ಅಕ್ಷರ ಸಂತ ಹರೇಕಳ ಹಾಜಬ್ಬ

hajabba1ಅದೊಮ್ಮೆ ಮಂಗಳೂರಿನಲ್ಲಿ ರಸ್ತೆಯಲ್ಲಿ ಕಿತ್ತಲೆ ಹಣ್ಣುಗಳನ್ನು ಮಾರುತ್ತಿದ್ದ ವ್ಯಕ್ತಿಯೊಬ್ಬರ ಬಳಿ ಬಂದ ದಂಪತಿಗಳು ಕಾರಿನಲ್ಲಿಯೇ ಕುಳಿತುಕೊಂಡು ಹೌ ಮಚ್ ಈಸ್ ದಿಸ್? ಎಂದು ಆಂಗ್ಲ ಭಾಷೆಯಲ್ಲಿ ಕೇಳಿದಾಗ, ಕನ್ನಡ, ತುಳು ಮತ್ತು ಬ್ಯಾರಿ ಬಿಟ್ಟರೇ ಮತ್ತಾವುದೇ ಭಾಷೆಯ ಪರಿಚಯವಿರದಿದ್ದ ಆ ಕಿತ್ತಳೇ ವ್ಯಾಪಾರಿಗೆ ಅವರು ಏನು ಹೇಳುತ್ತಿದ್ದಾರೆ ಎಂದು ಅರ್ಥವಾಗಲಿಲ್ಲ. ಹೀಗೆ ಪರಸ್ಪರ ಭಾಷೆಯ ಸಂವಹನೆಯ ಕೊರತೆಯಿಂದಾಗಿ ಅವರಿಬ್ಬರ ನಡುವೆ ವ್ಯಾಪಾರ ವಹಿವಾಟು ನಡೆಯದೇ ಅವರು ಬೇರೆಯವರ ಬಳಿ ಹಣ್ಣುಗಳನ್ನು ಖರೀದಿಸಿದಾಗ, ಆ ಕಿತ್ತಳೇ ವ್ಯಾಪಾರಿಗೆ ಬಹಳ ಬೇಸರವಾಯಿತು. ತನಗೆ ಹೀಗೆ ಆಗಿದ್ದು, ತನ್ನ ಮಕ್ಕಳಿಗೆ ಮತ್ತು ತನ್ನ ಸ್ವಂತ ಹಳ್ಳಿಯ ಮಕ್ಕಳಿಗೆ ಅಗಬಾರದೆಂದು ನಿರ್ಧರಿಸಿ ತಮ್ಮ ಸ್ವಂತ ದುಡಿಮೆಯ ಹಣದಲ್ಲಿ ತಮ್ಮ ಊರಿನಲ್ಲಿ ಸರ್ಕಾರಿ ಶಾಲೆಯನ್ನು ಆರಂಭಿಸಿ ತನ್ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸವನ್ನು ನೀಡಿದ ಈ ಅಕ್ಷರ ಬ್ರಹ್ಮನ ಸಾಧನೆಯನ್ನು ಗುರುತಿಸಿ ಕೇಂದ್ರ ಸರ್ಕಾರವೂ 2020ರ ಸಾಲಿನ ಪದ್ಮಶ್ರೀ ನೀಡಿ ಗೌರವಿಸಿದೆ. ಅಂತಹ ಎಲೆಮರೆಕಾಯಿ ಹರೇಕಳ ಹಾಜಬ್ಬನವರ ಯಶೋಗಾಥೆಯನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.

