ಅದು ತೊಂಬ್ಬತ್ತರ ದಶಕ. ಆಗ ನರಸಿಂಹರಾಯರ ಸರ್ಕಾರಲ್ಲಿ ಆರ್ಥಿಕ ತಜ್ಞರಾಗಿದ್ದ ಮನಮೋಹನ್ ಸಿಂಗ್ ಅವರು ಹಣಕಾಸಿನ ಮಂತ್ರಿಯಾಗಿದ್ದ ಕಾಲ. ಇದಕ್ಕೂ ಮೊದಲು ಆಳ್ವಿಕೆ ನಡೆಸಿದ್ದ ಕಾಂಗ್ರೇಸ್ ಮತ್ತು ಕೆಲ ಕಾಲ ಆಡಳಿತ ನಡೆಸಿದ ಖಿಚಡಿ ಸರ್ಕಾರಗಳ ಅಸಮರ್ಥ್ಯದಿಂದಾಗಿ ದೇಶದ ಆರ್ಥಿಕ ಸ್ಥಿತಿ ಬಹಳವಾಗಿ ಹದಗೆಟ್ಟ ಪರಿಣಾಮವಾಗಿ ವಿದೇಶೀ ಹಣದಗಳ ಮುಂದೆ ನಮ್ಮ ದೇಶದ ಹಣದ ಮೌಲ್ಯವನ್ನು ಕಡಿಮೆ ಮಾಡಲೇ ಬೇಕಾದ ಅನಿವಾರ್ಯ ಪ್ರಮೇಯವು ಉಂಟಾದಾಗ, ಜಾಗತೀಕರಣ ಹೆಸರಿನಲ್ಲಿ ಹಣದ ಮೌಲ್ಯವನ್ನು ಕಡಿಮೆ ಗೊಳಿಸಿದ್ದಲ್ಲದೇ, ಸೂಜಿ ಸಾಬೂನಿನಿಂದ ಹಿಡಿದು ಎಲೆಕ್ಟ್ರಾನಿಕ್ಸ್ ಉಪಕರಣದವರೆಗೂ ವಿದೇಶೀ ಕಂಪನಿಗಳಿಗೆ ಕೆಂಪು ನೆಲಹಾಸನ್ನು ಹಾಕಿ ಸ್ವಾಗತಿಸಲಾಯಿತು.
ಇದ್ದಕ್ಕಿದ್ದಂತೆಯೇ ವಿದೇಶೀ ವಸ್ತುಗಳು ಸುಲಭ ದರದಲ್ಲಿ ಭಾರತದಲ್ಲಿ ಲಭಿಸಿದಾಗ, ಜನರ ಸಂತೋಷಕ್ಕೆ ಪಾರವೇ ಇರದೇ, ನರಸಿಂಹರಾಯರನ್ನು ಮತ್ತು ಮನಮೋಹನ್ ಸಿಂಗ್ ಅವರನ್ನು ಹೊಗಳಿ ಅಟ್ಟಕ್ಕೇರಿದವರಿಗೆ ನಂತರ ದಿನಗಳಲ್ಲಿ ಇದರ ಅಡ್ಡ ಪರಿಣಾಮಗಳ ದೂರದೃಷ್ಟಿಯ ಕೊರತೆ ಎದ್ದು ಕಾಣಲು ಹೆಚ್ಚಿನ ದಿನಗಳೇನೂ ಬೇಕಾಗಲಿಲ್ಲ. ಎಲೆಕ್ಟ್ರಾನಿಕ್ಸ್ ವಸ್ತುಗಳು ಸುಲಭದರದಲ್ಲಿ ಲಭಿಸಿದರೂ, ದೈನಂದಿನ ವಸ್ತುಗಳನ್ನು ತಯಾರಿಸುತ್ತಿದ್ದ ಬಹುತೇಕ ಗುಡಿ ಕೈಗಾರಿಕೆಗಳು ಮತ್ತು ಸಣ್ಣ ಸಣ್ಣ ಉದ್ಯಮಗಳು ಸದ್ದಿಲ್ಲದೇ ಮುಚ್ಚಿಹೋಗಿ ಲಕ್ಷಾಂತರ ನಿರುದ್ಯೋಗಿಗಳಾದ್ದದ್ದು ಸುದ್ದಿಗೆ ಬರಲೇ ಇಲ್ಲ.
