ಸುಕ್ರಿ ಬೊಮ್ಮುಗೌಡ

ಕರ್ನಾಟಕ ರಾಜ್ಯ ಹೇಳೀ ಕೇಳಿ ಕಲೆಗಳ ತವರೂರು. ಕರ್ನಾಟಕದ ಪ್ರತೀ ಹಳ್ಳಿ ಹಳ್ಳಿಗಳೂ ಸಾಂಸ್ಕೃತಿಕ ಕಲೆಗಳ ಬೀಡಾಗಿದ್ದು ಅಲ್ಲಿ ನೂರಾರು ಕಲಾವಿದರನ್ನು ಕಾಣಬಹುದಾಗಿದೆ. ಅದೇ ರೀತಿಯಲ್ಲಿ ಉತ್ತರ ಕನ್ನಡದ ಹಾಲಕ್ಕಿ ಬುಡಕಟ್ಟಿನ ‍ ‍ಆಧ್ಭುತ ಜಾನಪದ ಕಲಾವಿದೆ ಸುಕ್ರಿ ಬೊಮ್ಮಗೌಡ ಅವರ ಯಶೋಗಾಥೆ ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.

ಹಾಲಕ್ಕಿ ಒಕ್ಕಲಿಗರು ಉತ್ತರ ಕನ್ನಡದ ವಿಶಿಷ್ಟ ಬುಡಕಟ್ಟು ಜನಾಂಗವಾಗಿದ್ದು, ಕರಾವಳಿ ಪ್ರದೇಶಗಳಾದ ಅಂಕೋಲಾ, ಕಾರವಾರ, ಕುಮಟಾ ಮತ್ತು ಹೊನ್ನಾವರದ ಸುತ್ತಮುತ್ತಲೂ ಹೆಚ್ಚಾಗಿ ಕಂಡು ಬರುತ್ತಾರೆ. ಕೈ ಮಗ್ಗದ ಚೌಕುಳಿ ಸೀರೆಯನ್ನು ಮೊಣಕಾಲಿನವರೆಗೆ ನೆರಿಗೆ ಮಾಡಿ ಇಳಿಬಿಟ್ಟು ಎಡ ಬಾಜುವಿಗೆ ಸೆರಗನ್ನು ತಂದು ಗಂಟು ಕಟ್ಟಿ ಉಡುವ, ಕುಪ್ಪಸವಿಲ್ಲದ ಭುಜಗಳ ತುಂಬ ಕರಿಮಣಿ ಸರಗಳನ್ನು ಧರಿಸುವ ಮಹಿಳೆಯರ ವೇಷಭೂಷಣದಲ್ಲಿಯೇ, ನಿಜಕ್ಕೂ ಆಕರ್ಷಣೀಯವಾಗಿದ್ದು ಅದನ್ನು ನೋಡಿಯೇ ಅವರನ್ನು ಬುಡಕಟ್ಟು ಜನಾಂಗಕ್ಕೆ ಸೇರಿದವರು ಎಂದು ಸುಲಭವಾಗಿ ಗುರುತಿಸಬಹುದಾಗಿದೆ. ಉತ್ತರ ಕನ್ನಡದ ಬಡಿಗೇರಿಯಲ್ಲಿ ಹಾಲಕ್ಕಿ ಒಕ್ಕಲಿಗ ಬುಡಕಟ್ಟಿನಲ್ಲಿ ಸುಕ್ರೀ ಯವರು ಜನಿಸುತ್ತಾರೆ. ಅವರ ತಾಯಿಯವರೂ ಸಹಾ ಅದ್ಭುತವಾದ ಜಾನಪದ ಕಲಾವಿದರಾಗಿದ್ದು ಅವರಿಂದಲೇ, ಬಾಲ್ಯದಲ್ಲಿಯೇ ಸಾವಿರಾರು ಹಾಡುಗಳನ್ನು ಹಾಡುವುದನ್ನು ಕಲಿಯುವುದಲ್ಲದೇ, ಹಾಲಕ್ಕಿ ಒಕ್ಕಲಿಗ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಸಂಗೀತ ಮತ್ತು ಹಾಡುಗಳನ್ನು ಅತ್ಯಂತ ಸುಶ್ರಾವ್ಯವಾಗಿ ಹಾಡುತ್ತಲೇ ಸಾವಿರಾರು ವರ್ಷದ ಹಳೆಯ ಜನಪದ ಹಾಡುಗಳನ್ನು ಉಳಿಸುವ ಕೆಲಸ ಮಾಡುತ್ತಿರುತ್ತಾರೆ.

