ಎಪ್ಪತರ ದಶಕದ ಅಂತ್ಯದವರೆಗೂ ಭಾರತೀಯ ಕ್ರಿಕೆಟ್ ತಂಡದಲ್ಲಿ ಸ್ಪಿನ್ನರ್ಗಳದ್ದೇ ಪ್ರಾಭಲ್ಯ. ವೇಗದ ಬೋಲರ್ಗಳೇನಿದ್ದರೂ ಆರಂಭಿಕ ನಾಲ್ಕಾರು ಓವರ್ಗಳನ್ನು ಮಾಡಿ ಚಂಡಿನ ಹೊಳಪನ್ನು ತೆಗೆದುಕೊಡಲಷ್ಟೇ ಸೀಮಿತವಾದ ಕಾಲದಲ್ಲಿ ಕಪಿಲ್ ದೇವ್ ಅವರ ಆಗಮನವಾಗಿ ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕನಾಗಿ ಅವರು ನಿವೃತ್ತರಾಗುವ ವೇಳೆಗೆ ಭಾರತದ ವೇಗದ ಬೌಲಿಂಗ್ ನೊಗ ಹೊರುವವರು ಯಾರು ಎಂದು ಯೋಚಿಸುತ್ತಿರುವಾಗಲೇ ನಿಜವಾದ ವೇಗ ಬೋಲಿಂಗ್ ಎಂದರೆ ಹೇಗೆ ಇರುತ್ತದೆ ಎಂದು ತೋರಿಸಿದ, ಕ್ರೀಡಾಭಿಮಾನಿಗಳಿಂದ ಮೈಸೂರು ಎಕ್ಸ್‌ಪ್ರೆಸ್ ಎಂದೇ ಕರೆಸಿಕೊಳ್ಪಡುತ್ತಿದ್ದ ಜಾವಗಲ್ ಶ್ರೀನಾಥ್ ಅವರ ಯಶೋಗಾಥೆ ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.
ಹಾಸನ ಜಿಲ್ಲೆಯ ಹಳೇಬೀಡು ಬಳಿಯ ಜಾವಗಲ್ ಗ್ರಾಮದ ಮೂಲದವರಾದ ಶ್ರೀ ಚಂದ್ರಶೇಖರ್ ಮತ್ತು ಶ್ರೀಮತಿ ಭಾಗ್ಯಲಕ್ಷ್ಮೀ ದಂಪತಿಗಳಿಗೆ. ಆಗಸ್ಟ್ 31, 1969ರಲ್ಲಿ ಶ್ರೀನಾಥ್ ಅವರು ಜನಿಸುತ್ತಾರೆ. ವ್ಯವಹಾರಸ್ಥರಾಗಿದ್ದ ಅವರ ತಂದೆಯವರು ಮೈಸೂರಿನಲ್ಲೇ ನೆಲೆಸಿದ್ದ ಕಾರಣ, ಶ್ರೀನಾಥ್ ಅವರ ಬಾಲ್ಯವೆಲ್ಲಾ ಮೈಸೂರಿನಲ್ಲೇ ಆಗಿ ಮರಿಮಲ್ಲಪ್ಪ ಶಾಲೆಯಲ್ಲಿ ಅವರ ಪೌಢಶಿಕ್ಷಣ ಪಡೆಯುತ್ತಿರುವಾಗಲೇ ಶಾಲೆಯ ಕ್ರಿಕೆಟ್ ತಂಡದ ನಾಯಕರಾಗಿರುತ್ತಾರೆ. ಪೋಷಕರ ಆಸೆಯಂತೆ ಇಂಜೀನಿಯರಿಂಗ್ ಮೊದಲ 2 ವರ್ಷಗಳನ್ನು ಹಾಸನದ ಮಲ್ನಾಡ್ ಕಾಲೇಜಿನಲ್ಲಿ ನಡೆದು ನಂತರದ 2 ವರ್ಷಗಳು ಮೈಸೂರಿನ ಜಯಚಾಮರಾಜೇಂದ್ರ ಕಾಲೇಜ್ ಆಫ್ ಇಂಜೀನಿಯರಿಂಗ್ ನಲ್ಲಿ ಪದವಿ ಮಾಡುತ್ತಿರುವಾಗಲೇ, ಕ್ಲಬ್ ಕ್ರಿಕೆಟ್ ಆಡುತ್ತಿರುವಾಗ 6.3″ ಎತ್ತರದ ಈ ವೇಗದ ಬೌಲರ್ ಕರ್ನಾಟಕದ ಮತ್ತೊಬ್ಬ ಕನ್ನಡದ ಕಲಿಗಳಾದ ಶ್ರೀ ಗುಂಡಪ್ಪ ವಿಶ್ವನಾಥ್ ಅವರ ಕಣ್ಣಿಗೆ ಬಿದ್ದದ್ದೇ ತಡಾ ಕರ್ನಾಟಕದ ರಣಜೀ ತಂಡಕ್ಕೆ ಆಯ್ಕೆಯಾಗುತ್ತಾರೆ.
