ದೂರದ ತಮಿಳುನಾಡಿನಿಂದ ಕೆಲಸ ಹುಡುಕೊಂಡು ಬೆಂಗಳೂರಿಗೆ ಬಂದು ಗಾಂಧಿನಗರದಲ್ಲಿ ಚಲನಚಿತ್ರಗಳ ಬಾಕ್ಸ್ ಗಳನ್ನು ಊರಿಂದ ಊರಿಗೆ ತಲುಪಿಸುತ್ತಿದ್ದ ವ್ಯಕ್ತಿ ಮುಂದೆ ಚಿತ್ರ ವಿತರಕರಾಗಿದ್ದಲ್ಲದೇ ಈಶ್ವರಿ ಪ್ರೊಡಕ್ಷನ್ಸ್ ಸಂಸ್ಥೆಯನ್ನು ಸ್ಥಾಪಿಸಿ. ಅದರ ಮುಖಾಂತರ ಹತ್ತಾರು ಜನಪ್ರಿಯ ಕನ್ನಡ ಚಿತ್ರಗಳನ್ನು ನಿರ್ಮಾಣ ಮಾಡಿ ಅತ್ಯಂತ ಯಶಸ್ವೀ ನಿರ್ಮಾಪಕರರಾಗಿ ಪ್ರಖ್ಯಾತರಾದ ಶ್ರೀ ಎನ್. ವೀರಾಸ್ವಾಮಿ ಯವರ ಯಶೋಗಾಥೆ ಕನ್ನಡದ ಕಲಿಗಳು ಮಾಲಿಕೆಯ ಮೂಲಕ ಇದೋ ನಿಮಗಾಗಿ
ತಮಿಳುನಾಡಿನ ಉತ್ತರ ಆರ್ಕಾಟ್ ಜಿಲ್ಲೆಯ ಒಟ್ಟೇರಿ ಗ್ರಾಮದ ಶ್ರೀ ನಾಗಪ್ಪ ಮತ್ತು ಶ್ರೀಮತಿ ಕಾಮಾಕ್ಷಮ್ಮ ದಂಪತಿಗಳಿಗೆ 17 ಏಪ್ರಿಲ್ 1932 ರಂದು ವೀರಾಸ್ವಾಮಿಯವರು ಜನಿಸುತ್ತಾರೆ. ತಮ್ಮ ಹುಟ್ಟೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣವನ್ನು ಪಡೆದು ಕೆಲಸವನ್ನು ಅರಸಿಕೊಂಡು . 1950ರ ದಶಕದಲ್ಲಿ ಬೆಂಗಳೂರಿಗೆ ಆಗಮಿಸಿ ನಾನಾ ವಿಧದ ಕೆಲಸಗಳನ್ನು ಮಾಡುತ್ತಲೇ ಅಂತಿಮವಾಗಿ ಗಾಂಧಿನಗರದ ಡ್ರೀಮ್ ಲ್ಯಾಂಡ್ ಚಲನಚಿತ್ರ ನಿಗಮದಲ್ಲಿ ಅಟೆಂಡರ್ ಆಗಿ ಕೆಲಸಕ್ಕೆ ಸೇರಿಕೊಳ್ಳುವ ಮೂಲಕ ಚಲನಚಿತ್ರರಂಗದೊಂದಿಗಿನ ಅವರ ನಂಟು ಅರಂಭವಾಗುತ್ತದೆ. ಅವರು ಕೆಲಸ ಮಾಡುತ್ತಿದ್ದ ಸಂಸ್ಥೆ ಚಲನ ಚಿತ್ರಗಳ ವಿತರಣೆಯನ್ನು ನಡೆಸುತ್ತಿದ್ದು ವೀರಾಸ್ವಾಮಿಯವರು ಚಲನಚಿತ್ರಗಳ ರೀಲ್ ಬಾಕ್ಸುಗಳನ್ನು ಊರಿಂದ ಊರಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ. ತಮ್ಮ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದಾಗಿ ಕಂಪನಿಯಲ್ಲಿ ಬಲು ಬೇಗನೇ ಉತ್ತಮವಾದ ಗೌರವವನ್ನು ಗಳಿಸಿರುತ್ತಾರೆ. ನಾನಾ ಕಾರಣಗಳಿಂದಾಗಿ ಅವರ ಸಂಸ್ಥೆ ಬೆಂಗಳೂರಿನಲ್ಲಿದ್ದ ತಮ್ಮ ಕಛೇರಿಯನ್ನು ಮುಚ್ಚಬೇಕಾಗಿ ಬಂದಾಗ ಅವರ ಬಳಿಯಿದ್ದ ಸುಮಾರು ಇಂಗ್ಲೀಶ್, ಕನ್ನಡ ತಮಿಳು ಚಿತ್ರಗಳ ರೀಲ್ಗಳನ್ನು ತಮ್ಮ ಸಂಸ್ಥೆಗೆ ನಿಷ್ಟಾವಂತವಾಗಿ ದುಡಿದಿದ್ದ ವೀರಾಸ್ವಾಮಿಯವರಿಗೇ ಬಿಟ್ಟು ಹೋಗುತ್ತಾರೆ.
ಅದಾಗಲೇ ಚಿತ್ರವಿತರಣೆಯಲ್ಲಿ ಅನುಭವವನ್ನು ಹೊಂದಿದ್ದ ವೀರಾಸ್ವಾಮಿಗಳು, ತಮ್ಮೊಡನೆ ಸಹೋದ್ಯೋಗಿಯಾಗಿದ್ದ ಸ್ನೇಹಿತ ಗಂಗಪ್ಪ ಅವರೊಡನೆ ಸೇರಿ 1955ರಲ್ಲಿ ಉದಯ ಪಿಕ್ಚರ್ಸ್ ಆರಂಭಿಸಿ ಅದರ ಅಡಿಯಲ್ಲಿ ಚಿತ್ರ ವಿತರಣೆ ಆರಂಭಿಸಿ ತಮ್ಮ ಬಳಿಯಿದ್ದ ಚಿತ್ರಗಳ ಬಾಕ್ಸ್ ಗಳನ್ನು ಹಳ್ಳಿ ಹಳ್ಳಿಗಳ ಟೂರಿಂಗ್ ಟಾಕೀಸುಗಳಿಗೆ ತೆಗೆದುಕೊಂಡು ಹೋಗಿ ಪ್ರದರ್ಶನ ಮಾಡುತ್ತಾ ಕಠಿಣ ಪರಿಶ್ರಮದ ಮೂಲಕ ಕಸದಿಂದಲೂ ರಸವನ್ನು ತೆಗೆಯುವಂತೆ ಅಧ್ಭುತವಾದ ಯಶಸ್ಸನ್ನು ಕಾಣುತ್ತಾರೆ. 1962 ರಲ್ಲಿ ವೀರಾಸ್ವಾಮಿಯವರು ತಮ್ಮ ಕನಸಿನ ಕೂಸಾದ ಈಶ್ವರೀ ಪ್ರೊಡಕ್ಷನ್ಸ್ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸುತ್ತಾರೆ. ಇಷ್ಟರ ವೇಳೆಗೆ ತಮ್ಮ ಸ್ನೇಹಪರತೆಯ ಗುಣದಿಂದಾಗಿ ಗಾಂಧೀನಗರದ ಅಂದಿನ ಬಹುತೇಕ ತಂತ್ರಜ್ಞರ ಪರಿಚಯ ಅವರಿಗಿರುತ್ತದೆ. ಅದೇ ಪರಿಚಯದ ಮೂಲಕವೇ, 1971ರಲ್ಲಿ ತಮ್ಮ ಸಂಸ್ಥೆಯ ಮೊದಲ ಚಿತ್ರವಾಗಿ ವರನಟ ರಾಜಕುಮಾರ್ ಮತ್ತು ಲೀಲವತಿ ಅವರು ಪ್ರಮುಖ ಪಾತ್ರದಲ್ಲಿದ್ದ ಕುಲಗೌರವ ಚಿತ್ರವನ್ನು ನಿರ್ಮಾಣ ಮಾಡಿ ಅಭೂತಪೂರ್ವ ಯಶಸ್ಸನ್ನು ಗಳಿಸುತ್ತಾರೆ.
