ಇವತ್ತಿನ ದಿನ ಕಾಲದಲ್ಲಿ ದುಡಿಯುವ ಸಮಯದಲ್ಲಿ ಸರಿಯಾಗಿ ಎರಡು ಹೊತ್ತಿನ ಊಟ ಕಣ್ತುಂಬ ನಿದ್ದೆಯನ್ನೂ ಮಾಡದೇ, ಹೊಟ್ಟೆ ಬಟ್ಟೆ ಕಟ್ಟಿ ಅಷ್ಟೋ ಇಷ್ಟೋ ಉಳಿಸಿದ್ದನ್ನು ಒಂದು ಸಣ್ಣ ಖಾಯಿಲೆಯಿಂದ ಹುಷಾರಾಗೋದಿಕ್ಕೆ ವೈದ್ಯಕೀಯ ಚಿಕಿತ್ಸೆಗಾಗಿ ವೈದ್ಯರನ್ನು ಬೈದು ಕೊಳ್ಳುತ್ತಲೇ, ಲಕ್ಷಾಂತರ ರೂಪಾಯಿ ಹಣ ಆಸ್ಪತ್ರೆಗೆ ಕಟ್ಟಿ ನಿಟ್ಟುಸಿರು ಬಿಡುವಂತಹ ಪರಿಸ್ಥಿತಿ ಇರುವಾಗ, ಮಣಿಪಾಲ್ ಅಂತಹ ಕಾಲೇಜಿನಲ್ಲಿ ಓದಿ ವೈದ್ಯಕೀಯ ಪದವಿಯನ್ನು ಪಡೆದು ದೇಶ ವಿದೇಶಗಳಲ್ಲಿ ಲಕ್ಷಾಂತರ ಹಣವನ್ನು ಸಂಪದಿಸಿ ನೆಮ್ಮದಿಯಾಗಿರುವ ಬದಲು ವೈದ್ಯೋ ನಾರಯಣೋ ಹರಿಃ ಎನ್ನುವುದನ್ನು ಅಕ್ಷರಶಃ ಪಾಲಿಸುವಂತೆ ಮಂಡ್ಯಾದ ಗ್ರಾಮೀಣ ಜನರಿಗೆ ದೇವರಂತೆ ಕೇವಲ 5 ರೂಪಾಯಿಗಳಿಗೆ ಚಿಕಿತ್ಸೆ ನೀಡುತ್ತಿರುವ ಐದು ರೂಪಾಯಿ ಡಾಕ್ಟ್ರು ಎಂದೇ ಜನಪ್ರಿಯರಾದ ಡಾ. ಎಸ್. ಸಿ. ಶಂಕರೇಗೌಡರ ವ್ಯಕ್ತಿ ಮತ್ತು ವ್ಯಕ್ತಿತ್ವದ ಪರಿಚಯದ ಜೊತೆ ಅವರ ಯಶೋಗಾಥೆಯನ್ನು ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ
ಶಂಕರೇಗೌಡರು ಹುಟ್ಟಿದ್ದು ಮಂಡ್ಯ ತಾಲೂಕಿನ ಶಿವಳ್ಳಿ ಗ್ರಾಮದಲ್ಲಿ. ಬಾಲ್ಯದಿಂದಲೂ ಓದಿನಲ್ಲಿ ಚುರುಕಾಗಿದ್ದ ಶಂಕರೇ ಗೌಡರು ತಮ್ಮ ವೈದ್ಯಕೀಯ ಶಿಕ್ಷಣವನ್ನು ಉಡುಪಿ ಮಣಿಪಾಲ್ ಕಾಲೇಜಿನಲ್ಲಿ ಪಡೆದು ಇತರೇ ವೈದ್ಯರಂತೆ ವಿದೇಶಕ್ಕೆ ಫಲಾಯನ ಮಾಡಿಯೋ ಇಲ್ಲವೇ ತಮ್ಮದೇ ನರ್ಸಿಂಗ್ ಹೋಮ್ ಕಟ್ಟಿಸಿಕೊಂಡು ಲಕ್ಷ ಲಕ್ಷಗಟ್ಟಲೇ ಹಣವನ್ನು ಸಂಪಾದಿಸುವವರೇ ಹೆಚ್ಚಾಗಿರುವ ಕಾಲದಲ್ಲಿ ಆರ್ಥಿಕ ಸಮಸ್ಯೆಯಿಂದ ಗ್ರಾಮೀಣ ಪ್ರದೇಶದ ಬಹುತೇಕರಿಗೆ ಸೂಕ್ತವಾದ ಚಿಕಿತ್ಸೆ ದೊರೆಯುತ್ತಿಲ್ಲ ಎಂಬುದನ್ನು ಮನಗಂಡು ಸೂಕ್ತ ಆರೋಗ್ಯ ಸೌಲಭ್ಯಗಳು ಎಲ್ಲರಿಗೂ ತಲುಪುವಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯ ಎಂದು ಸುಮ್ಮನಾಗದೇ ತಮ್ಮೂರಿನಿಂದ ಸುಮಾರು 12 ಕಿಮೀ ದೂರದ ಮಂಡ್ಯದಲ್ಲಿ 30 ವರ್ಷಗಳ ಹಿಂದೆ ಸಣ್ಣದೊಂದು ಕ್ಲಿನಿಕ್ ಆರಂಭಿಸಿ ಚರ್ಮವೈದ್ಯರಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ಅವರ ಕೈಗುಣ ಚೆನ್ನಾಗಿರುವ ಕಾರಣ ಕೇವಲ ಮಂಡ್ಯಾದ ರೋಗಿಗಳಲ್ಲದೇ, ದೂರದ ಬೆಂಗಳೂರು, ಗುಲ್ಬರ್ಗ, ರಾಯಚೂರು, ಶಿವಮೊಗ್ಗ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ತಮಿಳುನಾಡು, ಒಡಿಶಾ ಮತ್ತು ಮುಂಬೈನಿಂದಲೂ ರೋಗಿಗಳು ಬರುತ್ತಾರೆ ಎಂಬುದು ಅವರ ಹೆಗ್ಗಳಿಕೆಯಾಗಿದೆ.
ಹಾಗಾಗಿಯೇ ದೇಶದ ನಾನಾ ಭಾಗಗಳಿಂದ ಇವರ ಬಳಿ ಜನರು ಬಂದು ಚಿಕಿತ್ಸೆ ಪಡೆಯಲು ನಿತ್ಯ ನೂರಾರು ಜನ ಸಾಲುಗಟ್ಟಿ ನಿಲುತ್ತಾರೆ. ಕೇವಲ 5 ರೂಪಾಯಿಗಳಷ್ಟೇ ರೋಗಿಗಳಿಂದ ಹಣವನ್ನು ಪಡೆದರೂ ಇವರು ಬರೆದು ಕೊಡುವ ಔಷಧಿಗಳು ಕೂಡ ದುಬಾರಿಯಾಗಿರದೇ, ಕೇವಲ ನೂರರಿಂದ ಇನ್ನೂರು ರೂಪಾಯಿಯಲ್ಲೇ ಸಿಗುತ್ತದೆ. ಒಮ್ಮೆ ಇವರ ಬಳಿ ಬಂದು ಚಿಕಿತ್ಸೆ ಪಡೆದರೆ ಸಾಕು ಮತ್ತೆ ಮತ್ತೆ ಅವರ ಬಳಿ ಅಲೆಯುವ ಅವಶ್ಯಕತೆಯೂ ಇಲ್ಲ. ಅವರು ಒಮ್ಮೆ ನೀಡುವ ಔಷಧಿಯಿಂದಲೇ ಸಂಪೂರ್ಣ ಗುಣಮುಖರಾಗುತ್ತಾರೆ ಎಂಬುದು ಅವರಿಂದ ಚಿಕಿತ್ಸೆ ಪಡೆಯುವ ರೋಗಿಗಳ ನಂಬಿಕೆಯಾಗಿರುವ ಕಾರಣ ದಿನೇ ದಿನೇ ಅವರ ಜನಪ್ರಿಯರಾಗುತ್ತಿದ್ದಾರೆ.
