ಕುಕ್ಕೇ ಸುಬ್ರಹ್ಮಣ್ಯದ ಚಂಪಾ ಷಷ್ಠಿ

ಜಾತಕಗಳಲ್ಲಿನ ಸರ್ಪದೋಷ ಅಥವಾ ನಾಗದೋಷ, ಕಾಳಸರ್ಪjyot4ದೋಷ ಇತ್ಯಾದಿ ದೋಷಗಳ ಕಾರಣದಿಂದ ಅನಾರೋಗ್ಯ, ತಡವಿವಾಹ, ವೈವಾಹಿಕ ಸುಖಭಂಗ, ಸಂತಾನಹೀನತೆ ಉದ್ಯೋಗದಲ್ಲಿ ಅಸಮಾಧಾನ ,ಇತ್ಯಾದಿ ತೊಂದರೆಗಳನ್ನು ಅನುಭವಿಸುತ್ತಿರುವವರು ದೋಷಗಳಿಗೆ ಪರಿಹಾರಕ್ಕಾಗಿ ಜ್ಯೋತಿಷ್ಯದ ಮೊರೆ ಹೊಕ್ಕಾಗ ಬಹುತೇಕ ಜ್ಯೋತಿಷ್ಯರು ಮೊದಲು ಸೂಚಿಸುವುದೇ,  ಕರ್ನಾಟಕದಲ್ಲಿರುವ ಅತ್ಯಂತ ಪವಿತ್ರವಾದ ನಾಗರೂಪದಲ್ಲಿರುವ ಸುಬ್ರಹ್ಮಣ್ಯಸ್ವಾಮಿಯ ದೇವಸ್ಥಾನವಿರುವ ಶ್ರೀ ಕ್ಷೇತ್ರ ಕ್ಕುಕ್ಕೆ ಸುಬ್ರಹ್ಮಣ್ಯವನ್ನು. ಹಾಗಾಗಿ ಪ್ರಪಂಚದ ನಾನಾ ಮೂಲೆಗಳಿಂದ ಆಸ್ತಿಕ ಮಹಾಶಯರು ಇಲ್ಲಿಗೆ ಬಂದು ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷಬಲಿ, ಇತ್ಯಾದಿ ಸೇವೆ ಸಲ್ಲಿಸಿ ದೋಷಮುಕ್ತರಾಗಿ ಸುಖಜೀವನ ನಡೆಸುತ್ತಿದ್ದಾರೆ. ಭಕ್ತರ ದೋಷಗಳನ್ನು ಪರಿಹಾರ ಮಾಡುವ ಸಲುವಾಗಿಯೇ ಈ ಕ್ಷೇತ್ರದಲ್ಲಿ ಸುಬ್ರಹ್ಮಣ್ಯ ನೆಲೆಸಿದ್ದಾನೆ ಎಂದರೆ ತಪ್ಪಾಗಲಾರದು.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ ಸುಪ್ರಸಿದ್ಧ ಶ್ರೀ ಕ್ಷೇತ್ರ ಕುಕ್ಕೇ ಸುಬ್ರಹ್ಮಣ್ಯದಲ್ಲಿ ಪಾರ್ವತೀ ಪರಮೇಶ್ವರರ ದ್ವಿತೀಯ ಪುತ್ರ ಷಣ್ಮುಖ ದೇವರನ್ನು ನಾಗ ರೂಪದಲ್ಲಿ ಕುಮಾರಧಾರ ನದಿಯ ತಟದಲ್ಲಿ ಸುಬ್ರಹ್ಮಣ್ಯ ಎಂಬ ಹೆಸರಿನಲ್ಲಿ ಆರಾಧಿಸಲಾಗುತ್ತದೆ. ವರ್ಷ ಪೂರ್ತಿಯೂ  ಇಲ್ಲಿ ನಿರಂತರವಾಗಿ ವಿವಿಧ ಬಗೆಯ ಪೂಜೆ ಪುನಸ್ಕಾರಗಳು ನಡೆಯುತ್ತಲಿದ್ದರೂ, ಮಾರ್ಗಶಿರ ಮಾಸದಲ್ಲಿ ಬರುವ  ಸುಬ್ರಹ್ಮಣ್ಯ ಷಷ್ಠಿ ಅಥವಾ ಚಂಪಾ ಷಷ್ಠಿಯು ಅತ್ಯಂತ ವೈಭವವಾಗಿ ಇಲ್ಲಿ ಆಚರಿಸಲ್ಪಡುತ್ತಿದ್ದು ಆ ಸಂಭ್ರಮ ಸಡಗರಗಳನ್ನು ಕಣ್ತುಂಬಿಸಿಕೊಳ್ಳೋಣ ಬನ್ನಿ.