ಮಂಗಳೂರು ತಾಲ್ಲೂಕಿನ ಹರೇಕಳ ಎಂಬ ಸಣ್ಣ ಊರಿನಲ್ಲಿ ಕಡು ಬಡತನದ ಕುಟುಂಬದಲ್ಲಿ ಹಾಜಬ್ಬ ಅವರ ಜನನವಾಗುತ್ತದೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನದ ಜೊತೆ ಹತ್ತಾರು ಮಕ್ಕಳು. ದುಡಿಯುವ ಕೈ ಒಂದಾರೆ, ತಿನ್ನುವ ಕೈಗಳು ಹತ್ತಾರು ಎಂಬಂತಹ ಪರಿಸ್ಥಿತಿ ಇದ್ದ ಕಾರಣ, ಬಾಲ್ಯದಲ್ಲಿ ಶಾಲೆಯ ಮೆಟ್ಟಿಲು ಹತ್ತಲಾಗದೇ ಮನೆಯ ಜೀವನೋಪಾಯದ ನೊಗ ಹೊತ್ತು ಚಿಕ್ಕಂದಿನಲ್ಲೇ ಬುಟ್ಟಿಯಲ್ಲಿ ಕಿತ್ತಳೆ ಹಣ್ಣುಗಳನ್ನು ಹೊತ್ತು ಕೊಂಡು ಬೀದಿ ಬೀದಿಯಲ್ಲಿ ಮಾರುವ ಕಾಯಕವನ್ನು ಕೈಗೆತ್ತಿ ಗೊಂಡರು. ಪ್ರತಿದಿನ ವ್ಯಾಪಾರದಲ್ಲಿ ಗಳಿಸುತ್ತಿದ ದಿನನಿತ್ಯದ ಕುಟುಂಬ ನಿರ್ವಹಣೆಗೇ ಸಾಕಾಗುತ್ತಿತ್ತು.

hajabba3ಶಿಕ್ಷಣ ಇಲ್ಲದಿದ್ದರೆ ಮನುಷ್ಯ ಎಂತಹ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಸ್ವತಃ ಅನುಭವಿಸಿದ್ದನ್ನು ಈ ಲೇಖನದ ಆರಂಭದಲ್ಲೇ ತಿಳಿದ್ದಿದ್ದೇವೆ. ತಾನು ಶಿಕ್ಷಣದಿಂದ ವಂಚಿತನಾದರೂ ಮುಂದಿನ ಪೀಳಿಗೆ ಇಂತಹ ಪರಿಸ್ಥಿತಿ ಎದುರಿಸ ಬಾರದು. ಅದಕ್ಕೆ ಬೇರೆಯವನ್ನು ದೂರಿದರೆ ಫಲವಿಲ್ಲ, ಹಾಗಾಗಿ ತನ್ನಕೈಯ್ಯಲಿ ಏನಾದರೂ ಮಾಡಲೇ ಬೇಕು ಎಂಬ ಧೃಢಸಂಕಲ್ಪ್ವನ್ನು ತೊಟ್ಟು ತಲೆಯಮೇಲೆ ಬುಟ್ಟಿಯಲ್ಲಿ ಕಿತ್ತಳೆ ಹಣ್ಣುಗಳನ್ನು ಹೊತ್ತು ವ್ಯಾಪಾರ ಮಾಡುತ್ತಿದ್ದಾಗಲೇ ತಮ್ಮೂರಿನಲ್ಲಿ ಶಾಲೆಯೊಂದನ್ನು ಕಟ್ಟಬೇಕೆಂಬ ಆಸೆ ಚಿಗುರಿ. ಆ ಕನಸನ್ನು ಕೇವಲ ತಮ್ಮ ಮನದಲ್ಲೇ ಇಟ್ಟುಕೊಳ್ಳದೇ ಅದನ್ನು ತನ್ನ ಬದುಕಿನ ಗುರಿಯಾಗಿ ಸ್ವೀಕರಿಸಿ, ಜಗತ್ತಿಗೆ ಗೊತ್ತೇ ಇರದಿದ್ದ ಹರೇಕಳ ಎಂಬ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಕ್ರಾಂತಿಗೆ ಕಾರಣರಾಗಿ ಜನಮಾನಸದಲ್ಲಿ ಅಕ್ಷರ ಸಂತನಾಗಿ ಮೂಡಿದ ಕಾರ್ಯ ನಿಜಕ್ಕೂ ಅನನ್ಯ, ಅಭಿನಂದನಾರ್ಹ ಮತ್ತು ಅನುಕರಣೀಯವೇ ಸರಿ.

