ಇಂದಿನ ಕಾಲದಲ್ಲಿ ಅಲ್ಪನಿಗೆ ಐಶ್ವರ್ಯ ಬಂದ್ರೇ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿಯುವವರೇ ಹೆಚ್ಚಾಗಿರುವಾಗ ಸಾವಿರಾರು ಕೋಟಿಗಳ ವ್ಯವಹಾರದ ಸಾಫ್ಟ್ವೇರ್ ಕಂಪನಿಯ ಸಂಸ್ಥಾಪಕಿಯಾಗಿದ್ದರೂ ಸಾಮಾನ್ಯವಾದ ಸೀರೇ ಉಟ್ಟುಗೊಂಡು ನಿರಾಭರಣೆಯಾಗಿ ಒಂದು ಚೂರು ಹಮ್ಮು ಬಿಮ್ಮಿಲ್ಲದೇ ಯಾವುದೇ ಪ್ರಚಾರದ ಗೀಳಿಲ್ಲದೇ ಸದ್ದಿಲ್ಲದೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸರಳ ಸಹನಾಮೂರ್ತಿ ಶ್ರೀಮತಿ ಸುಧಾಮೂರ್ತಿಯವರ ವ್ಯಕ್ತಿ ಮತ್ತು ವ್ಯಕ್ತಿತ್ವದ ಪರಿಚಯವನ್ನು ನಮ್ಮ ಇಂದಿನ ಕನ್ನಡ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.
ಸುಧಾಮೂರ್ತಿಯವರ ಪೂವಜರು ಅವಿಭಜಿತ ಧಾರವಾಡ ಜಿಲ್ಲೆಯ ಶಿಗ್ಗಾಂವ್ (ಈಗ ಹಾವೇರಿ ಜಿಲ್ಲೆಯ ಭಾಗವಾಗಿದೆ) ಗ್ರಾಮದ ಕುಲಕರ್ಣಿ ಮನೆತನದವರು. ಅದೇ ಮನೆತನದವರಾದ ಹುಬ್ಬಳ್ಳಿಯ ಕೆ.ಎಂ.ಕಾಲೇಜಿನ ಸ್ತ್ರೀ ರೋಗ ತಜ್ಞರು ಮತ್ತು ಪ್ರಾಧ್ಯಾಪಕರಾದ ಶ್ರೀ ರಾಮಚಂದ್ರ ಕುಲಕರ್ಣಿ ಮತ್ತು ವಿಮಲಾ ಕುಲಕರ್ಣಿ ದಂಪತಿಗಳಿಗೆ 1950 ರ ಆಗಸ್ಟ್ 19 ರಂದು ಜನಿಸಿದ ಹೆಣ್ಣು ಮಗುವಿಗೆ ಸುಧಾ ಕುಲಕರ್ಣಿ ಎಂದು ಹೆಸರಿಡುತ್ತಾರೆ.
ಸುಧಾ ಹೆಸರಿಗೆ ಅನ್ವರ್ಥದಂತೆ ಬಾಲ್ಯದಿಂದಲೂ ಅಮೃತದ ರೀತಿಯಂತೆಯೇ ಶುದ್ಧ ಮನಸ್ಸಿನ ಪ್ರಬುದ್ಧವಾದ ಚುರುಕಿನಿನ ಹುಡುಗಿಯಾಗಿರುತ್ತಾಳೆ. ಸುಧಾ ಅವರ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವೆಲ್ಲಾ ಕನ್ನಡ ಮಾಧ್ಯಮದಲ್ಲಿ ತಮ್ಮ ಹುಟ್ಟೂರಾದ ಶಿಗ್ಗಾಂವ್‍ನಲ್ಲಿ ನಡೆದು 1966ರಲ್ಲಿ ಹುಬ್ಬಳ್ಳಿಯ ನ್ಯೂ ಎಜ್ಯುಕೇಶನ್ ಸೊಸೈಟಿ ಯ ಗರ್ಲ್ಸ್ ಇಂಗ್ಲಿಷ್ ಸ್ಕೂಲ್ ನಲ್ಲಿ ಇಡೀ ಶಾಲೆಗೇ ಅತಿ ಹೆಚ್ಚು ಅಂಕಗಳನ್ನು ಪಡೆದು ಎಸ್.ಎಸ್.ಎಲ್.ಸಿ ಯಲ್ಲಿ ಉತ್ತೀರ್ಣರಾಗುತ್ತಾರೆ.
