ಸರ್ ಬೆನಗಲ್ ನರಸಿಂಗರಾವ್

ಬೆನಗಲ್  ಎಂಬ ಹೆಸರನ್ನು ಕೇಳಿದ ಕೂಡಲೇ ನಮಗೆ ಥಟ್  ಅಂತಾ ನೆನಪಾಗೋದೇ ಭಾರತೀಯ ಚಲನಚಿತ್ರರಂಗದ ಪ್ರಖ್ಯಾತ ನಿರ್ದೇಶಕ ಶ್ಯಾಂ ಬೆನಗಲ್ ಮತ್ತು ಭಾರತದ ಸಂವಿಧಾನದ ಕರ್ತೃಗಳು ಯಾರು ಎಂದಾಕ್ಷಣವೇ ಥಟ್  ಅಂತಾ ನೆನಪಗೋದೇ ಡಾ. ಬಿ. ಆರ್. ಅಂಬೇಡ್ಕರ್ ಅವರು. ನಿಜ ಹೇಳಬೇಕೆಂದರೆ, ಬೆನಗಲ್ ಮತ್ತು ಭಾರತದ ಸಂವಿಧಾನಕ್ಕೆ ಶ್ಯಾಮ್ ಮತ್ತು ಅಂಬೇಡ್ಕರ್ ಅವರು ಒಂದು ರೀತಿಯ ಅತಿಥಿ ಅಧ್ಯಾಪಕರು (visiting professor) ಎಂದರೆ ಬಹುತೇಕರಿಗೆ  ಅಚ್ಚರಿ ಮೂಡಬಹುದು  ಇನ್ನೂ ಕೆಲವರು ಸಿಟ್ಟಾಗಲೂ ಬಹುದು. ಆದರೆ ಇತಿಹಾಸವನ್ನಂತೂ ಬದಲಿಸಲು ಸಾಧ್ಯವಿಲ್ಲ ಅಲ್ಲವೇ? ಬೆನಗಲ್ ಎಂಬ ಗ್ರಾಮಕ್ಕೂ ಮತ್ತು ಭಾರತದ ಸಂವಿಧಾನಕ್ಕೆ ಅಧಿಕಾರಯುತವಾದ ಸಂಬಂಧವನ್ನು ಹೊಂದಿದ್ದವರೇ ನಮ್ಮ ಹೆಮ್ಮೆಯ ಕನ್ನಡಿಗರಾಗಿದ್ದ ಸರ್ ಸರ್ ಬೆನಗಲ್ ನರಸಿಂಗರಾವ್ ಎಲ್ಲರ ಪ್ರೀತಿಯ ಬಿ.ಎನ್.ರಾವ್. ಅಂತಹ ಮಹನೀಯರ ವ್ಯಕ್ತಿ ಮತ್ತು ವ್ಯಕ್ತಿತ್ವದ ಪರಿಚಯವನ್ನು ನಮ್ಮ ಈ ದಿನದ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.