hab5ಶಾಲೆಯನ್ನು ಕಟ್ಟುವ ಆವರ ಆಸೆ ಸುಖಾ ಸುಮ್ಮನೇ ಈಡೇರಲಿಲ್ಲ ಅದಕ್ಕಾಗಿ ಹಣ್ಣುಗಳನ್ನು ಮಾರುತ್ತಲೇ ಅಕ್ಷರಶಃ ಸರ್ಕಾರೀ ಕಛೇರಿಗಳಿಂದ ಕಛೇರಿಗೆ ಅಲೆದ ಕಷ್ಟ ಪಟ್ಟ ಪಾಡು ಅಷ್ಟಿಷ್ಟಲ್ಲ. ಗಿರೀಶ್ ಕಾಸರವಳ್ಳಿಯವರ ತಬರನ ಕಥೆ ಚಿತ್ರದಲ್ಲಿ ತಮ್ಮ ಪಿಂಚಣಿ ಹಣಕ್ಕಾಗಿ ಚಾರುಹಾಸನ್ ಅವರು ಕಛೇರಿಯಿಂದ ಕಛೇರಿಗೆ ಅಲೆದಾಡುವುದನ್ನು ನೆನಪಿಸಿಕೊಂಡರೆ, ಹಾಜಪ್ಪಾ ಅವಾರು ಕಿತ್ತು ತಿನ್ನುವ ಬಡತನ ಲೆಕ್ಕಿಸದೆ ಕಿತ್ತಳೆ ಮಾರಾಟದ ಮಧ್ಯೆ ಶಾಲೆಗಾಗಿ ಕಚೇರಿಗಳಿಗೆೆ ಅಲೆದಾಡಿದ ರೀತಿ ಅದಕ್ಕಿಂತಲು ಭಿನ್ನವಾಗಿರಲಿಲ್ಲ. ಅಂತಿಮವಾಗಿ ಜೂನ್ 17 2000ರಂದು ಹರೇಕಳ ನ್ಯೂಪಡು ಗೆ ಸರಕಾರಿ ಶಾಲೆ ಮಂಜೂರು ಮಾಡಿಸಿಕೊಂಡು ಬರುವುದರಲ್ಲಿ ಯಶಸ್ವಿಯಾದರು. ಶಾಲೆಗೆ ಸರ್ಕಾರದ ಮಂಜೂರಾತಿಯೇನೋ ಇತ್ತು ಆದರೆ ಶಾಲೆ ಆರಂಭಿಸಲು ಕಟ್ಟಡವೇ ಇರಲಿಲ್ಲ. ಶಾಲೆಗೆ ಸ್ವಂತ ಕಟ್ಟಡ ನಿರ್ಮಿಸಲು ಅಲ್ಲೇ ಬೋರಲುಗುಡ್ಡದ ಬಳಿ 40 ಸೆಂಟ್ಸ್ ಜಾಗ ಖರೀದಿಸುವ ಸಲುವಾಗಿ ತಾವು ಕಿತ್ತಳೆ ಹಣ್ಣಿನ ವ್ಯಾಪಾರ ಮಾಡಿ ಮುಂದೆ ಉಪಯೋಗಕ್ಕೆ ಆಗಲಿ ಎಂದು ಉಳಿಸಿದ್ದ ಸುಮಾರು 25,000 ರೂ.ಗಳ ಜೊತೆ ಊರಿನ ಇತರೇ ದಾನಿಗಳ ಸಹಾಯದಿಂದ ಹಣವನ್ನು ಸಂಗ್ರಹಿಸಿ ಜಾಗದ ಖರೀದಿಯೊಂದಿಗೆ ಶಾಲೆಗೆ ಅವಶ್ಯವಿರುವ ಎಲ್ಲಾ ಮೂಲ ಸೌಕರ್ಯಗಳೊಂದಿಗೆ ನೋಡ ನೋಡುತ್ತಿದ್ದಂತೆಯೇ ಅಲ್ಲೊಂದು ಸುಂದರವಾದ ಶಾಲೆ ತಲೆೆ ಎತ್ತಿತ್ತು. ಸ್ವಾರ್ಧಕ್ಕಲದೆ ದೇವಲೋಕದಿಂದ ಗಂಗೆಯನ್ನು ಭೂಲೋಕಕ್ಕೆ ತಂದ ಭಗೀರಥನಂತೆ ಸಾರ್ವಜನಿಕರಿಗಾಗಿ ಶಾಲೆಯನ್ನು ನಿರ್ಮಿಸಲು ಹಾಜಬ್ಬನವರು ಪಡುತ್ತಿರುವ ಕಷ್ಟವನ್ನು ನೋಡಿ ಅವರಿಗೆ ಸಹಾಯ ಮಾಡಲು ಹತ್ತಾರು ಕೈಗಳು ಜೋಡಿಸುತ್ತಿದ್ದಂತೆಯೇ ಶಾಲೆ ಆರಂಭವಾದಾಗ ಹಾಜಬ್ಬನವರ ಸಂಭ್ರಮಕ್ಕೆೆ ಎಣೆಯೇ ಇಲ್ಲ. ಶಾಲೆ ಆರಂಭವಾದಾಗಲಿಂದಲೂ ಇಂದಿನವರೆಗೂ ಶಾಲೆಯೇ ಅವರ ಬದುಕಿನ ಸರ್ವಸ್ವವಾಗಿ, ನೂರಾರು ಮಕ್ಕಳಿಗೆ ಅಕ್ಷರ ಭಾಗ್ಯವನ್ನು ಕರುಣಿಸುತ್ತಿರುವ ಸರಕಾರಿ ಶಾಲೆಗೆ ಇಂದಿಗೂ ಪ್ರತಿದಿನವೂ ಭೇಟಿ ನೀಡಿದಾಗಲೇ ಅವರ ಮನಸ್ಸಿಗೆ ಸಮಾಧಾನವಾಗುವುದು.