1989/90 ರಲ್ಲಿ ಕರ್ನಾಟಕ ತಂಡದ ಪರವಾಗಿ ಹೈದರಾಬಾದ್ ವಿರುದ್ಧ ಪ್ರಥಮ ದರ್ಜೆ ಪಂದ್ಯಗಳಿಗೆ ಪಾದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲೇ ಹ್ಯಾಟ್ರಿಕ್ ಸಾಧನೆ ಮಾಡುವ ಮೂಲಕ ಭರವಸೆಯನ್ನು ಮೂಡಿಸುವುದಲ್ಲದೇ ಮುಂದಿನ ಆರು ಪಂದ್ಯಗಳಲ್ಲಿ 25 ವಿಕೆಟ್‌ಗಳೊಂದಿಗೆ ಋತುವನ್ನು ಮುಗಿಸಿ, ಎರಡನೇ ಋತುವಿನಲ್ಲಿ 20 ವಿಕೆಟ್ ಪಡೆಯುವಷ್ಟರಲ್ಲಿಯೇ ಭಾರತದ ಪರ 18, ಆಕ್ಟೋಬರ್ 1991ರಂದು ಪಾಕ್ ವಿರುದ್ಧ ಶಾರ್ಜಾದಲ್ಲಿ ಏಕದಿನ ಅಂತರಾಷ್ಟ್ರೀಯ ಪಂದ್ಯಗಳಿಗೆ ಪಾದಾರ್ಪಣೆ ಮಾಡಿದರೆ, ಅದೇ ವರ್ಷ
29 ಅಕ್ಟೋಬರ್ 1991ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಬ್ರಿಸ್ಬೇನ್ನಲ್ಲಿ ಭಾರತದ ಪರ ಮೊದಲ ಟೆಸ್ಟ್ ಆಡುತ್ತಾರೆ. ಭಾರತದ ತಂಡದಲ್ಲಿ ಅದಾಗಲೇ ಕಪಿಲ್ ದೇವ್ ಮತ್ತು ಮನೋಜ್ ಪ್ರಭಾಕರ್ ಅವರುಗಳು ಉಚ್ಚ್ರಾಯ ಸ್ಥಿತಿಯಲ್ಲಿದ್ದ ಕಾರಣ ಬಹಳ ದಿನಗಳ ವರೆಗೂ ಶ್ರೀನಾಥ್ ಬೆಂಚು ಕಾಯಿಸುವ ಪರಿಸ್ಥಿತಿಯುಂಟಾಗುತ್ತದೆ.
