ದೂರದ ಬೆಳಗಾವಿಯ ಹುಡುಗ ಚಿತ್ರ ನಟನಾಗಬೇಕೆಂದು ಬೆಂಗಳೂರಿನ ಗಾಂಧಿನಗರದಲ್ಲಿ ಐದಾರು ವರ್ಷಗಳ ಕಾಲ ನಾನಾ ವಿಧದ ಕಷ್ಟ ಪಟ್ಟು ಸಣ್ಣ ಸಣ್ಣ ಪೋಷಕ ಪಾತ್ರಗಳ ಮೂಲಕ ಆರಂಭಿಸಿ ಕನ್ನಡದಲ್ಲಿ ನಾಯಕನಾಗಿ ಮಿಂಚುತ್ತಿದ್ದ ಸಮಯದಲ್ಲಿಯೇ ತೆಲುಗು ಚಿತ್ರರಂಗದಲ್ಲಿ ಅಚಾನಕ್ಕಾಗಿ ಖಳನಾಯಕನಾಗಿ ಮಿಂಚಿ ದಕ್ಷಿಣ ಭಾರತದ ಎಲ್ಲಾ ಚಿತ್ರರಂಗವಲ್ಲದೇ ಹಿಂದಿಯಲ್ಲೂ ಛಾಪು ಮೂಡಿಸಿದರು ಇಲ್ಲಿದೇ ನಮ್ಮನೇ ಅಲ್ಲಿ ಹೋದೆ ಸುಮ್ಮನೇ ಎನ್ನುವಂತೆ ಮತ್ತೆ ಮತ್ತೆ ಕನ್ನಡ ಚಿತ್ರರಂಗಕ್ಕೆ ಬಂದು ಆಡು ಮುಟ್ಟದ ಸೂಪ್ಪಿಲ್ಲ ಇವರು ಮಾಡದ ಕೆಲಸವಿಲ್ಲ ಎನ್ನುವಂತೆ, ನಟ, ನಿರ್ದೇಶಕ, ಸಂಗೀತ ನಿರ್ದೇಶಕ, ಚಲನಚಿತ್ರ ನಿರ್ಮಾಪಕ ಮತ್ತು ಬರಹಗಾರರಾಗಿರುವ ನಮ್ಮ ಹೆಮ್ಮೆಯ ಕನ್ನಡಿಗ ಚರಣ್ ರಾಜ್ ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯ ಕಥಾನಾಯಕರಾಗಿದ್ದಾರೆ.
ಚರಣ್ ರಾಜ್ ಅವರು ದೂರದ ಬೆಳಗಾವಿ ಜಿಲ್ಲೆಯ ಬೊಮ್ಮಯಿ ಗ್ರಾಮದಲ್ಲಿನ ಸಾಮಿಲ್ ಮಾಲಿಕರೊಬ್ಬರ ಕುಟುಂಬದಲ್ಲಿ ಜನಿಸುತ್ತಾರೆ. ಬಾಲ್ಯದಿಂದಲೂ ಹಾಡು ನಟನೆಯಲ್ಲಿ ಚುರುಕಾಗಿದ್ದ ಚರಣ್ ಅವರು ತಮ್ಮ ಶಾಲಾದಿನಗಳಲ್ಲಿ ಶಾಲೆಯ ವಾರ್ಷಿಕೋತ್ಸವ ಅಥವಾ ಯಾವುದೇ ಸ್ಪರ್ಥೆಯಲ್ಲಿ ಭಾಗವಹಿಸಿದ್ದಾರೆ ಎಂದರೆ ಬಹುಮಾನ ಅವರಿಗೇ ಕಟ್ಟಿಟ್ಟ ಬುತ್ತಿ ಎನ್ನುವಷ್ಟರ ಮಟ್ಟಿಗೆ ಕೀರ್ತಿ ಪಡೆದಿರುತ್ತಾರೆ. ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಕಾಲೇಜಿಗೆ ಸೇರಿಕೊಂಡಾಗ ಅದೊಮ್ಮೆ ಗೆಳೆಯರೆಲ್ಲರೂ ನಿನಗೆ ನಾಯಕನಾಗುವ ಎಲ್ಲಾ ಅರ್ಹತೆ ಇರುವ ಕಾರಣ ನೀನೇಕೆ ಚಿತ್ರರಂಗದಲ್ಲಿ ನಟಿಸಲು ಪ್ರಯತ್ನಿಸಬಾರದು ಎಂದು ಹುರಿದುಂಬಿಸುತ್ತಿದ್ದಾಗ ಕುಚೋದ್ಯಕ್ಕೆಂದು ಗೆಳೆಯನೊಬ್ಬ ಈ ಮುಸುಡಿಗೆ ಯಾರು ಪಾತ್ರ ಕೊಡುತ್ತಾರೆ? ಎಂದು ಆಡಿಕೊಂಡಿದ್ದನ್ನೇ ಸವಾಲಾಗಿ ಸ್ವೀಕರಿಸಿ ಮನೆಯವರೆಲ್ಲರ ಮಾತುಗಳನ್ನೆಲ್ಲಾ ಧಿಕ್ಕರಿಸಿ ಅಪ್ಪನ ಸಾಮಿಲ್ ನಿಂದ 6000/- ರೂಪಾಯಿಗಳನ್ನು ಕದ್ದು ಬೆಂಗಳೂರಿನ ಗಾಂಧಿನಗರಕ್ಕೆ ಬರುತ್ತಾರೆ.
