ವೃಕ್ಷ ದೇವಿ ತುಳಸಿ ಗೌಡ

t3ಪರಿಸರ ಕಾಳಜಿಗೂ ಮತ್ತು ನಮ್ಮ ಕರ್ನಾಟಕಕ್ಕೂ ಅವಿನಾಭಾವ ಸಂಬಂಧ. ಒಂದು ಕಡೆ ನಿಂತರವಾಗಿ ಕಾಡನ್ನು ನಾಶ ಮಾಡಿ ನಾಡುಗಳನ್ನು ಮಾಡುತ್ತಿದರೆ ಮತ್ತೊಂಡೆ ಅದೇ ನಾಡಿನಲ್ಲಿ ಲಕ್ಷಾಂತರ ಗಿಡಗಳನ್ನು ನೆಟ್ಟು ಅದನ್ನೇ ಕಾಡಾಗಿ ಪರಿವರ್ತಿಸುತ್ತಿರುವವರ ಸಂಖ್ಯೆಯೂ ನಮ್ಮ ರಾಜ್ಯದಲ್ಲಿ ಹೆಚ್ಚಾಗಿಯೇ ಇದೆ. ಅದಕ್ಕೆ ಸಾಲು ಮರದ ತಿಮ್ಮಕ್ಕನವರು ಉದಾಹರಣೆಯಾದರೆ ಅವರ ಜೊತೆಗೆ ಸೇರಿಸಬಹುದಾದ ಮತ್ತೊಂದು ಹೆಸರೇ ತುಳಸೀ ಗೌಡ. ಇಂತಹ ನಿಸ್ವಾರ್ಥ ಮಹಾನ್ ಸಾಧಕಿಯನ್ನು ಗುರುತಿಸಿ ಕೇಂದ್ರ ಸರ್ಕಾರವು 2020ರ ಸಾಲಿನ ಪದ್ಮಶ್ರೀ ಪುರಸ್ಕಾರಕ್ಕೆ ಆಯ್ಕೆಮಾದಿರುವುದು ನಿಜಕ್ಕೂ ಅಭಿನಂದನಾರ್ಯವಾಗಿದೆ. ಅಂತಹ ಮಹಾನ್ ಸಾಧಕಿಯಾದ ವೃಕ್ಷಮಾತೆ ಎಂದೆನಿಸಿಕೊಂಡಿರುವ ತುಳಸೀ ಗೌಡ ಅವರ ಯಶೋಗಾಥೆಯನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ.

t5ಹಾಲಕ್ಕಿ ಸಮುದಾಯದ ಜಾನಪದ ಕಲಾವಿದೆ ಸುಕ್ರಿ ಬೊಮ್ಮು ಗೌಡ ಅವರು ತಮ್ಮ ಸಾಧನೆಗಾಗಿ 2017ರಲ್ಲೇ ಅವರಿಗೆ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರೆ, ಅವರ ಬಳಿಕ ಅದೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂಕೋಲಾ ತಾಲ್ಲೂಕಿನವರೇ ಆದ, ವೈಶಿಷ್ಟ್ಯ ಸಾಧನೆಗಳ ಮೂಲಕ ಇಡೇ ದೇಶದ ಗಮನವನ್ನು ತಮ್ಮತ್ತ ಸೆಳೆದುಕೊಂಡಿರುವ ಮತ್ತೋರ್ವ ಮಹಿಳಾ ಸಾಧಕಿಯೇ ತುಳಸಿ ಗೌಡ. ಕಾಡಿನಲ್ಲಿ ಕಟ್ಟಿಗೆ ಸಂಗ್ರಹಿಸಿ ಅದನ್ನು ಮಾರಾಟ ಮಾಡಿ ತನ್ನ ಜೀವನವನ್ನು ಕಟ್ಟಿಕೊಂಡಾಕೆ ಲಕ್ಷಾಂತರ ಗಿಡಗಳನ್ನು ನೆಟ್ಟಿದ್ದಲ್ಲದೇ ಅದನ್ನು ಜತನದಿಂದ ಬೆಳಸಿದ್ದು ಆಕೆಯ ಹೆಮ್ಮೆಯ ವಿಷಯವಾಗಿದೆ. ಮತ್ತಿಘಟ್ಟ ಅರಣ್ಯ ನರ್ಸರಿಯಲ್ಲಿ ಎರಡು ಮೂರು ದಶಕಗಳ ಕಾಲ ಗುತ್ತಿಗೆಯಾಧಾರದಲ್ಲಿ ದಿನಗೂಲಿಗೆ ಸೇವೆ ಮಾಡಿ ನಂತರ ಅಲ್ಲೇ ಸರ್ಕಾರಿ ನೌಕರರಾಗಿ ಸೇವೆಯನ್ನು ಸಲ್ಲಿಸಿ ನಿವೃತ್ತರಾದರೂ ಈಗಲೂ ಅಲ್ಲಿಗೆ ಹೋಗಿ ಯುವಕರಿಗೆ ತರಬೇತಿ, ಮಾರ್ಗದರ್ಶನ ನೀಡುತ್ತಿರುವ ಮಹಾನ್ ಸಾಧಕಿಯವರು. ಕಳೆದ ಆರು ದಶಕಗಳಿಂದ ಅವರು ಈ ಕೆಲಸವನ್ನು ಯಾವುದೇ ಪ್ರತಿಫಲ ನಿರೀಕ್ಷೆ ಇಲ್ಲದೆ ಮಾಡುತ್ತಿದ್ದಾರೆ.