bnr2ಅವಿಭಜಿತ ದಕ್ಷಿಣ ಕನ್ನಡದ ಭಾಗವಾದ ಮಂಗಳೂರು ಮತ್ತು ಕಾರ್ಕಳದ  ಮಧ್ಯೆ ಇರುವ ಪುಟ್ಟದೊಂದು ಹಳ್ಳಿಯೇ  ಬೆನಗಲ್. ಆ ಊರಿನ ಸುಪ್ರಸಿದ್ಧ ವೈದ್ಯರಾಗಿದ್ದ ಶ್ರೀ ಬೆನಗಲ್ ರಾಘವೇಂದ್ರ ರಾವ್ ಮತ್ತು ಅವರ ಶ್ರೀಮತಿಯವರಿಗೆ  26 ಫೆಬ್ರವರಿ 1887 ರಂದು  ನರಸಿಂಗ ರಾವ್ ಜನಿಸುತ್ತಾರೆ. ಮನೆಯ ಮಾತೃಭಾಷೆ ಚಿತ್ಪಾಪನಿ. ಚಿಕ್ಕಂದಿನಿಂದಲು ಓದಿನಲ್ಲಿ ಚುರುಕಾಗಿದ್ದ  ನರಸಿಂಗರಾಯರು  ಮಂಗಳೂರಿನ ಕೆನರಾ ಶಾಲೆಯಲ್ಲಿ 1901ರಲ್ಲಿ  ಇಡೀ ಮದ್ರಾಸ್ ಪ್ರಾಂತ್ಯಕ್ಕೇ ಮೊದಲ ಸ್ಥಾನ ಪಡೆದು ತಮ್ಮ  ಮೆಟ್ರಿಕ್ಯುಲೇಶನ್ ಪರೀಕ್ಷೆಯನ್ನು ಮುಗಿಸುತ್ತಾರೆ. ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕೆ ದೂರದ ಮದ್ರಾಸಿನ ಪ್ರತಿಷ್ಠಿತ ಪ್ರೆಸಿಡೆನ್ಸಿ ಕಾಲೇಜು ಸೇರಿ ಅಲ್ಲಿ ಇಂಗ್ಲೀಷ್, ಸಂಸ್ಕೃತ ಮತ್ತು ಗಣಿತ ವಿಷಯಗಳನ್ನು ಅಭ್ಯಾಸ ಮಾಡಿ ಎಫ್ಎ ಪರೀಕ್ಷೆಯಲ್ಲಿ ಮತ್ತೆ ಇಡೀ ಪ್ರಾಂತ್ಯಕ್ಕೆ ಪ್ರಥಮ ಸ್ಥಾನದೊಂದಿಗೆ ತೇರ್ಗಡೆಯಾಗುತ್ತಾರೆ. ಈ ಪರಿಯ ಬುದ್ಧಿವಂತಿಕೆಯಿಂದಾಗಿ  ವಿದ್ಯಾರ್ಥಿ ವೇತನ ದೊರತ ಕಾರಣ, ರಾಯರು ಇಂಗ್ಲೆಂಡಿನ  ಟ್ರಿನಿಟಿ ಕಾಲೇಜಿನಲ್ಲಿ ಮೂರು ವರ್ಷ ಪದವಿ ವ್ಯಾಸಂಗ ಮಾಡಿ 1909ರಲ್ಲಿ ಟ್ರೈಪೋಸ್ ಪರೀಕ್ಷೆಯನ್ನು ಮುಗಿಸುತ್ತಾರೆ.

ಅದೇ ವರ್ಷ ಭಾರತಕ್ಕೆ  ಹಿಂದಿರುಗಿ ಇಲ್ಲಿನ ಭಾರತೀಯ ನಾಗರಿಕ ಸೇವಾ ಪರೀಕ್ಷೆಯನ್ನು ಯಶಸ್ವಿಯಾಗಿ ಮುಗಿಸಿ, ಕಲ್ಕತ್ತಕ್ಕೆ ನ್ಯಾಯಾಧೀಶರಾಗಿ ಆಯ್ಕೆಯಾಗಿ ಭಾರತದ ಕಾನೂನು ಸಂಹಿತೆಯನ್ನು ಬರೆಯುವ ಜವಾಬ್ಧಾರಿಯನ್ನು ಹೊತ್ತು ಕೊಂಡು ವಹಿಸಿದ್ದ ಕೆಲಸವನ್ನು ಕೇವಲ ಎರಡು ವರ್ಷದಲ್ಲಿಯೇ ಮುಗಿಸಿ ದಾಖಲೆ ನಿರ್ಮಿಸಿದ ಅಭಿಮಾನಕ್ಕಾಗಿ  ಅವರಿಗೆ  ನೈಟ್-ಹುಡ್ ಬಿರುದು ದೊರೆತು, ಸರ್ ಎಂಬ ಪಟ್ಟ ಅವರ ಹೆಸರಿನೊಂದಿಗೆ ಸೇರಿಕೊಳ್ಳುತ್ತದೆ. ಅಲ್ಲಿಂದ ಮುಂದೆ ಸಿಂಧ್ ಪ್ರಾಂತ್ಯಕ್ಕೆ  ಹೋಗಿ  ಅಲ್ಲಿನ ನಗರ ಮತ್ತು ಹಳ್ಳಿಗಳಿಗೆ ನದಿ ನೀರಿನ ಹಂಚಿಕೆಯ ಯೋಜನಾ ವರದಿಯನ್ನು ಸಿದ್ಧ ಪಡಿಸಲು ಅಂದಿನ ಬ್ರಿಟೀಷ್ ಸರ್ಕಾರ ಸೂಚಿಸುತ್ತದೆ.  ಸರ್ಕಾರದ ಆದೇಶದ ಮೇಲೆ ಶ್ರದ್ಧೆಯಿಂದ ಸುದೀರ್ಘವಾದ  ಅಧ್ಯಯನ ಮಾಡಿ ತಮ್ಮಅಪ್ರತಿಮ ಗಣಿತದ ಪಾಂಡಿತ್ಯದಿಂದಾಗಿ ಸುಮಾರು 20-30 ವರ್ಷಗಳ ಎಲ್ಲಾ ಅಂಕಿ-ಅಂಶಗಳನ್ನು ಕಲೆ ಹಾಕಿ ಆಳವಾದ ಅಧ್ಯಯನ ನಡೆಸಿ  ಅತ್ಯಂತ ದೂರದೃಷ್ಟಿಯಿಂದ ವರದಿಯನ್ನು ತಯಾರಿಸಿ ಕೊಟ್ಟಿದ್ದಲ್ಲದೇ ಅದನ್ನು ಜಾರಿಗೂ ತರುತ್ತಾರೆ. ಸ್ವಾತ್ರಂತ್ಯ್ರ ಪೂರ್ವದಲ್ಲಿ ಮಾಡಿದ ಆ ವರದಿಯ ಆಧಾರದಲ್ಲೇ ಇಂದಿಗೂ ಭಾರತ ಮತ್ತು ಪಾಕಿಸ್ತಾನಗಳ ನಡುವಿರುವ ನದಿ ನೀರಿನ ಹಂಚಿಕೆ ನಡೆಯುತ್ತಿದೆ ಎನ್ನುವುದು ಗಮನಾರ್ಹವಾಗಿದೆ.

