ಸುಹಾಸ್ ಯತಿರಾಜ್

su1ಅ ಪುಟ್ಟ ಮಗುವಿಗೆ ಹುಟ್ಟುತ್ತಲೇ ಕಾಲಿನ ತೊಂದರೆಯಿಂದಾಗಿ ಆತ ಸರಿಯಾಗಿ ನಡೆಯಲಾರ ಎಂಬುದು ಗೊತ್ತಾಗುತ್ತಿದ್ದಂತೆಯೇ  ಆತನಿಗೆ ಭವಿಷ್ಯವೇ ಇಲ್ಲಾ ಎಂದು ಯೋಚಿಸುವವರೇ ಹೆಚ್ಚಾಗಿರುವಾಗ,  ಅದೇ ಮಗು ತನ್ನ ಅಂಗವೈಕುಲ್ಯತೆಯನ್ನು ಮೆಟ್ಟಿ ನಿಂತು ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿ  ಅತ್ಯುತ್ತಮವಾಗಿ ಓದಿ ಇಂಜೀನಿಯರ್ ಆಗಿದ್ದಲ್ಲದೇ ತನ್ನ ಸಾಮರ್ಧ್ಯದಿಂದ  ಐ.ಎ.ಎಸ್ ಮುಗಿಸಿ ಉತ್ತರಪ್ರದೇಶದಲ್ಲಿ ದಕ್ಷ ಜಿಲ್ಲಾಧಿಕಾರಿಯಾಗಿ  ಅನೇಕ ಪ್ರಶಸ್ತಿಗಳಿಸಿರುವುದಲ್ಲದೇ   ಇತ್ತೀಚಿನ ಅವರ ಚೊಚ್ಚಲ ಟೋಕಿಯೋ ಪ್ಯಾರಾ ಓಲಂಪಿಕ್ಸ್  ಗೇಮ್ಸ್‌ನಲ್ಲಿ ಬೆಳ್ಳಿಪದಕವನ್ನು ಗೆಲ್ಲುವ ಮೂಲಕ ಭಾರತದ ಕೀರ್ತಿಪತಾಕೆಯನ್ನು  ಹಾರಿಸಿರುವ ನಮ್ಮೆಲ್ಲರ ಹೆಮ್ಮೆಯ ಕನ್ನಡಿಗ ಲಾಳಿನಕೆರೆ ಯತಿರಾಜ್ ಸುಹಾಸ್ ಅವರ ಯಶೋಗಾಥೆಯನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ

ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಲಾಳನಕೆರೆ ಗ್ರಾಮದ ಮೂಲದವರಾದ  ಸರ್ಕಾರೀ ಅಧಿಕಾರಿಗಳಾಗಿದ್ದ ಶ್ರೀ ಯತಿರಾಜ್ ಮತ್ತು  ಜಯಶ್ರಿ  ದಂಪತಿಗಳಿಗೆ ಜುಲೈ 2, 1983ರಲ್ಲಿ  ಸುಹಾಸ್ ಜನಿಸುತ್ತಾರೆ.  ದುರಾದೃಷ್ಟವಷಾತ್  ಹುಟ್ಟಿನಿಂದಲೇ ಕಾಲಿನ ಸಮಸ್ಯೆಯನ್ನು ಹೊಂದಿದ್ದ ಸುಹಾಸ್  ಅವರನ್ನು  ಅವರ ತಂದೆ ತಾಯಿಯರು ಬಹಳ ಜತನದಿಂದ ನೋಡಿಕೊಳ್ಳುತ್ತಾರೆ. ಸರ್ಕಾರೀ ಕೆಲಸವಾಗಿದ್ದ ಕಾರಣ  ಊರಿಂದ ಊರಿಗೆ  ವರ್ಗವಾಗಿ ಸುಹಾಸ್ ತಮ್ಮ ಬಾಲ್ಯವನ್ನೆಲ್ಲಾ ಮಂಡ್ಯ, ಶಿವಮೊಗ್ಗ ಇತ್ಯಾದಿ ಕಡೆಗಳಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಪಡೆದು,  ಓದಿನಲ್ಲಿ ಸದಾಕಾಲವೂ ಚುರುಕಾಗಿದ್ದ ಸುಹಾಸ್ ತಮ್ಮ ಪಿಯುಸಿ ಮುಗಿಸಿದ ನಂತರ  ಸುರತ್ಕಲ್ಲಿನ ಪ್ರತಿಷ್ಠಿತ ಪ್ರಾದೇಶಿಕ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಇಂಜಿನಿಯರಿಂಗ್ ಪದವಿಯನ್ನು 2004ರಲ್ಲಿ ಪಡೆಯುತ್ತಾರೆ.

