ವೃತ್ತಿಯಲ್ಲಿ ವೈದ್ಯರಾಗಿದ್ದು ಪ್ರವೃತ್ತಿಯಲ್ಲಿ ಬ್ಯಾಂಕಿಂಗ್, ಶಿಕ್ಷಣ, ವೈದ್ಯಕೀಯ ರಂಗ, ಪತ್ರಿಕಾ ರಂಗದಲ್ಲಿ ಕ್ರಾಂತಿಯನ್ನು ಉಂಟು ಮಾಡಿದ್ದಲ್ಲದೇ ದೇಶದಲ್ಲಿ ನೂರಾರು ಉದ್ಯಮಿಗಳಿಗೆ ಆರ್ಥಿಕ ಸಹಾಯ ಮಾಡುವ ಮೂಲಕ ದೇಶದ ಅಭಿವೃದ್ಧಿಯ ಹರಿಕಾರರಾದ ಡಾ. ತೋನ್ಸೆ ಮಾಧವ್ ಅನಂತ್ ಪೈ, ಎಲ್ಲರ ಮೆಚ್ಚಿನ ಟಿಎಂಎ ಪೈ ಅವರ ಯಶೋಗಾಥೆಯನ್ನು ನಮ್ಮ ಇಂದಿನ ಕನ್ನಡ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.
ಅದು 18ನೇ ಶತಮಾನದ ಅಂತ್ಯದ ಕಾಲ, ಗೋವಾದಲ್ಲಿನ ಕ್ರಿಶ್ಛಿಯನ್ನರ ಮತಾಂತದ ಧಾಳಿಗೆ ಹೆದರಿ ಉಡುಪಿಯ ಸಮೀಪದ ಮಣಿಪಾಲದಿಂದ ಸುಮಾರು 4 ಕಿಮೀ ದೂರದಲ್ಲಿರುವ ಕಲ್ಯಾಣಪುರ ಗ್ರಾಮಕ್ಕೆ ವಲಸೆ ಬಂದಿದ್ದ ಕೊಂಕಣೀ ಭಾಷಿಕರಾದ ಶ್ರೀ ಮಾಧವ ಪೈ ಅವರಿಗೆ ಏಪ್ರಿಲ್ 30, 1898ರಲ್ಲಿ ಜನಿಸಿದ ಮಗನಿಗೆ ಅನಂತ ಪೈ ಎಂದು ನಾಮಕರಣ ಮಾಡುತ್ತಾರೆ. ಬಾಲ್ಯದಿಂದಲೂ ತನ್ನ ಒಡಹುಟ್ಟಿದವರೆಲ್ಲರಿಗಿಂತಲೂ ಓದಿನಲ್ಲಿ ಅತ್ಯಂತ ಚುರುಕಾಗಿದ್ದ ಅನಂತ್ ಮದ್ರಾಸ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯದಲ್ಲಿ ಪದವಿ ಗಳಿಸಿದ ನಂತರ ಹೆಚ್ಚಿನ ವಿದ್ಯಾಭ್ಯಾಸ ಮತ್ತು ಹಣವನ್ನು ಸಂಪಾದಿಸಲು ವಿದೇಶಕ್ಕೆ ಹೋಗಲು ಇಚ್ಚಿಸಿದಾಗ ಮನೆಯವರು ಇಲ್ಲಿಯ ಜನರ ಯೋಗಕ್ಷೇಮಕ್ಕಾಗಿ ನಿನ್ನನ್ನು ವೈದ್ಯನನ್ನಾಗಿ ಮಾಡಿದ್ದೇವೆ ಹಾಗಾಗಿ ಅವರ ಸೇವೆಯನ್ನೇ ಮಾಡಿಕೊಂಡು ಇಲ್ಲೇ ಇರಬೇಕೆಂದು ತಾಕೀತು ಮಾಡಿದಾಗ ಪೋಷಕರ ಮಾತನ್ನು ಮೀರಲಾಗದೇ ಅಲ್ಲಿಯೇ ಉಳಿದುಕೊಳ್ಳಲು ನಿರ್ಧರಿಸುತ್ತಾರೆ.