t4ಉತ್ತರಕನ್ನಡದ ಅಂಕೋಲಾ ತಾಲ್ಲೂಕ್ಕಿನ ಹೊನ್ನಳ್ಳಿ ಗ್ರಾಮದ ನಾರಾಯಣ ಹಾಗೂ ನೀಲಿ ಎಂಬ ಲಕ್ಕಿ ಬುಡಕಟ್ಟಿನ ದಂಪತಿಗೆ 1944 ರಲ್ಲಿ ತುಳಸಿ ಅವರ ಜನನವಾಗುತ್ತದೆ. ತುಳಸಿ ಅವರಿಗೆ ಕೇವಲ ಎರಡು ವರ್ಷಗಳಾಗಿದ್ದಾಗ ತಮ್ಮ ತಂದೆಯನ್ನು ಕಳೆದುಕೊಳ್ಳುತ್ತಾರೆ. ಕಿತ್ತು ತಿನ್ನುತ್ತಿದ್ದ ಬಡತನದಿಂದಾಗಿ ಅವರ ತಾಯಿಯ ಜೊತೆಗೆ ಅವರಿಗೇ ಅರಿವಿಲ್ಲದಂತೆ ದೈನಂದಿನ ಕೂಲಿ ಕೆಲಸಕ್ಕೆ ಬಾಲ್ಯದಿಂದಲೂ ಹೋಗುತ್ತಿದ್ದ ಕಾರಣ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗಲೇ ಇಲ್ಲ. ನಂತರ ಚಿಕ್ಕವಯಸ್ಸಿನಲ್ಲಿಯೇ ಗೋವಿಂದ ಗೌಡ ಅವರೊಂದಿಗೆ ವಿವಾಹವಾಗುತ್ತದಾದರೂ, ಅವರಿಗೆ ಕೇವಲ 17ನೇ ವಯಸ್ಸನಲ್ಲಿದ್ದಾಗ ಅವರ ಪತಿಯೂ ಸಹಾ ನಿಧನರಾದಾಗ ಈ ಎಲ್ಲಾ ದುರ್ಘಟನೆಗಳಿಂದ ಕುಗ್ಗದೇ ಬದುಕನ್ನು ಧೈರ್ಯದಿಂದ ಎದುರಿಸಿ ಇಡೀ ರಾಷ್ಟ್ರಕ್ಕೆ ಮಾದರಿಯಾಗುವಂತಹ ಗಿರುವ ಜೀವನವನ್ನು ನಡೆಸಿರುವ ಅವರು ನಿಜಕ್ಕೂ ಅನನ್ಯ, ಅಭಿನಂದನಾರ್ಹ ಮತ್ತು ಅನುಕಣೀಯವೇ ಸರಿ.

