ಮಾಲತಿ ಹೊಳ್ಳ

mal1ಇಂದೆಲ್ಲಾ ಒಂದು ಸಣ್ಣ ಶಸ್ತ್ರಚಿಕಿತ್ಸೆ ಆದ್ರೇ ಅದಕ್ಕೆ ಬಾರೀ ತಲೆ ಕೆಡಿಸಿಕೊಂಡು ಹತ್ತಾರು ವೈದ್ಯರ ಬಳಿ ಸುತ್ತಾಡಿ  ಅಯ್ಯೋ  ಜೀವನವೇ ಹಾಳಾಗಿ ಹೋಯ್ತು ಎಂದು ಕೊರಗುವವರೇ ಹಚ್ಚಾಗಿರುವಾಗ, ಬಾಲ್ಯದಿಂದಲೇ ಪೋಲಿಯೋಗೆ ಒಳಗಾಗಿ, 32 ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದರೂ  ಅವೆಲ್ಲವನ್ನು ಮೆಟ್ಟಿ ವೀಲ್ ಛೇರಿನಲ್ಲೇ ಕುಳಿತುಕೊಂಡು ಹತ್ತು ಹಲವಾರು ಕ್ರೀಡೆಗಳಲ್ಲಿ ಭಾರತದ ತ್ರಿವರ್ಣಧ್ವಜವನ್ನು ಬಾನೆತ್ತರಕ್ಕೆ ಹಾರಿಸಿದ, ಚಲನಚಿತ್ರದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಲ್ಲದೇ, ಸಿಂಡಿಕೇಟ್ ಬ್ಯಾಂಕಿನಲ್ಲಿ ದಿಟ್ಟತನದ ಮ್ಯಾನೇಜರ್ ಆಗಿರುವ ಛಲಗಾರ್ತಿ ಮಾಲತಿ ಕೃಷ್ಣಮೂರ್ತಿ ಹೊಳ್ಳ  ಅವರ ಯಶೋಗಾಥೆ  ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.

ಉಡುಪಿ ಜಿಲ್ಲೆಯ ಕೋಟಾ ಗ್ರಾಮದ ಮೂಲದ ಬೆಂಗಳೂರಿನ ಉಡುಪಿ ಹೊಟೇಲ್ ಒಂದರಲ್ಲಿ ಅಡುಗೆ ಭಟ್ಟರಾಗಿ ಕೆಲಸ ಮಾಡುತ್ತಿದ್ದ ಕೃಷ್ಣಮೂರ್ತಿ ಹೊಳ್ಳ ಮತ್ತು ಪದ್ಮಾವತಿ ಹೊಳ್ಳ ದಂಪತಿಗಳಿಗೆ 6 ಜುಲೈ 1958ರಲ್ಲಿ ಕೋಟಾ ಗ್ರಾಮದಲ್ಲಿ ಮಾಲತಿ ಹೊಳ್ಕ ಅವರು ನಾಲ್ಕು ಮಕ್ಕಳ ಪೈಕಿ ಕಡೆಯವರಾಗಿ ಜನಿಸುತ್ತಾರೆ, ಆರಂಭದ ಕೆಲವು ತಿಂಗಳುಗಳ ಕಾಲ ಮಾಲತಿ ಹೊಳ್ಳ  ಅವರೂ ಸಹಾ ಇತರೇ ಮಕ್ಕಳಂತೆ ಸಹಜವಾಗಿಯೇ ಇದ್ದು ಬಹಳ ಚೂಟಿಯಾಗಿ ಮುದ್ದು ಮುದ್ದಾಗಿ ಇರುತ್ತಾರೆ. ಅವರಿಗೆ 14 ತಿಂಗಳ ವಯಸ್ಸಾಗಿದ್ದಾಗ ಇದ್ದಕ್ಕಿಂದ್ದಂತೆಯೇ  ವಾರಗಟ್ಟಲೇ ಜ್ವರಕ್ಕೆ ತುತ್ತಾಗಿ ಎಲ್ಲಾ ಔಷಧೋಪಚಾರಗಳು ಮುಗಿದಿ ಜ್ವರ ಬಿಡುವ ಹೊತ್ತಿಗೆ ಮಾಲತಿ ಹೊಳ್ಳ ಅವರಿಗೆ  ಪೋಲಿಯೋ ವಕ್ಕರಿಸಿಕೊಂಡು ಇಡೀ ದೇಹ  ಅವರ ನಿಯಂತ್ರಣಕ್ಕೆ ಬಾರದಂತೆ ಆಗಿಬಿಡುತ್ತದೆ.

ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿಯೂ ಕಡೆಯ ಮಕ್ಕಳಿಗೆ ಸ್ವಲ್ಪ ಹೆಚ್ಚಿನ ಪ್ರೀತಿಯನ್ನೇ ತೋರಿಸುವುದು ಸಹಜವಾಡಿಕೆ. ಅದೇ ರೀತಿಯಾಗಿ ಅವರ ಪೋಷಕರು ಮಾಲತಿಯವರಿಗೆ ಚಿಕಿತ್ಸೆ ಕೊಡಿಸಬೇಕು ಎಂದು  ಅಲೆಯದ ಆಸ್ಪತ್ರೆಗಳಲ್ಲಿಲ್ಲ. ಆ  ಕಡು ಬಡತನದ ನಡುವೆಯೂ ಛಲ ಮತ್ತು ಆಸೆಯನ್ನು ಬಿಡದೇ, ದೇವರ ಮೇಲೆ ಭಾರ ಹಾಕಿ ಮಾಲತಿಯವರಿಗೆ  ಹತ್ತಾರು ಕಡೆ ಚಿಕಿತ್ಸೆ ಕೊಡಿಸಿದರೂ ಫಲ ನೀಡದಿದ್ದಾಗ ಪ್ರತೀ ದಿನವೂ ಕಣ್ಣಿರಿನಲ್ಲಿಯೇ ಕೈ ತೊಳೆಯುತ್ತಿರುತ್ತಾರೆ. ಅದೊಮ್ಮೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪೋಲಿಯೋಗೆ ಚಿಕಿತ್ಸೆ ಕೊಡುತ್ತಾರೆ ಎಂಬ ವಿಷಯವನ್ನು ತಿಳಿದ ಅವರ ತಾಯಿ ತಮ್ಮ ಮನೆಯಿಂದ ಬಹಳ ದೂರವಿದ್ದ ಆಸ್ಪತ್ರೆಗೆ  ತಾವೇೆೆ ಎತ್ತಿಕೊಂಡು ಬಿಟಿಎಸ್ ಬಸ್ಸಿನಲ್ಲಿ ಪ್ರಯಾಣಿಸಿ ಆಸ್ಪತ್ರೆಗೆ ಕರೆತರುತ್ತಾರೆ  ಬರೋಬ್ಬರಿ 2 ವರ್ಷಗಳ ಕಾಲ ಎಲೆಕ್ಟ್ರಿಕ್ ಶಾಕ್ ಟ್ರೀಟ್ಮೆಂಟನ್ನು ಆ ಸಣ್ಣ ವಯಸ್ಸಿನ ಮಾಲತಿ ಅವರಿಗೆ ತಡೆದು ಕೊಳ್ಳಲು ಆಗದೇ ಬಹಳ ನೋವಿನಿಂದ ಅಳುತ್ತಿದ್ದರೆ, ತಾಯಿಯೂ ಸಹಾ  ಮಗಳ ಸಂಕಟವನ್ನು ತಡೆಯಲಾಗದೇ ಕಣ್ಣೀರು ಹಾಕುತ್ತಿದ್ದರಂತೆ. ಚಿಕಿತ್ಸೆ ಮುಂದುವರೆಸುತ್ತಿದ್ದಂತೆಯೇ ಅದೊಂದು ದಿನ ಮಾಲತಿಯವರ ದೇಹ ಸ್ಪಂದಿಸಿ, ಸೊಂಟದಿಂದ ಕೆಳಗಿನ ಶರೀರ ನಿಶ್ಚಲವಾಗೇ ಇತ್ತಾದರು ನಿಧಾನವಾಗಿ ಕೈಗಳನ್ನು ಆಡಿಸುವಷ್ಟು ಅತ್ತಿತ್ತ ತಿರುಗುವಂತಾದಾಗ ಅವರಿಗಾದ ಆನಂದ ಅಷ್ಟಿಷ್ಟಲ್ಲ. ದೇಹದಲ್ಲಿ ಕೊಂಚವೇ ಶಕ್ತಿ  ಇದ್ದರೂ ಮನಸ್ಸಿನಲ್ಲಿ ಅಗಾಧವಾದ ಛಲವಿದ್ದು ತನ್ನ ಬದುಕಿಗೆ ಸವಾಲಾಗಿರುವ ಪೊಲಿಯೋವನ್ನು ಮೆಟ್ಟಿ ನಿಲ್ಲುವ ಧೃಢ ಸಂಕಲ್ಪವನ್ನು ಮಾಡಿಕೊಂಡರು. ತಾನೊಬ್ಬ ವಿಕಲಾಂಗ ಹುಡುಗಿ ಎನ್ನುವುದನ್ನು ಮರೆಯಲು ಪ್ರಯತ್ನಿಸಿದ್ದಲ್ಲದೇ,  ಯಾರು ಏನೇ  ಹೇಳಿದರೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೇ ಒಂದು ದಿನ ಪ್ರಪಂಚವೇ ತನ್ನೆಡೆಗೆ ತಿರುಗಿ ನೋಡುವಂತಹ ಸಾಹಸ ಮಾಡುತ್ತೇನೆ ಎನ್ನುವ ಸಂಕಲ್ಪವನ್ನು ತೊಟ್ಟರು.