ಸುಕ್ರಿಯವರಿಗೆ 14 ವರ್ಷ ವಯಸ್ಸಿದ್ದಾಗಲೇ, 42 ವರ್ಷ ವಯಸ್ಸಿನ ಬೊಮ್ಮು ಗೌಡ ಅವರ ಜೊತೆ ಬಾಲ್ಯ ವಿವಾಹವಾಗುತ್ತದೆ. ಸಂಸಾರ ಎಂದರೆ ಏನೂ ಎಂದು ತಿಳಿಯುವ ಮುನ್ನವೇ ಅವರಿಗೆ ಎರಡು ಮಕ್ಕಳಾಗುತ್ತದೆ. ದುರಾದೃಷ್ಟವಷಾತ್ ಅತಿಯಾದ ಕುಡಿತದಿಂದಾಗಿ ಬೊಮ್ಮುಗೌಡವರು ಸಾವನ್ನಪ್ಪಿದಾಗ ಅದರಿಂದ ವಿಚಲಿತರಾಗದ ಸುಕ್ರಿಯವರು ಹಾಲಕ್ಕಿ ಒಕ್ಕಲಿಗ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಸಂಗೀತವನ್ನು ಪ್ರದರ್ಶಿಸಲು ಆರಂಭಿಸುತ್ತಾರೆ. ಇದರ ಜೊತೆ ಜೊತೆಯಲ್ಲಿಯೇ ತನ್ನ ಬುಡಕಟ್ಟಿನ ಮುಂದಿನ ಪೀಳಿಗೆಯವರಿಗೆ ತನಗೆ ಗೊತ್ತಿರುವ ಎಲ್ಲಾ ಸಾಂಪ್ರದಾಯಿಕ ಸಂಗೀತ ಮತ್ತು ಹಾಡುಗಳನ್ನು ಕಲಿಸುವ ಮೂಲಕ ಆಕೆಯನ್ನು ಹಾಲಕ್ಕಿಯ ಕೋಗಿಲೆ ಎಂದೇ ಕರೆಯಲಾಗುತ್ತದೆ.

suk4ಸುಕ್ರೀ ಬೊಮ್ಮಗೌಡ ಅವರು ಜನಪದ ಸಂಗೀತದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರ ಜೊತೆಗೆ, ತಮ್ಮ ಹುಟ್ಟೂರು ಬಡಿಗೇರಿಯ ಗ್ರಾಮ ಪಂಚಾಯತಿಯ ಸದಸ್ಯರಾಗುತ್ತಾರೆ. ಸ್ವತಃ ಅನಕ್ಷರಸ್ಥಳಾಗಿದ್ದರೂ, ತಮ್ಮೂರಿನ ಮಕ್ಕಳ ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳ ಸಾಕ್ಷರತೆಗಾಗಿ ಆಂದೋಲನ ಮಾಡುತ್ತಾರೆ. ತನ್ನ ಎರಡು ಮಕ್ಕಳ ಜೊತೆ ಮೂರನೆಯವಾಗಿ ದತ್ತು ತೆಗೆದುಕೊಂಡು ಮುದ್ದಿನಿಂದ ಸಾಕಿ ಬೆಳಸಿದ್ದ ತನ್ನ ದತ್ತು ಪುತ್ರ ಆಕೆಯ ಪತಿಯಂತೆಯೇ ಕುಡಿತದಿಂದಾಗಿ ಸಾವನ್ನಪ್ಪಿದಾಗ ಮನನೊಂದ ಆಕೆ ತನ್ನೂರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಮದ್ಯದ ನಿಷೇಧಕ್ಕಾಗಿ ಹೋರಾಟ ನಡೆಸಲು ಮುಂದಾಗುತ್ತಾಳೆ. ಆಕೆಯ ಮುಂದಾಳತ್ವದಲ್ಲಿ 1990ರಲ್ಲಿ ಮದ್ಯ ವಿರೋಧಿ ಆಂದೋಲನ ನಡೆಸಿದ ಹೋರಾಟದ ಫಲವಾಗಿ ಅವರ ಹಳ್ಳಿಯಲ್ಲದೇ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಲ್ಲಿದ್ದ ಸಾರಾಯಿ ಅಂಗಡಿಗಳನ್ನು ಮುಚ್ಚಿಸುವ ಮೂಲಕ ನೂರಾರು ಮನೆಗಳ ಹೆಣ್ಣು ಮಕ್ಕಳ ಪಾಲಿಗೆ ದೇವರಾಗುತ್ತಾರೆ.

