ಮಂಜಮ್ಮ ಜೋಗತಿ

ಸಾಮಾನ್ಯವಾಗಿ ನಗರ ಪ್ರದೇಶಗಳ ಸಿಗ್ನಲ್ ಗಳ ಬಳಿ , ಬಸ್ ಇಲ್ಲವೇ ರೈಲ್ವೇ ನಿಲ್ಡಾಣಗಳ ಬಳಿ ಹಿಂಡು ಹಿಂಡಾಗಿ ಚಪ್ಪಾಳೆ ಹೊಡೆದುಕೊಂಡು ಭಿಕ್ಷೆ ಬೇಡುವ ತೃತೀಯ ಲಿಂಗಿಗಳನ್ನು ನೋಡಿದ ಕೂಡಲೇ ಬಹುತೇಕರಿಗೆ ತಾತ್ಸಾರದ ಭಾವನೆ ಮೂಡುತ್ತದೆ. ಕಲವರೂ ಅಲ್ನೋಡೋ ಚಕ್ಕಾ ಬಂದ್ರೂ, ಅಲ್ನೋಡೋ ಕೋಜಾ ಬಂದ್ರೂ ಎಂದು ಛೇಡಿಸಿದರೆ, ಇನ್ನೂ ಕೆಲವರೂ ಇನ್ನೂ ಕೆಟ್ಟದಾಗಿ ಅಲ್ನೋಡೋ 9 ಎಂದು ಅಸಹ್ಯ  ಬರುವ  ರೀತಿಯಲ್ಲಿ ಆಡಿಕೊಳ್ಳುವುದನ್ನು ನೋಡಿದ್ದೇವೆ. ತಮಗೇ ಅರಿವಿಲ್ಲದಂತೆ ತಮ್ಮ ದೇಹದಲ್ಲಿ ಆಗುವ ಬದಲಾವಣೆಯಿಂದಾಗಿ, ತಮ್ಮದಲ್ಲದ ತಪ್ಪಿಗಾಗಿ  ಹುಟ್ಟಿದ ಮನೆಯವರಿಂದಲೇ ತಿರಸ್ಕೃತಗೊಂಡು, ಸಮಾಜದ ದೃಷ್ಠಿಯಲ್ಲಿ ಅಸ್ಪೃಷ್ಯರಾಗಿ ಜನರನ್ನು ಕಾಡಿ ಬೇಡಿ ಇಲ್ಲವೇ ಇನ್ನಾವೋದೋ ರೀತಿಯಲ್ಲಿ ಅಸಹ್ಯಕರ ಜೀವನ  ಸಾಗಿಸುವರ ಮಧ್ಯೆದಲ್ಲೇ ಕೆಸರಿನಲ್ಲಿ ಕಮಲ ಅರಳುವಂತೆ ತಮ್ಮ ಜನಪರ ಹೋರಾಟ ಮತ್ತು ಕಲಾ ಸಾಧನೆಗಳಿಗಾಗಿ   ಅಂತಹದೇ ತೃತೀಯ ಲಿಂಗಿಯಾದ ಮಂಜಮ್ಮ ಜೋಗತಿಯವರು ಈ ಬಾರಿ  ಪದ್ಮಶ್ರೀ ಪ್ರಶಸ್ತಿಯನ್ನು ಗಳಿಸಿರುವುದು  ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಅಂತಹ ಮಹಾನ್ ಸಾಧಕಿಯ ಯಶೋಗಾಥೆಯನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.

