ಜಯದೇವಪ್ಪ ಹಾಲಪ್ಪ ಪಟೇಲ್ ಕರ್ನಾಟಕ ಕಂಡ ಅತ್ಯಂತ ದಿಟ್ಟತನದ ಪ್ರಾಮಾಣಿಕ ರಾಜಕಾರಣಿ ರಾಜ್ಯದ ವಿವಿಧ ಖಾತೆಗಳ ಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳಾಗಿದ್ದಲ್ಲದೇ, 15 ನೇ ಮುಖ್ಯಮಂತ್ರಿಯಾಗಿದ್ದವರು. ಸಮಾಜವಾದಿ ಹಿನ್ನಲೆಯ ಹೋರಾಟದಿಂದ ಬಂದು ತಮ್ಮ ಜೀವನದುದ್ದಕ್ಕೂ ಕಾಂಗ್ರೆಸ್ ವಿರೋಧೀ ನಾಯಕರಾಗಿಯೇ ರಾಜ್ಯ ರಾಜಕೀಯದಲ್ಲಿ ಪ್ರವರ್ಧಮಾನಕ್ಕೆ ಬಂದವರು. ಶಿವಮೊಗ್ಗಾ ಸಾಂಸದರಾಗಿ ದೂರದ ದೆಹಲಿಯ ಸಂಸತ್ತಿನಲ್ಲಿ ಮೊತ್ತ ಮೊದಲ ಬಾರಿಗೆ ಕನ್ನಡದಲ್ಲಿ ಮಾತನಾಡಿ ಕನ್ನಡದ ಕಂಪನ್ನು ಎಲ್ಲೆಡೆಯೂ ಹರಡಿದ್ದವರು. ಸಂಗೀತ ಮತ್ತು ಸಾಹಿತ್ಯ ಪ್ರೇಮಿಯಾಗಿದ್ದ ಶ್ರೀ ಜೆ ಹೆಚ್ ಪಟೇಲ್ ಅವರ ವ್ಯಕ್ತಿ ಮತ್ತು ವ್ಯಕ್ತಿತ್ವದ ಪರಿಚಯವನ್ನು ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಪರಿಚಯ ಮಾಡಿಕೊಳ್ಳೋಣ ಬನ್ನಿ.
ಜೆ.ಎಚ್.ಪಟೇಲರು ಅಕ್ಟೋಬರ್ 1 1930ರಲ್ಲಿ ಕಾಗಿನೂರಿನಲ್ಲಿ ಸಿರಿವಂತ ಕುಟಂಬದಲ್ಲೇ ಜನಿಸುತ್ತಾರೆ. ಬಾಲ್ಯದಿಂದಲೂ ಎಲ್ಲದರಲ್ಲೂ ಚುರುಕಾಗಿದ್ದ ಪಟೇಲರು ವಿಜ್ಞಾನದ ವಿದ್ಯಾರ್ಥಿಯಾಗಿ ಇಂಟರ್ಮೀಡಿಯಟ್ ವರೆಗೂ ದಾವಣಗೆರೆಯಲ್ಲಿ ಮುಗಿಸಿ, ತಮ್ಮ ವಿದ್ಯಾಭ್ಯಾಸದಲ್ಲಿ ರಾಜಕೀಯದ ವಿಷಯವೂ ಇದ್ದು ಅದರಲ್ಲಿ ಹೆಚ್ಚಿನ ಆಸಕ್ತಿ ಇದ್ದ ಕಾರಣ ಬಿಎ ಓದುವುದಕ್ಕಾಗಿ ಮೈಸೂರು ಮಹಾರಾಜ ಕಾಲೇಜ್ ಸೇರಿಕೊಳ್ಳುತ್ತಾರೆ. ಪ್ರೌಢಶಾಲೆಯ ದಿನಗಳಲ್ಲಿಯೇ ಸಮಾಜವಾದದ ಪ್ರಭಾವಕ್ಕೆ ಒಳಗಾಗಿದ್ದ ಪಟೇಲರು 1947ರ ಸೆಪ್ಟೆಂಬರ್ 1ರಂದು ಮೈಸೂರು ಮಹಾರಾಜರ ವಿರುದ್ಧ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕರೆ ಕೊಟ್ಟಿದ್ದ ‘ಮೈಸೂರು ಚಲೋ’ ಸತ್ಯಾಗ್ರಹದಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಅಧಿಕೃತವಾಗಿ ರಾಜಕೀಯ ಹೋರಾಟಕ್ಕೆ ಧುಮುಕುತ್ತಾರೆ.
ಆ ದಿನಗಳಲ್ಲಿ ಪಟೇಲರ ಊರಾದ ಕಾರಿಗನೂರು ಚಳವಳಿಗೆ ಕೇಂದ್ರವಾಗಿತ್ತು. ಹಾಗಾಗಿ ಚನ್ನಗಿರಿ ತಾಲ್ಲೂಕಿನ ಜನರು ಅತ್ಯಂತ ಉತ್ಸಾಹದಿಂದ ಕೇವಲ 18 ದಾಟಿರದ ತರುಣ ಪಟೇಲರ ನೇತೃತ್ವದಲ್ಲಿ ಸೆಪ್ಟೆಂಬರ್ 3 ರಂದು ಚನ್ನಗಿರಿಯಲ್ಲಿ ಸತ್ಯಾಗ್ರಹ ನಡೆಸುತ್ತಾರೆ. ಕಾಂಗ್ರೆಸ್ ಬಾವುಟವನ್ನು ಹಿಡಿದುಕೊಂಡು ಹೊರಟಿದ್ದ ಚಳುವಳಿಗಾರರ ಮೇಲೆ ಪೊಲೀಸರು ದಾಳಿ ನಡೆಸಿ ಅಲ್ಲಿದ್ದವರೆಲ್ಲರನ್ನೂ ಚೆಲ್ಲಾಪಿಲ್ಲಿಯಾಗುವಂತೆ ಹೊಡೆಯುತ್ತಿದ್ದಾಗ ಧೈರ್ಯವಂತ ಜೆ ಎಚ್ ಪಟೇಲರು ತಾಲ್ಲೂಕು ಕಚೇರಿಯ ಮೇಲೆ ಬಾವುಟ ಹಾರಿಸಲು ಪ್ರಯತ್ನಿಸುತ್ತಿದ್ದಾಗ ಅವರನ್ನು ಬಂಧಿಸಿ, ಶಿವಮೊಗ್ಗದ ಜಿಲ್ಲಾ ಕಾರಾಗೃಹದಲ್ಲಿ ಎರಡು ದಿನಗಳ ಕಾಲ ವಿಚಾರಣೆ ನಡೆಸಿ, ನಂತರ ಮಂಡಗದ್ದೆ ಕಾರಾಗೃಹದಲ್ಲಿ ಮೂರು ತಿಂಗಳು ಕಾಲ ಸೆರೆಮನೆ ವಾಸವನ್ನು ಅನುಭವಿಸುವ ಮೂಲಕ ಅವರ ರಾಜಕೀಯ ಜೀವನ ಮತ್ತು ಸ್ವಾತಂತ್ರ್ಯ ಹೋರಾಟ ಪ್ರಾರಂಭವಾಗುತ್ತದೆ. .
1951ನೇ ಇಸವಿಯ ಸಮಯದಲ್ಲಿ ಮೊದಲನೆಯ ಸಾರ್ವತ್ರಿಕ ಚುನಾವಣೆಯ ಪ್ರಚಾರಕ್ಕೆಂದು ಮೈಸೂರಿಗೆ ಸಮಾಜವಾದಿ ಪಕ್ಷದ ನಾಯಕರಾಗಿದ್ದ ಜಯಪ್ರಕಾಶ್ ನಾರಾಯಣ್ ಆಗಮಿಸಿದ್ದಾಗ ಅವರ ಮಾತುಗಳಿಂದ ಪಟೇಲರು ಪ್ರಭಾವಕ್ಕೊಳಗಾಗುತ್ತಾರಾದರೂ, ಇದರ ಜೊತೆ ಜೊತೆಯಲ್ಲಿಯೇ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿ, 1954ರಲ್ಲಿ ಬೆಳಗಾವಿಯಲ್ಲಿ ತಮ್ಮ ಎಲ್.ಎಲ್.ಬಿ. ಪದವಿ ಪಡೆದ್ದಲ್ಲದೇ ಅದೇ ವರ್ಷ ಮೇ ತಿಂಗಳಿನಲ್ಲಿ ಸರ್ವಮಂಗಳ ಅವರನ್ನು ವರಿಸುತ್ತಾರೆ.
1955ರಲ್ಲಿ ತಮ್ಮ ಸಹಪಾಠಿ ಶಂಕರನಾರಾಯಣ ಭಟ್ಟರ ಜೊತೆ ಶಿವಮೊಗ್ಗದಲ್ಲಿ ಕೆಲ ಕಾಲ ವಕೀಲಿ ವೃತ್ತಿಯನ್ನು ಆರಂಭಿಸುತ್ತಾರಾದರೂ ಅವರ ಆಸಕ್ತಿಯೆಲ್ಲಾ ರಾಜಕೀಯದತ್ತವೇ ಇದ್ದು, 1957ರ ನಂತರ ಕರ್ನಾಟಕದ ಸಮಾಜವಾದಿ ಪಕ್ಷದ ಜನನಾಯಕರಾಗಿದ್ದ ಶ್ರೀ ಶಾಂತವೇರಿ ಗೋಪಾಲಗೌಡರ ಜತೆಗೂಡಿ ವಿವಿಧ ಹೋರಾಟದಲ್ಲಿ ಭಾಗಿಯಾಗಿ, 1960ರ ತಾಲೂಕು ಬೋರ್ಡ್ ಚುನಾವಣೆಯಲ್ಲಿ ಬಸವಪಟ್ಟಣ ಕ್ಷೇತ್ರದಿಂದ ಚನ್ನಗಿರಿ ತಾಲೂಕು ಬೋರ್ಡ್‌ಗೆ ಚುನಾಯಿತರಾಗುತ್ತಾರೆ. ಇದೇ ಸಮಯದಲ್ಲಿಯೇ ಉಳುವವನಿಗೇ ಭೂಮಿ ಎಂದು ಆರಂಭವಾದ ಹೋರಾಟ, ಕಾಗೋಡು ಸತ್ಯಾಗ್ರಹ ಎಂದೇ ರಾಷ್ಟ್ರೀಯ ಸುದ್ದಿಯಾಗಿ ಭಾರತದ ಎಲ್ಲ ಕಡೆಗೂ ರಾಮ್ ಮನೋಹರ್ ಲೋಹಿಯಾ ಅವರ ನೇತೃತ್ವದಲ್ಲಿ ಚಳವಳಿ ಆರಂಭವಾದಾಗ ಸಮಾಜವಾದಿ ಪಕ್ಷದ ವತಿಯಿಂದ ನಡೆಸಿದ ಭೂ ಚಳುವಳಿಗಳಲ್ಲಿ ಜೆ.ಹೆಚ್. ಪಟೇಲರು ಭಾಗಿಯಾಗಿ ಎರಡು ಸಾರಿ ಸೆರೆಮನೆಯ ವಾಸವನ್ನು ಅನುಭವಿಸಿ ಹೊರಬರುವಷ್ಟರಲ್ಲಿ ಶಿವಮೊಗ್ಗಾ ಜಿಲ್ಲಾದ್ಯಂತ ಜನಪ್ರಿಯ ನಾಯಕರಾಗಿ ಮುನ್ನಲೆಗೆ ಬಂದಿರುತ್ತಾರೆ.