kash2ಈ ಹಿಂದೆ ಕಶ್ಯಪ ಮಹಾಮುನಿಗಳು ದಕ್ಷನ ಹದಿಮೂರು ಹೆಣ್ಣು  ಮಕ್ಕಳನ್ನು ಮದುವೆಯಾಗಿರುತ್ತಾರೆ. ಈ  ಅಕ್ಕ ತಂಗಿಯರಲ್ಲಿ ಕದ್ರು ಮತ್ತು ವಿನುತಾ ಎಂಬವರೂ ಇದ್ದು, ಜನ್ಮಃ ತಹಾ ಸಹೋದರಿಯರಾದರೂ ಸವತಿಯ ದ್ವೇಷದಲ್ಲಿಂದ  ಅದೊಂದು ದಿನ ಕದ್ರು  ತನ್ನ ಮಕ್ಕಳಾದ ಸರ್ಪಗಳ ಸಹಾಯದಿಂದ  ತನ್ನ ಸಹೋದರಿ ವಿನುತಾಳನ್ನು ಮೋಸದಿಂದ ಪಂಥವೊಂದರಲ್ಲಿ ಸೋಲಿಸಿ ತನ್ನ ಚರಣದಾಸಿಯನ್ನಾಗಿ ಮಾಡಿಕೊಳ್ಳುತ್ತಾಳೆ. ತನ್ನ ತಾಯಿಗೆ ಚಿಕ್ಕಮ್ಮಳೇ ಮೋಸ ಮಾಡಿದ್ದು  ವಿನುತಾಳ ಮಗನಾದ ಗರುಡನಿಗೆ ತಿಳಿದು ಚಿಕ್ಕಮ್ಮನ ಮೇಲೆ ಸೇಡನ್ನು ತೀರಿಸಿಕೊಳ್ಳಲಾಗದೇ  ದ್ವೇಷವನ್ನು ಆಕೆಯ ಮಕ್ಕಳಾದ ಸರ್ಪಗಳ ಮೇಲೆ ತಿರುಗಿಸಿಕೊಂಡು ಸಹಸ್ರ ಸಹಸ್ರ ಹಾವುಗಳನ್ನು ಕುಕ್ಕಿ ಸಾಯಿಸ ತೊಡಗುತ್ತಾನೆ.