ಕೂತು ತಿನ್ನುವವನಿಗೆ, ಕುಡಿಕೆ ಹೊನ್ನು ಸಾಲದು ಎನ್ನುವಂತೆ ಕೈಯ್ಯಲ್ಲಿ ಇದ್ದ ಹಣವೆಲ್ಲಾ ಖಾಲಿಯಾಗುತ್ತಾ ಹೋದಂತೆಲ್ಲಾ ಜೀವನಕ್ಕಾಗಿ ಸಂಜೆಯ ಹೊತ್ತು ಕ್ಯಾಬರೆ ಬಾರ್ ಗಳಲ್ಲಿ ಹಾಡುಗಳನ್ನು ಹಾಡುತ್ತಾ ಆರಂಭಿಸಿ ಬೆಂಗಳೂರಿನ ಅನೇಕ ಆರ್ಕೇಸ್ಟ್ರಾಗಳಲ್ಲಿ ಸಣ್ಣ ಪುಟ್ಟ ಸಭೆ ಸಮಾರಂಭಗಳು ಮದುವೆ ಮುಂಜಿಗಳಲ್ಲಿ ಹಾಡುತ್ತಾ, ಚಿಕ್ಕ ಪುಟ್ಟ ನಾಟಕಗಳಲ್ಲಿ ಅಭಿನಯಿಸುತ್ತಾ ಜೀವನ ನಡೆಸುತ್ತಿದ್ದರೂ ಗಮನವೆಲ್ಲಾ ಗಾಂಧಿನಗರದತ್ತವೇ ಇದ್ದು ಅವಕಾಶಕ್ಕಾಗಿ ಹಾತೊರೆಯುತ್ತಿರುತ್ತದೆ. ಅದೃಷ್ಟವಷಾತ್ ತಮ್ಮ ರೂಂ ಮೇಟ್ ಅವರು ಸಿದ್ದಲಿಂಗಯ್ಯನವರು ತಮ್ಖ ಹೊಸಾ ಚಿತ್ರ ಪರಾಜಿತಕ್ಕೆ ನಟರ ಹುಡುಕಾಟದಲ್ಲಿದ್ದಾರೆ ಎಂಬುದನ್ನು ತಿಳಿದು ಅವರ ಮನೆಗೆ ಹೋಗಿ ತಮ್ಮ ಅಭಿನಯವನ್ನು ತೊರಿಸಿ ಅವಕಾಶ ಗಿಟ್ಟಿಸಿಕೊಳ್ಳುವುದರಲ್ಲಿ ಸಫಲವಾದ ನಂತರ ಹಿಂದಿರುಗಿ ನೋಡುವ ಪ್ರಮೇಯವೇ ಬರಲೇ ಇಲ್ಲ.
ಆರಂಭದಲ್ಲಿ ಸಣ್ಣ ಪುಟ್ಟಪಾತ್ರಗಳಲ್ಲಿ ನಂತರ ಪೋಷಕನಾಗಿ ಆನಂತರ ಖಳನಾಯಕನಾಗಿ, ಹಲವಾರು ಸಿನಿಮಾಗಳಲ್ಲಿ ನಟಿಸಿದ ನಂತರ ಆಶಾ ಸಿನಿಮಾದ ಮೂಲಕ ನಾಯಕನಾಗಿ ಭಡ್ತಿ ಪಡೆದದ್ದಲ್ಲದೇ, ಆನಂತರ ಆಫ್ರಿಕಾದ ಶೀಲಾ, ಗಂಧದಗುಡಿ ಭಾಗ2, ಅಣ್ಣಾವ್ರ ಮಕ್ಕಳು, ಹೀಗೆ ಅನೇಕ ಸಿನಿಮಾದಲ್ಲಿ ನಟಿಸಿ ಒಳ್ಳೆಯ ಹೆಸರನ್ನು ಪಡೆಯುತ್ತಾರೆ.
