ಬಸವನಗುಡಿ ಕಡಲೇಕಾಯಿ ಪರಿಷೆ

bang1ಬೆಂಗಳೂರು ಸಿಲಿಕಾನ್ ಸಿಟಿ ಪ್ರಪಂಚದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದೆ. ಆಧುನಿಕತೆಗೆ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಗೆ ಅತ್ಯಂತ ವೇಗವಾಗಿ ಒಗ್ಗಿಕೊಂಡಿರುವ ನಗರವಾದರೂ ಇನ್ನೂ ತನ್ನ ಗ್ರಾಮೀಣ ಸೊಗಡನ್ನು ಹಾಗೆಯೇ ಉಳಿಸಿಕೊಂಡು ಬಂದಿರುವುದು ಮೆಚ್ಚುವಂತಹ ವಿಷಯವಾಗಿದೆ.

kar4ಶ್ರಾವಣ ಮಾಸ ಮತ್ತು ಆಶ್ವಯುಜ ಮಾಸದ ಸಾಲು ಸಾಲು ಹಬ್ಬಗಳು ಮುಗಿದು ಇನ್ನೇನು ಮಾಗಿಯ ಚಳಿ ನಮ್ಮೆಲ್ಲರನ್ನು ಅಪ್ಪುವುದಕ್ಕೆ ಶುರುವಾಗುತ್ತಿದ್ದಂತೆಯೇ ಬರುವುದೇ ಕಾರ್ತೀಕ ಮಾಸ. ಶೈವಾರಾಧಕರಿಗೆ ಪ್ರತೀ ಕಾರ್ತೀಕ ಸೋಮವಾರವೂ ಅತ್ಯಂತ ಪುಣ್ಯಕರವಾದ ದಿನ. ಬಹುತೇಕರು ಕಾರ್ತೀಕ ಸೋಮವಾರ ಶ್ರಧ್ಥೆಯಿಂದ ದಿನವಿಡೀ ಉಪವಾಸ ಮಾಡಿ ಸಂಜೆ ಹತ್ತಿರದ ಶಿವ ದೇವಾಲಯಕ್ಕೆ ಹೋಗಿ ಶಿವದರ್ಶನ ಮಾಡಿಯೇ ಫಲಾಹಾರವನ್ನು ಸ್ವೀಕರಿಸುವ ಪದ್ದತಿಯನ್ನು ರೂಢಿಯಲ್ಲಿಟ್ಟುಕೊಂಡಿದ್ದಾರೆ. ಬೆಂಗಳೂರಿನವರಿಗೆ ಕಡೇ ಕಾರ್ತೀಕ ಸೋಮವಾರ ಬಂದಿತೆಂದರೆ ಅವರೆಲ್ಲರ ಗಮನ ಬಸವನಗುಡಿಯ ಪ್ರತಿಷ್ಠಿತ ಕಡಲೇಕಾಯಿ ಪರಿಷೆಯತ್ತ ಹರಿಸುತ್ತಾರೆ.

ganeshaನೂರಾರು ವರ್ಷಗಳಿಂದ ಬಸವನಗುಡಿಯಲ್ಲಿ ನಡೆಯುತ್ತಿರುವ ಕಡಲೇ ಪರಿಷೆಯನ್ನು ನೋಡಲು ಸಾವಿರಾರು ಜನರು ಮೂರ್ನಾಲ್ಕು ದಿನಗಳ ಕಾಲ ಬಂದು ದೊಡ್ಡ ಗಣೇಶ ಮತ್ತು ಬಸವಣ್ಣನ ದರ್ಶನ ಪಡೆದು ಪುನೀತರಾಗುವುದಲ್ಲದೇ, ಮೂರ್ನಲ್ಕು ದಿನಗಳ ಕಾಲ ಅಲ್ಲಿ ನಡೆಯುವ ಜಾತ್ರೆಯಲ್ಲಿ ಸಡಗರ ಸಂಭ್ರಮಗಳಿಂದ ಭಾಗವಹಿಸುತ್ತಿರುವುದರ ಹಿನ್ನಲೆಯನ್ನು ತಿಳಿಯೋಣ ಬನ್ನಿ.

gn6ಈ ಕಡಲೇ ಕಾಯಿ ಪರಿಷೆಯ ಹಿನ್ನೆಲೆಯೂ ಅತ್ಯಂತ ರೋಚಕವಾಗಿದೆ. ನೂರಾರು ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ರೈತರು ಕಡಲೆಕಾಯಿಯನ್ನು ಬೆಳೆಯುತ್ತಿದ್ದರು. ಸಮೃದ್ಧವಾಗಿ ಬೆಳೆದಿದ್ದ ಕಡಲೇ ಕಾಯಿ ಇನ್ನೇನು ಕಟಾವು ಮಾಡಲೇ ಬೇಕು ಎನ್ನುವಷ್ಟರಲ್ಲಿ, ರಾತ್ರೋ ರಾತ್ರಿ ಅವರು ಬೆಳೆದಿದ್ದ ಕಡಲೇ ಕಾಯಿ ಹೊಲಕ್ಕೆ ಯಾರೋ ನುಗ್ಗಿ ಧ್ವಂಸ ಮಾಡಿ ಬಿಡುತ್ತಿದ್ದರು. ಹೀಗೆ ಪದೇ ಪದೇ ಆಗುತ್ತಿದ್ದ ನಷ್ಟದಿಂದ ನೊಂದ ರೈತರು ಅದೂಂದು ದಿನ ತಮ್ಮ ಬೆಳೆಯನ್ನು ನಷ್ಟ ಮಾಡುವವರನ್ನು ಹಿಡಿಯಲೇ ಬೇಕು ಎಂದು ನಿರ್ಧರಿಸಿ ರಾತ್ರಿ ಎಲ್ಲರೂ ತಮ್ಮ ಹೊಲವನ್ನು ಕಾಯಲು ನಿಂತಾಗ ಅವರು ಕಂಡ ದೃಶ್ಯದಿಂದ ಒಂದು ಕ್ಷಣ ದಂಗಾಯಿತು. ರೈತರು ರಾತ್ರಿ ತಮ್ಮ ಹೊಲವನ್ನು ಕಾದು ಕುಳಿತಿದ್ದಾಗ ಬೃಹದಾಕಾರದ ಹೋರಿಯೊಂದು ಅದೆಲ್ಲಿಂದಲೋ ಬಂದು ಅವರ ಹೊಲದಲ್ಲಿ ಬೆಳೆದಿದ್ದ ಕಡಲೇ ಕಾಯಿಯನ್ನು ತಿನ್ನುತ್ತಿದ್ದದ್ದನ್ನು ಕಂಡ ಆ ರೈತರು ಇದು ಸಾಮಾನ್ಯವಾದ ಹೋರಿಯಲ್ಲ. ಇದು ಶಕ್ತಿಯುತವಾದ ನಂದಿಯ ಪ್ರತಿರೂಪವೆಂದು ಪರಿಗಣಿಸುತ್ತಾರೆ.

basvaannaಕೂಡಲೇ ಆ ರೈತರೆಲ್ಲರೂ ಆ ಬಸವನ ಬಳಿ ಕೈ ಮುಗಿದು ದಯವಿಟ್ಟು ನಾವು ಕಷ್ಟ ಪಟ್ಟು ಬೆಳೆಸಿದ ಬೆಳೆಗಳನ್ನು ಹಾಳು ಮಾಡಬೇಡ. ಇದೇ ಸ್ಥಳದಲ್ಲಿ ನಿನಗೊಂದು ದೊಡ್ಡದಾದ ಗುಡಿಯೊಂದನ್ನು ಕಟ್ಟಿ, ಕಡಲೆಕಾಯಿ ಬೆಳೆಯನ್ನು ಸಮೃದ್ಧವಾಗಿ ಬೆಳೆದು ಕಾರ್ತಿಕಮಾಸದ ಕೊನೆಯ ಸೋಮವಾರ ನಿನಗೆ ಅದೇ ಕಡಲೇಕಾಯಿಯನ್ನು ನೈವೇದ್ಯವನ್ನಾಗಿ ಅರ್ಪಿಸುವುದಲ್ಲದೇ, ನಿನ್ನ ಹೆಸರಿನಲ್ಲಿಯೇ ಕಡಲೆಕಾಯಿ ಪರಿಷೆ ನಡೆಸುತ್ತೇವೆ ಎಂದು ಆ ಬಸವಣ್ಣನ ಮುಂದೆ ಕೋರಿಕೊಳ್ಳುತ್ತಾರೆ. ರೈತರ ಮೊರೆಗೆ ಓಗೊಟ್ಟ ಬಸವಣ್ಣ ಅಂದಿನಿಂದ ರೈತರ ಬೆಳೆಯನ್ನು ನಾಶಗೊಳಿಸದೇ ಕಾಪಾಡುತ್ತದೆ ಎನ್ನುವುದು ಈ ಕಡಲೇಕಾಯಿ ಪರಿಶೆಯ ಹಿನ್ನಲೆಯಾಗಿದೆ.

