ಇಂದು ಈ ವರ್ಷದ ಮೊದಲ ಕಾರ್ತೀಕ ಸೋಮವಾರ. ಕಾರ್ತೀಕ ಸೋಮವಾರದಂದು ಶಿವನ ದರ್ಶನ ಮಾಡಿದರೆ ಅದರಲ್ಲೂ ಕಾಶೀ ವಿಶ್ವೇಶ್ವರನ ದರ್ಶನ ಮಾಡಿದಲ್ಲಿ ಹೆಚ್ಚಿನ ಪುಣ್ಯ ಲಭಿಸುತ್ತದೆ ಎನ್ನುವುದು ಶ್ರದ್ಧಾವಂತ ಹಿಂದೂಗಳ ನಂಬಿಕೆಯಾಗಿದೆ. ದೂರದ ಕಾಶೀಗೆ ಹೋಗಿ ಗಂಗೆಯಲ್ಲಿ ಮಿಂದು ಕಾಶೀ ವಿಶ್ವೇಶ್ವರನ ದರ್ಶನದ ಭಾಗ್ಯ ಪಡೆಯಲು ಸಾಧ್ಯವಿಲ್ಲದವರು, ಇಲ್ಲೇ ಬೆಂಗಳೂರಿಗೆ ಹತ್ತಿರವಿರುವ ದಕ್ಷಿಣ ಕಾಶಿ ಪುಣ್ಯಕ್ಷೇತ್ರಕ್ಕೆ ಹೋಗಿ ಅಲ್ಲಿರುವ ಅಂತರಗಂಗೆಯಲ್ಲಿ ಮಿಂದು ಕುಳಿತಲ್ಲಿಂದಲೇ ಕಾಶೀ ವಿಶ್ವೇಶ್ವರನ ದರ್ಶನ ಪಡೆಯೋಣ ಬನ್ನಿ
ನಮಗೆಲ್ಲರಿಗೂ ತಿಳಿದಿರುವಂತೆ ಕೋಲಾರ ಚಿನ್ನದ ಬೀಡು. ಇತ್ತೀಚೆಗೆ ಕೋಲಾರ ರೇಷ್ಮೆ ಮತ್ತು ಹಾಲಿನ ಹೊಳೆಯನ್ನೂ ಹರಿಸುತ್ತಿದೆ. ಇವೆಲ್ಲರದರ ಜೊತೆಗೆ ಅವಿಭಜಿತ ಕೋಲಾರ ಜಿಲ್ಲೆ ಹತ್ತು ಹಲವಾರು ಧಾರ್ಮಿಕ ಪುಣ್ಯಕ್ಷೇತ್ರಗಳನ್ನು ಒಳಗೊಂಡಂತಹ ನಾಡಾಗಿದೆ. ಅಂತಹ ಪುಣ್ಯಕ್ಶೇತ್ರಗಳಲ್ಲಿ ಒಂದಾದ, ಶತಶೃಂಗ ಪರ್ವತಗಳ ಸಾಲಿಗೆ ಸೇರಿರುವ ಅಂತರಗಂಗೆ ಶ್ರೀಕ್ಷೇತ್ರದ ದರ್ಶನ ಮಾಡೋಣ ಬನ್ನಿ.
ಬೆಂಗಳೂರಿನಿಂದ 65 ಕಿಮೀ ದೂರದಲ್ಲಿರುವ ಕೋಲಾರಕ್ಕೆ ತಲುಪಿ ಅಲ್ಲಿಂದ ಕೇವಲ 5 ಕಿಮೀ ಪ್ರಯಾಣಿಸಿದಲ್ಲಿ ಸುಂದರವಾದ ಅಷ್ಟೇ ದಟ್ಟವಾದ ಗಿಡಮರಗಳಿಂದ ಆವೃತವಾದ ಅಂತರ ಗಂಗೆ ಬೆಟ್ಟವನ್ನು ಕಾಣಬಹುದಾಗಿದೆ. ಎಲ್ಲರೂ ಸುಲಭವಾಗಿ ಹತ್ತಬಹುದಾದಂತಹ 30-40 ಮೆಟ್ಟಿಲುಗಳು ಅಲ್ಲಿಂದ ಸ್ವಲ್ಪ ದಾರಿ ಮತ್ತೆ ಕೆಲವು ಮೆಟ್ಟಿಲುಗಳು ಮತ್ತೆ ಸ್ವಲ್ಪ ದಾರಿ ಹೀಗೆ ಕೆಳಗಿನಿಂದ ಬೆಟ್ಟದ ಮೇಲೆ ತಲುಪಲು ಸುಮಾರು 250-300 ಮೆಟ್ಟಿಲುಗಳನ್ನು 10-12 ನಿಮಿಷಗಳಲ್ಲಿ ಸುಲಭವಾಗಿ ಹತ್ತಬಹುದಾಗಿದೆ. ಈ ಪ್ರದೇಶದಲ್ಲಿ ವಿಪರೀತ ಕೋತಿಗಳ ಹಾವಳಿಯಿದ್ದು ತಮ್ಮ ಆಹಾರದ ಅರಸುವಿಕೆಯಲ್ಲಿ ಭಕ್ತಾದಿಗಳ ಮೇಲೆ ಧಿಡೀರ್ ಎಂದು ಧಾಳಿ ಮಾಡುವ ಸಂಭವವು ಹೆಚ್ಚಾಗಿರುವ ಕಾರಣ ಪ್ರವಾಸಿಗರು ತುಸು ಜಾಗೃತೆಯನ್ನು ವಹಿಸಬೇಕಾಗಿದೆ. ಈ ಕಾನನದಲ್ಲಿ ನರಿ, ತೋಳ, ಜಿಂಕೆ, ಕಾಡು ಹಂದಿ, ನವಿಲು, ಸಾರಂಗಿ ಮುಂತಾದ ವನ್ಯ ಜೀವಿಗಳಿವೆ ಎಂಬ ಫಲಕಗಳನ್ನು ಕಾಣಬಹುದಾದರೂ, ಪ್ರಕೃತಿಯ ಮೇಲೆ ಮನುಷ್ಯರು ನಿರಂತರವಾಗಿ ನಡೆಸುತ್ತಿರುವ ದಬ್ಬಾಳಿಕೆಯಿಂದಾಗಿ ಬಹುತೇಕ ಈ ಎಲ್ಲಾ ವನ್ಯ ಜೀವಿಗಳು ಇಲ್ಲಿ ಕಾಣದಂತಾಗಿ ಹೋಗಿರುವುದು ವಿಪರ್ಯಾಸವೇ ಸರಿ.
ಸಾವಿರಾರು ವರ್ಷಗಳ ಹಿಂದೆ ಮುಚ್ಚುಕುಂದ ಮಹರ್ಷಿಗಳು ಸ್ಥಾಪಿಸಿದ್ದಾರೆಂದು ಹೇಳಲಾಗಿರುವ ಶ್ರೀ ವಿಶ್ವನಾಥ ಸ್ವಾಮಿಯ ಸಣ್ಣ ದೇವಾಲಯವಿದ್ದು ಆ ದೇವಸ್ಥಾನಕ್ಕೆ ಹೋಗುವ ಮೊದಲು ಒಂದು ಸಣ್ಣದಾದ ಕಲ್ಯಾಣಿ ಇದೆ. ಕರ್ನಾಟಕದಲ್ಲಿ ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಕೋಲಾರ ಜಿಲ್ಲೆಯೂ ಒಂದಾಗಿದ್ದು ವರ್ಷದಲ್ಲಿ ಕೇವಲ 40-50 ದಿನಗಳು ಇಲ್ಲಿ ಮಳೆ ಬೀಳಬಹುದು. ಆದರೆ, ಈ ಅಂತರಗಂಗೆಯಲ್ಲಿರುವ ಬಸವನ ಬಾಯಿಯಿಂದ ವರ್ಷಪೂರ್ತಿ ನಿರಂತರವಾಗಿ ಪವಿತ್ರ ಗಂಗೆ ಹರಿಯುತ್ತಿದೆ. ಈ ನೀರು ಹರಿಯುವ ಮೂಲ ಇದುವರೆಗೂ ಯಾರಿಗೂ ತಿಳಿದಿಲ್ಲವಾದರೂ ಈ ನೀರಿನ ಕುರಿತಾಗಿ ಮತ್ತು ಈ ಕ್ಷೇತ್ರಕ್ಕೆ ಅಂತರಗಂಗೆ ಎಂಬ ಹೆಸರು ಬರಲು ಒಂದು ಕುತೂಹಲಕಾರಿಯಾದ ಪೌರಾಣಿಕ ಕಥೆ ಇದೆ. ಹಾಗಾಗಿ ಈ ದೇವಸ್ಥಾನಕ್ಕೆ ಬರುವ ಬರುವ ಬಹುತೇಕ ಭಕ್ತಾದಿಗಳು ಬಸವನ ಬಾಯಿಯಿಂದ ಬರುವ ನೀರಿನಲ್ಲಿ ಮಿಂದು ಈ ಕಲ್ಯಾಣಿಯಲ್ಲಿ ಸ್ನಾನ ಮಾಡಿ ನಂತರ ದೇವಸ್ಥಾನಕ್ಕೆ ಪ್ರವೇಶಿಸುವುದು ಇಲ್ಲಿನ ಸಂಪ್ರದಾಯವಾಗಿದೆ. ಈ ಪವಿತ್ರವಾದ ನೀರು ಔಷದೀಯ ಗುಣಗಳನ್ನು ಹೊಂದಿದ್ದು ಅದರಲ್ಲಿ ಸ್ನಾನ ಮಾಡುವುದರಿಂದ ಅನೇಕ ರೋಗ ರುಜಿನಗಳು ನಿವಾರಣೆಯಾಗುತ್ತದೆ ಎನ್ನುವುದು ಇಲ್ಲಿನ ಭಕ್ತಾದಿಗಳ ನಂಬಿಕೆಯಾಗಿದೆ.