ಅದಾಗಿ ಎರಡು ವರ್ಷದ ನಂತರ ತರಾಸು ಅವರ ಕಾದಂಬರಿಯಾಧಾರಿತ, ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕರಾದ ಶ್ರೀ ಪುಟ್ಟಣ್ಣ ಕಣಗಾಲ್ ನಿರ್ದೇಶನದ, ಹೊಸ ಪರಿಚಯವಾಗಿ ವಿಷ್ಣುವರ್ಧನ್ ಮತ್ತು ಅಂಬರೀಶ್ ಜೊತೆಗೆ ಹಿರಿಯ ನಟರಾದ ಶ್ರೀ ಅಶ್ವತ್ ಮತ್ತು ಲೀಲಾವತಿ ಅವರುಗಳು ನಟಿಸಿದ್ದ ಚಿತ್ರದುರ್ಗದಲ್ಲಿ ಚಿತ್ರತವಾಗಿದ್ದ ನಾಗರಹಾವು ಚಿತ್ರವನ್ನು 1972ರಲ್ಲಿ ಬಿಡುಗಡೆ ಮಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಇಬ್ಬರು ಶ್ರೇಷ್ಠ ನಟರುಗಳನ್ನು ಕೊಡುಗೆಯಾಗಿ ನೀಡುತ್ತಾರೆ.
1974ರಲ್ಲಿ ಗೊರೂರು ರಾಮಸ್ವಾಮೀ ಐಯ್ಯಂಗಾರರ ಕಾದಂಬರಿ ಅಧಾರಿತ ವಿಷ್ಣುವರ್ಥನ್, ಲೋಕೇಶ್, ಲೋಕನಾಥ್ ಪ್ರಮುಖರಾಗಿ ನಟಿಸಿದ್ದ ಭೂತಯ್ಯನ ಮಗ ಅಯ್ಯು ಸಹಾ ಯಶಸ್ವಿಯಾಗುವ ಮೂಲಕ ವೀರಾಸ್ವಾಮಿಯವರು ನಿರ್ಮಾಪಕರಾಗಿ ಕನ್ನಡಿಗರ ಮನೆಗಳಲ್ಲಿ ಮನ ಮಾಡುವುದಲ್ಲದೇ ಅವರ ನಿರ್ಮಾಣದ ಸಂಸ್ಥೆ ಗಾಂಧಿನಗರದ ಪ್ರತಿಷ್ಠಿತ ಸಂಸ್ಥೆಯಾಗಿ ಖ್ಯಾತಿಯನ್ನು ಪಡೆಯುವುದಲ್ಲದೇ, ಗಾಂಧಿನಗರದ ಅನೇಕ ಸಮಸ್ಯೆಗಳಿಗೆ ವೀರಾಸ್ವಾಮಿಯವರ ಬಳಿ ಪರಿಹಾರ ಕಂಡುಕೊಳ್ಳುವ ಪರಿಪಾಠವನ್ನು ಗಾಂಧೀನಗರದವರು ಬೆಳಸಿಕೊಳ್ಳುವ ಮೂಲಕ ಅವರಿಗೆ ಅರಿವಿಲ್ಲದಂತೆ ಗಾಂಧೀನಗರದಲ್ಲಿ ಅವರೊಬ್ಬ ಪ್ರತಿಷ್ಥಿತ ವ್ಯಕ್ತಿಯಾಗಿ ಬಿಡುತಾರೆ. ಇದೇ ಸಮಯದಲ್ಲಿಯೇ ಕನ್ನಡ ಚಿತ್ರರಂಗದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದ ವಿಷ್ಣುವರ್ಧನ್ ಅವರಿಗೆ ಹೊದ ಬಂದ ಕಡೆಯಲ್ಲಾ ಕೆಲವು ಕಾಣದ ಕೈಗಳು