ಸ್ನೇಕ್ ಶ್ಯಾಮ್

sh3ಮನುಷ್ಯ ಬುದ್ದಿವಂತನಾಗುತ್ತಾ ಹೋದಂತೆಲ್ಲಾ ನಾಗರಿಕತೆಯು ಬೆಳೆಯುತ್ತಾ ಹೋಗಿ ಅರಣ್ಯಗಳೆಲ್ಲಾ ನಾಶವಾಗಿ ಒಂದೊಂದೇ ಹಳ್ಳಿ ಮತ್ತು ಪಟ್ಟಣಗಳಾಗಿ ಮಾರ್ಪಾಡುತ್ತಾ ಹೋದಂತೆಲ್ಲಾ ಆರಣ್ಯವನ್ನೇ ಆಶ್ರಯಿಸಿದ್ದ ವನ್ಯಮೃಗಗಳು, ಸರೀಸೃಪಗಳು ಮತ್ತು ಪಶು ಪಕ್ಷಿಗಳು ದಿಕ್ಕಾಪಾಲಾಗಿವೆ. ಹಾಗಾಗಿಯೇ ಇಂದು ಅನೇಕ ಕಡೆಗಳಲ್ಲಿ ಹಾವುಗಳು ಮನೆಯ ಒಳಗೆ ಬರುವ ಉದಾಹರಣೆಗಳು ಇದ್ದು, ಹಾಗೆ ಹಾವು ಮನೆಯೊಳಗೆ ಬಂದೊಡನೆಯೇ ಅದು ಯಾವ ರೀತಿಯ ಹಾವು ವಿಷಪೂರಿತವೋ? ಇಲ್ಲಾ ವಿಷವಲ್ಲದ್ದೋ ಎಂದು ಯಾವುದನ್ನೂ ಯೋಚಿಸಿದೆ ಬಹಳಷ್ಟು ಮಂದಿ ಅದನ್ನು ಹೊಡೆದು ಸಾಯಿಸಲು ಪ್ರಯತ್ನಿಸುವವರೇ ಹೆಚ್ಚಾಗಿರುವ ಈ ಕಾಲದಲ್ಲಿ ಕಳೆದ ಮೂರ್ನಾಲ್ಕು ದಶಕಗಳಿಂದಲೂ ಪರಿಸರ ಪ್ರೇಮಿಯಾಗಿ ನಗರಪ್ರದೇಶಗಳಲ್ಲಿ ಕಾಣಸಿಗುವ ಹಾವುಗಳನ್ನು ನಾಜೂಕಿನಿಂದ ಹಿಡಿದು ಅದನ್ನು ಸುರಕ್ಷಿತವಾಗಿ ಅರಣ್ಯಪ್ರದೇಶಕ್ಕೆ ಬಿಟ್ಟು ಬರುವ ಕಾಯಕವನ್ನು ನಿಸ್ವಾರ್ಥವಾಗಿ ಮಾಡಿಕೊಂಡು ಬರುತ್ತಿರುವ ಶ್ರೀ ಎಮ್. ಎಸ್ ಬಾಲಸುಬ್ರಹ್ಮಣ್ಯಂ ಎಲ್ಲರ ಪ್ರೀತಿಯ ಸ್ನೇಕ್ ಶ್ಯಾಂ ಅವರ ಪರಿಚಯವನ್ನು ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ

ಸ್ನೇಕ್ ಶ್ಯಾಮ್ ಅವರ ಪೂರ್ವಜರು ಮೂಲತಃ ಮೈಸೂರಿನ ಕೃಷ್ಣರಾಜನಗರದರಾದರೂ ಅವರ ತಂದೆ M.R.ಸುಬ್ಬರಾವ್ ಮತ್ತು ತಾಯಿ A. ನಾಗಲಕ್ಷ್ಮಿ ಮಿರ್ಲೆ ಅವರು ಮೈಸೂರಿನಲಲ್ಲೇ ನೆಲಸಿರುವ ಕಾರಣ 1967ರಲ್ಲಿ ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಶ್ಯಾಮ್ ಜನಿಸುತ್ತಾರೆ. ಹೇಳೀ ಕೇಳಿ ಅವರದ್ದು ಸಂಪದಾಯಸ್ಥ ಕುಟುಂಬವಾದರು ಶ್ಯಾಂ ಬಾಲ್ಯದಿಂದಲೂ ಓದಿಗಿಂತಲೂ ಇತರೇ ಚಟುವಟಿಕೆಗಳಲ್ಲಿಯೇ ಹೆಚ್ಚು ಆಸಕ್ತಿಯುಳ್ಳ ಶ್ಯಾಂ ಬಹಳ ಚುರುಕಿನ ಮತ್ತು ಧೈರ್ಯಶಾಲಿಯ ಹುಡುಗ ಎನಿಸಿಕೊಂಡಿರುತ್ತಾನೆ. ಪಬ್ಲಿಕ್ ಟಿವಿಯ ಸಂಸ್ಥಾಪಕ ಮತ್ತು ಖ್ಯಾತ ಪತ್ರಕರ್ತರಾದ ಶ್ರೀ H R ರಂಗನಾಥ್ ಅವರು ಶ್ಯಾಂ ಆವರ ಬಾಲ್ಯ ಸ್ನೇಹಿತ ಎನ್ನುವುದು ಗಮನಾರ್ಹವಾಗಿದೆ. ಚಿಕ್ಕಹುಡುಗನಿದ್ದಾಗಲಿಂದಲೂ ಮರ ಹತ್ತುವುದು ಬೇಲಿ ನೆಗೆಯುವುದು, ನೀರು ಕಂಡಲ್ಲಿ ಈಜಿಗೆ ಬೀಳುವುದು ಶ್ಯಾಂ ಅವರ ನೆಚ್ಚಿನ ಹವ್ಯಾಸ ಅದರ ಜೊತೆಗೇ ತೆಂಗಿನಗರಿಯನ್ನು ಸೀಳಿದ ಕಡ್ಡಿಗೆ ಜೀರುಗುಣಿಕೆ ಹಾಕಿ ಓತಿಕ್ಯಾತ ಹಿಡಿಯುವುದಾಲ್ಲಿ ಶ್ಯಾಮ್ ಎತ್ತಿದ ಕೈ.

sn6ಹೀಗೆ ಬೇಲಿಗಳ ಮಧ್ಯೆದಲ್ಲಿ ಅಡಗಿ ಕುಳಿತಿರುತ್ತಿದ್ದ ಓತಿಕ್ಯಾತಗಳನ್ನು ಗೆಳೆಯರೊಂದಿಗೆ ಹಿಡಿಯುತ್ತಿದ್ದ ಸಂದರ್ಭದಲ್ಲಿ ಅಚಾನಕ್ಕಾಗಿ ಹಾವೊಂದು ಕಾಣಿಸಿಕೊಂಡಾಗ, ಅವರ ಗೆಳೆಯರಲ್ಲಿ ಅನೇಕರು ಎದ್ದೆನೋ ಬಿದ್ದೇನೋ ಎಂದು ಓಡಿ ಹೋದರೆ, ಇನ್ನೂ ಕೆಲವರು ಆ ಹಾವಿನತ್ತ ಕೈಗೆ ಸಿಕ್ಕ ವಸ್ತುಗಳಲ್ಲಿ ಹೊಡೆದು ಕೊಂದು ಹಾಕಿ ಅಲ್ಲ್ ಇದ್ದ ಪುರ್ಲೆಗಳನ್ನು ಒಟ್ಟು ಗೂಡಿಸಿ ಬೆಂಕಿಹಾಕಿ ಹಾವನ್ನು ಸುಟ್ಟು ಹಾಕಿದಾಗ ಬಾಲಕ ಶ್ಯಾಂಗ್ ಬಹಳ ದುಖಃವಾಗುತ್ತದೆ. ಹಾವುಗಳು ಇರಬೇಕಾದ ಜಾಗದಲ್ಲಿ ನಾವು ವಾಸಿಸುತ್ತಾ ಹೀಗೆ ಅವುಗಳನ್ನು ಬಡಿದು ಕೊಂದು ಹಾಕುವುದು ಸರಿಯಲ್ಲ ಎಂದೆಣಿಸಿದ 10-12 ವರ್ಷದ ಹುಡುಗ ಅಂದಿನಿಂದ ಹಾವುಗಳನ್ನು ಚಾಕಚಕ್ಯತೆಯಿಂದ ಹಿಡಿದು ಗೋಣೀ ಚೀಲದಲ್ಲಿ ಹಾಕಿಕೊಂಡು ಅವುಗಳನ್ನು ದೂರದ ಸುರಕ್ಷಿತವಾದ ಅರಣ್ಯ ಪ್ರದೇಶಗಳಲ್ಲಿ ಬಿಟ್ಟು ಬರುವ ಹವ್ಯಾಸವನ್ನು ರೂಡಿಸಿಕೊಳ್ಳುತ್ತಾನೆ.