bnr1ನದಿ ನೀರಿನ ಹಂಚಿಕೆಯನ್ನು ಯಶಸ್ವಿಯಾಗಿ ಪೂರೈಸಿದ ನಂತರ  ನರಸಿಂಗರಾಯರು  ಮತ್ತೆ ಕಲ್ಕತ್ತಾಗೆ ಹಿಂದಿರುಗಿ ಅಲ್ಲಿನ ಸುಪ್ರೀ೦ ಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ಅಧಿಕಾರವನ್ನು ವಹಿಸಿಕೊಂಡು 1944ರಲ್ಲಿ  ನಿವೃತ್ತಿ ಹೊಂದುತ್ತಾರೆ.  ಆನಂತರ ಕೆಲ ಕಾಲ ಜಮ್ಮು ಮತ್ತು ಕಾಶ್ಮೀರದ ಪ್ರಧಾನ ಮಂತ್ರಿಯಾಗಿಯೂ  ಆಯ್ಕೆಯಾಗಿದ್ದಲ್ಲದೇ, 1946ರಲ್ಲಿ, ಬ್ರಿಟಿಷ್ ಸರಕಾರ ಭಾರತಕ್ಕೆ ಅಧಿಕಾರವನ್ನು ಹಸ್ತಾಂತರಿಸುವುದು ಬಹುತೇಕವಾಗಿ ಖಚಿತಗೊಂಡ ನಂತರ  ನರಸಿಂಗರಾಯರನ್ನು ಭಾರತದ ಸಂವಿಧಾನ ಸಮಿತಿಯ ಸಲಹೆಗಾರರನ್ನಾಗಿ ನೇಮಿಸಲಾಗುತ್ತದೆ. ತಮ್ಮ ಈ ಸೇವಾವಧಿಯಲ್ಲಿ ಸುಮಾರು ಮೂರು ದಶಕಗಳ ಕಾಲ ನ್ಯಾಯಾಂಗದಲ್ಲಿ ಕೆಲಸ ಮಾಡಿದ  ಅನುಭವಗಳನ್ನು ಧಾರೆ ಎರೆದು  ಅತ್ಯಂತ ಸರಳ ಮತ್ತು ಸುಂದರ ಅಷ್ಟೇ ಕಠಿಣವಾದ ಸಂವಿಧಾನದ ಕರಡು ಸಿದ್ಧಪಡಿಸುತ್ತಾರೆ. ಆ ಕರಡುವಿನಲ್ಲಿ ಒಟ್ಟು 243 ವಿಧಿಗಳೂ 13 ಅನುಚ್ಛೇದಗಳು ಇರುತ್ತವೆ