ತಮ್ಮ ಕುಟುಂಬದ ಬಹುತೇಕರು ವೈದ್ಯರಾಗಿದ್ದರೂ ಸುಧಾರವರು ಇಂಜಿನಿಯರಿಂಗ್ ಓದಲು ಇಚ್ಚಿಸಿ ಹುಬ್ಬಳ್ಳಿಯ ಬಿ.ವಿ.ಬಿ.ಕಾಲೇಜ ಆಫ್ ಇಂಜನಿಯರಿಂಗ್ ಕಾಲೇಜಿನಲ್ಲಿ ಇಲೆಕ್ಟ್ರಿಕಲ್ ಇಂಜನಿಯರಿಂಗ್ ಸೇರಿಕೊಳ್ಳುತ್ತಾರೆ. ಇಡೀ ಕಾಲೇಜಿನಲ್ಲಿ 599 ಹುಡುಗರಿದ್ದರೇ ಸುಧಾ ಕುಲಕರ್ಣಿಯೊಬ್ಬರೇ ಹುಡುಗಿ. ಇವೆಲ್ಲವುಗಳ ನಡುವೆಯೂ ಹೆಣ್ಮಕ್ಳೇ ಸ್ಟ್ರಾಂಗ್ ಗುರು ಎನ್ನುವ ಭಟ್ರ ಹಾಡಿನಂತೆ, ಇಡೀ ನಾಲ್ಕು ವರ್ಷಗಳಲ್ಲಿಯೂ ತರಗತಿಗೇ ಪ್ರಥಮವಾಗಿದ್ದು 1972ರಲ್ಲಿ ತಮ್ಮ ಇಂಜಿನಿಯರಿಂಗ್ ಪದವಿಯನ್ನು ಮುಗಿಸುತ್ತಾರೆ. ನಂತರ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯಲ್ಲಿ ಉನ್ನತ ವ್ಯಾಸಂಗಕ್ಕೆ ಸೇರಿಕೊಂಡು 1974ರಲ್ಲಿ ಕಂಪ್ಯೂಟರ್ ಸೈನ್ಯ್ ನಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಗಳಿಸಿದ ಏಕೈಕ ಮಹಿಳಾ ವಿದ್ಯಾರ್ಥಿನಿ ಎನಿಸಿಕೊಳ್ಳುತ್ತಾರೆ.
ಸುಧಾರವರು ತಮ್ಮ ಶಿಕ್ಷಣವನ್ನು ಮುಗಿಸಿ ಕೆಲಸದ ಹುಡುಕಾಟದಲ್ಲಿದ್ದಾಗ, ಪೂನಾದ ಪ್ರತಿಷ್ಠಿತ ಆಟೋ ಕಂಪನಿ TELCO ನಲ್ಲಿ ಖಾಲಿ ಇರುವ ಹುದ್ದೆಯನ್ನು ಗಮನಿಸಿ ಅದಕ್ಕೆ ತಮ್ಮ ಅರ್ಜಿ ಹಾಕುತ್ತಿರುವ ಸಂದರ್ಭದಲ್ಲಿ ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಾರದು ಎಂಬುದನ್ನು ಗಮನಿಸಿ, ಕೂಡಲೇ ಸಂಸ್ಥೆಯ ಹಿರಿಯರಾದ JRD ಟಾಟಾರವರಿಗೆ ಅವರ ಕಂಪನಿಯಲ್ಲಿನ ಲಿಂಗ ತಾರತಮ್ಯದ ಕುರಿತಂತೆ ಪತ್ರವೊಂದನ್ನು ಬರೆಯುತ್ತಾರೆ. ಸುಧಾರವರ ಪತ್ರ JRD ಟಾಟಾ ರವರ ಕೈ ಸೇರಿ, ಸುಧಾರವರ ತಾಂತ್ರಿಕ ಕೌಶಲ್ಯಗಳನ್ನು ಪರೀಕ್ಷಿಸುವ ಸಲುವಾಗಿ ಆಕೆಯನ್ನು ಸಂದರ್ಶನ ಮಾಡಿ ಆ ಹುದ್ದೆಗೆ ಆಕೆ ಸಮರ್ಥಳಾಗಿದ್ದಲ್ಲಿ ನೇಮಿಸಿಕೊಳ್ಳಲು ತಮ್ಮ ಸಿಬ್ಬಂದಿಗೆ ನಿರ್ದೇಶಿಸುತ್ತಾರೆ. ಅದೇ ರೀತಿಯಲ್ಲೇ ಸುಧಾರವರು ಸಂದರ್ಶನದಲ್ಲಿ ಉತ್ತಮವಾಗಿ ಉತ್ತರಿಸಿ ಯಶಸ್ವಿಯಾಗಿ TELCOದಲ್ಲಿ ಕೆಲಸವನ್ನು ಗಿಟ್ಟಿಸಿಕೊಂಡ ಮೊದಲ ಮಹಿಳಾ ಇಂಜನಿಯರ್ ಎನ್ನುವ ಹೆಗ್ಗಳಿಕಗೆ ಪಾತ್ರರಾಗುತ್ತಾರೆ.