ಅದುವರೆಗೂ ಇದ್ದ ಖಾಸಗೀ ಕಂಪನಿಗಳಲ್ಲಿ ಸಾವಿರದಲ್ಲಿ ಸಂಬಳ ಪಡೆಯುತ್ತಿದ್ದವರಿಗೆ ಬಹುರಾಷ್ಟ್ರೀಯ ಕಂಪನಿಗಳು ಆಗಮಿಸಿದ ನಂತರ ಏಕಾಏಕಿ ಲಕ್ಷಾಂತರ ಸಂಬಳ ಪಡೆಯಲಾರಂಭಿಸಿದಂತೆ ಜನರ ಜೀವನ ಶೈಲಿಯೇ ಬದಲಾಗ ತೊಡಗಿದಾಗ ಇಂದು ದೇಶದ ಸಂಸ್ಕೃತಿಗೆ ಮಾರಕ ಎಂಬುದನ್ನು ಮನಗಂಡು ದೇಸೀ ಚಿಂತನೆಗೆ, ಜೀವನ ಶೈಲಿಗೆ ಆಂದೋಲನದ ರೂಪ ಕೊಟ್ಟವರೇ ಶ್ರೀ ರಾಜೀವ್ ದೀಕ್ಷಿತರು. ತಮ್ಮ ಸ್ವದೇಶಿ ಬಚಾವೋ ಆಂದೋಲನದ ಮೂಲಕ ಸುನಾಮಿ ಅಲೆಗಳಂತೆ ಅಪ್ಪಳಿಸುತ್ತಿದ್ದ ಬಹುರಾಷ್ಟ್ರೀಯ ಕಂಪೆನಿಗಳು ಹೊತ್ತು ತರುತ್ತಿದ್ದ ವಿದೇಶಿ ಜೀವನ ಶೈಲಿಯ ವಿರುದ್ಧ ಎದೆ ಸೆಟೆಸಿ ನಿಲ್ಲುವ ಲಕ್ಷಾಂತರ ತರುಣರ ಪಡೆಯನ್ನೇ ಕಟ್ಟಿದ್ದಲ್ಲದೇ ಅದಕ್ಕಾಗಿ ದೇಶಾದ್ಯಂತ ನಿರಂತರ ಪ್ರವಾಸ ಕೈಗೊಂಡರು.