suk6ಅದೇ 80ರ ದಶಕದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಜಾನಪದ ತಜ್ಞ ಮತ್ತು ಮಾಜಿ ಉಪಕುಲಪತಿಗಳಾಗಿದ್ದ ಶ್ರೀ ಎಚ್. ಸಿ. ಬೋರಲಿಂಗಯ್ಯ ನವರು ಕರ್ನಾಟಕಾದ್ಯಂತ ಇರುವ ಜಾನಪದ ಕಲಾವಿದರುಗಳನ್ನು ಭೇಟಿ ಮಾಡುತ್ತಾ ಅವರಲ್ಲಿದ್ದ ಕಲೆಗಳನ್ನು ಗುರುತಿಸಿ, ಸಂರಕ್ಷಿಸಿ ಮುಂದಿನ ಪೀಳಿಗೆಯವರಿಗೆ ಉಳಿಸುವ ಕಾಯಕದ ಅಂಗವಾಗಿ ಸುಕ್ರಿ ಬೊಮ್ಮುಗೌಡ ಅವರ ಊರಾದ ಬಡಗೇರಿಗೆ ಭೇಟಿ ನೀಡಿದ ಸಂಧರ್ಭದಲ್ಲಿ ಸುಕ್ರೀ ಅವರ ಅದ್ಭುತವಾದ ಪ್ರತಿಭೆಯನ್ನು ಗಮನಿಸಿ ಅಚ್ಚರಿಯಾಗುವುದಲ್ಲದೇ ಆ ಕೂಡಲೇ ಧಾರವಾಡ ಆಕಾಶವಾಣಿ ಕೇಂದ್ರದ ಬಾನಂದೂರು ಕೆಂಪಯ್ಯರಿಗೆ ಕರೆ ಮಾಡಿ ಆಕೆಯ ಅಷ್ಟೂ ಹಾಡುಗಳನ್ನು ಸಂಗ್ರಹಿಸಲು ತಿಳಿಸಿದಾಗಲೇ ಹಾಲಕ್ಕಿ ಸಮುದಾಯದ ಈ ಕೋಗಿಲೆಯ ಸಂಗೀತದ ಪರಿಚಯ ಹೊರ ಪ್ರಪಂಚಕ್ಕೆ ತಿಳಿದ ನಂತರವೇ ಆಕೆಯ ಜೀವನದಲ್ಲಿ ಮಹತ್ತರವಾದ ತಿರುವನ್ನು ಪಡೆಯುತ್ತದೆ.

sik180 ವರ್ಷಕ್ಕೂ ಹೆಚ್ಚಿನ ವಯಸ್ಸಿನ ಸುಕ್ರಜ್ಜಿಯು ನೆನಪಿನಲ್ಲಿ ಸುಮಾರು 5000ಕ್ಕೂ ಹೆಚ್ಚಿನ ಹಾಲಕ್ಕಿ ಹಾಡುಗಳಿದ್ದು ಅವುಗಳಲ್ಲಿ ಕೆಲವು ನೂರು ವರ್ಷಕ್ಕಿಂತಲೂ ಹಳೆಯದಾಗಿದೆ ಎನ್ನುವುದು ಗಮನಾರ್ಹವಾಗಿದೆ. ಗಂಟೆಗಟ್ಟಲೇ ಸರಾಗವಾಗಿ ಸಾವಿರಾರು ಹಾಲಕ್ಕಿ ಹಾಡುಗಳನ್ನು ಹೇಳುವ ಸುಕ್ರಜ್ಜಿಗೆ ಹಾಲಕ್ಕಿ ಹಾಡುಗಳ ಕೋಗಿಲೆ ಎಂದು ಕರೆಯುವುದರಲ್ಲಿ ಅತಿಶಯವಿಲ್ಲ ಎನಿಸುತ್ತದೆ. ಕರ್ನಾಟಕ ಜಾನಪದ ಅಕಾಡೆಮಿಯೂ ಸಹಾ ಸುಕ್ರಜ್ಜಿಯವರ ಹಾಡುಗಳನ್ನು ಪುಸ್ತಕ ರೂಪದಲ್ಲಿ ಸಂಗ್ರಹಿಸಿಟ್ಟಿದೆಯಲ್ಲದೇ, ಕಾರವಾರದ ಆಕಾಶವಾಣಿ ಕೇಂದ್ರವೂ ಸಹಾ ಅವರ ಹಾಡುಗಳನ್ನು ಧ್ವನಿಮುದ್ರಣ ಮಾಡಿ ಮುಂದಿನ ಪೀಳಿಗೆಗೆ  ತನ್ನ ಗ್ರಂಥಾಲಯದಲ್ಲಿ ಸುರಕ್ಷಿತವಾಗಿ ಸಂರಕ್ಷಿಸಿದೆಯಲ್ಲದೇ, ಆ ಹಾಡುಗಳ ಅನುವಾದವನ್ನು ಮಾಡಲು ಪ್ರಯತ್ನಿಸುತ್ತಿದೆ.