ಕಪಿಲ್ ದೇವ್ ಅವರ ನಿವೃತ್ತಿಯಾದ ನಂತರ ಭಾರತದ ಪರ ಟೆಸ್ಟ್ ಮತ್ತು ಏಕದಿನ ಪಂದ್ಯಾವಳಿಯ ತಂಡಕ್ಕೆ ಶ್ರೀನಾಥ್ ವೇಗದ ಬೌಲರ್ ಆಗಿ ಮೊದಲ ಆಯ್ಕೆಯಾಗಿ ಪರಿಗಣಿಸಲ್ಪಡುವುದಲ್ಲದೇ, ಕರ್ನಾಟಕದ ಮತ್ತೊಬ್ಬ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ಅವರ ಜೊತೆಯಲ್ಲಿ ಭಾರತದ ಪರ ಅತ್ಯುತ್ತಮ ವೇಗದ ಜೋಡಿ ಎನಿಸಿಸುತ್ತಾರೆ. ಅದೊಮ್ಮೆ ಭಾರತದ ತಂಡದಲ್ಲಿ ದ್ರಾವಿಡ್, ವಿಜಯ್ ಭಾರದ್ವಾಜ್, ಕುಂಬ್ಲೆ, ಜೋಷಿ, ವೆಂಕಿ, ದೊಡ್ಡಗಣೇಶ್ ಜೊತೆಯಲ್ಲಿ ಶ್ರೀನಾಥ್ ಹೀಗೆ 11ರ ಬಳಗದಲ್ಲಿ 5-6 ಕರ್ನಾಟಕದ ಆಟಗಾರೇ ಇದ್ದ ಸಂದರ್ಭದಲ್ಲಿಯೂ ಶ್ರೀನಾಥ್ ತಂಡದ ಪರ ಅವಿಭಾಜ್ಯ ಅಂಗವಾಗಿದ್ದರು.
ಅಂದೆಲ್ಲಾ ಭಾರತದ ಪಿಚ್‍ಗಳು ಹೆಚ್ಚಾಗಿ ಸ್ಪಿನ್ನರ್ಗಳಿಗೆ ಸಹಾಯ ಮಾಡುತ್ತಿದ್ದ ಕಾರಣ ಆರಂಭದಲ್ಲಿ ಶ್ರೀನಾಥ್‍ರವರ ಬೌಲಿಂಗ್ ಸರಾಸರಿ ಸ್ವಲ್ಪ ಕಡಿಮೆ ಎನಿಸಿದ್ದರೂ ನಂತರ ದಿನಗಳಲ್ಲಿ ರಿವರ್ಸ್ ಸ್ವಿಂಗ್ ಮೊದಲಾದ ಬೌಲಿಂಗ್ ಶೈಲಿಗಳನ್ನು ಅಳವಡಿಸಿಕೊಂಡು , ಟೆಸ್ಟ್ ಪಂದ್ಯಗಳಲ್ಲಿ 236 ಮತ್ತು ಏಕದಿನ ಪಂದ್ಯಗಳಲ್ಲಿ 315 ವಿಕೆಟ್‍ಗಳನ್ನು ಪಡೆದರೆ, ಕರ್ನಾಟಕದ ಪರ . ಮೊದಲ ದರ್ಜೆ ಪಂದ್ಯಗಳಲ್ಲಿ 500 ಕ್ಕೂ ಹೆಚ್ಚು ವಿಕೆಟ್‍ಗಳನ್ನು ಪಡೆಯುವ ಮೂಲಕ ಎಲ್ಲಾ ವಿಧದ ಕ್ರಿಕೆಟ್ಟಿಗೂ ಸೈ ಎನಿಸಿಕೊಂಡರು. ಬೌಲಿಂಗ್ ಜೊತೆಯಲ್ಲಿಯೇ ಕೆಳ ಹಂತದಲ್ಲಿ ಉತ್ತಮವಾದ ಹೊಡೆತಗಳೊಂದಿಗೆ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನೂ ನೀಡುವ ಮೂಲಕ ಹತ್ತು ಹಲವಾರು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಚಂಡನ್ನು ಅತ್ಯಂತ ಭರ್ಜರಿಯಾಗಿ ಬಾರಿಸುತ್ತಿದ್ದ ಕಾರಣ, ಏಕದಿನ ಪಂದ್ಯಗಳಲ್ಲಿ “ಪಿಂಚ್ ಹಿಟ್ಟರ್” ಅಗಿಯೂ ನಿರ್ವಹಿಸಿರುವುದಲ್ಲದೇ, ಟೆಸ್ಟ್ ಪಂದ್ಯಗಳಲ್ಲಿ ಕೆಲವೊಮ್ಮೆ ನೈಟ್ ವಾಚ್ ಮೆನ್ ಆಗಿಯೂ ನಿಭಾಯಿಸಿದ್ದಾರೆ. ಕರ್ನಾಟಕ ಮತ್ತು ಭಾರತದ ರಾಷ್ಟ್ರೀಯ ತಂಡವಲ್ಲದೇ, ಇಂಗ್ಲೆಂಡಿನ ಕೌಂಟಿ ಕ್ರಿಕೆಟ್ ನಲ್ಲಿ ಗ್ಲೌಸೆಸ್ಟರ್ ಶೈರ್ ಮತ್ತು ಲೀಸೆಸ್ಟರ್ ಶೈರ್ ತಂಡಗಳ ಪರವಾಗಿಯೂ ಆಡಿದ್ದಾರೆ.