ಉತ್ತರ ಪ್ರದೇಶದ ಆಲಿಗಢ ಜಿಲ್ಲೆಯ ನಾಹ್ ಎನ್ನುವ ಗ್ರಾಮದ ಶಾಲೆಯ ಶಿಕ್ಷಕರಾಗಿದ್ದ ಶ್ರೀ ರಾಧೇ ಶ್ಯಾಮ್ ದೀಕ್ಷಿತ್ ಮತ್ತು ಮಿಥಿಲೇಶ್ ಕುಮಾರಿ ಎಂಬ ದಂಪತಿಗಳಿಗೆ ನವೆಂಬರ್ 30, 1967ರಲ್ಲಿ ರಾಜೀವ್ ದೀಕ್ಷಿತರ ಜನನವಾಗುತ್ತದೆ. ತಮ್ಮ ತಂದೆಯವರ ಬಳಿಯೇ ಫಿರೋಜ಼ಾಬಾದ್ ಹಳ್ಳಿಯಲ್ಲಿಯೇ ತಮ್ಮ ಪ್ರಾಥಮಿಕ ಶಿಕ್ಷಣ ಪಡೆದು, 1994 ಉನ್ನತ ಶಿಕ್ಷಣಕ್ಕಾಗಿ ಅಲಹಾಬಾದ್ ಅರ್ಥಾತ್ ಪ್ರಯಾಗಕ್ಕೆ ತೆರಳಿ ಅಲ್ಲಿ ಉಪಗ್ರಹ ದೂರಸಂಪರ್ಕ ವಿಷಯದ ಮೇಲೆ ಭಾರತೀಯ ಇನ್ಸ್ಟಿಟ್ಯೂಟ್ ಒಫ್ ಟೆಕ್ನಾಲಜಿ(ಕಾನ್ಪುರ್) ನಲ್ಲಿ ತಮ್ಮ ಎಂ.ಟೆಕ್ ಪದವಿಯನ್ನು ಮುಗಿಸಿದರು. ಆದಾದ ನಂತರ ಫ್ರಾನ್ಸ್ ದೇಶಕ್ಕೆ ತೆರಳಿ, ದೂರಸಂಪರ್ಕದ ವಿಷಯದಲ್ಲಿಯೇ ಡಾಕ್ಟರೇಟ್ ಮುಗಿಸಿ ವಿಜ್ಞಾನಿಯಾಗಿ ಸಿ.ಯೆಸ್.ಐ.ಅರ್ ನಲ್ಲಿ ಕೆಲಸವನ್ನು ಆರಂಭಿಸುತ್ತಾರೆ.
ವಿಜ್ಞಾನಿಯಾಗಿ ಕೆಲಸ ಮಾಡುತ್ತಾ ಕೈ ತುಂಬಾ ಸಂಬಳ ಪಡೆಯುತ್ತಿದ್ದರೂ, ಸ್ವಾಮೀ ವಿವೇಕಾನಂದರು, ಚಂದ್ರಶೇಖರ್ ಆಜಾದ್, ಭಗತ್ ಸಿಂಗ್ ಮತ್ತು ಉಧಮ್ ಸಿಂಗ್ ಮುಂತಾದ ದೇಶಭಕ್ತರುಗಳ ಸಿದ್ಧಾಂತಗಳ ಪ್ರಭಾವಿತರಾಗಿದ್ದ ರಾಜೀವ್ ಅವರಿಗೆ ದೇಶ ಧರ್ಮ ಸಂಸ್ಕಾರ ಮತ್ತು ಭಾರತೀಯ ಸಂಸ್ಕೃತಿಯ ಬಗ್ಗೆಗಿದ್ದ ಕಾಳಜಿಯಿಂದಾಗಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಸ್ವದೇಶಿ ಚಳುವಳಿಗೆ ತಮ್ಮನ್ನು ತಾವು ಸಂಪೂರ್ಣವಾಗಿ ಅರ್ಪಿಸಿಕೊಳ್ಳುತ್ತಾರೆ. ಸ್ವದೇಶೀ ಜಾಗರಣ ಮಂಚ್ ಎಂಬ ಸಂಘಟನೆಯನ್ನು ಆರಂಭಿಸಿ ಬಹುರಾಷ್ಟ್ರೀಯ ಕಂಪನಿಗಳ ವಿರುದ್ಧ ದೇಸೀ ನಿರ್ಮಿತ ವಸ್ತುಗಳನ್ನು ಬಳಸುವಂತೆ ಭಾರತೀಯರಲ್ಲಿ ಜಾಗೃತಿ ಮೂಡಿಸಲು ದೇಶಾದ್ಯಂತ ಬಿಡುವಿಲ್ಲದೇ ಮಿಂಚಿನಂತೆ ಸಂಚರಿಸಿ ನೂರಾರು ರ್ಯಾಲಿಗಳನ್ನು ಮಾಡುವ ಮೂಲಕ ಈ ಅಭಿಯಾನದಲ್ಲಿ ಲಕ್ಷಾಂತರ ಜನರನ್ನು ಒಗ್ಗೂಡಿಸುತ್ತಾರೆ.