ಕನ್ನಡದಲ್ಲಿ ನಾಯಕನಾಗಿ ಮಿಂಚುತ್ತಿರುವ ಸಮಯದಲ್ಲೇ ತೆಲುಗಿನಲ್ಲಿ ನಾಯಕ ನಟರಷ್ಟೇ ಖ್ಯಾತಿ ಪಡೆದಿದ್ದ ವಿಜಯಶಾಂತಿ ಅವರ ಪ್ರತಿಘಟನ ಸಿನಿಮಾದಲ್ಲಿ ಖಳನಾಯಕನ ಪಾತ್ರಕ್ಕೆ ಕರೆ ಬಂದಾಗ ಆರಂಭದಲ್ಲಿ ಇಲ್ಲಿ ನಾಯಕನಾಗಿರುವಾಗ ಮತ್ತೊಂದು ಭಾಷೆಯ ಚಿತ್ರರಂಗದಲ್ಲಿ ಖಳನಟನಾಗಿ ಅಭಿನಯಿಸ ಬೇಕೇ? ಎಂಬ ಜಿಜ್ಞಾಸೆ ಮನದಲ್ಲಿ ಮೂಡಿದಾಗ ಕಲಾವಿದರಾದವರು ಕೇವಲ ಒಂದು ಪಾತ್ರಕ್ಕೇ ಮೀಸಲಾಗಿರದೇ ಎಲ್ಲಾ ಪಾತ್ರಗಳಲ್ಲೂ ಅಭಿನಯಿಸ ಬೇಕು ಎಂದು ನಿರ್ಧರಿಸಿ ಪರಭಾಷೆಯ ಚಿತ್ರದಲ್ಲೂ ಒಂದು ಕೈ ನೋಡೇ ಬಿಡೋಣ ಎಂದು ಪ್ರತಿಘಟನಾ ಚಿತ್ರದಲ್ಲಿ ನಟಿಸಿ, ಆ ಚಿತ್ರ ಯಶಸ್ವಿಯಗಿದ್ದೇ ತಡಾ ದಿನ ಬೆಳಗಾಗುವುದರೊಳಗೆ, ಚರಣ್ ರಾಜ್ ಆಂಧ್ರಾದ್ಯಂತ ಮನೆಮಾತಾಗಿದ್ದಲ್ಲದೇ, ಅವರ ಅದೃಷ್ಟ ಖುಲಾಯಿಸಿತು ಎಂದರೂ ತಪ್ಪಾಗದು. ಅ ಚಿತ್ರದ ಅವರ ನಟನೆಗಾಗಿ ಹತ್ತು ಹಲವಾರು ಪ್ರಶಸ್ತಿಗಳು ಲಭಿಸಿದ ಮೇಲಂತೂ ತಮಿಳು ಮತ್ತು ಮಲೆಯಾಳಂ ಚಿತ್ರರಂಗದಲ್ಲೂ ಅವಕಾಶಗಳು ಹೇರಳವಾಗಿ ಸಿಗಲಾರಂಭಿಸಿತು.
ವಿಜಯಶಾಂತಿ ಅವರ ಬಹುತೇಕ ಚಿತ್ರಗಳಲ್ಲಂತೂ ಚರಣ್ ರಾಜ್ ಖಾಯಂ ನಟರಾಗಿದ್ದು. ನಮ್ ನಾಡು, ಗಡಿನಾಡು, ನೀತಿಕ್ಕು ತಂದನೈ ಮತ್ತು ಜಂಟಲ್ ಮ್ಯಾನ್ ಇಂದ್ರುಡು ಚಂದ್ರುಡು ಮತ್ತು ಕರ್ತವ್ಯಂ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಯಶಸ್ವಿಯಾಗುತ್ತಿದ್ದಂತೆಯೇ ರಜನೀಕಾಂತ್ ಅಭಿನಯದ ಫೂಲ್ ಬನೆ ಅಂಗಾರೇ ,ವೀರ,ಧರ್ಮ ಡೋರಾಯ್ ಮುಂತಾದ ಹಿಂದೀ ಚಿತ್ರಗಳಲ್ಲಿಯೂ ಆಭಿನಯಿಸುವ ಮೂಲಕ ಬಹು ಬಾಷಾಭಾಷಾ ನಟರೆನಿಸಿಕೊಂಡರು. ಈ ಎಲ್ಲಾ ಭಾಷೆಗಳಲ್ಲಿಯೂ ಕೇವಲ ನಟನೆಯಷ್ಟೇ ಅಲ್ಲದೇ ಆಯಾಯಾ ಭಾಷೆಗಳನ್ನೂ ಕಲಿತು ಅವರ ಪಾತ್ರಗಳಿಗೆ ಅವರೇ ಡಬ್ ಮಾಡಿದ್ದದ್ದು ಗಮನಾರ್ಹವಾಗಿತ್ತು.