ಪೋಷಕರ ಅಭೀಪ್ಸೆಯಂತೆ ಕ್ಲಿನಿಕ್ ಆರಂಭಿಸಿ ಚಿಕಿತ್ಸೆ ಕೊಡಲು ಆರಂಭಿಸಿದಾಗ ಹೇಳೀ ಕೇಳಿ ಕರಾವಳಿ ಪ್ರದೇಶವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಮೀನುಗಾರರ ಕುಟುಂಬವೇ ಆ ಸುತ್ತಮುತ್ತಲೂ ಇದ್ದ ಕಾರಣ ಕೇವಲ ನೆಗಡಿ ಶೀತ, ಜ್ವರ, ಅತಿಸಾರ, ಭೇದಿ ಮತ್ತು ಅಜೀರ್ಣದಂತಹ ಸಾಮಾನ್ಯ ಕಾಯಿಲೆಗಳಿಗಷ್ಟೇ ಚಿಕಿತ್ಸೆ ಕೊಡುತ್ತಾ ತಮ್ಮ ವಿದ್ಯೆಗೆ ತಕ್ಕ ಪ್ರತಿಫಲ ದೊರೆಯುತ್ತಿಲ್ಲವೆಂದು ನಿರ್ಧರಿ, ಮತ್ತೊಮ್ಮೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗಲು ಅವಕಾಶ ನೀಡುವಂತೆ ತನ್ನ ಹೆತ್ತವರ ಮನವೊಲಿಸಲು ಪ್ರಯತ್ನಿಸಿ ವಿಫಲರಾಗಿ ಭಗ್ನ ಹೃದಯಿಯಾದಾಗ ಹೆಚ್ಚಿನ ಸಂಬಂಧಿಗಳು ಈ ಹುಡುಗನಿಗೆ ಜೀವನದಲ್ಲಿ ಜಿಗುಪ್ಸೆಯಲ್ಲಿಯೇ ತೊಳಲಾಡುತ್ತಾನೆ ಎಂದೇ ಭಾವಿಸಿರುತ್ತಾರೆ.
ಅದೊಮ್ಮೆ ತನ್ನ ಬಳಿ ಬರುವ ರೋಗಿಗಳು ತಾನು ಕೇಳಿದಷ್ಟು ಹಣ ಕೊಡಲು ಏಕೆ ಸಾಧ್ಯವಿಲ್ಲ ಎಂದು ಯೋಚಿಸುತ್ತಿರುವಾಗ ಥಟ್ ಎಂದು ಆಲೋಚನೆ ಹೊಳೆಯುತ್ತದೆ. ತನ್ನ ಸುತ್ತಲಿನ ಜನರು ಸಾಕಷ್ಟು ಹಣ ಸಂಪಾದಿಸದೇ ಇರುವ ಕಾರಣವೇ ನನಗೂ ಸಂಪಾದನೆ ಆಗುತ್ತಿಲ್ಲ ಎಂಬುದನ್ನು ಅರಿತುಕೊಂಡು ಇದಕ್ಕೇನಾದರೂ ಪರಿಹಾರವನ್ನು ಕಂಡು ಹಿಡಿಯಲು ಸಾಧ್ಯವೇ? ಎಂದು ಯೋಚಿಸಿದಾಗ ಆದುವರೆವಿಗೂ ಭಾರತ ಕಂಡಿರದ ಅಥವಾ ಊಹಿಸಿರದ ಸಾಮಾಜಿಕ ಕ್ರಾಂತಿಯೊಂದು ಅವರಿಗೆ ಹೊಳೆಯುತ್ತದೆ. ಅಂದಿನಿಂದ ಅವರು ತನ್ನ ಬಳಿಗೆ ಬರುವ ಮಹಿಳೆಯರ ಮೇಲೆ ಕೇಂದ್ರೀಕರಿಸಿ, ನೀವು ಹೇಗೋ ಕಷ್ಟ ಪಟ್ಟು ಮೀನುಗಾರಿಕೆಯಿಂದ ಜೀವನ ನಡೆಸುತ್ತಿದ್ದೀರಿ, ಆದರೆ ನಿಮ್ಮ ಮಕ್ಕಳೂ ಸಹಾ ಅದೇ ವೃತ್ತಿಯನ್ನು ಮುಂದುವರಿಸದೇ ಓದಿ ಕೈತುಂಬ ಸಂಪಾದನೆ ಮಾಡಿದಾಗ ಮಾತ್ರವೇ ನಿಮ್ಮ ಬದುಕು ಹಸನಾಗುತ್ತದೆ ಎಂದು ಮನವರಿಕೆ ಮಾಡುತ್ತಾರೆ