ರಾಜೀವ್ ದೀಕ್ಷಿತರು ತಮ್ಮ ಕಾರ್ಯಕರ್ತರೊಂದಿಗೆ ದೇಶಾದ್ಯಂತ ಮನೆ ಮನೆಗಳಿಗೂ ತೆರೆಳಿ, ಮನೆಯಲ್ಲಿಯೇ ಸೋಪು, ಶ್ಯಾಂಪು, ಪಾತ್ರೇ ತೊಳೆಯುವ ಮಾರ್ಜಕಗಳನ್ನು ತಯಾರಿಸುವ ವಿಧಾನಗಳನ್ನು ಕಲಿಸಿಕೊಡುವುದಲ್ಲದೇ, ಸ್ವದೇಶಿ ಜನರಲ್ ಸ್ಟೋರ್ಸ್ ಎಂಬ ಸರಣಿಯ ಅಂಗಡಿಗಳನ್ನು ಬಹುತೇಕ ಆರಂಭಿಸಲು ಪ್ರೇರಣಾದಾಯಕರಾಗುತ್ತಾರೆ. ದೀಕ್ಷಿತರ ನೇತೃತ್ವದಲ್ಲೇ 1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ 150ನೆಯ ವಾರ್ಷಿಕೋತ್ಸವೂ ಅದ್ದೂರಿಯಾಗಿ ನೆರವೇರುತ್ತದೆ.
ಸ್ವದೇಶಿ ಎಂದರೆ ಕೇವಲ ವಿದೇಶಿ ವಸ್ತುಗಳನ್ನು ಭಹಿಷ್ಕರಿಸುವುದು ಎಂಬುದಾಗಿರದೇ, ಅದು ನಮ್ಮ ಜೀವನ ಶೈಲಿ, ನಮ್ಮ ಬದುಕು, ನಮ್ಮ ಉಸಿರು, ನಮ್ಮ ಹೆಸರು ನಮ್ಮತನ ಎಂದು ಹೇಳಿಕೊಟ್ಟಿದ್ದಲ್ಲದೇ, ನುಡಿದಂತೆಯೇ ಬದುಕಿ ತೋರಿಸಿದವರು ದೀಕ್ಷಿತರು ಎಂದರೂ ಅತಿಶಯವೇನಲ್ಲ. ಸ್ವದೇಶಿ ಚಿಂತನೆಯ ಮೂಲ ತಳಹದಿ ಸರಳತೆ. ಈ ಗುಣ ರಾಜೀವರಲ್ಲಿ ಎದ್ದು ಕಾಣುತ್ತಿತ್ತು. ಅಷ್ಟೆಲ್ಲಾ ತಿಳಿದುಕೊಂಡಿದ್ದರೂ, ಸ್ವಲ್ಪವೂ ಅಹಂಕಾರ, ಆಡಂಬರ ಎಂಬುದು ಅವರ ಹತ್ತಿರಕ್ಕೂ ಸುಳಿಯುತ್ತಿರಲಿಲ್ಲ. ಸ್ವದೇಶಿ ಆಂದೋಲನದ ಬಹುದೊಡ್ಡ ನೇತಾರ ಎನ್ನಿಸಿಕೊಂಡಿದ್ದರೂ, ಬಾಬಾ ರಾಮದೇವರಾದಿಯಾಗಿ ಬಹುದೊಡ್ಡ ವ್ಯಕ್ತಿಗಳ ಆತ್ಮೀಯ ಒಡನಾಟವಿದ್ದರೂ ರಾಜೀವ್ ಒಬ್ಬ ಸಾಮಾನ್ಯ ಕಾರ್ಯಕರ್ತನಂತೆ ಓಡಾಡಿಕೊಂಡಿರುತ್ತಿದ್ದರು. ಎಲ್ಲ ಕಾರ್ಯಕರ್ತರ ಜತೆ ಸ್ವದೇಶಿ ರಥ ಎಂಬ ಮಾಮೂಲಿ ವ್ಯಾನ್ ನಲ್ಲೇ ಓಡಾಡುತ್ತಿದ್ದರು. ಅನೇಕ ಬಾರಿ ಕಾರ್ಯಕರ್ತರ ಜತೆ ಸಣ್ಣ ಸಣ್ಣ ದೇಸೀ ಬೈಕ್ ಗಳಲ್ಲಿಯೂ ಊರೂರು ಸುತ್ತಾಡಿದ ಉದಾಹರಣೆಯೂ ಇದೆ.