ಇದೇ ಜನಪ್ರಿಯತೆಯೇ ಅವರನ್ನು 1962ರ ಸಾರ್ವತ್ರಿಕ ಚುನಾವಣೆಯಲ್ಲಿ ಅತ್ಯಧಿಕ ಬಹುಮತದಿಂದ ಶಿವಮೊಗ್ಗ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆ ಮಾಡಿಸುತ್ತದೆ. ಸಾಂಸದರಾಗಿ ಲೋಕಸಭೆಯಲ್ಲಿ ತಮ್ಮ ಮಾತೃಭಾಷೆ ಕನ್ನಡದಲ್ಲಿ ಭಾಷಣ ಮಾಡಲು ಆರಂಭಿಸಿದಾಗ ಅದಕ್ಕೆ ಇತರ ಸಾಂಸದರು ಆಕ್ಷೇಪಣೆಯನ್ನು ವ್ಯಕ್ತಪಡಿಸಿದಾಗ, ಆಗಿನ ಲೋಕಸಭೆಯ ಅಧ್ಯಕ್ಷರಾಗಿದ್ದ ಶ್ರಿ ನೀಲಂ ಸಂಜೀವ ರೆಡ್ಡಿ ಅವರು ಪಟೇಲ್ ಅವರಪರ ನಿಂತು ಭಾಷಣವನ್ನು ಮುಂದುವರಿಸಲು ಅವಕಾಶ ಮಾಡಿಕೊಟ್ಟಿದ್ದಲ್ಲದೇ, ಭಾರತೀಯ ಸಂಸತ್ತು ಜಾರಿಯಾದ 17 ವರ್ಷಗಳ ನಂತರ ಪ್ರಪ್ರಥಮವಾಗಿ ಸಾಂಸದರೊಬ್ಬರು ಪ್ರಾದೇಶಿಕ ಭಾರತೀಯ ಭಾಷೆಯಲ್ಲಿ ಮಾತನಾಡಿದ ಸದಸ್ಯರು ಎಂಬ ಹಿರಿಮೆ ಪಟೇಲದ್ದಾಗುತ್ತದೆ. ಇದಾದ ನಂತರ ಶ್ರೀ ಸಂಜೀವ ರೆಡ್ಡಿ ಅವರು ಯಾವುದೇ ಲೋಕಸಭೆಯ ಸದಸ್ಯರು ಯಾವುದೇ ಅಡೆತಡೆಯಿಲ್ಲದೆ ತಮ್ಮ ಮಾತೃಭಾಷೆಯಲ್ಲಿ ಸಂಸತ್ತಿನಲ್ಲಿ ತಮ್ಮ ವಾದವನ್ನು ಮಂಡಿಸಬಹುದು ಎಂಬ ಅಧಿಕೃತ ಆದೇಶವನ್ನು ಹೊರಡಿಸಲು ನಮ್ಮ ಪಟೇಲರೇ ಪ್ರೇರೇಪಣೆಯಾಗುತ್ತಾರೆ. ಆದಾದ ನಂತರ ಅಂದಿನ ಗೃಹಮಂತ್ರಿಗಳಾಗಿದ್ದ ಶ್ರೀ ವೈ.ವಿ. ಚವ್ಹಾಣ್ ಅವರೊಡನೆ ಮಹಾಜನ ಆಯೋಗದ ಸಂಬಂಧವಾಗಿ ಕರ್ನಾಟಕದ ಪರವಾಗಿ ವಾಗ್ಯುದ್ಧ ನಡೆಸುವ ಮೂಲಕ ಕರ್ನಾಟಕದಲ್ಲಿ ಮನೆಮಾತಾಗುವ ಮೂಲಕ ಕೆಲವೇ ಕೆಲವು ದಿನಗಳಲ್ಲಿ ಅವರು ಬಹು ಜನಪ್ರಿಯ ಲೋಕಸಭಾ ಸದಸ್ಯರಾಗುವುದಲ್ಲದೇ, ಡಾ.ಲೋಹಿಯ ಅವರ ಅಚ್ಚುಮೆಚ್ಚಿನ ಸಂಗಾತಿಯಾಗುತ್ತಾರೆ.
ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜೆಪಿ ಯವರ ನೇತೃತ್ವದಲ್ಲಿ ದೇಶಾದ್ಯಂತ ನಡೆದ ಹೋರಾಟದಲ್ಲಿ ಸಕ್ರೀಯವಾಗಿ ತೊಡಗಿಕೊಂಡ ಪಟೇಲರು ಅದಕ್ಕಾಗಿ ಸೆರೆಮನೆಯ ವಾಸವನ್ನು ಅನುಭವಿಸುವ ಮೂಲಕ ಸಂಪೂರ್ಣ ಗಮನ ರಾಜ್ಯದತ್ತ ಹರಿಯುತ್ತದೆ. ತುರ್ತು ಪರಿಸ್ಥಿತಿಯ ನಂತರದ ವಿಧಾನ ಸಭಾ ಚುನಾವಣೆಯಲ್ಲಿ ಚನ್ನಗಿರಿ ಕ್ಷೇತ್ರದಿಂದ ಆಯ್ಕೆಯಾಗುತ್ತಾರೆ. ಆಗ ರಾಜ್ಯದಲ್ಲಿ ದೇವರಾಜ ಅರಸು ಅವರ ನೇತೃತ್ವದ ಕಾಂಗ್ರೇಸ್ ಸರ್ಕಾರ ಆಡಳಿತ ನಡೆಸುತ್ತಲಿದ್ದು,
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಟೇಲರು ಆರ್ಥಿಕ ಸ್ಥಿತಿ ಮತ್ತು ಅದರ ಗತಿಯ ಕುರಿತು ಮಾತನಾಡುತ್ತಾ ದೇಶದ ಆರ್ಥಿಕ ಸ್ಥಿತಿ, ಕರ್ನಾಟಕದ ಪರಿಸ್ಥಿತಿ, ಪಂಜಾಬ್ ರಾಜ್ಯದಲ್ಲಿ ಜಾರಿಗೆ ತಂದಿರುವ ಆರ್ಥಿಕ ಸುಧಾರಣೆಗಳನ್ನು ನಿಖರ ಅಂಕಿ ಅಂಶಗಳ ಮೂಲಕ 3 ಗಂಟೆಗಳ ಕಾಲ ಮಾಡಿದ ಅಮೋಘ ಭಾಷಣ ಖುದ್ದು ಮುಖ್ಯಮಂತ್ರಿಗಳ ಗಮನ ಸೆಳೆದ ಪರಿಣಾಮ ಮಧ್ಯಾಹ್ನದ ಭೋಜನ ಸಮಯದಲ್ಲಿ ವಿರೋಧಪಕ್ಷದ ಮೊಗಸಾಲೆಗೆ ಬಂದ ದೇವರಾಜ ಅರಸರು ಪಟೇಲರನ್ನು ಅಭಿನಂದಿಸಿ ಅವರ ಭಾಷಣದಲ್ಲಿದ್ದ ಅಂಕಿ ಅಂಶಗಳ ನಕಲನ್ನು ಕೇಳಿ ಪಡೆದ್ದದ್ದಲ್ಲದೇ ಅಂದಿನ ಸಂಜೆಯ ಭೋಜನ ಕೂಟಕ್ಕೆ ಆಹ್ವಾನಿಸುತ್ತಾರೆ. ನಂತರ ಮುಂದೊಮ್ಮೆ ಅದೇ ಸ್ನೇಹದಿಂದ ತಮ್ಮ ಸಂಪುಟದಲ್ಲಿ ಮಂತ್ರಿಯಾಗುವಂತೆ ಅರಸರು ನೀಡಿದ ಆಹ್ವಾನವನ್ನು ನಯವಾಗಿಯೇ ನಿರಾಕರಿಸಿದರಲ್ಲದೇ, ಅವರ ರಾಜಕೀಯ ಜೀವನಾದ್ಯಂತ ಕಾಂಗ್ರೆಸ್ ವಿರೋಧಿಯಾಗಿಯೇ ರಾಜಕಾರಣ ನಡೆಸಿದ್ದದ್ದು ಅವರ ಹೆಗ್ಗಳಿಗೆ.
83ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಜನತಾ ಸರ್ಕಾರ ಬಂದಾಗ ಶ್ರೀ ರಾಮಕೃಷ್ಣ ಹೆಗಡೆಯವರ ಮಂತ್ರಿಮಂಡಲದಲ್ಲಿ ಸಚಿವರಾಗಿದ್ದರು. 90ರ ದಶಕದಲ್ಲಿ ದೇವೇಗೌಡರ ನೇತೃತ್ವದಲ್ಲಿ ಜನತಾದಳದ ಸರ್ಕಾರ ಆಡಳಿತಕ್ಕೆ ಬಂದಾಗ ಅವರ ಮಂತ್ರಿಮಂಡಳದಲ್ಲಿ ಉಪಮುಖ್ಯಮಂತ್ರಿಯಾಗಿದ್ದಲ್ಲದೇ, ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಯಾವ ಪಕ್ಷಕ್ಕೂ ಪೂರ್ಣಬಹುಮತ ಬಾರದೇ ಹೋದಾಗ, ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಶ್ರೀ ದೇವೇಗೌಡರು ಅಚಾನಕ್ಕಾಗಿ ಪ್ರಧಾನ ಮಂತ್ರಿಗಳಾದಾಗ ಸಹಜವಾಗಿಯೇ, ಜೆ. ಹೆಚ್ ಪಟೇಲರು 1996 ಮೇ 31 ರಂದು ಕರ್ನಾಟಕದ 15 ನೇ ಮುಖ್ಯಮಂತ್ರಿಯಾಗಿ ಕಾಂಗ್ರೇಸ್ ಪಕ್ಷಕ್ಕೆ ಎಂದೂ ಭಾಗವಾಗದಿದ್ದ ರಾಜ್ಯದ ಮೊತ್ತ ಮೊದಲ ಮುಖ್ಯಮಂತ್ರಿ ಎಂಬ ಖ್ಯಾತಿ ಪಟೇಲರದ್ದಾಗಿದೆ.