ಹೀಗೆ ನೂರಾರು ವರ್ಷಗಳ ಹಿಂದಿನಿಂದಲೂ ರೈತರು ತಾವು ಬೆಳೆದ ಕಡಲೆಕಾಯಿಯನ್ನು ತೆಗೆದುಕೊಂಡು ಬಂದು ಪ್ರತಿ ವರ್ಷವೂ ಭಕ್ತಿಯಿಂದ ದೊಡ್ದ ಗಣೇಶ ಮತ್ತು ದೊಡ್ದಗಣಪತಿಗೆ ಅರ್ಪಿಸಿ ಜಾತ್ರೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಆರಂಭದಕ್ಕೆ ಕೇವಲ ಕಡೆಯ ಕಾರ್ತೀಕ ಸೋಮವಾರ ಮಾತ್ರ ನಡೆಯುತ್ತಿದ್ದ ಜಾತ್ರೆಗೆ ಎಲ್ಲರೂ ಬರಲು ಸಾಥ್ಯವಾಗದಿದ್ದ ಕಾರಣ ಸುಮಾರು ವರ್ಷಗಳ ಹಿಂದೆಯೇ, ಶನಿವಾರ ಬೆಳಗ್ಗೆಯಿಂದಲೇ ಚಿಂತಾಮಣಿ, ಶ್ರೀನಿವಾಸಪುರ, ಕೋಲಾರ, ಚಿಕ್ಕಬಳ್ಳಾಪುರ, ಮಾಗಡಿ, ಮಂಡ್ಯ, ಮೈಸೂರು, ತುಮಕೂರು, ಕುಣಿಗಲ್ ಹೀಗೆ ರಾಜ್ಯದ ನಾನಾ ಭಾಗಗಳಲ್ಲದೇ, ನೆರೆಯ ಆಂಧ್ರಪ್ರದೇಶ, ತಮಿಳುನಾಡಿನ ರೈತರುಗಳು ಸಹಾ ಈ ಪರಿಷೆಯಲ್ಲಿ ತಾವು ಬೆಳೆದ ಕಡಲೇ ಕಾಯಿಯೊಂದಿಗೆ ಭಾಗವಹಿಸುತ್ತಾರೆ.