ಕೇವಲ ಅಭಿನಯಕ್ಕೆ ಮಾತ್ರವೇ ತಮ್ಮನ್ನು ತಾವು ಸೀಮಿತಗೊಳಿಕೊಳ್ಳದ ಚರಣ್ ರಾಜ್ , ಹಿನ್ನಲೆ ಗಾಯಕರಾಗಿ, ಸಂಗೀತ ನಿರ್ದೇಶಕರಾಗಿ ನಿರ್ಮಾಪಕರಾಗಿ, ನಿರ್ದೇಶಕರಾಗಿದ್ದಲ್ಲದೇ, ಬರಹಗಾರರಾಗಿಯೂ ತಮ್ಮ ಛಾಪನ್ನು ಮೂಡಿಸುವ ಮೂಲಕ ಪ್ರಸ್ತುತ ತೆಲುಗು, ತಮಿಳು ಮತ್ತು ಮಳಯಾಳಂ ಭಾಷೆಯ ಚಿತ್ರಗಳಲ್ಲಿ ಸಕ್ರಿಯರಾಗಿದ್ದಾರೆ. ಬೇರೆ ಭಾಷೆಯಲ್ಲಿ ಎಷ್ಟೇ ಹೆಸರು ಮಾಡಿದರೂ ಸಮಯ ಸಿಕ್ಕಾಗಲೆಲ್ಲಾ ಚರಣ್ ರಾಜ್ ತಮ್ಮ ಕನ್ನಡ ಭಾಷೆಯ ಪ್ರೇಮದಿಂದಾಗಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಹಣವನ್ನು ಹಾಕಿ ಸದಭಿರುಚಿಯ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿದ್ದಲ್ಲದೇ ಇತ್ತೀಚಿನ ರಾಜಾಹುಲಿ, ಟಗರು ಮುಂತಾದ ಅನೇಕ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಚರಣ್ ರಾಜ್ ಅವರಂತೆಯೇ ಅವಾ ಮಗ ತೇಜ್ ರಾಜ್ ಕೂಡಾ ತನ್ನ ತಂದೆಯಂತೆಯೇ ತಮಿಳು ಸಿನಿಮಾ ರಂಗದಲ್ಲಿ ಮಿಂಚುತ್ತಿದ್ದಾರೆ. ಅವರ ತಮಿಳು ಚಿತ್ರ 90ml ಯಶಸ್ವಿಯಾಗುತ್ತಿದ್ದಂತೆಯೇ, ಇನ್ನೂ ಮೂರ್ನಾಲ್ಕು ತಮಿಳು ಸಿನಿಮಾದಲ್ಲಿ ಬಣ್ಣ ಹಚ್ಚಿವ ಮೂಲಕ ಕೈ ತುಂಬಾ ಕೆಲಸವಿದ್ದರೂ, ತಮ್ಮ ಮಾತೃಭಾಷೆ ಕನ್ನಡದ ಮೇಲಿನ ಪ್ರೇಮದಿಂದಾಗಿ ಭರತ ಬಾಹುಬಲಿ ಎಂಬ ಕನ್ನಡ ಸಿನಿಮಾದಲ್ಲಿ ತೇಜ್ ರಾಜ್ ಅವರು ಕಾಣಿಸಿಕೊಂಡಿದ್ದಾರೆ.