ವೈದ್ಯರು ಹೇಳಿದ್ದು ಸತ್ಯ ಎಂದು ನಂಬಿದರೂ ಗಂಡ ತಂದ ಮೀನನ್ನು ಸ್ವಚ್ಛಮಾಡಿ ಅದನ್ನು ಮಾರುಕಟ್ಟೆಯಲ್ಲಿ ಮಾರಿ ತಂದ ಹಣ ಕೇವಲ ದೈನಂದಿನ ಜೀವನ ನಿರ್ವಹಣೆ ಮತ್ತು ಕಷ್ಟ ಪಟ್ಟು ಮೀನು ಹಿಡಿದು ತಂದ ಆಯಾಸ ಪರಿಹರಿಸಿಕೊಳ್ಳುವ ಸಲುವಾಗಿ ಕುಡಿತದಲ್ಲೇ ಖರ್ಚಾಗುವ ಕಾರಣ ತಮ್ಮ ಬಳಿ ಹಣವೇ ಉಳಿಯುವುದಿಲ್ಲ ಎಂಬ ಅಳಲನ್ನು ತೋಡಿಕೊಳ್ಳುತ್ತಾರೆ. ಹಾಗಾದರೆ ನಿಮ್ಮ ಬಳಿ ಎಷ್ಟು ಹಣ ಉಳಿಯಬಹುದು ಎಂದು ಕೇಳಿದಾಗ ಹತ್ತಿಪ್ಪತ್ತು ಪೈಸೆಗಳು ಉಳಿಯಬಹುದು ಎಂದು ತೋರಿಸುತ್ತಾರೆ. ಆಗ ಪೈಗಳು ಪ್ರತಿದಿನ ಮಧ್ಯಾಹ್ನ ಅವರ ಕಂಪೌಂಡರ್ ಅವರನ್ನು ಆ ಮೀನುಗಾರ ಮನೆಗಳಿಗೆ ಕಳುಹಿಸಿ ಆ ಮಹಿಳೆಯರಿಂದ 25 ಪೈಸೆಯನ್ನು ಸಂಗ್ರಹಿಸಿ ಕೊಟ್ಟ ಹಣವನ್ನು ಒಂದು ಪುಸ್ತಕವನ್ನು ಮೀನುಗಾರ ಮಹಿಳೆಯರಲ್ಲೂ ಮತ್ತೊಂದು ತಮ್ಮ ಬಳಿ ಇಟ್ಟುಕೊಂಡು ಅದರಲ್ಲಿ ನಮೂದಿಸುವ ಮೂಲಕ ಪಿಗ್ಮಿ ಸಂಗ್ರಹಿಸುವ ಕೆಲಸ ಆರಂಭಿಸುತ್ತಾರೆ.
ನೋಡ ನೋಡುತ್ತಿದ್ದಂತೆಯೇ ನೂರಾರು ಮಹಿಳೆಯರು ಈ ಉಳಿತಾಯ ಯೋಜನೆಯಲ್ಲಿ ಹಣವನ್ನು ಹೂಡಿದ ಪರಿಣಾಮ ಕೆಲವೇ ತಿಂಗಳುಗಳಲ್ಲಿ ಪೈ ಅವರ ಬಳಿ ಸಾವಿರಾರು ರೂಪಾಯಿಗಳಷ್ಟು ಹಣ ಸಂಗ್ರಹವಾಗುತ್ತದೆ.
ಈಗ ಯೋಜನೆಯ 2 ನೇ ಹಂತವಾಗಿ ತಮ್ಮ ಬಳಿ ಚಿಕಿತ್ಸೆಗೆ ಬರುವ ಹೆಚ್ಚಿನ ಮಕ್ಕಳು ಕೇವಲ ಅನ್ನ ಮತ್ತು ಮೀನು ಮಾತ್ರ ಸೇವಿಸುವುದರಿಂದ ಪೌಷ್ಟಿಕಾಂಶದ ಕೊರತೆಯಿಂದಾಗಿ ಆಗ್ಗಾಗ್ಗೆ ಅನಾರೋಗ್ಯಕ್ಕೆ ಒಳಗಾಗುತ್ತಿರುವುದನ್ನು ಗಮನಿಸಿ, ಆ ಮಕ್ಕಳಿಗೆ ಪ್ರತಿದಿನ ಒಂದು ಲೋಟ ಹಾಲು ನೀಡುವಂತೆ ಅವರ ತಾಯಿಯವರಿಗೆ ಒತ್ತಾಯಿಸುತ್ತಾರೆ.