ಪುಣೆಯಲ್ಲಿ ಟೆಲ್ಕೋದಲ್ಲಿ ಕೆಲಸ ಮಾಡುತ್ತಿರುವಾಗಲೇ ಅವಿಭಜಿತ ಕೋಲಾರ ಜಿಲ್ಲೆಯ (ಸದ್ಯಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಗೆ ಸೇರಿರುವ) ಶಿಡ್ಲಘಟ್ಟ ಮೂಲದ ಪ್ರತಿಭಾವಂತ ಮತ್ತು ಹಿರಿಯ ಸಹೋದ್ಯೋಗಿ ಶ್ರೀ ನಾರಾಯಣ ಮೂರ್ತಿಯವರ ಪರಿಚಯವಾಗಿ, ಪರಿಚಯ ಸ್ನೇಹಕ್ಕೆ ತಿರುಗಿ, ಗುರು ಹಿರಿಯರ ಸಮ್ಮುಖದಲ್ಲಿ ವಿವಾಹವಾಗುವ ಮೂಲಕ ಸುಧಾ ಕುಲಕರ್ಣಿವರು ಅಧಿಕೃತವಾಗಿ ಶ್ರೀಮತಿ ಸುಧಾ ಮೂರ್ತಿಯಾಗಿ ಭಡ್ತಿ ಪಡೆಯುತ್ತಾರೆ . ಬಲ್ಲವರಿಂದ ಕೇಳಿದ ಪ್ರಕಾರ ಇವರಿಬ್ಬರ ಮದುವೆಗೆ ಅಂದು ಆದ ಖರ್ಚು ಕೇವಲ 2000/- ಗಳು ಎಂದರೆ ಅವರ ಮದುವೆ ಎಷ್ಟು ಸರಳ ರೀತಿಯಲ್ಲಿ ನಡೆದಿದ್ದಿರಬಹುದು ಎಂಬುದು ಅರ್ಥವಾಗುತ್ತದೆ. ಇವರಿಬ್ಬರ ಸುಖೀ ದಾಂಪತ್ಯದ ಕುರುಹಾಗಿ ಅವರಿಗೆ ಅಕ್ಷತಾ ಮತ್ತು ರೋಹನ್ ಎಂಬ ಇಬ್ಬರು ಮಕ್ಕಳಿದ್ದಾರೆ.