ಗರುಡನಿಂದ ತಪ್ಪಿಸುಕೊಳ್ಳುವ ಸಲುವಾಗಿ  ಶೇಷ ಎಂಬ ಸರ್ಪವು ಪಾತಾಳ ಕ್ಕೆ ಸೇರಿ ಆನಂತರ ವೈಕುಂಠದಲ್ಲಿ ವಿಷ್ಣುವಿಗೆ ಹಾಸಿಗೆಯಾಗುವ ಮೂಲಕ ಆದಿ ಶೇಷನೆನಿಸಿಕೊಳ್ಳುತ್ತಾನೆ, ಕೆಲವೊಂದು  ಸರ್ಪಗಳು ಪರಶಿವನ ಕೊರಳು ಕೈ ಕಾಲುಗಳನ್ನು ಸುತ್ತಿಕೊಳ್ಳುವ ಮೂಲಕ ತಮ್ಮ ಪ್ರಾಣವನ್ನು ಉಳಿಸಿಕೊಂಡರೆ,  ಕಾಳೀಯ ಎನ್ನುವ ಹಾವು ನಂದ ಗೋಕುಲದ ಯಮುನೆಯಲ್ಲಿ ಅಡಗಿ ಕೊಳ್ಳುತ್ತದೆ ಮುಂದೇ ಇದೇ ಸರ್ಪವನ್ನು ಶ್ರೀ ಕೃಷ್ಣ ಕಾಳಿಂಗ ಮರ್ಧನ ಮಾಡುತ್ತಾನೆ. ಅದೇ ರೀತಿ  ಶಂಖಪಾಲ, ಭೂಧರ, ಅನಘಾದಿ ಸರ್ಪಗಳು ಒಂದೊಂದು ಕಡೆಯಲ್ಲಿ ಅಡಗಿ ಕೊಂಡರೆವಾಸುಕಿ ಎನ್ನುವ ಮಹಾಸರ್ಪವೊಂದು ಗರುಡನಿಂದ ತಪ್ಪಿಸಿಕೊಳ್ಳುವ ಸಲುವಾಗಿ  ತುಳುನಾಡಿನ ತಪ್ಪಲಿನ ಸಹ್ಯಾದ್ರಿ ಮಡಿಲಿನ, ಧಾರಾ ನದಿಯ ಪಕ್ಕದಲ್ಲಿ ಇರುವ ಬಿಲದ್ವಾರ ಎನ್ನುವ ಗುಹೆಯಲ್ಲಿ ಅಡಗಿಕೊಂಡಿರುವ ವಿಷಯ ಗರುಡನಿಗೆ ತಿಳಿದು  ಅಲ್ಲೊಂದು. ಘನ ಘೋರ ಯುದ್ಧವಾಗುತ್ತದೆ.

gu4ತನ್ನ ಮಕ್ಕಳಿಬ್ಬರು ಈ ಪರಿಯಾಗಿ ಕದನ ಮಾಡುತ್ತಿರುವ ವಿಷಯ ತಿಳಿದ ಕಶ್ಯಪ ಮುನಿಗಳು ಆಸ್ಥಳಕ್ಕೆ ಬಂದು ಅವರಿಬ್ಬರ ನಡುವಿನ ಯುದ್ಧವನ್ನು ತಡೆಯುತ್ತಾನೆ. ಮಹಾ ಶಿವ ಭಕ್ತನಾದ ವಾಸುಕಿಯಿಂದ ಹಲವು ಲೋಕ ಕಲ್ಯಾಣ ಕೆಲಸವೂ ನಡೆಯಬೇಕಾಗಿರುವುದರಿಂದ ಆತನಿಗೆ ತೊಂದರೆ ಮಾಡಕೂಡದು ಎಂದು   ಗರುಡನಿಗೆ ಆಜ್ಞೆ ಮಾಡುತ್ತಾನೆ.  ತಂದೆಯ ಮಾತಿಗೆ ಬದ್ಧನಾದ ಗರುಡ  ಅದಕ್ಕೆ ಒಪ್ಪಿಕೊಂಡರೂ ತನ್ನ ಅಗಾಧವಾದ ಹಸಿವನ್ನು ನೀಗಿಸುವುದು ಹೇಗೆ  ಎಂದು ಕೇಳಿದಾಗ, ಮನಿಲಾ ದ್ವೀಪದಲ್ಲಿರುವ ದುಷ್ಟ ಬೇಡರು ಮತ್ತು ಹಾವುಗಳನ್ನು ತಿಂದು ಹಸಿವನ್ನು ಇಂಗಿಸಿಕೊಳ್ಳುವಂತೆ ಸೂಚಿಸುತ್ತಾನೆ.