ಇವರ ಬರಿ ಚಿಕಿತ್ಸೆ ಪಡೆಯಲು ಯಾರದ್ದೇ ಶಿಫಾರಸ್ಸಾಗಲಿ ಹಂಗಾಗಲೀ ಇಲ್ಲವೇ ಇಲ್ಲವಾಗಿದೆ. ರೋಗಿಯು ಬಡವನಾಗಿರಲೀ, ಬಲ್ಲಿದನಾಗಿರಲೀ, ರಾಜಕಾರಣಿಯಾಗಿರಲೀ, ಇಲ್ಲವೇ ಉದ್ಯಮಿಯಾಗಿರಲೇ ಅಥವಾ ಹಿರಿಯ ಅಧಿಕಾರಿಯೇ ಆಗಿದ್ದರೂ ಇವರ ಬಳಿ ಎಲ್ಲರೂ ಸಮಾನರೇ. ಎಲ್ಲರು ಸರದಿಯ ಸಾಲಿನಲ್ಲಿಯೇ ನಿಂತು ಕೊಂಡು ಸರದಿ ಬಂದಾಗ ಎಲ್ಲರಿಗೂ ಒಂದೇ ರೀತಿಯ ಚಿಕಿತ್ಸೆ ನೀಡುತ್ತಾರೆ. ಆದರೆ ಮಹಿಳೆಯರಿಗೆ, ಮಕ್ಕಳಿಗೆ ಮತ್ತು ಅಶಕ್ತರಿಗೆ ಪ್ರತ್ಯೇಕ ಸರತಿ ಸಾಲು ಇದೆ. ಚಿಕಿತ್ಸೆಯ ನಂತರ ಎಲ್ಲರಿಂದಲೂ ಪಡೆಯುವುದು ಒಂದೇ ದರವಾದ್ದರಿಂದ ಅದೆಷ್ಟೋ ಜನರು ಮೂಗಿಗಿಂತ ಮೂಗಿನ ನತ್ತೇ ಭಾರ ಎನ್ನುವಂತೆ ಇವರ ಚಿಕಿತ್ಸೆಯ ಹಣಕ್ಕಿಂತ ಇಲ್ಲಿಗೆ ಬರುವ ಬಸ್ ಚಾರ್ಜ ಹೆಚ್ಚಾಗಿರುತ್ತದೆ ಎಂದೇ ತಮಾಷೆ ಮಾಡುತ್ತಾರೆ.
ಸಾಮಾನ್ಯವಾಗಿ ವೈದ್ಯರ ಚಿಕಿತ್ಸಾ ವೆಚ್ಚವನ್ನು ಐಎಂಎ(ಇಂಡಿಯನ್ ಮೆಡಿಕಲ್ ಅಸೋಸಿಯೇಷನ್) ನಿರ್ಧರಿಸುತ್ತದೆ. ಆದರೆ ಶಂಕರೇ ಗೌಡರು ಇದಾವುದರ ಹಂಗಿಲ್ಲದೇ ತಮ್ಮ ಪಾಡಿಗೆ ತಾವು ಸಂತೋಷದಿಂದ ಐದು ರೂಪಾಯಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಅನೇಕ ಬಾರಿ ತಮ್ಮ ಚಿಕಿತ್ಸೆಯ ದರವನ್ನು ಹೆಚ್ಚಿಸಲು ಸಲಹೆ ನೀಡಿದರೂ ಅದಕ್ಕೆಲ್ಲಾ ಶಂಕರೇಗೌಡ್ರು ಸೊಪ್ಪೇ ಹಾಕದೇ, ಇನ್ನು ಅದಿಲ್ಲ ಇದಿಲ್ಲ ಎಂದು ಪದೇ ಪದೇ ಒಂದಲ್ಲ ಒಂದು ಮುಷ್ಕರದಲ್ಲಿ ಭಾಗಿಗಳಾಗಿ ತಮ್ಮ ಬೇಡಿಕೆಯ ಈಡೇರಿಕೆಗೆ ಒತ್ತಾಯಿಸುವ ವೈದ್ಯರಿಂದ ಸದಾಕಾಲವೂ ದೂರವಿದ್ದು ತಮ್ಮ ಕಾಯಕದಲ್ಲಿ ನಿರತರಾಗಿದ್ದಾರೆ. ರೋಗಿಗಳ ಚಿಕಿತ್ಸೆಗೆಂದೇ ವೈದ್ಯರಿರಬೇಕು. ರೋಗಿಗಳಿಗೆ ಚಿಕಿತ್ಸೆ ಕೊಡದ ವೈದ್ಯರು ಇಲ್ಲವೇ ರೋಗಿಗಳಿಂದ ಸುಲಿಗೆ ಮಾಡುವವರು ನಿಜವಾದ ವೈದ್ಯರೇ ಅಲ್ಲಾ ಎಂದು ಎನ್ನುವುದು ಅವರ ಧ್ಯೇಯವಾಗಿದೆ. ನನಗೆ ನನ್ನ ವೈದ್ಯಕೀಯ ಸೇವೆಯಲ್ಲೇ ತೃಪ್ತಿ ಇದೆ. ಹಾಗಾಗಿ ನಾನು ಸದಾಕಾಲವು ಹೀಗೆಯೇ ಇದೇ ರೀತಿಯಲ್ಲಿಯೇ ಮುಂದುವರೆಯುತ್ತೇನೆ ಎನ್ನುತ್ತಾರೆ ಡಾ.ಶಂಕರೇಗೌಡರು.
ಡಾ. ಶಂಕರೇಗೌಡರು ವೃತ್ತಿಯಲ್ಲಿ ವೈದ್ಯರಾಗಿದ್ದರೇ, ಪ್ರವೃತ್ತಿಯಲ್ಲಿ ಅವರೊಬ್ಬ ಯಶಸ್ವಿ ರೈತರು ಮತ್ತು ಸಜ್ಜನಿಕೆಯ ರಾಜಕಾರಣಿಯೂ ಆಗಿದ್ದಾರೆ. ತಮ್ಮ ಸ್ವಗ್ರಾಮ ಶಿವಳ್ಳಿಯಲ್ಲಿ ಹತ್ತಾರು ಎಕರೆ ಜಮೀನು ಹೊಂದಿರುವ ಶಂಕರೇಗೌಡರು ಪ್ರತಿ ವರ್ಷ ನೂರಾರು ಟನ್ ಕಬ್ಬು ಮತ್ತು ಮನೆಗೆ ಅಗತ್ಯವಿರುವಷ್ಟು ಭತ್ತ ಬೆಳೆಯುತ್ತಾರೆ. ಹಾಗಾಗಿಯೇ ಅವಾ ದೈನಂದಿನ ಚಟುವಟಿಕೆ ಉಳಿದವರಿಗಿಂತಲೂ ಸ್ವಲ್ಪ ವಿಭಿನ್ನವಾಗಿದೆ. ಮಂಡ್ಯದ ಬಂಡೀಗೌಡ ಮೂರನೇ ತಿರುವಿನಲ್ಲಿರುವ ಮನೆಯಲ್ಲಿ ವಾಸಿಸುವ ವೈದ್ಯರು, ಬೆಳಿಗ್ಗೆ ಎದ್ದ ಕೂಡಲೇ ತಮ್ಮ ಪ್ರಾಥಃರ್ವಿಧಗಳನ್ನು ಮುಗಿಸಿದ ನಂತರ ಸುಮಾರು ಒಂದು ಗಂಟೆ ಕಾಲ ದಿನಪತ್ರಿಕೆಗಳ ಓದಿದ ಬಳಿಕ ಊರಿನಲ್ಲಿರುವ ತಮ್ಮ ಜಮೀನಿನಲ್ಲಿ ಇತರೇ ರೈತರಂತೆಯೇ ಸುಮಾರು ಎರಡು ಗಂಟೆ ಕಾಲ ಜಮೀನಿನಲ್ಲಿ ಬೇಸಾಯ ಮಾಡಿ ನಂತರ ಅವರಿಗಾಗಿಯೇ ಅಲ್ಲೇ ಕಾಯುತ್ತಿರುವ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುತ್ತಾರೆ.