hag6ಸರಕಾರಿ ಶಾಲೆಯಾದರೂ ಅದು ತಮ್ಮದೇ ಖಾಸಗೀ ಶಾಲೆಯೇನೋ ಎನ್ನುವಂತೆ ಪ್ರೀತಿಸುವ ಹಾಜಬ್ಬನವರು ಶಾಲೆಗೆ ಬರುತ್ತಿರುವ ಮಕ್ಕಳ ಉತ್ಸಾಹವನ್ನು ಕಂಡು ಶಾಲೆಯನ್ನು ಹಿರಿಯ ಪ್ರಾಥಮಿಕದವರೆಗೆ ವಿಸ್ತರಿಸಲು ಪಣತೊಟ್ಟಿದ್ದಲ್ಲದೇ, ತಮ್ಮ ಅವಿರತ ಶ್ರಮದಿಂದ ಈಗ ಅದು ಪ್ರೌಢಶಾಲೆಯವರೆಗೂ ತಲುಪಿದೆ. 20 ಮಕ್ಕಳಿಂದ ಆರಂಭವಾದ ಶಾಲೆಯಲ್ಲಿ ಈಗ 170 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು ಈಗ ಅಲ್ಲಿ ಕಾಲೇಜ್ ಮತ್ತು ಐಟಿಐ ಕೂಡಾ ಸ್ಥಾಪಿಸುವ ಕನಸು ಹಾಜಬ್ಬನವರದ್ದಾಗಿದ್ದು, ಅವರ ಛಲವನ್ನು ನೋಡಿದಲ್ಲಿ ಕೇವಲ ಪ್ರಥಮ ದರ್ಜೆ ಏಕೆ? ಪದವಿ ಶಿಕ್ಷಣದ ಕಾಲೇಜ್ ಕೂಡಾ ಇನ್ನು ಕೆಲವೇ ವರ್ಷಗಳಲ್ಲಿ ಆರಂಭವಾಗುವುದರಲ್ಲಿ ಸಂದೇಹವೇ ಇಲ್ಲ. ಹರೇಕಳದ ಹಾಜಬ್ಬರು ಕಟ್ಟಿಸಿದ ಶಾಲೆಯಲ್ಲಿ ಕಲಿತ ಅದೆಷ್ಟೋ ಮಂದಿ ಈಗ ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರೆ.. ಆದರೆ ಹಾಜಬ್ಬನವರು ಮಾತ್ರಾ ಇಂದಿಗೂ ಒಂದು ಬಿಳಿಯಂಗಿ, ಪೈಜಾಮ ಧರಿಸಿಕೊಂಡು ಕೈಯ್ಯಲ್ಲಿ ಹಣ್ಣಿನ ಬುಟ್ಟಿಯನ್ನು ಹಿಡಿದು ಹಾದಿ ಬೀದಿ ತಿರುಗುತ್ತಾರೆ.