ತೊಂದರೆ ಕೊಡುತ್ತಿದ್ದ ಸಂದರ್ಭದಲ್ಲಿ ಅವರಿಗೆ ವಾರಾನು ಗಟ್ಟಲೆ ಈಶ್ವರೀ ಸಂಸ್ಥೆಯೇ ಆಶ್ರಯ ನೀಡಿದ್ದಲ್ಲದೇ ಆ ಸಮಸ್ಯೆಗೆ ಅಲ್ಪವಿರಾಮವನ್ನು ಹಾಕಿಸುವುದರಲ್ಲಿ ವೀರಸ್ವಾಮಿಗಳು ಸಫಲರಾಗುತ್ತಾರೆ
ನಾಗರಹಾವು ಜಲೀಲ ಪಾತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತವಾಗಿ ಖಳನಾಯಕನ ಪಾತ್ರಕ್ಕೇ ಸೀಮಿತವಾಗಿದ್ದ ಅಂಬರೀಷರನ್ನು 1983ರಲ್ಲಿ ಚಕ್ರವ್ಯೂಹ ಚಿತ್ರದ ಮೂಲಕ ಅಂಬಿಕ ಅವರ ಎದುರು ನಾಯಕನಾಗಿ ಭಡ್ತಿ ಕೊಡಿಸಿದ್ದೂ ವೀರಾಸ್ವಾಮಿಗಳೇ. ಅಷ್ಟರಲ್ಲಿಯೇ ಕನ್ನಡ ಚಿತ್ರರಂಗವನ್ನು ಕರ್ನಾಟಕದ ಹೊರಗೂ ವಿಸ್ತಾರ ಮಾಡಿದ, ಕನ್ನಡ ಚಿತ್ರರಂಗಕ್ಕೇ ಹೊಸಾ ಮೆರಗನ್ನು ಮತ್ತು ಬೆರಗನ್ನು ನೀಡಿದ, ಕನ್ನಡ ಚಿತ್ರರಂಗದ ಕನಸುಗಾರ ಎಂದೇ ಖ್ಯಾತಿಯಾಗಿರುವ ವೀರಾಸ್ವಾಮಿಯವಾ ಮಗ ವಿ. ರವಿಚಂದ್ರನ್ ಅವರನ್ನು ಆರಂಭದಲ್ಲಿ ತಮ್ಮ ಚಿತ್ರಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡು ನಂತರ ಅವರನ್ನೇ ಒಂದೆರಡು ಚಿತ್ರಗಳಲ್ಲಿ ನಾಯನನನ್ನಗಿ ಮಾದಿದನಂತರ 1986ರಲ್ಲಿ ರವಿಚಂದ್ರನ್ ಮತ್ತು ಹಂಸಲೇಖ ಜೋಡಿಯಲ್ಲಿ ತೆರೆಗೆಕಂಡ ಪ್ರೇಮಲೋಕ ಅದ್ಭುತ ಯಶಸ್ಸನ್ನು ಕಂಡ ನಂತರ ಸಾಲು ಸಾಲಾಗಿ, ರಣಧೀರ, ರಾಮಾಚಾರಿ, ಹಳ್ಳಿಮೇಷ್ಟ್ರು ಮುಂತಾದ ಯಶಸ್ವೀ ಚಿತ್ರಗಳನ್ನು ನಿರ್ಮಿಸುವ ಮೂಲಕ, ತಮ್ಮ ಮಗ ವಿ ರವಿಚಂದ್ರನ್ ಅವರ ವೃತ್ತಿಜೀವನಕ್ಕೊಂದು ತಿರುವನ್ನು ನೀಡುವುದಲ್ಲದೇ ಕನ್ನಡ ಚಿತ್ರರಂಗಕ್ಕೊಂದು ಅಪರೂಪದ ತಂತಜ್ಞರಾಗಿ ಮಾಣಿಕ್ಯರೂಪದಲ್ಲಿ ಕೊಟ್ಟಿರುವುದು ಗಮನಾರ್ಹವಾಗಿದೆ.