const15 ಆಗಸ್ಟ್ 1947 ರಂದು ಭಾರತದ ಸ್ವಾತಂತ್ರ್ಯದ ನಂತರ, ನೆಹರು ಅವರ ನೇತೃತ್ವದ  ಕಾಂಗ್ರೆಸ್ ಸರ್ಕಾರದಲ್ಲಿ  ರಾಷ್ಟ್ರದ ಮೊದಲ ಕಾನೂನು ಸಚಿವರಾಗಿ ಡಾ. ಬಿ. ಆರ್. ಅಂಬೇಡ್ಕರ್ ಅವರು ನಿಯುಕ್ತರಾಗುತ್ತಾರಲ್ಲದೇ, ದೇಶದ ಕಾನೂನು ಸಚಿವರಾಗಿದ್ದ ಕಾರಣ, ಆಗಸ್ಟ್ 29 ರಂದು, ಅವರು ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿಯೂ  ನೇಮಕವಾಗುತ್ತಾರೆ.  ಅವರ ನೇತೃತ್ವದಲ್ಲಿ ಭಾರತದ ಹೊಸ ಸಂವಿಧಾನವನ್ನು ರಚಿಸುವ ಅಥಿಕಾರವನ್ನು ಲೋಕಸಭೆಯಲ್ಲಿ ಪಡೆದುಕೊಂಡ ನಂತರ ಆ ಸಮಿತಿಗೆ ಒಟ್ಟು  6 ಸದಸ್ಯರನ್ನು ನೇಮಕ ಮಾಡಲಾಗುತ್ತದೆ ಕೆ.ಎಂ.ಮುಂಶಿ, ಮುಹಮ್ಮದ್ ಸಾದುಲಾ, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಗೋಪಾಲ ಸ್ವಾಮಿ ಅಯ್ಯಂಗಾರ್, ಅನಾರೋಗ್ಯದ ಕಾರಣ ರಾಜೀನಾಮೆ ನೀಡಿದ ಬಿ.ಎಲ್. ಮಿಟ್ಟರ್ ಬದಲಿಗೆ ಎನ್. ಮಾಧವ ರಾವ್ ಮತ್ತು  ಡಿ.ಪಿ. ಖೇತಾನ್ ಅವರು 1948 ನಿಧನರಾದ ಕಾರನ ನೆಹರು ಅವರ ಬಲಗೈ ಭಂಟ ಟಿ.ಟಿ.ಕೃಷ್ಣಮಾಚಾರಿ ನೇಮಕಗೊಳ್ಳುತ್ತಾರೆ.

ambedkarಡಾ. ಬಿ. ಆರ್. ಅಂಬೇಡ್ಕರ್ ಅವರು  ಅಧ್ಯಕ್ಷರಾಗಿದ್ದ ಸಂವಿಧಾನಾದ ಈ ಕರಡು ಸಮಿತಿ ಅದಾಗಲೇ ನರಸಿಂಗ ರಾಯರು ಸಿದ್ಧ ಪಡಿಸಿದ್ದ ಸಂವಿಧಾನದ ಕರಡನ್ನೇ  ತಿದ್ದುವ, ಪರಿಷ್ಕರಿಸುವ ಮತ್ತು ಹೊಸ ಪರಿಚ್ಛೇದಗಳನ್ನು ಸೇರಿಸುವ  ಕೆಲಸವನ್ನು ಕೈಗೆತ್ತಿ ಕೊಳ್ಳುತ್ತದೆ. ರಾಯರು ಬರೆದ ಮೂಲ ಸಂವಿಧಾನಕ್ಕೆ ನಂತರ ಹಲವು ವಿಧಿಗಳನ್ನು ಸೇರಿಸಿ ಕೆಲವನ್ನು ಪರಿಷ್ಕಾರ ಮಾಡಿ ಮೊದಲ ಕರಡು ಪ್ರತಿಯನ್ನು ಸಂಸತ್ತಿಗೆ ಸಲ್ಲಿಸಿದಾಗ ಅದರಲ್ಲಿ 315 ವಿಧಿಗಳೂ 8 ಅನುಚ್ಛೇದಗಳು ಇದ್ದವು. ಅಂತಿಮವಾಗಿ ಅದು ಸಂಸತ್ತಿನಲ್ಲಿ  ಒಪ್ಪಿಗೆ ಪಡೆಯುವ ಸಮಯದಲ್ಲಿ  ಮತ್ತಷ್ಟು ವಿಧಿಗಳು ಸೇರ್ಪಡೆಯಾಗಿ  395 ವಿಧಿಗಳುಳ್ಳ ಸಂವಿಧಾನವು  ಈ ದೇಶದಲ್ಲಿ ಜಾರಿಗೆ ಬರುತ್ತದೆ.