ಆದಾದ ನಂತರ ಮನೆಗೆ ಬಂದು ಸ್ನಾನ ತಿಂಡಿ ಇಲ್ಲವೇ ಊಟವನ್ನೇ ಮುಗಿಸಿ ಚಿಕಿತ್ಸೆ ನೀಡಲು ಆರಂಭಿಸಿದರೆ ರಾತ್ರಿ ಎಂಟು ಗಂಟೆವರೆಗೂ ನಿರಂತರವಾಗಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಲೇಿ ಇರುತ್ತಾರೆ. ಕೆ.ಆರ್.ರಸ್ತೆಯಲ್ಲಿರುವ ಆದಿಚುಂಚನಗಿರಿ ಬಿಲ್ಡಿಂಗ್ ನಲ್ಲಿ ತಮ್ಮ ಕ್ಲಿನಿಕ್ ಹೊಂದಿರುವ ವೈದ್ಯರು ಇತರೇ ಕ್ಲಿನಿಕ್ಕಿನಂತೆ ಭಾರೀ ಐಶಾರಾಮ್ಯವಾಗಿರದೇ ಸಾಧಾರಣವಾಗಿದ್ದರೂ ಅವರ ಕೈಗುಣ ಚೆನ್ನಾಗಿರುವ ಕಾರಣ ಜನರು ಸರದಿಯಲ್ಲಿ ನಿಂತು ಚಿಕಿತ್ಸೆ ಪಡೆಯುತ್ತಿದ್ದಾರೆ. ಅನೇಕ ಬಾರಿ ರೋಗಿಗಳು ಕ್ಲೀನಿಕ್ಕಿಗೆ ಬರಲೂ ಸಾಧ್ಯಾವಾದೇ ಇರುವ ಹೋಗುತ್ತಿರುವ ದಾರಿಯ ಮಧ್ಯದಲ್ಲಿ ಕೈ ಅಡ್ಡ ಹಾಕಿ ನಿಲ್ಲಿಸಿದರೆ, ಅಲ್ಲೇ ಯಾವುದೋ ಅಂಗಡಿಯ ಜಗುಲಿಯ ಮೇಲೆ ಕುಳಿತೋ ಇಲ್ಲವೇ ರಸ್ತೆಯ ಪಕ್ಕದಲ್ಲಿ ನಿಂತೂ ರೋಗಿಗಳನ್ನು ಪರೀಕ್ಷಿಸಿ ಚಿಕಿತ್ಸೆ ನೀಡುತ್ತಿರುವುದು ಅತ್ಯಂತ ಶ್ಲಾಘನೀಯವಾಗಿದೆ.
ನಗರದ ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಗುಣಪಡಿಸಲು ಸಾಧ್ಯವಾಗದ ಅನೇಕ ರೋಗಗಳನ್ನು ಗುಣಪಡಿಸಿರುವ ವೈದ್ಯರ ಬಳಿ ಒಂದು ಮೊಬೈಲ್ ಫೋನಾಗಲೀ, ಕಂಪ್ಯೂಟರ್ ಅಥವಾ ಇಂಟರ್ನೆಟ್ ಇಲ್ಲದಿರುವುದು ಅಚ್ಚರಿಯ ವಿಷಯವಾಗಿದೆ. ಅವರ ಕ್ಲಿನಿಕ್‌ನಲ್ಲಿ ಕೇವಲ ಒಂದು ದೂರವಾಣಿ ಇದ್ದು ಅದನ್ನೂ ಸಹಾ ಯಾವುದೇ ಸಹಾಯಕರು ಅಥವಾ ಕಾಂಪೌಂಡರ್ಗಳು ಇಲ್ಲದೇ ಅವೆಲ್ಲಾ ಕೆಲಸವನ್ನೂ ವೈದ್ಯರೇ ಸ್ವತಃ ನಿರ್ವಹಿಸುತ್ತಾರೆ.