ಸ್ವದೇಶಿ ಎಂದರೆ ಕೇವಲ ನಮ್ಮ ದೇಶದಲ್ಲಿ ತಯಾರಾದ ವಸ್ತುಗಳ ಬಳಕೆ ಮಾತ್ರ ಮಾಡಬೇಕು, ವಿದೇಶಿ ಕಂಪನಿಗಳಿಗೆ ತಕ್ಕ ಪಾಠ ಕಲಿಸಬೇಕು ಎನ್ನುವುದಲ್ಲ. ಪ್ರಪಂಚದಲ್ಲಿ ಒಂದು ದೇಶಕ್ಕೆ ಮತ್ತೊಂದು ದೇಶದ ಸಹಾಯ-ಸಹಕಾರ ಅವಶ್ಯ. ಆದರೆ ಭಾರತ ಸಾಂಸ್ಕೃತಿಕವಾಗಿ, ನೈತಿಕ, ಧಾರ್ವಿುಕ, ವಿಜ್ಞಾನ-ತಂತ್ರಜ್ಞಾನ, ಸಾಮಾಜಿಕ, ಆರ್ಥಿಕ, ರಾಜತಾಂತ್ರಿಕವಾಗಿಯೂ ಪ್ರಬಲ ರಾಷ್ಟ್ರ ಆಗಬೇಕಾದರೆ ಸ್ವದೇಶಿ ಜೀವನವೇ ನಮ್ಮೆಲ್ಲರ ಮೂಲಮಂತ್ರವಾಗಬೇಕು. ನಮ್ಮ ಮನೆಗೆ ಗಾಳಿ-ಬೆಳಕು ಹೊರಗಿನಿಂದ ಬರಲಿ ಆದರೆ ಹೊರಗಿನ ಗಾಳಿ-ಬೆಳಕು ನಮ್ಮ ಮನೆಯ ಮೂಲ ಸತ್ವ, ಸ್ವರೂಪವನ್ನು ಹಾಳು ಮಾಡುವಂತಿರಬಾರದು ಎನ್ನುವುದೇ ಸ್ವದೇಶಿ ವಿಚಾರದ ಮಹತ್ವವಾಗಿದೆ ಎನ್ನುವುದನ್ನು ಬಹಳ ಸ್ಪಷ್ಟವಾಗಿ ತಿಳಿಸಿಕೊಟ್ಟಿದ್ದರು.
ಅವರ ಸ್ವದೇಶೀ ಪ್ರೀತಿ ಎಷ್ಟಿತ್ತು ಎನ್ನುವುದಕ್ಕೆ ನಮ್ಮ ಆತ್ಮೀಯರು ಹೇಳಿದ ಪ್ರಸಂಗ ತಿಳಿಸಲೇ ಬೇಕು.