ಟೆಲ್ಕೋ ಸಂಸ್ಥೆಯ ನಂತರ ಪುಣೆಯ ವಾಲ್ಚಂದ್ ಗ್ರೂಪ್ ಆಫ್ ಇಂಡಸ್ಟ್ರೀಸ್ ನಲ್ಲಿ ಹಿರಿಯ ಸಿಸ್ಟಂ ಅನಾಲಿಸ್ಟ್ ಆಗಿ ಕೆಲಸ ನಿರ್ವಹಿಸಿ 1974-1981 ರವರೆಗೆ ಪುಣೆಯಲ್ಲಿ ನೆಲಸಿದ್ದ ಸುಧಾ ಮೂರ್ತಿಯವರು ನಂತರ ಮುಂಬೈನಲ್ಲಿ ನೆಲೆಸುತ್ತಾರೆ. ಶ್ರೀ ನಾರಾಯಣ ಮೂರ್ತಿಗಳು ತಮ್ಮ ಕೆಲಸದ ಮೇಲೆ ದೇಶ ವಿದೇಶಗಳಲ್ಲಿ ಸುತ್ತಾಡಿ ಅಂತಿಮವಾಗಿ ಬೇರೆಯವರ ಬಳಿ ಕೆಲಸಕ್ಕೆ ದುಡಿಯುವ ಬದಲು ತಮ್ಮದೇ ಆದ ಒಂದು ಸಂಸ್ಥೆಯನ್ನೇಕೆ ಸ್ಥಾಪಿಸಬಾರದು ಎಂದು ಯೋಚಿಸಿ 1996 ರಲ್ಲಿ ಮೂರ್ತಿಗಳು ತಮ್ಮ ಕೆಲ ಸ್ನೇಹಿತರೊಡನೆ ಸೇರಿಕೊಂಡು ತಮ್ಮ ಮನೆಯ ಸಣ್ಣದಾದ ಕಾರ್ ಗ್ಯಾರೇಜಿನಲ್ಲಿ ಇನ್ಫೋಸಿಸ್ ಫೌಂಡೇಶನ್‌ನ್ನು ಹುಟ್ಟು ಹಾಕಿದ ಸಂದರ್ಭದಲ್ಲಿ ಸುಧಾಮೂರ್ತಿಯವರು ತಮ್ಮ ಉಳಿತಾಯದ ರೂ. 10,000 ವನ್ನು ಆರಂಭದ ದೇಣಿಗೆಯನ್ನಾಗಿ ನೀಡುವುದಲ್ಲದೇ, ಅಂದಿನಿಂದ ಇಂದಿನವರೆಗೂ ಆ ಸಂಸ್ಥೆಯ ಟ್ರಸ್ಟಿಯಾಗಿ ಮುಂದುವರಿದಿದ್ದಾರೆ. ಆರಂಭದಲ್ಲಿ ತಮ್ಮ ಪತಿರಾಯರೊಂದಿಗೆ ತಮ್ಮ ಸಂಸ್ಥೆಗಾಗಿ ವಿವಿಧ ಜವಾಬ್ಧಾರಿಯುತ ಹುದ್ದೆಗಳಲ್ಲಿ ಕೆಲಸ ಮಾಡಿ ತಮ್ಮ ಸಂಸ್ಥೆ ಜಗತ್ಪ್ರಸಿದ್ಧವಾದ ನಂತರ ಹಂತ ಹಂತವಾಗಿ ಸಂಸ್ಥೆಯ ಜವಾಬ್ಧಾರಿಗಳಿಂದ ಹೊರಬಂದು ಸಮಾಜಮುಖೀ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.
ತಮಗೆ ಆರಂಭದಿಂದಲೂ ಇಷ್ಟವಿದ್ದ ಬೋಧನಾ ವೃತ್ತಿಯನ್ನು ಕೈಗೆ ಎತ್ತಿಕೊಂಡು ವಿದ್ಯಾರ್ಥಿಗಳಿಗೆ ಜ್ಞಾನ ದಾಸೋಹ ಮತ್ತು ತರಬೇತಿಯನ್ನು ಒದಗಿಸುವ ಆಸಕ್ತಿಯಿಂದ ಬೆಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಸಂದರ್ಶಕ ಪ್ರಾಧ್ಯಾಪಿಕೆಯಾಗಿರುವುದರ ಜೊತೆಗೆ ಕ್ರೈಸ್ಟ್ ಕಾಲೇಜಿನಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಇದರ ಜೊತೆ ತಮ್ಮ ಅನುಭವವನ್ನೆಲ್ಲಾ ಕನ್ನಡ ಮತ್ತು ಇಂಗ್ಲೀಷಿನಲ್ಲಿ ಅಕ್ಷರ ರೂಪಕ್ಕೆ ಇಳಿಸಿ ಹತ್ತಾರು ಪುಸ್ತಕಗಳನ್ನು ಬರೆಯುವ ಮೂಲಕ ಅವರಲ್ಲಿದ್ದ ಲೇಖಕಿಯನ್ನು ಹೊರಜಗತ್ತಿಗೆ ಪರಿಚಯ ಮಾಡಿ ಕೊಟ್ಟಿದ್ದಾರೆ.
