ಟಿ20 ವಿಶ್ವಕಪ್ ಮುಗಿಯುತ್ತಿದ್ದಂತೆಯೇ ಭಾರತದ ವಿರುದ್ಧ ಟಿ20 ಮತ್ತು ಟೆಸ್ಟ್ ಸರಣಿಯನ್ನು ಆಡಲು ಬಂದಿಳಿದ ನ್ಯೂಜಿಲೆಂಡ್ ತಂಡದಲ್ಲಿ ಭಾರತೀಯರಿಗೆ ಎರಡು ಹೆಸರುಗಳು ಗಮನ ಸೆಳೆಯುವಂತಿದ್ದು ಒಂದು ಇಶ್ ಸೋಧಿಯದ್ದಾಗಿದರೆ ಮತ್ತೊಂದು ರಚಿನ್ ರವೀಂದ್ರ ಎನ್ನುವ ಆಟಗಾರರದ್ದಾಗಿತ್ತು. ಹಾಗೆ ನೋಡಿದರೆ ನ್ಯೂಜಿಲೆಂಡ್ ತಂಡದಲ್ಲಿ ಭಾರತೀಯ ಮೂಲದ ಆಟಗಾರರಿಗೇನೂ ಕಡೆಮೆ ಇಲ್ಲ ದೀಪಕ್ ಪಟೇಲ್, ಜಿತಿನ್ ಪಟೇಲ್, ರೋನಿ ಹಿರಾ, ತರುಣ್ ನೇತುಲಾ, ಜೀತ್ ರಾವಲ್ ಮುಂತಾದ ಭಾರತೀಯ ಮೂಲದವರು ಈಗಾಗಲೇ ನ್ಯೂಜಿಲೆಂಡ್ ತಂಡದ ಪರ ಆಡಿದ್ದಾರೆ. ಅವರಲ್ಲರ ನಡುವೆ ರಚಿನ್ ರವೀಂದ್ರ ವಿಶೇಷವಾಗಿದ್ದು ಅದರ ಸಂಪೂರ್ಣ ವಿವರಗಳು ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.
ಬೆಂಗಳೂರು ಮೂಲದ ಕ್ಲಬ್ ಕ್ರಿಕೆಟರ್ ಆಗಿದ್ದ ಮತ್ತು ಕಂಪ್ಯೂಟರ್ ಸಾಫ್ಟ್‌ವೇರ್ ಸಿಸ್ಟಮ್ ಆರ್ಕಿಟೆಕ್ಟ್ ಆಗಿರುವ ಶ್ರೀ ರವೀಂದ್ರ ಕೃಷ್ಣಮೂರ್ತಿ ಮತ್ತು ದೀಪಾ ಕೃಷ್ಣಮೂರ್ತಿಯರು ಉಜ್ವಲ ಭವಿಷ್ಯವನ್ನು ಅರಸುತ್ತಾ 1990ರಲ್ಲಿ ನ್ಯೂಜಿಲ್ಯಾಂಡಿಗೆ ಹೋಗಿ ಅಂತಿಮವಾಗಿ ಅಲ್ಲಿಯೇ ನೆಲೆಸುವ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಎಲ್ಲದ್ದಕ್ಕಿಂತಲೂ ವಿಶೇಷವೆಂದರೆ, ಬೆಂಗಳೂರಿನಲ್ಲಿ ಭಾರತದ ಮಾಜಿ ವೇಗಿ ಜಾವಗಲ್ ಶ್ರೀನಾಥ್ ಮತ್ತು ಕರ್ನಾಟಕದ ತಂಡದ ಮಾಜೀ ನಾಯಕ ಮತ್ತು ಕೋಚ್ ಆಗಿದ್ದ ಜೆ ಅರುಣ್ ಕುಮಾರ್ (ಜ್ಯಾಕ್) ಅವರೊಂದಿಗೆ ಸ್ಥಳೀಯ ಕ್ರಿಕೆಟ್ ಆಡಿದ್ದ ರವೀಂದ್ರ ಕೃಷ್ಣಮೂರ್ತಿ ಅವರು ನ್ಯೂಜಿಲೆಂಡ್ ನಲ್ಲಿಯೂ ಸಹಾ ಕ್ರಿಕೆಟ್ಟಿಗೆ ಉತ್ತಮವಾದ ಪ್ರೋತ್ಸಾಹವಿದ್ದದ್ದರಿಂದ ವಿಲ್ಲಿಂಗ್ಟನ್ನಿನಲ್ಲಿ ಹಟ್ ಹಾಕ್ಸ್ ಎಂಬ ಕ್ರಿಕೆಟ್ ಕ್ಲಬ್‌ವೊಂದನ್ನು ಆರಂಭಿಸಿ ಅಲ್ಲಿನ ಪುಟ್ಟ ಮಕ್ಕಳಿಗೆ ತರಭೇತಿಯನ್ನು ನೀಡುತ್ತಲೇ ತಮ್ಮ ಕ್ರಿಕೆಟ್ ದಾಹವನ್ನು ನೀಗಿಸಿಕೊಳ್ಳುತ್ತಿರುತ್ತಾರೆ. 18 ನವೆಂಬರ್ 1999 ರಂದು ರವೀಂದ್ರ ದಂಪತಿಗಳ ಬಾಳಿನಲ್ಲಿ ಮಗನೊಬ್ಬ ಆಗಮನವಾಗುತ್ತದೆ.
ತಮ್ಮ ಮುದ್ದಿನ ಮಗನಿಗೆ ರಚಿನ್ ಎಂದು ವಿಭಿನ್ನವಾಗಿ ಹೆಸರಿಟ್ಟಾಗ ಹುಬ್ಬೇರಿಸಿದವರಿಗೇನು ಕಡಿಮೆ ಇಲ್ಲ, ಆದರೆ ಆ ಹೆಸರಿನ ಹಿಂದಿನ ಗೂಢಾರ್ಥ ಮತ್ತು ಭಾವಾರ್ಥಗಳನ್ನು ತಿಳಿದ ನಂತರ ಎಲ್ಲರೂ ಸಮಾಧಾನ ಪಟ್ಟುಕೊಳ್ಳುತ್ತಾರೆ. ಹೌದು, ರವೀಂದ್ರ ಕೃಷ್ಣಮೂರ್ತಿಗಳು ಕರ್ನಾಟಕ ಮತ್ತು ಭಾರತ ಕ್ರಿಕೆಟ್ ತಂಡದ ದಂತಕಥೆಯಾದ ರಾಹುಲ್ ದ್ರಾವಿಡ್ ಮತ್ತು ಕ್ರಿಕೆಟ್ ದೇವರು ಎಂದೇ ಕರೆಸಿಕೊಳ್ಳಲ್ಪಡುವ ಸಚಿನ್ ತೆಂಡೂಲ್ಕರ್ ಅವರ ಅಪ್ಪಟ ಅಭಿಮಾನಿ. ಹಾಗಾಗಿ ರವೀ ಅವರು ರಾಹುಲ್ ದ್ರಾವಿಡ್ ಹೆಸರಿನ “ರ” (RA) ಮತ್ತು ಸಚಿನ್ ಹೆಸರಿನ “ಚಿನ್” (CHIN) ಎರಡನ್ನೂ ಸೇರಿಸಿ ರಚಿನ್ ಎಂದು ಹೆಸರಿಟ್ಟಿದ್ದರು, ಈಗ ಅದೇ ರಚಿನ್ ಬೆಳೆದು ದೊಡ್ಡವನಾಗಿ ನ್ಯೂಜಿಲೆಂಡ್ ತಂಡಕ್ಕೆ ಆಯ್ಕೆಯಾಗಿ ಭಾರತ ತಂಡದ ಪರ ಅದರಲ್ಲೂ ಭಾರತದಲ್ಲೇ ಸರಣಿಯನ್ನು ಆಡುತ್ತಿರುವುದು ಹೆಚ್ಚಿನ ವಿಶೇಷವಾಗಿದೆ.