ಮಧುಗಿರಿಯಲ್ಲಿದ್ದ ಕಾರ್ಯಕ್ರಮವೊಂದಕ್ಕೆ ಹೋಗಿದ್ದ ದೀಕ್ಷಿತರು, ಕಾರ್ಯಕ್ರಮ ಮುಗಿದ ನಂತರ ಅವರು ಉಳಿದು ಕೊಂಡಿದ್ದ ಪ್ರವಾಸಿ ಬಂಗಲೆಗೆ ಹೋಗಲು ಅವರ ವಾಹನಕ್ಕಾಗಿ ಕಾಯುತ್ತಿದ್ದರು. ತಕ್ಷಣವೇ ಅಲ್ಲೇ ಆಯೋಜಕರು ತಮ್ಮ ಕಾರು ತಂದು ನಾನೇ ಬಿಟ್ಟು ಬರುತ್ತೇನೆ ಬನ್ನಿ ಎಂದು ಕರೆದಾಗ ಅವರು ನಯವಾಗಿ ತಿರಸ್ಕರಿಸಿ ಅವರ ವಾಹನ ಬಂದಾಗ ಅದರಲ್ಲಿ ಅವರು ಹೋದ ಮೇಲೆ ಅವರ ಬಳಗದ ಒಬ್ಬರು ಆ ಆಯೋಜಕರ ಬಳಿ ಬಂದು ನಿಮ್ಮ ಕಾರು ಸ್ಯಾಂಟ್ರೋ ಅದು ವಿದೇಶದ್ದು ಅದಕ್ಕೆ ಅವರು ಹತ್ತಲಿಲ್ಲ ಎಂದ್ದಿದ್ದರಂತೆ.
ಇಷ್ಟೆಲ್ಲಾ ಹೋರಾಟ ಮಾಡುತ್ತಿದ್ದವರು, 30 ನವೆಂಬರ್ 2010 ರಂದು ಭಿಲಾಯಿನಲ್ಲಿ ಪ್ರವಾಸ ಮಾಡುತ್ತಿದ್ದ ರಾಜೇವ್ ಅವರಿಗೆ ಇದ್ದಕ್ಕಿಂದ್ದಂತೆಯೇ ಎದೆ ನೋವು ಕಾಣಿಸಿದ ಕೆಲವೇ ನಿಮಿಷಗಳಲ್ಲಿ ನಿಧನರಾದರು. ಸಾಯುವ ಸಮಯದಲ್ಲಿಯೂ ಅಲೋಪಥಿ ಚಿಕಿತ್ಸೆ ತೆಗೆದುಕೊಳ್ಳಲು ಇಚ್ಚಿಸದೇ, ಆಯುರ್ವೇದ ಔಷಧ ಇಲ್ಲವೇ ಹೋಮಿಯೋಪಥಿ ಚಿಕಿತ್ಸೆಯನ್ನೇ ಕೊಡುವಂತೆ ಒತ್ತಾಯಿಸುವಷ್ಟು ತಮ್ಮ ಸಿದ್ಧಾಂತಕ್ಕೆ ಬದ್ಧರಾಗಿದ್ದರು. ಅವರ ಸಾವಿನ ಹಿಂದೆ ಬಹಳಷ್ಟು ನಿಗೂಢತೆ ಇದ್ದು ಅದರ ನಿಜವಾದ ಕಾರಣವು ಇಂದಿಗೂ ತಿಳಿಯದಾಗಿರುವುದು ನಿಜಕ್ಕೂ ವಿಪರ್ಯಾಸವಾಗಿದೆ. ರಾಜೀವ್ ದೀಕ್ಷಿತ್ ಅವರ ನೆನಪಿನಲ್ಲಿ ಹರಿದ್ವಾರದಲ್ಲಿ ಭಾರತ ಸ್ವಾಭಿಮಾನ ಕಟ್ಟಡವನ್ನು ಕಟ್ಟಿ ಅದಕ್ಕೆ ರಾಜೀವ್ ಭವನ ಎಂದು ಹೆಸರಿಸಿ ರಾಜೀವ್ ಅವರ ಹೆಸರನ್ನು ಚಿರಸ್ಥಾಯಿಯನ್ನಾಗಿ ಮಾಡಲಾಗಿದೆ.