ಸಾಧಾರಣವಾಗಿ ವೇಗದ ಬೌಲರ್ಗಳು 135-145ಕಿಮೀ ವೇಗದಲ್ಲಿ ಬೋಲಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದರೆ, 1996 ರಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಅವರು ಗಂಟೆಗೆ 156 ಕಿ.ಮೀ ವೇಗದಲ್ಲಿ ಬೋಲಿಂಗ್ ಮಾಡಿದ್ದರೇ, ವಿಶ್ವಕಪ್ ಪಂದ್ಯಾವಳಿಯೊಂದರಲ್ಲಿ, ಗಂಟೆಗೆ 154.5 ಕಿ.ಮೀ ವೇಗದ ಎಸೆತವೊಂದನ್ನು ಎಸೆದಿರುವುದು ಭಾರತದ ಪರ ಇಂದಿಗೂ ಅತ್ಯಂತ ಮಾರಕದ ಬೌಲಿಂಗ್ ದಾಖಲೆಯಾಗಿದೆ.
ಕ್ರಿಕೆಟ್ಟಿನಲ್ಲಿ ಅತ್ಯುತ್ತಮ ಫಾರ್ಮಿನಲ್ಲಿ ಇರುವಾಗಲೇ, ತಮ್ಮ 30ನೇ ವಯಸ್ಸಿನಲ್ಲಿ 1999 ರಲ್ಲಿ ಜ್ಯೋತ್ಸ್ನಾ ಅವರನ್ನು ವಿವಾಹವಾದರು. ಕಾಕತಾಳೀಯವೆಂದರೆ ಅದೇ ದಿನ ಕನ್ನಡ ಮತ್ತೊಬ್ಬ ಕಲಿ ಅನಿಲ್ ಕುಂಬ್ಲೆಯವರೂ ವಿವಾಹವಾದರು. ದುರಾದೃಷ್ಟವಷಾತ್ ನಾನಾ ಕಾರಣಗಳಿಂದಾಗಿ ಅವರ ವೈವಾಹಿಕ ಜೀವನ ಯಶಸ್ವಿಯಾಗದೆ ತಮ್ಮ ಮೊದಲ ಪತ್ರಿಯವರಿಗೆ ವಿಚ್ಚೇದನ ನೀಡಿದನ ನಂತರ 2008 ರಲ್ಲಿ ಪತ್ರಕರ್ತೆ ಮಾಧವಿ ಪತ್ರಾವಳಿ ಅವರನ್ನು ವಿವಾಹವಾಗಿ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ.