constitutionಅತ್ಯಂತ ಶ್ಲಾಘನೀಯವಾದ ಅಂಶವೆಂದರೆ ಇಷ್ಟು ದೊಡ್ಡ ಜವಾಬ್ಧಾರಿಯುತ ಕರ್ತವ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ್ದ  ರಾಯರು ಒಂದೇ ಒಂದು ರುಪಾಯಿ ವೇತನ ಅಥವಾ ಸಂಭಾವನೆಯನ್ನೂ  ಪಡೆಯದೇ ಸಂಪೂಣವಾಗಿ ಉಚಿತವಾಗಿ ಮಾಡಿದ್ದರು ಎನ್ನುವುದೇ ಮಹತ್ವದ ಅಂಶವಾಗಿದೆ.  ಜಾತಿ ಆಧಾರದ ಮೇಲೆ ಜನರನ್ನು ಓಲೈಸಿಕೊಳ್ಳಲು ದಲಿತರ ನಾಯಕ ಅಂಬೇಡ್ಕರ್ ಅವರೇ  ಸಂವಿಧಾನವನ್ನು ಪೂರ್ತಿ ಬರೆದವರು ಎಂದು ಹಸೀ ಸುಳ್ಳನ್ನು ಹೇಳುತ್ತಲೇ ಈ ದೇಶದ ಜನರ ದಿಕ್ಕು ತಪ್ಪಿಸಲೆಂದೇ,  ಸಂವಿಧಾನ ಆಂಗೀಕೃತವಾದ ಸುವರ್ಣ ಮಹೋತ್ಸವದ ಸಂದರ್ಭದಲ್ಲೂ ಅದರ ಮೂಲ ಕರಡನ್ನು ತಯಾರಿಸಿಕೊಟ್ಟ ಮೇಧಾವಿ ಬೆನಗಲ್ ನರಸಿಂಗ ರಾಯರ ಹೆಸರನ್ನು ಉದ್ದೇಶಪೂರ್ವಕವಾಗಿ ನೆನಸಿಕೊಳ್ಳದೇ ಹೋದ ದುರಂತದ ಹೊಣೆಗಾರಿಕೆಯನ್ನು ದೇಶದ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಕೆಲವು ಗಂಜೀ ಗಿರಾಕಿಗಳೇ ಹೊರಬೇಕಾಗುತ್ತದೆ.

neharuಸಂವಿಧಾನದ ಕೆಲಸ ಮುಗಿಸಿದ ಕೂಡಲೇ, ನರಸಿಂಗ ರಾಯರನ್ನು ವಿಶ್ವಸಂಸ್ಥೆಗೆ ಭಾರತದ ಶಾಶ್ವತ ಪ್ರತಿನಿಧಿಯಾಗಿ ಆಯ್ಕೆಮಾಡಿ ವಿದೇಶಕ್ಕೆ ಕಳುಹಿಸಲಾಗುತ್ತದೆ. ಅದೇ ಸಮಯದಲ್ಲಿಯೇ ಬರ್ಮಾ ದೇಶವೂ  ತನ್ನ ಸಂವಿಧಾನದ ಕರಡನ್ನು ಸಿದ್ಧಪಡಿಸಿ ಕೊಡಲು ರಾಯರನ್ನು  ಕೇಳಿ ಕೊಂಡಾಗ ಸಂತೋಷವಾಗಿಯೇ ಆ ಕೆಲಸವನ್ನೂ ಪೂರೈಸಿಕೊಡುತ್ತಾರೆ ಹಂತ ಹಂತವಾಗಿ ವಿಶ್ವಸಂಸ್ಥೆಯಲ್ಲಿ ಒಂದೊಂದೇ ಹುದ್ದೆಗಳನ್ನು ಏರುತ್ತಾಹೋಗಿ 1950ರಲ್ಲಿ ಅದರ ಸೆಕ್ಯುರಿಟಿ ಕೌನ್ಸಿಲ್ಲಿನ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ. ಅದೇ ಸಮಯದಲ್ಲಿಯೇ ಭಾರತಕ್ಕೆ ವಿಶ್ವಸಂಸ್ಥೆಯ ಸೆಕ್ಯುರಿಟಿ ಕೌನ್ಸಿಲ್ಲಿನ ಸದಸ್ಯ ರಾಷ್ಟ್ರವಾಗುವ ಅವಕಾಶ ಒದಗಿ ಬಂದಿರುತ್ತದೆ. ದುರಾದೃಷ್ಟವಷಾತ್ ಅಂದಿನ ಪ್ರಧಾನಿ ನೆಹರು ವಿಶ್ವನಾಯಕನಾಗುವ ಹಪಾಹಪಿ ಮತ್ತು  ಅವರ ದೂರದೃಷ್ಟಿಯ ಕೊರತೆಯಿಂದಾಗಿ  ಕೈಗೆ ಬಂದು ಚಿನ್ನದಂಥಾ ಅವಕಾಶವನ್ನು ಹಾಳು ಮಾಡಿಕೊಂಡು ಚೀನಾ ದೇಶವನ್ನು ತಮ್ಮ ಸ್ಥಾನದಲ್ಲಿ ನೇಮಕ ಮಾಡಲು ಕೋರಿ ಕೊಳ್ಳುತ್ತಾರೆ. ಅಂದಿನಿಂದ 70 ವರ್ಷಗಳೇ ಕಳೆದರೂ ನಮಗೆ ವಿಶ್ವದ ಸೂಪರ್ ಪವರ್ ರಾಷ್ಟ್ರಗಳ ಪಟ್ಟಿಯಲ್ಲಿ ಗುರುತಿಸಿ ಕೊಳ್ಳಲು ಸಾಧ್ಯವಾಗಿಲ್ಲ. ಅಚ್ಚರಿಯ ಅಂಶವೆಂದರೆ ನೆಹರು ಅವರ ಕೃಪಾಕಟಾಕ್ಶದಿಂದಲೇ ಅವಕಾಶ ಪಡೆದ ಚೀನಾ ದೇಶವೇ ಇಂದು ಭಾರತಕ್ಕೆ ಅಡ್ಡಗಾಲಾಗಿದೆ.

bnr31952ರಲ್ಲಿ ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಆಗುವ ಅವಕಾಶವನ್ನು ಕೂದಲೆಳೆಯಲ್ಲಿ ತಪ್ಪಿಸಿಕೊಂಡ ನರಸಿಂಗರಾಯರು ಆನಂತರ ಹೇಗ್ ನ ಅಂತರ-ರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರಾದರೂ, 1953ರ ನವೆಂಬರ್ 30ರಂದು ಜ್ಯೂರಿಕ್ ನಲ್ಲಿ ತಮ್ಮ 66ನೆಯ ವಯಸ್ಸಿನಲ್ಲಿ ಅಂತರಾಷ್ಟ್ರಿಯ ಮಟ್ಟದಲ್ಲಿ ಭಾರತದ ಧೃವ ನಕ್ಷತ್ರವಾಗಿ ಮಿಂಚುತ್ತಿದ್ದ ನರಸಿಂಗ ರಾಯರು ವಿಧಿವಶರಾಗುತ್ತಾರೆ.