1981ರಲ್ಲಿ ಶ್ಯಾಮ್ ಮೊತ್ತ ಮೊದಲ ಬಾರಿಗೆ ಹಾವನ್ನು ಹಿಡಿದು ಕಾಡಿಗೆ ಬಿಡುವ ಕೆಲಸವನ್ನು ಅವರು ಆರಂಭಿಸಿದ ನಂತರ ಅವರ ಸುತ್ತಮುತ್ತಲಿನ ಪ್ರದೇಶದ ಯಾರದ್ದೇ ಮನೆಗಳಲ್ಲಿ ಹಾವು ಕಂಡು ಬಂದರೂ ಶ್ಯಾಂ ಅವರನ್ನು ಸಂಪರ್ಕಿಸಿದಾಗ ಕೊಂಚವೂ ಬೇಸರವಿಲ್ಲದೇ ತಮ್ಮದೇ ಸ್ವಂತ ಖರ್ಚಿನಲ್ಲಿ ಆ ಸ್ಥಳಕ್ಕೆ ಹೋಗಿ ಆರಂಭದಲ್ಲಿ ಸ್ಥಳೀಯವಾಗಿ ಸಿಗುವ ಬೆತ್ತ ಇಲ್ಲವೇ ಕೋಲುಗಳ ಸಹಾಯದಿಂದ ಹಿಡಿಯುತ್ತಿದ್ದವರು ನಂತರದ ದಿನಗಳಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತೆ ಸಾಮಾನ್ಯ ತಂತಿಯ ಕೊಂಡಿ, ಹಳೆಯ ಕಿತ್ತುಹೋದ ಬ್ಯಾಡ್ಮಿಂಟನ್ ರಾಕೆಟ್ಗಳನ್ನು ಬಳಸಿ ಸುಲಭವಾಗಿ ಮತ್ತು ಸುರಕ್ಶಿತವಾಗಿ ಹಾವುಗಳಿಗೆ ಕೊಂಚವೂ ಏಟಾಗಂತೆ ಹಿಡಿದು ಜೊತೆಗೆ ತಂದಿದ್ದ ಚೀಲಾ ಅಥವಾ ಡಬ್ಬದೊಳಗೆ ಹಾಕಿಕೊಂಡು ನಂತರದ ದಿನಗಳಲ್ಲಿ ಅವುಗಳನ್ನು ಸುರಕ್ಷಿತವಾಗಿ ಊರಾಚೆಯ ಕಾಡಿನಲ್ಲಿ ಬಿಟ್ಟುಬರುವುದನ್ನು ಗಮನಿಸಿದ ಸಾರ್ವಜನಿಕರು ಅವರನ್ನು ಸ್ನೇಕ್ ಶ್ಯಾಂ ಎಂದೇ ಕರೆಯಲಾರಂಭಿಸಿ ಅದೇ ಹೆಸರಿನಲ್ಲಿಯೇ ಮೈಸೂರಿನಾದ್ಯಂತ ಜನಪ್ರಿಯರಾಗಿ ಹೋದರು.