ನಂತರದ ದಿನಗಳಲ್ಲಿ ಸುಧಾ ಮೂರ್ತಿಯವರು ಅನೇಕ ಸಮಾಜ ಸುಧಾರಣಾ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಅದರಲ್ಲೂ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ, ಗ್ರಾಮೀಣ ಜನರಲ್ಲಿ ಶಿಕ್ಷಣ, ಸಾಮಾಜಿಕ ನೈರ್ಮಲ್ಯ, ಬಡತನ ನಿರ್ಮೂಲನೆ ಮತ್ತು ಇನ್ನೂ ಅನೇಕ ವಿಷಯಗಳ ಕುರಿತು ಅವರು ಜಾಗೃತಿಯನ್ನು ನಿರಂತರವಾಗಿ ಮೂಡಿಸುತ್ತಿದ್ದಾರೆ. ದೇಶದ ಪ್ರಧಾನಿಗಳು ಕರೆ ನೀಡಿದ ಸ್ವಚ್ಛ ಭಾರತದ ಅಭಿಯಾನಕ್ಕೆ ಹೃತ್ಪೂರ್ವಕವಾಗಿ ತೊಡಗಿಸಿಕೊಂಡಿದ್ದಲ್ಲದೇ, ಅದರ ಅಗತ್ಯತೆಯನ್ನು ಸಾರ್ವಜನಿಕ ಶೌಚಾಲಯಗಳನ್ನು ಕಟ್ಟಿಸಿಕೊಡುವ ಮೂಲಕ ಜನರಿಗೆ ಅರ್ಥಮಾಡಿಕೊಡುತ್ತಿದ್ದಾರೆ. ಅವರು ಶೌಚಾಲಯ ಕಟ್ಟಿಸಿಕೊಟ್ಟ ಹಿಂದೆಯೂ ಒಂದು ರೋಚಕ ಕತೆಯಿದೆ. ಈಗಾಗಲೇ ತಿಳಿಸಿರುವಂತೆ ಅವರು ಇಂಜೀನಿಯರಿಂಗ್ ಇದೇ ಸಮಯದಲ್ಲಿ ಅವರ ಇಡೀ ಕಾಲೇಜಿನಲ್ಲಿ 599 ಹುಡುಗರಿದ್ದು ಸುಧಾ ಅವರೊಬ್ಬರೇ, ಹೆಣ್ಣುಮಗಳಿದ್ದ ಕಾರಣ ಆ ಕಾಲೇಜಿನಲ್ಲಿ ಮಹಿಳಾ ಶೌಚಾಲಯವೇ ಇರಲಿಲ್ಲವಂತೆ. ಹಾಗಾಗಿ ಅಂದು ತಮ್ಮ ಕಾಲೇಜಿನಲ್ಲಿ ತಾವು ಎದುರಿಸಿದ ಗಂಭೀರ ಸವಾಲನ್ನು ಮತ್ತಾವ ಹೆಣ್ಣುಮಕ್ಕಳೂ ಅನುಭವಿಸಬಾರದು ಎಂಬು ಧೃಢ ನಿರ್ಧಾರದಿಂದ ತಾವು ಇನ್ಫೋಸಿಸ್ ಅಧ್ಯಕ್ಷರಾದ ನಂತರ, ತಮ್ಮ ಸಂಸ್ಥೆಯ ಸಹಭಾಗಿತ್ವದಲ್ಲಿ ರಾಜ್ಯಾದ್ಯಂತ ಹೆಣ್ಣುಮಕ್ಕಳಿಗೆ 16,000 ಶೌಚಾಲಯಗಳನ್ನು ನಿರ್ಮಿಸಿ ಕೊಟ್ಟಿರುವುದು ಗಮನಾರ್ಹವಾಗಿದೆ.