mal2ಸುಮಾರು 32 ಶಸ್ತ್ರ ಚಿಕಿತ್ಸೆಗಳಿಗೆ ಒಳಗಾಗಿದ್ದರು ಕೊಂಚವೂ ಜರ್ಜರಿತರಾಗದೇ,  ಸವಾಲಿಗೆ ಪ್ರತಿಸವಾಲನ್ನು ಒಡ್ಡುತ್ತಲೇ ಜೀವನವನ್ನು ಮುನ್ನಡೆಸುತ್ತಿದ್ದಾರೆ.  32 ಸರ್ಜರಿಗಳು ನನ್ನ ಪಾಲಿಗೆ ಹೊಸ ಸ್ಫೂರ್ತಿಯನ್ನು ನೀಡಿವೆ. ನಾನು ಎಂದಿಗೂ ಯಾವುದಕ್ಕೂ ಹೆದರಿಲ್ಲ. ಹಾಗಾಗಿ  ಶಸ್ತ್ರಚಿಕಿತ್ಸೆಗೇಕೆ ಭಯ ಪಡಬೇಕು? “ನನಗೆ ಪ್ರತೀ ದಿನವೂ ಸರ್ಜರಿ ಡೇ ಇದ್ದಂತೆ. ನಾನು ಗೆಲ್ಲಬೇಕು ಅಂತ ಮಾತ್ರ ಬಯಸುತ್ತೇನೆ. ಅದು ಹೇಗಾದ್ರು ಸರಿ.. ಏನೇ ಕಷ್ಟ ಇದ್ರೂ ಸರಿ. ಅದನ್ನು ಮೆಟ್ಟಿ ನಿಲ್ಲುವ ತಾಕತ್ತು ನನಗಿದೆ.” ಅಂತ ಆತ್ಮವಿಶ್ವಾಸದಿಂದ ನುಡಿಯುತ್ತಾರೆ.