ಮನೆಯಲ್ಲಿ ಕ್ರಿಕೆಟ್ ವಾತಾವರಣವಿದ್ದ ಕಾರಣ ರಚಿನ್ ಸಹಾ ತನ್ನ ತಂದೆಯಂತೆಯೇ ಕ್ರಿಕೆಟ್ಟಿನಲ್ಲಿ ಆಸಕ್ತಿ ಬೆಳಸಿಕೊಂಡು ತನ್ನ ತಂದೆಯ ಹಾದಿಯಲ್ಲೇ ಸಾಗಿದರು. ಬಾಲ್ಯದಿಂದಲೇ ತಮ್ಮದೇ ಆದ ಹಟ್ ಹಾಕ್ಸ್ ಕ್ಲಬ್ಬಿನಲ್ಲಿಯೇ ತರಭೇತಿಯನ್ನು ಆರಂಭಿಸಿ ನಂತರ ನ್ಯೂಜಿಲೆಂಡ್ನಲ್ಲಿ ಪ್ರತಿಷ್ಠಿತ ಕ್ರಿಕೆಟ್ ಕ್ಪಬ್ಬುಗಳಲ್ಲಿ ಟ್ರೈನಿಂಗ್ ಪಡೆಯಲು ಆರಂಭಿಸಿದರು. ಬೇಸಿಗೆ ಸಮಯ ಚಿಕ್ಕಾಗಲೆಲ್ಲಾ ಭಾರತಕ್ಕೆ ಬಂದು ಇಲ್ಲಿಯೂ ಸಹಾ ಕ್ರಿಕೆಟ್ ಅಭ್ಯಾಸ ಮಾಡುತ್ತಾ ಸಾಂಪ್ರದಾಯಿಕ ಎಡಗೈ ಸ್ಪಿನ್ನರ್ ಆಗಿ ಮತ್ತು ಮಧ್ಯಮ ಕ್ರಮಾಂಕದಲ್ಲಿ ಹೊಡೀ ಬಡೀ ಎನ್ನುವ ಎಡಗೈ ದಾಂಡಿಗರಾಗಿ ರೂಪುಗೊಂಡಿದ್ದಲ್ಲದೇ, ತಮ್ಮ ಪ್ರತಿಭೆಯಿಂದಾಗಿ ರಚಿನ್ ಕಿವೀಸ್ ಕಿರಿಯರ ತಂಡದಲ್ಲಿ ಸ್ಥಾನ ಪಡೆದು 2016ರ ಮತ್ತು 2018 ರ ಅಂಡರ್ -19 ಕ್ರಿಕೆಟ್ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಪ್ರತಿನಿಧಿಸಿ ತಕ್ಕಮಟ್ಟಿಗೆ ಯಶಸ್ಸನ್ನು ಗಳಿಸುತ್ತಾರೆ. ಈಗಾಗಲೇ ತಿಳಿಸಿದಂತೆ ತಮ್ಮ ತಂದೆಯವರ ಒಡನಾಡಿ ಜಾವಗಲ್ ಶ್ರೀನಾಥ್ ಮತ್ತು ಅರುಣ್ ಕುಮಾರ್ ಅವರ ಜೊತೆ ಸಂಪರ್ಕದಲ್ಲಿ ಇದ್ದು ಅವರಿಂದಲು ಆಗ್ಗಾಗ್ಗೆ ಕ್ರಿಕೆಟ್ ಸಲಹೆಗಳನ್ನು ಪಡೆದು ಉತ್ತಮ ಆಟಗಾರನಾಗಿ ರೂಪುಗೊಳ್ಳುತ್ತಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಆಂಧ್ರದ ಅನಂತಪುರದ ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್ ಮತ್ತು ರವೀಂದ್ರ ಅವರ ಹಟ್ ಹಾಕ್ಸ್ ಕ್ಲಬ್ ನಡುವಿನ ಒಪ್ಪಂದದಂತೆ ರಚಿನ್ ರವೀಂದ್ರ ಪ್ರತಿ ವರ್ಷವೂ ಭಾರತದಲ್ಲಿ ಈ ಕ್ಲಬ್ಬಿಗ್ಗೆ ಬಂದು ತರಭೇತಿ ಪಡೆಯುತ್ತಿರುವುದಲ್ಲದೇ ಆ ತಂಡದ ಪರವಾಗಿ ಕ್ರಿಕೆಟ್ ಆಡುತ್ತಿರುವುದು ವಿಶೇಷವಾಗಿದೆ. ರಚಿನ್ ಒಬ್ಬ ಭರವಸೆಯ ಯುವ ಕ್ರಿಕೆಟಿಗನಾಗಿದ್ದು ಎಡಗೈ ಬ್ಯಾಟರ್ ಮತ್ತು ಎಡಗೈ ಸ್ಪಿನ್ ಆಗಿ ದೀರ್ಘ ಕಾಲದ ವರೆಗೂ ಮಿಂಚುವ ಭರವಸೆ ಇದೆ ಎಂದು ಆಂಧ್ರಪ್ರದೇಶ ಕ್ರಿಕೆಟ್ ಅಕಾಡೆಮಿಯ ಕೋಚ್‌ಗಳಲ್ಲಿ ಒಬ್ಬರಾದ ಖತೀಬ್ ಸೈಯದ್ ಶಹಾಬುದ್ದೀನ್ ಅವರು ಹೇಳುತ್ತಾರೆ.
ಇಷ್ಟೆಲ್ಲಾ ಭರವಸೆಯನ್ನು ಮೂಡಿಸಿದ್ದ ರಚಿನ್ ಕಳೆದ ಸೆಪ್ಟೆಂಬರ್ನಲ್ಲಿ ಬಾಂಗ್ಲಾದೇಶದ ವಿರುದ್ದದ ಪಂದ್ಯದಲ್ಲಿ ಮೊದಲ ಬಾರಿಗೆ ನ್ಯೂಜಿಲೆಂಡ್ ಹಿರಿಯರ ತಂಡದಲ್ಲಿ ಅವಕಾಶ ಲಭಿಸಿತ್ತದೆ. ಇದುವರೆವಿಗೂ ನ್ಯೂಜಿಲೆಂಡ್ ಪರ 6 ಟಿ20 ಪಂದ್ಯಗಳಲ್ಲಿ 6 ವಿಕೆಟ್ ಪಡೆದಿರುವುದಲ್ಲದೇ ಕೆಳಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಸಿಕ್ಕ ಅವಕಾಶವನ್ನು ಉಪಯೀಗಿಸಿಕೊಂಡು ಇದುವರೆವಿಗೂ 47 ರನ್ ಬಾರಿಸುವ ಮೂಲಕ ಭರವಸೆಯ ಆಲ್ರೌಂಡರ್ ಆಗುವ ಲಕ್ಷಣವನ್ನು ಸಾಭೀತು ಪಡಿಸಿದ್ದಾನೆ. ಸಚಿನ್ ತೆಂಡೂಲ್ಕರ್ ಅವರನ್ನು ತನ್ನ ಬ್ಯಾಟಿಂಗ್ ಆರಾಧ್ಯ ದೈವ ಎಂದು ಉಲ್ಲೇಖಿಸಿರುವ ರಚಿನ್ ಅವರ ಆಟವನ್ನು ನೋಡುತ್ತಲೇ ಬೆಳೆದ ನನಗೆ ಆಟವನ್ನು ಮುಂದುವರೆಸುತ್ತಲೇ ಹೋದಂತೆ ಸಚಿನ್ ಅವರ ಬಗ್ಗೆ ನನ್ನ ಅಭಿಮಾನವೂ ಬೆಳೆಯಿತು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಭಾರತದ ವಿರುದ್ಧ ಮೊದಲ ಟಿ೨೦ ಪಂದದಲ್ಲಿ ನ್ಯೂಜಿಲೆಂಡ್ ಪರ 6ನೇ ಕ್ರಮಾಂಕದಲ್ಲಿ ಅಂತಿಮ ಓವರ್ನಲ್ಲಿ ಕಣಕ್ಕಿಳಿದ ಎಡಗೈ ಆಟಗಾರ ರಚಿನ್ 7 ರನ್ಗಳಿಸಿದ್ದಾಗ ಮೊಹಮ್ಮದ್ ಸಿರಾಜ್ ಎಸೆತದಲ್ಲಿ ಬೌಲ್ಡ್ ಆಗಿ ನಿರಾಸೆ ಮೂಡಿಸಿದರು. ತಂಡದಲ್ಲಿ ಸಾಕಷ್ಟು ಆಲ್ರೌಂಡರ್ಗಳು ಇರುವ ಕಾರಣ ಬೋಲಿಂಗ್ ಮಾಡಲು ಅವಕಾಶ ಸಿಗದಿದ್ದರೂ ಅತ್ಯುತ್ತಮವಾದ ಕ್ಷೇತ್ರ ರಕ್ಷಣೆ ಮಾಡುವ ಮೂಲಕ ಪಂದ್ಯದುದ್ದಕ್ಕೂ ಗಮನ ಸೆಳೆಯುವ ಮೂಲಕ ಅರೇ ಯಾರೀ ರಚಿನ್ ಎಂಬ ಕುತೂಹಲ ಮೂಡಿಸಿ ಅವರ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾಗ, ಆತ ನಮ್ಮ ಹೆಮ್ಮೆಯ ಕನ್ನಡಿಗ ಎಂದು ತಿಳಿದ ನಂತರವೇ ಈ ಲೇಖನಕ್ಕೆ ಪ್ರೇರಣಾದಾಕನಾಗಿರುವುದು ಗಮನಾರ್ಹ.
ಒಟ್ಟಿನಲ್ಲಿ ಇದುವರೆವಿಗೂ ನ್ಯೂಜಿಲೆಂಡ್ ಕ್ರಿಕೆಟ್ ತಂಡದಲ್ಲಿ ಹಲವಾರು ಭಾರತೀಯ ಮೂಲದ ಆಟಗಾರರನ್ನು ನೋಡಿದ್ದ ನಮಗೆ ಇದೀಗ ಬೆಂಗಳೂರು ಮೂಲದ ಕನ್ನಡಿಗನೇ ನ್ಯೂಜಿಲೆಂಡ್ ತಂಡದಲ್ಲಿ ಸ್ಥಾನ ಪಡೆದಿರುವುದು ನಿಜಕ್ಕೂ ಹೆಮ್ಮೆಯ ವಿಷಯವೇ ಸರಿ. ಕ್ರಿಕೆಟ್ ಆಟಗಾರರಾಗ ಬೇಕು ಎಂದು ಕನಸನ್ನು ಕಂಡಿದ್ದ ರವೀಂದ್ರ ಅವರಿಗೆ ಇದೀಗ ಅವರ ಮಗ ಅಂತರಾಷ್ಟ್ರೀಯ ಆಟಗಾರನಾಗಿ ಈಡೇರಿಸುತ್ತಿರುವುದು ಅದರಲ್ಲೂ ನ್ಯೂಜಿಲೆಂಡ್ ಪರ ನಮ್ಮೂರಿನ ಹುಡುಗ ಆಡುತ್ತಿದ್ದಾನೆ ಎಂಬುದೇ ಪ್ರತಿಯೊಬ್ಬ ಕನ್ನಡಿಗರಿಗೂ ವಿಶೇಷವಾಗಿದೆ. ಎಲ್ಲೇ ಇರು ಹೇಗೇ ಇರು, ಎಂದೆದಿಗೂ ನೀ ಕನ್ನಡವಾಗಿರು. ಕನ್ನಡವೇ ಸತ್ಯಾ.. ಕನ್ನಡವೇ ನಿತ್ಯ ಎನ್ನುವಂತೆ ತನ್ನ ಪ್ರತಿಭೆಯ ಮೂಲಕ ವಿಶ್ವ ಕ್ರಿಕೆಟ್ಟಿನಲ್ಲಿ ಕನ್ನಡದ ಕಂಪನ್ನು ಹರಡುತ್ತಿರುವ ರಚಿನ್ ರವೀಂದ್ರ ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.
ಏನಂತೀರೀ?
ನಿಮ್ಮವನೇ ಉಮಾಸುತ