hab4ಹಾಜಬ್ಬನವರ ಈ ರೀತಿಯ ಸಾಹಸವನ್ನು ಮೆಚ್ಚಿ ಹತ್ತು ಹಲವಾರು ಸಂಘಟನೆಗಳು ಅವರಿಗೆ ಪ್ರಶಸ್ತಿ ಪುರಸ್ಕಾರಗಳ ಜೊತೆ ಕೊಡುವ ನಗದನ್ನು ಸಹಾ ಎಷ್ಟೇ ಬಡತನ ಇದ್ದರೂ, ತಮ್ಮ ಮತ್ತು ತಮ್ಮ ಪತ್ರಿಯ ಆರೋಗ್ಯ ಕ್ಷೀಣಿಸುತ್ತಿದ್ದರೂ, ಎಷ್ಟೇ ಬಡತನವಿದ್ದರೂ, ಆ ಲಕ್ಷಾಂತರ ಮೊಬಲಗಿನ ಪ್ರಶಸ್ತಿ ಮೊತ್ತವನ್ನು ಶಾಲೆಯ ಅಭಿವೃದ್ಧಿಗಾಗಿಯೇ ವಿನಿಯೋಗಿಸುತ್ತಿದ್ದಾರೆ. ಇದರ ಜೊತೆಗೆ ಸುಮಾರು 70 ಲಕ್ಷ ರೂ. ದೇಣಿಗೆ- ಅನುದಾನವನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿಕೊಟ್ಟಿರುವುದಲ್ಲದೇ, 20 ಸೆಂಟ್ಸ್ ಗಳ ಜಾಗದಿಂದ ಆರಂಭವಾದ ಶಾಲೆ ಇಂದು ಒಂದು ಎಕ್ರೆ ಮೂವತ್ಮೂರುವರೇ ಸೆಂಟ್ಸ್ ನಷ್ಟು ವಿಶಾಲವಾದ ಜಮೀನಿನಲ್ಲಿ ಸುಂದರವಾಗಿ ತಲೆ ಎತ್ತಿದೆ.

hab6
ಮಠ ಮಂದಿರಗಳಿಗೆ ಕೊಡುವ ದೀಪ ಆರತಿ ತಟ್ಟೆ ಟ್ಯೂಬ್ ಲೈಟ್ ಕಡೆಗೆ ಗಂಟೆಗಳ ಮೇಲೂ ದಾನಿಗಳ ಹೆಸರನ್ನು ದೊಡ್ಡದಾಗಿ ಹಾಕಿಸಿಕೊಳ್ಳುವವರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವಾಗ ಶಾಲೆಗಾಗಿ ಇಷ್ಟೆಲ್ಲ ಶ್ರಮವಹಿಸಿದರೂ ಅಲ್ಲಿನ ಯಾವ ನಾಮಫಲಕದಲ್ಲಿಯೂ ಸಹಾ ಅವರ ಹೆಸರನ್ನು ಹಾಕಿಸಿಕೊಳ್ಳದಿರುವ, ಯಾವುದೇ ಪ್ರಚಾರವೂ ಬಯಸದ, ಪ್ರಶಸ್ತಿ ಪುರಸ್ಕಾರಗಳಿಂದ ದೂರವಿರುವ, ಎಲ್ಲರ ಒತ್ತಾಯಕ್ಕೆ ಮಣಿದು ಪ್ರಶಸ್ನಿಗಳನ್ನು ಸ್ವೀಕರಿಸಿ ಅದರ ಜೊತೆಗೆ ಬರುವ ಆಷ್ಟೂ ಹಣವನ್ನು ಸ್ವಾರ್ಥಕ್ಕೆ ಬಳಸದೇ ತಮ್ಮೂರಿನ ಶಾಲೆಗಾಗಿಯೇ ವಿನಿಯೋಗಿಸುತ್ತಿರುವುದು ನಿಜಕ್ಕೂ ಶ್ಲಾಘನೀಯವೇ ಸರಿ.

ಸರ್ಕಾರೀ ಶಾಲೆಗಾಗಿ ತಮ್ಮ ತನು ಮನ ಧನವನ್ನು ವಿನಿಯೋಗಿಸಿದ್ದರೂ ಹಾಜಬ್ಬರಿಗೆ ಸ್ವಂತದ್ದೊಂದು ಮನೆಯೂ ಇರಲಿಲ್ಲ, ಸೋರುವ ಮನೆಯಲ್ಲೀ ಕಾಲ ಕಳೆಯುತ್ತಿದ್ದದ್ದನ್ನು ಗಮನಿಸಿದ ಸಜ್ಜನರೊಬ್ಬರು ಇವರ ನಿಸ್ವಾರ್ಥ ಸೇವೆ ಮತ್ತು ತ್ಯಾಗವನ್ನು ಗಮನಿಸಿ ದಾನಿಗಳೊಬ್ಬರು ಒತ್ತಾಯ ಪೂರ್ವಕವಾಗಿ ಕಟ್ಟಿಸಿಕೊಟ್ಟ ಮನೆಯಲ್ಲಿ ಸರಳವಾಗಿ ಜೀವನವನ್ನು ನಡೆಸುತ್ತಿರುವುದು ಗಮನಾರ್ಹವಾಗಿದೆ.