man6ಬಳ್ಳಾರಿ ಜಿಲ್ಲೆಯ ತಗ್ಗಿನಮಠ ಎಂಬ ಊರಿನ  ಹನುಮಂತಯ್ಯ ಶೆಟ್ಟಿ ಮತ್ತು ಜಯಲಕ್ಷ್ಮಿ ದಂಪತಿಗಳಿಗೆ  18-04-1964 ರಲ್ಲಿ  ಪುತ್ರನ ಜನನವಾಗುತ್ತದೆ. ಧರ್ಮಸ್ಥಳದ ಮಂಜುನಾಥನ ಅನುಗ್ರಹದಿಂದ ಹುಟ್ಟಿದ ಮಗುವಿಗೆ ಬಿ. ಮಂಜುನಾಥ ಶೆಟ್ಟಿ  ಎಂಬ ಹೆಸರನ್ನಿಡುತ್ತಾರೆ. ಚಿಕ್ಕ ವಯಸ್ಸಿನಿಂದಲೂ ಎಲ್ಲಾ ಹುಡುಗರಂತೆ ಆಡು, ಓದು, ಕುಣಿತ ಸಡಗರ  ಎಲ್ಲವೂ ಇದ್ದ ಮಂಜುನಾಥನಿಗೆ ಹೈಸ್ಕೂಲ್ ಸೇರುವ ವೇಳೆಗೆ ಅವನ  ಶರೀರದಲ್ಲಿ ವಿಚಿತ್ರವಾದ ಬದಲಾವಣೆಗಳು ಆಗ ತೊಡಗಿದ್ದಲ್ಲದೇ ತನ್ನ ವಯಸ್ಸಿನ ಹುಡುಗರೊಂದಿಗೆ  ಸಹಜವಾಗಿ ಬೆರೆಯಲು ಮುಜುಗರವಾಗ ತೊಡಗಿದ್ದಲ್ಲದೇ ಇತ್ತ ಹುಡುಗಿಯರೂ  ಅವನನ್ನು ತಮ್ಮ ಬಳಿಗೆ ಸೇರಿಸಿಕೊಳ್ಳುತ್ತಿರಲಿಲ್ಲ.  ಇದೇ ಸಮಯದಲ್ಲಿ ಅವನಿಗೆ ಹೆಣ್ಣು ಮಕ್ಕಳ ಹಾಗೆ ಇರಬೇಕು ಆವರ ಹಾಗೆ ಬದುಕ ಬೇಕು ಎಂದೆನಿಸಿ, ಶಾಲೆಯ ನಾಟಕಗಳಲ್ಲಿ ಸ್ತ್ರೀ ಪಾತ್ರಗಳನ್ನೇ ಹೆಚ್ಚಾಗಿ ಮಾಡತೊಡಗುತ್ತಾನೆ.

ಹತ್ತನೆ ತರಗತಿಗೆ ಬರುವಷ್ಟರಲ್ಲಿ  ಮಂಜುನಾಥಶೆಟ್ಟಿಯ ನಡವಳಿಕೆ ಸಂಪೂರ್ಣವಾಗಿ ಹೆಣ್ಣಿನಂತೆ ಬದಲಾದಾಗ, ಅವರ  ತಂದೆ ಮನಗನನ್ನು ಶಾಲೆಯಿಂದ ಬಿಡಿಸಿ ಪಿಗ್ಮಿ ಸಂಗ್ರಹಿಸುವ ಕೆಲಸಕ್ಕೆ ಹಚ್ಚುವುದಲ್ಲದೇ, ಮಂಜುನಾಥನಿಗೆ ಅರಿವೇ ಇಲ್ಲದಂತೆ ಹೆಂಗಸರಂತೆ ಹಾವ ಭಾವಗಳನ್ನು ತೋರಿದಾಗ ಬಡಿಗೆಯಿಂದ ಬಡಿಯುತ್ತಿರುತ್ತಾರೆ. ಅಗಾಗಲೇ  ಮಂಜುನಾಥನ ಮಾವನೊಬ್ಬ ಇದೇ ರೀತಿ ಬದಲಾಗಿ ಹೋಗಿದ್ದ ಕಾರಣ, ತಮ್ಮ ಮಗನೂ ಆ ರೀತಿಯಾಗಬಾರದೆಂಬ ಕಳವಳ  ಅವರದ್ದಾಗಿರುತ್ತದೆ.