ಮಾಲತಿಯವರ ಇಂತಹ ಕಷ್ಟದ ಕಾಲದಲ್ಲಿ ಅವರ ಇಡೀ ಕುಟುಂಬ ಅವರೊಂದಿಗೆ ನಿಂತಿದ್ದಲ್ಲದೇ ಎಷ್ಟೇ ಕಷ್ಟವಿದ್ದರೂ ಆಕೆಯ ನೋವನ್ನು ಮರೆಸಲು ಎಲ್ಲಾ ಸೌಕರ್ಯಗಳನ್ನು ಒದಗಿಸುವ ಭರವಸೆ ನೀಡಿದಾಗ, ತಾನು ಇಷ್ಟು ದಿನ ಅನುಭವಿಸಿದ ನೋವು ಸಾಕು. ಇನ್ನು  ಭವಿಷ್ಯದಲ್ಲಿ ರಾಣಿಯಂತೆ ಬದುಕುತ್ತೇನೆ ಎಂದು ಮಾಲತಿ ಎಂದು ಕೊಳ್ಳುತ್ತಿರುವಾಗಲೇ ಅವರ ಭವಿಷ್ಯದಲ್ಲಿ ಆಶಾಕಿರಣವಾಗಿ ಮದ್ರಾಸಿನ ಈಶ್ವರಿ ಪ್ರಸಾದ್ ವಿದ್ಯಾಲಯದ ಪರಿಚಯವಾಗಿ ಅಲ್ಲಿಗೆ ಮಾಲತಿಯವರು ಸೇರಿಕೊಳ್ಳುತ್ತಾರೆ, ವಿಕಲಾಂಗರಿಗೆಂದೇ ಇದ್ದ ಆ ವಿಶೇಷ ಶಾಲೆಯಲ್ಲಿ ಮಾಲತಿಯವರಂತೆಯೇ  ಸಮಸ್ಯೆಗಳನ್ನು ಎದುರಿಸುತ್ತಿದ್ದ ಅನೇಕ ಮಕ್ಕಳು ಇದ್ದರು. ಅಲ್ಲಿ ಮಾಲತಿಯವರಿಗೆ ಉತ್ತಮವಾದ ಔಷಧೋಪಚಾರಗಳ ಜೊತೆ ಆಟ ಪಾಠವೆಲ್ಲವೂ ಲಭಿಸಿ ಬದುಕಿನಲ್ಲಿ ಏನಾದರೂ ಮಹತ್ತರವಾದದ್ದನ್ನು ಸಾಧಿಸಬೇಕು ಎನ್ನುವ ಅವರ ಛಲಕ್ಕೆ ಮತ್ತಷ್ಟು ಬಲ ಸಿಕ್ಕಿತಲ್ಲದೇ ಅಲ್ಲಿದ್ದ 10 ರಿಂದ 15 ವರ್ಷಗಳು ಅವರ ಬಾಳಿಗೆ ಹೊಸ ಆಯಾಮವೇ ಸಿಕ್ಕಿತು.

ತಮ್ಮ ನೋವುಗಳ ನಿವಾರಣೆಗೆ ಔಷದಿಗಳ ಬದಲಾಗಿ ಈಶ್ವರಿ ಪ್ರಸಾದ್ ವಿದ್ಯಾಲಯದಲ್ಲಿಯೇ  ಕ್ರೀಡೆಯನ್ನು ಬಳಸಿಕೊಳ್ಳಲು ನಿರ್ಧರಿಸಿ ನಿಧಾನವಾಗಿ ವೀಲ್ ಛೇರಿನಿಂದಲೇ ಆಟವನ್ನು ಆಡಲು ಪ್ರಾರಂಭಿಸಿದರು. ಸಣ್ಣವಳಾಗಿದ್ದಾಗ, ಮನೆಯ ಹಿಂದಿರುವ ಹಿತ್ತಲಿನಲ್ಲಿ ಉದುರಿದ ಹಣ್ಣುಗಳನ್ನು ಹೆಕ್ಕಲು ಓಡುತ್ತಿದ್ದ ಮಕ್ಕಳನ್ನು ನೋಡಿದಾಗಾ ತನ್ನ ಕಾಲ್ಗಳು ಸಹಾ ಹಾಗೇ ಇದ್ದಿದ್ದಲ್ಲಿ ತಾನು ಅವರೆಲ್ಲರಿಗಿಂತಲೂ ಮೊದಲು ಓಡಿ ಹೋಗಿ ಹಣ್ಣುಗಳನ್ನು ಆರಿಸಿಕೊಳ್ಳಬಹುದಿತ್ತು ಎಂದು  ನೆನಪಿಸಿಕೊಂಡಾಗ ಸಂಕಟವಾಗುತ್ತಿದ್ದರೂ ತಾನು ಒಂದು ದಿನ ಓಡಿಯೇ ಓಡ್ತೀನಿ ಎಂಬ ಆಶಾಭಾವನೆ ಹೊಂದಿದ್ದರು