ಸಾಲು ಸಾಲು ಯಶಸ್ವಿ ಚಿತ್ರಗಳ ನಡುವೆಯೇ ಕನ್ನಡ ತಮಿಳು, ತೆಲುಗು ಮತ್ತು ಹಿಂದೀ ಹೀಗೆ ನಾಲ್ಕು ಚಿತ್ರಗಳಲ್ಲಿ ಏಕಕಾಲಕ್ಕೇ ಚಿತ್ರೀಕರಣಗೊಂಡ ರವಿ ಚಂದ್ರನ್ ಅವರ ಬಹುನೀರಿಕ್ಷಿತ ಅತ್ಯಂತ ದುಂದು ವೆಚ್ಚದ ಚಿತ್ರ ಶಾಂತಿ ಕ್ರಾಂತಿ ನೆಲಕಚ್ಚುವ ಮೂಲಕ ಅದುವರೆಗೂ ತಾವು ಗಳಿಸಿದ್ದೆಲ್ಲವನ್ನು ಕಳೆದುಕೊಳ್ಳಬೇಕಾಗಿ ಬಂದದ್ದು ನಿಜಕ್ಕೂ ದುರ್ದೈವದ ಸಂಗತಿಯೇ ಸರಿ.
ಮೇರು ನಟ ರಾಜಕುಮಾರ್ ಅವರ ಎರಡು ಚಿತ್ರಗಳನ್ನು ನಿರ್ಮಾಣ ಮಾಡಿದ್ದಲ್ಲದೇ, ವಿಷ್ಣುವರ್ಧನ್ ಮತ್ತು ಅಂಬರೀಷ್‌ರಂತಹ ದಿಗ್ಗಜರೂ ಸೇರಿದಂತೆ, ಅನೇಕ ಹೊಸ ಪ್ರತಿಭೆಗಳಿಗೆ ತಮ್ಮ ಚಿತ್ರಗಳ ಮೂಲಕ ಅವಕಾಶ ನೀಡಿದ್ದಲ್ಲದೇ, ತಮ್ಮ ಸಂಸ್ಥೆಯಿಂದ ಕನ್ನಡ ಚಿತ್ರಗಳಲ್ಲದೇ ಹಿಂದಿ, ತಮಿಳು ಭಾಷೆಯಲ್ಲೂ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.