ಬರುವ ಹಣದಲ್ಲಿ ಜೀವನವನ್ನೇ ನಡೆಸಲು ದುಸ್ಸಾಹಸ ಪಡುತ್ತಿರುವಾಗ ಇನ್ನು ಹಾಲನ್ನು ಎಲ್ಲಿಂದ ತರುವುದು ಎಂದು ಆ ಮಹಿಳೆಯರು ಕೇಳಿದಾಗ, ನಿಮ್ಮ ಮನೆಗಳಿಗೆ ಹಸುವನ್ನು ಖರೀದಿಸಲು ನಾವು ಸಹಾಯ ಮಾಡುತ್ತೇವೆ. ನಿಮ್ಮ ಮನೆಗೆ ಅಗತ್ಯವಿರುವ ಹಾಲನ್ನು ಬಳಸಿಕೊಂಡು ಮಿಕ್ಕ ಹಾಲನ್ನು ನಮಗೆ ಕೊಡಿ ಅದಕ್ಕೆ ತಕ್ಕ ಹಣವನ್ನು ನಾವು ಕೊಡುತ್ತೇವೆ. ಆ ಹಣದಿಂದ ಹಸು ಕೊಳ್ಳಲು ಪಡೆದ ಸಾಲವನ್ನು ಸುಲಭವಾಗಿ ತೀರಿಸಬಹುದು ಎಂದು ತಿಳಿಸುತ್ತಾರೆ.
ಆರಂಭದಲ್ಲಿ ಈ ಯೋಜನೆಗೆ ಮಹಿಳೆಯರ ಮನವೊಲಿಸಲು ಸ್ವಲ್ಪ ಸಮಯ ಹಿಡಿಯಿತಾದರೂ ಕೆಲವೇ ದಿನಗಳಲ್ಲಿ ಆ ಗ್ರಾಮದಲ್ಲಿ ಅನೇಕ ಹಸುಗಳು ಸಾಕಲಾಗಿ ಅವುಗಳಿಂದ ಬರುತ್ತಿದ್ದ ಎಲ್ಲಾ ಹಾಲನ್ನು ಡಾ.ಪೈಗಳಿಗೆ ಖರೀದಿಸಲು ಸಾಧ್ಯವಾಗದ ಕಾರಣ ಅವರು ಹಾಲು ಒಕ್ಕೂಟವನ್ನು ಆರಂಭಿಸಿ ಅಲ್ಲಿ ಖರೀದಿಸಿದ ಹಾಲನ್ನು ಸುತ್ತ ಮುತ್ತಲಿನ ಹತ್ತಾರು ಹಳ್ಳಿಗಳಲ್ಲಿ ಮಾರಾಟ ಮಾಡುವ ವ್ಯವಸ್ಥೆಯನ್ನು ಪ್ರಾರಂಭಿಸುತ್ತಾರೆ.
ನೋಡ ನೋಡುತ್ತಿದ್ದಂತೆಯೇ ಹಣದ ಹರಿವು ಹೆಚ್ಚಾಗಿ ಹಣವನ್ನು ನಿಭಾಯಿಸಲು ಸಾಧ್ಯವಾಗದೇ ಹೋದಾಗ ತಮ್ಮ ಅಣ್ಣ ಉಪೇಂದ್ರ ಪೈರನ್ನು ಸೇರಿಸಿ ಕೊಂಡು ಕೆನರಾ ಇಂಡಸ್ಟ್ರಿಯಲ್ ಮತ್ತು ಬ್ಯಾಂಕಿಂಗ್ ಸಿಂಡಿಕೇಟ್ ಲಿಮಿಟೆಡ್ ಎಂಬ ಖಾಸಗೀ ಬ್ಯಾಂಕೊಂದನ್ನು ಸ್ಥಾಪಿಸಿ ಅದರ ಪ್ರಧಾನ ಕಛೇರಿ ಮಣಿಪಾಲದಲ್ಲಿ ಆರಂಭಿಸಿ, ಬ್ಯಾಂಕಿನ ಮೊತ್ತ ಮೊದಲ ಶಾಖೆಯನ್ನು 1925 ರಲ್ಲಿ ಉಡುಪಿಯಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತಾರೆ. 1937 ರ ಹೊತ್ತಿಗೆ, ಈ ಬ್ಯಾಂಕ್ ದೂರದ ಮುಂಬೈನಲ್ಲಿ ಕ್ಲಿಯರಿಂಗ್ ಹೌಸ್ ಆಗಿ ತನ್ನ ಸದಸ್ಯತ್ವವನ್ನು ಪಡೆದುಕೊಳ್ಳುವ ಮೂಲಕ ಎಲ್ಲರ ಮನ್ನಣೆಯನ್ನು ಪಡೆಯುತ್ತದೆ.