su3ಕಂಪ್ಯೂಟರ್ ಪದವಿ ಮುಗಿಸಿದ ನಂತರ ಕೆಲವು ವರ್ಷಗಳ ಕಾಲ ಬೆಂಗಳೂರಿನ ಸ್ಯಾಪ್‌ಲ್ಯಾಬ್ಸ್‌ ಕಂಪೆನಿಯಲ್ಲಿ ಕೆಲಸ ಮಾಡಿದ  ನಂತರ 2007ರಲ್ಲಿ  ಯುಪಿಎಸ್​​ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ಮುಗಿಸಿದ ನಂತರ ಉತ್ತರ ಪ್ರದೇಶ ಕೇಡರ್​ನ ಐಎಎಸ್ ಆಫೀಸರ್ ಆಗುತ್ತಾರೆ.  ಆಗ್ರಾ, ಆಝಮ್ ಗಢ , ಮಥುರಾ, ಮಹಾರಾಜ್ ಗಂಜ್, ಹತ್ರಾಸ್, ಸೋನಾಭದ್ರ , ಜಾವುನಪುರ, ಅಲಹಾಬಾದ್ ( ಪ್ರಯಾಗ್ ರಾಜ್ ) ಗಳಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿರುವ ಸುಹಾಸ್ ದಕ್ಷ, ಜನಪರ ಅಧಿಕಾರಿ ಎಂದು ಹೆಸರನ್ನು ಗಳಿಸುತ್ತಾರೆ.  ಕೋರೋನ ನಿಯಂತ್ರಣದಲ್ಲಿ ವಿಫಲರಾದ ಕಾರಣ ಗೌತಮ ಬುದ್ಧ ಜಿಲ್ಲೆಯ ಜಿಲ್ಲಾಧಿಕಾರಿ ಬಿ ಎನ್ ಸಿಂಗ್ ಅವರನ್ನು  ಉತ್ತರಪ್ರದೇಶದ ಮುಖ್ಯಮಂತ್ರಿಗಳಾದ ಆದಿತ್ಯನಾಥ್ ತೀವ್ರ ತರಾಟೆಗೆ ತೆಗೆದುಕೊಂಡದ್ದನ್ನು ಸಹಿಸಲಾರದ ಬಿ ಎನ್ ಸಿಂಗ್ ಮೂರು ತಿಂಗಳ ರಜೆ ಹಾಕಿ ತೆರಳಿದ ಕೂಡಲೇ, ಅವರ ಜಾಗಕ್ಕೆ ಸಾಂಕ್ರಾಮಿಕ ರೋಗದ ನಡುವೆಯೂ ಪ್ರಯಾಗದ  ಕುಂಭಮೇಳವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ್ದ ಯೋಗಿ ಆದಿತ್ಯನಾಥ್ ರ ನೀಲಿಗಣ್ಣಿನ ಹುಡುಗನಾಗಿದ್ದ ಸುಹಾಸ್ ಅವರನ್ನು ನೇಮಿಸುತ್ತಾರೆ. ವಹಿಸಿದ ಜವಾಬ್ಧಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿ ಗೌತಮ ಬುದ್ಧ ಜಿಲ್ಲೆಯಲ್ಲಿ  ಮಿತಿಮೀರಿದ ಕೋವಿಡ್ ಅನ್ನು ನಿಯಂತ್ರಣಕ್ಕೆ ತಂದ ಕೀರ್ತಿಗೆ ಸುಹಾಸ್ ಪಾತ್ರರಾಗುವುದಲ್ಲದೇ, ಇದಕ್ಕು ಮುನ್ನಾ  ಉತ್ತರಪ್ರದೇಶದ ಹತ್ತು ಹಲವು ಜನಪ್ರಿಯ ಕಾರ್ಯಕ್ರಮಗಳಲ್ಲಿ ತಮ್ಮ ಛಾಪನ್ನು ಮೂಡಿಸಿರುವ ಹೆಮ್ಮೆಯ ಗರಿಯೂ ಸುಹಾಸ್ ಮುಡಿಗೇರಿದೆ.