ಮೂಲತಃ ಕನ್ನಡಿಗರೇ ಆಗಿದ್ದು ತಮಿಳು ಚಿತ್ರರಂಗದಲ್ಲಿ ಈಗ ಸೂಪರ್ ಸ್ಟಾರ್ ಆಗಿ ಮಿಂಚುತ್ತಿರುವ ರಜನೀಕಾಂತ್ ಅವರ ಆರಂಭ ದಿನಗಳಲ್ಲಿ ಬ್ರೇಕ್ ನೀಡಿದ್ದೇ ಈಶ್ವರಿ ಸಂಸ್ಥೆ ಎಂದರೂ ಅತಿಶಯವಲ್ಲ. 1985ರಲ್ಲಿ ರಜನಿಕಾಂತ್ ನಾಯಕರಾಗಿ ಅವರ ಜೊತೆಗೆ ಶಿವಾಜಿ ಗಣೇಶನ್, ಅಂಬಿಕಾ, ರಮ್ಯಾ ಕೃಷ್ಣನ್, ವಿಜಯ್ ಬಾಬು ಮುಂತಾದವರು ನಟಿಸಿದ್ದ ಪಡಿಕ್ಕಾದವನ್ ಚಿತ್ರ ಆ ಕಾಲಕ್ಕೆ ಯಶಸ್ವಿಯಾಗಿ 250 ದಿನಗಳನ್ನು ಪೂರೈಸಿ ದೊಡ್ಡ ಯಶಸ್ಸನ್ನು ಕಂಡಿದ್ದಲ್ಲದೇ ಬಲ್ಲ ಮೂಲಗಳ ಪ್ರಕಾರ, 6 ಕೋಟಿ ರೂ. ಗಳಿಸಿತ್ತಂತೆ. ಈ ಸಿನಿಮಾವನ್ನು ರಜನಿಕಾಂತ್ ಅವರ 80ರ ದಶಕದ ಟಾಪ್ ಸಿನಿಮಾಗಳಲ್ಲಿ ಒಂದಾಗಿದೆ. ಮುಂದೆ ರಜನೀಕಾಂತ್ ಅವರು ಶಾಂತಿ ಕ್ರಾಂತಿ ತಮಿಳು ಅವತರಣಿಕೆಯಲ್ಲಿ ಈಶ್ವರೀ ಸಂಸ್ಥೆಯ ಚಿತ್ರದಲ್ಲಿ ನಟಿಸಿದ್ದರು.
ಕನ್ನಡಲ್ಲಿ ಅಂಬರೀಷ್ ನಾಯಕತ್ವದಲ್ಲಿ ಯಶ್ವಸಿಕಂಡ ಚಕ್ರವ್ಯೂಹ ಚಿತ್ರವನ್ನು ವೀರಾಸ್ವಾಮಿಯವರು ಅಮಿತಾಭ್ ಬಚ್ಚನ್ ನಾಯಕತ್ವದಲ್ಲಿ ಇಂಕ್ವಿಲಾಬ್ ಎಂಬ ಹೆಸರಿನಲ್ಲಿ ಹಿಂದಿಯಲ್ಲೂ ನಿರ್ಮಾಣ ಮಾಡಿ, ಅಲ್ಲಿಯೂ ಸಹಾ ಗೆದ್ದಿದ್ದರು ಆ ಚಿತ್ರವೂ ಸಹಾ ಆಗಿನ ಕಾಲಕ್ಕೇ ಸುಮಾರು 5 ಕೋಟಿ ರೂ. ಲಾಭ ಗಳಿಸಿತ್ತಂತೆ.
ಕ್ರಮೇಣ ವಯಸ್ಸಾಗುತ್ತಿದ್ದಂತೆಯೇ ವೀರಾಸ್ವಾಮಿಯವರು ತಮ್ಮ ನಿರ್ಮಾಣ ಸಂಸ್ಥೆಯ ಸಂಪೂರ್ಣ ಜವಾಬ್ಧಾರಿಯನ್ನು ತಮ್ಮ ಪುತ್ರರಾದ ವಿ. ರವಿಚಂದ್ರನ್ ಮತ್ತು ಬಾಲಾಜಿ ಅವರಿಗೆ ವಹಿಸಿ ವಿಶ್ರಾಂತ ಜೀವನ ನಡೆಸಲು ಆಲೋಚಿಸುತ್ತಿರುವ ಸಂಧರ್ಭದಲ್ಲಿಯೇ 23 ಆಗಸ್ಟ್ 1992 ರಲ್ಲಿ ನಿಧನರಾಗುವ ಮೂಲಕ ಕನ್ನಡ ಚಿತ್ರರಂಗದ ಹಿರಿಯ ಕೊಂಡಿಯೊಂದು ಕಳಚಿ ಕೊಂಡಂತಾಗುತ್ತದೆ. ವೀರಾಸ್ವಾಮಿಯವರು