ಇಲ್ಲಿನ ಕಾಶೀ ವಿಶ್ವೇಶ್ವರ ಲಿಂಗದ ಪ್ರತಿಷ್ಟಾಪನೆ ಮತ್ತು ಈ ಕ್ಷೇತ್ರಕ್ಕೆ ಅಂತರಗಂಗೆ ಎಂಬ ಹೆಸರು ಬರುವ ಹಿಂದಿರುವ ಪೌರಾಣಿಕ ಕತೆಯೂ ಸಹಾ ರೋಚಕವಾಗಿದೆ.
ದ್ವಾಪರ ಯುಗ(ಮಹಾಭಾರತ)ದಲ್ಲಿ ಸಂದರ್ಭದಲ್ಲಿ ಪ್ರಜಾಪೀಡಕನಾಗಿದ್ದ ಕಾಲ್ಯವಾನ ಎಂಬ ರಾಕ್ಷಸನ ಎಂಬ ರಾಕ್ಷಸನನ್ನು ಸಂಹರಿಸುವುದು ಶ್ರೀ ಕೃಷ್ಣನ ಕೈಯಲ್ಲಿಯಿರಲ್ಲಿಲ್ಲ ಹಾಗಾಗಿ ಆ ರಾಕ್ಷಸನನ್ನು ಸಂಹರಿಸುವುದಕ್ಕೆ ಒಂದು ಉಪಾಯ ಮಾಡಿ, ಶತಶೃಂಗ ಪರ್ವತದ ಒಂದು ಗುಹೆಯಲ್ಲಿ ಮುಚ್ಚುಕುಂದ ಎಂಬ ಮಹರ್ಷಿಯೂ ಯೋಗನಿದ್ರೆ ಮಾಡುತ್ತಿದ್ದರು. ಆಗ ಶ್ರೀ ಕೃಷ್ಣನು ಕಾಲ್ಯವಾನನನನ್ನು ಕೆಣಕಿ ಮುಚ್ಚುಕುಂದ ಮಹರ್ಷಿಗಳು ಯೋಗನಿದ್ರೆ ಮಾಡುತ್ತಿರುವ ಗುಹೆಯಲ್ಲಿ ಓಡಿ ಹೋಗಿ ಮಾಯವಾಗಾಗುತ್ತಾನೆ. ಆಗ ಆ ಕಾಲ್ಯವಾನ ರಾಕ್ಷಸ ಶ್ರೀ ಕೃಷ್ಣನನ್ನು ಹುಡುಕುತ್ತಾ ಮುಚ್ಚುಕುಂದರ ಗುಹೆಗೆ ಬಂದು ಯೋಗನಿದ್ರೆ ಮಾಡುತ್ತಿರುವ ಮುಚ್ಚುಕುಂದ ಮಹರ್ಷಿಯನೇ ಮಾಯಾವಿ ಶ್ರೀಕೃಷ್ಣ ಎಂದು ಭಾವಿಸಿ ಅವರಿಗೆ ತನ್ನ ಕಾಲಿನಿಂದ ಒದ್ದನು. ವಿನಾಕಾರಣ ತಮ್ಮ ಮೇಲೆ ಹಲ್ಲಿ ಮಾಡಿದ್ದರಿಂದ ಕೋಪಗೊಂಡ ಮುಚ್ಚುಕುಂದ ಮಹರ್ಷಿಗಳು ತಮ್ಮ ಯೋಗದೃಷ್ಟಿಯಿಂದ ಆ ಕಾಲ್ಯವಾನ ರಾಕ್ಷಸನನ್ನು ಸುಟ್ಟು ಭಸ್ಮಮಾಡಿದರು. ಈ ಕಾಲ್ಯವಾನನಿಂದಾಗಿ ತನ್ನ ಯೋಗನಿದ್ರೆ ಭಂಗವಾಗಿದ್ದಲ್ಲದೇ, ತನಗೆ ಹತ್ಯಾ ದೋಷವು ತಗುಲಿತು ಎಂದು ಚಿಂತಿತರಾಗಿದ್ದಾಗ, ಶ್ರೀ ಕೃಷ್ಣನು ಮುಚ್ಚುಕುಂದ ಮಹರ್ಷಿಯವರಿಗೆ ಪ್ರತ್ಯಕ್ಷನಾಗಿ ಈ ರಾಕ್ಷಸನ ಅಂತ್ಯವು ನಿನ್ನ ಯೋಗದೃಷ್ಟಿಯಿಂದಲೇ ಅಂತ್ಯವಾಗಬೇಕೆಂದು ಕಾಲನಿಣ೯ಯವಾಗಿದ್ದರಿಂದ ನೀವು ಚಿಂತೆ ಮಾಡುವ ಅವಶ್ಯಕತೆ ಇಲ್ಲ. ನಿಮ್ಮ ಯೋಗನಿದ್ರೆ ಭಂಗದ ಪಾಪ ಪರಿಹಾರ ಮಾಡಿಕೊಳ್ಳಬೇಕೆಂದಲ್ಲಿ ಈ ಶತಶೃಂಗ ಪರ್ವತದ ಮಧ್ಯದ ಭಾಗದಲ್ಲಿ ಶಿವ ಲಿಂಗವೊಂದನ್ನು ಪ್ರತಿಷ್ಠಾಪಿಸಿ ಆ ಶಿವಲಿಂಗಕ್ಕೆ ಶ್ರೀ ಕಾಶೀವಿಶ್ವೇಶ್ವರ ಸ್ವಾಮಿ ಎಂದು ಹೆಸರಿಸಿ ಅದಕ್ಕೆ ನಿತ್ಯ ಪೂಜಾ ಕೈಂಕರ್ಯಗಳನ್ನು ನೇರವೇರಿಸಿದಲ್ಲಿ ನಿಮ್ಮ ಯೋಗನಿದ್ರೆ ಭಂಗವಾದ ಪಾಪದ ಪರಿಹಾರವಾಗುತ್ತದೆ ಎಂದು ತಿಳಿಸುತ್ತಾನೆ. ಶ್ರೀ ಕೃಷ್ಣನು ಆಜ್ಞೆಯಂತೆ ಮಹರ್ಷಿಗಳು ಶತಶೃಂಗ ಪರ್ವತದ ಮಧ್ಯದ ಭಾಗದಲ್ಲಿ ಮಹಾಗಣಪತಿ, ಶ್ರೀ ವಿಶಾಲಾಕ್ಷೀ ಸಮೇತ ಶ್ರೀ ಕಾಶಿವಿಶ್ವೇಶ್ವರ ಸ್ವಾಮಿ ಹಾಗೂ ಪಂಚಲಿಂಗ, ನವಗ್ರಹಗಳು, ಶ್ರೀ ವಿರಾಂಜನೇಯ.ಸ್ವಾಮಿ ಮತ್ತು ಶ್ರೀ ಭೈಲೇಶ್ವರ ಸ್ವಾಮಿಯನ್ನು ಪ್ರತಿಷ್ಠಾಪಿಸಿದರು.
ತಾವು ಪ್ರತಿಷ್ಠಾಪನೆ ಮಾಡಿದ ದೇವರುಗಳಿಗೆ ನಿತ್ಯ ಅಭಿಷೇಕ ಮಾಡಲು ಆ ಶತಶೃಂಗ ಪರ್ವತದ ಸಮೀಪದಲ್ಲಿಯೂ ಹಾಗೂ ಸುತ್ತಮುತ್ತಲಿನಲ್ಲಿಯೂ ಶುದ್ಧವಾದ ಜಲ ಇಲ್ಲದಿದ್ದ ಕಾರಣ, ಮುಚ್ಚುಕುಂದ ಮಹರ್ಷಿಗಳು ಪ್ರಾತ:ಕಾಲ(ಸೂಯೋದಯ)ವಾಗುವಷ್ಠರಲ್ಲೇ ತಮ್ಮ ತಪ:ಶಕ್ತಿಯಿಂದ ಉತ್ತರ ಭಾರತದ ವಾರಣಾಸಿ(ಕಾಶಿ)ಕ್ಷೇತ್ರಕ್ಕೆ ಹೋಗಿ ಅಲ್ಲಿರುವ ಗಂಗೆಯಲ್ಲಿ ಮಿಂದು ತಮ್ಮ ನಿತ್ಯ ಕಮ೯(ಸಂಧ್ಯಾವಂದನೆ ಹಾಗೂ ಜಪ-ತಪ)ಗಳನ್ನು ಮುಗಿಸಿ ಅಲ್ಲಿರುವ ಶ್ರೀ ಕಾಶೀವಿಶ್ವೇಶ್ವರ ಸ್ವಾಮಿಯ ದರ್ಶನ ಪಡೆದು ಇಲ್ಲಿನ ದೇವರ ಅಭಿಷೇಕ್ಕಾಗಿ ಗಂಗೆಯನ್ನು ತೆಗೆದುಕೊಂಡು ತಾವು ಪ್ರತಿಷ್ಠಾಪಿಸಿರುವ ಶಿವ ಲಿಂಗಕ್ಕೆ ಅಭಿಷೇಕ ಹಾಗೂ ಪೂಜೆಯನ್ನು ಮಾಡುತ್ತಿದ್ದರಂತೆ. ಹೀಗೆ ಪ್ರತಿದಿನವೂ ಅಷ್ಟು ದೂರದಿಂದ ಬರುತ್ತಿದ್ದ ಈ ಮುನಿಗಳನ್ನು ಗಮನಿಸಿದ ಗಂಗಾಮಾತೆಯು, ಎಲೈ ಮುನಿವರ್ಯರೇ ನೀವು ಪ್ರತಿದಿನವೂ ಅಷ್ಟು ದೂರದಿಂದ ಬರುವ ಅವಶ್ಯಕತೆ ಇಲ್ಲ, ನಾನೇ ನೀವು