t22ಪರಿಸರ ಪ್ರೇಮ ಎನ್ನುವುದಕ್ಕಿಂತ ಅದೊಂದು ಅವರ ಜೀವನದ ಅವಿಭಾಜ್ಯ ಅಂಗವಾಗಿತ್ತು ಎಂದರೂ ತಪ್ಪಾಗದು. ಊರಿನವರೊಂದಿಗೆ ಕಾಡಿಗೆ ಹೋಗಿ ಅಲ್ಲಿ ಕಟ್ಟಿಗೆಗಳನ್ನು ಆರಿಸಿ ತಂದು ಅದನ್ನು ಮಾರಿದಲ್ಲಿ ದಿನಕ್ಕೆ ಐದರಿಂದ ಆರು ರೂಪಾಯಿ ಸಿಗುತ್ತಿತ್ತು. ಆದರೆ ಜೀವನಕ್ಕೆ ಇಷ್ಟು ಹಣ ಸಾಲದೇ ಹೊದಾಗಾ ತುಳಸಿಯವರು ಅರಣ್ಯ ಇಲಾಖೆಗೆ ಕಾಡಿನಿಂದ ಬೀಜಗಳನ್ನು ಶೇಖರಿಸಿ ಅವುಗಳನ್ನು ನಾಟಿ ಮಾಡಿ ಸಣ್ಣ ಸಣ್ಣ ಸಸಿಗಳನ್ನಾಗಿ ಮಾಡಿಕೊಡುವ ಕೂಲಿ ಕೆಲಸಕ್ಕೆ ಸೇರಿಕೊಳ್ಳುತ್ತಾರ. ದಿನಕ್ಕೆ ಕೇವಲ 1.25 ಪೈಸೆ ಸಿಗುತ್ತಿದ್ದ ಈ ಕೂಲಿ ಕೆಲಸ ಬೇಡ ಎಂದು ಎಲ್ಲರೂ ಹೇಳಿದರು ಆದರೆ ಪರಿಸರ ಕಾಳಜಿಯಿಂದ ಅವರೆಂದೂ ಈ ಕೆಲಸವನ್ನು ನಿಲ್ಲಿಸಲಿಲ್ಲ ಎನ್ನುವುದು ಅಭಿನಂದನಾರ್ಹ.

t5ತಮ್ಮೂರಿನ ಸುತ್ತಲೂ ಇರುವ ಕಾಡಿನ ಇಂಚಿಂಚು ಪರಿಚಯವಿರುವ ತುಳಸೀ ಗೌಡರಿಗೆ ಅವರ ಮಗ ಸುಬ್ಬರಾಯ ಗೌಡನ ಜೊತೆ ಸುತ್ತಿ ಅಪರೂಪದ ಬೀಜ, ಗಿಡಗಳನ್ನು ಸಂಗ್ರಹಿಸುತ್ತಿದ್ದರು. ಇವರ ಪ್ರತಿದಿನ ಮುಂಜಾನೆ, ಕೈಯಲ್ಲೊಂದು ಮಡಕೆ ಹಿಡಿದುಕೊಂಡು ಬರಿಗಾಲಿನಲ್ಲಿ ಮನೆಯಿಂದ ಸೀದಾ ನೀರು ಹರಿಯುವ ಜಾಗಕ್ಕೆ ಹೋಗಿ ಆದಾಗಲೇ ಸಂಗ್ರಹಿಸಿದ್ದ ಬೀಜಗಳನ್ನು ನೆಟ್ಟು ಸಸಿಗಳನ್ನು ಬೆಳೆಸುವ ಕಾಯವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಇದುವರೆವಿಗೂ ಅವರು ಲಕ್ಷಾಂತರ ಸಂಖ್ಯೆಯಲ್ಲಿ ಎಳ್ಳು, ನಂದಿ, ಆಲದ ಮರ, ಬಿದಿರು, ನೇರಲೇ, ಗೋಡಂಬಿ, ಜಾಯಿಕಾಯಿ, ಮಾವು, ಹಲಸು, ಕೊಕುಮ್‌ನಂತಹ ಹಣ್ಣಿನ ಮರಗಳನ್ನು ಬೆಳೆಸಿದ್ದೇವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಾಗ ತುಳಸಿ ಗೌಡರ ಮುಖದಲ್ಲಿ ಆಗುವ ಬದಲವಣೆ ಮತ್ತು ಹೊಳೆಯುವ ಕಣ್ಗಳನ್ನು ವರ್ಣಿಸುವುದಕ್ಕಿಂತಲೂ ಅನುಭವಿಸಿದರೇ ಚಂದ.