ಅಂದು ಆರಂಭಿಸಿದ ಈಶ್ವರಿ ಪ್ರೊಡಕ್ಷನ್ಸ್ ಸಂಸ್ಥೆಗೆ ಈಗ 50ರ ಹರೆಯವಾಗಿದ್ದು ಅವರ ಹಿರಿಯ ಮಗ ರವಿಚಂದ್ರನ್ ನಟ, ನಿರ್ದೇಶಕ, ಸಂಗೀತ ನಿರ್ದೇಶಕ ಹೀಗೆ ಆಡು ಮುಟ್ಟದ ಸೊಪ್ಪಿಲ್ಲಾ ರವಿಚಂದ್ರ ಕೈ ಆಡಿಸದ ಕ್ಷೇತ್ರವಿಲ್ಲಾ ಎಂಬಂತೆ ಕನ್ನಡ ಚಿತ್ರರಂಗದ ಅನರ್ಘ್ಯರತ್ನವಾಗಿದ್ದರೆ, ಎರರಡನೆಯ ಮಗ ಬಾಲಾಜಿ ಒಂದೆರಡು ಚಿತ್ರಗಳ ನಟನೆಗೇ ಮೊಟಕುಕೊಳಿಸಿ ತಂದೆಯಂತೆಯೇ ವಿತರಣೆ, ನಿರ್ಮಾಣದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ ಮೊಮ್ಮಕ್ಕಳಾದ ಮನೋರಂಜನ್ ಮತ್ತು ವಿಕ್ರಮ್ ಸಹಾ ನಟನೆಯಲ್ಲಿ ತೊಡಗುವ ಮೂಲಕ ವೀರಾಸ್ವಾಮಿಯವರ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
ಗಾಂಧಿನಗರದ ಚಿತ್ರವಿರಣಾ ಸಂಸ್ಥೆಯಲ್ಲಿ ಸಣ್ಣದಾದ ಕೆಲಸಕ್ಕೆ ಸೇರಿಕೊಂಡು ತಮ್ಮ ಸ್ವಾಮಿ ನಿಷ್ಠೆ, ಕರ್ತವ್ಯ ನಿಷ್ಠೆ, ಕಾರ್ಯ ತತ್ಪರತೆಗಳಿಂದಾಗಿ ತಮ್ಮ ಮಾಲಿಕರ ಅಭಿಮಾನಕ್ಕೆ ಪಾತ್ರರಾಗಿ ಹಂತ ಹಂತವಾಗಿ ಚಿತ್ರ ವಿತರಕರಾಗಿ, ನಿರ್ಮಾಪಕರಾಗಿ ಈಶ್ವರಿ ಪ್ರೊಡಕ್ಷನ್ಸ್ ಸಂಸ್ಥೆಯ ಮೂಲಕ ಚಿತ್ರಗಳನ್ನು ನಿರ್ಮಿಸಿ, ಸಾವಿರಾರು ಕಲಾವಿದರುಗಳಿಗೆ ಆಶ್ರಯದಾತರಾಗಿ ತಮ್ಮ ಮಕ್ಕಳ ಮೂಲಕ ಇಂದಿಗೂ ಕನ್ನಡದ ಕಂಪನ್ನು ಇಡೀ ಪ್ರಪಂಚಾದ್ಯಂತ ಹಬ್ಬಲು ಕಾರಣೀಭೂತರದ ಶ್ರೀ ಎನ್. ವೀರಾಸ್ವಾಮಿಯವರು ನಿಸ್ಸಂದೇಹವಾಗಿ ಕನ್ನಡದ ಕಲಿಗಳೇ ಸರಿ.
ಏನಂತೀರಿ?
ನಿಮ್ಮವನೇ ಉಮಾಸುತ
[…] ಅವರ ಕುರಿತಾದ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಕೊಂಡಿಯ ಮೂಲಕ ತಿಳಿಯಬಹುದಾಗಿದೆ. ಇಂತಹ ವೀರಾಸ್ವಾಮಿ ಮತ್ತು ಪಟ್ಟಮ್ಮಾಳ್ […]
LikeLike