ಇರುವಲ್ಲಿಗೆ ಬರುತ್ತೇನೆ ಎನ್ನುತ್ತಾಳೆ. ಗಂಗೆಯ ಮಾತನ್ನು ನಂಬದ ಮುನಿಗಳು ನೀನೇ ಅಲ್ಲಿಗೆ ಬರುತ್ತೇಯೇ ಎಂದು ಹೇಗೆ ನಂಬುವುದು? ಎಂಬ ಸಂದೇಹವನ್ನು ವ್ಯಕ್ತಪಡಿಸಿದಾಗ, ಋಷಿಗಳ ಕೈಯ್ಯಲ್ಲಿದ ಬೆತ್ತ, ನಿಂಬೇಹಣ್ಣು ಮತ್ತು ಕಮಂಡಲಗಳಲ್ಲಿ ಬೆತ್ತ ಮತ್ತು ನಿಂಬೇಹಣ್ಣುಗಳನ್ನು ಅವರಿಂದ ಪಡೆದುಕೊಂಡು ನೀವು ಈ ಕೂಡಲೇ ನಿಮ್ಮ ಪ್ರದೇಶಕ್ಕೆ ಹೋಗಿ. ನಿಮ್ಮ ಶಿವ ಲಿಂಗದ ತಳ ಭಾಗ(ಶಿವ ಲಿಂಗದ ಕೇಳ)ಭಾಗದಲ್ಲಿ ನಿಂಬೆ ಹಣ್ಣು,ಬೆತ್ತ ಹಾಗೂ ಗಂಗಾ ಜಲ ಈ ಮೂರು ಸೇರಿ ಅಂತರ ಮಾಗ೯ದಿಂದ ಬರುತ್ತೇನೆ ಎನ್ನುತ್ತಾಳೆ. ಆಗ ಆ ಮುಚ್ಚುಕುಂದ ಮಹರ್ಷಿಯು ಗಂಗಾ ದೇವಿಗೆ ನಮಸ್ಕರಿಸಿ ಶ್ರೀ ಕಾಶೀ ವಿಶ್ವೇಶ್ವರ ಸ್ವಾಮಿಯ ಸಮೀಪ ಬಂದು ನೋಡಿದಾಗ ಆ ಶಿವ ಲಿಂಗದ ತಳ ಭಾಗದಲ್ಲಿ ಗಂಗಾ ದೇವಿ ಹೇಳಿದಂತೆ ನಿಂಬೆ ಹಣ್ಣು, ಬೆತ್ತ ಹಾಗೂ ಗಂಗಾ ಜಲ ಈ ಮೂರು ಸೇರಿ ಶಿವ ಲಿಂಗ ಕೆಳಭಾಗದಲ್ಲಿ ಬರುವುದನ್ನು ಮುಚ್ಚುಕುಂದ ಮಹರ್ಷಿಯೂ ನೋಡಿ ಶ್ರೀ ಕಾಶೀವಿಶ್ವೇಶ್ವರ ಸ್ವಾಮಿಗೆ ನಮಸ್ಕರಿಸಿ ಆ ನಿಂಬೆ ಹಣ್ಣು ಮತ್ತು ಆ ಬೆತ್ತವನ್ನು ಅವರ ಕೈಗೆ ತೆಗೆದುಕೊಂಡು ಆ ಗಂಗಾ ಜಲವನ್ನು ಮಾತ್ರ ಆ ಶಿವ ಲಿಂಗದ ತಳ ಭಾಗದಲ್ಲಿ ಸ್ಥಾಪಿಸಿದರು. ಆದಾದ ನಂತರ ಆ ಶತಶೃಂಗ ಪರ್ವತದ ಮಧ್ಯದ ಭಾಗದಲ್ಲಿರುವ ಶ್ರೀ ಕಾಶೀವಿಶ್ವೇಶ್ವರ ಸ್ವಾಮಿ ದೇವರ ಪಕ್ಕದ ಸ್ಥಳ(ದಕ್ಷಿಣ ಭಾಗ)ದಲ್ಲಿ ಎರಡು ಕಲ್ಲಿನ ಬಸವ ಮೂರ್ತಿಯನ್ನು ಮತ್ತು ವಿಷ್ಣುವಿನ ಮೂತಿ೯ಯನ್ನು ಪ್ರತಿಷ್ಠಾಪಿಸಿದರು. ನಂತರ ಒಂದು ಬಸವಣ್ಣನ ಬಾಯಿಂದ, ಮತ್ತೊಂದು ಬಸವಣ್ಣನ ಹೊಕ್ಕಳಿನಿಂದ ಹಾಗೂ ವಿಷ್ಣುಮೂತಿ೯ಯ ಪಾದದಿಂದ ಗಂಗಾ ಜಲವು ಬರುವಂತೆ ಸ್ಥಾಪಿಸಿದರು. ನದಿಯ ಮೂಲ ಋಷಿಯ ಮೂಲ ಹುಡುಕಬಾರದು