WhatsApp Image 2021-12-10 at 8.21.11 AMಇತ್ತ ಭಯ ಭೀತನಾದ ವಾಸುಕಿಯನ್ನು ಸಂತೈಸಿಸಿ  ಶಿವನನ್ನು ಕುರಿತು ತಪಸ್ಸನ್ನು ಆಚರಿಸಲು ಕಶ್ಯಪರು ಸೂಚಿಸುತ್ತಾರೆ. ತಂದೆಯ ಆಜ್ಞೆಯಂತೆ  ವಾಸುಕಿಯು ಘನ ಘೋರ ತಪಸ್ಸಿನ ಮೂಲಕ ಶಿವನನ್ನು ಒಲಿಸಿ ಕೊಂಡು ತನ್ನ ಪ್ರಾಣ ಭಯವನ್ನು ಹೋಗಲಾಡಿಸಲು ಕೋರಿಕೊಂಡಾಗ,  ಮುಂದಿನ ಕಲ್ಪದಲ್ಲಿ ಸರ್ಪ ಕುಲದ ಸಂರಕ್ಷಣೆಗಾಗಿ ಸುಬ್ರಮಣ್ಯ ಸ್ವಾಮಿಯು ನನ್ನ ಮಗನಾಗಿ ಜನಿಸುವ  ದಿನವು ಸನ್ನಿಹಿತವಾಗಿದ್ದು ಇಲ್ಲಿಯೇ ತಪಸ್ಸನ್ನು ಆಚರಿವಂತೆ ವಾಸುಕಿಗೆ ಅನುಗ್ರಹಿಸುತ್ತಾನೆ. ಕೆಲ ವರ್ಷಗಳ ನಂತರ ಸುಬ್ರಮಣ್ಯ ಸ್ವಾಮಿಯು ತಾರಕಾಸುರನನ್ನು ಕೊಂದು ತನ್ನ ರಕ್ತ ಸಿಕ್ತ ಆಯುಧವನ್ನು ಇದೇ ಸ್ಥಳಕ್ಕೆ ಬಂದು ಇಲ್ಲಿ  ಹರಿಯುತ್ತಿದ್ದ ಧಾರಾ ನದಿಯಲ್ಲಿ  ತೊಳೆದ ಕಾರಣ, ಅಂದಿನಿಂದ ಆ ನದಿಯು ಕುಮಾರಧಾರ ಎಂದು ಪ್ರಖ್ಯಾತಿಯನ್ನು ಪಡೆದುಕೊಳ್ಳುತ್ತದೆ.

ದೇವಲೋಕದಿಂದ ಇವೆಲ್ಲವನ್ನೂ ವೀಕ್ಷಿಸುತ್ತಿದ್ದ ದೇವೇಂದ್ರ ತನ್ನ ಮಗಳಾದ ದೇವಸೇನೆಯೊಂದಿಗೆ ಅಲ್ಲಿಗೆ ಬಂದು ಆಕೆಯನ್ನು ವಿವಾಹವಾಗುವಂತೆ ಸುಬ್ರಹ್ಮಣ್ಯನನ್ನು  ಪ್ರಾರ್ಥಿಸಿಕೊಳ್ಳುತ್ತಾನೆ. ಹೀಗೆ  ಸಕಲ ದೇವರುಗಳ ಸಮಕ್ಷಮದಲ್ಲಿ ಕುಮಾರಧಾರ ನದಿಯ ತಟದಲ್ಲಿ ಚಂಪಾ ಷಷ್ಟಿಯ ದಿನದಂದು  ಸುಬ್ರಹ್ಮಣ್ಯ ಮತ್ತು ದೇವಸೇನೆಯ ವಿವಾಹ ನಡೆಯುತ್ತದೆ. ಅದೇ ಸಮಯದಲ್ಲೇ  ವಾಸುಕಿಯ ಸುಬ್ರಹ್ಮಣ್ಯ ಸ್ವಾಮಿಗೆ ತಮ್ಮ ರಕ್ಷಣೆಗಾಗಿ ಇದೇ ಸ್ಥಳದಲ್ಲಿಯೇ ನೆಲೆಸುವಂತೆ ಕೋರಿದ್ದನ್ನು ಮನ್ನಿಸಿ, ವಿಶ್ವಕರ್ಮನನ್ನು ಕರೆಸಿ ಅಲ್ಲೊಂದು  ಮೂರ್ತಿಯನ್ನು ಮಾಡಿಸಿ ಅಲ್ಲೇ ತನ್ನ ಪತ್ನಿಯಾದ ದೇವಸೇನೆ ಮತ್ತು ವಾಸುಕಿಯ ಜೊತೆಯಲ್ಲಿಯೇ ಶಾಶ್ವತವಾಗಿ ನೆಲೆಸುತ್ತಾನೆ ಎಂಬ ಕಥೆಯಿದೆ.