man3ಈ ವಿಷಯ  ಅಕ್ಕ ಪಕ್ಕದವರಿಗೆ ತಿಳಿದರೆ ಏನೆಂದು ಕೊಂಡಾರು? ಎಂಬ ಭಯದಿಂದ ಆತನನ್ನು ಆತನ  ಅಜ್ಜಿಯ ಮನೆಗೆ ಕಳುಹಿಸಿದರೆ, ಅಲ್ಲಿ ಅವರ ಸೋದರಮವನೂ ಸಹಾ ಅದೇ ರೀತಿ ಸಿಕ್ಕ ಸಿಕ್ಕದ್ದಿರಿಂದಲೇ ಪ್ರತೀ ದಿನವೂ ಹೊಡೆದು ಬಡಿದು ಹಾಕುತ್ತಿದ್ದದ್ದಲ್ಲದೇ, ತಮ್ಮ ಮನೆತನದ ಮರ್ಯಾದೆಯನ್ನು ಉಳಿಸಿಕೊಳ್ಳುವ ಸಲುವಾಗಿ  ಮಂಜುನಾಥಶೆಟ್ಟಿಯ ಮೈಮೇಲೆ ಹುಲಿಗೆಮ್ಮ ಬರುತ್ತಾಳೆಂಬ ಸುಳ್ಳು ಸುದ್ದಿಯನ್ನು ಹಬ್ಬಿಸಿ ಅವನನ್ನು ಹುಲಿಗೆಮ್ಮ ದೇವತೆಗೆ ಮುಡಿಪಾಗಿಡಲು ನಿರ್ಧರಿಸಿ 1985ರಲ್ಲಿ ಹೊಸಪೇಟೆ ತಾಲ್ಲೂಕು ಹುಲಿಗಿ ಗ್ರಾಮದ ಸುಪ್ರಸಿದ್ಧ ಹುಲಿಗೆಮ್ಮ ದೇಗುಲದಲ್ಲಿ ಜೋಗತಿಯಾಗಿ ದೀಕ್ಷೆ ಕೊಡಿಸುತ್ತಾರೆ.

ಜೋಗತಿಯಾಗಿ ಮುತ್ತು ಕಟ್ಟಿಸಿಕೊಂಡ ನಂತರವು  ಮನೆಯವರ ಅನಾದರಣೆಯನ್ನು ಸಹಿಸಲಾರದೆ ವಿಷ ಕುಡಿದು ಆತ್ಮಹತ್ಯೆಗೆ ಪ್ರಯತ್ನಿಸಿದಾಗ  ಮನೆಯವರು ಚಿಗಟೇರಿ ಆಸ್ಪತ್ರೆಗೆ ಸೇರಿಸಿ ಬದುಕಿದ್ದಾನಾ ಇಲ್ಲವೇ ಸತ್ತು ಹೊಗಿದ್ದಾನಾ ಎಂಬುದನ್ನು ವಿಚಾರಿಸಲು ಮನೆಯವರು ಯಾರೂ ಬಾರದಿದ್ದಾಗ, ಮರ್ಯಾದೆ ಇಲ್ಲದ ಮನೆಯಲ್ಲಿ  ಇರುವ ಬದಲು ತಮ್ಮ ಒಬ್ಬೊಂಟಿಯಾಗಿ, ಸಮಾಜಮುಖಿಯಾಗಲು ನಿರ್ಧರಿಸುವ ಹೊತ್ತಿಗೆ ದೇವರ ರೂಪದಲ್ಲಿ  ಅವರಿಗೆ ಗುರುವಾಗಿ, ಅದಕ್ಕಿಂತಲೂ ಹೆಚ್ಚಾಗಿ ತಾಯಿಯಂತೆ ಕಾಳಮ್ಮ ಜೋಗತಿ ಸಿಕ್ಕ ನಂತರ ಅವರ ಬದುಕಿನ ದಿಕ್ಕೇ ಬದಲಾಗುತ್ತದೆ.  ಕಾಳಮ್ಮನವರು ಮಂಜಮ್ಮ ಜೋಗತಿಯನ್ನು ತಮ್ಮ ಮನೆ ಮಗಳಾಗಿ ಸಾಕಿದ್ದಲ್ಲದೇ  ತಾವು ಕಲಿತಿದ್ದ ಸಕಲ ವಿದ್ಯೆಯನ್ನು ಧಾರೆ ಎರೆಯುತ್ತಾರೆ.