ಎಂಬ ಮಾತಿದೆ ಅದೇ ರೀತಿ, ಆ ಉತ್ತರ ಭಾರತದ ಕಾಶಿಯಿಂದ ಗಂಗಾ ಜಲವು ಇಲ್ಲಿಗೆ ಅಂತರ ಮಾರ್ಗದಿಂದ ಬರುವುದಾಗಲಿ ಶಿವನ ತಳ ಭಾಗದಲ್ಲಿ ಬರುವುದಾಗಲಿ ಯಾರಿಗೂ ಕಾಣುವುದಿಲ್ಲವಾದ್ದರಿಂದ ಈ ಪ್ರದೇಶಕ್ಕೆ ಅಂತರಗಂಗೆ ಎಂಬ ಹೆಸರು ಬಂದಿತು ಎನ್ನಲಾಗಿದೆ. ಇನ್ನು ಉತ್ತರ ಭಾರತದ ಗಂಗೆ ದಕ್ಷಿಣ ಭಾರತದಲ್ಲಿರುವ ಈ ವಿಶ್ವೇಶ್ವರಸ್ವಾಮಿಯ ಕ್ಷೇತ್ರಕ್ಕೆ ಹರಿದು ಬಂದ ಕಾರಣ ಈ ಪ್ರದೇಶವನ್ನು ದಕ್ಷಿಣಕಾಶೀ ಎಂದೂ ಕರೆಯಲಾಗುತ್ತದೆೆ ಎಂಬ ಕಥೆಯನ್ನು ಈ ದೇವಾಲಯದ ಅರ್ಚಕರಾಗಿರುವ ಶ್ರೀ ಕಾಶೀವಿಶ್ವನಾಥ ದೀಕ್ಷಿತರು ಆವರಿಂದ ಕೇಳಿದಾಗ ನಿಜಕ್ಕೂ ರೋಚಕವೆನಿಸಿತು. ಅಂದು ಹೀಗೆ ಉದ್ಭವವಾದ ಗಂಗೆಯು ಇದುವರೆಗೂ ನಿರಂತರವಾಗಿ ಹರಿದು ಬಸವಣ್ಣನ ಬಾಯಿಯಿಂದ ಹೊರಹೊಮ್ಮಿ ಕಲ್ಯಾಣಿಯ ಮೂಲಕ ಹೊರಹೋಗುವುದನ್ನು ಇಂದಿಗೂ ಕಾಣಬಹುದಾಗಿದ್ದು ಎಂತಹ ಬರ ಪರಿಸ್ಥಿತಿಯಲ್ಲಿಯೂ ಇದು ಬತ್ತದಿರುವುದು ನಿಜಕ್ಕೂ ಅದ್ಭುತವಾಗಿದೆ.
ಇನ್ನು ದೂರದಿಂದ ಈ ಬೆಟ್ಟವನ್ನು ನೋಡಿದಲ್ಲಿ ನೂರು ಶೃಂಗಗಳು ಅಂದರೆ ಕೋಡು ಅಥವಾ ಕೊಂಬುಗಳು ಇರುವಂತೆ ಕಾಣುವುದರಿಂದ ಇದನ್ನು ಶತಶೃಂಗ ಪರ್ವತ ಎಂದೂ ಕರೆಯಲಾಗುತ್ತದೆ. ಕಾಶೀ ವಿಶ್ವೇಶ್ವರ ಸ್ವಾಮಿಯ ಪಕ್ಕದಲ್ಲಿಯೇ ಒಂದು ಕಡೆ ವಿಶಾಲಾಕ್ಷಿ ಅಮ್ಮನವರಗುಡಿ ಮತ್ತೊಂದು ಕಡೆ ಗಣೇಶನ ಗುಡಿ ಮತ್ತು ಅದರ ಜೊತೆಯಲ್ಲಿಯೇ ವೀರಭಧ್ರಸ್ವಾಮಿಯನ್ನೂ ಕಾಣಬಹುದಾಗಿದೆ. ಇದೇ ಗುಡಿಯಲ್ಲಿ ಹರಿಹರೇಶ್ವರ, ಮಹಾಬಲೇಶ್ವರ, ಮಲ್ಲಿಕಾರ್ಜುನೇಶ್ವರ, ಪಾತಾಳೇಶ್ವರ ಈ ನಾಲ್ಕು ಲಿಂಗಗಳ ಜೊತೆ ಕಾಶೀ ವಿಶ್ವೇಶ್ವರನೂ ಸೇರಿ ಒಟ್ಟು ಐದು ಲಿಂಗಗಳು ಸೇರಿ ಪಂಚಲಿಂಗಗಳ ದರ್ಶನ ಪಡೆಯುವ ಭಾಗ್ಯ ಈ ಕ್ಷೇತ್ರದಲ್ಲಿ ಪಡೆಯ ಬಹುದಾಗಿದೆ.
