್ಟಿಲು ಮೇಲೆ ಕುಳಿತಾಗ ಅವರ ಕೈ ಹಿಡಿದು ಕರೆದುಕೊಂಡು ಹೋಗಿದ್ದೆ ಎಂದು ಎಲ್ಲಾ ಸಿಹಿ ನೆನಪುಗಳನ್ನು ಮೆಲಕು ಹಾಕುತ್ತಲೇ, ಬೆಂಗಳೂರಿಗೆ ಹಿಂದಿರುಗುವಾಗ ಖಂಡಿತವಾಗಿಯೂ ನಮ್ಮಮ್ಮ ಎಲ್ಲೂ ಹೋಗಿಲ್ಲಾ, ಅವರು ಬಿಟ್ಟು ಹೋದ ಸವಿ ನೆನಪುಗಳ ಮೂಲಕ ಸದಾಕಾಲವೂ ನಮ್ಮೊಂದಿಗೆ ಇಲ್ಲೇ ಎಲ್ಲವನ್ನೂ ಬಿಟ್ಟು ಹೋಗಿದ್ದಾರೆ ಎನ್ನುವ ಸಾರ್ಥಕತೆ ಮೂಡಿದ್ದಂತೂ ಸುಳ್ಳಲ್ಲ. ಅಮ್ಮನ ಹುಟ್ಟೂರಿನ ಇಂದಿನ ಪ್ರವಾಸ ಒಂದು ರೀತಿಯಲ್ಲಿ ಅಮ್ಮನ ಮಡಿಲಲ್ಲಿ ಇದ್ದ ಹಾಗೆ ಆಗಿದ್ದಂತೂ ಸತ್ಯ.
ಅಮ್ಮ ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೇನಂತೆ, ಆದರೆ ಅಮ್ಮಾ ಹೇಳಿಕೊಟ್ಟಿರುವ ಪ್ರತಿಯೊಂದು ವಿಚಾರಗಳೂ ಅಂದು ಇಂದು ಮತ್ತು ಮುಂದೆಯೂ ನಮ್ಮೊಳಗೆ ಅಚ್ಚೊತ್ತಿದ್ದು, ಅದನ್ನು ಚಾಚೂ ತಪ್ಪದೇ ಅಚರಿಸಿ ಕೊಂಡು ಹೋಗುವ ಮುಖಾಂತರ ಅಮ್ಮನ ವ್ಯಕ್ತಿತ್ವವನ್ನು ನಮ್ಮೊಳಗೆ ಪ್ರತಿಫಲನಗೊಳಿಸುವ ಪ್ರಯತ್ನವನ್ನು ಮಾಡುವ ಮೂಲಕ ಅಮ್ಮನನ್ನು ಸದಾಕಾಲವೂ ನಮ್ಮೊಂದಿಗೆ ಜೀವಂತವಾಗಿಸಿಕೊಳ್ಳಬಹುದಲ್ಲವೇ?
ಹಾಂ!! ಇನ್ನೊಂದು ವಿಷಯ ಹೇಳೋದು ಮರ್ತಿದ್ದೆ. ಕಳೆದ ಬಾರಿ ಪಾಳು ಬಿದ್ದು ಹೋಗಿದ್ದ ಎಷ್ಟೋ ಕಟ್ಟಡಗಳನ್ನು ಈ ಬಾರಿ ಕೆಲವು ಉತ್ಸಾಹೀ ಯುವಕರುಗಳು ಮತ್ತು ಸ್ಥಳೀಯ ಸಂಸದರು ಸೇರಿಕೊಂಡು ಪುನರುಜ್ಜೀವನ ನಡೆಸುತ್ತಿದ್ದಾರೆ. ಅದಕ್ಕೆ ಉತ್ತಮ ಉದಾಹಣೆಯಾಗಿ ನಮ್ಮ ಮಾವ ಸುಮಾರು ವರ್ಷಗಳ ಕಾಲ ಕೆಲಸ ಮಾಡಿ ಪಾಳು ಬಿದ್ದಿದ್ದ ಬಿಜಿಎಂಲ್ ಆಸ್ಪತ್ರೆಗೆ ಜೀವವನ್ನು ಕೊಟ್ಟಿದ್ದನ್ನು ನೋಡಿ ಆನಂದ ಪಟ್ಟೆ. ಮಾರಿಕುಪ್ಪಂ ಪೋಲೀಸ್ ಸ್ಟೇಷನ್, ಎಸ್.