ತಮ್ಮ ಇನ್ಫೋಸಿಸ್ ಫೌಂಡೇಶನ್ ಮುಖಾಂತರ ದೇಶದಲ್ಲಿ ಅದರಲ್ಲೂ ಪ್ರಮುಖವಾಗಿ ನಮ್ಮ ರಾಜ್ಯದಲ್ಲಿ ಯಾವುದೇ ರೀತಿಯ ಪ್ರಕೃತಿ ವಿಕೋಪಗಳು ಸಂಭವಿಸಿದಲ್ಲಿ ಅದಕ್ಕೆ ಪರಿಹಾರವನ್ನು ಕೊಡುವುದರಲ್ಲಿ ಸುಧಾ ಮೂರ್ತಿಯವರು ಅಗ್ರೇಸರರಾಗಿದ್ದಾರೆ. ಪ್ರವಾಹ, ಬರ ಪೀಡಿತ ಪ್ರದೇಶಗಳ ಜನರಿಗೆ ಸಹಾಯ ಮಾಡುವುದರಲ್ಲೂ ಉತ್ಸಾಹದಿಂದ ತೊಡಗಿಸಿಕೊಳ್ಳುವುದಲ್ಲದೇ ನೂರಾರು ಹಳ್ಳಿಗಳಲ್ಲಿ ಸಾವಿರಾರು ಜನರಿಗೆ ಪುನರ್ವಸತಿ ಕಲ್ಪಿಸಿಕೊಟ್ಟಿದ್ದಾರೆ. ಇವೆಲ್ಲದರ ಜೊತೆ ನಾನಾ ಕಾರಣಗಳಿಂದಾಗಿ ವಿದ್ಯೆಯಿಂದ ವಂಚಿತರಾದವರಿಗೆ ಸೂಕ್ತವಾದ ವಿದ್ಯೆಯನ್ನು ಕೊಡಿಸುವುದು ಆವರ ಮೆಚ್ಚಿನ ಕಾರ್ಯವಾಗಿದ್ದು ಈಗಾಗಲೇ ಸಾವಿರಾರು ಮಕ್ಕಳು ಈ ಸೌಲಭ್ಯವನ್ನು ಪಡೆದುಕೊಂದಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ online classesಗಾಗಿ ಕಷ್ಟಪಡುತ್ತಿರುವ ಮಕ್ಕಳಿಗಾಗಿ ಲ್ಯಾಪ್‌ಟಾಪ್, ಇಂಟರ್ನೆಟ್ ಡಾಂಗಲ್ ಮತ್ತು ಒಂದು ವರ್ಷದ ಚಂದಾದಾರಿಕೆಯನ್ನು ಉಡುಗೊರೆಯಾಗಿ ನೀಡುವ ಮೂಲಕ ಅನೇಕ ಮಕ್ಕಳು ಮನೆಯಲ್ಲಿಯೇ ತಮ್ಮ ಅಧ್ಯಯನವನ್ನು ಸುಗಮವಾಗಿ ಮುಂದುವರಿಸಲು ಸಹಕರಿಸಿದ್ದಾರೆ.
ತಮ್ಮೊಡನೆ ಒಡಹುಟ್ಟಿದ ಸಹೋದರಿ ಶ್ರೀಮತಿ ಜಯಶ್ರೀ ದೇಶಪಾಂಡೆಯವರ ಪತಿಯಾದ ಶ್ರೀ ಗುರುರಾಜ ದೇಶಪಾಂಡೆ ಅವರ ಜೊತೆಗೂಡಿ ಉದ್ಯಮಶೀಲತೆ ಗುಣ ಬೆಳೆಸುವ ಮಹತ್ವದ ಉದ್ದೇಶದೊಂದಿಗೆ 1996ರಲ್ಲಿ ದೇಶಪಾಂಡೆ ಪ್ರತಿಷ್ಠಾನ ಎಂಬ ವಿನೂತನ ಸಂಸ್ಥೆಯನ್ನು ಹುಟ್ಟುಹಾಕುವ ಮೂಲಕ ಉತ್ತರ ಕರ್ನಾಟಕದಲ್ಲಿ ಸಾಮಾಜಿಕ ಬದಲಾವಣೆಗೆ ಕಾರಣಭೂತರಾಗಿದ್ದಾರೆ.