ಹಾಜಬ್ಬರ ಈ ಸೇವೆ ಮತ್ತು ಸಾಧನೆಯನ್ನು ಗುರುತಿಸಿದ ಹಲವಾರು ಸಂಘ ಸಂಸ್ಥೆಗಳು ಅವರಿಗೆ ಪ್ರಶಸ್ತಿಗಳನ್ನು ನೀಡುವ ಮೂಲಕ ತಮ್ಮ ಪ್ರಶಸ್ತಿಗಳ ಮೌಲ್ಯವನ್ನು ಹೆಚ್ಚಿಸಿಕೊಂಡಿದ್ದಾರೆ ಎಂದರೂ ತಪ್ಪಾಗದು. ಹಾಗೆ ಪಡೆದ ಪ್ರಶಸ್ತಿ ಪುರಸ್ಕಾರಗಳಲ್ಲಿ ಪ್ರಮುಖವಾದವುಗಳು ಹೀಗಿವೆ

  • ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
  • ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ
  • ರಮಾ ಗೋವಿಂದ, ಸಂದೇಶ ಪ್ರಶಸ್ತಿ ಸೇರಿದಂತೆ ರಾಷ್ಟ್ರೀಯ ಮಟ್ಟದ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ
  • ಮಂಗಳೂರು, ಕುವೆಂಪು ಸೇರಿದಂತೆ ಮೂರು ವಿಶ್ವವಿದ್ಯಾನಿಲಯಗಳ ಪಠ್ಯದಲ್ಲಿ ಹಾಜಬ್ಬ ಸಾಧನೆಯನ್ನು ಪಠ್ಯವನ್ನಾಗಿಸಿ ಅವರಿಗೆ ವಿಶೇಷ ಗೌರವ ಅರ್ಪಿಸಿದೆ.
  • ಕರ್ನಾಟಕದಲ್ಲಿ ತುಳು ವಿಭಾಗದಲ್ಲಿ ಹಾಜಬ್ಬರ ಯಶೋಗಾಥೆ ಪಾಠವಾಗಿದೆ.
  • ಪಕ್ಕದ ಕೇರಳ ರಾಜ್ಯದಲ್ಲಿ ಕನ್ನಡ ಮಾಧ್ಯಮದ 8ನೇ ಮತ್ತು 10ನೇ ತರಗತಿಯ ಸಮಾಜ ಮತ್ತು ವಿಜ್ಞಾನ ಪಠ್ಯದಲ್ಲಿ ಪಾಠವಾಗಿದೆ.
  • ಅಂತಾರಾಷ್ಟ್ರೀಯ ಮಾಧ್ಯಮಗಲೂ ಹಾಜಬ್ಬ ಅವರ ಸಾಧನೆಗಳನ್ನು ಪ್ರಕಟಿಸಿವೆ.