ಬಾಲ್ಯದಿಂದಲೇ ಓದಿನ ಜೊತೆಗೆ ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲೂ ಸಹ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಚಿಕ್ಕಂದಿನಲ್ಲೇ ಸುಹಾಸ್‌ಗೆ ತಮ್ಮ ತಂದೆಯವರ ಮೂಲಕ ಬ್ಯಾಡ್ಮಿಂಟನ್‌ ಆಟ ಪರಿಚಯವಾಗಿತ್ತು. ತಂದೆ ಯತಿರಾಜ್‌ ಆಡುವಾಗ ಸುಹಾಸ್‌ ಸ್ಕೋರಿಂಗ್ ಮಾಡುತ್ತಲೇ ತಂದೆ ಆಡುವುದನ್ನು ನೋಡುತ್ತಲೇ ಬ್ಯಾಡ್ಮಿಂಟನ್ ಆಟವನ್ನು ಆಡಲು  ಕಲಿತುಕೊಳ್ಳುತ್ತಾರೆ. ಆರಂಭದಲ್ಲಿ ತಮ್ಮ ಸಹವರ್ತಿಗಳೊಂದಿಗೆ ಬಾಲ್‌ ಬ್ಯಾಡ್ಮಿಂಟನ್‌ ಆಡುತ್ತಿದ್ದ ಸುಹಾಸ್ ನಂತರದ ದಿನಗಳಲ್ಲಿ ಶಟ್ಲ್‌ ಬ್ಯಾಡ್ಮಿಂಟನ್‌ನಲ್ಲಿ ಪರಿಣಿತಿ ಪಡೆಯುತ್ತಾರೆ.

ಹೀಗೆ ಬಾಲ್ಯದಲ್ಲಿ ಕಲಿತ ಆಟವನ್ನು ತಮ್ಮ ಬಿಡುವಿಲ್ಲದ ಕೆಲಸದ ಒತ್ತಡವನ್ನು ತೊಡೆದು ಹಾಕುವ ಸಲುವಾಗಿ ಮತ್ತೆ ಬ್ಯಾಡ್ಮಿಂಟನ್ ರ್ಯಾಕೆಟ್ ಹಿಡಿದ ಸುಹಾಸ್ ಅಲ್ಲಿಂದ ಹಿಂದುರಿಗೆ ನೋಡುವ ಪ್ರಮೇಯವೇ ಬರಲಿಲ್ಲ. ನೋಡ ನೋಡುತ್ತಿದ್ದಂತೆಯೇ ರಾಷ್ಟ್ರೀಯ ಮಟ್ಟದ ಚಾಂಪಿಯನ್‌ಷಿಪ್‌ಗಳಲ್ಲಿ ಯಶಸ್ಸು ಕಂಡ ನಂತರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಜ್ಜೆ ಹಾಕಿ ಯಶಸ್ಸು ಕಾಣುತ್ತಾರೆ. ಏಶಿಯನ್ ಕ್ರೀಡಾಕೂಟದಲ್ಲೂ ಪದಕಗಳನ್ನು  ಗಳಿಸಿ ದೇಶಕ್ಕೆ ಹೆಮ್ಮೆ ತಂದಿದ್ದಲ್ಲದೇ ಪ್ರಸ್ತುತ ವರ್ಲ್ಡ್ ನಂಬರ್ 2 ಸ್ಥಾನದಲ್ಲಿರುವ ಕಾರಣ ಸಹಜವಾಗಿಯೇ  ಪ್ಯಾರಾಲಂಪಿಕ್ಸ್ ನಮ್ಮ ದೇಶವನ್ನು ಪ್ರತಿನಿಧಿಸುವ ಅರ್ಹತೆಯನ್ನು ಪಡೆಯುತ್ತಾರೆ.