ratha3ಈ ಸಮಯದಲ್ಲಿ ನೆರೆದಿದ್ದ ಸಕಲ ದೇವಾನು ದೇವತೆಗಳೂ, ಸುಬ್ರಮಣ್ಯ ದೇವರನ್ನು ಧರೆಗೆ ಇಳಿಸಿದ ವಾಸುಕಿಯನ್ನು ನಾಗಬ್ರಹ್ಮ ಎನ್ನುವ ಹೆಸರಿನಿಂದ ಆ ಸುತ್ತಮುತ್ತಲಿನ ಜನರು ಪೂಜಿಸಲಿ ಎಂದು ಹರಸುತ್ತಾರೆ. ಅಂದಿನಿಂದ ಪ್ರತೀವರ್ಷವೂ ಇಲ್ಲಿ ಮಾರ್ಗಶಿರ ಮಾಸದ ಷಷ್ಠಿಯಂದು ಅದ್ದೂರಿಯ ಚಂಪಾ ಷಷ್ಠಿಯ ಸುಬ್ರಮಣ್ಯ ರಥವನ್ನು ಎಳೆಯುವ ಸಂಪ್ರದಾಯ ಆರಂಭವಾಗುತ್ತದೆ.

ಪ್ರತಿದಿನವೂ ಜಾತಿ ಧರ್ಮದ ಹಂಗಿಲ್ಲದೇ ಇಲ್ಲಿ  ಸಾವಿರಾರು ಭಕ್ತಾದಿಗಳಿಗೆ ಅನ್ನ ಸಂತರ್ಪಣೆ  ನಡೆಯುವ ಕಾರಣ ಶ್ರೀ ದೇವರಿಗೆ ಅನ್ನದಾನ ಸುಬ್ಬಪ್ಪನೆಂಬ ನಾಮಾಭಿದಾನವಿದೆ. ಮೂಲ ಸುಬ್ರಹ್ಮಣ್ಯದ ಬಳಿ  ಇರುವ ಹುತ್ತದ ಮಣ್ಣು ಮೃತ್ತಿಕಾ ಪ್ರಸಾದವೇ ಇಲ್ಲಿನ ಶ್ರೇಷ್ಠ ಪ್ರಸಾದವಾಗಿದೆ. ಈ ಮೃತ್ತಿಕೆ,  ಪವಿತ್ರ ಕುಮಾರಧಾರ ತೀರ್ಥ ಸ್ನಾನದಿಂದ ಮತ್ತು ಇಲ್ಲಿ ನಡೆಯುತ್ತಿದ್ದ  ಮಡೆಸ್ನಾನದಿಂದ ಕುಷ್ಠ ರೋಗದಂತಹ ಭಯಾನಕ ರೋಗಗಳೂ, ನಾನಾ ರೀತಿಯ ಚರ್ಮ ವ್ಯಾಧಿಗಳೂ ಶಮನವಾಗುತ್ತದೆ ಎಂಬುದು ಇಲ್ಲಿನ  ಭಕ್ತರ ನಂಬಿಕೆಯಾಗಿದೆ.