ಇನ್ನು ಕೊರೊನಾ ಸಮಯದಲ್ಲಿ ದಿನದ 24 ಗಂಟೆಯೂ ಪೌರ ಕಾರ್ಮಿಕರು, ವೈದ್ಯರು ಮತ್ತು ಪೊಲೀಸ್ ಇಲಾಖೆ ಜೊತೆಗೆ, ಸಿವಿಲ್ ಡಿಫೆನ್ಸ್ ಸಿಬ್ಬಂದಿ, ಹೋಂ ಗಾರ್ಡ್ಗಳು ಕೊರೊನಾ ವಾರಿಯರ್ಸ್ಗಳಾಗಿ ಕೆಲಸ ಮಾಡುತ್ತಿದ್ದದ್ದು ಎಲ್ಲರಿಗೂ ಗೊತ್ತಿದ್ದ ವಿಷಯವೇ. ಈ ಫ್ರೆಂಟ್‌ಲೈನ್ ವಾರಿಯರ್ಸ್ಗಳಿಗೆ ಅನೇಕ ಸಿನಿಮಾ ತಾರೆಯರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದರೆ, ಅವರ ಜೊತೆ ಚರಣ್ ರಾಜ್ ಅವರೂ ಸಹಾ ಕೈ ಜೋಡಿಸಿ, ಬೆಂಗಳೂರಿನ ಚಿಕ್ಕ ಜಾಲ, ಯಲಹಂಕ, ವಿದ್ಯಾರಣ್ಯಪುರ ಸೇರಿದಂತೆ ಹತ್ತು ಹಲವು ಪೊಲೀಸ್ ಠಾಣೆಗಳಿಗೆ ಸ್ವತಃ ಅವರೇ ತೆರಳಿ ಪೊಲೀಸ್ ಸಿಬ್ಬಂದಿಗೆ ಆಹಾರ ಕಿಟ್ಗಳನ್ನು ವಿತರಿಸಿದ್ದಾರೆ. ಸಂಚಾರಿ ಪೊಲೀಸ್ ಠಾಣೆಯೂ ನಗರದ 148 ಠಾಣೆಗಳಿಗೂ ತೆರಳಿ ಸಿಬ್ಬಂದಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಇದೇ ವೇಳೆ ಮಾತನಾಡಿದ ಅವರು, ಪೊಲೀಸರೂ ಕೂಡ ಮನುಷ್ಯರೇ. ಜನರು ಮಹಾಮಾರಿಗೆ ಬಲಿಯಾಗುವುದನ್ನು ತಪ್ಪಿಸುವ ಸಲುವಾಗಿ, ಕೊರೊನಾ ನಡುವೆಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಾಗಾಗಿ ಅವರಿಗೆ ಗೌರವನ್ನು ಕೊಟ್ಟು ಜನರೂ ಸಹಾ ತಮ್ಮ ತಮ್ಮ ಮನೆಯಿಂದ ಹೊರಬಾರದಂತೆ ಜನರನ್ನು ಕೋರಿಕೊಂಡಿದ್ದರು.
ಹೀಗೆ ಎಲ್ಲೇ ಇರು ಹೇಗೇ ಇರು, ಎಂದೆಂದಿಗೂ ಕನ್ನಡಾವಾಗಿರು ಎನ್ನುವಂತೆ ನಟ, ನಿರ್ದೇಶಕ, ಸಂಗೀತ ನಿರ್ದೇಶಕ, ಹಿನ್ನಲೆ ಗಾಯಕ, ಚಲನಚಿತ್ರ ನಿರ್ಮಾಪಕ ಮತ್ತು ಬರಹಗಾರರಾಗಿ ಭಾರತೀಯ ವಿವಿಧ ಚಿತ್ರರಂಗದಲ್ಲಿ ಮಿಂಚುತ್ತಿದ್ದರೂ, ತಮಗೆ ಮೊತ್ತ ಮೊದಲ ಬಾರಿಗೆ ಅಭಿನಯಿಸಲು ಅವಕಾಶ ಕೊಟ್ಟ ಶ್ರಿ ಸಿದ್ದಲಿಂಗಯ್ಯನವರನ್ನು ತಮ್ಮ ಗಾಡ್ ಫಾದರ್ ಎಂದು ಹೇಳಿಕೊಳ್ಳುತ್ತಲೇ, ಕನ್ನಡದ ತನ ಮತ್ತು ಕನ್ನಡದ ಕಂಪನ್ನು ದೇಶಾದ್ಯಂತ ತನ್ನ ಚಿತ್ರಗಳಲ್ಲಿ ಎತ್ತಿ ಮೆರೆಸುತ್ತಿರುವ ಕನ್ನಡಕ್ಕೆ ಗೌರವವನ್ನು ತಂದು ಕೊಟ್ಟಿರುವ ಚರಣ್ ರಾಜ್ ಅವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.
ಏನಂತೀರಿ?
ನಿಮ್ಮವನೇ ಉಮಾಸುತ