ನಂತರ ಸುತ್ತ ಮುತ್ತಲಿನ ಹಳ್ಳಿಗಳ ಜನರನ್ನು ಸಂಪರ್ಕಿಸಿ ಅವರಲ್ಲೇ ನೇಕಾರರ ಸಹಕಾರ ಸಂಘಗಳನ್ನು ಪ್ರಾರಂಭಿಸಿ ತಮ್ಮ ಬ್ಯಾಂಕ್ನಿಂದಲೇ ಆವರಿಗೆ ಹಣಕಾಸು ಒದಗಿಸಿ ಅವರನ್ನು ಸ್ವಾವಲಂಭಿಗಳನ್ನಾಗಿ ಮಾಡುತ್ತಾರೆ. ನಂತರ ಅಲ್ಲಿನ ಸಮುದಾಯದ ಮುಂದಿನ ಪೀಳಿಗೆಯರ ಪ್ರಯೋಜನಕ್ಕಾಗಿ ಉತ್ತಮ ಶಿಕ್ಷಣವನ್ನು ನೀಡಲು ಶಾಲೆಗಳನ್ನು ಪ್ರಾರಂಭಿಸಿ ಅದು ಬೆಳೆಯುತ್ತಲೇ ಹೋಗಿ ನಂತರ ಕಾಲೇಜುಗಳು ಆನಂತರ ಎಂಜಿನಿಯರಿಂಗ್ ಮತ್ತು ವೈದ್ಯಕೀಯವನ್ನು ಕಲಿಸುವ ಸಂಸ್ಥೆಗಳಾಗಿ ಬೆಳೆದು ಮುಂದೆ ಅದು ಪ್ರತಿಷ್ಠಿತ ಮಣಿಪಾಲ ಶೈಕ್ಷಣಿಕ ಸಂಕೀರ್ಣ ಎಂಬ ಹೆಸರನ್ನು ಪಡೆಯುತ್ತದೆ.
ಅಂದು ಸಣ್ಣದಾಗಿ ಆರಂಭಿಸಿದ ಬ್ಯಾಂಕ್ ಮುಂದೆ ಸಿಂಡಿಕೇಟ್ ಬ್ಯಾಂಕ್ ಎಂಬ ಹೆಸರನ್ನು ಪಡೆಯುತ್ತದೆ. ತಮ್ಮ ಬ್ಯಾಂಕನ್ನು ಇನ್ನೂ ದೊಡ್ಡದಾಗಿ ಬೆಳೆಸುವ ಸಲುವಾಗಿ ಬೆಳೆಯುವ ಹಂಬಲ ಮತ್ತು ಎರವಲು ಪಡೆದ ಮೊತ್ತವನ್ನು ಮರುಪಾವತಿ ಮಾಡುವ ಸಾಮರ್ಥ್ಯ ಮತ್ತು ಇಚ್ಛೆ ಇರುವ ಉದ್ಯಮಿಗಳ ಹುಡುಕಾಟದಲ್ಲಿ ಇರುತ್ತಾರೆ. ಅದಕ್ಕಾಗಿಯೇ ಅವರು ಮುಂಬೈಗೆ ಬಂದು ಅನೇಕ ವ್ಯಾಪರಿಗಳನ್ನು ಭೇಟಿಯಾಗಿ ಅವರ ಉದ್ಯಮವನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸಲು ತಾವು ಅತ್ಯಂತ ಕಡಿಮೆ ಬಡ್ಡಿಯ ದರದಲ್ಲಿ ಧನ ಸಹಾಯ ಮಾಡುವುದಾಗಿ ತಿಳಿಸಿದಾಗ ಇವರ ಹಣ ಸಹಾಯದಿಂದ ದೊಡ್ಡ ಮಿಲ್ ಗಳು ಕಾರ್ಯಾರಂಭ ಮಾಡುತ್ತದೆ. ಇದೇ ಸಮಯದಲ್ಲಿ ಅಂದಿನ ಪ್ರಧಾನಿಗಳ ಆಶಯದಂತೆ ಖಾಸಗಿ ಬ್ಯಾಂಕುಗಳೆಲ್ಲಾ ರಾಷ್ಟ್ರಿಕೃತ ಬ್ಯಾಂಕುಗಳಾಗಿ ದೇಶ ವಿದೇಶಗಳ್ಲಿ ತಮ್ಮ ಕಛೇರಿಗಳನ್ನು ವಿಸ್ತರಿಸಿಕೊಳ್ಳಲು ಸಹಕಾರಿಯಾಗುತ್ತದೆ.