WhatsApp Image 2021-12-01 at 10.28.44 AM (4)ರಾಮಕೃಷ್ಣ ಆಶ್ರಮದ ಎದುರಿಗಿರುವ ವಿವೇಕಾನಂದ ಪುತ್ಧಳಿಯ ವೃತ್ತದಿಂದ ಆರಂಭವಾಗುವ ಜಾತ್ರೆ ಬಸವಣ್ಣನ ದೇವಸ್ಥಾನವನ್ನೂ ದಾಟಿ ಹೋಗಿರುತ್ತದೆ. ಇನ್ನು ಈ ಭಾಗದಲ್ಲಿ ಜಾಗ ಸಿಗದ ವ್ಯಾಪಾರಿಗಳು ಹನುಮಂತನಗರ, ಗವಿ ಗಂಗಾಧರೇಶಶ್ವರ ದೇವಸ್ಥಾನಗಳಿಗೆ ಹೋಗುವ ರಸ್ತೆ, ಇನ್ನೂ ತಡವಾಗಿ ಬಂದವರು ರಾಮಕೃಷ್ಣ ಆಶ್ರಮದಿಂದ ಚಾಮರಾಜಪೇಟೆಯ 5ನೇ ಮುಖ್ಯ ರಸ್ತೆಯೆಡೆಗೆ ಸಾಗುವ ಜಾಗಗಳಲ್ಲಿ ಬಿಡಾರ ಹೂಡುತ್ತಾರೆ. ಹೀಗೆ ಇಡೀ ಮೂರ್ನಾಲ್ಕು ದಿನಗಳ ಕಾಲ ಬಸವನ ಗುಡಿಯ ಸುತ್ತಮತ್ತಲಿನ ಪ್ರದೇಶ ಕಡಲೇಕಾಯಿಯ ವ್ಯಾಪಾರಕ್ಕಾಗಿಯೇ ಮೀಸಲಾಗಿರುತ್ತದೆ. ರಸ್ತೆಯ ಇಕ್ಕೆಲಗಳಲ್ಲಿ ರಾಶಿ ರಾಶಿ ಕಡಲೆಕಾಯಿ ಪರಿಶೆಗೆ ಬರುವ ಗ್ರಾಹಕರನ್ನು ಸೆಳೆಯುತ್ತವೆ. ಮೂರು ಬೀಜದ ಉದ್ದನೆಯ ಕಾಯಿ, ಎರಡು ಬೀಜದ ಗಿಡ್ಡ ಕಾಯಿಗಳು, ಕಡುಗುಲಾಬಿ ಬಣ್ಣದ ಬೀಜ ಹಾಗೂ ತಿಳಿ ಗುಲಾಬಿ ಬಣ್ಣದ ಬೀಜಗಳು ಗ್ರಾಹಕರ ಬಾಯಲ್ಲಿ ನೀರೂರಿಸಿದರೆ, ಅದರ ಜೊತೆ ಅಲ್ಲೇ ಬಿಸಿ ಬಿಸಿಯಾಗಿ ಹುರಿದ ಕಡಲೇ ಕಾಯಿಯ ಜೊತೆ ಬಿಸಿಯಾಗಿ ಹದವಾಗಿ ಬೇಯಿಸಿದ ಕಡಲೇಕಾಯಿಯೂ ಭಕ್ತಾದಿಗಳಿಗೆ ಲಭ್ಯವಿರುತ್ತದೆ.

ಕಡಲೆ ಕಾಯಿ ಪರಿಷೆಯಲ್ಲಿ ಕಡಲೇ ಕಾಯಿ ಮಾತ್ರವಲ್ಲದೇ, ಕಡಲೇಪುರಿ, ಬೆಂಡು ಬತ್ತಾಸು, ವಿವಿಧ ರೀತಿಯ ಜಾತ್ರೇ ಸಿಹಿ ತಿಂಡಿಗಳು ಹಿಂದೆಲ್ಲಾ ಲಭ್ಯವಿರುತ್ತಿದ್ದರೆ ಈಗ ಕಾಲಾಯ ತಸ್ಮೈ ನಮಃ ಎನ್ನುವಂತೆ ಭೇಲ್ ಪುರಿ, ಬಿಸಿ ಬಿಸಿ ಸ್ವೀಟ್ ಕಾರ್ನ್, ಕಾಟನ್ ಕ್ಯಾಂಡಿ, ಪಾಪ್ ಕಾರ್ನ್ ಹೀಗೆ ಬಗೆ ಬಗೆಯ ತಿಂಡಿ ತಿನಿಸುಗಳ ತಳ್ಳುಗಾಡಿಗಳು ಎಲ್ಲೆಂದರಲ್ಲಿ ನಿಲ್ಲಿಸಿಕೊಂಡಿರುವ ಕಾರಣ ಭಕ್ತಾದಿಗಳಿಗೆ ನಡೆದಾಡಲು ತುಸು ತ್ರಾಸದಾಯಕವಾದರೂ ಅ ರೀತಿ ಜನರ ಮಧ್ಯೆ ತಳ್ಳಿ ಕೊಂಡು ನುಗ್ಗಿ ದೇವರ ದರ್ಶನ ಪಡೆದಾಗ ಆಗುವ ಆನಂದ ವರ್ಣಿಸಲಸದಳವೇ ಸರಿ.