ಆರಂಭದಲ್ಲಿ ಅವರು ಹಿಡಿದ ಹಾವುಗಳಿಗೆ ಲೆಖ್ಖವಿಲ್ಲದಿದ್ದರೂ 1997ರಿಂದ ಈಚೆಗೆ ಅವರು ಹಾವು ಹಿಡಿಯಲು ಹೋಗುವ ಕಡೆಗೆಲ್ಲಾ ತಮ್ಮೊಂದಿಗೆ ರಿಜಿಸ್ಟರ್ ಒಂದನ್ನು ಹಿಡಿದುಕೊಂಡು ಹೋಗಿ ಹಾವು ಹಿಡಿದ ಬಳಿಕ ತಾವು ಹಿಡಿದ ಹಾವಿನ ವಿವರ, ಎಲ್ಲಿ ಹಿಡಿದಿದ್ದು ಎಂದು ಹಿಡಿದಿದ್ದು ಎಂಬೆಲ್ಲಾ ವಿವರಗಳನ್ನು ನಮೂದಿಸಿ ಆ ಮನೆಯವರ ಸಹಿ ಪಡೆಯುವ ಮುಖಾಂತರ ಅದಕ್ಕೊಂದು ಅಧಿಕೃತ ದಾಖಲೆಯನ್ನು ಪಟ್ಟಿ ಮಾಡುತ್ತಾ ಹೋಗಿರುವುದು ಅಭಿನಂದನಾರ್ಹವಾಗಿದೆ. ಮೈಸೂರಿನ ಯಶೋದಾನಗರದ ಲೋಕೇಶ್ ಎಂಬುವರ ನೀರಿನ ಸಂಪಿನಲ್ಲಿದ್ದ ನಾಗರಹಾವೊಂದನ್ನು ಹಿಡಿಯುವ ಮೂಲಕ 30 ಸಾವಿರ ಹಾವುಗಳನ್ನು ಹಿಡಿದ ಖ್ಯಾತಿ ಪಡೆದಿದ್ದ ಶ್ಯಾಂ ಈಗ ಅಧಿಕೃತವಾಗಿಯೇ ಸುಮಾರು 40000 ಕ್ಕೂ ಅಧಿಕ- ಹಾವುಗಳನ್ನು ಹಿಡಿದಿರುವ ಶ್ಯಾಂ ಇನ್ನು ಆರಂಭದಲ್ಲಿ ಹಿಡಿದಿರುವ ಹಾವುಗಳನ್ನೂ ಸೇರಿಸಿದರೆ ಖಂಡಿತವಾಗಿಯೂ 50000/- ಹಾವುಗಳನ್ನು ಸಂರಕ್ಷಿಸಿರುವ ಖ್ಯಾತಿ ಶ್ಯಾಂ ಅವರದ್ದಾಗಿದೆ.