mal8ಕ್ರೀಡೆಯಲ್ಲಿ ಭಾಗವಹಿಸಲು ಆರಂಭಿಸಿದಾಗ ಅದೇನು ಸುಲಭದ ನಿರ್ಧಾರವಾಗಿರಲಿಲ್ಲ.  ಅವರ ದೇಹ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿರಲಿಲ್ಲ ಆಂತಹ ಕಷ್ಟವನ್ನು ಹೇಗೆ ನಿಭಾಯಿಸಿದರು ಎಂಬುದನ್ನು ಅವರ ಮಾತುಗಳಲ್ಲೇ ಕೇಳಿದಾಗ ಮನಮುಟ್ಟುತ್ತದೆ. “ಬದುಕಿನಲ್ಲಿ ಯಶಸ್ಸಿನ ಹಾದಿ ಸಿಗಬೇಕಾದ್ರೆ ಸಾಕಷ್ಟು ಶ್ರಮ ಪಡಬೇಕು. ನಮ್ಮ ದೇಹಕ್ಕೆ ಸಿಗುವ ಪ್ರತಿಯೊಂದು ಕಷ್ಟವೂ ನಮ್ಮನ್ನು ಮತ್ತಷ್ಟು ಬಲಿಷ್ಟಗೊಳಿಸುತ್ತೆ. ಹಾಗಾಗಿಯೇ ದೈಹಿಕ ಅಸಮರ್ಥತೆಯ ನಡುವೆಯೂ ನಾನು ಕ್ರೀಡೆಯನ್ನು ಆಯ್ಕೆಮಾಡಿಕೊಂಡೆ” ಎನ್ನುವುದಲ್ಲದೇ, ಹಾಗೆಯೇ ಮಾತನ್ನು ಮುಂದುವರೆಸಿ,  “ದೇಹದ ಅಂಗದಲ್ಲುಂಟಾಗುವ ವಿಕಲತೆಗಿಂತ ನಮ್ಮಲ್ಲಿರುವ ಕೀಳರಿಮೆಯೇ ದೊಡ್ಡ ಅಂಗವಿಕಲತೆ”. “ನಾವೆಲ್ಲಾ ವಿಭಿನ್ನರು ನಿಜ. ಅಂತೆಯೇ, ನಮ್ಮ ಬದುಕು ಕೂಡಾ ವಿಭಿನ್ನತೆಯಲ್ಲಿ ಹೊಳೆಯುವ ಉದಾಹರಣೆಯಾಗಿ ಕಂಗೊಳಿಸಬೇಕು ಎಂದಿರುವುದಲ್ಲದೇ, “ನಮಗೆ ಬೇಕಿರುವುದು ಈ ಸಮಾಜದ ಕರುಣೆ ಅಲ್ಲ. ನಾವೂ ಸಾಧಿಸಬಲ್ಲೆವು ಎಂದು ತೋರಿಸುವುದಕ್ಕೆ ಬೇಕಾದ ಸಹಾನುಭೂತಿ ಮಾತ್ರ ಎಂದು ಈ ಸಮಾಜದಲ್ಲಿ ಸಮಾನತೆಗಾಗಿ ಅಂಗವಿಕಲರು ಅನುಭವಿಸಬೇಕಾಗಿರುವ ಕಷ್ಟ ಪರಿಸ್ಥಿತಿಯನ್ನು ಖಡಾಖಂಡಿತವಾಗಿ ಮಾಲತಿ ಹೊಳ್ಳರವರು ತಿಳಿಸುತ್ತಾರೆ.