ಸ್ವಾಭಿಮಾನ ಯಾತ್ರೆ ಅಂಗವಾಗಿ ಉಪನ್ಯಾಸ ನೀಡಲು ಭಿಲಾಯಿಗೆ ಆಗಮಿಸಿದ್ದ ರಾಜೀವ್ ದೀಕ್ಷಿತ್ ರವರು ನಿಧನರಾದ ನವೆಂಬರ್ 30ನ್ನು ಸ್ವದೇಶೀ ದಿನವೆಂದು ಆಚರಿಸಲಾಗುತ್ತದೆ. ಕೇವಲ ಇದೊಂದೇ ದಿನ ಅದ್ದೂರಿಯಾಗಿ ಅವರನ್ನು ಸ್ಮರಿಸಿ ಉಳಿದ ದಿನ ವಿದೇಶೀ ವಸ್ತುಗಳನ್ನು ಖರೀದಿಸುವ ಮುನ್ನಾ ನಮಗೆ ಬೇಕಾದ ಬಟ್ಟೆಗಳು, ಮಕ್ಕಳ ಆಟಿಕೆ, ದೀಪಾವಳಿ ಹಬ್ಬದ ದಿನದಂದು ಹೊಡೆಯುವ ಪಟಾಕಿಗಳು, ನೇತಾಕುವ ಆಕಾಶ ಬುಟ್ಟಿಗಳು ಕೂಡ ಚೀನಾದಿಂದಲೇ ತರಿಸಿಕೊಳ್ಳಬೇಕೇ? ನಾವು ಬಳಸುವ ಪೋನ್, ಕಾರ್, ಎಲೆಕ್ಟ್ರಾನಿಕ್ಸ್ ವಸ್ತುಗಳಿಗೆ ಚೀನಾ, ಅಮೆರಿಕ, ಜಪಾನ್, ಜರ್ಮನಿಗಳ ಅವಲಂಬನೆಯಾಗದೇ ನಮ್ಮ ಭಾರತ ದೇಶವೇ ಸ್ವಾವಲಂಬಿಯಾಗುವ ಆತ್ಮನಿರ್ಭರ್ ಭಾರತವನ್ನು ಕಟ್ಟುವ ಮೂಲಕ ರಾಜೀವ್ ದೀಕ್ಷಿತರ ಸ್ವದೇಶಿ ಕಲ್ಪನೆಯನ್ನು ಸಾಕಾರ ಮಾಡುವ ಹೊಣೆ ನಮ್ಮ ನಿಮ್ಮೆಲ್ಲರ ಮೇಲಿದೆ ಅಲ್ವೇ?
ನಿಜ ಹೇಳಬೇಕಂದರೆ ಕರೊನಾ ಎದುರಿಸುವ ಸಮಯದಲ್ಲಿ ಭಾರತ ಲಸಿಕೆಗಾಗಿ ವಿದೇಶಗಳತ್ತ ಮುಖ ಮಾಡದೇ ಸ್ವಾವಲಂಭಿಯಾಗಿ ಅತಿ ಕಡಿಮೆ ಬೆಲೆಯಲ್ಲಿ ದೇಸೀ ಲಸಿಕೆಯನ್ನು ತಯಾರಿಸಿ ಕೋಟಿ ಲಸಿಕೆಯನ್ನು ದೇಶವಾಸಿಗಳಿಗೆ ಕೊಟ್ಟಿದ್ದಲ್ಲದೇ, ಸುಮಾರು ದೇಶಗಳಿಗೆ ರಫ್ತು ಮಾಡುವ ಮೂಲಕ ರಾಜೀವ್ ಅವರ ಸ್ವದೇಶೀ ಕಲ್ಪನೆಯನ್ನು ನನಸು ಮಾಡುವ ದಿಕ್ಕಿನಲ್ಲಿ ಮುಂದುವರೆಯುತ್ತಿದೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