ಪಟೇಲರು ಮುಖ್ಯಮಂತ್ರಿಯಾಗಿದ್ದಾಗ ಅಧಿಕಾರ ವಿಕೇಂದ್ರೀಕರಣಕ್ಕೆ ಒತ್ತು ಕೊಟ್ಟು 7 ಹೊಸ ಜಿಲ್ಲೆಗಳನ್ನು ಘೋಷಿಸಿದ್ದರು. 4,800 ಕೋಟಿ ವಿದೇಶಿ ಬಂಡವಾಳವನ್ನು ಹೂಡಿಕೆ ಮಾಡಲು ವಾತಾವರಣ ಸೃಷ್ಟಿಸಿದ್ದಲ್ಲದೇ, ಘಟಪ್ರಭಾ, ಮಲಪ್ರಭಾ, ಆಲಮಟ್ಟಿ,ವರುಣಾ, ವಿಶ್ವೇಶ್ವರಯ್ಯ ನಾಲೆಯ ಆಧುನೀಕರಣಕ್ಕೆ ಆಧ್ಯತೆ ನೀಡಿದ್ದರು. ಕೂಡಲ ಸಂಗಮದ ಅಭಿವೃದ್ಧಿಗೆ ಕಂಕಣ ತೊಟ್ಟಿದ್ದವರೂ ಪಟೇಲರೇ.
ಕರ್ನಾಟಕದಲ್ಲಿ ವಿದ್ಯುತ್ ಅಭಾವ ಹೆಚ್ಚಾಗಿದ್ದಾಗ, ವಿದ್ಯುತ್ ಉತ್ಪಾದನೆಗೆ ಒತ್ತು ಕೊಟ್ಟು, ಅಧಿಕ ವಿದ್ಯುತ್ ಉತ್ಪಾದನೆ ಮಾಡುವ ರಾಜ್ಯಗಳಲ್ಲಿ ನಮ್ಮ ರಾಜ್ಯವೂ ಒಂದಾಯಿತು.ಪಟೇಲರು ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಮಂತ್ರಿ ಮಂಡಲದ ಪ್ರತಿಯೊಬ್ಬ ಸಹೋದ್ಯೋಗಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರು ಎನ್ನುವುದಕ್ಕೆ ಈ ಉದಾರಣೆ ನೀಡಲೇ ಬೇಕು. ಪಟೇಲರ ಮಂತ್ರಿಮಂಡಲದಲ್ಲಿ ಶಿಕ್ಷಣ ಮಂತ್ರಿಯಾಗಿದ್ದ ಮಲೆನಾಡಿನ ಗಾಂಧಿ ಎಂದೇ ಖ್ಯಾತಿ ಪಡೆದಿದ್ದ ಹೆಚ್ ಜಿ ಗೋವಿಂದೇಗೌಡರು ಲಕ್ಷಾಂತರ ಶಿಕ್ಷಕರ ನೇಮಕಾತಿಯ ಫೈಲ್ ಹಿಡಿದು ಪಟೇಲರ ಅನುಮತಿ ಕೇಳಲು ಬಂದಾಗಾ, ಗೌಡರೇ ಇಂತಹ ಉತ್ತಮ ಕೆಲಸಕ್ಕೆ ನನ್ನ ಅನುಮತಿ ಯಾಕೇ, ಧೈರ್ಯದಿಂದ ಮುಂದುವರೆಸಿ ಶಹಭಾಷ್ ಎಂದು ಬೆನ್ನು ತಟ್ಟಿದ್ದರು ಪಟೇಲರು.