ಅನೇಕ ಕನಸುಗಳನ್ನು ಹೊತ್ತಿದ್ದ ಗುಜರಾತಿನ ಮೂಲದ ಪೆಟ್ರೋಲ್ ಬಂಕಿನಲ್ಲಿ ಕೆಲಸಮಾಡುತ್ತಿದ ತರುಣ ಧೀರೂಭಾಯ್ ಅಂಬಾನಿ ಎಂಬ ತರುಣ ತನ್ನ ಕನಸನ್ನು ನನಸಾಗಿ ಮಾಡಲು ಸಹಾಯ ಮಾಡುವವರ ತಲಾಶೆಯಲ್ಲಿದ್ದಾಗ ಅನಂತ ಪೈ ಅವರನ್ನು ಭೇಟಿ ಮಾಡಿದ ನಂತರ ಇಬ್ಬರ ದಿಕ್ಕು ದೆಸೆ ಎರಡೂ ಬದಲಾಗುತ್ತದೆ. ಪೈಗಳ ಸಹಾಯದಿಂದ ಸರ್ಕಾರದಿಂದ ನೂಲು ಪರವಾನಗಿ ಪಡೆದು ಜವಳಿ ಉದ್ಯಮವನ್ನು ಆರಂಭಿಸಿದ ಧೀರೂಭಾಯಿ ಅಂಬಾನಿ ತನ್ನ ಕಠಿಣ ಪರಿಶ್ರಮದಿಂದ ಕೆಲವೇ ದಿನಗಳಲ್ಲಿ ದೇಶದ ಅತ್ಯಂತ ದೊಡ್ಡ ಉದ್ಯಮಿಯಾಗಿ ಬೆಳೆಯುತ್ತಾರೆ. ಹಾಗಾಗಿಯೇ ಅನಂತ ಪೈ ಅವರು ಕೇವಲ ಅಂಬಾನಿ ಕುಟುಂಬದ ಸ್ನೇಹಿತನಾಗಿರದೇ ಅವರ ಕುಟುಂಬದ ಒಬ್ಬ ಪ್ರಮುಖ ಸದಸ್ಯ ಎಂದೇ ಗುರುತಿಸಲ್ಪಟ್ಟು ಅವರು ಬದುಕಿರುವವರೆಗೂ ರಿಲಯನ್ಸ್ ಇಂಡಸ್ಟ್ರೀಸ್ ಮಂಡಳಿಯಲ್ಲಿ ಸದಸ್ಯರಾಗಿದ್ದರು.
ಅನಂತ್ ಪೈ ಮತ್ತು ಧೀರೂಬಾಯಿಯವರ ಸ್ನೇಹದ ಕುರುಹಾಗಿಯೇ ಅಂಬಾನಿ ತಮ್ಮ ಮೊಮ್ಮಗನಿಗೆ ಅನಂತ್ ಅಂಬಾನಿ ಎಂಬ ಹೆಸರನ್ನು ಇಡುವ ಮೂಲಕ ತಮ್ಮಿಬ್ಬ್ಬರ ಅವಿನಾಭಾವ ಸಂಬಂಧವನ್ನು ಜಗಜ್ಜಾಹೀರಾತು ಮಾಡಿದ್ದಾರೆ.