ಹೀಗೆ ಬೆಳೆಸಿದ ಗಿಡಗಳನ್ನು ತಮ್ಮೂರಿನ ಸುತ್ತ ಮುತ್ತಲಿನ ಊರದ ಮಸ್ತಿಗಟ್ಟ, ಹೆಗ್ಗೂರು, ಹೊಲಿಗೆ, ವಜ್ರಹಳ್ಳಿ, ದೊಂಗ್ರಿ, ಕಲ್ಲೇಶ್ವರ, ಅಡಗೂರು, ಅಗಸೂರು, ಸಿರಗುಂಜಿ, ಎಲೊಗಡ್ಡೆಗಳಲ್ಲಿ ಎಲ್ಲೆಲ್ಲಿ ಖಾಲಿ ಭೂಮಿಯಲ್ಲಿ ಅರಣ್ಯ ಇಲಾಖೆ ಇವರ ಗಿಡಗಳನ್ನು ನೆಡಿಸಿದ್ದಾರೆ. ಇದರ ಜೊತೆ ಜೊತೆಯಲ್ಲಿಯೇ ತಾನು ಬೆಳೆಸಿದ ಸಸಿಗಳನ್ನು ಹೊನ್ನಳ್ಳಿ ಭಾಗದ ಅರಣ್ಯ ಪ್ರದೇಶದಲ್ಲಿ, ಸರ್ಕಾರಿ ಕಚೇರಿಗಳಲ್ಲಿ, ಶಾಲೆಯ ಅವರಣ, ,ಮನೆಗಳ ಆವರಣ, ರಸ್ತೆಗಳ ಪಕ್ಕದಲ್ಲಿಯೂ ಸಹಾ ನೆಟ್ಟಿದ್ದಾರೆ. ಹೀಗೆ ಪ್ರತಿವರ್ಷವೂ ಸುಮಾರು 30 ಸಾವಿರ ಸಸಿಗಳನ್ನ ನೆಟ್ಟು ಪೋಷಿಸುವ ಕಾರ್ಯವನ್ನು ನಿರಂತರ ಮಾಡುತ್ತಲೇ ಬಂದಿದ್ದಾರೆ . ಈಕೆ ನೆಟ್ಟು ಪೋಷಿಸಿದ ಸಸಿಗಳು ಇಂದು ಬೆಳೆದು ಹೆಮ್ಮರವಾಗಿ ಸಾವಿರಾರು ಜನರಿಗೆ ಗಾಳಿ ನೆರಳನ್ನ ಕೊಡುವುದರ ಜೊತೆಗೆ ಸಾವಿರಾರು ಪಕ್ಷಿಗಳಿಗೆ ಆಶ್ರಯ ತಾಣವಾಗಿರುವುದಲ್ಲದೇ ಆ ಭೂಭಾಗದಲ್ಲಿ ಮಳೆ ಬೆಳೆ ಚೆನ್ನಾಗಿ ಆಗಲೂ ಸಹಕಾರಿಯಾಗಿದೆ.

ಪರಿಸರದ ಮೇಲಿನ ಈಕೆಯ ಪ್ರೀತಿ ಮತ್ತು ಮೂರು ದಶಕಗಳ ಕಾಲ ದಿನಗೂಲಿ ಕೆಲಸದ ಮೇಲೆ ದುಡಿಯುತ್ತಿದ್ದದ್ದನ್ನು ಕಂಡ ಅಂದಿನ ಅರಣ್ಯಾಧಿಕಾರಿಯಾಗಿದ್ದ ಶ್ರೀ ಅ.ನಾ ಯಲ್ಲಪ್ಪ ರೆಡ್ಡಿಯವರು ತುಳಸೀ ಅವರಿಗೆ ಮಾಸ್ತಿಕಟ್ಟೆ ಅರಣ್ಯ ವಲಯದಲ್ಲಿ ಸಸಿಗಳನ್ನು ಪೋಷಿಸುವ ಸರಕಾರಿ ಕೆಲಸಗಳನ್ನು ಕೊಡಿಸಿ ಕೆಲಸವನ್ನು ಸಹ ಕೊಡಿಸಿದ್ದರು. ಸರ್ಕಾರಿ ಕೆಲಸದಿಂದ ನಿವೃತ್ತಿಯಾದಾರೂ 72 ವರ್ಷದ ತುಳಸಿ ಗೌಡ ಇಂದಿಗೂ ಅದೇ ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರಿ ಮಾಡಿಕೊಂಡಿದ್ದಾರೆ ತುಳಸೀ ಗೌಡರ ಈ ಕೆಲವು ಅಲ್ಲಿನ ಗ್ರಾಮಸ್ಥರಿಗೆ ಮತ್ತು ಸುತ್ತಮುತ್ತಲಿನ ಬಹಳವಾಗಿ ಇಷ್ಟವಾಗಿ ಅವರೆಲ್ಲರಿಗೂ ಪ್ರೀತಿಯ ತುಳಸಜ್ಜಿ ಎಂದೇ ಜನಪ್ರಿಯರಾಗಿದ್ದಾರೆ.