p3ಹೆಣ್ಣು ಮಕ್ಕಳಿಗೆ ಬಳೆ, ಓಲೆ ಸೇರಿದಂತೆ ಜಾತ್ರೆಯಲ್ಲಿ ಸಿಗುವ ತರಹೇವಾರಿ ವಸ್ತುಗಳನ್ನು ಲಭ್ಯವಿದ್ದರೆ ಇನ್ನು ಚಿಕ್ಕ ಮಕ್ಕಳಿಗೆಂದೇ, ಬಣ್ಣ ಬಣ್ಣದ ಪೀಪೀ, ಬೆಲೂನುಗಳು, ವಿವಿಧ ಆಟಿಕೆಗಳಲ್ಲದೇ ಮಕ್ಕಳ ಮನೋರಂಜನೆಗಾಗಿ ರಾಟೆ, ಉಯ್ಯಾಲೆಗಳು, ಮೇರಿಗೋರೌಂಡ್ ಆಟಗಳು ಅಲ್ಲಿರುತ್ತದೆ. ಇವೆಲ್ಲವುದಕ್ಕಿಂತಲೂ ಇನ್ನೂ ಒಂದು ಹೆಜ್ಜೆ ಮುಂದು ಹೋಗಿ ವಿವಿಧ ದೇವರುಗಳ ಮಣ್ಣಿನ, ಪಿಂಗಾಣಿ ಮತ್ತು ಪ್ಲಾಸ್ಟರ್ ಆಫ್ ಪ್ಯಾರೀಸ್ಸಿನಿಂದ ತಯಾರಿಸಿದ ಗೊಂಬೆಗಳಲ್ಲದೇ ದೂರದ ಮಧುರೈ ಗೊಂಬೆಗಳು, ಕಾಂಚೀಪುರದ ರಾಮ ಸೀತೆ, ದಶಾವತಾರದ ಗೊಂಬೆಗಳಲ್ಲದೇ ತಿರುಪತಿಯ ಪಟ್ಟದ ಗೊಂಬೆಗಳನ್ನು ಕೊಳ್ಳಲು ಹೆಂಗಳೆಯರ ಸಾಲೇ ಅಲ್ಲಿರುತ್ತದೆ.

ಇದರ ಜೊತೆಗೆ ಪ್ರತೀ ವರ್ಷದ ಪರಿಶೆಯಲ್ಲಿಯೂ ಮೈಪೂರ ಬೆಳ್ಳಿಯ ಬಣ್ಣವನ್ನು ಹಚ್ಚಿಕೊಂಡು ಮಹಾತ್ಮಾ ಗಾಂಧಿಯವರಂತೆಯೇ ಕನ್ನಡಕ ಮತ್ತು ಕೋಲು ಹಿಡಿದು ನಿಂತು ಕೊಳ್ಳುವ ವೃದ್ಧರನ್ನು ನೋಡಿದಾಗ ಛೇ ಹೊಟ್ಟೇ ಪಾಡಿಗೆ ಈ ಪರಿಯಾಗಿ ಕಷ್ಟ ಪಡಬೇಕಲ್ಲಾ ಎಂಬ ನೋವಿನ ವ್ಯಥೆಯ ನಡುವೆಯೂ ಅವರ ಪಕ್ಕದಲ್ಲಿ ನಿಂತುಕೊಂಡು ಒಂದು ಸೆಲ್ಫಿ ಇಲ್ಲವೇ ಪೋಟೋ ತೆಗೆಸಿಕೊಂಡು ಕೈಲಾದ ಮಟ್ಟಿಗೆ ಹಣವನ್ನು ಅಲ್ಲೇ ಇಟ್ಟಿದ್ದ ತಟ್ಟೆಯಲ್ಲಿ ಹಾಕಿಬಂದಾಗ ಮನಸ್ಸಿಗೆ ತುಸು ನೆಮ್ಮದಿ ಸಿಗುತ್ತದೆ.