ಈ ರೀತಿಯ ಸರಳ ಸಜ್ಜನರು ರಾಜಕೀಯಕ್ಕೆ ಬಂದಲ್ಲಿ ಹೆಚ್ಚಿನ ಸೇವೆ ಸಲ್ಲಿಸಬಹುದು ಎನ್ನುವ ಕಾರಣದಿಂದಾಗಿ, ತಮ್ಮ ಕ್ಷೇತ್ರದ ಜನರ ಬಲವಂತಕ್ಕೆ ಮಣಿದು ಕಳೆದ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಎರಡೂವರೆ ವರ್ಷಗಳ ಕಾಲ ಮಂಡ್ಯ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಿಯೂ ಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದರು. ಇದೇ ಉತ್ಸಾಹದಲ್ಲಿ ಕಳೆದ ವಿಧಾನ ಸಭೆಯ ಚುನಾವಣೆಯಲ್ಲಿಯೂ ಪಕ್ಷೇತರರಾಗಿ ಸ್ಪರ್ಧಿಸಿ ಜನ ಬೆಂಬಲ ಸಿಗದೇ ಪರಾಭವಗೊಂಡು ತಮ್ಮ ವೈದ್ಯಕೀಯ ವೃತ್ತಿಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
ಡಾ.ಶಂಕರೇಗೌಡ ಅವರು ಸಮಾಜಕ್ಕೆ ಸಲ್ಲಿಸಿದ ಈ ಅಸಾಧಾರಣವಾದ ಸೇವೆಗಾಗಿ ವಿವಿಧ ಸಂಘ ಸಂಸ್ಥೆಗಳು ಅವರನ್ನು ಗೌರವಿಸಿದ್ದಾರೆ
- ಕಲ್ಪವೃಕ್ಷ ಟ್ರಸ್ಟ್ ಕರ್ನಾಟಕ ಕಲ್ಪವೃಕ್ಷ ಪ್ರಶಸ್ತಿ ನೀಡಿ ಗೌರವಿಸಿದೆ.
- ಜೀ ಕನ್ನಡ ವಾಹಿನಿಯು 2019ರಲ್ಲಿ ಹೆಮ್ಮೆಯ ಕನ್ನಡಿಗ ಪ್ರಶಸ್ತಿ ನೀಡಿ ಗೌರವಿಸಿದೆ.
- ಅವರ ನಿಸ್ವಾರ್ಥ ಕೆಲಸಕ್ಕಾಗಿ, ಮುದ್ರಣ ಮತ್ತು ದೃಶ್ಯ ಮಾಧ್ಯಮಗಳು ಲೇಖನವನ್ನು ಬರೆದು ಗೌರವ ಸಲ್ಲಿಸಿವೆ.
ಕೊರೋನಾ ಮಹಾಮಾರಿಯ ಸಂಧರ್ಭದಲ್ಲಿಯೂ ಯಾವುದಕ್ಕೂ ಜಗ್ಗದೆ, ಕುಗ್ಗದೆ ನಿರಂತರವಾಗಿ ಎಂದಿನಂತೆ ಚಿಕಿತ್ಸೆ ನೀಡುತ್ತಲೇ ಇದ್ದರು. ವರ್ಷದ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ವಿಶ್ರಾಂತಿ ದೃಷ್ಟಿಯಿಂದ ಮನೆಯಲ್ಲೇ ಕ್ಲಿನಿಕ್ ಮಾಡಿಕೊಂಡು ಬೆಳಿಗ್ಗೆ 8ರಿಂದ 9.30ರವರೆಗೆ ಹಾಗೂ ಮಧ್ಯಾಹ್ನ 12ರಿಂದ ರಾತ್ರಿ 8 ಗಂಟೆವರೆಗೆ ಚಿಕಿತ್ಸೆ ನೀಡುತ್ತಿದ್ದಾರೆ. ಹಿಂದೆಲ್ಲಾ ಇವರು ಮನೆಗೆ ಬರುವವರೆಗೂ ಆತಂಕದಲ್ಲೇ ಇರುತ್ತಿದ್ದ ಶಂಕ್ರೇಗೌಡರ ಮಡದಿ ಮತ್ತು ಮಗಳಿಗೆ ಈಗ ವೈದ್ಯರು ಮನೆಯಲ್ಲೇ ಇದ್ದು ಚಿಕಿತ್ಸೆ ಕೊಡುತ್ತಿರುವುದು ಅವರ ಮನೆಯವರಿಗೆ ತುಸು ನೆಮ್ಮದಿ ನೀಡಿದೆ.