ಹೀಗೆ ತರುಣನಾಗ ಬೇಕಿದ್ದ ಮಂಜುನಾಥಶೆಟ್ಟಿ ಮಂಜಮ್ಮಳಾಗಿ ರೂಪಾಂತರ ಹೊಂದಿದ ನಂತರ ಕಾಳಮ್ಮನವರ ಬಳಿ ಜಾನಪದ ನೃತ್ಯ, ಹಾಡುಗಾರಿಕೆ ಮತ್ತಿತರ ಸಾಂಪ್ರದಾಯಕ  ಕಲೆಗಳೆಲ್ಲವನ್ನೂ ಕರಗತ ಮಾಡಿಕೊಂಡು ಕೆಲವೇ ದಿನಗಳಲ್ಲಿ ಅತ್ಯುತ್ತಮ ಕಲಾವಿದೆಯಾಗಿ ಪರಿಪಕ್ವವಾಗಿ ತುಮಕೂರಿನಲ್ಲಿ ನಡೆದ ಅಖಿಲ ಕರ್ನಾಟಕ ಮಹಿಳಾ ಜಾನಪದ ಸಮ್ಮೇಳನದಲ್ಲಿ ಕಲಾಪ್ರದರ್ಶನ ನೀಡುವುದರೊಂದಿಗೆ ಅವರ ಕಲಾಯಾನ ಆರಂಭವಾಗಿ ಅಲ್ಲಿಂದ ಮಂದೆ ಕಲೆಗಾಗಿಯೇ ತಮ್ಮ ಜೀವನವನ್ನು ಮುಡುಪಾಗಿಡುತ್ತಾರೆ.

man4ಕೇವಲ ಹಾಡುಗಾರಿಕೆ ಮತ್ತು ನೃತ್ಯಕ್ಕೇ ತಮ್ಮನ್ನು ತಾವು ಸೀಮಿತಗೊಳಿಸಿಕೊಳ್ಳದೇ, ರಂಗಭೂಮಿ ಮೇಲೂ ತಮ್ಮ ನಟನಾ ಚಾತುರ್ಯದಿಂದ ಎಲ್ಲರ ಮನ್ನಣೆ ಗಳಿಸುತ್ತಾರೆ. ಶ್ರೀ ರೇಣುಕಾ ಚರಿತ್ರೆ ನಾಟಕದದಲ್ಲಿ  ಮುಖ್ಯ ಹಾಡುಗಾರ್ತಿ, ಗೌಡಶಾನಿ, ಕಾಮಧೇನು, ಪರಶುರಾಮ ಸೇರಿ ಒಟ್ಟು ಏಳು ಪಾತ್ರಗಳ ನಿರ್ವಹಣೆ ಮಾಡುವ ಮೂಲಕ ಅಧ್ಭುತವಾದ ಪ್ರತಿಭೆ ಎನಿಸಿಕೊಳ್ಳುತ್ತಾರೆ. ಮಂಜಮ್ಮನವರ ಮನೋಜ್ಞ ಅಭಿನಯದಿಂದಾಗಿ ಆ ನಾಟಕ ಸಾವಿರಾರು ಪ್ರದರ್ಶನಗಳನ್ನು ಕಾಣುತ್ತದೆ ಎಂದರೆ ಅವರ ನಟನಾ ಕೌಶಲ್ಯ ಹೇಗಿದ್ದಿರಬಹುದು ಎಂಬುದರ ಅರಿವಾಗುತ್ತದೆ. ಇದೇ ಸಂಧರ್ಭದಲ್ಲಿ ಅವರ ಗುರು ಕಾಳವ್ವ ಜೋಗತಿಯವರ ದೇಹಾಂತ್ಯವಾದಾಗ, ಅಕೆಯೇ ಗುರುವಿನ ಸ್ಥಾನದಲ್ಲಿ ನಿಂತು  ನೂರಾರು ಕಲಾವಿದರುಗಳಿಗೆ ಹಾಡುಗಾರಿಕೆ, ನೃತ್ಯ ಮತ್ತು ಅಭಿನಯಗಳನ್ನು ಹೇಳಿಕೊಡುತ್ತಾರೆ. ಇದೇ ಸಮಯದಲ್ಲಿ ಇವರದ್ದೇ ಮುಖ್ಯಪಾತ್ರವಿದ್ದ ಮೋಹಿನಿ ಭಸ್ಮಾಸುರ, ಹೇಮರೆಡ್ಡಿ ಮಲ್ಲಮ್ಮ, ಮೋಹನ್‌ಲಾಲಾ ಮುಂತಾದ ಪಾತ್ರಗಳಲ್ಲಿ ಅಭಿನಯ ಜನರ ಹೃನ್ಮನಗಳನ್ನು ಸೆಳಯುತ್ತದೆ.