ಹಾಲಕ್ಕಿ ಒಕ್ಕಲಿಗ ಬುಡಕಟ್ಟು ಜನಾಂಗಕ್ಕೆ ಸೇರಿದ ಜಾನಪದ ಗಾಯಕಿಯಾಗಿರುವ ಸುಕ್ರಿ ಬೊಮ್ಮಗೌಡ ಅವರು ಜಾನಪದ ಕಲೆಗೆ ನೀಡಿದ ಕೊಡುಗೆಗಳು ಮತ್ತು ಸಾಂಪ್ರದಾಯಿಕ ಬುಡಕಟ್ಟು ಸಂಗೀತವನ್ನು ಸಂರಕ್ಷಿಸುವ ಕೆಲಸಕ್ಕಾಗಿ ಅವರ ಸೇವೆಯನ್ನು ಗುರುತಿಸಿ ಹತ್ತು ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಿವೆ. ಅವುಗಳಲ್ಲಿ ಪ್ರಮುಕವಾದವುಗಳೆಂದರೆ,

suk2

  • 1988ರಲ್ಲಿ ನಾಡೋಜ ಪ್ರಶಸ್ತಿ
  • 1999ರಲ್ಲಿ ಜಾನಪದ ಶ್ರೀ ಪ್ರಶಸ್ತಿ
  • 2009ರಲ್ಲಿ ಸಂದೇಶ ಕಲಾ ಪ್ರಶಸ್ತಿ-
  • 2009ರಲ್ಲಿ ಆಳ್ವಾಸ್ ನುಡಿಸಿರಿ ಪ್ರಶಸ್ತಿ
  • 2017ರಲ್ಲಿ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಗೆ ಪುರಸ್ಕೃತರಾಗಿದ್ದಾರೆ.

padmashreeಪದ್ಮಶ್ರೀ ಪ್ರಶಸ್ತಿ ದೊರೆತನಂತರವೂ ಈ ಇಳಿ ವಯಸ್ಸಿನಲ್ಲಿ ಮನೆಯಲ್ಲಿ ಸುಮ್ಮನೇ ಕುಳಿತುಕೊಳ್ಳದೇ, ತಮ್ಮ ಹಾಲಕ್ಕಿ ಒಕ್ಕಲಿಗರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬ ಹೋರಾಟಕ್ಕೆ ರಾಜ್ಯಸರ್ಕಾರವು ಸ್ಪಂದಿಸದೇ ನಿರ್ಲಕ್ಷ್ಯ ತೋರುತ್ತಿರುವ ಹಿನ್ನಲೆಯಲ್ಲಿ ಈ ಜಾನಪದ ಕಲಾವಿದೆ ತಮಗೆ ಕೇಂದ್ರ ಸರ್ಕಾರ ಕೊಟ್ಟ ಪದ್ಮಶ್ರೀ  ಪ್ರಶಸ್ತಿಯನ್ನು ಹಿಂದಿರಿಗಿಸಲೂ ಮುಂದಾಗಿರುವುದು ನಿಜಕ್ಕೂ ವಿಪರ್ಯಾಸವಾಗಿದೆ.

ಅನಕ್ಷರಸ್ಥೆಯಾಗಿದ್ದರೂ, ತನ್ನ ಆಧ್ಭುತವಾದ ಜನಪದ ಕಲೆಯ ಮೂಲಕ ಸುಮಾರು 8 ದಶಕಗಳ ಕಾಲ ಜನರನ್ನು ಮನರಂಜಿಸಿ ಹಾಲಕ್ಕಿ ಕೋಗಿಲೆ ಎಂದೇ ಪ್ರಖ್ಯಾತವಾಗಿರುವ ತನಗೆ ಅಧಿಕಾರ ಸಿಕ್ಕಾಗ ಅದನ್ನೂ ಸಹಾ ಜನಪರ ಕಾರ್ಯಗಳಿಗೆ ದಕ್ಷವಾಗಿ ಬಳಸಿಕೊಂಡ ಈ ನಾಡಿನ ಅಭಿಜಾತ ಕಲಾವಿದೆ ಶ್ರೀಮತಿ ಸುಕ್ರೀ ಬೊಮ್ಮುಗೌಡ ನಿಸ್ಸಂದೇಹವಾಗಿಯೂ ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತೀರಿ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s