1959ರಲ್ಲಿ ಲಕ್ಷ್ಮಣ್ ರಾವ್ ಎಂಬ ಜಿಲ್ಲಾಧಿಕಾರಿಗಳ ಕಾಲದಲ್ಲಿ ಈ ದೇವಾಲಯವನ್ನು ಜೀರ್ಣೋದ್ಧಾರ ಮಾಡಿಸಿ ಚೆಂದದಾದ 250 ಮೆಟ್ಟಿಲುಗಳನ್ನು ಕಟ್ಟಿಸಿ ಆ ಬಸವಣ್ಣ ಬಾಯಿಂದ ಬರುವ ಗಂಗಾ ಜಲದ ಸ್ಥಳದ ಮೇಲೆ ಒಂದು ಗೋಪುರ ಕಟ್ಟಿ ಅಲ್ಲಿ ಪಕ್ಕದಲ್ಲಿ ಒಂದು ಸುಂದರವಾದ ಕಲ್ಯಾಣಿಯನ್ನು ಸಹಾ ಜೀರ್ಣೋದ್ಧಾರ ಮಾಡಿಸಿದರು. ವರ್ಷದ 365 ದಿನವೂ ಇಲ್ಲಿ ನಿತ್ಯ ಪೂಜೆ ಸಾಂಗೋಪಾಂಗವಾಗಿ ನಡೆಯುತ್ತಿದ್ದು ಹಬ್ಬಹರಿದಿನಗಳುಕಾತಿ೯ಕ ಮಾಸದ ಸೋಮವಾರಗಳು ಕಾತಿ೯ಕ ಮಾಸದ ಹುಣ್ಣಿಮೆ ಮಾರ್ಗಶಿರ ಮಾಸದ ಕೃತ್ತಿಕ ನಕ್ಷತ್ರದ ದಿನದಂದು ಇಲ್ಲಿ ಆಚರಿಸುವ ಲಕ್ಷದೀಪೋತ್ಸವದಲ್ಲಿ ಇಡೀ ಅಂತರಗಂಗೆ ಬೆಟ್ಟದ ಮೇಲೆ ದೀಪಾಲಂಕಾರವಾಗಿರುತ್ತದೆ. ಇನ್ನು ಮಹಾಶಿವರಾತ್ರಿಯ ದಿನದಂದು ಶ್ರೀ ಕಾಶೀವಿಶ್ವೇಶ್ವರ ಸ್ವಾಮಿಯ ಮೇಲೆ ಸೂರ್ಯನ ಕಿರಣ ಬೀಳುವುದು ಇಲ್ಲಿಯ ಮತ್ತೊಂದು ವಿಶೇಷವಾಗಿದೆ. ಅದೇ ರಾತ್ರಿ ಇಡೀ ಯಾಮದ ವಿಶೇಷ ಪೂಜೆ ನಡೆಯುತ್ತದೆ. ಸದ್ಯಕ್ಕೆ ಈ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಲ್ಪಟ್ಟಿದ್ದು ಭಕ್ತಾದಿಗಳು ಸಲ್ಲಿಸುವ ಕಾಣಿಕೆಗಳಿಂದಲೇ ದೇವಸ್ಥಾನ ನಿತ್ಯ ಪೂಜೆಗಳು ನಡೆಯುತ್ತಿದೆ.
ದೇವಾಲಯದ ಹಿಂಭಾಗದಲ್ಲಿ ಸ್ವಲ್ಪ ಕಿರಿದಾದ ಕಾಲು ಜಾಡಿನ ರಸ್ತೆಯ ಮೂಲಕ ಅರಣ್ಯಕ್ಕೆ ಹೋಗುವ ಮಾರ್ಗವಿದೆ. ಈ ಪ್ರದೇಶವು ಚಾರಣ ಪ್ರಿಯರಿಗೆ ಮತ್ತು, ಪರ್ವತಾರೋಹಣ ಮಾಡುವವರಿಗೆ ತಮ್ಮ ರಾತ್ರಿ ಸಂಚರಣೆ ಹಾಗು ಸಾಹಸ ಚಟುವಟಿಕೆಗಳನ್ನು ಮಾಡಲು ಪರಿಪೂರ್ಣ ಸ್ಥಳವಾಗಿದೆ. ಈ ಬೆಟ್ಟದ ಸುತ್ತಲೂ ಅನೇಕ ಅಗ್ನಿ ಪರ್ವತದ ಶಿಲೆಗಳು ಹಾಗು ನೈಸರ್ಗಿಕವಾಗಿ ಕೊರೆಯಲಾದ ಗುಹೆಗಳು ಇದ್ದು ಈ ಬೆಟ್ಟದ ಮೇಲ್ಭಾಗದಿಂದ ಕೋಲಾರದ ಪರಿಪೂರ್ಣ ಚಿತ್ರಣವನ್ನು ಕಾಣಬಹುದಾಗಿದೆ. ಇದೇ ಪ್ರದೇಶದಲ್ಲಿಯೇ ಸಣ್ಣದಾಗಿ ಝರಿಯೊಂದು ಮೇಲಿಂದ ಕೆಳಗೆ ಬೀಳುವ ಮೂಲಕ ಸಣ್ಣದಾದ ಜಲಪಾತ ಇಲ್ಲಿಗೆ ಬರುವ ಭಕ್ತಾದಿಗಳಿಗೆ ಮತ್ತೊಂದು ಆಕರ್ಶಣೆಯಾಗಿದ್ದು ಈ ನೀರು ಮಳೆಗಾಲದಲ್ಲಿ ಮಾತ್ರ ಕಾಣಬಹುದಾಗಿದೆ.