ಹಂಪೆ ಉತ್ಸವ, ಬೀದರ್ ಉತ್ಸವ, ಜಾನಪದ ಲೋಕೋತ್ಸವ, ವಿಶ್ವ ಗೋ ಸಮ್ಮೇಳನ, ಜಾನಪದ ಜಾತ್ರೆ ಹೀಗೆ ಕೇವಲ ನಮ್ಮ ರಾಜ್ಯವಲ್ಲದೇ ದೇಶಾದ್ಯಂತ ನಡೆಯುತ್ತಿದ್ದ ಬಹುತೇಕ ಎಲ್ಲಾ ಪ್ರಮುಖ ಉತ್ಸವಗಳಲ್ಲಿ ಮತ್ತು ಸಾಂಸ್ಕೃತಿಕ ಉತ್ಸವಗಳಲ್ಲಿ ತಮ್ಮ ಕಲಾಪ್ರದರ್ಶನ ನೀಡುವ ಮೂಲಕ ಎಲ್ಲೆಡೆಯಲ್ಲಿಯೂ ಮೆಚ್ಚುಗೆಯನ್ನು ಗಳಿಸುತ್ತಾರೆ.

man7ಕೇವಲ ಕಲೆಗಷ್ಟೇ ತಮ್ಮನ್ನು ತಾವು ಸೀಮಿತಗೊಳಿಸಿಕೊಳ್ಳದೇ, ಅಶಕ್ತ ಹೆಣ್ಣುಮಕ್ಕಳು ದಿಕ್ಕೇ ಕಾಣದ ತೃತೀಯಲಿಂಗಿಗಳ ಪಾಲಿಗೆ ಪ್ರೇರಣಾದಾಯಕವಾಗಿದ್ದಾರೆ ಎಂದರು ಅತಿಶಯವಲ್ಲ.  ಸಮಾಜದಲ್ಲಿ ತೃತೀಯ ಲಿಂಗಿಗಳ ಬಗ್ಗೆ ಕುಹುಕದ ಮಾತುಗಳ ಮಧ್ಯೆಯೇ  ತಮ್ಮದೇ ಪ್ರತ್ಯೇಕ ಅಸ್ತಿತ್ವ ಮತ್ತು ಅಸ್ಮಿತೆ ಕಂಡುಕೊಂಡು ಅವರಿವರನ್ನು ಬೇಡುತ್ತಲೋ ಇಲ್ಲವೋ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡು ನಿತ್ಯವೂ ಬದುಕಿನಲ್ಲಿ  ಹೋರಾಟದ ಜೀವನ ನಡೆಸುವ ಅದೆಷ್ಟೋ ತೃತೀಯ ಲಿಂಗಿಗಳಿಗೆ ತಮ್ಮವರೂ ಕೂಡಾ  ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷೆಯಂತಹ ಪಟ್ಟವನ್ನೂ ಪಡೆದುಕೊಳ್ಳಬಹುದು ಎಂಬುದನ್ನು ತೋರಿಸಿದ  ಮಂಜಮ್ಮನವರ ಬದುಕೇ ಸ್ಪೂರ್ತಿದಾಯಕವೇ ಸರಿ.