ನೀಳಕಾಯದ ಸಸ್ಯಾಹಾರಿಯಾಗಿ ವೇಗದ ಬೌಲರ್ ಆಗಿದ್ದ ಶ್ರೀನಾಥ್ ವಿಪರೀತ ಕ್ರಿಕೆಟ್ ಆಡುತ್ತಿದ್ದ ಪರಿಣಾಮವಾಗಿ ರೊಟೇಟರ್ ಕಫ್ ಖಾಯಿಲೆಗೆ ತುತ್ತಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಮಾರ್ಚ್ 1997 ರಿಂದ ನವೆಂಬರ್ ವರೆಗೆ ಕ್ರಿಕೆಟ್‌ನಿಂದ ದೂರ ಉಳಿಯಬೇಕಾಗಿತ್ತು. ಆದಾದ ನಂತರ ಶ್ರೀನಾಥ್ ಮತ್ತೆ ಅದೇ ರೀತಿಯಲ್ಲಿ ಚಂಡನ್ನುಎಸೆಯಬಲ್ಲರೇ ಎಂಬ ಎಲ್ಲರ ಅನುಮಾನಕ್ಕೆ ಸಡ್ಡು ಹೊಡೆಯುವಂತೆ ಬೌಲಿಂಗ್ ಮಾಡುವ ಮುಖಾಂತರ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದರು. 2000ದ ನಂತರ ಭಾರತ ತಂಡಕ್ಕೆ ಅಜಿತ್ ಅಗರ್ಕರ್, ಜಹೀರ್ ಖಾನ್ ರಂತಹ ವೇಗಿಗಳು ಸೇರಿಕೊಂಡಾಗ ನಿಧಾನವಾಗಿ ನೇಪತ್ಯಕ್ಕೆ ಸರಿಯ ತೊಡಗಿದ ಶ್ರೀನಾಥ್ 2002 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಸ್ವದೇಶಿ ಸರಣಿಯ ನಂತರ ಎಲ್ಲಾ ಪ್ರಕಾರದ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು. ಆದರೆ ಅಂದಿನ ತಂಡದ ನಾಯಕ ಸೌರವ್ ಗಂಗೂಲಿ ಅವರ ಒತ್ತಾಯದ ಮೇರೆಗೆ 2003 ರ ವಿಶ್ವಕಪ್‌ನವರೆಗೂ ಏಕದಿನ ಪಂದ್ಯಗಳನ್ನು ಮುಂದುವರೆಸಿ, ದಕ್ಷಿಣ ಆಫ್ರಿಕಾದಲ್ಲಿ ಅಕ್ಟೋಬರ್- ನವೆಂಬರ್ ನಲ್ಲಿ ನಡೆದ 2003ರ ವಿಶ್ವಕಪ್ ಪಂದ್ಯಾಗಳಿಗಳ ನಂತರ ಅವರು ಎಲ್ಲಾ ಪ್ರಕಾರದ ಕ್ರಿಕೆಟ್ಟಿನಿಂದ ನಿವೃತ್ತಿ ಘೋಷಿಸಿದರು.
ತಮ್ಮ ನಿವೃತ್ತಿಯ ನಂತರ ಕೆಲ ಕಾಲ ವೀಕ್ಷಕ ವಿವರಣೆಕಾರರಾಗಿ ಗುರುತಿಸಿಕೊಂಡರೂ ನಂತರ ತಮ್ಮ ಸೌಮ್ಯ ಸ್ವಭಾವ ಮತ್ತು ಸನ್ನಡತೆ ಮತ್ತು ಕ್ರಿಕೆಟ್ ಬಗ್ಗೆ ಅವರಿಗಿದ್ದ ಅಪಾರವಾದ ಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳುವ ಸಲುವಾಗಿ ಏಪ್ರಿಲ್ 2006 ರಲ್ಲಿ, ಶ್ರೀನಾಥ್ ಅವರು ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ನಿಂದ ಮ್ಯಾಚ್ ರೆಫರಿಯಾಗಿ ಆಯ್ಕೆಯಾಗಿದ್ದಲ್ಲದೇ, 2007 ರ ವಿಶ್ವಕಪ್ನಲ್ಲಿ ಸೇವೆ ಸಲ್ಲಿಸಿದರು. ಇದುವರೆಗೂ ಅವರು 35 ಟೆಸ್ಟ್ ಪಂದ್ಯಗಳು, 194 ODIಗಳು ಮತ್ತು 60 T20I ಗಳಲ್ಲಿ ರೆಫರಿಯಾಗಿ ಇಂದಿಗೂ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲವರ್ಷಗಳ ಹಿಂದೆ ಅನಿಲ್ ಕುಂಬ್ಲೆ ಅವರ ಸಾರಥ್ಯದಲ್ಲಿ ಶ್ರೀನಾಥ್ ಕರ್ನಾಟಕ ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿಯೂ ಆಗಿದ್ದಲ್ಲದೇ ಅವರ ಸಮಯದಲ್ಲೇ ಚಿನ್ನಸ್ವಾಮೀ ಕ್ರೀಡಾಂಗಣದ ನವೀಕರಣ ಮತ್ತು ನೆಲಮಂಗಲದ ಬಳಿಯ ಆಲೂರಿನ ಮೈದಾನಗಳಲ್ಲದೇ ರಾಜ್ಯಾದ್ಯಂತ ವಿವಿಧ ನಗರಗಳಲ್ಲಿ ಕ್ರೀಡಾಂಗಣಗಳು ಆರಂಭವಾಗಲು ಕಾರಣೀಭೂತರಾಗಿದ್ದಾರೆ.