sn7ಇವರು ಕೇವಲ ಹಾವು ಹಿಡಿಯುವುದಷ್ಟೆ ಅಲ್ಲದೇ, ಅದರ ಜೊತೆಯಲ್ಲಿ ಹಾವಿನ ಬಗ್ಗೆ ಜನರಲ್ಲಿರುವ ಮೂಢನಂಬಿಕೆ ಅಥವಾ ತಪ್ಪುಕಲ್ಪನೆಗಳನ್ನು ಹೋಗಲಾಡಿಸುವ ಕಾರ್ಯವನ್ನೂ ಮಾಡುತ್ತಾರೆ. ಎಲ್ಲಾ ಹಾವುಗಳೂ ವಿಷಕಾರಿಯಲ್ಲ ಎಂದು ತೋರಿಸಿ ಕೆಲವೊಮ್ಮೆ ಆಲ್ಲಿರುವವರ ಕೈಗೆ ಹಿಡಿದಿರುವ ಹಾವನ್ನು ನೀಡುವ ಮೂಲಕ ಅವರಲ್ಲಿದ್ದ ಭಯವನ್ನೂ ನಿವಾರಿಸುತ್ತಾರೆ. ಸಮಯ ಸಿಕ್ಕಾಗಲೆಲ್ಲಾ ಶಾಲಾ ಮಕ್ಕಳಿಗೆ ಹಾವಿನ ಬಗ್ಗೆ ಉಪನ್ಯಾಸ ನೀಡಿ ಅವರಲ್ಲಿರುವ ಆತಂಕವನ್ನು ದೂರ ಮಾಡಿ ಧೈರ್ಯ ತುಂಬುವ ಕೆಲಸವನ್ನು ಕೂಡ ಮಾಡುತ್ತಾ ಬಂದಿದ್ದಾರೆ. ಹೀಗಾಗಿ ಮೈಸೂರಿನಲ್ಲಿ ಎಲ್ಲಿಯೇ ಹಾವು ಕಾಣಿಸಲಿ ತಕ್ಷಣಕ್ಕೆ ನೆನಪಿಗೆ ಬರುವುದು ಸ್ನೇಕ್ ಶ್ಯಾಮ್ ಆವರದ್ದಾಗಿದ್ದು, ಮೈಸೂರಿನಲ್ಲಿ ಅವರ ಹೆಸರನ್ನು ಕೇಳದವರೇ ವಿರಳ ಎಂದರೂ ಅತಿಶಯವಲ್ಲ.

ಹಾವು ಹಿಡಿಯುವುದು ಅವರ ಪ್ರವೃತ್ತಿಯಾದರೇ, ಜೀವನೋಪಾಯಕ್ಕಾಗಿ ಶಾಲಾ ಮಕ್ಕಳನ್ನು ತಮ್ಮ ಸ್ವಂತ ವಾಹನದಲ್ಲಿ ಶಾಲೆಗೆ ಬಿಡುವ ವೃತ್ತಿಯನ್ನು ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಇಷ್ಟು ಹಾವುಗಳನ್ನು ಹಿಡಿದರೂ ಎಲ್ಲಿಯೂ ಯಾರ ಬಳಿಯೂ ಹಣವನ್ನು ಕೇಳದೇ ಇರುವುದು ಅವರ ಹೆಗ್ಗಳಿಕೆಯಾಗಿದೆ. ಇತ್ತೀಚೆಗೆ ಕೆಲವರು ಬಲವಂತವಾಗಿ ಅವರ ಪರಿಶ್ರಮಕ್ಕಲ್ಲದಿದ್ದರೂ ಅವರ ವಾಹನದ ಇಂಧನದ ವೆಚ್ಚಕ್ಕೆಂದು ಕೈಲಾದ ಮಟ್ಟಿಗಿನ ಹಣವನ್ನು ಕೊಟ್ಟಲ್ಲಿ ಸಂಕೋಚದಿಂದ ಪ್ರೀತಿಪೂರ್ವಕ ಒತ್ತಾಯಕ್ಕೆ ಬಿದ್ದು ಸ್ವೀಕರಿಸುವಂತಾಗಿದೆ. ಇತ್ತೀಚೆಗೆ, ಮೈಸೂರಿನ ಅಧಿಕಾರಿಗಳು ಶ್ಯಾಮ್ ಅವರ ದೂರವಾಣಿ ಬಿಲ್‌ಗಳನ್ನು ಪಾವತಿಸುವ ಮೂಲಕ ಅವರ ಕೆಲವು ವೆಚ್ಚಗಳನ್ನು ಭರಿಸಲು ಮುಂದಾಗಿದ್ದಾರೆ.