ದುರಾದೃಷ್ಠವಷಾತ್ ಆ ಸ್ವಾತಂತ್ರ್ಯವೇ ಸ್ವೇಚ್ಛೆಯಾಗಿ ಕೆಲವು ಮಂತ್ರಿಗಳು, ಅಧಿಕಾರಿಗಳು ದುರುಪಯೋಗಪಡಿಸಿಕೊಂಡು ಪಟೇಲರಿಗೆ ಅಪಖ್ಯಾತಿಯನ್ನು ತಂದಿದ್ದಲ್ಲದೇ, ತಮ್ಮ ಪಕ್ಷದ 116 ಶಾಸಕರ ಪೈಕಿ 52 ಭಿನ್ನಮತೀಯ ಶಾಸಕರು ಪಟೇಲರನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರಯತ್ನಿಸಿದರೂ, ಪಟೇಲರೆಂದೂ ಭಿನ್ನಮತೀಯರನ್ನು ಕರೆದು ಮಾತನಾಡಿಸಿ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ಹಾತೊರೆಯದೇ ಇದು ಅವರದ್ದೇ ಸರ್ಕಾರವಾಗಿದ್ದು, ಬೇಕಿದ್ದರೆ ಆ ಶಾಸಕರೇ ಸರ್ಕಾರವನ್ನು ಉಳಿಸಿಕೊಳ್ಳಲಿ ಎಂದು ಹಿರಿಯ ಸಚಿವರಾದ ಎಂ ಪಿ ಪ್ರಕಾಶ್ ಹಾಗೂ ನಾಣಯ್ಯನವರ ಮೂಲಕ ಸಂದೇಶ ರವಾನಿಸಿ ತಮ್ಮ ಕಾಯಕದಲ್ಲಿ ನಿರತರಾಗಿಬಿಟ್ಟರು. ಚುನಾವಣೆಗೆ ಇನ್ನೂ 6 ತಿಂಗಳುಗಳು ಬಾಕೀ ಇರುವಾಗಲೇ 1999ರ ಅಕ್ಟೋಬರ್ 7 ರಂದು ಸರ್ಕಾರವನ್ನು ವಿಸರ್ಜಿಸಿ ಒಟ್ಟು 1200 ದಿನಗಳಕಾಲ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು.
ನಂತರ ನಡೆದ ಚುನಾವಣೆಯಲ್ಲಿ ಒಲ್ಲದ ಮನಸ್ಸಿನಿಂದಲೇ, ತಮ್ಮ ಬಹುಕಾಲದ ಗೆಳೆಯರಾದ ಜಾರ್ಜ್ ಫರ್ನಾಂಡೀಸ್ ಮತ್ತು ರಾಮಕೃಷ್ಣ ಹೆಗಡೆಯವರ ಒತ್ತಾಯಕ್ಕೆ ಕಟ್ಟುಬಿದ್ದು ಬಿಜೆಪಿಯ ಜತೆಗೆ ಹೊಂದಾಣಿಕೆಗೆ ಮಾಡಿಕೊಂಡು 1999ರ ವಿಧಾನಸಭಾ ಚುನಾವಣೆ ಎದುರಿಸಿ ತಮ್ಮ ಸ್ವಕ್ಷೇತ್ರ ಚನ್ನಗಿರಿಯಲ್ಲಿ ಬಿಜೆಪಿಯ ಬಂಡಾಯ ಅಭ್ಯರ್ಥಿ ವಡ್ನಾಳ್ ರಾಜಣ್ಣ ಆವರ ವಿರುದ್ಧ ಸೋಲನ್ನಭಿಸಿ ರಾಜ್ಯದಲ್ಲಿ ಎಸ್. ಎಂ. ಕೃಷ್ಣಾರವರ ನೇತೃತ್ವದಲ್ಲಿ ಕಾಂಗ್ರೇಸ್ ಅಧಿಕಾರಕ್ಕೆ ಬಂದಾಗ, ಕೃಷ್ಣರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಬರುವುದರೊಂದಿಗೆ ತಮ್ಮ ರಾಜಕೀಯ ಮುತ್ಸದ್ದಿತನವನ್ನು ತೋರಿಸುತ್ತಾರೆ. ಪಟೇಲರ ಆಗಮನವನ್ನು ದೂರದಿಂದಲೇ ಗಮನಿಸಿದ ಕೃಷ್ಣರವರು ವಿಧಾನ ಸೌಧದ ಮೆಟ್ಟಿಲುಗಳನ್ನು ಇಳಿದು ಬಂದು ಪಟೇಲರನ್ನು ಮಾತನಾಡಿಸಿ ನಿಮ್ಮಂತಹ ಹಿರಿಯರು ವಿಧಾನ ಸಭೆಯ ವಿರೋಧಪಕ್ಷದ ಸಾಲಿನಲ್ಲಿ ಇರಬೇಕಿತ್ತು ಎಂದು ಹೇಳಿದ್ದದ್ದು ಗಮನಾರ್ಹವಾಗಿತ್ತು.
ಪಟೇಲರು ಮಂತ್ರಿಯಾಗಿದ್ದಾಗ, ಮುಖ್ಯಮಂತ್ರಿಯಾಗಿದ್ದಾಗ, ಅವರು ಅಧಿಕಾರವನ್ನು ಕುಟುಂಬಕ್ಕಾಗಿ ದುರುಪಯೋಗ ಮಾಡಲಿಲ್ಲ. ತಮ್ಮ ಯಾವ ಮಕ್ಕಳನ್ನೂ ಚುನಾವಣೆಗೆ ನಿಲ್ಲಿಸಲು ಒಪ್ಪಲಿಲ್ಲ. ಸದಾ ಸ್ನೇಹಿತರೊಡನೆ ಮತ್ತು ಕುಟುಂಬದೊಡನೆ ಅತ್ಯಂತ ಮನಃಪೂರ್ವಕವಾಗಿ ಸಂತೋಷ ಕೂಟಗಳಲ್ಲಿ ಭಾಗವಹಿಸುತ್ತಿದ್ದರು. ಮಕ್ಕಳ ಮೇಲಿನ ಪ್ರೀತಿಗಿಂತ ಮೊಮ್ಮಕ್ಕಳ ಮೇಲಿನ ಪ್ರೀತಿ ಅಗಾಧವಾಗಿತ್ತು. ಅವರ ಮೊಮ್ಮಗಳು ಸಣ್ಣ ವಯಸ್ಸಿನಲ್ಲಿಯೇ ಭಯಂಕರ ಖಾಯಿಲೆಯಿಂದಾಗಿ ಅಸುನೀಗಿದಾಗ ಬಹಳ ದಿನಗಳ ಕಾಲ ಪಟೇಲರು ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಎಂತಹ ವಿರೋಧಿಗಳನ್ನೂ ಅತ್ಯಂತ ವಿಶ್ವಾಸದಿಂದ ಕಾಣುತ್ತಿದ್ದ ಕಾರಣ ಅವರೊಬ್ಬ ಅಜಾತಶತ್ರುವಾಗಿದ್ದರು ಎಂದರೂ ಅತಿಶಯವಲ್ಲ.