ಶ್ರೀನಾಥ್ ಅವರ ಕೆಲವೊಂದು ದಾಖಲೆಗಳು ಈ ರೀತಿಯಾಗಿವೆ.
- ಭಾರತದ ಪರ ಏಕದಿನ ಪಂದ್ಯಾವಳಿಗಳಲ್ಲಿ 300 ವಿಕೆಟ್ ಪಡೆದ ಮೊದಲ ಆಟಗಾರ
- ವೇಗದ ಬೌಲರ್ ಆಗಿ 1992, 1996, 1999 ಮತ್ತು 2003 ಹೀಗೆ ಸತತವಾಗಿ 4 ವಿಶ್ವಕಪ್ ಪಂದ್ಯಾವಳಿಗಳನ್ನು ಆಡಿರುವ ಏಕೈಕ ಭಾರತೀಯ ಆಟಗಾರ
- ವಿಶ್ವಕಪ್ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್(44) ಕಬಳಿಸಿರುವ ಭಾರತೀಯ ಬೌಲರ್
- ಕ್ರಿಕೆಟ್ಟಿನಲ್ಲಿ ಶ್ರೀನಾಥ್ ಅವರ ಕೊಡುಗೆಯನ್ನು ಮನ್ನಿಸಿ ಭಾರತ ಸರ್ಕಾರ 1999 ರಲ್ಲಿ ಇವರಿಗೆ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಿದೆ.
ಶ್ರೀನಾಥ್ ಅವರ ಕ್ರಿಕೆಟ್ ಬದುಕಿನ ಈ ಕೆಲವೊಂದು ರೋಚಕ ಘಟನೆಗಳ ಮೂಲಕ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಸದಾಕಾಲವೂ ಹಚ್ಚ ಹಸಿರಾಗಿಯೇ ಇರುತ್ತಾರೆ.
- 1996 ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡದ ನಡುವೆ ನಡೆಯುತ್ತಿದ್ದ ಟೈಟಾನ್ ಕಪ್ ಪಂದ್ಯದಲ್ಲಿ ಗೆಲ್ಲಲು 216 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತದ ಮೊತ್ತ 164/8 ಆಗಿರುವಾಗ 88 ರನ್‌ಗಳಿಸಿ ಸಚಿನ್ ತೆಂಡೂಲ್ಕರ್ ಔಟಾದ ನಂತರ ಪಂದ್ಯ ಕೈಚೆಲ್ಲಿ ಹೋಯಿತು ಎಂದೇ ಎಲ್ಲರೂ ಭಾವಿಸಿದ್ದಾಗ ಅನಿಲ್ ಕುಂಬ್ಲೆ ಅವರ ಜೊತೆ 9ನೇ ವಿಕೆಟ್ ಜೊತೆಯಾಟಕ್ಕೆ 52 ರನ್ ಸೇರಿಸಿದ ಶ್ರೀನಾಥ್ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ನೊಂದಿಗೆ 23 ಎಸೆತಗಳಲ್ಲಿ 30 ರನ್ ಗಳಿಸುವ ಮೂಲಕ ಪಂದ್ಯವನ್ನು ಗೆಲ್ಲಿಸಿ ಭಾರತ ತಂಡವನ್ನು ಫೈನಲ್ ತಲುಪಿಸಿದ್ದಲ್ಲದೇ, ರಾಜ್‌ಕೋಟ್‌ನಲ್ಲಿ ನಡೆದ ಫೈನಲ್ಲಿನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಭಾರತ ತಂಡ ಪ್ರಶಸ್ತಿಯನ್ನು ಪಡೆಯುವುದರ ಕಾರಣೀಭೂತರಾದರು.