t1ತಮ್ಮ ಅಪಾರವಾದ ಅನುಭವದಿಂದ ಕಾಡಿನಲ್ಲಿ ಬೆಳೆಯುವ ಪ್ರತಿಯೊಂದು ಜಾತಿಯ ಮರಗಳ ಹೆಸರು ಅವುಗಳ ಪ್ರಬೇಧವನ್ನು ಗುರುತಿಸುವ ಸಾಮರ್ಥ್ಯ ಅವರಿಗಿದೆ. ಅದೇ ರೀತಿಯಲ್ಲಿ ಯಾವ ಸಸಿಯನ್ನು ಯಾವ ಕಾಲದಲ್ಲಿ ನೆಟ್ಟಲ್ಲಿ ಅವು ಎಷ್ಟು ಎತ್ತರಕ್ಕೆ ಬೆಳೆಯುತ್ತವೆ, ಅದು ಯಾವ ಸಂದರ್ಭದಲ್ಲಿ ಹೂವು ಹಣ್ಣು ಬಿಡುತ್ತವೆ ಎಂಬ ಎಲ್ಲಾ ಮಾಹಿತಿಗಳು ಇವರಿಗೆ ಕರಗತವಾಗಿ ಬಿಟ್ಟಿದೆ. ಹಾಗಾಗಿ ಮರಗಳ ವಿಜ್ಞಾನಿ ಎಂದೇ ಉತ್ತರ ಕನ್ನಡದಲ್ಲಿ ಇವರನ್ನು ಕರೆಯಲಾಗುತ್ತದೆ. ಅದೇ ರೀತಿ ಅನೇಕ ಸಣ್ಣ ಪುಟ್ಟ ವಯಸ್ಸಿನ ಮಕ್ಕಳು, ಇವರ ಬಳಿ ಬಂದು ಗಿಡ, ಬಳ್ಳಿ, ಬೀಜಗಳ ಬಗ್ಗೆ ಮಾಹಿತಿ ಪಡೆಯುವುದಲ್ಲದೇ, ಅವುಗಳನ್ನು ಹೇಗೆ ನೆಟ್ಟು ಬೆಳೆಸಬೇಕೆಂದು ಸಲಹೆ ಪಡೆಯುವ ಕಾರಣ, ಇವರನ್ನು ಜನರು ಬಹಳ ಪ್ರೀತಿಯಿಂದ ವೃಕ್ಷ ದೇವಿ ಎಂದೇ ಕರೆಯುತ್ತಾರೆ. ಕಾಡಿನಲ್ಲಿರುವ ಸುಮಾರು 300ಕ್ಕೂ ಹೆಚ್ಚು ಕಾಡು ಮರಗಳ ಬಗ್ಗೆ ಇವರಿಗೆ ಸಂಪೂರ್ಣವಾದ ಮಾಹಿತಿ ಇರುವ ಕಾರಣ, ಇವರನ್ನು ಅರಣ್ಯದ ವಿಶ್ವಕೋಶ ಎಂದು ಕರೆದರೂ ತಪ್ಪಾಗದು.