1970ರಲ್ಲಿ ಉದಯವಾಣಿ ಎಂಬ ದಿನಪತ್ರಿಕೆಯನ್ನು ಆರಂಭಿಸುವ ಮೂಲಕ ಪತ್ರಿಕಾರಂಗಕ್ಕೆ ಕಾಲಿಟ್ಟ ಮಣಿಪಾಲ್ ಸಂಸ್ಥೆ ಮುಂದಿನ ಕೆಲವೇ ವರ್ಷಗಳಲ್ಲಿ, ರೂಪತಾರಾ ಎಂಬ ಸಿನಿಮಾ ಮಾಸಪತ್ರಿಕೆ, ತರಂಗ ಎಂಬ ವಾರಪತ್ರಿಕೆ, ತುಂತುರು ಮತ್ತು ಸಚಿತ್ರ ಎಂಬ ಮಕ್ಕಳ ಪತ್ರಿಕೆ ಯಲ್ಲದೇ ತುಷಾರ ಮಾಸಪತ್ರಿಕೆಯನ್ನೂ ಆರಂಭಿಸಿ ಇಂದಿಗು ಅತ್ಯಂತ ಮನ್ನಣೆಯನ್ನು ಮುಂದುವರೆಸಿಕೊಂಡು ಹೋಗುತ್ತಿದೆ.
ಹೀಗೆ ನೋಡನೋಡುತ್ತಲೇ ಅನಂತ ಪೈ ದೇಶದಲ್ಲಿ ಅನೇಕ ಮೊದಲುಗಳಿಗೆ ಕಾರಣೀಭೂತರಾಗುತ್ತಾರೆ
- ಗ್ರಾಮೀಣ ಪ್ರದೇಶದಲ್ಲಿ ಪ್ರಧಾನ ಕಛೇರಿಯನ್ನು ಸ್ಥಾಪಿಸಿದ ಭಾರತದ ಏಕೈಕ ದೊಡ್ಡ ಬ್ಯಾಂಕ್
- ಅಂದಿನ ಎಲ್ಲಾ ಬ್ಯಾಂಕುಗಳಲ್ಲಿ ಖಾತೆ ತೆರೆಯಲು ಕನಿಷ್ಠ ಠೇವಣಿ ಮೊತ್ತ 5 ರೂಗಳು ಇದ್ದಾಗ ಸಿಂಡಿಕೇಟ್ ಬ್ಯಾಂಕಿನಲ್ಲಿ ಕೇವಲ 25 ಪೈಸೆಗೆ ಬ್ಯಾಂಕಿನಲ್ಲಿ ಖಾತೆಯನ್ನು ತೆರೆಯಬಹುದಾಗಿತ್ತು.
- ಭಾರತದಲ್ಲಿ ಎಂಬಿಬಿಎಸ್ ನೀಡುವ ಖಾಸಗಿ ವಿದ್ಯಾ ಸಂಸ್ಥೆ
- ಸ್ವ-ಹಣಕಾಸು ವೈದ್ಯಕೀಯ ಕಾಲೇಜನ್ನು ಪ್ರಾರಂಭಿಸಿದ ಮೊದಲ ವ್ಯಕ್ತಿ
- 1953 ರಲ್ಲಿ ಕಸ್ತೂರ್ಬಾ ವೈದ್ಯಕೀಯ ಕಾಲೇಜು
- 1957 ರಲ್ಲಿ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯನ್ನು ಸ್ಥಾಪಿಸಿದರು,
- ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್,
- ಮಣಿಪಾಲ್ ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್
- ಮಣಿಪಾಲ್ ಪ್ರಿ-ಯೂನಿವರ್ಸಿಟಿ ಕಾಲೇಜು ಸೇರಿದಂತೆ ಇತರ ಶಿಕ್ಷಣ ಸಂಸ್ಥೆಗಳ ಸರಣಿಯನ್ನು ಸ್ಥಾಪಿಸಲಾಯಿತು.
ಡಾ. ಅನಂತ ಪೈ ಅವರ ಸಾಧನೆಗಳನ್ನು ಗುರುತಿಸಿ ಹತ್ತು ಹಲವಾರು ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ ಅವುಗಳಲ್ಲಿ ಪ್ರಮುಖವಾದವೆಂದರೆ,
- 1972 ರಲ್ಲಿ ಪದ್ಮಶ್ರೀ ಪ್ರಶಸ್ತಿ
- 1973 ರಲ್ಲಿ ಕರ್ನಾಟಕ ಮತ್ತು ಧಾರವಾಡ ವಿಶ್ವವಿದ್ಯಾಲಯ, 1975 ರಲ್ಲಿ ಆಂಧ್ರ ಮತ್ತು ವಿಶಾಖಪಟ್ಟಣ ವಿಶ್ವವಿದ್ಯಾಲಯ ಅವರಿಗೆ ಡಿ.ಲಿಟ್ ಪದವಿ ಪ್ರದಾನ ಮಾಡಿದ್ದಾರೆ.