made3ಕುಮಾರಧಾರೆ ಮಿಂದೇವು, ಕುಕ್ಕೆಲಿಂಗನ ಕಂಡೇವು, ಕೊಪ್ಪರಿಗೆ ಅನ್ನ ಉಂಡೇವು ಎಂಬ  ನಾಣ್ಣುಡಿಯಂತೆ. ಶ್ರೀ ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವದ ಸಮಯದಲ್ಲಿ  ಭಕ್ತಾದಿಗಳು ತಮ್ಮ ಅನೇಕ ದೈಹಿಕ ಹಾಗೂ ಮಾನಸಿಕ ಸಂಕಷ್ಟಗಳ ನಿವಾರಣೆಗಾಗಿ ಈ ಶ್ರೀ ಕ್ಷೇತ್ರದಲ್ಲಿ  ಅನ್ನಸಂತರ್ಪಣೆ ನಡೆದ ನಂತರ ಆ ಎಲೆಗಳ ಮೇಲೆ ಉರುಳು ಸೇವೆ ಮಾಡುವ ಮಡೆ ಸ್ನಾನದಂತಹ ಸಂಪ್ರದಾಯವಿತ್ತು.  ಕೆಲವು ವರ್ಷಗಳ ಹಿಂದೆ ಕೆಲವೊಬ್ಬರು ಇದೊಂದು ಮೌಢ್ಯ ಸಂಪ್ರದಾಯ ಎಂದು  ನ್ಯಾಯಾಲಯದ ಮೊರೆ ಹೊಕ್ಕು ಈ ಮಡೆ ಸಾನ್ನದ ಆಚರಣೆಗೆ ತಡೆ ತಂದಿದ್ದಾರೆ.

sachin1ಇಲ್ಲಿನ ಸರ್ಪ ಸ೦ಸ್ಕಾರ ಬಹಳ ಶ್ರೇಷ್ಟ ಮತ್ತು ಪ್ರಸಿದ್ಢವಾಗಿದ್ದು ಸರ್ಪ ದೋಷ ಇರುವವರು ಇಲ್ಲಿಗೆ ಬ೦ದು, ಸರ್ಪ ಸ೦ಸ್ಕಾರ ಮತ್ತು ನಾಗ ಪ್ರತಿಷ್ಟೆ ನೆರವೇರಿಸಿ ದೋಷ ಮುಕ್ತರಾಗುತ್ತಾರೆ. ಹೀಗೆ ಈ ಕ್ಷೇತ್ರಕ್ಕೆ ಬಂದು  ಈ  ದೇವತಾ ಕಾರ್ಯಗಳನ್ನು ನೆರವೇರಿಸಿದ ವಿಖ್ಯಾತರಲ್ಲಿ ಹಿಂದಿ ಚಿತ್ರರಂಗದ  ರಾಜ್ ಕಪೂರ್ ಕುಟುಂಬ, ಹೇಮ ಮಾಲಿನ್,  ಕ್ರಿಕೆಟ್ ಆಟಗಾರರಾದ ಸಚಿನ್ ತೆ೦ಡೂಲ್ಕರ್ ವಿ.ವಿ.ಎಸ್ ಲಕ್ಷಣ್ ಮುಂತಾದವರಿದ್ದಾರೆ.