man5ಸತತ ನಾಲ್ಕು ದಶಕಗಳಿಂದಲೂ ನಿರಂತರ ಕಲಾ ಸೇವೆಗೈದಿರುವ ಮಂಜಮ್ಮ ಜೋಗತಿ ಹತ್ತು ಹಲವಾರು ಪ್ರಶಸ್ತಿ ಪುರಸ್ಕಾರಗಳು ಹುಡುಕಿಕೊಂಡು ಬಂದಿದ್ದು ಅವುಗಳಲ್ಲಿ ಪ್ರಮುಖವಾದವುಗಳು ಹೀಗಿವೆ.

  • 2006 : ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ
  • 2007 : ಜಾನಪದ ಶ್ರೀ ಪ್ರಶಸ್ತಿ
  • 2008 : ಜಾನಪದ ಲೋಕ ಪ್ರಶಸ್ತಿ
  • 2010 : ಕನ್ನಡ ರಾಜ್ಯೋತ್ಸವ ಪ್ರಶಸ್ತಿ
  • 2012 : ಶ್ರೀ ತಾಯಮ್ಮ ಮಲ್ಲಯ್ಯ ದತ್ತಿನಿಧಿ ಪ್ರಶಸ್ತಿ
  • 2014 : ಸಮಾಜ ಸಖಿ ಪ್ರಶಸ್ತಿ
  • 2021 : ಪದ್ಮಶ್ರೀ ಪ್ರಶಸ್ತಿ

man2ಮಂಗಳಮುಖಿಯಾಗಿ ಎಲ್ಲರೂ ಅಚ್ಚರಿಪಡುವಂತೆ ಲಲಿತ ಕಲೆಯ ಜೊತೆಗೆ, ನಾಟಕ, ನಿರ್ದೇಶನ, ಹಾಡು, ಕುಣಿತ ಮುಂತಾದ ಮನೋರಂಜನಾತ್ಮಕ ಕಲೆಗಳನ್ನು ರೂಢಿಸಿಕೊಂಡಿರುವ ಮಂಜಮ್ಮ ಜೋಗತಿ ಅವರಿಗೆ ಸಾಧನೆಯನ್ನು ಗುರುತಿಸಿ ಅವರಿಗೆ 2021ರ ಸಾಲಿನ ಪದ್ಮಶ್ರೀ ಪುರಸ್ಕಾರವನ್ನು  ನೀಡುವುದರ ಮೂಲಕ  ಆ ಪ್ರಶಸ್ತಿಯ ಮೌಲ್ಯ ಹೆಚ್ಚಾಗಿರುವುದರ ಜೊತೆಗೆ  ಅವರಂತಯೇ  ಇರುವ ನೂರಾರು ಸಾಧಕಿಯರಿಗೆ ಭರವಸೆಯ ಹಾದಿ ತೋರಿಸಿದಂತಾಗಿದೆ ಎಂದರೂ ತಪ್ಪಾಗದು.  ರಾಷ್ಟ್ರಪತಿಗಳಾದ ರಾಮನಾಥ್ ಕೋವಿಂದ್ ಅವರ ಕೈಗಳಿಂದ ಪ್ರಶಸ್ತಿಯನ್ನು ಸ್ವೀಕರಿಸುವ ಮೊದಲು ಅವರಿಗೆ ನಮಸ್ಕರಿಸಿ ತಮ್ಮ ಮಂಗಳಮುಖಿಯರ ಸಂಪ್ರಾದಾಯದ ರೀತಿಯಲ್ಲಿ ರಾಷ್ಟ್ರಪತಿಗಳಿಗೆ ದೃಷ್ಟಿಯನ್ನು ನಿವಾಳಿಸಿ ನೆರೆದಿದ್ದವರೆಲ್ಲರಿಗೂ  ಅಚ್ಚರಿಯನ್ನು ಮೂಡಿಸಿ ನಂತರ ನಸುನಗುತ್ತಲೇ  ದೇಶಾದ್ಯಂತ ಇರುವ ಸಾವಿರಾರು ಮಂಗಳ ಮುಖಿಯರ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸುವ ಮೂಲಕ ಅವರೆಲ್ಲರಿಗೂ  ಭರವಸೆಯನ್ನು ಮೂಡಿಸಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ.