ಬೆಟ್ಟದ ತಟದಲ್ಲಿ ಒಂದೆರದು ಸಣ್ಣ ಕಾಫೀ ಟೀ, ತಂಪುಪಾನೀಯಗಳು ಒಂದೆರಡು ಕಡೆ ಬೇಲ್ ಪುರಿ, ಕತ್ತರಿಸಿ ಖಾರ ಹಾಕಿದ ಸೌತೇಕಾಯಿ ಮತ್ತು ಕತ್ತರಿಸಿದ ಹಣ್ಣುಗಳು ಜೊತೆ ಬಾಟೆಲ್ ನೀರಿನ ಹೊರತಾಗಿ ಬೇರಾವುದೇ ಊಟೋಪಚಾರದ ವ್ಯವಸ್ಥೆ ಇಲ್ಲದಿರುವುದರಿಂದ ಇಲ್ಲಿಗೆ ಬರುವಾಗ ಕುಡಿಯಲು ಮತ್ತು ತಿನ್ನಲು ಅವಶ್ಯಕವಾದ ವಸ್ತುಗಳನ್ನು ತಮ್ಮೊಂದಿಗೆ ತರುವುದು ಒಳಿತು. ಅದರ ಜೊತೆಯಲ್ಲಿ ಈ ಪ್ರದೇಶ ಪ್ಲಾಸ್ಟಿಕ್ ಮುಕ್ತವಾದ ಪ್ರದೇಶ ಎಂಬುದಾಗಿರುವ ಕಾರಣ ತಾವು ತಂದಂತಹ ತ್ರಾಜ್ಯಗಳನ್ನು ಇಲ್ಲಿ ಬಿಸಾಡದಿರುವ ಮೂಲಕ ಈ ಪ್ರದೇಶದ ಸ್ವಚ್ಚತೆಯನ್ನು ಕಾಪಾಡುವುದು ಎಲ್ಲರ ಕರ್ತವ್ಯವಾಗಿದೆ. ಇನ್ನು ಇಲ್ಲಿರುವ ಗಿಡಮರ ಮತ್ತು ಪೊದೆಗಳು ಹೇರಳವಾಗಿರುವುದನ್ನು ದುರುಪಯೋಗ ಪಡಿಸಿಕೊಳ್ಳುವ ಪ್ರೇಮಿಗಳ ಸಂಖ್ಯೆಯೂ ಇಲ್ಲಿ ಕಡಿಮೇ ಇಲ್ಲದಿರುವ ಕಾರಣ ಈ ಕುರಿತಂತೆ ಇಲ್ಲಿನ ಅರಣ್ಯ ಇಲಾಖೆಯ ರಕ್ಷಣಾ ಇಲಾಖೆಯವರು ಗಮನ ಹರಿಸುವುದು ಸೂಕ್ತವಾಗಿದೆ.
ಇಷ್ಟೆಲ್ಲಾ ವಿಷಯಗಳನ್ನು ತಿಳಿದ ನಂತರ ಇನ್ಣೇಕ ತಡಾ, ಈ ವಾರಾಂತ್ಯದಲ್ಲಿ ಸಮಯ ಮಾಡಿಕೊಂಡು ಕೋಲಾರದ ಅಂತರಗಂಗೆ ಅರ್ಥಾತ್ ದಕ್ಷಿಣಕಾಶಿಗೆ ಭೇಟಿ ನೀಡಿ ಬಸವಣ್ಣನ ಬಾಯಿಯಿಂದ ಬೀಳುವ ಔಷಧೀಯ ಗುಣವಿರುವ ನೀರಿನಲ್ಲಿ ಮಿಂದು ಶ್ರದ್ಧೆಯಿಂದ ಕಾಶೀವಿಶ್ವೇಶ್ವರನ ದರ್ಶನ ಪಡೆದು ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