ತರಬೇತಿ ಪಡೆದ ಹರ್ಪಿಟಾಲಜಿಸ್ಟ್ (ಉರಗತಜ್ಞ) ಅಲ್ಲದಿದ್ದರೂ, ಶ್ಯಾಂ ತಮ್ಮ ಅನುಭವದ ಮೂಲಕ ಹಾವುಗಳನ್ನು ರಕ್ಷಿಸಿ ಅವುಗಳಿಗೆ ಸುರಕ್ಷಿತ ಪ್ರದೇಶಗಳಲ್ಲಿ ಪುನರ್ವಸತಿ ಮಾಡುವುದಲ್ಲದೇ, ಹಾವುಗಳ ಬಗ್ಗೆ ಸಾರ್ವಜನಿಕರಿಗೆ ಸುಲಭವಾದ ಶಿಕ್ಷಣ ನೀಡುತ್ತಾ ಬಂದಿದ್ದಾರೆ. ಹಾವು ಕಡಿತಕ್ಕೆ ಒಳಗಾದವರಿಗೆ ಗಾಭರಿಗೆ ಒಳಗಾಗದ ತಕ್ಷಣವೇ ಪ್ರಥಮ ಚಿಕಿತ್ಸೆ ನೀಡುವ, ಮತ್ತು ಕಚ್ಚಿನದ ಹಾವಿನ ಜಾತಿಯನ್ನು ಗುರುತಿಸುವ ತಿಳುವಳಿಕೆಯನ್ನು ನೀಡುವ ಮೂಲಕ ಹಾವಿನ ಬಗ್ಗೆ ಸಾರ್ವಜನಿಕರಿಗೆ ಭಯವನ್ನು ನೀಗಿಸುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ.

ತಮ್ಮ ಹಿರಿಯರಿಂದ ಕೇಳಿ ತಿಳಿದಿರುವುದಲ್ಲದೇ, ತಮ್ಮ ಅಪಾರವಾದ ಅನುಭವದಿಂದ ಹಾವುಗಳ ಬಗೆಗಿನ ಅವರ ಜ್ಞಾನ ಹೆಚ್ಚಾಗಿದ್ದು, 28-30 ಸ್ಥಳೀಯ ಜಾತಿಯ ಹಾವುಗಳನ್ನು ಅವರು ಸುಲಭವಾಗಿ ಗುರುತಿಸಬಲ್ಲವರಾಗಿದ್ದಾರೆ. ಉರಗ ತಜ್ಞರಾದ ಶ್ರೀ ರೊಮುಲಸ್ ವಿಟೇಕರ್, ಜೆ.ಸಿ. ಡೇನಿಯಲ್ ಅಲ್ಲದೇ ಮೈಸೂರು ವಿಶ್ವವಿದ್ಯಾನಿಲಯದ ಅಧ್ಯಾಪಕರುಗಳ ಜೊತೆ ಮಾತು ಕಥೆಯಿಂದಲೂ ಮತ್ತು ಅವರ ಕೃತಿಗಳನ್ನು ಓದುವ ಮೂಲಕ ತಮ್ಮ ಜ್ಞಾನವನ್ನು ಇಮ್ಮಡಿಗೊಳಿಸಿಕೊಂಡಿದ್ದಾರೆ. ಶ್ಯಾಮ್ ಅವರು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವ ವಾಹನದ ಮೇಲೂ ಹಾವುಗಳ ವರ್ಣಚಿತ್ರಗಳನ್ನು ಬಿಡಿಸುವುದರ ಮೂಲಕ ಹಾವುಗಳ ಬಗ್ಗೆ ಅಪಾರದ ಅಭಿಮಾನವನ್ನು ತೋರಿಸಿರುವುದಲ್ಲದೇ, ಹಾವುಗಳು ಮನುಷ್ಯರಂತೆ ವಿಷಕಾರಿಯಲ್ಲ ಹಾಗಾಗಿ ಅವರ ಬಗ್ಗೆ ಕಾಳಜಿ ವಹಿಸಿ ಎಂಬ ಘೋಷ ವಾಕ್ಯವನ್ನೂ ಬರೆಸಿಕೊಂಡಿದ್ದಾರೆ