ಬೆನಗಲ್ ನರಸಿಂಗ ರಾವ್ ರಂತೆಯೇ  ಅವರ ಸಹೋದರರೂ ಅತಿರಥ ಮಹಾರಥಿಗಳೇ ಆಗಿರುತ್ತಾರೆ. ಅವರ ಹಿರಿಯ ಸಹೋದರರಾಗಿದ್ದ ಶ್ರೀ ಬಿ. ರಾಮರಾವ್ ಅವರು ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿದ್ದರೆ, ಎರಡನೆಯ ಸಹೋದರ ಶ್ರೀ ಬಿ. ಶಿವರಾವ್ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧರಾಗಿದ್ದ ಕಾರ್ಮಿಕ ಹೋರಾಟಗಾರರಾಗಿದ್ದಲ್ಲದೇ ಕೆಲ ಕಾಲ ಅವರು ಸಾಂಸದರಾಗಿಯೂ ತಮ್ಮ ರಾಜಕೀಯ ಜೀವನದ ಉತ್ತುಂಗದಲ್ಲಿದ್ದಾಗಲೇ ನಿವೃತ್ತಿ ಘೋಷಿಸಿ ಬದುಕಿನ ಕೊನೆಯ ಕೆಲವು ವರ್ಷಗಳನ್ನು ಸಂಶೋಧನೆಗೆ ಮೀಸಲಿಟ್ಟ ಅಪರೂಪದ ರಾಜಕಾರಣಿ ಎನಿಸಿಕೊಳ್ಳುತ್ತಾರೆ.

ಕರ್ನಾಟಕದ ಕಾರ್ಕಳದ ಬೆನಗಲ್ಲಿನಂತಹ  ಒಂದು ಪುಟ್ಟ ಊರಿನಲ್ಲಿ ಹುಟ್ಟಿ ಬೆಳೆದು ತಮ್ಮ ಬುದ್ದಿ ಸಾಮರ್ಥ್ಯದಿಂದ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರಾಗಿ ವಿಶ್ವಸಂಸ್ಥೆಯಲ್ಲಿ ಹಲವು ಪ್ರತಿಷ್ಠಿತ ಹುದ್ದೆಗಳನ್ನು ಅಲಂಕರಿಸಿದ, ಭಾರತ ಮತ್ತು ಬರ್ಮಾ ದೇಶಕ್ಕೆ ಸಂವಿಧಾನವನ್ನು ರಚಿಸಿಕೊಟ್ಟೂ  ಇಂದಿಗೂ ಯಾವುದೇ ಪ್ರಶಸ್ತಿ ಪುರಸ್ಕಾರಗಳು ಇರಲಿ  ಇಂತಹ ಪ್ರಾಥಃಸ್ಮರಣೀಯರ  ಹೆಸರನ್ನೂ ಸಹಾ ನೆನಪಿಸಿಕೊಳ್ಳದೇ ಇರುವಂತಹ ದುಸ್ಥಿತಿ ಬಂದಿರುವುದು ನಿಜಕ್ಕೂ ಶೋಚನೀಯವೇ ಸರಿ. ತಮ್ಮ ಬದುಕಿನಾದ್ಯಂತ ಎಲೆಮರೆಕಾಯಿಯಾಗಿಯೇ ಉಳಿದು ಹೋದ  ಕರ್ನಾಟಕದ ಈ ಧೀಮಂತ ವ್ಯಕ್ತಿಯ ಪರಿಚಯ ನಮ್ಮ ಮುಂದಿನ್ಗ ಪೀಳಿಗೆಗೂ  ಪರಿಚಯಿಸುವ ಗುರುತರವಾದ ಜವಾಬ್ಧಾರಿ ಕನ್ನಡಿಗರಾದ ನಮ್ಮ ನಿಮ್ಮೆಲ್ಲರ ಮೇಲೆಯೇ ಇದೆ  ಅಲ್ವೇ?

ಏನಂತೀರೀ?

ನಿಮ್ಮವನೇ ಉಮಾಸುತ

One thought on “ಸರ್ ಬೆನಗಲ್ ನರಸಿಂಗರಾವ್

  1. ಶ್ರೀ ಬೆನಗಲ್‌ ರವರ ಹೆಸರನ್ನ Dr. B R AMBEDKAR ಸಂಸತ್‌ ಸಭೆಯಲ್ಲಿ ಸಂವಿದಾನ ಕರಡು ಸಲ್ಲಿಕೆ ಬಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ಅವರ ಕೊಡುಗೆಯನ್ನ ಹೊಗಳಿದ್ದಾರೆ. August 15 ಕ್ಕೆ Rajyasabha/lokhasabha tv ನಲ್ಲಿ ಬಿತ್ತರಿಸಲಾಗಿತ್ತು. Parliament library ನಲ್ಲಿ ಅಂಬೇಡ್‌ಕರ್‌ ಬಾಷಣದ ಪ್ರತಿ ಸಿಗಬಹುದು.

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s