mal3ವೀಲ್ ಛೇರ್ ಮೇಲೆ ಕುಳಿತುಕೊಂಡೇ ಡಿಸ್ಕಸ್  ಥ್ರೋ, ಜಾವೆಲಿನ್ ಮತ್ತು ಶಾಟ್ಪುಟ್ ಥ್ರೋಗಳಲ್ಲಿ ಆಭ್ಯಾಸವನ್ನು ಮುಂದುವರೆಸಿ ನೋಡು ನೋಡುತ್ತಿದ್ದಂತೆಯೇ ರಾಷ್ಟ್ರಿಯ ಮಟ್ಟದ ಅಂಗವಿಕಲರ ಕ್ರೀಡಾ ಕೂಟಗಳಲ್ಲಿ ಒಂದೊಂದೇ ಪದಕಗಳನ್ನು ಗೆಲ್ಲುತ್ತಲೇ ಹೋಗಿ, ರಾಷ್ಟ್ರೀಯ ಮತ್ತು ಅಂತರಾಷ್ಟ್ರಿಯ ಮಟ್ಟದಲ್ಲಿ ಸರಿ ಸುಮಾರು 450ಕ್ಕೂ ಅಧಿಕ ಪದಕಗಳು ಮಾಲತಿ ಹೊಳ್ಳರ ಕೊರಳಲ್ಲಿ ಆಲಂಕರಿಸಿದೆ. ಐವಾಸ್ ಕ್ರೀಡಾಕೂಟ, ಏಷ್ಯನ್ ಗೇಮ್ಸ್  ಮತ್ತು ಕಾಮನ್ವೆಲ್ತ್ ಗೇಮ್ಸ್ ಗಳಲ್ಲದೇ  4 ಬಾರಿ ಪ್ಯಾರಾಲಿಂಪಿಕ್ಸ್ ನಲ್ಲಿ ಭಾಗವಹಿಸಿ ಹತ್ತಾರು ಪದಕಗಳನ್ನು ಗೆಲ್ಲುವ ಮೂಲಕ ದೇಶದ ಕೀರ್ತಿ ಪತಾಕೆಯನ್ನು ಹಾರಿಸುವ ಮೂಲಕ ದೇಶಕ್ಕೆ ಗೌರವ ತಂದುಕೊಟ್ಟಿದ್ದಾರೆ. ಇದಲ್ಲದೇ ಕ್ರೀಡಾ ಕೋಟದಡಿಯಲ್ಲಿ ಸಿಂಡಿಕೇಟ್ ಬ್ಯಾಂಕಿನಲ್ಲಿ ಉದ್ಯೋಗವನ್ನು ಪಡೆದು ಸದ್ಯಕ್ಕೆ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ.

ತಮ್ಮ ನೋವಿನ ನಿವಾರಣೆಗಾಗಿ ಕೇವಲ ಕ್ರೀಡೆಯಲ್ಲದೇ ಸಂಗೀತ ಕ್ಷೇತ್ರದಲ್ಲೂ ಕೈಯ್ಯಾಡಿಸಿದ ಮಾಲತಿ ಹೊಳ್ಳ ತಬಲಾ ಮತ್ತು ವಯೋಲಿನ್ನಲ್ಲೂ ಪರಿಣಿತಿಯನ್ನು ಪಡೆದಿದ್ದಾರೆಕೇವಲ ಒಂದು ವಿಷಯದಲ್ಲಿ ಪಳಗಿದ್ದರೆ ಒಂದೊಂದು ಬಾರಿ ಅದು ಬೇಜಾರು ತರಬಹುದು. ಹಾಗಾಗಿ ತಬಲಾ ಮತ್ತು ವಯೋಲಿನ್ ನುಡಿಸೋದನ್ನು ಕಲಿತೆ. ನನಗೆ ಯಾವುದು ಖುಷಿ ಕೊಡುತ್ತದೋ ಅದನ್ನು ನಾನು ಆಯ್ಕೆ ಮಾಡಿಕೊಳ್ಳುತ್ತೇನೆ. ತಬಲಾ ಮತ್ತು ವಯೋಲಿನ್ ನನಗೆ ಮಾನಸಿಕವಾಗಿ ನೆಮ್ಮದಿ ನೀಡುವ ಅದ್ಭುತವಾದ  ಔಷಧ ಎನ್ನುವುದು ಮಾಲತಿಯವರ ಅಭಿಮತವಾಗಿದೆ.