ಪಿ. ಆಫೀಸ್ ಹೊಸಾ ಕಟ್ಟಡಗಳಿಗೆ ಸ್ಥಳಾಂತರವಾಗಿದೆ. ಎಲ್ಲದಕ್ಕಿಂತಲೂ ಖುಷಿ ಕೊಟ್ಟಿದ್ದು ಕೆಜಿಎಫ್ ನಲ್ಲಿ ಕನ್ನಡ ಶಾಲೆಯೂ ನವೀಕರಣವಾಗಿದೆ. ಅದಲ್ಲದೇ ಇಡೀ ಊರು ತುಂಬಾ ಹೊಸಾ ಹೊಸಾ ಚರ್ಚುಗಳು ಕಣ್ಣಿಗೆ ಕಾಣಿಸುತ್ತಿದ್ದಾಗ, ಛೇ!! ಹಾಲಿನ ಪುಡಿ ಆಸೆಗೆ ಮತಾಂತರವಾದವರು ಇನ್ನೂ ಅದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರಲ್ಲಾ ಎಂದೆನಿಸಿ ಹಾಗೇ ಮುಂದೆ ಹೋಗುತ್ತಿದ್ದಾಗ ನಾನು ಬಾಲ್ಯದಲ್ಲಿ ನವಿಲು ನೋಡಲೆಂದೇ ಹೋಗುತ್ತಿದ್ದ ಉದ್ದಂಡಿಯಮ್ಮನ ದೇವಾಲಯದ ಮುಂದೆಯೂ ಸುಮಾರು ಕಾರುಗಳು ನಿಂತಿದ್ದು ದೇವಾಲಯವೂ ಹೊಸದಾದ ಸುಣ್ಣ ಬಣ್ಣಗಳಿಂದ ಜನ ಜಂಗುಳಿಯಿಂದ ನಳ ನಳಿಸುತ್ತಿದ್ದದ್ದೂ ಮನಸ್ಸಿಗೆ ಹಿತ ನೀಡಿತು. ಅದೇ ರೀತಿ ಆಸ್ತ್ರೇಲಿಯಾ ಸೇರಿದಂತೆ ಇನ್ನೂ ಹತ್ತು ಹಲವಾರು ವಿದೇಶೀ ಕಂಪನಿಗಳು ಈ ಚಿನ್ನದ ಗಣಿಯನ್ನು ಪುನರುಜ್ಜೀವನ ನಡೆಸಲು ಅನುಮತಿ ಕೊಡಬೇಕೆಂದು ಭಾರತ ಸರ್ಕಾರವನ್ನು ಕೇಳಿರುವ ವಿಷಯ ಕೇಳಿ, ಪುನರಪಿ ಜನನಂ ಪುನರಪಿ ಮರಣಂ ಪುನರಪಿ ಜನನೀಜಠರೇ ಶಯನಮ್ ಎಂದು ಭಜಗೋವಿಂದಂ ನಲ್ಲಿ ಶಂಕರರು ಹೇಳಿರುವುದು ನೆನಪಾಗಿ ನಮ್ಮ ಕೆಜಿಎಫ್ ಚಿನ್ನದ ಗಣಿಗಳು ಮತ್ತೊಮ್ಮೆ ಚುಕ್ ಬುಕ್ ಚುಕ್ ಎಂದು ಶಬ್ಧಮಾಡುತ್ತಾ ಆರಂಭವಾಗಿ ಮತ್ತೊಮ್ಮೆ ಉಚ್ಛ್ರಾಯ ಸ್ಥಿತಿಯನ್ನು ತಲುಪಲಿ ಎನ್ನುವ ಆಸೆ ಮೂಡಿಸಿತು. ಧನಾತ್ಮಕವಾಗಿ ಚಿಂತನೆ ಮಾಡುವಂತಹ ಹತ್ತಾರು ಜನರು ಒಟ್ಟಾಗಿ ಕೈ ಜೋಡಿಸಿದಲ್ಲಿ ಎಲ್ಲವೂ ಸಾಧ್ಯವಾಗುತ್ತದೆ ಅಲ್ಲವೇ?
ಏನಂತೀರೀ?
ನಿಮ್ಮವನೇ ಉಮಾಸುತ