ಅಕ್ಟೋಬರ್ 9, 1999 ರಂದು ಅನಂತ ಪೈ ಆವರ ಸ್ಮರಣಾರ್ಥವಾಗಿ ಅಂಚೆಚೀಟಿ ಬಿಡುಗಡೆಯಾಗಿದೆ
- ಪೈ ಅವರನ್ನು ರಿಪ್ಲೀಸ್ ಬಿಲೀವ್ ಇಟ್ ಆರ್ ನಾಟ್ ಅವರ ಜೀವಿತಾವಧಿಯಲ್ಲಿ ಅತಿ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ ವ್ಯಕ್ತಿ ಎಂದು ಗುರುತಿಸಲಾಗಿದೆ.
80 ವರ್ಷಗಳ ತುಂಬು ಜೀವನವನ್ನು ನಡೆಸಿ ಸಾರ್ಥಕ ಬದುಕನ್ನು ನಡೆಸಿದ ಟಿ.ಎಂ.ಎ ಪೈ ಅವರು 1979 ರಲ್ಲಿ ವಯೋಸಹಜವಾಗಿ ನಿಧನ ಹೊಂದಿದ ನಂತರ ಅವರ ಕುಟುಂಬದ ಉದ್ಯಮ ಮಗ ರಾಮದಾಸ್ ಪೈ ಮತ್ತು ಅವರ ಸೋದರಳಿಯ ರಮೇಶ್ ಪೈ ಅವರ ನಡುವೆ ಹಂಚಿಕೆಯಾಗಿ ಹೋಯಿತಾದರೂ ಕೇವಲ ಪೈ ಅವರ ಕುಟುಂಬದ ವಿವಿಧ ಉದ್ಯಮಗಳು ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳಿಂದಾಗಿ ಸಾಮಾನ್ಯ ಹಳ್ಳಿಯಾಗಿದ್ದ ಮಣಿಪಾಲ್ ಇಂದು ಜಗತ್ಪ್ರಸಿದ್ಧವಾದ ನಗರವಾಗಿದೆ.
ಜುಲೈ 19 1969 ರಲ್ಲಿ ರಾಷ್ಟ್ರೀಕೃತವಾಗಿದ್ದ ಸಿಂಡಿಕೇಟ್ ಬ್ಯಾಂಕ್ 51 ವರ್ಷಗಳ ನಂತರ ಮಾರ್ಚ್ 31 , 2020 ರಲ್ಲಿ ಕೆನರಾ ಬ್ಯಾಂಕಿನೊಂದಿಗೆ ವಿಲೀನವಾಗುವ ಮೂಲಕ ಅನಂತ ಪೈ ಅವರ ಕನಸಿನ ಕೂಸೊಂದು ಬ್ಯಾಂಕಿಗ್ ಲೋಕದಲ್ಲಿ ಮಿಂಚಿ ಮರೆಯಾಗಿದೆ. ಸಣ್ಣ ಸಣ್ಣ ಉಳಿತಾಯದ ಮೂಲಕ ಸಮಾಜದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಣೆ ತರುವುದಲ್ಲದೇ ದೇಶ ಆರ್ಥಿಕ ಸಂಪತ್ತನ್ನು ವೃದ್ಧಿಸುವುದಲ್ಲದೇ ಹೆಚ್ಚಿನ ಜನರನ್ನು ಸ್ವಾವಲಂಭಿಗಳನ್ನಾಗಿ ಮಾಡಬಹುದು ಎಂದು ಅಕ್ಷರಶಃ ಕಾರ್ಯಗತ ಮಾಡಿ ತೋರಿಸಿದ ಇಂದಿಗೂ ಅನೇಕ ಮ್ಯಾನೇಜ್ಮೆಂಟ್ ಶಾಲೆಗಳಲ್ಲಿ ಕೇಸ್ ಸ್ಟಡಿಯಾಗಿರುವ ಡಾ. ತೋನ್ಸೆ ಮಾಧವ್ ಅನಂತ್ ಪೈ ಖಂಡಿತವಾಗಿಯೂ ನಮ್ಮ ಹೆಮ್ಮೆಯ ಕನ್ನಡದ ಕಲಿಗಳು ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
Best article
LikeLike