su5ಈ ಬಾರಿಯ  ವಿಶ್ವ ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ ಟೂರ್ನಿಯಲ್ಲಿ ಮೊದಲಬಾರಿಗೆ ಆಡುತ್ತಿದ್ದ ಕಾರಣ ಅವರಿಗೆ ಯಾವುದೇ ರ್ಯಾಂಕ್ ಇಲ್ಲದಿದ್ದರಿಂದ ಅರ್ಹತಾ ಸುತ್ತು, ಪ್ರಧಾನ ಸುತ್ತು, ಕ್ವಾರ್ಟರ್‌ ಫೈನಲ್‌, ಸೆಮಿಫೈನಲ್‌ ಹಾಗೂ ಫೈನಲ್‌ ಪಂದ್ಯಗಳನ್ನು  ಒಂದೊಂದಾಗಿ ಗೆಲ್ಲುತ್ತಲೇ ಬಂದು ಕಡೆಗೆ ಫೈನಲ್ಲಿನಲ್ಲಿ  ಚಳಿಯಿಂದ ಕೂಡಿದ ಚೀನಾದಲ್ಲಿ ಕಠಿಣವಾದ ಪರಿಶ್ರಮದ ಹೊರತಾಗಿಯೂ ಸೋಲನ್ನು ಅನುಭವಿಸಿ ರಜತಪದಕವನ್ನು ಪಡೆಯುವ ಮೂಲಕ ದೇಶದ ಹೆಮ್ಮೆಯನ್ನು ವಿಶ್ವದಲ್ಲಿ ಹಾರಿಸುವುದರಲ್ಲಿ ಸುಹಾಸ್ ಸಫಲರಾಗುತ್ತಾರೆ. ಈ  ಮೂಲಕ ಇಂತಹ ಚಾಂಪಿಯನ್ ಶಿಪ್ ಗೆದ್ದ ದೇಶದ ಪ್ರಪ್ರಥಮ ಅಧಿಕಾರಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ಪದಕ ಗೆದ್ದ ನಂತರದ ಸಂದರ್ಶನದಲ್ಲಿ ಮಾತನಾಡುತ್ತಾ, ಬ್ಯಾಡ್ಮಿಂಟನ್‌ ನನ್ನ ಎರಡನೇ ಬದುಕಾಗಿದ್ದು ನಿತ್ಯವೂ ಕಠಿಣ ಶ್ರಮದಿಂದ ಅಭ್ಯಾಸದಲ್ಲಿ ತೊಡಗಿಸಿಕೊಂಡ ಕಾರಣ  ಯಶಸ್ಸನ್ನು ತಂದು ಕೊಟ್ಟಿದೆ. ತಂದೆ ಯತಿರಾಜ್‌ ತೀರಿಕೊಂಡ ನಂತರ ತಾಯಿ ಜಯಶ್ರೀ ಆವರು ನನ್ನಲ್ಲಿ ಆತ್ಮವಿಶ್ವಾಸ ತುಂಬಿದರು. ವಿಶೇಷ ಚೇತನರು ತಮ್ಮಿಂದ ಏನೂ ಸಾಧ್ಯವಿಲ್ಲ ಎಂದು ಹಿಂಜರಿಯಬಾರದು. ಬದುಕಿನಲ್ಲಿ ಎಲ್ಲವನ್ನೂ ಸಾಧಿಸುವ ಛಲ ಇರಬೇಕು. ಹಾಗಿದ್ದಲ್ಲಿ ಮಾತ್ರ ಇಂತಹ ಹತ್ತು ಹಲವು ಸಾಧನೆಗಳು ಸಾಧ್ಯ  ಎಂದು ಹೇಳುವ ಮೂಲಕ  ವಿಶೇಷ ಚೇತನರಷ್ಟೇ ಅಲ್ಲದೇ ಉಳಿದ ಎಲ್ಲಾ ಕ್ರೀಡಾ ಪಟುಗಳಿಗೂ ಪ್ರೇರಣೆಯನ್ನು ತುಂಬಿದೆ ಎಂದರು ತಪ್ಪಾಗದು.