ಇಷ್ಟೆಲ್ಲಾ ಕೆಲಸ ಕಾರ್ಯಗಳ ನಡುವೆಯೂ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ಮರೆಯುವುದಿಲ್ಲ. ಹಾಗಾಗಿ, ಪ್ರತಿ ವರ್ಷವೂ ಶ್ರಿ ರಾಘವೇಂದ್ರ ಸ್ವಾಮಿ ಆರಾಧೆನೆಯ ಸಮಯದಲ್ಲಿ ಮುಂಜಾನೆ 4 ಗಂಟೆಗೆ ಮಠಕ್ಕೆ ಭೇಟಿ ನೀಡಿ ಅಲ್ಲಿನ ಸೇವೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಾರೆ. ಈ ಸೇವೆಯಲ್ಲಿ ಪಾತ್ರೆ ತೊಳೆಯುವುದು, ಮಠದಲ್ಲಿರುವ ಕಪಾಟುಗಳ ಧೂಳನ್ನು ತೆಗೆಯುವುದು, ತರಕಾರಿಗಳನ್ನು ಕತ್ತರಿಸುವುದು, ಊಟವಾದ ನಂತರ ಗೋಮೆ ಹಚ್ಚಿ ನೆಲವನ್ನು ಸಾರಿಸಿ ಗುಡಿಸುವುದು ಹೀಗೆ ದೇವರ ದೃಷ್ಟಿಯಲ್ಲಿ ನಾವೆಲ್ಲರೂ ಸಮಾನರು ಎಂದು ತನು ಮನ ಧನದೊಂದಿಗೆ ತಮ್ಮನ್ನು ದೇವರ ಸೇವೆಗೆ ಅರ್ಪಿಸಿಕೊಳ್ಳುವುದು ಅಭಿನಂದನೀಯ ಮತ್ತು ಅನುಕರಣೀಯವೂ ಆಗಿದೆ.
ಇಷ್ಟೆಲ್ಲಾ ಸೇವೆ ಮತ್ತು ಸಾಧನೆಗಳಿಗಾಗಿ ಅನೇಕ ಪ್ರಶಸ್ತಿ ಮತ್ತು ಪುರಸ್ಕಾರಗಳಿಗೆ ಸುಧಾಮೂರ್ತಿಯವರು ಭಾಜನರಾಗಿದ್ದಾರೆ ಅವುಗಳಲ್ಲಿ ಪ್ರಮುಖವಾದವುಗಳೆಂದರೆ,
- 1995ರಲ್ಲಿ ಬೆಂಗಳೂರಿನ ರೋಟರಿ ಕ್ಲಬ್ ನಿಂದ ಅತ್ಯುತ್ತಮ್ಮ ಶಿಕ್ಷಕಿ ಪ್ರಶಸ್ತಿ ದೊರೆತಿದೆ.
- 2000 ನೆಯ ಸಾಲಿನ ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ ಲಭಿಸಿದೆ.
- ಶಾಲೆ ಮಕ್ಕಳಿಗಾಗಿ ಕಂಪ್ಯೂಟರ್ ಈ ಕೃತಿಗೆ ಅತ್ತಿಮಬ್ಬೆ ಪ್ರಶಸ್ತಿ ದೊರೆತಿದೆ.[೧೩]
- 2002ರಲ್ಲಿ ರೇಡಿಯೊ ಸಿಟಿ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯೆಂದು ವರ್ಷದ ಮಹಿಳೆ ಪ್ರಶಸ್ತಿ ಲಭಿಸಿದೆ,
- ದೆಹಲಿಯ ಸಹಸ್ರಮಾನ ಮಹಿಳಾ ಶಿರೋಮಣಿ ಪ್ರಶಸ್ತಿ,
- ಗುಲಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್,
- ಶಿವಮೊಗ್ಗ ಕರ್ನಾಟಕ ಸಂಘದಿಂದ ಎಂ.ಕೆ. ಇಂದಿರಾ ಪ್ರಶಸ್ತಿ ಕೆಂಪೇಗೌಡ ಪ್ರಶಸ್ತಿ,
- 2005ರಲ್ಲಿ ಇಂದೂರ್ ನ ದೇವಿ ಅಹಲ್ಯಾಬಾಯಿ ರಾಷ್ಟ್ರೀಯ ಪ್ರಶಸ್ತಿ
- 2006 ರಲ್ಲಿ ಭಾರತ ಸರಕಾರದ ಪದ್ಮಶ್ರೀ ಪ್ರಶಸ್ತಿ ನೀಡಿದೆ
- 2009 ರಲ್ಲಿ ಆಳ್ವಾಸ್ ನುಡಿಸಿರಿ ಪ್ರಶಸ್ತಿ
- ಬಸವಶ್ರೀ ಪ್ರಶಸ್ತಿ
- ತುಮಕೂರು ಮತ್ತು ಗುಲಬರ್ಗ ವಿ.ವಿಯಲ್ಲದೇ ಇನ್ನೂ ಹತ್ತು ಹಲವಾರು ವಿಶ್ವವಿದ್ಯಾನಿಲಯಗಳು ಸುಧಾಮೂರ್ತಿಯವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.