ratha3ಸುಬ್ರಹ್ಮಣ್ಯನಿಗೆ ಪ್ರಿಯವಾದ ದಿನವಾದ ಮಾರ್ಗಶಿರ ಮಾಸದ ಶುದ್ಧ ಷಷ್ಠಿ ದಿನವನ್ನು ಚಂಪಾಷಷ್ಠಿ ಅಥವಾ ಕುಕ್ಕೆ ಷಷ್ಠಿಯೆಂದೇ ಕರೆಯುತ್ತಾರೆ.  ಅಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶ್ರೀ ಸ್ವಾಮಿಯನ್ನು ಶುಭ ಮುಹೂರ್ತದಲ್ಲಿ ಬ್ರಹ್ಮರಥಾರೋಹಣ ಮಾಡಿಸುತ್ತಾರೆ. ಆರಂಭದಲ್ಲಿ  ಉಮಾಮಹೇಶ್ವರ ದೇವರ ಪಂಚಮಿ ರಥವನ್ನು ಭಕ್ತಾದಿಗಳು ಶ್ರದ್ಧಾ ಭಕ್ತಿಯಿಂದ ಎಳೆದ ನಂತರ, ಶ್ರೀ ಸುಬ್ರಹ್ಮಣ್ಯ ದೇವರು  ಬ್ರಹ್ಮ ರಥದಲ್ಲಿ ವಿರಾಜಮಾನರಾಗುತ್ತಾರೆ. ಶ್ರೀ ದೇವರ ಬ್ರಹ್ಮರಥಾರೋಹಣವಾದ ನಂತರ ಸುವರ್ಣವೃಷ್ಟಿಯಾಗುತ್ತದೆ. ಈ ಸಂದರ್ಭದಲ್ಲಿ ಗರುಡನು ಬಂದು ಮೂರು ಪ್ರದಕ್ಷಿಣೆ ಹಾಕುತ್ತಾನೆ ಎಂಬ ನಂಬಿಕೆ ಇದೆ. ರಥೋತ್ಸದಲ್ಲಿ ನೆರೆದಿದ್ದ ಭಕ್ತಾದಿಗಳು ರಥವನ್ನು ಎಳೆಯುವುದರ ಜೊತ್ಗೆಗೆ ತಮ್ಮ ತಮ್ಮ ಹರಕೆಯಂತೆ  ಕಾಳುಮೆಣಸು, ನಾಣ್ಯ, ದವಸ ಧಾನ್ಯಗಳನ್ನು ರಥಕ್ಕೆ ಎಸೆದು ಕೃತಾರ್ಥರಾಗುವುದನ್ನು ನೋಡುವುದಕ್ಕೆ ಆನಂದವಾಗಿರುತ್ತದೆ.

ratha2ಕುಕ್ಕೆ ಸುಬ್ರಹ್ಮಣ್ಯದ ಈ ರಥಗಳು ಸಾಮಾನ್ಯವಾಗಿರದೇ, ಹಲವು ವಿಶಿಷ್ಟ ರೀತಿಯಲ್ಲಿ ಸಜ್ಜುಗೊಳ್ಳುತ್ತದೆ. ಕ್ಷೇತ್ರದ ಆರಾಧ್ಯ ದೈವ ನಾಗರಾಜನಿಗೂ, ಬಿದಿರಿಗೂ ಅವಿನಾಭಾವ ಸಂಬಂಧವಿದೆ. ಈ ಕಾರಣದಿಂದಲೇ ಬಿದಿರಿನಿಂದಲೇ ರಥವನ್ನು ಕಟ್ಟಲಾಗುತ್ತಿದೆ. ದೇಶದೆಲ್ಲೆಡೆ ಇರುವ ಕ್ಷೇತ್ರಗಳ ರಥಗಳನ್ನು ಕಟ್ಟುವಾಗ ಹಗ್ಗಗಳನ್ನು ಉಪಯೋಗಿಸಿದರೆ ಇಲ್ಲಿ ಕಾಡಿನಿಂದ ತಂದ ಬಿದಿರು ಹಾಗೂ ನಾಗರ ಬೆತ್ತಗಳೇ ಹಗ್ಗದ ರೂಪದಲ್ಲಿ ಬಳಕೆಯಾಗುತ್ತದೆ‌.  ಸಹಸ್ರಾರು ವರ್ಷಗಳ ಹಿಂದಿನಿಂದಲೇ ಈ ರಥವನ್ನು ಇಲ್ಲಿನ ಮೂಲ ನಿವಾಸಿಗಳಾದ ಮಲೆಕುಡಿಯರೇ ಸಿದ್ದಪಡಿಸುತ್ತಾ ಬರುತ್ತಿದ್ದಾರೆ.