ಕೆಲವೊಮ್ಮೆ ಅರಣ್ಯದಲ್ಲಿ ಅಥವಾ ರಸ್ತೆಯ ಬದಿಯಲ್ಲಿ ತಾವು ನೆಟ್ಟ ಮರಗಳನ್ನು ಮರಗಳ್ಳರು ಕಡಿಡುಕೊಂಡು ಹೋದಾಗಾ ತುಳಸಿ ಗೌಡವರು ಕಡಿದ ಮರವನ್ನ ಅಪ್ಪಿ ಕಂಬನಿ ಸುರಿಸಿದ ಘಟನೆಗಳು ನಡೆದಿವೆ. ಪರಿಸರದ ಹೊರತಾಗಿ, ತಮ್ಮ ಹಳ್ಳಿಯೊಳಗಿನ ಮಹಿಳೆಯರ ಹಕ್ಕುಗಳಿಗಾಗಿಯೂ ಹೋರಾಡಿರುವ ಅನೇಕ ಉದಾಹರಣೆಗಳಿವೆ. ಅದೇ ರೀತಿ ಪಟ್ಟಣದವರೊಬ್ಬರು ವಾಗ್ವಾದದ ಸಮಯದಲ್ಲಿ ಹಾಲಕ್ಕಿ ಮಹಿಳೆಯೊಬ್ಬರಿಗೆ ಗನ್ ತೋರಿಸಿ ಬೆದರಿಕೆ ಹಾಕಿದಾಗ, ಇದೇ ತುಳಸಿ ಗೌಡರು ಆಕೆಯ ಸಹಾಯಕ್ಕೆ ಬಂದಿದ್ದಲ್ಲದೇ, ಈ ಅಪರಾಧಿಯನ್ನು ಶಿಕ್ಷಿಸದಿದ್ದರೆ ಉಗ್ರವಾಗಿ ಪ್ರತಿಭಟಿಸುತ್ತೇನೆ ಎಂದು ಪೋಲಿಸರ ಬಳಿ ಎಚ್ಚರಿಕೆಯನ್ನು ಕೊಡುವಷ್ಟರ ಮಟ್ಟಿಗಿನ ಸಾಮಾಜಿಕ ಕಾಳಜಿ ಅವರಿಗೆ.

ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆಯಲ್ಲಿ, ಬೀಜ ಅಭಿವೃದ್ಧಿ ಮತ್ತು ಸಂರಕ್ಷಣೆ ಇಲಾಖೆಯಲ್ಲಿ ಮತ್ತು ಪರಿಸರ ಸಂರಕ್ಷಣೆಯ ರೂಪದಲ್ಲಿ ಲಕ್ಷಾಂತರ ಗಿಡ ಮರಗಳನ್ನು ನೆಟ್ಟಿರುವ ಕಾರಣ ಹತ್ತು ಹಲವಾರು ಪ್ರಶಸ್ತಿಗಳು ಇವರನ್ನು ಅರಸಿಬಂದಿವೆ ಅವುಗಳಲ್ಲಿ ಪ್ರಮುಖವಾದವು ಎಂದರೆ,

  • 1986 ರಲ್ಲಿ ಅವರಿಗೆ IPVM ಪ್ರಶಸ್ತಿ ಎದು ಕರೆಯಲ್ಪಡುವ ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ
  • ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ
  • ಕೇಂದ್ರ ಸರ್ಕಾರದಿಂದ ಭಾರತದ ನಾಗರಿಕರಿಗೆ ನೀಡಲಾಗುವ ನಾಲ್ಕನೇ ಅತ್ಯುನ್ನತ ಪ್ರಶಸ್ತಿಯಾದ 2020ರ ಸಾಲಿನ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತು.

ತಮ್ಮ ದೈನಂದಿನ ಜೀವನದ ಭಾಗವಾಗಿ ಕರ್ನಾಟಕದಲ್ಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ  ಮರಗಳನ್ನು ನಿಸ್ವಾರ್ಥವಾಗಿ ನೆಟ್ಟಿರುವುದಲ್ಲದೇ, ಅರಣ್ಯ ಮತ್ತು ಔಷಧೀಯ ಸಸ್ಯಗಳ ಬಗ್ಗೆ ಅಮೂಲ್ಯವಾದ ಜ್ಞಾನವನ್ನು ಹೊಂದಿರುವುದಲ್ಲದೇ, ಹಾಲಕ್ಕಿ ಬುಡಕಟ್ಟು ಜನಾಂಗದ ಕಲ್ಯಾಣಕ್ಕಾಗಿಯೂ ಶ್ರಮಿಸುತ್ತಿರುವ ತುಳಸಿ ಅವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ

ಏನಂತೀರಿ?
ನಿಮ್ಮವನೇ ಉಮಾಸುತ

One thought on “ವೃಕ್ಷ ದೇವಿ ತುಳಸಿ ಗೌಡ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s