ವರ್ಷದ 365 ದಿನವೂ ಬೇಸರಿಸಿಕೊಳ್ಳದೇ, ಇಷ್ಟು ತಡರಾತ್ರಿಯವರೆಗೂ ರೋಗಿಗಳಿಗೆ ಹೇಗೆ ಚಿಕಿತ್ಸೆ ನೀಡುತ್ತೀರಿ? ಎಂದು ಪ್ರಶ್ನಿಸಿದ್ದಕ್ಕೆ, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಮಾಜಿ ಪ್ರಾಧ್ಯಾಪಕರಾಗಿದ್ದ ಡಾ.ಕೆ.ಗೋವಿಂದ ಅವರೂ ಸಹಾ ಹೀಗೆಯೇ ಹಗಲಿರುಳು ಎನ್ನದೇ ಚಿಕಿತ್ಸೆ ಕೊಡುತ್ತಿದ್ದದ್ದೇ ನನಗೆ ಸ್ಫೂರ್ತಿ ಎನ್ನುತ್ತಾರೆ ಗೌಡರು.
ನಮ್ಮ ಈ ಮಂಡ್ಯದ ಐದು ರೂಪಾಯಿ ಡಾಕ್ಟರ್ ಅವರ ಸಾಮಾಜಿಕ ಕೊಡುಗೆಗಳನ್ನು ಪರಿಗಣಿಸಿ ಅವರಿಗೆ #IndianOfTheYear2022 ಸಾಮಾಜಿಕ ಪರಿವರ್ತನೆ ಶ್ರೇಣಿಯಲ್ಲಿ ನಮ್ಮ ಘನ ಸರ್ಕಾರ ಅವರನ್ನು ದೆಹಲಿಗೆ ಕರೆಸಿ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಂದ ಸನ್ಮಾನ ಮಾಡಿರುವುದು ನಿಜಕ್ಕೂ ಒರ್ವ ನೈಜ ಸಾಧಕರಿಗೆ ಸಂದ ಸನ್ಮಾನವೇ ಸರಿ.
ಈ ಮೊದಲೇ ಹೇಳಿದಂತೆ ವೈದ್ಯೋ ನಾರಯಣೋ ಹರಿಃ ಎಂದು ವೈದ್ಯರನ್ನು ದೇವರ ಸಮಾನ ಎಂದು ಅನಾದಿ ಕಾಲದಿಂದಲೂ ನಂಬಿರುವವರಿಗೆ, ಇತ್ತೀಚಿಗೆ ಎಲ್ಲೆಡೆಯೂ ವಾಣಿಜ್ಯೀಕರಣವಾಗಿ ಅನೇಕ ವೈದ್ಯರು ದುಬಾರಿ ಶುಲ್ಕವನ್ನು ವಿಧಿಸುವುದಲ್ಲದೇ, ಔಷಧಿ ಕಂಪನಿಗಳು ಮತ್ತು ಸುತ್ತಮುತ್ತಲಿನ ಮೆಡಿಕಲ್ ಸ್ಟೋರ್ಗಳೊಂದಿಗೆ ಶಾಮೀಲಾಗಿ, ಅವರು ಕೊಡುವ ಕಮಿಷನ್ ಆಸೆಗಾಗಿ ದುಬಾರೀ ಔಷಧಿಗಳನ್ನೇ ಬರೆಯುವ ದಿನಗಳಲ್ಲಿ, ವೃತ್ತಿ ಗೌರವ ಅದರ್ಶ ಮತ್ತು ತತ್ವಗಳನ್ನು ಉಳಿಸಿಕೊಂಡು ಗ್ರಾಮೀಣ ಜನರಿಗೆ ಕೇವಲ 5 ರೂಪಾಯಿಗಳಿಗೆ ಚಿಕಿತ್ಸೆ ನೀಡುತ್ತಿರುವ ಡಾ. ಶಂಕ್ರೇಗೌಡರು ಈಗ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ಭಾವೀ ವೈದ್ಯರಿಗೆ ಖಂಡಿತವಾಗಿಯೂ ಮಾದರಿಯಾಗಬಲ್ಲರು ಇಂತಹ ಮಾನವೀಯತೆ ಮತ್ತು ಸೇವಾ ಮನೋಭಾವನೆಯನ್ನು ಹೊಂದಿರುವ ಶ್ರೀ ಡಾ. ಶಂಕರೇ ಗೌಡರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.
ಏನಂತೀರಿ?
ನಿಮ್ಮವನೇ ಉಮಾಸುತ