sn4ಶ್ಯಾಮ್ ಅವರ ಈ ಖ್ಯಾತಿ ಕೇವಲ ಮೈಸೂರಿಗಷ್ಟೇ ಸೀಮಿತವಾಗಿರದೇ ವ್ಯಾಪಕವಾಗಿ ಗುರುತಿಸಲ್ಪಟ್ಟ ಕಾರಣ, ನ್ಯಾಷನಲ್ ಜಿಯೋಗ್ರಾಫಿಕ್ ಛಾನೆಲ್ ತನ್ನ ಕ್ರೋಕ್ ಕ್ರಾನಿಕಲ್ಸ್ ಸ್ನೇಕ್ಸ್ ಕರ್ಮ ಆಕ್ಷನ್, ಎಂಬ ಎಂಬ ಸಾಕ್ಷ್ಯ ಚಿತ್ರವನ್ನು ಪ್ರಸಾರ ಮಾಡಿದ್ದರೇ, ಡಿಸ್ಕವರಿ ಚಾನೆಲ್‌ನಲ್ಲಿ ಅವರ ಕುರಿತಾದ ಕಾರ್ಯಕ್ರಮ ಪ್ರಸಾರವಾದ ನಂತರ ಸ್ನೇಕ್ ಶ್ಯಾಂ ವಿಶ್ವವಿಖ್ಯಾತರಾಗಿದ್ದಾರೆ. ಶ್ಯಾಂ ಅವರ ಈ ಶ್ಲಾಘನೀಯ ಕೆಲಸವನ್ನು ಮೆಚ್ಚಿ ರಾಜ್ಯಾದ್ಯಂತ ಅನೇಕ ಸಂಘಸಂಸ್ಥೆಗಳು ಅವರಿಗೆ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಿದೆ. ಮೈಸೂರಿನ ನಗರಪಾಲಿಕೆಯೂ ಸಹಾ ಒಂದು ರಸ್ತೆಗೆ ಅವರ ಹೆಸರನ್ನಿಟ್ಟು ಗೌರವಿಸಿದೆ.

sn5ಹಾವುಗಳನ್ನು ಹಿಡಿಯುವದರ ಹೊರತಾಗಿಯೂ ಶ್ಯಾಮ್ ತಮ್ಮ ವಿಶಿಷ್ಟವಾದ ವೇಷ ಭೂಷಣಗಳೊಂದಿಗೆ ತುಸು ಅಬ್ಬರಕ್ಕೆ ಹೆಸರುವಾಸಿಯಾಗಿದ್ದಾರೆ. ತಲೆಯ ಮೇಲೊಂದು ಆಕರ್ಷಣಿಯವಾದ ಸೂರ್ಯನ ಟೋಪಿಯ ಜೊತೆಗೆ ನಾನಾ ಬಗೆಯ ಮಣಿಗಳ ಸರದ ಜೊತೆ ಹತ್ತೂ ಬೆರಳುಗಳಿಗೆ ಬಗೆ ಬಗೆಯ ರತ್ನಗಳ ಉಂಗುರಗಳನ್ನು ಧರಿಸಿ ಬಹಳ ವಿಚಿತ್ರ ಎನಿಸಿದರೂ ವೈಶಿಷ್ಟ್ಯವಾಗಿ ಕಾಣಿಸಿಕೊಳ್ಳುವುದು ಅವರ ಹವ್ಯಾಸಗಳಲ್ಲೊಂದಾಗಿದೆ. ಈ ರೀತಿಯ ಜನಪ್ರಿಯತೆಯಿಂದಾಗಿ 2013 ರಲ್ಲಿ ನಡೆದ ಮೈಸೂರು ನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಆಯ್ಕೆಯಾದರೂ, 2018 ರಲ್ಲಿ ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಪಕ್ಷದಿಂದ ಉಚ್ಚಾಟಿಸಲ್ಪಟ್ಟು ಸ್ವತಂತ್ರವಾಗಿ ಸ್ಪರ್ಧಿಸಿ ಸೋಲುವುದರ ಮೂಲಕ ಆವರ ರಾಜಕೀಯ ಜೀವನ
ಸದ್ಯಕ್ಕೆ ತಟಸ್ಥವಾಗಿದೆ.