ಅದೇ ರೀತಿ ಮತ್ತೊಂದು ಸಂದರ್ಶನದಲ್ಲಿ ಫೈನಲ್ ಪಂದ್ಯದಲ್ಲಿ ಸೋಲುಂಡು ಬೆಳ್ಳಿ ಪದಕಗಳಿಸಿದ್ದಕ್ಕೆ ಹೇಗೆ ಅನ್ನಿಸುತ್ತದೆ ಎಂದು ಕೇಳಿದಾಗ, ತಕ್ಷಣವೇ ಪಂದ್ಯ ಸೋತ ಕೂಡಲೇ, ನನ್ನಲ್ಲಿ  ಮತ್ತಷ್ಟು ಛಲವನ್ನು ಮೂಡಿಸಿದ್ದಲ್ಲದೇ, ಇಂದಿನಿಂದಲೇ  ಮುಂದಿನ ಬಾರಿ ಚಿನ್ನವನ್ನು ಗೆಲ್ಲಲು ಪ್ರೇರಣೆ ನೀಡಿದೆ. ಚೊಚ್ಚಲು ಟೂರ್ನಿಯಲ್ಲಿಯೇ ಚಿನ್ನವನ್ನು ಗೆದ್ದಿದ್ದರೆ ಬಹುಶಃ ನನಗೆ ಸಂತೃಪ್ತತೆಯಿಂದಾಗಿ ಆಟವನ್ನು ಮುಂದುವರೆಸಲು ಇಚ್ಚಿಸುತ್ತಿರಲಿಲ್ಲ.  ಆದರೆ ಪಂದ್ಯವನ್ನು ಸೋಲುವ ಮುಖಾಂತರ ಭಗವಂತ ನನಗೆ ಮತ್ತೊಂದು ಅವಕಾಶವನ್ನು ನೀಡಿದ್ದಾನೆ ಎಂಬ ಭರವಸೆಯ ಧನಾತ್ಮಕ ಚಿಂತನೆಯಿಂದ ಮಾತನಾಡಿದ್ದು ನಿಜಕ್ಕೂ ಶ್ಲಾಘನೀಯವಾಗಿತ್ತು.

su2ಈಗಾಗಲೇ ತಮ್ಮ ಚುನಾವಣಾ ನಿರ್ವಹಣೆ, ಕಂದಾಯ ಆಡಳಿತ ಇತ್ಯಾದಿಗಳಲ್ಲಿ ದಕ್ಷ ಸೇವೆಗಾಗಿ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಸುಹಾಸ್ ಗಳಿಸಿದ್ದಾರೆ.