man8ಚಿಕ್ಕವಯಸ್ಸಿನಲ್ಲಿಯೇ ಮನೆಯವರಿಂದ ತಿರಸ್ಕರಿಸಲ್ಪಟ್ಟು, ಮುಂದೆ ಸ್ಪಷ್ಟ ಗುರಿ, ಹಿಂದೆ ದಿಟ್ಟ ಗುರುವಿನ ಆಶೀರ್ವಾದದಿಂದ ಕಲೆಯ ಅರಾಧಕರಾಗಿ ಕಲೆಯ ಕೈ ಹಿಡಿದು ಸಾವಿರಾರು ಪ್ರದರ್ಶನಗಳನ್ನು ನೀಡುವ ಮೂಲಕ  ಲಕ್ಷಾಂತರ ಜನರುಗಳ ಮನಸ್ಸನ್ನು ಗೆದ್ದು  ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯೆಯಾಗಿ ಕಲಾ ಸಂಘಟನೆಗೇ ತಮ್ಮ ಬದುಕನ್ನು ಮುಡಿಪಾಗಿಟ್ಟಿರುವುದ್ದಲ್ಲದೇ, ಪ್ರಸ್ತುತ ಜಾನಪದ ಅಕಾಡೆಮಿಯ ಅಧ್ಯಕ್ಷೆಯಾಗಿ ಜನಪದ ಕಲೆಯ ಪೋಷಣೆ ಮತ್ತು ರಕ್ಷಣೆಯ ಕಾರ್ಯದಲ್ಲಿ ತಮ್ಮ ಛಲ, ಪರಿಶ್ರಮ, ಬದ್ಧತೆಗಳನ್ನು ತೋರಿಸುತ್ತಿರುವ ಮಂಜಮ್ಮ ಜೋಗತಿಯವರು ಖಂಡಿತವಾಗಿಯೂ ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತೀರೀ?

ನಿಮ್ಮವನೇ ಉಮಾಸುತ

2 thoughts on “ಮಂಜಮ್ಮ ಜೋಗತಿ

  1. ಅವರಿಗೊಂದು ಹೃದಯ ಪೂರ್ವಕ ನಮನಗಳು. ಅವರು ನಡೆದು ಬಂದ ದಾರಿ, ಸಹಿಸಿದ ಕಷ್ಟಗಳು ಕೊನೆಗೆ ಅವರ ಗುರುವಿನ ಮುಖಂತರ ದಿಟ್ಟ ಸಾಧನೆಗೆ ಕೈ ಜೋಡಿಸಿ ತಲೆ ಬಾಗಿ ನಮಸ್ಕರಿಸಬೇಕು. ಸರ್ ನೀವು ತುಂಬಾ ಚನ್ನಾಗಿ ಅಂಕಣ ಬರೆದಿದ್ದೀರಿ 🙏🙏

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s