sh1ಸ್ನೇಕ್ ಶ್ಯಾಂ ರವರಂತೆ ಅವರ ಪುತ್ರ ಸೂರ್ಯ ಕೀರ್ತಿಯೂ ಸಹಾ ತಂದೆಯವರ ಹಾದಿಯಲ್ಲಿ ನಡೆಯುತ್ತಿದ್ದು, ಮೊನ್ನೆ ದೀಪಾವಳಿ ಸಂಭ್ರಮದಲ್ಲಿದ್ದಾಗ ಮೈಸೂರು ನಗರದ ಹಲವು ಮನೆಗಳಲ್ಲಿ ಒಂದೇ ದಿನ 10ಕ್ಕೂ ಹೆಚ್ಚು ಹಾವುಗಳು ಕಾಣಿಸಿಕೊಂಡಾಗ, ಹಬ್ಬದ ದಿನ ಎಂದೂ ಲೆಕ್ಕಿಸಿದ ಆ ಮನೆಗಳಿಂದ ಹಾವುಗಳನ್ನು ಹಿಡಿದು ಅವುಗಳನ್ನು ಸುರಕ್ಷಿತ ಪ್ರದೇಶಕ್ಕೆ ಬಿಟ್ಟು ಬಂದಿರುವ  ಸೂರ್ಯ ಕೀರ್ತಿ ತಂದೆಗೆ ತಕ್ಕ ಮಗ ಎಂದೇ ಪ್ರಖ್ಯಾತರಾಗಿದ್ದಾರೆ

sn7ಆರಂಭದಲ್ಲಿ ಹುಂಬತನಕ್ಕೆಂದು ಹಾವುಗಳನ್ನು ಹಿಡಿಯಲಾರಂಭಿಸಿ ನಂತರ ಅದನ್ನೇ  ಪ್ರವೃತ್ತಿಯನ್ನಾಗಿಸಿಕೊಂಡ ಶ್ಯಾಂ ಅವರಿಗೆ ಕೆಲವು ಬಾರಿ ಹಾವುಗಳಿಂದ ಕಚ್ಚಿಸಿಕೊಂಡು ರೋಗನಿರೋಧ ಶಕ್ತಿಯನ್ನು ವೃದ್ಧಿಸಿಕೊಂಡಿದ್ದರೂ ಹಾವುಗಳನ್ನು ಹಿಡಿಯುವಾಗ ಹೆಚ್ಚಿನ ಕಾಳಜಿಯನ್ನು ವಹಿಸುವ ಅಗತ್ಯವಿದೆ. ವನ್ಯಜೀವಿ ಸಂರಕ್ಷಣಾಕಾರರಾಗಿರುವ, ಕರೆ ಬಂದ ತಕ್ಷಣ ಸ್ವಂತ ಖರ್ಚಿನಲ್ಲಿ ತೆರಳಿ ಮನೆಗಳಲ್ಲಿ ಅವಿತು ಕೊಂಡಿರುವ ಹಾವುಗಳನ್ನು ನಿಸ್ವಾರ್ಥವಾಗಿ ಸೆರೆಹಿಡಿಯುವ ಶ್ಯಾಮ್ ಅವರನ್ನು ಈ ನಂಬರ್ ಮೂಲಕ 9448069399ವೂ ಸಂಪರ್ಕಿಸಬಹುದಾಗಿದೆ. ಹೀಗೆ ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬ ತತ್ವದಡಿಯಲ್ಲಿ ನಿಸ್ವಾರ್ಥ ಸೇವೆ ಮಾಡುತ್ತಿರುವ ಸ್ನೇಕ್ ಶ್ಯಾಮ್ ನಿಸ್ಸಂದೇಹವಾಗಿಯೂ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತೀರಿ?
ನಿಮ್ಮವನೇ ಉಮಾಸುತ

2 thoughts on “ಸ್ನೇಕ್ ಶ್ಯಾಮ್

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s