  • 2016 ರಲ್ಲಿ ಉತ್ತರ ಪ್ರದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಯಶ್ ಭಾರತಿ ಪ್ರಶಸ್ತಿಗೆ ಪಾತ್ರರಾದವರು.
  • ಡಿಸೆಂಬರ್  3 2016 ರಂದು ವಿಶ್ವ ವಿಕಲಚೇತನರ ದಿನದಂದು, ಅವರು ಪ್ಯಾರಾ ಕ್ರೀಡೆಗಳಲ್ಲಿನ ಅವರ ಸಾಧನೆಗಾಗಿ ರಾಜ್ಯ ಸರ್ಕಾರದಿಂದ ಪ್ರಶಸ್ತಿಯನ್ನು ಪಡೆದಿದ್ದಾರೆ.
  • ಪ್ಯಾರಾ ಓಲಂಪಿಕ್ಸಿನಲ್ಲಿ ಅವರ ಸಾಥನೆಯನ್ನು ಗುರುತಿಸಿ ಭಾರತ ಸರ್ಕಾರ 2021ರ ಸಾಲಿನ ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

su4ಅಲಹಾಬಾದ್ ನಲ್ಲಿ ಅಪರ ಮುನಿಸಿಪಲ್ ಕಮಿಷನರ್ ಅಗಿರುವ  ರಿತು ಸುಹಾಸ್ ಅವರನ್ನು ವಿವಾಹವಾಗಿ 5 ವರ್ಷದ ಸಾನ್ವಿ  ಮತ್ತು  2 ವರ್ಷದ  ವಿವಾನ್ ಎಂಬ ಮಗನಿದ್ದಾರೆ. ಯಜಮಾನರಂತೆಯೇ ರಿತು ಆವರೂ ಸಹಾ  ಮಿಸೆಸ್ ಇಂಡಿಯಾ 2019 ಸ್ಪರ್ಧೆಯಲ್ಲಿ ಭಾಗವಹಿಸಿ ಶ್ರೀಮತಿ U.P ಆಗಿ ಆಯ್ಕೆಯಾಗಿರುವುದಲ್ಲದೇ,  ಸಾರ್ವತ್ರಿಕ ಚುನಾವಣೆಗಳಲ್ಲಿ ಮತದಾರರ ಜಾಗೃತಿಯ ಕುರಿತಾದ ಅತ್ಯುತ್ತಮ ಕೆಲಸಕ್ಕಾಗಿ ಪ್ರಶಸ್ತಿಯನ್ನು ಪಡೆಯುವ ಮೂಲಕ ಪತಿಗೆ ತಕ್ಕ ಸತಿಯಾಗಿದ್ದಾರೆ.

ತಮ್ಮೆಲ್ಲಾ ದೌರ್ಬಲ್ಯಗಳ ಹೊರತಾಗಿಯೂ  ಪಠ್ಯ, ಪಠ್ಯೇತರ ಮತ್ತು ಕ್ರೀಡೆಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿರುವುದಲ್ಲದೇ, ತಮಗೆ ವಹಿಸಿದ ಎಲ್ಲಾ ಹುದ್ದೆಗಳಲ್ಲಿಯೂ ವ್ಯಾಪಕ ಜನಮನ್ನಣೆ ಗಳಿಸಿರುವ ಸುಹಾಸ್ ಅವರು ದೂರದ ಉತ್ತರ ಪ್ರದೇಶದಲ್ಲಿ ಇದ್ದರೂ  ತಮ್ಮ ಮಡದಿ ಮತ್ತು ಮಕ್ಕಳಿಗೆ ಕನ್ನಡವನ್ನು ಕಲಿಸಿಕೊಟ್ಟು ಮನ ಮತ್ತು ಮನೆಯಲ್ಲಿ  ಅಪ್ಪಟ ಕನ್ನಡತನವನ್ನು ಮೆರೆಸುತ್ತಾ ತಮ್ಮ ಸಾಧನೆಗಳಿಂದ ಕನ್ನಡಿಗರಿಗೆ ಹೆಮ್ಮೆಯನ್ನು ತರುತ್ತಿರುವ ಕಾರಣ, ನಿಸ್ಸಂದೇಹವಾಗಿಯೂ ಅವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತೀರೀ?

ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s