mal4ವಯೋಸಹಜವಾಗಿ ಕ್ರೀಡೆಯಿಂದ ನಿವೃತ್ತಿ ಪಡೆದ ನಂತರ ಸುಮ್ಮನೇ ಕುಳಿತುಕೊಳ್ಳದೇ, ಗ್ರಾಮೀಣ ಪ್ರದೇಶಗಳಲ್ಲಿ ಅಂಗವಿಕಲತೆಯಿಂದ ಬಳಲುತ್ತಾ ವೈದ್ಯಕೀಯ ಸಹಾಯಗಳಿಲ್ಲದೆ ಸೊರಗುತ್ತಿರುವ ಮಕ್ಕಳಿಗೆ ಆಶ್ರಯ ಮತ್ತು ಬೆಂಬಲ ನೀಡುವ ಗುರಿಯಿಂದ ತಮ್ಮ ಅತ್ಮೀಯರೊಂದಿಗೆ ಮಾತೃ ಫೌಂಡೇಶನ್ ಎಂಬ ಸಂಸ್ಥೆಯನ್ನು ಆರಂಭಿಸಿ ಅಂಗವಿಕಲ ಮಕ್ಕಳಿಗೆ ಆಶ್ರಯ ನೀಡಿ ಅವರನ್ನು ಸ್ವಾವಲಂಭಿಗಳನ್ನಾಗಿ ಮಾಡುವ ಕಾಯಕದಲ್ಲಿದ್ದಾರೆ. ತಮ್ಮ ಜೀವನದಲ್ಲಿ ಅನುಭವಿಸಿದ  ಕಷ್ಟಗಳು ಮತ್ತು ಅದನ್ನು ತಾವು ಮೆಟ್ಟಿ ನಿಂತದ್ದನ್ನು ಅತ್ಯಂತ ಮನಮುಟ್ಟುವಂತೆ  “ಡಿಫರೆಂಟ್ ಸ್ಪಿರಿಟ್” ಎನ್ನುವ ಆತ್ಮಚರಿತ್ರೆಯಲ್ಲಿ ದಾಖಲಿಸಿ ಎಲ್ಲರಿಗೂ ಪ್ರೇರಣೆ ನೀಡಿದ್ದಾರೆ. ಇವೆಲ್ಲವರುಗಳ ನಡುವೆ ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜಕುಮಾರ್  ಅವರೊಂದಿಗೆ 80ರ ದಶಕದಲ್ಲೇ ಕಾಮನಬಿಲ್ಲು ಎಂಬ ಚಲನಚಿತ್ರದಲ್ಲಿ ನಟಿಸಿರುವುದು  ಮಾಲತಿಯವರ ಹೆಗ್ಗಳಿಕೆಯಾಗಿದೆ

mal5ಇಷ್ಟೆಲ್ಲಾ ಸಾಧನೆಗಳನ್ನು ಮಾಡಿರುವ ಮಾಲತಿಯವರಿಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ದೊರಕಿದ್ದು ಅವುಗಳಲ್ಲಿ ಪ್ರಮುಖವಾದವು ಹೀಗಿವೆ

  • ಅರ್ಜುನ ಪ್ರಶಸ್ತಿ
  • ಪದ್ಮಶ್ರೀ ಪ್ರಶಸ್ತಿ
  • ಏಕಲವ್ಯ ಪ್ರಶಸ್ತಿ
  • ಹತ್ತಾರು ವಿಶ್ವವಿದ್ಯಾಲಯದ ಡಾಕ್ಟರೇಟ್ ಅಲ್ಲದೇ ಹತ್ತು ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿ ಮತ್ತು ಗೌರವಗಳಿಂದ ಪುರಸ್ಕೃತರಗಿದ್ದಾರೆ.

mal6ಬಾಲ್ಯದಲ್ಲಿಯೇ ಪೋಲಿಯೋಗೆ ಒಳಗಾಗಿ 32 ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿ ಆರಂಭದ ದಿನಗಳಲ್ಲಿ ತಮ್ಮ ಕುಟುಂಬಕ್ಕೆ ಹೊಣೆಯಾದರೂ, ನಂತರದ ದಿನಗಳಲ್ಲಿ ತಮ್ಮ ಸ್ಥೈರ್ಯದಿಂದ ಅವೆಲ್ಲವನ್ನೂ ಮೆಟ್ಟಿ ನಿಂತು ಕ್ರೀಡೆ ಮತ್ತು ಸಂಗೀತಗಳಲ್ಲಿ ಅಪರಿಮಿತ ಸಾಥನೆಯನ್ನು ಮಾಡಿರುವುದಲ್ಲದೇ, ತನ್ನಂತೆಯೇ ವೈಕುಲ್ಯತೆ ಅನುಭವಿಸುತ್ತಿರುವವರನ್ನು ಸಮಾಜದ ಮುಖ್ಯ ವಾಹಿನಿಯಲ್ಲಿ ತರಬೇಕೆಂದು ಅಹರ್ನಿಶಿಯಾಗಿ ದುಡಿಯುತ್ತಿರುವ ಶ್ರೀಮತಿ ಮಾಲತಿ ಕೃಷ್ಣಮೂರ್ತಿ ಹೊಳ್ಳರವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತೀರಿ?

ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s