hajabba2ಹಾಜಬ್ಬನವರ ಇಂತಹ ನಿಸ್ವಾರ್ಥ ಸೇವೆಯನ್ನು ಗುರುತಿಸಿದ ಕೇಂದ್ರ ಸರ್ಕಾರವೂ ಸಹಾ ಹರೇಕಳ ಪಂಜಿ ಮಾಡಿಯ ಹಾಜಬ್ಬ ಅವರಿಗೆ ದೇಶದ ಅತ್ಯುನ್ನತ ನಾಲ್ಕನೇ ನಾಗರಿಕ ಪ್ರಶಸ್ತಿಯಾದ 2020ರ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿ ನೆನ್ನೆ ನವೆಂಬರ್ 8 2021 ರಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಗಳಾದ ಶ್ರೀ ರಾಮನಾಥ್ ಕೋವಿಂದ್ ಅವರು ನೀಡಿದ್ದಾರೆ. ವಿಮಾನದಲ್ಲಿ ಮಂಗಳೂರಿನಿಂದ ದೂರದ ದೆಹಲಿಗೆ ಪ್ರಯಾಣಿಸಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪ್ರಶಸ್ತಿ ಸ್ವೀಕರಿಸುವಾಗಲೂ ತಮ್ಮ ನೆಚ್ಚಿನ ಉಡುಪಾದ ಬಿಳಿ ಪಂಚೆ ಮತ್ತು ಶರ್ಟ್‌ನಲ್ಲಿ ಅದೂ ಬರಿಗಾಲಿನಲ್ಲಿ ಪ್ರಶಸ್ತಿಯನ್ನು ಮುಗ್ಧವಾಗಿ ಅತ್ಯಂತ ಸಾಮಾನ್ಯ ನಾಗರೀಕರಂತೆ ನಡು ಬಗ್ಗಿಸಿ ಕೈಮುಗಿದುಕೊಂಡೇ ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಿ ಅಲ್ಲಿ ನೆರೆದಿದ್ದವರೆಲ್ಲರಿಗೂ ಅರೆಕ್ಷಣ ಅಚ್ಚರಿಗೆ ಒಳಗಾಗುವಂತೆ ಮಾಡಿದರು. ಹಾಜಬ್ಬನವರ ಈ ಸರಳತೆಯು ಕೇವಲ ಅಲ್ಲಿ ನೆರದಿದ್ದವರಲ್ಲದೇ, ರಾಷ್ಟ್ರಪತಿಗಳೂ ಕೂಡ ಅಚ್ಚರಿಗೊಳಗಾದರು.

ಪ್ರಶಸ್ತಿ ಪಡೆದದ್ದು ನಿಮಗೆ ಹೇಗನಿಸುತ್ತದೆ? ಎಂದು ಮಾಧ್ಯಮದವರು ಕೇಳಿದ್ದಕ್ಕೆ, ನಾನೊಬ್ಬ ದೇಶದ ಸಾಮಾನ್ಯ ಪ್ರಜೆ. ನನ್ನ ಕಾರ್ಯ ಮೆಚ್ಚಿ ಅತ್ಯುನ್ನತ ಪ್ರಶಸ್ತಿ ನೀಡಿ ಗೌರವಿಸಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದಿದ್ದಲ್ಲದೇ, ನಾನು ರಾಷ್ಟ್ರಪತಿ ಭವನದಲ್ಲಿ ಉಳಿದುಕೊಳ್ಳಲು ಯೋಗ್ಯತೆ ಇಲ್ಲದ ಮನುಷ್ಯ. ಸರ್ಕಾರ ನನ್ನಂತಹ ವ್ಯಕ್ತಿಯನ್ನು ಗುರುತಿಸಿ ಈ ಪ್ರಶಸ್ತಿ ನೀಡಿದೆ. ಇದರಲ್ಲಿ ಮಾಧ್ಯಮದ ಪಾತ್ರವೂ ಬಹಳ ದೊಡ್ಡದಿದೆ. ಎಲ್ಲರೂ ಸೇರಿ ನನ್ನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದ್ದಾರೆ ಎಂದು ತಮಗೆ ಸಹಾಯ ಮಾಡಿದ ಸಂಘ-ಸಂಸ್ಥೆಗಳು ಹಾಗೂ ಜನಪ್ರತಿನಿಧಿಗಳಿಗೆ ಪ್ರೀತಿಯಿಂದ ಹಾಜಬ್ಬನವರು ಧನ್ಯವಾದ ಅರ್ಪಿಸಿದ್ದದ್ದು ಗಮನಾರ್ಹವಾಗಿತ್ತು.

ಸಾಧನೆಗೆ ವಿದ್ಯೆಯ ಹಂಗಿಲ್ಲ, ಹಣದ ಅವಶ್ಯಕತೆಯಿಲ್ಲ. ಸಾಧಿಸುವ ಛಲವೊಂದಿದ್ದಲ್ಲಿ ಏನು ಬೇಕಾದರು ಸಾಧಿಸಬಹುದು ಎನ್ನುವುದಕ್ಕೆ ಜ್ವಲಂತ ಉದಾಹರಣೆಯಾಗಿರುವ, ನಮ್ಮ ನಿಮ್ಮಂತಹ ನೂರಾರು ಜನರಿಗೆ ಪ್ರೇರಣೆಯಾಗಿರುವ ಹಾಜಪ್ಪನವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತೀರೀ?
ನಿಮ್ಮವನೇ ಉಮಾಸುತ

2 thoughts on “ಅಕ್ಷರ ಸಂತ ಹರೇಕಳ ಹಾಜಬ್ಬ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s