ನೇರವ್ಯಕ್ತಿತ್ವ ಮತ್ತು ಹಾಸ್ಯ ಪ್ರವೃತ್ತಿ ಅವರಿಗೆ ಜನ್ಮಜಾತವಾಗಿ ಬಂದಿದ್ದು,ಅದರಿಂದಾಗಿ ಪಟೇಲರ ಸಾಧನೆಗಳು, ಸಮಾಜವಾದಿ ವಿಚಾರಧಾರೆಗಳು ಹಿನ್ನೆಲೆಗೆ ಸರಿದು ನಿಂತಿತು. ಪಟೇಲರು ಇದ್ದಾರೆ ಎಂದರೆ ಅಲ್ಲೊಂದು ನವಿರಾದ ಹಾಸ್ಯವಿರುತ್ತದೆ ಮತ್ತು ಅಷ್ಟೇ ಮೊನಚಾದ ಕುಟುಕುವಂತಹ ಉತ್ತರವಿರುತ್ತದೆ ಎನ್ನುವುದಕ್ಕೆ ಈ ಪ್ರಸಂಗವನ್ನು ಹೇಳಲೇ ಬೇಕು ಪಟೇಲರು ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ಚನ್ನಗಿರಿಯಿಂದ ದಾವಣಗೆರೆಗೆ ಹೋಗುವ ಮಾರ್ಗದಲ್ಲಿ ಸುಮಾರು 18 ಕಿ.ಮೀ ದೂರದಲ್ಲಿದ್ದ ಸೂಳೆ ಕೆರೆ ಎಂಬ ಹೆಸರು ಜನರಲ್ಲಿ ತಪ್ಪು ಭಾವನೆ ಕಲ್ಪಿಸುತ್ತದೆ ಎಂಬ ಕಾರಣ ನೀಡಿ ಈ ಕೆರೆಯನ್ನು ಶಾಂತಿ ಸಾಗರ ಎಂದು ಪುರರ್ನಾಮಕರಣ ಮಾಡಬೇಕೆಂಬ ಪ್ರಸ್ತಾಪನೆ ಇಡುತ್ತಾರೆ.
ಅವರ ಪ್ರಸ್ತಾವನೆಗೆ ಒಪ್ಪದ ಪಟೇಲರು, ಇರಲಿ ಬಿಡ್ರಿ. ಸೂಳೆ ಕೆರೆ ಅನ್ನೋ ಹೆಸರೇ ಇತಿಹಾಸ ಪ್ರಸಿದ್ಧವಾಗಿದೆ. ಈಗ ಅದರ ಹೆಸರನ್ನು ಶಾಂತಿ ಸಾಗರ ಎಂದು ಬದಲಿಸಿ ಇತಿಹಾಸವನ್ನು ತಿದ್ದಲಾಗದು ಎಂದಿದ್ದಲ್ಲದೇ, ಹಾಗೆಯೇ, ಮಾತನ್ನು ಮುಂದುವರೆಸಿ, ಒಬ್ಬ ಹೆಣ್ಣು ಮಗಳನ್ನು ಸೂಳೆಯ ಪಟ್ಟಕ್ಕೇರಿಸುವುದು ಯಾರು? ಈ ಸಮಾಜದ ದುರುಳ ಗಂಡಸರು ಮತ್ತು ಬಾಯಿ ಚಪಲ ಅತಿಯಾಗಿರುವ ಹೆಂಗಸರಲ್ಲವೇ? ಒಬ್ಬ ಹೆಣ್ಣಿಗೆ ಮೈ ಮಾರಿಕೊಳ್ಳುವುದನ್ನು ಅನಿವಾರ್ಯವಾಗುವಂತೆ ಮಾಡಿದ್ದು ಇದೇ ಸಮಾಜವಲ್ಲವೇ? ಈ ಸಮಾಜದ ಕಣ್ಣಲ್ಲಿ ಸೂಳೆ ಎನ್ನಿಸಿಕೊಂಡ ಆ ಹೆಣ್ಣು ಮಗಳು ಕೆರೆ ಕಟ್ಟಿಸುವ ಮೂಲಕ ಇಂದಿಗೂ ಸಹಾ ಲಕ್ಷಾಂತರ ಜನರ ನೆಮ್ಮದಿಗೆ ದಾರಿ ಮಾಡಿಕೊಟ್ಟಳು ಎಂದ್ದಲ್ಲಿ ಅದನ್ನೇಕೆ ತಪ್ಪೆಂದು ಭಾವಿಸಿ ಬದಲಿಸ ಬೇಕು? ಎಂದು ಕೇಳಿದ್ದರಂತೆ. ಇಂತಹ ಪಟೇಲರನ್ನು ಆಜ್ ತಕ್ ಎನ್ನುವ ಹಿಂದಿ ಛಾನೆಲ್ಲಿನಲ್ಲಿ ನಡೆಸಿದ ಸಂದರ್ಶನವನ್ನು ತಿರುಚಿ women and wine are my weakness ಅಂದರೆ ಮಾನಿನಿ ಮತ್ತು ಮದಿರೆ ನನ್ನ ದೌರ್ಬಲ್ಯ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆಂದು ವಿಕೃತವಾಗಿ ವರದಿ ಮಾಡಿ ಪಟೇಲರ ವ್ಯಕ್ತಿತ್ವಕ್ಕೆ ಕಳಂತ ತರುವುದರಲ್ಲಿ ಕೆಲ ಕಾಣದ ಕೈಗಳು ಸಫಲರಾಗಿದ್ದಂತೂ ಸುಳ್ಳಲ್ಲ.