ಮಧ್ಯಮ ವರ್ಗದಲ್ಲಿ ಹುಟ್ಟಿ ತನ್ನ ಬುದ್ಧಿ ಶಕ್ತಿ ಮತ್ತು ಕಠಿಣ ಪರಿಶ್ರಮದಿಂದ ಕೋಟ್ಯಾಂತರ ಹಣವನ್ನು ಗಳಿಸಿದರೂ, ಒಂದು ಚೂರೂ ಅದರ ಹಮ್ಮು ಬಿಮ್ಮಿಲ್ಲದೇ, ಸರ್ವೇ ಸಾಮಾನ್ಯರಂತೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದಲ್ಲದೇ ಬರಹಗಾರ್ತಿಯಾಗಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲೂ ಛಾಪು ಮೂಡಿಸಿ, ಹಣ ಮತ್ತು ಶ್ರೀಮಂತಿಕೆ ಬದುಕಿನ ಒಂದು ಭಾಗವಷ್ಟೇ. ಅದನ್ನು ಅದನ್ನು ಸಮಾಜಕ್ಕೆ ಅರ್ಪಿಸುವುದರಿಂದಲೇ ಸುಖಃ ಸಂತೋಷ ದೊರೆಯುತ್ತದೆ ಎನ್ನುವುದನ್ನು ತಮ್ಮ ಕಾರ್ಯಗಳಿಂದ ಮತ್ತೊಮ್ಮೆ ಮಗದೊಮ್ಮೆ ನಿರೂಪಿಸುತ್ತಿರುವ ಸೌಜನ್ಯದ ಮೂರ್ತಿ ಸುಧಾ ಮೂರ್ತಿಯವರು ನಿಸ್ಸಂದೇಹವಾಗಿಯೂ ನಮ್ಮ ಹೆಮ್ಮೆಯ ಕನ್ನಡ ಕಲಿಗಳೇ ಸರಿ.
ಏನಂತೀರಿ?
ನಿಮ್ಮವನೇ ಉಮಾಸುತ
Super 🙏🎉🎉 swlpa medam contact madsi sir please
LikeLiked by 1 person
ಕ್ಷಮಿಸಿ. ವಯಕ್ತಿಕವಾಗಿ ಅವರ ಪರಿಚಯ ನನಗಿಲ್ಲ.
LikeLike
ಮೊದಲು ನಮಸ್ಕಾರ. ನಂತರ ವಿಷಯ,ಒಂದು ಹುಡುಗಿ ಕಾಲೇಜಿನ ಮೊದಲ ವಿದ್ಯಾರ್ಥಿನಿಯಾಗಿ ಕಲಿಯುವಾಗ ಮತ್ತು ಒಬ್ಬ ಮೀಸಲಾತಿ ಹುಡುಗ ಕಾಲೇಜು ಶಿಕ್ಷಣ ಮಾಡುವಾಗ ಅನುಭವಿಸುವ ವೇತನೇ. ಅವರಿಗೆ ಮಾತ್ರ ಅನುಭವ. I am Soulting for great achievement and keen development of social works. I am hands up. You Regards.
JSGOWDA.
Scientific Assistant G. Atomic Energy. KudanKulam. Tirunelveli TamiNadu.
LikeLike
ವಿದ್ವಾನ್ ಸರ್ವತ್ರ ಪೂಜ್ಯತೆ ಎನ್ನುವಂತೆ ಸುಧಾ ಮೂರ್ತಿ ಅವೆಲ್ಲವನ್ನೂ ದಾಟಿ ಕಾಲೇಜಿಗೇ ಮೊದಲು ಬಂದರು. ಅದೇ ರೀತಿ ಮೀಸಲಾತಿಯಿಂದ ಕಾಲೇಜಿಗೆ ಸೇರಿಕೊಂಡವರು ಪರಿಶ್ರಮ ವಹಿಸಿ ಓದಿದಲ್ಲಿ ಖಂಡಿತವಾಗಿಯೂ ಉದ್ದಾರ ಆಗಬಹುದು. 35% ಅವರಿಗೆ ಸರ್ಕಾರಿ ಕೆಲಸ ಗಿಟ್ಟಿಸಿ ಕೊಡಬಹುದೇ ಹೊರತು ವಿದ್ಯೆ ಬುದ್ಧಿ ಕಲಿಸಿಕೊಡಲು ಸಾಧ್ಯವಿಲ್ಲ.
LikeLike