p2ಹೊರಗಿನ ಮಾರುಕಟ್ಟೆಗೆ ಹೋಲಿಸಿದರೆ ಈ ಕಡಲೆಕಾಯಿ ಪರಿಷೆಯಲ್ಲಿ ಮಾರಾಟವಾಗುವ ಕಡಲೆಕಾಯಿಗೆ ಬೆಲೆ ತುಸು ಹೆಚ್ಚಾಗಿಯೇ ಇರುತ್ತದಾದರೂ, ಬೆಂಗಳೂರಿಗರಿಗೆ ತಮ್ಮ ಸಂಸ್ಕೃತಿಯ ಭಾಗವಾಗಿರುವ ಈ ಕಡಲೇ ಕಾಯಿ ಪರಿಷೆಗೆ ಬಂದು ಸರತಿಯ ಸಾಲಿನಲ್ಲಿ ನಿಂದು ದೊಡ್ಡಗಣೇಶನ ವಿಶೇಷ ಪೂಜೆಯಲ್ಲಿ ಭಾಗಿಯಾಗಿ, ಅಲ್ಲಿಂದ ತುಸು ದೂರದಲ್ಲೇ ಇರುವ ದೊಡ್ಡ ಬಸವನಗುಡಿಯಲ್ಲಿರುವ ಬಸವಣ್ಣನಿಗೂ ನಮಿಸಿ, ಪ್ರಸಾದ ರೂಪದಲ್ಲಿ ಕನಿಷ್ಠ ಪಕ್ಷ ಒಂದು ಸೇರು ಹಸೀ ಕಡಲೆಕಾಯಿ, ಬೇಯಿಸಿದ ಕಾಯಿ, ಹುರಿದ ಕಡಲೇಕಾಯಿ ಹೀಗೆ ಅವರವರ ರುಚಿಗೆ ತಕ್ಕಂತೆ ಕಡಲೇಕಾಯಿಯಲ್ಲದೇ ಕಡಲೇ ಪುರಿ, ಕಲ್ಯಾಣಸೇವೆ, ಬೆಂಡು ಬತ್ತಾಸುಗಳನ್ನೂ ಖರೀದಿಸಿ ಮನೆಗೆ ಕೊಂಡೊಯ್ದು ಅಕ್ಕ ಪಕ್ಕದವರೊಂದಿಗೆ ಹಂಚಿಕೊಂಡು ಭಕ್ತಿ-ಭಾವದಲ್ಲಿ ಮಿಂದೇಳುತ್ತಾರೆ,

ಕಳೆದ ವರ್ಷ ಕೋವಿಡ್ ಕರಿಛಾಯೆಯಿಂದ ಸಾಂಕೇತಿಕವಾಗಿ ನಡೆದು ಸಂಪೂರ್ಣವಾಗಿ ಮಂಕಾಗಿದ್ದ ಪರಿಷೆಗೆ, ಈ ಬಾರಿ ಕೋವಿಡ್ ಅಲೆ ಪ್ರಭಾವ ಸ್ವಲ್ಪ ತಗ್ಗಾಗಿದ್ದರಿಂದ ಕಡಲೇಕಾಯಿ ಪರಿಶೆ ಹಿಂದಿನಷ್ಟಿಲ್ಲದಿದ್ದರೂ ಲಕ್ಷೋಪ ಲಕ್ಷ ಸಂಖ್ಯೆಯಲ್ಲಿ ಪರಿಷೆಗೆ ಬಂದು ಭಗವಂತನ ಕೃಪಾಶೀರ್ವಾದಕ್ಕೆ ಪಾತ್ರರಾಗಿರುವುದಲ್ಲದೇ, ರಾಜ್ಯ ಮತ್ತು ಅಂತರಾಜ್ಯಗಳಿಂದ ಬಂದಿರುವ ಹಲವಾರು ಕಡಲೇಕಾಯಿ ಸೇರಿದಂತೆ ವಿವಿಧ ಸಾಮಗ್ರಿಗಳ ವ್ಯಾಪಾರ ಜೋರಾಗಿ ನಡೆದಿರುವುದು ನಿಜಕ್ಕೂ ಸಂಭ್ರಮ ಮೂಡಿಸಿದೆ.

ಆಧುನಿಕವಾಗಿ ನಾವುಗಳು ಎಷ್ಟೇ ಮುಂದುವರೆದಿದ್ದರೂ ನಮ್ಮ ಪೂರ್ವಜರು ನಡೆಸಿಕೊಂಡು ಬರುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಜಾತ್ರೆಗಳನ್ನು ಅರ್ಥಪೂರ್ಣವಾಗಿ ನಮ್ಮ ಮುಂದಿನ ಪೀಳಿಗೆಯವರಿಗೂ ತಲುಪಿಸಲೇ ಬೇಕಾದ ಕರ್ತವ್ಯ ನಮ್ಮ ನಿಮ್ಮೆಲ್ಲರಮೇಲೆಯೇ ಇದೆ ಅಲ್ವೇ?

ಏನಂತೀರಿ?
ನಿಮ್ಮವನೇ ಉಮಾಸುತ

ಬಸವನಗುಡಿಯ ಕಡಲೇಕಾಯಿ ಪರಿಷೆಯನ್ನು ಈ ವೀಡೀಯೋ ಮೂಲಕ ಕಣ್ತುಂಬಿಸಿ ಕೊಳ್ಳೋಣ ಬನ್ನಿ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s