ಪಟೇಲರ ಸರಳತೆಗೆ ಈ ಒಂದು ಪ್ರಸಂಗವನ್ನು ಹೇಳಲೇ ಬೇಕು. ಅದೊಮ್ಮೆ ಪಟೇಲರು ತಮ್ಮೂರಿನಲ್ಲಿ ಇದ್ದಾಗ, ಆ ಊರಿನ ಅತಿಯಾದ ಸಿನಿಮಾ ಪ್ರೇಮಿಯಾಗಿದ್ದ ಚಪ್ಪಲಿ ಹೊಲೆಯುವ ಹುಡುಗನೊಬ್ಬ ಪಟೇಲರ ಬಳಿ ಬಂದು, ಸಾಹೇಬ್ರೇ ಈ ಸಲ ನಮ್ಮೂರ ಜಾತ್ರೆಗೆ ಅಂಬರೀಷಣ್ಣ ಮತ್ತು ಅನಂತನಾಗ್ ಅವರನ್ನು ಕರೆಸಿ ಎಂಬ ಬೇಡಿಕೆಯಿಟ್ಟನಂತೆ. ಆ ಹುಡುಗನ ಮುಗ್ಧತೆಯನ್ನು ಮೆಚ್ಚಿದ ಪಟೇಲರು ಸುಮ್ಮನೇ ನಕ್ಕು ಆಯ್ತು ಹೋಗೋ ಎಂದವರು, ಕೊಟ್ಟ ಮಾತಿಗೆ ತಪ್ಪದೆ ಸುಮಾರು 1500 ಜನರಿರುವ ಕಾರಿಗನೂರಿನ ಜಾತ್ರೆಗೆ ಆ ಇಬ್ಬರು ನಟರನ್ನು ಕರೆತಂದಾಗ ಆ ಹುಡುಗನ ಆನಂದಕ್ಕೆ ಪಾರವೇ ಇರಲಿಲ್ಲ ಎಂದು ಬೇರೆ ಹೇಳಬೇಕಿಲ್ಲ.
ನೇರ ನಡೆ ಮತ್ತು ನುಡಿಗಳಿಂದ ಹಿಡಿದ ಕೆಲಸವನ್ನು ಮಾಡಿಯೇ ತೀರುತ್ತಿದ್ದ ಪಟೇಲರು 7 October 1999ರಂದು ತಮ್ಮ ವಯೋಸಹಜವಾಗಿ ನಿಧನರಾಗುವ ಮೂಲಕ ಸಮಾಜವಾದಿ ಮೂಲದ ಕೊಂಡಿಯೊಂದು ರಾಜ್ಯ ರಾಜಕಾರಣದಲ್ಲಿ ಮಿಂಚಿ ಮರೆಯಾಗುತ್ತದೆ. ಅವರ ಅಂತ್ಯ ಸಂಸ್ಕಾರಕ್ಕೆ, ಜಾರ್ಜ್ ಫೆರ್ನಾಂಡಿಸ್, ನಿತೇಶ್ ಕುಮಾರ್ ಮತ್ತು ಶರದ್ ಯಾದವ್, ದೂರದ ಬಿಹಾರ್ ನಿಂದ ಬಂದಿದ್ದದ್ದು ವಿಶೇಷವಾಗಿತ್ತು. ಪಟೇಲರು ನಮ್ಮ ನಾಡು ಕಂಡ ಅತ್ಯಂತ ಧೀಮಂತ ವ್ಯಕ್ತಿಯಾಗಿದ್ದಲ್ಲದೇ, ನಾಡು ಮತ್ತು ನುಡಿಯ ವಿಚಾರ ಬಂದಾಗ ಕೆಚ್ಚದೆಯಿಂದ ಎದುರಿಸಿ ಸೈ ಎನಿಸಿಕೊಂಡ ಜೆ. ಹೆಚ್. ಪಟೇಲರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.
ಏನಂತೀರೀ?
ನಿಮ್ಮವನೇ ಉಮಾಸುತ