1999ರಲ್ಲಿ ದೆಹಲಿಯಲ್ಲಿ ನಡೆದ ಪಾಕ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸಿನಲ್ಲಿ ಅನಿಲ್ ಕುಂಬ್ಲೆ ಅದಾಗಲೇ 9 ವಿಕೆಟ್ ಪಡೆದಿದ್ದಾಗ ಮತ್ತೊಂದು ತುದಿಯಲ್ಲಿ ಬೌಲಿಂಗ್ ಮಾಡುತ್ತಿದ್ದ ಶ್ರೀನಾಥ್ ಎಸೆತವೊಂದರಲ್ಲಿ ಪಾಕ್ ಆಟಗಾರ ಹೊಡೆದ ಚೆಂಡನ್ನು ಭಾರತದ ಆರಂಭಿಕ ಆಟಗಾರ ಸಡಗೊಪನ್ ರಮೇಶ್ ಹಿಡಿಯಲು ಪ್ರಯತ್ನಿಸಿದಾಗ, ಅನಿಲ್ ಕುಂಬ್ಳೆ ಎಲ್ಲಾ 10 ವಿಕೆಟ್‌ಗಳನ್ನು ಪಡೆದು ದಾಖಲೆ ನಿರ್ಮಿಸಲಿ ಎನ್ನುವ ಸದಾಶಯದಿಂದ ಕ್ಯಾಚ್ ಹಿಡಿಯದಿರು ಎಂದು ಕೂಗಿದ್ದನ್ನು ಟಿವಿಯಲ್ಲಿ ಕೇಳಿ ಅಚ್ಚರಿ ಪಟ್ಟಿದ್ದೇವೆ. ನಂತರ ಎಲ್ಲಾ ಚೆಂಡುಗಳನ್ನು ವಿಕೆಟ್ ನಿಂದ ದೂರ ಎಸೆದ್ ತಮ್ಮ ಓವರ್ ಮುಗಿಸಿ ಮುಂದಿನ ಓವರಿನಲ್ಲಿ ಕುಂಬ್ಲೆ ಬೌಲಿಂಗಿನಲ್ಲಿ ವಾಸಿ ಅಕ್ರಮ್ ಔಟಾದಾಗ ಕುಂಬ್ಲೆ ಅವರನ್ನು ಭುಜದ ಮೇಲೆ ಎತ್ತಿ ಮೆರೆಸಾಡುವ ಮೂಲಕ ತಮ್ಮ ಕ್ರೀಡಾ ಸ್ಪೂರ್ತಿಯನ್ನು ಮೆರೆಸಿದ್ದು ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ.
12-13 ವರ್ಷಗಳ ಕಾಲ ಭಾರತದ ಪರ ಅಂತರಾಷ್ಟ್ರೀಯ ಪಂದ್ಯಗಳನ್ನು ದೇಶ ವಿದೇಶಗಳಲ್ಲಿ ಆಡಿದ ಶ್ರೀನಾಥ್, ವೇಗದ ಬೌಲರ್ ಆಗಿದ್ದರೂ ತಮ್ಮ ಇಡೀ ಕ್ರಿಕೆಟ್ ಜೀವನದಲ್ಲಿ ಎಂದಿಗೂ ಎದುರಾಳಿ ತಂಡದ ವಿರುದ್ಧ ಕೋಪತಾಪಗಳನ್ನು ತೋರದೇ ಸಹನಾಮೂರ್ತಿಯಂತಿದ್ದು ವಿಶ್ವಾದ್ಯಂತ ಕನ್ನಡಿಗರ ಸೌಮ್ಯತನವನ್ನು ಎತ್ತಿ ಮೆರೆಸಿದ ಜಾವಗಲ್ ಶ್ರೀನಾಥ್ ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.
ಏನಂತೀರಿ?
ನಿಮ್ಮವನೇ ಉಮಾಸುತ