ಒಂದು ಜನಪದ ಐತಿಹ್ಯದ ಪ್ರಕಾರ ಶ್ರೀಕ್ಷೇತ್ರದಲ್ಲಿ ಆರಾಧಿಸಿಕೊಂಡು ಬರುತ್ತಿರುವ ಶ್ರೀ ಸುಬ್ರಹ್ಮಣ್ಯ ಸ್ವಾಮಿಯು  ಇದೇ ಮಲೆಕುಡಿಯರಿಗೆ ಕಾಡಿನಲ್ಲಿ ಸಿಕ್ಕಿದ್ದು ಎಂಬ ನಂಬಿಕೆ ಇರುವ ಕಾರಣ, ಈ ಮಲೆಕುಡಿಯ ಜನಾಂಗಕ್ಕೆ ಕ್ಷೇತ್ರದ ಎಲ್ಲಾ ಧಾರ್ಮಿಕ ವಿಧಿ-ವಿಧಾನಗಳಲ್ಲಿ ಪಾಲ್ಗೊಳ್ಳುವ ವಿಶೇಷ ಅವಕಾಶ ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ಹುಣ್ಣಿಮೆಯ ದಿನ ರಥ ಕಟ್ಟಲು ಮೂಹೂರ್ತ  ಮಾಡಿ, ದೇವರ ಪ್ರಸಾದ, ಅಕ್ಕಿ ಸಾಮಾಗ್ರಿಗಳೊಂದಿಗೆ ಮಲೆಕುಡಿಯರ ಒಂದು ಗುಂಪು ದಟ್ಟ  ಕಾಡಿನೊಳಗೆ ಪ್ರವೇಶಿಸಿ  ನಾಲ್ಕೈದು ದಿನಗಳ ಕಾಲ ಕಾಡಿನಲ್ಲೇ   ಬಿದಿರಿನ ಬೆತ್ತವನ್ನು ತಯಾರಿಸಿ,  ಹಿರಿಯರ ಮಾರ್ಗದರ್ಶನದಂತೆ ರಥವನ್ನು  ಕಟ್ಟುವ  ಸಂಪ್ರದಾಯವನ್ನು ಮೂಲ ನಿವಾಸಿಗಳು ಇಂದಿಗೂ ಮುಂದುವರೆಸಿಕೊಂಡು  ಬಂದಿದ್ದಾರೆ. ರಥೋತ್ಸವ  ಮುಗಿದ ಬಳಿಕ ರಥಕ್ಕೆ ಉಪಯೋಗಿಸುವ ಬಿದಿರಿನ ತುಂಡುಗಳನ್ನು ಭಕ್ತಾದಿಗಳು  ಪ್ರಸಾದದಂತೆ ತಮ್ಮ ತಮ್ಮ ಮನೆಗಳಿಗೆ ಒಯ್ಯುತ್ತಾರೆ. ಈ ರೀತಿ ಬಿದಿರಿನ ತುಂಡಗಳನ್ನು ಮನೆಯಲ್ಲಿ ಇಡುವುದರಿಂದ ನಾಗಬಾಧೆ ಕಾಡುವುದಿಲ್ಲ ಎಂಬ ನಂಬಿಕೆ ಭಕ್ತರದ್ದಾಗಿದೆ.

ಇಂದಿನ ಆಧುನಿಕ ಯುಗದಲ್ಲಿಯೂ ಅವರವರ ಭಾವಕ್ಕೆ ಅವರವರ ಭಕುತಿ ಎನ್ನುವಂತೆ ಈ ಕ್ಷೇತ್ರದಲ್ಲಿ ಸಾಧ್ಯವಾದಷ್ಟೂ ಹಳೆಯ ಮಡಿ ಹುಡಿ ಆಚಾರ ವಿಚಾರಗಳ ಸತ್ ಸಂಪ್ರದಾಯಗಳನ್ನು ಇಂದಿಗೂ ರೂಢಿಯಲ್ಲಿ ನಡೆಸಿಕೊಂಡು ಹೋಗುತ್ತಿರುವುದು ಅನನ್ಯ ಮತ್ತು ಅನುಕರಣಿಯವೇ  ಸರಿ.

ಏನಂತೀರೀ?

ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s